Virata Parva: Chapter 23

ವಿರಾಟ ಪರ್ವ: ಕೀಚಕವಧ ಪರ್ವ

೨೩

ಕೀಚಕದಹನ

ಕೀಚಕ-ಉಪಕೀಚಕರ ದೇಹಸಂಸ್ಕಾರಕ್ಕೆ ಅಪ್ಪಣೆಯನ್ನಿತ್ತು ವಿರಾಟನು ಸುದೇಷ್ಣೆಗೆ ಸೈರಂಧ್ರಿಯನ್ನು ಕಳುಹಿಸಬೇಕೆಂದು ಹೇಳುವುದು (೧-೧೦). ಭೀಮ ಮತ್ತು ಅರ್ಜುನರೊಂದಿಗೆ ದ್ರೌಪದಿಯ ಸಂವಾದ (೧೧-೨೩). ಬಿಟ್ಟುಹೋಗೆಂದು ಸುದೇಷ್ಣೆಯು ಹೇಳಲು ದ್ರೌಪದಿಯು ಹದಿಮೂರುದಿನಗಳ ಅವಕಾಶವನ್ನು ಕೇಳಿಕೊಳ್ಳುವುದು (೨೪-೨೮).

04023001 ವೈಶಂಪಾಯನ ಉವಾಚ|

04023001a ತೇ ದೃಷ್ಟ್ವಾ ನಿಹತಾನ್ಸೂತಾನ್ರಾಜ್ಞೇ ಗತ್ವಾ ನ್ಯವೇದಯನ್|

04023001c ಗಂಧರ್ವೈರ್ನಿಹತಾ ರಾಜನ್ಸೂತಪುತ್ರಾಃ ಪರಃಶತಾಃ||

ವೈಶಂಪಾಯನನು ಹೇಳಿದನು: “ಹತರಾಗಿದ್ದ ಸೂತರನ್ನು ನೋಡಿದ ಅವರು ರಾಜನಲ್ಲಿಗೆ ಹೋಗಿ ನಿವೇದಿಸಿದರು: “ರಾಜ! ನೂರಾರು ಮಂದಿ ಸೂತಪುತ್ರರು ಗಂಧರ್ವರಿಂದ ಹತರಾದರು.

04023002a ಯಥಾ ವಜ್ರೇಣ ವೈ ದೀರ್ಣಂ ಪರ್ವತಸ್ಯ ಮಹಚ್ಚಿರಃ|

04023002c ವಿನಿಕೀರ್ಣಂ ಪ್ರದೃಶ್ಯೇತ ತಥಾ ಸೂತಾ ಮಹೀತಲೇ||

ವಜ್ರಾಯುಧದಿಂದ ಸೀಳಿಹೋದ ಪರ್ವತದ ಮಹಾಶಿಖರದಂತೆ ಸೂತರು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣುತ್ತಿದೆ.

04023003a ಸೈರಂಧ್ರೀ ಚ ವಿಮುಕ್ತಾಸೌ ಪುನರಾಯಾತಿ ತೇ ಗೃಹಂ|

04023003c ಸರ್ವಂ ಸಂಶಯಿತಂ ರಾಜನ್ನಗರಂ ತೇ ಭವಿಷ್ಯತಿ||

ಸೈರಂಧ್ರಿಯು ಬಿಡುಗಡೆಹೊಂದಿ ಮತ್ತೆ ನಿನ್ನ ಮನೆಗೆ ಇದೋ ಬರುತ್ತಿದ್ದಾಳೆ. ರಾಜನ್! ನಿನ್ನ ನಗರವೆಲ್ಲವೂ ಅಪಾಯಕ್ಕೀಡಾಗುತ್ತಿದೆ.

04023004a ತಥಾರೂಪಾ ಹಿ ಸೈರಂಧ್ರೀ ಗಂಧರ್ವಾಶ್ಚ ಮಹಾಬಲಾಃ|

04023004c ಪುಂಸಾಮಿಷ್ಟಶ್ಚ ವಿಷಯೋ ಮೈಥುನಾಯ ನ ಸಂಶಯಃ||

ಸೈರಂಧ್ರಿಯು ಅತೀವ ರೂಪವತಿ. ಗಂಧರ್ವರೋ ಮಹಾಬಲರು. ಪುರುಷರಿಗೆ ಸಂಭೋಗವು ಇಷ್ಟವಾದುದು. ಇದರಲ್ಲಿ ಸಂದೇಹವಿಲ್ಲ.

04023005a ಯಥಾ ಸೈರಂಧ್ರಿವೇಷೇಣ ನ ತೇ ರಾಜನ್ನಿದಂ ಪುರಂ|

04023005c ವಿನಾಶಮೇತಿ ವೈ ಕ್ಷಿಪ್ರಂ ತಥಾ ನೀತಿರ್ವಿಧೀಯತಾಂ||

ರಾಜನ್! ಸೈರಂಧ್ರಿಯ ಕಾರಣದಿಂದ ನಿನ್ನ ಈ ಪುರವು ವಿನಾಶವಾಗದಂತೆ ಬೇಗನೇ ತಕ್ಕ ನೀತಿಯನ್ನು ಯೋಜಿಸು.”

04023006a ತೇಷಾಂ ತದ್ವಚನಂ ಶ್ರುತ್ವಾ ವಿರಾಟೋ ವಾಹಿನೀಪತಿಃ|

04023006c ಅಬ್ರವೀತ್ಕ್ರಿಯತಾಮೇಷಾಂ ಸೂತಾನಾಂ ಪರಮಕ್ರಿಯಾ||

ಅವರ ಆ ಮಾತನ್ನು ಕೇಳಿದ ವಾಹಿನೀಪತಿ ವಿರಾಟನು ಹೇಳಿದನು: “ಈ ಸೂತರ ಅಂತ್ಯಕ್ರಿಯೆಗಳನ್ನು ನೆರವೇರಿಸಿ.

04023007a ಏಕಸ್ಮಿನ್ನೇವ ತೇ ಸರ್ವೇ ಸುಸಮಿದ್ಧೇ ಹುತಾಶನೇ|

04023007c ದಹ್ಯಂತಾಂ ಕೀಚಕಾಃ ಶೀಘ್ರಂ ರತ್ನೈರ್ಗಂಧೈಶ್ಚ ಸರ್ವಶಃ||

ಆ ಕೀಚಕರನ್ನೆಲ್ಲಾ ಚೆನ್ನಾಗಿ ಪ್ರಜ್ವಲಿತವಾಗಿರುವ ಒಂದೇ ಚಿತಾಗ್ನಿಯಲ್ಲಿ ರತ್ನ-ಗಂಧ ಸಹಿತವಾಗಿ ಬೇಗನೆ ದಹನ ಮಾಡತಕ್ಕದ್ದು.”

04023008a ಸುದೇಷ್ಣಾಂ ಚಾಬ್ರವೀದ್ರಾಜಾ ಮಹಿಷೀಂ ಜಾತಸಾಧ್ವಸಃ|

04023008c ಸೈರಂಧ್ರೀಮಾಗತಾಂ ಬ್ರೂಯಾ ಮಮೈವ ವಚನಾದಿದಂ||

ಭೀತಿಗೊಂಡ ರಾಜನು ರಾಣಿ ಸುದೇಷ್ಣೆಗೆ ಹೇಳಿದನು: “ಸೈರಂಧ್ರಿಯು ಬಂದಾಗ ನಾನೇ ಹೇಳಿದೆನೆಂದು ಈ ಮಾತನ್ನು ಹೇಳಿಬಿಡು.

04023009a ಗಚ್ಛ ಸೈರಂಧ್ರಿ ಭದ್ರಂ ತೇ ಯಥಾಕಾಮಂ ಚರಾಬಲೇ|

04023009c ಬಿಭೇತಿ ರಾಜಾ ಸುಶ್ರೋಣಿ ಗಂಧರ್ವೇಭ್ಯಃ ಪರಾಭವಾತ್||

‘ಹೋಗು ಸೈರಂಧ್ರಿ! ನಿನಗೆ ಮಂಗಳವಾಗಲಿ! ಅಬಲೇ! ಮನಬಂದಲ್ಲಿ ಹೋಗು. ಸುಶ್ರೋಣಿ! ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ.’

04023010a ನ ಹಿ ತಾಮುತ್ಸಹೇ ವಕ್ತುಂ ಸ್ವಯಂ ಗಂಧರ್ವರಕ್ಷಿತಾಂ|

04023010c ಸ್ತ್ರಿಯಸ್ತ್ವದೋಷಾಸ್ತಾಂ ವಕ್ತುಮತಸ್ತ್ವಾಂ ಪ್ರಬ್ರವೀಮ್ಯಹಂ||

ಗಂಧರ್ವರಿಂದ ರಕ್ಷಿತರಾದ ಅವಳಿಗೆ ಸ್ವತಃ ನಾನೇ ಹೇಳಲು ನನಗೆ ಧೈರ್ಯವಿಲ್ಲ. ಸ್ತ್ರೀಯರು ನಿರ್ದೋಷಿಗಳು. ಆದ್ದರಿಂದ ಅವಳಿಗೆ ಹೇಳಬೇಕೆಂದು ನಿನಗೆ ತಿಳಿಸುತ್ತಿದ್ದೇನೆ.”

04023011a ಅಥ ಮುಕ್ತಾ ಭಯಾತ್ಕೃಷ್ಣಾ ಸೂತಪುತ್ರಾನ್ನಿರಸ್ಯ ಚ|

04023011c ಮೋಕ್ಷಿತಾ ಭೀಮಸೇನೇನ ಜಗಾಮ ನಗರಂ ಪ್ರತಿ||

ಇತ್ತ ಸೂತಪುತ್ರನನ್ನು ಕೊಂದ ಭೀಮಸೇನನಿಂದ ಬಿಡಿಸಲ್ಪಟ್ಟ ಕೃಷ್ಣೆಯು ಭಯಮುಕ್ತಳಾಗಿ ನಗರದ ಕಡೆ ನಡೆದಳು.

04023012a ತ್ರಾಸಿತೇವ ಮೃಗೀ ಬಾಲಾ ಶಾರ್ದೂಲೇನ ಮನಸ್ವಿನೀ|

04023012c ಗಾತ್ರಾಣಿ ವಾಸಸೀ ಚೈವ ಪ್ರಕ್ಷಾಲ್ಯ ಸಲಿಲೇನ ಸಾ||

ಮನಸ್ವಿನೀ ಆ ಬಾಲೆಯು ಶರೀರವನ್ನೂ ವಸ್ತ್ರಗಳನ್ನೂ ನೀರಿನಿಂದ ಶುಚಿಮಾಡಿಕೊಂಡು ಹುಲಿಗೆ ಹೆದರಿದ ಹರಿಣಿಯಂತೆ ಬರುತ್ತಿದ್ದಳು.

04023013a ತಾಂ ದೃಷ್ಟ್ವಾ ಪುರುಷಾ ರಾಜನ್ಪ್ರಾದ್ರವಂತ ದಿಶೋ ದಶ|

04023013c ಗಂಧರ್ವಾಣಾಂ ಭಯತ್ರಸ್ತಾಃ ಕೇ ಚಿದ್ದೃಷ್ಟೀರ್ನ್ಯಮೀಲಯನ್||

ರಾಜನ್! ಅವಳನ್ನು ನೋಡಿದ ಜನರು ಗಂಧರ್ವರ ಭಯಪೀಡಿತರಾಗಿ ಹತ್ತು ದಿಕ್ಕಿಗೂ ಓಡಿಹೋದರು. ಕೆಲವರು ಕಣ್ಣು ಮುಚ್ಚಿಕೊಂಡರು.

04023014a ತತೋ ಮಹಾನಸದ್ವಾರಿ ಭೀಮಸೇನಮವಸ್ಥಿತಂ|

04023014c ದದರ್ಶ ರಾಜನ್ಪಾಂಚಾಲೀ ಯಥಾ ಮತ್ತಂ ಮಹಾದ್ವಿಪಂ||

ರಾಜನ್! ಅನಂತರ ದ್ರೌಪದಿಯು ಅಡುಗೆಮನೆಯ ಬಾಗಿಲಲ್ಲಿ ಮದಿಸಿದ ಮಹಾಗಜನಂತೆ ನಿಂತಿದ್ದ ಭೀಮಸೇನನನ್ನು ನೋಡಿದಳು.

04023015a ತಂ ವಿಸ್ಮಯಂತೀ ಶನಕೈಃ ಸಂಜ್ಞಾಭಿರಿದಮಬ್ರವೀತ್|

04023015c ಗಂಧರ್ವರಾಜಾಯ ನಮೋ ಯೇನಾಸ್ಮಿ ಪರಿಮೋಚಿತಾ||

ಅವನನ್ನು ಕುರಿತು ಅಚ್ಚರಿಪಡುತ್ತಾ ಮೆಲ್ಲನೆ ಸನ್ನೆಗಳಿಂದ ಹೀಗೆ ನುಡಿದಳು: “ನನ್ನನ್ನು ಬಿಡಿಸಿದ ಗಂಧರ್ವರಾಜನಿಗೆ ನಮಸ್ಕಾರ!”

04023016 ಭೀಮಸೇನ ಉವಾಚ|

04023016a ಯೇ ಯಸ್ಯಾ ವಿಚರಂತೀಹ ಪುರುಷಾ ವಶವರ್ತಿನಃ|

04023016c ತಸ್ಯಾಸ್ತೇ ವಚನಂ ಶ್ರುತ್ವಾ ಅನೃಣಾ ವಿಚರಂತ್ಯುತ||

ಭೀಮಸೇನನು ಹೇಳಿದನು: “ಯಾರ ವಶವರ್ತಿಗಳಾಗಿ ಇಲ್ಲಿ ಪುರುಷರು ಚರಿಸುತ್ತಿದ್ದಾರೋ ಅವರು ಈ ನಿನ್ನ ಮಾತನ್ನು ಕೇಳಿ ಋಣಮುಕ್ತರಾಗಿರುತ್ತಾರೆ.””

04023017 ವೈಶಂಪಾಯನ ಉವಾಚ|

04023017a ತತಃ ಸಾ ನರ್ತನಾಗಾರೇ ಧನಂಜಯಮಪಶ್ಯತ|

04023017c ರಾಜ್ಞಃ ಕನ್ಯಾ ವಿರಾಟಸ್ಯ ನರ್ತಯಾನಂ ಮಹಾಭುಜಂ||

04023018a ತತಸ್ತಾ ನರ್ತನಾಗಾರಾದ್ವಿನಿಷ್ಕ್ರಮ್ಯ ಸಹಾರ್ಜುನಾಃ|

04023018c ಕನ್ಯಾ ದದೃಶುರಾಯಾಂತೀಂ ಕೃಷ್ಣಾಂ ಕ್ಲಿಷ್ಟಾಮನಾಗಸಂ||

ವೈಶಂಪಾಯನನು ಹೇಳಿದನು: “ಬಳಿಕ ಅವಳು ನರ್ತನಶಾಲೆಯಲ್ಲಿ ವಿರಾಟರಾಜನ ಕನ್ಯೆಯರಿಗೆ ನೃತ್ಯವನ್ನು ಕಲಿಸುತ್ತಿದ್ದ ಮಹಾಭುಜ ಧನಂಜಯನನ್ನು ಕಂಡಳು.

04023019 ಕನ್ಯಾ ಊಚುಃ|

04023019a ದಿಷ್ಟ್ಯಾ ಸೈರಂಧ್ರಿ ಮುಕ್ತಾಸಿ ದಿಷ್ಟ್ಯಾಸಿ ಪುನರಾಗತಾ|

04023019c ದಿಷ್ಟ್ಯಾ ವಿನಿಹತಾಃ ಸೂತಾ ಯೇ ತ್ವಾಂ ಕ್ಲಿಶ್ಯಂತ್ಯನಾಗಸಂ||

ಕನ್ಯೆಯರು ಹೇಳಿದರು: “ಸೈರಂಧ್ರಿ! ಅದೃಷ್ಟವಶಾತ್ ನೀನು ಬಿಡುಗಡೆ ಹೊಂದಿದೆ. ಅದೃಷ್ಟವಶಾತ್ ಮರಳಿ ಬಂದೆ. ನಿರಪರಾಧಿಯಾದ ನಿನಗೆ ಕ್ಲೇಶವನ್ನುಂಟುಮಾಡಿದ ಸೂತರು ಅದೃಷ್ಟವಶಾತ್ ಹತರಾದರು.”

04023020 ಬೃಹನ್ನಡೋವಾಚ|

04023020a ಕಥಂ ಸೈರಂಧ್ರಿ ಮುಕ್ತಾಸಿ ಕಥಂ ಪಾಪಾಶ್ಚ ತೇ ಹತಾಃ|

04023020c ಇಚ್ಛಾಮಿ ವೈ ತವ ಶ್ರೋತುಂ ಸರ್ವಮೇವ ಯಥಾತಥಂ||

ಬೃಹನ್ನಡೆಯು ಹೇಳಿದಳು: “ಸೈರಂಧ್ರಿ! ನೀನು ಬಿಡುಗಡೆಗೊಂಡುದು ಹೇಗೆ? ಆ ಪಾಪಿಗಳು ಹತರಾದುದು ಹೇಗೆ? ಎಲ್ಲವನ್ನೂ ಯಥಾವತ್ತಾಗಿ ನಿನ್ನಿಂದಲೇ ಕೇಳ ಬಯಸುತ್ತೇನೆ.”

04023021 ಸೈರಂಧ್ರ್ಯುವಾಚ|

04023021a ಬೃಹನ್ನಡೇ ಕಿಂ ನು ತವ ಸೈರಂಧ್ರ್ಯಾ ಕಾರ್ಯಮದ್ಯ ವೈ|

04023021c ಯಾ ತ್ವಂ ವಸಸಿ ಕಲ್ಯಾಣಿ ಸದಾ ಕನ್ಯಾಪುರೇ ಸುಖಂ||

ಸೈರಂಧ್ರಿಯು ಹೇಳಿದಳು: “ಕಲ್ಯಾಣಿ! ಬೃಹನ್ನಡೇ! ಯಾವಾಗಲೂ ಈ ಕನ್ಯೆಯರ ಅಂತಃಪುರದಲ್ಲಿ ಸುಖವಾಗಿ ವಾಸಿಸುವ ನಿನಗೆ ಈ ಸೈರಂಧ್ರಿಯಿಂದ ಏನಾಗಬೇಕಾಗಿದೆ?

04023022a ನ ಹಿ ದುಃಖಂ ಸಮಾಪ್ನೋಷಿ ಸೈರಂಧ್ರೀ ಯದುಪಾಶ್ನುತೇ|

04023022c ತೇನ ಮಾಂ ದುಃಖಿತಾಮೇವಂ ಪೃಚ್ಛಸೇ ಪ್ರಹಸನ್ನಿವ||

ಸೈರಂಧ್ರಿಯು ಅನುಭವಿಸುತ್ತಿರುವ ದುಃಖವು ನಿನಗೆ ಪ್ರಾಪ್ತಿಯಾಗಿಲ್ಲ. ಆದುದರಿಂದಲೇ ದುಃಖಿತೆಯದ ನನ್ನನ್ನು ಹಾಸ್ಯಮಾಡಲು ಹೀಗೆ ಕೇಳುತ್ತಿರುವೆ.”

04023023 ಬೃಹನ್ನಡೋವಾಚ|

04023023a ಬೃಹನ್ನಡಾಪಿ ಕಲ್ಯಾಣಿ ದುಃಖಮಾಪ್ನೋತ್ಯನುತ್ತಮಂ|

04023023c ತಿರ್ಯಗ್ಯೋನಿಗತಾ ಬಾಲೇ ನ ಚೈನಾಮವಬುಧ್ಯಸೇ||

ಬೃಹನ್ನಡೆಯು ಹೇಳಿದಳು: “ಕಲ್ಯಾಣೀ! ಬೃಹನ್ನಡೆಯೂ ಅಸದೃಶವಾದ ದುಃಖವನ್ನು ಅನುಭವಿಸುತ್ತಿದ್ದಾಳೆ. ಬಾಲೆ! ಇವಳು ಪ್ರಾಣಿಜನ್ಮದಲ್ಲಿದ್ದಾಳೆ ಎನ್ನುವುದು ನಿನಗೆ ತಿಳಿಯದು.””

04023024 ವೈಶಂಪಾಯನ ಉವಾಚ|

04023024a ತತಃ ಸಹೈವ ಕನ್ಯಾಭಿರ್ದ್ರೌಪದೀ ರಾಜವೇಶ್ಮ ತತ್|

04023024c ಪ್ರವಿವೇಶ ಸುದೇಷ್ಣಾಯಾಃ ಸಮೀಪಮಪಲಾಯಿನೀ||

ವೈಶಂಪಾಯನನು ಹೇಳಿದನು: “ಅನಂತರ ದ್ರೌಪದಿಯು ಆ ಕನ್ಯೆಯರೊಡನೆ ನಿಧಾನವಾಗಿ ಅರಮನೆಯನ್ನು ಹೊಕ್ಕು ಸುದೇಷ್ಣೆಯ ಬಳಿ ಹೋದಳು.

04023025a ತಾಮಬ್ರವೀದ್ರಾಜಪುತ್ರೀ ವಿರಾಟವಚನಾದಿದಂ|

04023025c ಸೈರಂಧ್ರಿ ಗಮ್ಯತಾಂ ಶೀಘ್ರಂ ಯತ್ರ ಕಾಮಯಸೇ ಗತಿಂ||

ಅವಳಿಗೆ ಆ ರಾಜಪುತ್ರಿಯು ವಿರಾಟನ ಮಾತಿನಂತೆ ಹೀಗೆಂದಳು: “ಸೈರಂಧ್ರಿ! ನಿನಗೆ ಇಷ್ಟಬಂದಲ್ಲಿಗೆ ಬೇಗ ಹೊರಟುಹೋಗು.

04023026a ರಾಜಾ ಬಿಭೇತಿ ಭದ್ರಂ ತೇ ಗಂಧರ್ವೇಭ್ಯಃ ಪರಾಭವಾತ್|

04023026c ತ್ವಂ ಚಾಪಿ ತರುಣೀ ಸುಭ್ರು ರೂಪೇಣಾಪ್ರತಿಮಾ ಭುವಿ||

ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ. ನಿನಗೆ ಮಂಗಳವಾಗಲಿ. ಸುಂದರವಾದ ಹುಬ್ಬುಳ್ಳುವಳೇ! ನೀನಾದರೋ ತರುಣಿ. ಲೋಕದಲ್ಲಿ ಅಪ್ರತಿಮ ರೂಪವುಳ್ಳವಳು.”

04023027 ಸೈರಂಧ್ರ್ಯುವಾಚ|

04023027a ತ್ರಯೋದಶಾಹಮಾತ್ರಂ ಮೇ ರಾಜಾ ಕ್ಷಮತು ಭಾಮಿನಿ|

04023027c ಕೃತಕೃತ್ಯಾ ಭವಿಷ್ಯಂತಿ ಗಂಧರ್ವಾಸ್ತೇ ನ ಸಂಶಯಃ||

ಸೈರಂಧ್ರಿಯು ಹೇಳಿದಳು: “ಭಾಮಿನೀ! ಇನ್ನು ಹದಿಮೂರು ದಿನಗಳವರೆಗೆ ಮಾತ್ರ ರಾಜನು ನನ್ನನ್ನು ಸೈರಿಸಿಕೊಳ್ಳಲಿ. ಅಷ್ಟರಲ್ಲಿ ಗಂಧರ್ವರು ನಿಸ್ಸಂದೇಹವಾಗಿ ಕೃತಕೃತ್ಯರಾಗುತ್ತಾರೆ.

04023028a ತತೋ ಮಾಂ ತೇಽಪನೇಷ್ಯಂತಿ ಕರಿಷ್ಯಂತಿ ಚ ತೇ ಪ್ರಿಯಂ|

04023028c ಧ್ರುವಂ ಚ ಶ್ರೇಯಸಾ ರಾಜಾ ಯೋಕ್ಷ್ಯತೇ ಸಹ ಬಾಂಧವೈಃ|

ಅನಂತರ ಅವರು ನನ್ನನ್ನು ಕರೆದೊಯ್ಯುತ್ತಾರೆ ಮತ್ತು ನಿನಗೆ ಪ್ರಿಯವನ್ನುಂಟುಮಾಡುತ್ತಾರೆ. ರಾಜನೂ ಕೂಡ ಬಾಂಧವರೊಡನೆ ಶ್ರೇಯಸ್ಸನ್ನು ಗಳಿಸುತ್ತಾನೆ.””

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕದಾಹೇ ತ್ರಯೋವಿಂಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕದಾಹದಲ್ಲಿ ಇಪ್ಪತ್ಮೂರನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವವು

ಇದೂವರೆಗಿನ ಒಟ್ಟು ಮಹಾಪರ್ವಗಳು-೩/೧೮, ಉಪಪರ್ವಗಳು-೪೬/೧೦೦, ಅಧ್ಯಾಯಗಳು-೬೧೯/೧೯೯೫, ಶ್ಲೋಕಗಳು-೨೦೫೨೯/೭೩೭೮೪

Related image

Comments are closed.