Virata Parva: Chapter 32

ವಿರಾಟ ಪರ್ವ: ಗೋಹರಣ ಪರ್ವ

೩೨

ಸೆರೆಯಾದ ವಿರಾಟನನ್ನು ಪಾಂಡವರು ಮುಕ್ತಗೊಳಿಸಿದ್ದುದು

ಸುಶರ್ಮನಿಂದ ವಿರಾಟನ ಸೆರೆ (೧-೯). ಪಾಂಡವರು ವಿರಾಟನನ್ನು ಬಿಡಿಸಿದುದು (೧೦-೩೩). ವಿರಾಟನು ಪಾಂಡವರನ್ನು, ಅವರ್ಯಾರೆಂದು ಇನ್ನೂ ತಿಳಿಯದೇ, ಗೌರವಿಸಿದುದು (೩೪-೪೫). ತನ್ನ ವಿಜಯವಾರ್ತೆಯನ್ನು ವಿರಾಟನು ಪುರಕ್ಕೆ ಕಳುಹಿಸಿದುದು (೪೬-೫೦).

04032001 ವೈಶಂಪಾಯನ ಉವಾಚ|

04032001a ತಮಸಾಭಿಪ್ಲುತೇ ಲೋಕೇ ರಜಸಾ ಚೈವ ಭಾರತ|

04032001c ವ್ಯತಿಷ್ಠನ್ವೈ ಮುಹೂರ್ತಂ ತು ವ್ಯೂಢಾನೀಕಾಃ ಪ್ರಹಾರಿಣಃ||

ವೈಶಂಪಾಯನನು ಹೇಳಿದನು: “ಭಾರತ! ಲೋಕವು ಕತ್ತಲೆಯಿಂದಲೂ ಧೂಳಿನಿಂದಲೂ ತುಂಬಿ ಹೋಗಲು ಸೈನ್ಯವ್ಯೂಹದಲ್ಲಿದ್ದ ಯೋಧರು ಮುಹೂರ್ತಕಾಲ ಹಾಗೆಯೇ ನಿಂತರು.

04032002a ತತೋಽಂಧಕಾರಂ ಪ್ರಣುದನ್ನುದತಿಷ್ಠತ ಚಂದ್ರಮಾಃ|

04032002c ಕುರ್ವಾಣೋ ವಿಮಲಾಂ ರಾತ್ರಿಂ ನಂದಯನ್ ಕ್ಷತ್ರಿಯಾನ್ಯುಧಿ||

ಬಳಿಕ ಚಂದ್ರನು ಕತ್ತಲೆಯನ್ನು ಹೋಗಲಾಡಿಸಿ, ರಾತ್ರಿಯನ್ನು ನಿರ್ಮಲಗೊಳಿಸಿ, ರಣದಲ್ಲಿ ಕ್ಷತ್ರಿಯರನ್ನು ಸಂತೋಷಗೊಳಿಸಿ ಉದಿಸಿದನು.

04032003a ತತಃ ಪ್ರಕಾಶಮಾಸಾದ್ಯ ಪುನರ್ಯುದ್ಧಮವರ್ತತ|

04032003c ಘೋರರೂಪಂ ತತಸ್ತೇ ಸ್ಮ ನಾವೇಕ್ಷಂತ ಪರಸ್ಪರಂ||

ಬೆಳಕು ಬರಲು ಘೋರರೂಪ ಯುದ್ಧವು ಮತ್ತೆ ಮುಂದುವರೆಯಿತು. ಆಗ ಅವರು ಒಬ್ಬರನ್ನೊಬ್ಬರು ನೋಡಲಾಗುತ್ತಿರಲಿಲ್ಲ.

04032004a ತತಃ ಸುಶರ್ಮಾ ತ್ರೈಗರ್ತಃ ಸಹ ಭ್ರಾತ್ರಾ ಯವೀಯಸಾ|

04032004c ಅಭ್ಯದ್ರವನ್ಮತ್ಸ್ಯರಾಜಂ ರಥವ್ರಾತೇನ ಸರ್ವಶಃ||

ಬಳಿಕ, ತ್ರಿಗರ್ತ ಸುಶರ್ಮನು ತಮ್ಮನೊಡನೆ ಎಲ್ಲ ರಥಸಮೂಹದೊಡನೆ ಮತ್ಸ್ಯರಾಜನತ್ತ ನುಗ್ಗಿದನು.

04032005a ತತೋ ರಥಾಭ್ಯಾಂ ಪ್ರಸ್ಕಂದ್ಯ ಭ್ರಾತರೌ ಕ್ಷತ್ರಿಯರ್ಷಭೌ|

04032005c ಗದಾಪಾಣೀ ಸುಸಂರಬ್ಧೌ ಸಮಭ್ಯದ್ರವತಾಂ ಹಯಾನ್||

ಆ ಕ್ಷತ್ರಿಯಶ್ರೇಷ್ಠ ಗದಾಪಾಣಿ ಸೋದರರು ರಥಗಳಿಂದ ಧುಮುಕಿ ಕೋಪಾವಿಶದಿಂದ ಶತ್ರುವಿನ ಕುದುರೆಗಳತ್ತ ನುಗ್ಗಿದರು.

04032006a ತಥೈವ ತೇಷಾಂ ತು ಬಲಾನಿ ತಾನಿ|

        ಕ್ರುದ್ಧಾನ್ಯಥಾನ್ಯೋನ್ಯಮಭಿದ್ರವಂತಿ|

04032006c ಗದಾಸಿಖಡ್ಗೈಶ್ಚ ಪರಶ್ವಧೈಶ್ಚ|

        ಪ್ರಾಸೈಶ್ಚ ತೀಕ್ಷ್ಣಾಗ್ರಸುಪೀತಧಾರೈಃ||

ಅಂತೆಯೆ ಅವರ ಆ ಸೈನ್ಯಗಳೂ ಕೂಡ ಕ್ರೋಧಗೊಂಡು ಗದೆಗಳಿಂದಲೂ, ಹದಗೊಳಿಸಿದ, ಚೂಪಾದ ಮೊನೆ ಮತ್ತು ಹರಿತ ಅಲಗುಗಳನ್ನುಳ್ಳ ಖಡ್ಗ, ಗಂಡು ಗೊಡಲಿ, ಭರ್ಜಿಗಳಿಂದಲೂ ಪರಸ್ಪರರ ಆಕ್ರಮಣ ಮಾಡಿದವು.

04032007a ಬಲಂ ತು ಮತ್ಸ್ಯಸ್ಯ ಬಲೇನ ರಾಜಾ|

        ಸರ್ವಂ ತ್ರಿಗರ್ತಾಧಿಪತಿಃ ಸುಶರ್ಮಾ|

04032007c ಪ್ರಮಥ್ಯ ಜಿತ್ವಾ ಚ ಪ್ರಸಹ್ಯಯ ಮತ್ಸ್ಯಂ|

        ವಿರಾಟಂ ಓಜಸ್ವಿನಮಭ್ಯಧಾವತ್||

ತ್ರಿಗರ್ತಾಧಿಪಧಿ ರಾಜ ಸುಶರ್ಮನು ತನ್ನ ಸೈನ್ಯದಿಂದ ಮತ್ಸ್ಯರಾಜನ ಸಮಸ್ತ ಸೈನ್ಯವನ್ನೂ ಅತಿಯಾಗಿ ಕಲಕಿ ಗೆದ್ದು, ಬಲಶಾಲಿ ಮತ್ಸ್ಯ ವಿರಾಟನತ್ತ ನುಗ್ಗಿದನು.

04032008a ತೌ ನಿಹತ್ಯ ಪೃಥಗ್ಧುರ್ಯಾವುಭೌ ಚ ಪಾರ್ಷ್ಣಿಸಾರಥೀ|

04032008c ವಿರಥಂ ಮತ್ಸ್ಯರಾಜಾನಂ ಜೀವಗ್ರಾಹಮಗೃಹ್ಣತಾಂ||

ಅವರಿಬ್ಬರೂ ಎದುರಾಳಿಯ ಎರಡು ಕುದುರೆಗಳನ್ನೂ, ಕುದುರೆಗಳ ಸಾರಥಿಗಳನ್ನೂ ಕೊಂದು ವಿರಥನಾದ ಮತ್ಸ್ಯರಾಜನನ್ನು ಜೀವಂತವಾಗಿ ಸೆರೆಹಿಡಿದರು.

04032009a ತಮುನ್ಮಥ್ಯ ಸುಶರ್ಮಾ ತು ರುದತೀಂ ವಧುಕಾಮಿವ|

04032009c ಸ್ಯಂದನಂ ಸ್ವಂ ಸಮಾರೋಪ್ಯ ಪ್ರಯಯೌ ಶೀಘ್ರವಾಹನಃ||

ಸುಶರ್ಮನು ಅಳುತ್ತಿರುವ ಯುವತಿಯನ್ನು ಎಳೆದೊಯ್ಯುವಂತೆ ಅವನನ್ನು ಚೆನ್ನಾಗಿ ಥಳಿಸಿ ತನ್ನ ರಥದ ಮೇಲೇರಿಸಿಕೊಂಡು ಶೀಘ್ರವಾಗಿ ಹೊರಟುಹೋದನು.

04032010a ತಸ್ಮಿನ್ಗೃಹೀತೇ ವಿರಥೇ ವಿರಾಟೇ ಬಲವತ್ತರೇ|

04032010c ಪ್ರಾದ್ರವಂತ ಭಯಾನ್ಮತ್ಸ್ಯಾಸ್ತ್ರಿಗರ್ತೈರರ್ದಿತಾ ಭೃಶಂ||

ಬಲಶಾಲಿ ವಿರಾಟನು ವಿರಥನಾಗಿ ಸೆರೆಸಿಕ್ಕಲಾಗಿ ಮತ್ಸ್ಯರು ತ್ರಿಗರ್ತರಿಂದ ಬಹಳ ಬಾಧಿತರಾಗಿ ಭಯಗೊಂಡು ಚೆಲ್ಲಾಪಿಲ್ಲಿಯಾದರು.

04032011a ತೇಷು ಸಂತ್ರಾಸ್ಯಮಾನೇಷು ಕುಂತೀಪುತ್ರೋ ಯುಧಿಷ್ಠಿರಃ|

04032011c ಅಭ್ಯಭಾಷನ್ಮಹಾಬಾಹುಂ ಭೀಮಸೇನಮರಿಂದಮಂ||

ಅವರು ಹಾಗೆ ಭಯಗ್ರಸ್ತರಾಗಲು ಕುಂತೀಪುತ್ರ ಯುಧಿಷ್ಠಿರನು ಮಹಾಬಾಹು ಶತ್ರುನಾಶಕ ಭೀಮಸೇನನಿಗೆ ಹೇಳಿದನು:

04032012a ಮತ್ಸ್ಯರಾಜಃ ಪರಾಮೃಷ್ಟಸ್ತ್ರಿಗರ್ತೇನ ಸುಶರ್ಮಣಾ|

04032012c ತಂ ಮೋಕ್ಷಯ ಮಹಾಬಾಹೋ ನ ಗಚ್ಛೇದ್ದ್ವಿಷತಾಂ ವಶಂ||

“ಮತ್ಸ್ಯರಾಜನು ತ್ರಿಗರ್ತ ಸುಶರ್ಮನ ಹಿಡಿತಕ್ಕೆ ಸಿಕ್ಕಿದ್ದಾನೆ. ಮಹಾಬಾಹು! ಅವನನ್ನು ಬಿಡಿಸು. ಅವನು ಶತ್ರುಗಳಿಗೆ ವಶನಾಗಬಾರದು.

04032013a ಉಷಿತಾಃ ಸ್ಮಃ ಸುಖಂ ಸರ್ವೇ ಸರ್ವಕಾಮೈಃ ಸುಪೂಜಿತಾಃ|

04032013c ಭೀಮಸೇನ ತ್ವಯಾ ಕಾರ್ಯಾ ತಸ್ಯ ವಾಸಸ್ಯ ನಿಷ್ಕೃತಿಃ||

ವಿರಾಟನಗರದಲ್ಲಿ ನಾವೆಲ್ಲರೂ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡು ವಾಸಿಸಿದ್ದೇವೆ. ಭೀಮಸೇನ! ಆ ನಮ್ಮ ವಾಸದ ಋಣವನ್ನು ತೀರಿಸುವುದು ನಿನ್ನ ಕರ್ತವ್ಯ.”

04032014 ಭೀಮಸೇನ ಉವಾಚ|

04032014a ಅಹಮೇನಂ ಪರಿತ್ರಾಸ್ಯೇ ಶಾಸನಾತ್ತವ ಪಾರ್ಥಿವ|

04032014c ಪಶ್ಯ ಮೇ ಸುಮಹತ್ಕರ್ಮ ಯುಧ್ಯತಃ ಸಹ ಶತ್ರುಭಿಃ||

04032015a ಸ್ವಬಾಹುಬಲಮಾಶ್ರಿತ್ಯ ತಿಷ್ಠ ತ್ವಂ ಭ್ರಾತೃಭಿಃ ಸಹ|

04032015c ಏಕಾಂತಮಾಶ್ರಿತೋ ರಾಜನ್ಪಶ್ಯ ಮೇಽದ್ಯ ಪರಾಕ್ರಮಂ||

ಭೀಮಸೇನನು ಹೇಳಿದನು: “ರಾಜ! ನಿನ್ನ ಆಜ್ಞೆಯಂತೆ ಅವನನ್ನು ನಾನು ರಕ್ಷಿಸುತ್ತೇನೆ. ಸ್ವಬಾಹುಬಲವನ್ನು ನೆಮ್ಮಿ ಶತ್ರುಗಳೊಡನೆ ಯುದ್ಧಮಾಡುವ ನನ್ನ ಸಾಹಸವನ್ನು ನೋಡು. ರಾಜ! ಸಹೋದರರೊಡನೆ ಒಂದು ಕಡೆ ನಿಂತು ನನ್ನ ಪರಾಕ್ರಮವನ್ನಿಂದು ನೋಡು.

04032016a ಸುಸ್ಕಂಧೋಽಯಂ ಮಹಾವೃಕ್ಷೋ ಗದಾರೂಪ ಇವ ಸ್ಥಿತಃ|

04032016c ಏನಮೇವ ಸಮಾರುಜ್ಯ ದ್ರಾವಯಿಷ್ಯಾಮಿ ಶಾತ್ರವಾನ್||

ದೊಡ್ಡ ಕಾಂಡವನ್ನುಳ್ಳ ಈ ಮಹಾವೃಕ್ಷವು ಗದೆಯಂತೆ ನಿಂತಿದೆ. ಇದನ್ನು ಕಿತ್ತು ಪ್ರಯೋಗಿಸಿ ವೈರಿಗಳನ್ನು ಓಡಿಸಿಬಿಡುತ್ತೇನೆ.””

04032017 ವೈಶಂಪಾಯನ ಉವಾಚ|

04032017a ತಂ ಮತ್ತಮಿವ ಮಾತಂಗಂ ವೀಕ್ಷಮಾಣಂ ವನಸ್ಪತಿಂ|

04032017c ಅಬ್ರವೀದ್ಭ್ರಾತರಂ ವೀರಂ ಧರ್ಮರಾಜೋ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಮದಗಜದಂತೆ ಮರವನ್ನು ನೋಡುತ್ತಿದ್ದ ಆ ವೀರ ಸೋದರನಿಗೆ ಧರ್ಮರಾಜ ಯುಧಿಷ್ಠಿರನು ಹೇಳಿದನು:

04032018a ಮಾ ಭೀಮ ಸಾಹಸಂ ಕಾರ್ಷೀಸ್ತಿಷ್ಠತ್ವೇಷ ವನಸ್ಪತಿಃ|

04032018c ಮಾ ತ್ವಾ ವೃಕ್ಷೇಣ ಕರ್ಮಾಣಿ ಕುರ್ವಾಣಮತಿಮಾನುಷಂ|

04032018e ಜನಾಃ ಸಮವಬುಧ್ಯೇರನ್ಭೀಮೋಽಯಮಿತಿ ಭಾರತ||

“ಭೀಮ! ಈ ಸಾಹಸವನ್ನು ಮಾಡಬೇಡ. ಆ ಮರ ಅಲ್ಲಿಯೇ ಇರಲಿ. ಮರದ ಮೂಲಕ ಅತಿಮಾನುಷ ಕಾರ್ಯವನ್ನು ನೀನು ಮಾಡಕೂಡದು. ಏಕೆಂದರೆ ಭಾರತ! ಇವನು ಭೀಮನೆಂದು ಜನ ನಿನ್ನನ್ನು ಗುರುತು ಹಿಡಿದು ಬಿಟ್ಟಾರು!

04032019a ಅನ್ಯದೇವಾಯುಧಂ ಕಿಂ ಚಿತ್ಪ್ರತಿಪದ್ಯಸ್ವ ಮಾನುಷಂ|

04032019c ಚಾಪಂ ವಾ ಯದಿ ವಾ ಶಕ್ತಿಂ ನಿಸ್ತ್ರಿಂಶಂ ವಾ ಪರಶ್ವಧಂ||

ಬೇರೆ ಯಾವುದಾದರೂ ಮಾನುಷ ಆಯುಧವನ್ನು ಬಿಲ್ಲು ಅಥವಾ ಶಕ್ತ್ಯಾಯುಧ ಅಥವಾ ಖಡ್ಗ, ಅಥವಾ ಗಂಡುಗೊಡಲಿಯನ್ನು ತೆಗೆದುಕೋ!

04032020a ಯದೇವ ಮಾನುಷಂ ಭೀಮ ಭವೇದನ್ಯೈರಲಕ್ಷಿತಂ|

04032020c ತದೇವಾಯುಧಮಾದಾಯ ಮೋಕ್ಷಯಾಶು ಮಹೀಪತಿಂ||

ಭೀಮ! ಮಾನುಷ ಆಯುಧವನ್ನೇ ತೆಗೆದುಕೊಂಡು ಬೇರೆಯವರು ಗಮನಿಸದಂತೆ ದೊರೆಯನ್ನು ಬೇಗ ಬಿಡಿಸು.

04032021a ಯಮೌ ಚ ಚಕ್ರರಕ್ಷೌ ತೇ ಭವಿತಾರೌ ಮಹಾಬಲೌ|

04032021c ವ್ಯೂಹತಃ ಸಮರೇ ತಾತ ಮತ್ಸ್ಯರಾಜಂ ಪರೀಪ್ಸತಃ||

ಅಯ್ಯಾ! ಮಹಾಬಲ ಯಮಳರು ನಿನ್ನ ಪಡೆಗಳನ್ನು ರಕ್ಷಿಸುವರು. ಯುದ್ಧದಲ್ಲಿ ನೀವು ಒಟ್ಟುಗೂಡಿ ಮತ್ಸ್ಯರಾಜನನ್ನು ಬಿಡಿಸಿ.”

04032022a ತತಃ ಸಮಸ್ತಾಸ್ತೇ ಸರ್ವೇ ತುರಗಾನಭ್ಯಚೋದಯನ್|

04032022c ದಿವ್ಯಮಸ್ತ್ರಂ ವಿಕುರ್ವಾಣಾಸ್ತ್ರಿಗರ್ತಾನ್ಪ್ರತ್ಯಮರ್ಷಣಾಃ||

ಬಳಿಕ ಅವರೆಲ್ಲರೂ ಕುದುರೆಗಳನ್ನು ಪ್ರಚೋದಿಸಿದರು. ಕೋಪದಿಂದ ದಿವ್ಯಾಸ್ತ್ರವನ್ನು ತ್ರಿಗರ್ತರ ಮೇಲೆ ಪ್ರಯೋಗಿಸಿದರು.

04032023a ತಾನ್ನಿವೃತ್ತರಥಾನ್ದೃಷ್ಟ್ವಾ ಪಾಂಡವಾನ್ಸಾ ಮಹಾಚಮೂಃ|

04032023c ವೈರಾಟೀ ಪರಮಕ್ರುದ್ಧಾ ಯುಯುಧೇ ಪರಮಾದ್ಭುತಂ||

ರಥವನ್ನು ಹೊರಡಿಸಿದ ಪಾಂಡವರನ್ನು ನೋಡಿ ವಿರಾಟನ ಆ ಮಹಾಸೈನ್ಯವು ಬಹಳ ಕೋಪದಿಂದ ಅತ್ಯದ್ಭುತವಾಗಿ ಯುದ್ಧಮಾಡಿತು.

04032024a ಸಹಸ್ರಂ ನ್ಯವಧೀತ್ತತ್ರ ಕುಂತೀಪುತ್ರೋ ಯುಧಿಷ್ಠಿರಃ|

04032024c ಭೀಮಃ ಸಪ್ತಶತಾನ್ಯೋಧಾನ್ಪರಲೋಕಮದರ್ಶಯತ್|

04032024e ನಕುಲಶ್ಚಾಪಿ ಸಪ್ತೈವ ಶತಾನಿ ಪ್ರಾಹಿಣೋಚ್ಚರೈಃ||

ಕುಂತೀಪುತ್ರ ಯುಧಿಷ್ಠಿರನು ಅಲ್ಲಿ ಸಾವಿರ ಯೋಧರನ್ನು ಕೊಂದನು; ಭೀಮನು ಏಳುನೂರು ಮಂದಿ ಯೋಧರಿಗೆ ಪರಲೋಕವನ್ನು ತೋರಿಸಿದನು; ನಕುಲನೂ ಬಾಣಗಳಿಂದ ಏಳುನೂರು ಮಂದಿಯನ್ನು ಪರಲೋಕಕ್ಕೆ ಕಳುಹಿಸಿದನು.

04032025a ಶತಾನಿ ತ್ರೀಣಿ ಶೂರಾಣಾಂ ಸಹದೇವಃ ಪ್ರತಾಪವಾನ್|

04032025c ಯುಧಿಷ್ಠಿರಸಮಾದಿಷ್ಟೋ ನಿಜಘ್ನೇ ಪುರುಷರ್ಷಭಃ|

04032025e ಭಿತ್ತ್ವಾ ತಾಂ ಮಹತೀಂ ಸೇನಾಂ ತ್ರಿಗರ್ತಾನಾಂ ನರರ್ಷಭ||

ನರಶ್ರೇಷ್ಠ! ಯುಧಿಷ್ಠಿರನಿಂದ ಆಜ್ಞೆಗೊಂಡ ಪುರುಷಶ್ರೇಷ್ಠ, ಪ್ರತಾಪಶಾಲೀ ಸಹದೇವನು ತಿಗರ್ತರ ಆ ಮಹಾಸೈನ್ಯವನ್ನು ಭೇದಿಸಿ ಮುನ್ನೂರು ಮಂದಿ ಶೂರರನ್ನು ಕೊಂದನು.

04032026a ತತೋ ಯುಧಿಷ್ಠಿರೋ ರಾಜಾ ತ್ವರಮಾಣೋ ಮಹಾರಥಃ|

04032026c ಅಭಿದ್ರುತ್ಯ ಸುಶರ್ಮಾಣಂ ಶರೈರಭ್ಯತುದದ್ಭೃಶಂ||

ಬಳಿಕ ಮಹಾರಥಿ ರಾಜ ಯುಧಿಷ್ಠಿರನು ಸುಶರ್ಮನತ್ತ ತ್ವರೆಯಿಂದ ನುಗ್ಗಿ, ಬಾಣಗಳಿಂದ ಅವನನ್ನು ಬಹುವಾಗಿ ಹೊಡೆದನು.

04032027a ಸುಶರ್ಮಾಪಿ ಸುಸಂಕ್ರುದ್ಧಸ್ತ್ವರಮಾಣೋ ಯುಧಿಷ್ಠಿರಂ|

04032027c ಅವಿಧ್ಯನ್ನವಭಿರ್ಬಾಣೈಶ್ಚತುರ್ಭಿಶ್ಚತುರೋ ಹಯಾನ್||

ಸುಶರ್ಮನೂ ಕೃದ್ಧನಾಗಿ ತ್ವರೆಯಿಂದ ಯುಧಿಷ್ಠಿರನನ್ನು ಒಂಭತ್ತು ಬಾಣಗಳಿಂದಲೂ, ಅವನ ನಾಲ್ಕು ಕುದುರೆಗಳನ್ನು ನಾಲ್ಕು ಬಾಣಗಳಿಂದಲೂ ಹೊಡೆದನು.

04032028a ತತೋ ರಾಜನ್ನಾಶುಕಾರೀ ಕುಂತೀಪುತ್ರೋ ವೃಕೋದರಃ|

04032028c ಸಮಾಸಾದ್ಯ ಸುಶರ್ಮಾಣಮಶ್ವಾನಸ್ಯ ವ್ಯಪೋಥಯತ್||

ರಾಜ! ಆಗ ಶೀಘ್ರಕರ್ಮಿ ಕುಂತೀಪುತ್ರ ವೃಕೋದರನು ಸುಶರ್ಮನ ಬಳಿಸಾರಿ ಅವನ ಕುದುರೆಗಳನ್ನು ಜಜ್ಜಿ ಹಾಕಿದನು.

04032029a ಪೃಷ್ಠಗೋಪೌ ಚ ತಸ್ಯಾಥ ಹತ್ವಾ ಪರಮಸಾಯಕೈಃ|

04032029c ಅಥಾಸ್ಯ ಸಾರಥಿಂ ಕ್ರುದ್ಧೋ ರಥೋಪಸ್ಥಾದಪಾಹರತ್||

ಅಲ್ಲದೇ ಅವನ ಬೆಂಗಾಲಿನವರನ್ನು ಮಹಾಬಾಣಗಳಿಂದ ಕೊಂದು, ಅನಂತರ ಕೋಪದಿಂದ ಅವನ ಸಾರಥಿಯನ್ನು ರಥದ ಒಳಗಿನಿಂದ ಎಳೆದು ಹಾಕಿದನು.

04032030a ಚಕ್ರರಕ್ಷಶ್ಚ ಶೂರಶ್ಚ ಶೋಣಾಶ್ವೋ ನಾಮ ವಿಶ್ರುತಃ|

04032030c ಸ ಭಯಾದ್ದ್ವೈರಥಂ ದೃಷ್ಟ್ವಾ ತ್ರೈಗರ್ತಂ ಪ್ರಾಜಹತ್ತದಾ||

ಆಗ ತ್ರಿಗರ್ತರಾಜನು ವಿರಥನಾದುದನ್ನು ಕಂಡು ಶೂರನೂ ಪ್ರಸಿದ್ಧನೂ ಆದ ಶೋಣಾಶ್ವನೆಂಬ ಅವನ ಚಕ್ರ ರಕ್ಷಕನು ಭಯದಿಂದ ರಣವನ್ನು ಬಿಟ್ಟೋಡಿದನು.

04032031a ತತೋ ವಿರಾಟಃ ಪ್ರಸ್ಕಂದ್ಯ ರಥಾದಥ ಸುಶರ್ಮಣಃ|

04032031c ಗದಾಮಸ್ಯ ಪರಾಮೃಶ್ಯ ತಮೇವಾಜಘ್ನಿವಾನ್ಬಲೀ|

04032031e ಸ ಚಚಾರ ಗದಾಪಾಣಿರ್ವೃದ್ಧೋಽಪಿ ತರುಣೋ ಯಥಾ||

ಬಳಿಕ ಬಲಶಾಲಿ ವಿರಾಟನು ಸುಶರ್ಮನ ರಥದಿಂದ ಧುಮುಕಿ, ಅವನ ಗದೆಯನ್ನು ಕಿತ್ತುಕೊಂಡು ಅವನನ್ನು ಹೊಡೆದನು. ಅವನು ವೃದ್ಧನಾಗಿದ್ದರೂ ತರುಣನಂತೆ ಗದಾಪಾಣಿಯಾಗಿ ರಣರಂಗದಲ್ಲಿ ಸಂಚರಿಸಿದನು.

04032032a ಭೀಮಸ್ತು ಭೀಮಸಂಕಾಶೋ ರಥಾತ್ಪ್ರಸ್ಕಂದ್ಯ ಕುಂಡಲೀ|

04032032c ತ್ರಿಗರ್ತರಾಜಮಾದತ್ತ ಸಿಂಹಃ ಕ್ಷುದ್ರಮೃಗಂ ಯಥಾ||

ಭಯಂಕರವಾಗಿ ಮೆರೆಯುತ್ತಿದ್ದ ಕುಂಡಲಧಾರಿ ಭೀಮನಾದರೋ ತನ್ನ ರಥದಿಂದ ಧುಮುಕಿ, ಸಿಂಹವು ಜಿಂಕೆಮರಿಯನ್ನು ಹಿಡಿಯುವಂತೆ ತ್ರಿಗರ್ತರಾಜನನ್ನು ಹಿಡಿದನು.

04032033a ತಸ್ಮಿನ್ಗೃಹೀತೇ ವಿರಥೇ ತ್ರಿಗರ್ತಾನಾಂ ಮಹಾರಥೇ|

04032033c ಅಭಜ್ಯತ ಬಲಂ ಸರ್ವಂ ತ್ರೈಗರ್ತಂ ತದ್ಭಯಾತುರಂ||

ವಿರಥನಾದ ಆ ತ್ರಿಗರ್ತರ ಮಹಾರಥನು ಹಾಗೆ ಹಿಡಿತಕ್ಕೆ ಸಿಗಲು, ಭೀಮನು ತ್ರಿಗರ್ತರ ಆ ಭಯಗ್ರಸ್ತ ಸೈನ್ಯವನ್ನೆಲ್ಲ ಭಗ್ನಗೊಳಿಸಿದನು.

04032034a ನಿವರ್ತ್ಯ ಗಾಸ್ತತಃ ಸರ್ವಾಃ ಪಾಂಡುಪುತ್ರಾ ಮಹಾಬಲಾಃ|

04032034c ಅವಜಿತ್ಯ ಸುಶರ್ಮಾಣಂ ಧನಂ ಚಾದಾಯ ಸರ್ವಶಃ||

04032035a ಸ್ವಬಾಹುಬಲಸಂಪನ್ನಾ ಹ್ರೀನಿಷೇಧಾ ಯತವ್ರತಾಃ|

04032035c ಸಂಗ್ರಾಮಶಿರಸೋ ಮಧ್ಯೇ ತಾಂ ರಾತ್ರಿಂ ಸುಖಿನೋಽವಸನ್||

ಅನಂತರ, ಮಹಾಬಲರೂ, ಸ್ವಬಾಹು ಬಲಸಂಪನ್ನರೂ, ವಿನಯಶೀಲರೂ, ವ್ರತನಿರತರೂ ಆದ ಪಾಂಡುಪುತ್ರರೆಲ್ಲರೂ ಸುಶರ್ಮನನ್ನು ಸೋಲಿಸಿ, ಗೋವುಗಳೆಲ್ಲವನ್ನೂ ಮರಳಿಸಿ, ಅವರ ಎಲ್ಲ ಧನವನ್ನೂ ತೆಗೆದುಕೊಂಡು, ಮುಖ್ಯ ಯುದ್ಧ ಭೂಮಿಯ ಮಧ್ಯೆ ಅಂದಿನಿರುಳು ಸುಖವಾಗಿದ್ದರು.

04032036a ತತೋ ವಿರಾಟಃ ಕೌಂತೇಯಾನತಿಮಾನುಷವಿಕ್ರಮಾನ್|

04032036c ಅರ್ಚಯಾಮಾಸ ವಿತ್ತೇನ ಮಾನೇನ ಚ ಮಹಾರಥಾನ್||

ಬಳಿಕ, ವಿರಾಟನು ಅತಿಮಾನುಷ ಪರಾಕ್ರಮಿ ಮಹಾರಥ ಕೌಂತೇಯರನ್ನು ಧನ-ಸನ್ಮಾನಗಳಿಂದ ಗೌರವಿಸಿದನು.

04032037 ವಿರಾಟ ಉವಾಚ|

04032037a ಯಥೈವ ಮಮ ರತ್ನಾನಿ ಯುಷ್ಮಾಕಂ ತಾನಿ ವೈ ತಥಾ|

04032037c ಕಾರ್ಯಂ ಕುರುತ ತೈಃ ಸರ್ವೇ ಯಥಾಕಾಮಂ ಯಥಾಸುಖಂ||

ವಿರಾಟನು ಹೇಳಿದನು: “ರತ್ನಗಳು ಹೇಗೆ ನನ್ನವೋ ಹಾಗೆ ನಿಮ್ಮವೂ ಕೂಡ. ಅವುಗಳಿಂದ ನಿಮ್ಮ ನಿಮ್ಮ ಬಯಕೆಗೆ ಸುಖಕ್ಕೆ ತಕ್ಕಂತೆ ಎಲ್ಲರೂ ಕಾರ್ಯಮಾಡಿಕೊಳ್ಳಿ.

04032038a ದದಾನ್ಯಲಂಕೃತಾಃ ಕನ್ಯಾ ವಸೂನಿ ವಿವಿಧಾನಿ ಚ|

04032038c ಮನಸಶ್ಚಾಪ್ಯಭಿಪ್ರೇತಂ ಯದ್ವಃ ಶತ್ರುನಿಬರ್ಹಣಾಃ||

ಶತ್ರುನಾಶಕರೇ! ಅಲಂಕೃತ ಕನ್ಯೆಯರನ್ನೂ, ವಿವಿಧ ಸಂಪತ್ತುಗಳನ್ನೂ, ನಿಮ್ಮ ಮನಸ್ಸು ಬಯಸಿದುದನ್ನೂ ಕೊಡುತ್ತೇನೆ.

04032039a ಯುಷ್ಮಾಕಂ ವಿಕ್ರಮಾದದ್ಯ ಮುಕ್ತೋಽಹಂ ಸ್ವಸ್ತಿಮಾನಿಹ|

04032039c ತಸ್ಮಾದ್ಭವಂತೋ ಮತ್ಸ್ಯಾನಾಮೀಶ್ವರಾಃ ಸರ್ವ ಏವ ಹಿ||

ನಿಮ್ಮ ಪರಾಕ್ರಮದಿಂದ ನಾನಿಂದು ಬಿಡುಗಡೆಗೊಂಡು ಇಲ್ಲಿ ಕುಶಲದಿಂದಿದ್ದೇನೆ. ಆದ್ದರಿಂದ ನೀವೆಲ್ಲರೂ ಮತ್ಸ್ಯರಿಗೆ ಒಡೆಯರು.””

04032040 ವೈಶಂಪಾಯನ ಉವಾಚ|

04032040a ತಥಾಭಿವಾದಿನಂ ಮತ್ಸ್ಯಂ ಕೌರವೇಯಾಃ ಪೃಥಕ್ ಪೃಥಕ್|

04032040c ಊಚುಃ ಪ್ರಾಂಜಲಯಃ ಸರ್ವೇ ಯುಧಿಷ್ಠಿರಪುರೋಗಮಾಃ||

ವೈಶಂಪಾಯನನು ಹೇಳಿದನು: “ಹಾಗೆ ಹೇಳಿದ ಮತ್ಸ್ಯರಾಜನಿಗೆ ಆ ಪಾಂಡವರೆಲ್ಲರೂ ಯುಧಿಷ್ಠಿರನನ್ನು ಮುಂದುಮಾಡಿಕೊಂಡು ಒಬ್ಬೊಬ್ಬರೂ ಕೈಮುಗಿದು ಹೇಳಿದರು:

04032041a ಪ್ರತಿನಂದಾಮ ತೇ ವಾಕ್ಯಂ ಸರ್ವಂ ಚೈವ ವಿಶಾಂ ಪತೇ|

04032041c ಏತೇನೈವ ಪ್ರತೀತಾಃ ಸ್ಮೋ ಯತ್ತ್ವಂ ಮುಕ್ತೋಽದ್ಯ ಶತ್ರುಭಿಃ||

“ರಾಜ! ನಿನ್ನೆಲ್ಲ ಮಾತಿನಿಂದ ನಾವು ಆನಂದಿತರಾಗಿದ್ದೇವೆ. ನೀನಿಂದು ಹಗೆಗಳಿಂದ ಮುಕ್ತನಾದೆ. ಅದರಿಂದಲೇ ನಾವು ಸಂತುಷ್ಟರಾಗಿದ್ದೇವೆ.”

04032042a ಅಥಾಬ್ರವೀತ್ಪ್ರೀತಮನಾ ಮತ್ಸ್ಯರಾಜೋ ಯುಧಿಷ್ಠಿರಂ|

04032042c ಪುನರೇವ ಮಹಾಬಾಹುರ್ವಿರಾಟೋ ರಾಜಸತ್ತಮಃ|

04032042e ಏಹಿ ತ್ವಾಮಭಿಷೇಕ್ಷ್ಯಾಮಿ ಮತ್ಸ್ಯರಾಜೋಽಸ್ತು ನೋ ಭವಾನ್||

ಆಗ ಮಹಾಬಾಹು, ರಾಜಶ್ರೇಷ್ಠ ಮತ್ಸ್ಯರಾಜ ವಿರಾಟನು ಮತ್ತೆ ಯುಧಿಷ್ಠಿರನಿಗೆ ಸಂತುಷ್ಟನಾಗಿ ಹೇಳಿದನು: “ಬಾ! ನಿನಗೆ ಅಭಿಷೇಕ ಮಾಡುತ್ತೇನೆ, ನೀನು ನಮ್ಮ ಮತ್ಸ್ಯಕ್ಕೆ ರಾಜನಾಗು!

04032043a ಮನಸಶ್ಚಾಪ್ಯಭಿಪ್ರೇತಂ ಯತ್ತೇ ಶತ್ರುನಿಬರ್ಹಣ|

04032043c ತತ್ತೇಽಹಂ ಸಂಪ್ರದಾಸ್ಯಾಮಿ ಸರ್ವಮರ್ಹತಿ ನೋ ಭವಾನ್||

ಶತ್ರುನಾಶಕನೇ! ನೀನು ಮನಸ್ಸಿನಲ್ಲಿ ಇಷ್ಟಪಟ್ಟುದನ್ನು ಕೊಡುತ್ತೇನೆ. ನಮ್ಮದೆಲ್ಲಕ್ಕೂ ನೀನು ಅರ್ಹನಾಗಿರುವೆ.

04032044a ರತ್ನಾನಿ ಗಾಃ ಸುವರ್ಣಂ ಚ ಮಣಿಮುಕ್ತಮಥಾಪಿ ವಾ|

04032044c ವೈಯಾಘ್ರಪದ್ಯ ವಿಪ್ರೇಂದ್ರ ಸರ್ವಥೈವ ನಮೋಽಸ್ತು ತೇ||

ವೈಯಾಘ್ರಪದ ಗೋತ್ರದ ಬ್ರಾಹ್ಮಣಶ್ರೇಷ್ಠನೇ! ರತ್ನಗಳು, ಗೋವುಗಳು, ಚಿನ್ನ, ಮಣಿ, ಮುತ್ತು ಮುಂತಾದುದೆಲ್ಲವನ್ನೂ ನಿನಗೆ ಕೊಡುತ್ತೇನೆ. ನಿನಗೆ ಎಲ್ಲ ರೀತಿಯಲ್ಲೂ ನಮಸ್ಕಾರ!

04032045a ತ್ವತ್ಕೃತೇ ಹ್ಯದ್ಯ ಪಶ್ಯಾಮಿ ರಾಜ್ಯಮಾತ್ಮಾನಮೇವ ಚ|

04032045c ಯತಶ್ಚ ಜಾತಃ ಸಂರಂಭಃ ಸ ಚ ಶತ್ರುರ್ವಶಂ ಗತಃ||

ನಿನ್ನಿಂದಾಗಿಯೇ ನಾನಿಂದು ಮತ್ತೆ ನನ್ನ ರಾಜ್ಯವನ್ನು ಕಾಣುತ್ತಿದ್ದೇನೆ. ನನಗೆ ಕಳವಳವನ್ನುಂಟುಮಾಡಿದ ಆ ಶತ್ರುವು ಈಗ ನನ್ನ ವಶನಾಗಿದ್ದಾನೆ.”

04032046a ತತೋ ಯುಧಿಷ್ಠಿರೋ ಮತ್ಸ್ಯಂ ಪುನರೇವಾಭ್ಯಭಾಷತ|

04032046c ಪ್ರತಿನಂದಾಮಿ ತೇ ವಾಕ್ಯಂ ಮನೋಜ್ಞಂ ಮತ್ಸ್ಯ ಭಾಷಸೇ||

ಆಗ ಯುಧಿಷ್ಠಿರನು ಮತ್ಸ್ಯನಿಗೆ ಮತ್ತೆ ಹೇಳಿದನು: “ಮತ್ಸ್ಯ! ನಿನ್ನ ಮಾತಿನಿಂದ ನನಗೆ ಸಂತೋಷವಾಗುತ್ತಿದೆ. ನೀನು ಮನೋಜ್ಞವಾಗಿ ಮಾತನಾಡುತ್ತಿರುವೆ.

04032047a ಆನೃಶಂಸ್ಯಪರೋ ನಿತ್ಯಂ ಸುಸುಖಃ ಸತತಂ ಭವ|

04032047c ಗಚ್ಛಂತು ದೂತಾಸ್ತ್ವರಿತಂ ನಗರಂ ತವ ಪಾರ್ಥಿವ|

04032047e ಸುಹೃದಾಂ ಪ್ರಿಯಮಾಖ್ಯಾತುಂ ಘೋಷಯಂತು ಚ ತೇ ಜಯಂ||

ಯಾವಾಗಲೂ ದಯಾಪರನಾಗಿದ್ದುಕೊಂಡು ನಿತ್ಯ ಸುಖಿಯಾಗಿರು. ರಾಜ! ಮಿತ್ರರಿಗೆ ಪ್ರಿಯವನ್ನು ತಿಳಿಸುವುದಕ್ಕಾಗಿ ದೂತರು ಬೇಗ ನಿನ್ನ ನಗರಕ್ಕೆ ಹೋಗಲಿ. ನಿನ್ನ ಜಯವನ್ನು ಸಾರಲಿ.”

04032048a ತತಸ್ತದ್ವಚನಾನ್ಮತ್ಸ್ಯೋ ದೂತಾನ್ರಾಜಾ ಸಮಾದಿಶತ್|

04032048c ಆಚಕ್ಷಧ್ವಂ ಪುರಂ ಗತ್ವಾ ಸಂಗ್ರಾಮೇ ವಿಜಯಂ ಮಮ||

ಬಳಿಕ, ಆ ಮಾತಿನಂತೆ ಮತ್ಸ್ಯರಾಜನು ದೂತರಿಗೆ ಅಪ್ಪಣೆಮಾಡಿದನು: “ಪುರಕ್ಕೆ ಹೋಗಿ ಯುದ್ಧದಲ್ಲಿ ನಮ್ಮ ಗೆಲುವನ್ನು ಸಾರಿರಿ.

04032049a ಕುಮಾರಾಃ ಸಮಲಂಕೃತ್ಯ ಪರ್ಯಾಗಚ್ಛಂತು ಮೇ ಪುರಾತ್|

04032049c ವಾದಿತ್ರಾಣಿ ಚ ಸರ್ವಾಣಿ ಗಣಿಕಾಶ್ಚ ಸ್ವಲಂಕೃತಾಃ||

ಕುಮಾರರು ಚೆನ್ನಾಗಿ ಅಲಂಕರಿಸಿಕೊಂಡು ನನ್ನ ಪುರದಿಂದ ಹೊರಬರಲಿ. ಎಲ್ಲ ವಾದ್ಯಗಳೂ, ಚೆನ್ನಾಗಿ ಸಿಂಗರಿಸಿಕೊಂಡ ವೇಶ್ಯೆಯರೂ ಬರಲಿ.”

04032050a ತೇ ಗತ್ವಾ ಕೇವಲಾಂ ರಾತ್ರಿಮಥ ಸೂರ್ಯೋದಯಂ ಪ್ರತಿ|

04032050c ವಿರಾಟಸ್ಯ ಪುರಾಭ್ಯಾಶೇ ದೂತಾ ಜಯಮಘೋಷಯನ್||

ಆ ದೂತರು ಒಂದೇ ರಾತ್ರಿಯಲ್ಲಿ ಅಲ್ಲಿಗೆ ಹೋಗಿ ಸೂರ್ಯೋದಯದಲ್ಲಿ ವಿರಾಟ ನಗರದ ಸಮೀಪದಲ್ಲಿ ಜಯವನ್ನು ಘೋಷಿಸಿದರು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ವಿರಾಟಜಯಘೋಷೇ ದ್ವಾತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ವಿರಾಟಜಯಘೋಷದಲ್ಲಿ ಮೂವತ್ತೆರಡನೆಯ ಅಧ್ಯಾಯವು.

Related image

Comments are closed.