Virata Parva: Chapter 28

ವಿರಾಟ ಪರ್ವ: ಗೋಹರಣ ಪರ್ವ

೨೮

ಕೃಪನ ಸಲಹೆ

ನಿನ್ನ ಬಲವನ್ನೂ ಕೋಶವನ್ನೂ ನೀತಿಯನ್ನೂ ನಿರ್ಧರಿಸಿಕೋ; ಅವರ ಉದಯಕಾಲ ಬಂದಾಗ ಅವರೊಡನೆ ಅನುಕೂಲವಾದ ಸಂಧಿಯನ್ನು ಮಾಡಿಕೊಳ್ಳೋಣವೆಂದು ಕೃಪನು ಸಲಹೆನೀಡುವುದು (೧-೧೪).

04028001 ವೈಶಂಪಾಯನ ಉವಾಚ|

04028001a ತತಃ ಶಾರದ್ವತೋ ವಾಕ್ಯಮಿತ್ಯುವಾಚ ಕೃಪಸ್ತದಾ|

04028001c ಯುಕ್ತಂ ಪ್ರಾಪ್ತಂ ಚ ವೃದ್ಧೇನ ಪಾಂಡವಾನ್ಪ್ರತಿ ಭಾಷಿತಂ||

04028002a ಧರ್ಮಾರ್ಥಸಹಿತಂ ಶ್ಲಕ್ಷ್ಣಂ ತತ್ತ್ವತಶ್ಚ ಸಹೇತುಮತ್|

04028002c ತತ್ರಾನುರೂಪಂ ಭೀಷ್ಮೇಣ ಮಮಾಪ್ಯತ್ರ ಗಿರಂ ಶೃಣು||

ವೈಶಂಪಾಯನನು ಹೇಳಿದನು: “ಅನಂತರ ಶಾರದ್ವತ ಕೃಪನು ಹೀಗೆ ನುಡಿದನು - “ಹಿರಿಯನಾದ ಭೀಷ್ಮನು ಪಾಂಡವರ ವಿಷಯದಲ್ಲಿ ಹೇಳಿದ್ದುದು ಯುಕ್ತವೂ, ಸಂದರ್ಭೋಚಿತವೂ, ಧರ್ಮಾರ್ಥಸಹಿತವೂ, ಸುಂದರವೂ, ತಾತ್ವಿಕವೂ, ಸಕಾರಣವೂ, ಅವನಿಗೆ ತಕ್ಕದ್ದೂ ಆಗಿದೆ. ಇದರ ಬಗ್ಗೆ ನನ್ನ ಮಾತನ್ನೂ ಕೇಳು.

04028003a ತೇಷಾಂ ಚೈವ ಗತಿಸ್ತೀರ್ಥೈರ್ವಾಸಶ್ಚೈಷಾಂ ಪ್ರಚಿಂತ್ಯತಾಂ|

04028003c ನೀತಿರ್ವಿಧೀಯತಾಂ ಚಾಪಿ ಸಾಂಪ್ರತಂ ಯಾ ಹಿತಾ ಭವೇತ್||

ಅವರ ಜಾಡು, ನಿವಾಸದ ಕುರಿತು ಹಿರಿಯರೊಡನೆ ಸಮಾಲೋಚಿಸಬೇಕು. ಹಿತಕರವಾಗುವ ನೀತಿಯನ್ನೀಗ ಅನುಸರಿಸಬೇಕು.

04028004a ನಾವಜ್ಞೇಯೋ ರಿಪುಸ್ತಾತ ಪ್ರಾಕೃತೋಽಪಿ ಬುಭೂಷತಾ|

04028004c ಕಿಂ ಪುನಃ ಪಾಂಡವಾಸ್ತಾತ ಸರ್ವಾಸ್ತ್ರಕುಶಲಾ ರಣೇ||

ಅಯ್ಯಾ! ಶತ್ರುವು ಸಾಮಾನ್ಯನಾದರೂ, ಅಭ್ಯುದಯಾಕಾಂಕ್ಷಿಗಳು ಅವನನ್ನು ಅಲಕ್ಷಿಸಬಾರದು. ಇನ್ನು ಯುದ್ಧದಲ್ಲಿ ಸರ್ವಾಸ್ತ್ರಕುಶಲರಾದ ಪಾಂಡವರನ್ನು ಅಲಕ್ಷಿಸುವುದೇ?

04028005a ತಸ್ಮಾತ್ಸತ್ರಂ ಪ್ರವಿಷ್ಟೇಷು ಪಾಂಡವೇಷು ಮಹಾತ್ಮಸು|

04028005c ಗೂಢಭಾವೇಷು ಚನ್ನೇಷು ಕಾಲೇ ಚೋದಯಮಾಗತೇ||

04028006a ಸ್ವರಾಷ್ಟ್ರಪರರಾಷ್ಟ್ರೇಷು ಜ್ಞಾತವ್ಯಂ ಬಲಮಾತ್ಮನಃ|

04028006c ಉದಯೇ ಪಾಂಡವಾನಾಂ ಚ ಪ್ರಾಪ್ತೇ ಕಾಲೇ ನ ಸಂಶಯಃ||

ಆದ್ದರಿಂದ, ಮಹಾತ್ಮ ಪಾಂಡವರು ವೇಷ ಮರೆಸಿಕೊಂಡು, ಗೂಢವಾಗಿ ಅಡಗಿರಲು ಹಾಗೂ ಅವರ ಅಭ್ಯುದಯ ಕಾಲವು ಬಂದಿರಲು, ಸ್ವರಾಷ್ಟ್ರದಲ್ಲೂ ಪರರಾಷ್ಟ್ರದಲ್ಲೂ ನಿನಗಿರುವ ಬಲವನ್ನು ತಿಳಿದುಕೊಳ್ಳಬೇಕು. ಒಳ್ಳೆಯ ಕಾಲ ಒದಗಿ ಬಂದಾಗ ಪಾಂಡವರು ಏಳಿಗೆ ಹೊಂದುವುದರಲ್ಲಿ ಸಂಶಯವಿಲ್ಲ.

04028007a ನಿವೃತ್ತಸಮಯಾಃ ಪಾರ್ಥಾ ಮಹಾತ್ಮಾನೋ ಮಹಾಬಲಾಃ|

04028007c ಮಹೋತ್ಸಾಹಾ ಭವಿಷ್ಯಂತಿ ಪಾಂಡವಾ ಹ್ಯತಿತೇಜಸಃ||

ಪ್ರತಿಜ್ಞೆಯನ್ನು ಪೂರೈಸಿದ ಮಹಾತ್ಮರೂ ಮಹಾಬಲರೂ ಆದ ಪಾಂಡವರು ನಿಸ್ಸಂಶಯವಾಗಿ ಮಹೋತ್ಸಾಹಶಾಲಿಗಳೂ ಅತಿ ತೇಜಸ್ವಿಗಳೂ ಆಗಿಬಿಡುತ್ತಾರೆ.

04028008a ತಸ್ಮಾದ್ಬಲಂ ಚ ಕೋಶಂ ಚ ನೀತಿಶ್ಚಾಪಿ ವಿಧೀಯತಾಂ|

04028008c ಯಥಾ ಕಾಲೋದಯೇ ಪ್ರಾಪ್ತೇ ಸಮ್ಯಕ್ತೈಃ ಸಂದಧಾಮಹೇ||

ಅದ್ದರಿಂದ ನಿನ್ನ ಬಲವನ್ನೂ ಕೋಶವನ್ನೂ ನೀತಿಯನ್ನೂ ನಿರ್ಧರಿಸಿಕೋ; ಅವರ ಉದಯಕಾಲ ಬಂದಾಗ ಅವರೊಡನೆ ಅನುಕೂಲವಾದ ಸಂಧಿಯನ್ನು ಮಾಡಿಕೊಳ್ಳೋಣ.

04028009a ತಾತ ಮನ್ಯಾಮಿ ತತ್ಸರ್ವಂ ಬುಧ್ಯಸ್ವ ಬಲಮಾತ್ಮನಃ|

04028009c ನಿಯತಂ ಸರ್ವಮಿತ್ರೇಷು ಬಲವತ್ಸ್ವಬಲೇಷು ಚ||

ಅಯ್ಯಾ! ಬಲಶಾಲಿಗಳೂ ಅಬಲರೂ ಆದ ಎಲ್ಲ ಮಿತ್ರರಲ್ಲಿ ನಿನಗಿರುವ ಬಲವನ್ನೆಲ್ಲ ನೀನು ಖಚಿತವಾಗಿ ತಿಳಿದುಕೊಳ್ಳಬೇಕೆಂದು ಭಾವಿಸುತ್ತೇನೆ.

04028010a ಉಚ್ಚಾವಚಂ ಬಲಂ ಜ್ಞಾತ್ವಾ ಮಧ್ಯಸ್ಥಂ ಚಾಪಿ ಭಾರತ|

04028010c ಪ್ರಹೃಷ್ಟಮಪ್ರಹೃಷ್ಟಂ ಚ ಸಂದಧಾಮ ತಥಾ ಪರೈಃ||

ಭಾರತ! ನಿನ್ನ ಸೈನ್ಯ ಉತ್ತಮವಾಗಿದೆಯೋ, ಮಧ್ಯಸ್ಥವಾಗಿದೆಯೋ, ಅಧಮವಾಗಿದೆಯೋ, ಸಂತುಷ್ಟವಾಗಿದೆಯೋ, ಅಸಂತುಷ್ಟವಾಗಿದೆಯೋ, ಎಂಬುದನ್ನು ತಿಳಿದುಕೊಂಡು ಅನಂತರ ಶತ್ರುಗಳೊಡನೆ ಸಂಧಿ ಮಾಡಿಕೊಳ್ಳೋಣ.

04028011a ಸಾಮ್ನಾ ಭೇದೇನ ದಾನೇನ ದಂಡೇನ ಬಲಿಕರ್ಮಣಾ|

04028011c ನ್ಯಾಯೇನಾನಮ್ಯ ಚ ಪರಾನ್ಬಲಾಚ್ಚಾನಮ್ಯ ದುರ್ಬಲಾನ್||

04028012a ಸಾಂತ್ವಯಿತ್ವಾ ಚ ಮಿತ್ರಾಣಿ ಬಲಂ ಚಾಭಾಷ್ಯತಾಂ ಸುಖಂ|

04028012c ಸಕೋಶಬಲಸಂವೃದ್ಧಃ ಸಮ್ಯಕ್ಸಿದ್ಧಿಮವಾಪ್ಸ್ಯಸಿ||

ಸಾಮ, ಭೇದ, ದಾನ, ದಂಡಗಳಿಂದ, ಕಾಣಿಕೆಗಳಿಂದ, ನ್ಯಾಯದಿಂದ, ವೈರಿಗಳನ್ನು ಮಣಿಸಿ, ಬಲಪ್ರಯೋಗದಿಂದ ದುರ್ಬರಲನ್ನು ಮಣಿಸಿ, ಮಿತ್ರರನ್ನು ತೃಪ್ತಿಗೊಳಿಸಿ, ಸೈನ್ಯದೊಡನೆ ಸವಿನುಡಿಗಳನ್ನಾಡಿದರೆ ನಿನ್ನ ಕೋಶ-ಬಲಗಳು ವೃದ್ಧಿಸಿ ನೀನು ಉತ್ತಮ ಸಿದ್ಧಿಯನ್ನು ಪಡೆಯುವೆ.

04028013a ಯೋತ್ಸ್ಯಸೇ ಚಾಪಿ ಬಲಿಭಿರರಿಭಿಃ ಪ್ರತ್ಯುಪಸ್ಥಿತೈಃ|

04028013c ಅನ್ಯೈಸ್ತ್ವಂ ಪಾಂಡವೈರ್ವಾಪಿ ಹೀನಸ್ವಬಲವಾಹನೈಃ||

ಹೀಗೆ ಮಾಡಿದಲ್ಲಿ ಎದುರುಬಿದ್ದ ಬಲಶಾಲಿ ಅನ್ಯ ಶತ್ರುಗಳೊಡನಾಗಲಿ ಸ್ವಸೈನ್ಯ ವಾಹನಗಳಿಲ್ಲದ ಪಾಂಡವರೊಡನಾಗಲಿ ನೀನು ಹೋರಾಡಬಲ್ಲೆ.

04028014a ಏವಂ ಸರ್ವಂ ವಿನಿಶ್ಚಿತ್ಯ ವ್ಯವಸಾಯಂ ಸ್ವಧರ್ಮತಃ|

04028014c ಯಥಾಕಾಲಂ ಮನುಷ್ಯೇಂದ್ರ ಚಿರಂ ಸುಖಮವಾಪ್ಸ್ಯಸಿ||

ರಾಜ! ಹೀಗೆ ಸ್ವಧರ್ಮಾನುಸಾರವಾಗಿ ಕಾಲೋಚಿತವಾಗಿ ನಿಶ್ಚಯಿಸಿ ಎಲ್ಲ ಕಾರ್ಯವನ್ನೂ ಮಾಡಿದರೆ ನೀನು ಶಾಶ್ವತವಾದ ಸುಖವನ್ನು ಪಡೆಯುವೆ.””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಕೃಪವಾಕ್ಯೇ ಅಷ್ಟವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಕೃಪವಾಕ್ಯದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.