Virata Parva: Chapter 24

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ: ಗೋಹರಣ ಪರ್ವ

೨೪

ದುರ್ಯೋಧನನಿಗೆ ಗೂಢಚರರ ವರದಿ

ಪಾಂಡವರನ್ನು ಪತ್ತೇಹಚ್ಚಲು ಕಳುಹಿಸಿದ್ದ ಗೂಢಚರರು ಹಿಂದಿರುಗಿ ದುರ್ಯೋಧನನಿಗೆ ಅವರ ಕುರುಹು ಸಿಗಲಿಲ್ಲವೆಂದು ವರದಿಮಾಡಿದುದು (೧-೧೮). ವಿರಾಟನಗರಿಯಲ್ಲಿ ಕೀಚಕನು ಅಗೋಚರ ಗಂಧರ್ವರಿಂದ ಹತನಾದನೆಂದೂ ತಿಳಿಸುವುದು (೧೦-೨೨).

04024001 ವೈಶಂಪಾಯನ ಉವಾಚ|

04024001a ಕೀಚಕಸ್ಯ ತು ಘಾತೇನ ಸಾನುಜಸ್ಯ ವಿಶಾಂ ಪತೇ|

04024001c ಅತ್ಯಾಹಿತಂ ಚಿಂತಯಿತ್ವಾ ವ್ಯಸ್ಮಯಂತ ಪೃಥಗ್ಜನಾಃ||

ವೈಶಂಪಾಯನನು ಹೇಳಿದನು: “ವಿಶಾಂಪತೇ! ತಮ್ಮಂದಿರೊಡನೆ ಕೀಚಕನು ಹತನಾಗಲು ಆ ವಿಪತ್ತಿನ ಕುರಿತು ಯೋಚಿಸುತ್ತಾ ಇತರ ಜನರು ಆಶ್ಚರ್ಯಪಟ್ಟರು.

04024002a ತಸ್ಮಿನ್ಪುರೇ ಜನಪದೇ ಸಂಜಲ್ಪೋಽಭೂಚ್ಚ ಸರ್ವಶಃ|

04024002c ಶೌರ್ಯಾದ್ಧಿ ವಲ್ಲಭೋ ರಾಜ್ಞೋ ಮಹಾಸತ್ತ್ವಶ್ಚ ಕೀಚಕಃ||

04024003a ಆಸೀತ್ಪ್ರಹರ್ತಾ ಚ ನೃಣಾಂ ದಾರಾಮರ್ಶೀ ಚ ದುರ್ಮತಿಃ|

04024003c ಸ ಹತಃ ಖಲು ಪಾಪಾತ್ಮಾ ಗಂಧರ್ವೈರ್ದುಷ್ಟಪೂರುಷಃ||

ಮಹಾಸತ್ವನಾದ ಕೀಚಕನು ರಾಜನಿಗೆ ಪ್ರಿಯನಾಗಿದ್ದನು. ಆ ದುರ್ಮತಿಯು ಜನರನ್ನು ಹಿಂಸಿಸುತ್ತಿದ್ದನು ಮತ್ತು ಪರಸತಿಯರಲ್ಲಿ ಆಸಕ್ತನಾಗಿದ್ದನು. ಪಾಪಾತ್ಮನಾದ ಆ ದುಷ್ಟ ಪುರುಷನು ಗಂಧರ್ವರಿಂದ ಹತನಾದನು ಎಂದು ಆ ನಗರದಲ್ಲೂ ದೇಶದಲ್ಲೂ ಎಲ್ಲೆಡೆ ಮಾತುಕತೆ ನಡೆಯುತ್ತಿತ್ತು.

04024004a ಇತ್ಯಜಲ್ಪನ್ಮಹಾರಾಜ ಪರಾನೀಕವಿಶಾತನಂ|

04024004c ದೇಶೇ ದೇಶೇ ಮನುಷ್ಯಾಶ್ಚ ಕೀಚಕಂ ದುಷ್ಪ್ರಧರ್ಷಣಂ||

ಮಹಾರಾಜ! ಪರಸೈನ್ಯ ನಾಶಕನೂ ಎದುರಿಸಲು ಅಸಾಧ್ಯನೂ ಆಗಿದ್ದ ಆ ಕೀಚಕನ ಕುರಿತು ಜನರು ದೇಶ ದೇಶಗಳಲ್ಲಿ ಹೀಗೆ ಮಾತನಾಡಿಕೊಳ್ಳುತ್ತಿದ್ದರು.

04024005a ಅಥ ವೈ ಧಾರ್ತರಾಷ್ಟ್ರೇಣ ಪ್ರಯುಕ್ತಾ ಯೇ ಬಹಿಶ್ಚರಾಃ|

04024005c ಮೃಗಯಿತ್ವಾ ಬಹೂನ್ಗ್ರಾಮಾನ್ರಾಷ್ಟ್ರಾಣಿ ನಗರಾಣಿ ಚ||

04024006a ಸಂವಿಧಾಯ ಯಥಾದಿಷ್ಟಂ ಯಥಾದೇಶಪ್ರದರ್ಶನಂ|

04024006c ಕೃತಚಿಂತಾ ನ್ಯವರ್ತಂತ ತೇ ಚ ನಾಗಪುರಂ ಪ್ರತಿ||

ಅಷ್ಟರಲ್ಲಿಯೇ ದುರ್ಯೋಧನನಿಂದ ನಿಯುಕ್ತರಾಗಿದ್ದ ಗೂಢಚರರು ಬಹಳ ಗ್ರಾಮಗಳನ್ನೂ, ರಾಷ್ಟ್ರಗಳನ್ನೂ, ನಗರಗಳನ್ನು ಹುಡುಕಿ ತಮಗೆ ಕೊಟ್ಟಿದ್ದ ರಾಜ್ಯಶೋಧನೆಯ ಆದೇಶವನ್ನು ನೆರವೇರಿಸಿ ಚಿಂತಾಕ್ರಾಂತರಾಗಿ ಹಸ್ತಿನಾಪುರಕ್ಕೆ ಮರಳಿದರು.

04024007a ತತ್ರ ದೃಷ್ಟ್ವಾ ತು ರಾಜಾನಂ ಕೌರವ್ಯಂ ಧೃತರಾಷ್ಟ್ರಜಂ|

04024007c ದ್ರೋಣಕರ್ಣಕೃಪೈಃ ಸಾರ್ಧಂ ಭೀಷ್ಮೇಣ ಚ ಮಹಾತ್ಮನಾ||

04024008a ಸಂಗತಂ ಭ್ರಾತೃಭಿಶ್ಚಾಪಿ ತ್ರಿಗರ್ತೈಶ್ಚ ಮಹಾರಥೈಃ|

04024008c ದುರ್ಯೋಧನಂ ಸಭಾಮಧ್ಯೇ ಆಸೀನಮಿದಮಬ್ರುವನ್||

ಅಲ್ಲಿ ದ್ರೋಣ, ಕರ್ಣ, ಕೃಪರೊಡನೆ, ಮಹಾತ್ಮ ಭೀಷ್ಮನೊಡನೆ, ಸೋದರರೊಡನೆ, ಮಹಾರಥಿ ತ್ರಿಗರ್ತರೊಡನೆ ಸಭಾಮಧ್ಯದಲ್ಲಿ ಕುಳಿತಿದ್ದ ಧೃತರಾಷ್ಟ್ರ ಪುತ್ರ, ಕೌರವರಾಜ ದುರ್ಯೋಧನನನ್ನು ಕಂಡು ಹೇಳಿದರು:

04024009a ಕೃತೋಽಸ್ಮಾಭಿಃ ಪರೋ ಯತ್ನಸ್ತೇಷಾಮನ್ವೇಷಣೇ ಸದಾ|

04024009c ಪಾಂಡವಾನಾಂ ಮನುಷ್ಯೇಂದ್ರ ತಸ್ಮಿನ್ಮಹತಿ ಕಾನನೇ||

04024010a ನಿರ್ಜನೇ ಮೃಗಸಂಕೀರ್ಣೇ ನಾನಾದ್ರುಮಲತಾವೃತೇ|

04024010c ಲತಾಪ್ರತಾನಬಹುಲೇ ನಾನಾಗುಲ್ಮಸಮಾವೃತೇ||

“ರಾಜನ್! ಮೃಗಗಳಿಂದ ತುಂಬಿದ, ನಾನಾ ವೃಕ್ಷಲತೆಗಳಿಂದ ಮುಸುಕಿದ, ಲತೆಗಳು ಬಹಳವಾಗಿ ಹರಡಿದ್ದ, ಹಲವು ಪೊದೆಗಳಿಂದ ಇಕ್ಕಿರಿದ ಆ ನಿರ್ಜನ ಮಹಾವನದಲ್ಲಿ ಪಾಂಡವರನ್ನು ಹುಡುಕುವ ಪರಮ ಪ್ರಯತ್ನವನ್ನು ನಿರಂತರವಾಗಿ ಮಾಡಿದೆವು.

04024011a ನ ಚ ವಿದ್ಮೋ ಗತಾ ಯೇನ ಪಾರ್ಥಾಃ ಸ್ಯುರ್ದೃಢವಿಕ್ರಮಾಃ|

04024011c ಮಾರ್ಗಮಾಣಾಃ ಪದನ್ಯಾಸಂ ತೇಷು ತೇಷು ತಥಾ ತಥಾ||

ಆದರೆ ದೃಢವಿಕ್ರಮಿ ಪಾರ್ಥರು ಹೋದ ದಾರಿ ನಮಗೆ ತಿಳಿಯಲಿಲ್ಲ. ಎಲ್ಲೆಡೆಗಳಲ್ಲಿಯೂ ಅವರ ಹೆಜ್ಜೆಗುರುತುಗಳನ್ನು ಹುಡುಕಿದೆವು.

04024012a ಗಿರಿಕೂಟೇಷು ತುಂಗೇಷು ನಾನಾಜನಪದೇಷು ಚ|

04024012c ಜನಾಕೀರ್ಣೇಷು ದೇಶೇಷು ಖರ್ವಟೇಷು ಪುರೇಷು ಚ||

04024013a ನರೇಂದ್ರ ಬಹುಶೋಽನ್ವಿಷ್ಟಾ ನೈವ ವಿದ್ಮಶ್ಚ ಪಾಂಡವಾನ್|

04024013c ಅತ್ಯಂತಭಾವಂ ನಷ್ಟಾಸ್ತೇ ಭದ್ರಂ ತುಭ್ಯಂ ನರರ್ಷಭ||

ರಾಜನ್! ಎತ್ತರವಾದ ಗಿರಿಶಿಖರಗಳಲ್ಲಿ, ನಾನಾ ಜನಪದಗಳಲ್ಲಿ, ಜನಭರಿತ ದೇಶಗಳಲ್ಲಿ, ಬೆಟ್ಟದೂರುಗಳಲ್ಲಿ, ಮತ್ತು ಪುರಗಳಲ್ಲಿ ಬಹಳವಾಗಿ ಹುಡುಕಿದೆವು. ಆದರೂ ಪಾಂಡವರನ್ನು ಕಾಣಲಿಲ್ಲ. ನರಶ್ರೇಷ್ಠನೇ! ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ಮಂಗಳವಾಗಲಿ!

04024014a ವರ್ತ್ಮಾನ್ಯನ್ವಿಷ್ಯಮಾಣಾಸ್ತು ರಥಾನಾಂ ರಥಸತ್ತಮ|

04024014c ಕಂ ಚಿತ್ಕಾಲಂ ಮನುಷ್ಯೇಂದ್ರ ಸೂತಾನಾಮನುಗಾ ವಯಂ||

ರಾಜನ್! ರಥಿಕಶ್ರೇಷ್ಠ! ಅವರ ರಥಗಳ ಜಾಡನ್ನು ಅರಸುತ್ತಾ ನಾವು ಸ್ವಲ್ಪ ಕಾಲ ಅವರ ಸೂತರನ್ನು ಅನುಸರಿಸಿದೆವು.

04024015a ಮೃಗಯಿತ್ವಾ ಯಥಾನ್ಯಾಯಂ ವಿದಿತಾರ್ಥಾಃ ಸ್ಮ ತತ್ತ್ವತಃ|

04024015c ಪ್ರಾಪ್ತಾ ದ್ವಾರವತೀಂ ಸೂತಾ ಋತೇ ಪಾರ್ಥೈಃ ಪರಂತಪ||

ಯಥೋಚಿತವಾಗಿ ಹುಡುಕುತ್ತಾ ಕಡೆಗೆ ಹುರುಳನ್ನರಿತುಕೊಂಡೆವು. ಶತ್ರುನಾಶಕ! ಪಾಂಡವರಿಲ್ಲದೇ ಸೂತರು ದ್ವಾರವತಿಯನ್ನು ಸೇರಿದರು.

04024016a ನ ತತ್ರ ಪಾಂಡವಾ ರಾಜನ್ನಾಪಿ ಕೃಷ್ಣಾ ಪತಿವ್ರತಾ|

04024016c ಸರ್ವಥಾ ವಿಪ್ರನಷ್ಟಾಸ್ತೇ ನಮಸ್ತೇ ಭರತರ್ಷಭ||

ಭರತರ್ಷಭ! ಅಲ್ಲಿ ಪಾಂಡವರಾಗಲೀ ಪತಿವ್ರತೆ ಕೃಷ್ಣೆಯಾಗಲೀ ಇಲ್ಲ. ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ವಂದನೆಗಳು.

04024017a ನ ಹಿ ವಿದ್ಮೋ ಗತಿಂ ತೇಷಾಂ ವಾಸಂ ವಾಪಿ ಮಹಾತ್ಮನಾಂ|

04024017c ಪಾಂಡವಾನಾಂ ಪ್ರವೃತ್ತಿಂ ವಾ ವಿದ್ಮಃ ಕರ್ಮಾಪಿ ವಾ ಕೃತಂ|

04024017e ಸ ನಃ ಶಾಧಿ ಮನುಷ್ಯೇಂದ್ರ ಅತ ಊರ್ಧ್ವಂ ವಿಶಾಂ ಪತೇ||

ವಿಶಾಂಪತೇ! ಮಹಾತ್ಮ ಆ ಪಾಂಡವರ ಗತಿಯಾಗಲೀ ವಾಸಸ್ಥಾನವಾಗಲೀ, ಪ್ರವೃತ್ತಿಯಾಗಲೀ, ಮಾಡಿದ ಕಾರ್ಯವಾಗಲೀ ನಮಗೆ ತಿಳಿದು ಬರಲಿಲ್ಲ. ಮನುಷ್ಯೇಂದ್ರ! ಮುಂದೇನಾಗಬೇಕೆಂದು ಅಪ್ಪಣೆ ಮಾಡು.

04024018a ಅನ್ವೇಷಣೇ ಪಾಂಡವಾನಾಂ ಭೂಯಃ ಕಿಂ ಕರವಾಮಹೇ|

04024018c ಇಮಾಂ ಚ ನಃ ಪ್ರಿಯಾಮೀಕ್ಷ ವಾಚಂ ಭದ್ರವತೀಂ ಶುಭಾಂ||

ಪಾಂಡವರ ಅನ್ವೇಷಣೆಗಾಗಿ ಇನ್ನೇನು ಮಾಡಬೇಕು? ಇದಲ್ಲದೇ ಮಂಗಳಕರವಾದ ಶುಭಕರವಾದ ಮತ್ತು ಪ್ರಿಯವಾದ ನಮ್ಮ ಈ ಮಾತನ್ನು ಕೇಳು.

04024019a ಯೇನ ತ್ರಿಗರ್ತಾ ನಿಕೃತಾ ಬಲೇನ ಮಹತಾ ನೃಪ|

04024019c ಸೂತೇನ ರಾಜ್ಞೋ ಮತ್ಸ್ಯಸ್ಯ ಕೀಚಕೇನ ಮಹಾತ್ಮನಾ||

04024020a ಸ ಹತಃ ಪತಿತಃ ಶೇತೇ ಗಂಧರ್ವೈರ್ನಿಶಿ ಭಾರತ|

04024020c ಅದೃಶ್ಯಮಾನೈರ್ದುಷ್ಟಾತ್ಮಾ ಸಹ ಭ್ರಾತೃಭಿರಚ್ಯುತ||

ಅಚ್ಯುತ! ರಾಜ! ಭಾರತ! ತನ್ನ ಮಹಾಬಲದಿಂದ ತ್ರಿಗರ್ತರನ್ನು ಸೋಲಿಸಿದ ಮತ್ಸ್ಯರಾಜನ ಸೂತ ಮಹಾಸತ್ವ ದುಷ್ಟಾತ್ಮ ಕೀಚಕನು ಅಗೋಚರ ಗಂಧರ್ವರಿಂದ ತನ್ನ ತಮ್ಮಂದಿರೊಡನೆ ಇರುಳಿನಲ್ಲಿ ಹತನಾಗಿ ಬಿದ್ದನು.

04024021a ಪ್ರಿಯಮೇತದುಪಶ್ರುತ್ಯ ಶತ್ರೂಣಾಂ ತು ಪರಾಭವಂ|

04024021c ಕೃತಕೃತ್ಯಶ್ಚ ಕೌರವ್ಯ ವಿಧತ್ಸ್ವ ಯದನಂತರಂ||

ಕೌರವ! ಶತ್ರುಪರಾಭವದ ಈ ಪ್ರಿಯವಿಷವನ್ನಾಲಿಸಿ ಕೃತಕೃತ್ಯನಾಗಿ ಮುಂದಿನದನ್ನು ಆಜ್ಞಾಪಿಸು.””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಚಾರಪ್ರತ್ಯಾಗಮನೇ ಚತುರ್ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಚಾರಪ್ರತ್ಯಾಗಮನದಲ್ಲಿ ಇಪ್ಪತ್ನಾಲ್ಕನೆಯ ಅಧ್ಯಾಯವು.

Image result for flowers against white background

Comments are closed.