Virata Parva: Chapter 21

ವಿರಾಟ ಪರ್ವ: ಕೀಚಕವಧ ಪರ್ವ

೨೧

ಕೀಚಕವಧೆ

ಕೀಚಕನನ್ನು ಅಂದಿನ ರಾತ್ರಿ ನರ್ತನಶಾಲೆಗೆ ಬರುವಂತೆ ಮಾಡು ಎಂದು ಹೇಳಿ ಭೀಮನು ದ್ರೌಪದಿಯನ್ನು ಕಳುಹಿಸಿದುದು (೧-೬). ಮರುದಿನ ಕೀಚಕನು ದ್ರೌಪದಿಯನ್ನು ಮತ್ತೆ ಕಾಡಲು, ರಾತ್ರಿ ನರ್ತನಶಾಲೆಯಲ್ಲಿ ಪರಸ್ಪರರ ಮಿಲನಕ್ಕೆ ಒಪ್ಪಿಕೊಳ್ಳುವುದು (೭-೧೭). ಕೀಚಕನು ರಾತ್ರಿಯ ಮಿಲನಕ್ಕೆ ಕಾತರದಿಂದ ಸಿದ್ಧನಾಗುತ್ತಿರಲು ದ್ರೌಪದಿಯು ಭೀಮನಲ್ಲಿಗೆ ಹೋಗಿ ರಾತ್ರಿಯ ವ್ಯವಸ್ಥೆಯ ಕುರಿತು ತಿಳಿಸುವುದು, ಭೀಮನು ಕೀಚಕನನ್ನು ಕೊಲ್ಲುವೆನೆಂದು ಭರವಸೆಯನ್ನಿತ್ತಿದ್ದುದು (೧೮-೩೭). ಭೀಮ-ಕೀಚಕರ ಮಲ್ಲಯುದ್ಧ, ಕೀಚಕನ ಮರಣ (೩೮-೬೭).

04021001 ಭೀಮಸೇನ ಉವಾಚ|

04021001a ತಥಾ ಭದ್ರೇ ಕರಿಷ್ಯಾಮಿ ಯಥಾ ತ್ವಂ ಭೀರು ಭಾಷಸೇ|

04021001c ಅದ್ಯ ತಂ ಸೂದಯಿಷ್ಯಾಮಿ ಕೀಚಕಂ ಸಹಬಾಂಧವಂ||

ಭೀಮಸೇನನು ಹೇಳಿದನು: “ಭದ್ರೇ! ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಇಂದು ಕೀಚಕನನ್ನು ಅವನ ಬಾಂಧವರೊಡನೆ ಕೊಲ್ಲುತ್ತೇನೆ.

04021002a ಅಸ್ಯಾಃ ಪ್ರದೋಷೇ ಶರ್ವರ್ಯಾಃ ಕುರುಷ್ವಾನೇನ ಸಂಗಮಂ|

04021002c ದುಃಖಂ ಶೋಕಂ ಚ ನಿರ್ಧೂಯ ಯಾಜ್ಞಸೇನಿ ಶುಚಿಸ್ಮಿತೇ||

ಶುಚಿಸ್ಮಿತೇ! ಯಾಜ್ಞಸೇನಿ! ದುಃಖ ಶೋಕಗಳನ್ನು ಕೊಡವಿ ಇಂದು ಸಾಯಂಕಾಲ ಅವನನ್ನು ಭೇಟಿಯಾಗು.

04021003a ಯೈಷಾ ನರ್ತನಶಾಲಾ ವೈ ಮತ್ಸ್ಯರಾಜೇನ ಕಾರಿತಾ|

04021003c ದಿವಾತ್ರ ಕನ್ಯಾ ನೃತ್ಯಂತಿ ರಾತ್ರೌ ಯಾಂತಿ ಯಥಾಗೃಹಂ||

ಮತ್ಸ್ಯರಾಜನಿಂದ ನಿರ್ಮಿತವಾದ ನರ್ತನಶಾಲೆಯಲ್ಲಿ ಕನ್ಯೆಯರು ಹಗಲು ಹೊತ್ತು ನೃತ್ಯಮಾಡಿ ರಾತ್ರಿ ಹೊತ್ತು ಮನೆಗೆ ಹೋಗುತ್ತಾರೆ.

04021004a ತತ್ರಾಸ್ತಿ ಶಯನಂ ಭೀರು ದೃಢಾಂಗಂ ಸುಪ್ರತಿಷ್ಠಿತಂ|

04021004c ತತ್ರಾಸ್ಯ ದರ್ಶಯಿಷ್ಯಾಮಿ ಪೂರ್ವಪ್ರೇತಾನ್ಪಿತಾಮಹಾನ್||

ಭೀರು! ಅಲ್ಲಿ ಸುಸ್ಥಿತಿಯಲ್ಲಿರುವ ಗಟ್ಟಿಮುಟ್ಟಾದ ಮಂಚವೊಂದಿದೆ. ಅಲ್ಲಿಯೇ ಅವನಿಗೆ ಅವನ ಪೂರ್ವ ಪಿತಾಮಹರ ಪ್ರೇತಗಳನ್ನು ತೋರಿಸಿಕೊಡುತ್ತೇನೆ.

04021005a ಯಥಾ ಚ ತ್ವಾಂ ನ ಪಶ್ಯೇಯುಃ ಕುರ್ವಾಣಾಂ ತೇನ ಸಂವಿದಂ|

04021005c ಕುರ್ಯಾಸ್ತಥಾ ತ್ವಂ ಕಲ್ಯಾಣಿ ಯಥಾ ಸನ್ನಿಹಿತೋ ಭವೇತ್||

ಕಲ್ಯಾಣಿ! ಅವನೊಂದಿಗೆ ನೀನು ಒಪ್ಪಂದ ಮಾಡಿಕೊಳ್ಳುವಾಗ ನಿನ್ನನ್ನು ಯಾರೂ ಕಾಣದಂತೆ ನೋಡಿಕೊಳ್ಳಬೇಕು. ಅವನು ಅಲ್ಲಿ ಹಾಜರಿರುವಂತೆ ಮಾಡು.””

04021006 ವೈಶಂಪಾಯನ ಉವಾಚ|

04021006a ತಥಾ ತೌ ಕಥಯಿತ್ವಾ ತು ಬಾಷ್ಪಮುತ್ಸೃಜ್ಯ ದುಃಖಿತೌ|

04021006c ರಾತ್ರಿಶೇಷಂ ತದತ್ಯುಗ್ರಂ ಧಾರಯಾಮಾಸತುರ್ ಹೃದಾ||

ವೈಶಂಪಾಯನನು ಹೇಳಿದನು: “ಅವರಿಬ್ಬರೂ ಹಾಗೆ ಮಾತನಾಡಿಕೊಂಡು, ದುಃಖದಿಂದ ಕಂಬನಿಗರೆದು ಹೃದಯವನ್ನು ಗಟ್ಟಿಮಾಡಿಕೊಂಡು ಅತ್ಯುಗ್ರವಾದ ಆ ಇರುಳಿನ ಉಳಿದ ಭಾಗವನ್ನು ಸಹಿಸಿಕೊಂಡರು.

04021007a ತಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಪ್ರಾತರುತ್ಥಾಯ ಕೀಚಕಃ|

04021007c ಗತ್ವಾ ರಾಜಕುಲಾಯೈವ ದ್ರೌಪದೀಮಿದಮಬ್ರವೀತ್||

ಆ ರಾತ್ರಿಯು ಕಳೆಯಲು ಬೆಳಿಗ್ಗೆ ಎದ್ದು ಕೀಚಕನು ಅರಮನೆಗೆ ಹೋಗಿ ದ್ರೌಪದಿಗೆ ಹೀಗೆಂದು ಹೇಳಿದನು:

04021008a ಸಭಾಯಾಂ ಪಶ್ಯತೋ ರಾಜ್ಞಃ ಪಾತಯಿತ್ವಾ ಪದಾಹನಂ|

04021008c ನ ಚೈವಾಲಭಥಾಸ್ತ್ರಾಣಮಭಿಪನ್ನಾ ಬಲೀಯಸಾ||

“ಸಭೆಯಲ್ಲಿ ರಾಜನ ಕಣ್ಮುಂದೆಯೇ ನಿನ್ನನ್ನು ಬೀಳಿಸಿ ಕಾಲಿನಿಂದ ಒದ್ದೆ. ನಿನ್ನ ಮೇಲೆ ಬಿದ್ದ ಬಲಿಷ್ಟನಾದ ನನ್ನಿಂದ ನಿನಗೆ ರಕ್ಷಣೆಯೇ ದೊರೆಯಲಿಲ್ಲ.

04021009a ಪ್ರವಾದೇನ ಹಿ ಮತ್ಸ್ಯಾನಾಂ ರಾಜಾ ನಾಮ್ನಾಯಮುಚ್ಯತೇ|

04021009c ಅಹಮೇವ ಹಿ ಮತ್ಸ್ಯಾನಾಂ ರಾಜಾ ವೈ ವಾಹಿನೀಪತಿಃ||

ವಿರಾಟನನ್ನು ಮತ್ಸ್ಯರಾಜನೆಂದು ಹೆಸರಿಗೆ ಮಾತ್ರ ಕರೆಯುತ್ತಾರೆ. ಸೇನಾಪತಿಯಾಗಿರುವ ನಾನೇ ಮತ್ಸ್ಯರಾಜ.

04021010a ಸಾ ಸುಖಂ ಪ್ರತಿಪದ್ಯಸ್ವ ದಾಸೋ ಭೀರು ಭವಾಮಿ ತೇ|

04021010c ಅಹ್ನಾಯ ತವ ಸುಶ್ರೋಣಿ ಶತಂ ನಿಷ್ಕಾನ್ದದಾಮ್ಯಹಂ||

ಭೀರು! ಸುಶ್ರೋಣೀ! ನೀನು ಸುಖವನ್ನು ಪಡೆ. ನಾನು ನಿನಗೆ ದಾಸನಾಗುತ್ತೇನೆ. ದಿನಕ್ಕೆ ನೂರು ನಾಣ್ಯಗಳನ್ನು ನಿನಗೆ ಕೊಡುತ್ತೇನೆ.

04021011a ದಾಸೀಶತಂ ಚ ತೇ ದದ್ಯಾಂ ದಾಸಾನಾಮಪಿ ಚಾಪರಂ|

04021011c ರಥಂ ಚಾಶ್ವತರೀಯುಕ್ತಮಸ್ತು ನೌ ಭೀರು ಸಂಗ|ಮಃ|

ನೂರು ದಾಸಿಯರನ್ನೂ ಮತ್ತು ನೂರು ದಾಸರನ್ನೂ, ಹೇಸರೆಗತ್ತೆಗಳನ್ನು ಹೂಡಿದ ರಥವನ್ನೂ ಕೊಡುತ್ತೇನೆ. ಭೀರು! ನಮ್ಮಿಬ್ಬರ ಸಮಾಗಮವಾಗಲಿ!”

04021012 ದ್ರೌಪದ್ಯುವಾಚ|

04021012a ಏಕಂ ಮೇ ಸಮಯಂ ತ್ವದ್ಯ ಪ್ರತಿಪದ್ಯಸ್ವ ಕೀಚಕ|

04021012c ನ ತ್ವಾಂ ಸಖಾ ವಾ ಭ್ರಾತಾ ವಾ ಜಾನೀಯಾತ್ಸಂಗತಂ ಮಯಾ||

ದ್ರೌಪದಿಯು ಹೇಳಿದಳು: “ಕೀಚಕ! ಇಂದು ನನ್ನದೊಂದು ನಿಬಂಧನೆಯುಂಟು. ಅದನ್ನು ನೀನು ನಡೆಸಿಕೊಡು. ನನ್ನೊಡನೆ ನಿನ್ನ ಈ ಸಮಾಗಮವು ನಿನ್ನ ಸ್ನೇಹಿತರಿಗಾಗಲೀ ಸಹೋದರರಿಗಾಗಲೀ ಗೊತ್ತಾಗಕೂಡದು.

04021013a ಅವಬೋಧಾದ್ಧಿ ಭೀತಾಸ್ಮಿ ಗಂಧರ್ವಾಣಾಂ ಯಶಸ್ವಿನಾಂ|

04021013c ಏವಂ ಮೇ ಪ್ರತಿಜಾನೀಹಿ ತತೋಽಹಂ ವಶಗಾ ತವ||

ಆ ಯಶಸ್ವಿ ಗಂಧರ್ವರಿಗೆ ಇದು ತಿಳಿದುಬಿಡುತ್ತದೆಯೆಂದು ನಾನು ಹೆದರುತ್ತಿದ್ದೇನೆ. ಹೀಗೆ ನೀನು ನನಗೆ ಆಣೆ ಕೊಡು. ಅನಂತರ ನಾನು ನಿನ್ನ ವಶಳಾಗುತ್ತೇನೆ.”

04021014 ಕೀಚಕ ಉವಾಚ|

04021014a ಏವಮೇತತ್ಕರಿಷ್ಯಾಮಿ ಯಥಾ ಸುಶ್ರೋಣಿ ಭಾಷಸೇ|

04021014c ಏಕೋ ಭದ್ರೇ ಗಮಿಷ್ಯಾಮಿ ಶೂನ್ಯಮಾವಸಥಂ ತವ||

04021015a ಸಮಾಗಮಾರ್ಥಂ ರಂಭೋರು ತ್ವಯಾ ಮದನಮೋಹಿತಃ|

04021015c ಯಥಾ ತ್ವಾಂ ನಾವಭೋತ್ಸ್ಯಂತಿ ಗಂಧರ್ವಾಃ ಸೂರ್ಯವರ್ಚಸಃ||

ಕೀಚಕನು ಹೇಳಿದನು: “ಸುಶ್ರೋಣಿ! ಆಗಲಿ. ನೀನು ಹೇಳಿದಂತೆಯೇ ಮಾಡುತ್ತೇನೆ. ಭದ್ರೇ! ರಂಭೋರು! ಸೂರ್ಯವರ್ಚಸ್ವಿಗಳಾದ ಗಂಧರ್ವರು ನಿನ್ನನ್ನು ಕಂಡುಹಿಡಿಯದಂತೆ, ನಿನ್ನಿಂದ ಮದನಮೋಹಿತನಾದ ನಾನು ನಿನ್ನೊಡನೆ ಸಮಾಗಮಕ್ಕಾಗಿ ಯಾರೂ ಇಲ್ಲದ ನಿನ್ನ ಆವಾಸಕ್ಕೆ ನಾನು ಒಬ್ಬನೇ ಬರುತ್ತೇನೆ.”

04021016 ದ್ರೌಪದ್ಯುವಾಚ|

04021016a ಯದಿದಂ ನರ್ತನಾಗಾರಂ ಮತ್ಸ್ಯರಾಜೇನ ಕಾರಿತಂ|

04021016c ದಿವಾತ್ರ ಕನ್ಯಾ ನೃತ್ಯಂತಿ ರಾತ್ರೌ ಯಾಂತಿ ಯಥಾಗೃಹಂ||

ದ್ರೌಪದಿಯು ಹೇಳಿದಳು: “ಮತ್ಯ್ಸರಾಜನಿಂದ ನಿರ್ಮಿತವಾದ ಆ ನೃತ್ಯಮಂದಿರದಲ್ಲಿ ಕನ್ಯೆಯರು ಹಗಲು ನರ್ತಿಸಿ ರಾತ್ರಿ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ.

04021017a ತಮಿಸ್ರೇ ತತ್ರ ಗಚ್ಛೇಥಾ ಗಂಧರ್ವಾಸ್ತನ್ನ ಜಾನತೇ|

04021017c ತತ್ರ ದೋಷಃ ಪರಿಹೃತೋ ಭವಿಷ್ಯತಿ ನ ಸಂಶಯಃ||

ಕತ್ತಲಲ್ಲಿ ನೀನು ಅಲ್ಲಿಗೆ ಬಾ. ಗಂಧರ್ವರಿಗೆ ಅದು ತಿಳಿಯದು. ಅಲ್ಲಿ ನಮ್ಮ ತಪ್ಪು ಯಾರಿಗೂ ಗೊತ್ತಾಗುವುದಿಲ್ಲ. ಇದರಲ್ಲಿ ಸಂಶಯವಿಲ್ಲ.””

04021018 ವೈಶಂಪಾಯನ ಉವಾಚ|

04021018a ತಮರ್ಥಂ ಪ್ರತಿಜಲ್ಪಂತ್ಯಾಃ ಕೃಷ್ಣಾಯಾಃ ಕೀಚಕೇನ ಹ|

04021018c ದಿವಸಾರ್ಧಂ ಸಮಭವನ್ಮಾಸೇನೈವ ಸಮಂ ನೃಪ||

ವೈಶಂಪಾಯನನು ಹೇಳಿದನು: “ನೃಪ! ಈ ಅಭಿಪ್ರಾಯವನ್ನು ಕೀಚಕನಿಗೆ ತಿಳಿಸುವಾಗ ಕೃಷ್ಣೆಗೆ ಅರ್ಧ ದಿವಸವು ತಿಂಗಳಿಗೆ ಸಮಾನವಾಯಿತು.

04021019a ಕೀಚಕೋಽಥ ಗೃಹಂ ಗತ್ವಾ ಭೃಶಂ ಹರ್ಷಪರಿಪ್ಲುತಃ|

04021019c ಸೈರಂಧ್ರೀರೂಪಿಣಂ ಮೂಢೋ ಮೃತ್ಯುಂ ತಂ ನಾವಬುದ್ಧವಾನ್||

ಆ ಮೇಲೆ ತುಂಬುಹರ್ಷದಲ್ಲಿ ಮುಳುಗಿ ಮನೆಗೆ ಹೋದ ಮೂಢ ಕೀಚಕನಿಗೆ ಸೈರಂಧ್ರೀ ರೂಪದ ಮೃತ್ಯುವಿನ ಅರಿವಾಗಲಿಲ್ಲ.

04021020a ಗಂಧಾಭರಣಮಾಲ್ಯೇಷು ವ್ಯಾಸಕ್ತಃ ಸ ವಿಶೇಷತಃ|

04021020c ಅಲಂಚಕಾರ ಸೋಽಆತ್ಮಾನಂ ಸತ್ವರಃ ಕಾಮಮೋಹಿತಃ||

ಕಾಮಮೋಹಿತನಾದ ಅವನು ಗಂಧ, ಆಭರಣ ಮತ್ತು ಮಾಲೆಗಳಿಂದ ತನ್ನನ್ನು ತಾನು ಬೇಗ ವಿಶೇಷವಾಗಿ ಅಲಂಕರಿಸಿಕೊಳ್ಳುವುದರಲ್ಲಿ ಮಗ್ನನಾದನು.

04021021a ತಸ್ಯ ತತ್ಕುರ್ವತಃ ಕರ್ಮ ಕಾಲೋ ದೀರ್ಘ ಇವಾಭವತ್|

04021021c ಅನುಚಿಂತಯತಶ್ಚಾಪಿ ತಾಮೇವಾಯತಲೋಚನಾಂ||

ಆ ವಿಶಾಲಾಕ್ಷಿಯ ಕುರಿತು ಚಿಂತಿಸುತ್ತ ಕೆಲಸಮಾಡುತ್ತಿದ್ದ ಅವನಿಗೆ ತುಂಬಾ ಸಮಯವು ಕಳೆದಂತಾಯಿತು.

04021022a ಆಸೀದಭ್ಯಧಿಕಾ ಚಾಸ್ಯ ಶ್ರೀಃ ಶ್ರಿಯಂ ಪ್ರಮುಮುಕ್ಷತಃ|

04021022c ನಿರ್ವಾಣಕಾಲೇ ದೀಪಸ್ಯ ವರ್ತೀಮಿವ ದಿಧಕ್ಷತಃ||

ಶೋಭೆಯನ್ನು ತ್ಯಜಿಸಲಿದ್ದ ಅವನ ಶೋಭೆಯು ಆರುವ ಕಾಲದಲ್ಲಿ ಬತ್ತಿಯನ್ನು ಸುಡುವ ದೀಪದಂತೆ ಅತ್ಯಧಿಕವಾಗಿತ್ತು.

04021023a ಕೃತಸಂಪ್ರತ್ಯಯಸ್ತತ್ರ ಕೀಚಕಃ ಕಾಮಮೋಹಿತಃ|

04021023c ನಾಜಾನಾದ್ದಿವಸಂ ಯಾಂತಂ ಚಿಂತಯಾನಃ ಸಮಾಗಮಂ||

ದ್ರೌಪದಿಯು ಮೂಡಿಸಿದ್ದ ನಂಬಿಕೆಯಿಂದ ಸಮಾಗಮವನ್ನು ಚಿಂತಿಸುತ್ತಿದ್ದ ಕಾಮಮೋಹಿತ ಕೀಚಕನಿಗೆ ದಿವಸ ಕಳೆದು ಹೋದುದೇ ತಿಳಿಯಲಿಲ್ಲ.

04021024a ತತಸ್ತು ದ್ರೌಪದೀ ಗತ್ವಾ ತದಾ ಭೀಮಂ ಮಹಾನಸೇ|

04021024c ಉಪಾತಿಷ್ಠತ ಕಲ್ಯಾಣೀ ಕೌರವ್ಯಂ ಪತಿಮಂತಿಕಾತ್||

ಅನಂತರ ಕಲ್ಯಾಣಿ ದ್ರೌಪದಿಯು ಅಡುಗೆ ಮನೆಗೆ ಹೋಗಿ ಪತಿ ಕೌರವ್ಯ ಭೀಮನ ಸಮೀಪದಲ್ಲಿ ನಿಂತಳು.

04021025a ತಮುವಾಚ ಸುಕೇಶಾಂತಾ ಕೀಚಕಸ್ಯ ಮಯಾ ಕೃತಃ|

04021025c ಸಂಗಮೋ ನರ್ತನಾಗಾರೇ ಯಥಾವೋಚಃ ಪರಂತಪ||

ಆ ಸುಕೇಶಿಯು ಅವನಿಗೆ ಹೇಳಿದಳು: “ಪರಂತಪ! ನೀನು ಹೇಳಿದಂತೆ ನರ್ತನ ಗೃಹದಲ್ಲಿ ಕೀಚಕನೊಂದಿಗೆ ನನ್ನ ಸಮಾಗಮವು ವ್ಯವಸ್ಥಿತವಾಗಿದೆ.

04021026a ಶೂನ್ಯಂ ಸ ನರ್ತನಾಗಾರಮಾಗಮಿಷ್ಯತಿ ಕೀಚಕಃ|

04021026c ಏಕೋ ನಿಶಿ ಮಹಾಬಾಹೋ ಕೀಚಕಂ ತಂ ನಿಷೂದಯ||

ಆ ನಿರ್ಜನ ನರ್ತನಮಂದಿರಕ್ಕೆ ಕೀಚಕನು ಕತ್ತಲಲ್ಲಿ ಏಕಾಂಗಿಯಾಗಿ ಬರುವನು. ಮಹಾಬಾಹು! ಆ ಕೀಚಕನನ್ನು ಕೊಲ್ಲು.

04021027a ತಂ ಸೂತಪುತ್ರಂ ಕೌಂತೇಯ ಕೀಚಕಂ ಮದದರ್ಪಿತಂ|

04021027c ಗತ್ವಾ ತ್ವಂ ನರ್ತನಾಗಾರಂ ನಿರ್ಜೀವಂ ಕುರು ಪಾಂಡವ||

ಕೌಂತೇಯ! ಪಾಂಡವ! ನರ್ತನಾಗಾರಕ್ಕೆ ಹೋಗಿ ಆ ಮದದರ್ಪಿತ ಸೂತಪುತ್ರ ಕೀಚಕನನ್ನು ನಿರ್ಜೀವನನ್ನಾಗಿ ಮಾಡು.

04021028a ದರ್ಪಾಚ್ಚ ಸೂತಪುತ್ರೋಽಸೌ ಗಂಧರ್ವಾನವಮನ್ಯತೇ|

04021028c ತಂ ತ್ವಂ ಪ್ರಹರತಾಂ ಶ್ರೇಷ್ಠ ನಡಂ ನಾಗ ಇವೋದ್ಧರ||

ಆ ಸೂತಪುತ್ರನು ದರ್ಪದಿಂದ ಗಂಧರ್ವರನ್ನು ಅವಮಾನಿಸುತ್ತಾನೆ. ಹೊಡೆಯುವವರಲ್ಲಿ ಶ್ರೇಷ್ಠನೇ! ಆನೆಯು ಲಾಳದ ಕಡ್ಡಿಯನ್ನು ಕಿತ್ತೊಗೆಯುವಂತೆ ಅವನನ್ನು ಕಿತ್ತೊಗೆ.

04021029a ಅಶ್ರು ದುಃಖಾಭಿಭೂತಾಯಾ ಮಮ ಮಾರ್ಜಸ್ವ ಭಾರತ|

04021029c ಆತ್ಮನಶ್ಚೈವ ಭದ್ರಂ ತೇ ಕುರು ಮಾನಂ ಕುಲಸ್ಯ ಚ||

ಭಾರತ! ದುಃಖಾಕ್ರಾಂತೆಯಾದ ನನ್ನ ಕಂಬನಿಯನ್ನು ಒರೆಸು. ನಿನಗೂ ನಿನ್ನ ಕುಲಕ್ಕೂ ಗೌರವವನ್ನು ತಾ. ನಿನಗೆ ಮಂಗಳವಾಗಲಿ.”

04021030 ಭೀಮಸೇನ ಉವಾಚ|

04021030a ಸ್ವಾಗತಂ ತೇ ವರಾರೋಹೇ ಯನ್ಮಾ ವೇದಯಸೇ ಪ್ರಿಯಂ|

04021030c ನ ಹ್ಯಸ್ಯ ಕಂ ಚಿದಿಚ್ಛಾಮಿ ಸಹಾಯಂ ವರವರ್ಣಿನಿ||

ಭೀಮಸೇನನು ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ವರವರ್ಣಿನಿ! ನನಗೆ ಪ್ರಿಯವಾದುದನ್ನು ಹೇಳುತ್ತಿರುವೆ. ಇನ್ನು ನನಗೆ ಯಾರ ಸಹಾಯವೂ ಬೇಡ.

04021031a ಯಾ ಮೇ ಪ್ರೀತಿಸ್ತ್ವಯಾಖ್ಯಾತಾ ಕೀಚಕಸ್ಯ ಸಮಾಗಮೇ|

04021031c ಹತ್ವಾ ಹಿಡಿಂಬಂ ಸಾ ಪ್ರೀತಿರ್ಮಮಾಸೀದ್ವರವರ್ಣಿನಿ||

ವರವರ್ಣಿನೀ! ಕೀಚಕನ ಸಮಾಗಮದ ಕುರಿತು ನೀನು ಹೇಳಿದುದನ್ನು ಕೀಳಿ ನನಗೆ ಹಿಡಿಂಬನನ್ನು ಕೊಂದಾಗ ಉಂಟಾದ ಸಂತೋಷವೇ ಆಯಿತು.

04021032a ಸತ್ಯಂ ಭ್ರಾತೄಂಶ್ಚ ಧರ್ಮಂ ಚ ಪುರಸ್ಕೃತ್ಯ ಬ್ರವೀಮಿ ತೇ|

04021032c ಕೀಚಕಂ ನಿಹನಿಷ್ಯಾಮಿ ವೃತ್ರಂ ದೇವಪತಿರ್ಯಥಾ||

ಸತ್ಯಧರ್ಮಗಳ ಮೇಲೆ ಮತ್ತು ಸೋದರರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ದೇವೇಂದ್ರನು ವೃತ್ರನನ್ನು ಕೊಂದಂತೆ ನಾನು ಕೀಚಕನನ್ನು ಕೊಲ್ಲುತ್ತೇನೆ.

04021033a ತಂ ಗಹ್ವರೇ ಪ್ರಕಾಶೇ ವಾ ಪೋಥಯಿಷ್ಯಾಮಿ ಕೀಚಕಂ|

04021033c ಅಥ ಚೇದವಭೋತ್ಸ್ಯಂತಿ ಹಂಸ್ಯೇ ಮತ್ಸ್ಯಾನಪಿ ಧ್ರುವಂ||

ಆ ಕೀಚಕನನ್ನು ರಹಸ್ಯದಲ್ಲಾಗಲೀ ಬಹಿರಂಗದಲ್ಲಾಗಲೀ ಜಜ್ಜಿ ಹಾಕುವೆನು. ಮತ್ಸ್ಯರಿಗೆ ಇದು ತಿಳಿದರೆ ಅವರನ್ನೂ ಖಂಡಿತವಾಗಿ ಕೊಲ್ಲುವೆನು.

04021034a ತತೋ ದುರ್ಯೋಧನಂ ಹತ್ವಾ ಪ್ರತಿಪತ್ಸ್ಯೇ ವಸುಂಧರಾಂ|

04021034c ಕಾಮಂ ಮತ್ಸ್ಯಮುಪಾಸ್ತಾಂ ಹಿ ಕುಂತೀಪುತ್ರೋ ಯುಧಿಷ್ಠಿರಃ||

ಬಳಿಕ ದುರ್ಯೋಧನನನ್ನು ವಧಿಸಿ ಭೂಮಿಯನ್ನು ಮರಳಿ ಪಡೆಯುವೆನು. ಕುಂತೀಪುತ್ರ ಯುಧಿಷ್ಠಿರನು ಮತ್ಯ್ಸನನ್ನು ಮನಬಂದಂತೆ ಓಲೈಸಿಕೊಂಡಿರಲಿ.”

04021035 ದ್ರೌಪದ್ಯುವಾಚ|

04021035a ಯಥಾ ನ ಸಂತ್ಯಜೇಥಾಸ್ತ್ವಂ ಸತ್ಯಂ ವೈ ಮತ್ಕೃತೇ ವಿಭೋ|

04021035c ನಿಗೂಢಸ್ತ್ವಂ ತಥಾ ವೀರ ಕೀಚಕಂ ವಿನಿಪಾತಯ||

ದ್ರೌಪದಿಯು ಹೇಳಿದಳು: “ವಿಭೋ! ವೀರ! ಸತ್ಯವು ಹೊರಬಾರದ ರೀತಿಯಲ್ಲಿ ನನಗಾಗಿ ನೀನು ಕೀಚಕನನ್ನು ರಹಸ್ಯವಾಗಿ ಉರುಳಿಸು.”

04021036 ಭೀಮಸೇನ ಉವಾಚ|

04021036a ಏವಮೇತತ್ಕರಿಷ್ಯಾಮಿ ಯಥಾ ತ್ವಂ ಭೀರು ಭಾಷಸೇ|

04021036c ಅದೃಶ್ಯಮಾನಸ್ತಸ್ಯಾದ್ಯ ತಮಸ್ವಿನ್ಯಾಮನಿಂದಿತೇ||

04021037a ನಾಗೋ ಬಿಲ್ವಮಿವಾಕ್ರಮ್ಯ ಪೋಥಯಿಷ್ಯಾಮ್ಯಹಂ ಶಿರಃ|

04021037c ಅಲಭ್ಯಾಮಿಚ್ಛತಸ್ತಸ್ಯ ಕೀಚಕಸ್ಯ ದುರಾತ್ಮನಃ||

ಭೀಮಸೇನನು ಹೇಳಿದನು: “ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಅನಿಂದಿತೇ! ಅಲಭ್ಯಳಾದ ನಿನ್ನನ್ನು ಬಯಸುವ ಆ ದುರಾತ್ಮ ಕೀಚಕನನ್ನು ಅವನಿಗೆ ಕಾಣಿಸಿಕೊಳ್ಳದಂತೆ ಆಕ್ರಮಿಸಿ, ಆನೆಯು ಬಿಲ್ವವನ್ನು ಜಜ್ಜಿಹಾಕುವಂತೆ ಅವನ ತಲೆಯನ್ನು ಇಂದು ಕತ್ತಲಲ್ಲಿ ಜಜ್ಜಿಹಾಕುವೆನು.””

04021038 ವೈಶಂಪಾಯನ ಉವಾಚ|

04021038a ಭೀಮೋಽಥ ಪ್ರಥಮಂ ಗತ್ವಾ ರಾತ್ರೌ ಚನ್ನ ಉಪಾವಿಶತ್|

04021038c ಮೃಗಂ ಹರಿರಿವಾದೃಶ್ಯಃ ಪ್ರತ್ಯಾಕಾಮ್ಕ್ಷತ್ಸ ಕೀಚಕಂ||

ವೈಶಂಪಾಯನನು ಹೇಳಿದನು: “ಬಳಿಕ ಆ ಭೀಮನು ರಾತ್ರಿಯಲ್ಲಿ ವೇಷ ಮರೆಸಿಕೊಂಡು ಅಲ್ಲಿಗೆ ಮೊದಲೇ ಹೋಗಿ ಕಣ್ಣಿಗೆ ಬೀಳದಂತೆ, ಸಿಂಹವು ಜಿಂಕೆಗಾಗಿ ಕಾಯುವಂತೆ ಕಾದು ಕುಳಿತುಕೊಂಡನು.

04021039a ಕೀಚಕಶ್ಚಾಪ್ಯಲಂಕೃತ್ಯ ಯಥಾಕಾಮಮುಪಾವ್ರಜತ್|

04021039c ತಾಂ ವೇಲಾಂ ನರ್ತನಾಗಾರೇ ಪಾಂಚಾಲೀಸಂಗಮಾಶಯಾ||

ಕೀಚಕನಾದರೋ ಯಥೇಚ್ಛವಾಗಿ ಸಿಂಗರಿಸಿಕೊಂಡು ದ್ರೌಪದಿಯನ್ನು ಕೂಡುವ ಆಸೆಯಿಂದ ಆ ವೇಳೆಗೆ ನರ್ತನ ಶಾಲೆಗೆ ಹೋದನು.

04021040a ಮನ್ಯಮಾನಃ ಸ ಸಂಕೇತಮಾಗಾರಂ ಪ್ರಾವಿಶಚ್ಚ ತಂ|

04021040c ಪ್ರವಿಶ್ಯ ಚ ಸ ತದ್ವೇಶ್ಮ ತಮಸಾ ಸಂವೃತಂ ಮಹತ್||

04021041a ಪೂರ್ವಾಗತಂ ತತಸ್ತತ್ರ ಭೀಮಮಪ್ರತಿಮೌಜಸಂ|

04021041c ಏಕಾಂತಮಾಸ್ಥಿತಂ ಚೈನಮಾಸಸಾದ ಸುದುರ್ಮತಿಃ||

ಅವನು ಸಂಕೇತವನ್ನು ಸೂಚಿಸುತ್ತಾ ಆ ನರ್ತನ ಶಾಲೆಯನ್ನು ಪ್ರವೇಶಿಸಿದನು. ಗಾಢಾಂಧಕಾರದಿಂದ ಆವೃತವಾಗಿದ್ದ ಆ ಭವನವನ್ನು ಪ್ರವೇಸಿಸಿದ ಆ ದುರ್ಮತಿಯು ಮೊದಲೇ ಅಲ್ಲಿಗೆ ಬಂದು ಏಕಾಂತದಲ್ಲಿದ್ದ ಅಪ್ರತಿಮ ಪರಾಕ್ರಮಿ ಭೀಮನನ್ನು ಸಮೀಪಿಸಿದನು.

04021042a ಶಯಾನಂ ಶಯನೇ ತತ್ರ ಮೃತ್ಯುಂ ಸೂತಃ ಪರಾಮೃಶತ್|

04021042c ಜಾಜ್ವಲ್ಯಮಾನಂ ಕೋಪೇನ ಕೃಷ್ಣಾಧರ್ಷಣಜೇನ ಹ||

ಕೃಷ್ಣೆಯ ಅಪಮಾನದಿಂದ ಹುಟ್ಟಿದ ಕೋಪದಿಂದ ಉರಿಯುತ್ತ ಅಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಮೃತ್ಯುವನ್ನು ಆ ಸೂತನು ಮುಟ್ಟಿದನು.

04021043a ಉಪಸಂಗಮ್ಯ ಚೈವೈನಂ ಕೀಚಕಃ ಕಾಮಮೋಹಿತಃ|

04021043c ಹರ್ಷೋನ್ಮಥಿತಚಿತ್ತಾತ್ಮಾ ಸ್ಮಯಮಾನೋಽಭ್ಯಭಾಷತ||

ಕಾಮಮೋಹಿತನಾದ ಆ ಕೀಚಕನು ಅವನನ್ನು ಸಮೀಪಿಸಿ ಹರ್ಷದಿಂದ ಮನಸ್ಸು ಮತ್ತು ಆತ್ಮಗಳು ಕಲಕಿದವನಾಗಿ ನಸುನಗುತ್ತಾ ಹೇಳಿದನು:

04021044a ಪ್ರಾಪಿತಂ ತೇ ಮಯಾ ವಿತ್ತಂ ಬಹುರೂಪಮನಂತಕಂ|

04021044c ತತ್ಸರ್ವಂ ತ್ವಾಂ ಸಮುದ್ದಿಶ್ಯ ಸಹಸಾ ಸಮುಪಾಗತಃ||

“ಕೊನೆಯಿಲ್ಲದ ಬಹುವಿಧದ ಐಶ್ವರ್ಯವನ್ನು ನಾನು ನಿನಗೆಂದು ತೆಗೆದುಕೊಂಡು ಆತುರದಿಂದ ಬಂದಿದ್ದೇನೆ.

04021045a ನಾಕಸ್ಮಾನ್ಮಾಂ ಪ್ರಶಂಸಂತಿ ಸದಾ ಗೃಹಗತಾಃ ಸ್ತ್ರಿಯಃ|

04021045c ಸುವಾಸಾ ದರ್ಶನೀಯಶ್ಚ ನಾನ್ಯೋಽಸ್ತಿ ತ್ವಾದೃಶಃ ಪುಮಾನ್||

ಮನೆಯಲ್ಲಿರುವ ಹೆಂಗಸರು ಸುವಸ್ತ್ರಶೋಭಿತನೂ ಸುಂದರನೂ ಆದ ನಿನ್ನಂತಹ ಪುರುಷನು ಬೇರೊಬ್ಬನಿಲ್ಲ ಎಂದು ಹೊಗಳುತ್ತಿರುತ್ತಾರೆ. ಅದೇನೂ ಆಕಸ್ಮಿಕವಿಲ್ಲ ತಾನೇ?”

04021046 ಭೀಮಸೇನ ಉವಾಚ|

04021046a ದಿಷ್ಟ್ಯಾ ತ್ವಂ ದರ್ಶನೀಯೋಽಸಿ ದಿಷ್ಟ್ಯಾತ್ಮಾನಂ ಪ್ರಶಂಸಸಿ|

04021046c ಈದೃಶಸ್ತು ತ್ವಯಾ ಸ್ಪರ್ಶಃ ಸ್ಪೃಷ್ಟಪೂರ್ವೋ ನ ಕರ್ಹಿ ಚಿತ್||

ಭೀಮಸೇನನು ಹೇಳಿದನು: “ಅದೃಷ್ಟವಶಾತ್ ನೀನು ಸುಂದರನಾಗಿರುವೆ. ಅದೃಷ್ಟವಶಾತ್ ನಿನ್ನನ್ನು ನೀನೇ ಹೊಗಳಿಕೊಳ್ಳುತ್ತಿರುವೆ. ಇಂತಹ ಸ್ಪರ್ಶವನ್ನು ನೀನು ಹಿಂದೆಂದೂ ಅನುಭವಿಸಿರಲಾರೆ.””

04021047 ವೈಶಂಪಾಯನ ಉವಾಚ|

04021047a ಇತ್ಯುಕ್ತ್ವಾ ತಂ ಮಹಾಬಾಹುರ್ಭೀಮೋ ಭೀಮಪರಾಕ್ರಮಃ|

04021047c ಸಮುತ್ಪತ್ಯ ಚ ಕೌಂತೇಯಃ ಪ್ರಹಸ್ಯ ಚ ನರಾಧಮಂ|

04021047e ಭೀಮೋ ಜಗ್ರಾಹ ಕೇಶೇಷು ಮಾಲ್ಯವತ್ಸು ಸುಗಂಧಿಷು||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಬಾಹು ಭೀಮಪರಾಕ್ರಮಿ ಕೌಂತೇಯ ಭೀಮನು ನಕ್ಕು ಮೇಲೆ ನೆಗೆದು ಆ ನರಾಧಮನ ಮಾಲೆಗಳಿಂದ ಕೂಡಿ ಸುಗಂಧಯುತವಾದ ಕೂದಲನ್ನು ಹಿಡಿದುಕೊಂಡನು.

04021048a ಸ ಕೇಶೇಷು ಪರಾಮೃಷ್ಟೋ ಬಲೇನ ಬಲಿನಾಂ ವರಃ|

04021048c ಆಕ್ಷಿಪ್ಯ ಕೇಶಾನ್ವೇಗೇನ ಬಾಹ್ವೋರ್ಜಗ್ರಾಹ ಪಾಂಡವಂ||

ಭೀಮನು ಹೀಗೆ ಬಲವಾಗಿ ಕೂದಲನ್ನು ಹಿಡಿಯಲು ಬಲಿಗಳಲ್ಲಿ ಶ್ರೇಷ್ಠನಾದ ಕೀಚಕನು ರಭಸದಿಂದ ಕೂದಲನ್ನು ಕಿತ್ತು ಬಿಡಿಸಿಕೊಂಡು ಪಾಂಡವನ ತೋಳುಗಳನ್ನು ಹಿಡಿದನು.

04021049a ಬಾಹುಯುದ್ಧಂ ತಯೋರಾಸೀತ್ಕ್ರುದ್ಧಯೋರ್ನರಸಿಂಹಯೋಃ|

04021049c ವಸಂತೇ ವಾಶಿತಾಹೇತೋರ್ಬಲವದ್ಗಜಯೋರಿವ||

ವಸಂತ ಋತುವಿನಲ್ಲಿ ಹೆಣ್ಣಾನೆಗಾಗಿ ಎರಡು ಬಲವಾದ ಆನೆಗಳ ನಡುವೆ ನಡೆಯುವಂತೆ ಆ ಇಬ್ಬರು ಕೃದ್ಧರಾದ ನರಶ್ರೇಷ್ಠರ ನಡುವೆ ಬಾಹು ಯುದ್ಧವು ನಡೆಯಿತು.

04021050a ಈಷದಾಗಲಿತಂ ಚಾಪಿ ಕ್ರೋಧಾಚ್ಚಲಪದಂ ಸ್ಥಿತಂ|

04021050c ಕೀಚಕೋ ಬಲವಾನ್ಭೀಮಂ ಜಾನುಭ್ಯಾಮಾಕ್ಷಿಪದ್ಭುವಿ||

ಬಲಶಾಲಿ ಕೀಚಕನು ತುಸು ತತ್ತರಿಸಿದರೂ ಕೋಪದಿಂದ ಹೆಜ್ಜೆ ಸಡಿಲಿಸಿದ ಭೀಮನನ್ನು ಮಂಡಿಯಿಂದ ಗುದ್ದಿ ನೆಲಕ್ಕೆ ಅದುಮಿದನು.

04021051a ಪಾತಿತೋ ಭುವಿ ಭೀಮಸ್ತು ಕೀಚಕೇನ ಬಲೀಯಸಾ|

04021051c ಉತ್ಪಪಾತಾಥ ವೇಗೇನ ದಂಡಾಹತ ಇವೋರಗಃ||

ಬಲಶಾಲಿ ಕೀಚಕನಿಂದ ನೆಲಕ್ಕೆ ಕೆಡುಹಲ್ಪಟ್ಟ ಭೀಮನಾದರೂ ದೊಣ್ಣೆಯಿಂದ ಪೆಟ್ಟುತಿಂದ ಹಾವಿನಂತೆ ವೇಗವಾಗಿ ಮೇಲೆ ಚಿಮ್ಮಿದನು.

04021052a ಸ್ಪರ್ಧಯಾ ಚ ಬಲೋನ್ಮತ್ತೌ ತಾವುಭೌ ಸೂತಪಾಂಡವೌ|

04021052c ನಿಶೀಥೇ ಪರ್ಯಕರ್ಷೇತಾಂ ಬಲಿನೌ ನಿಶಿ ನಿರ್ಜನೇ||

ಬಲಶಾಲಿಗಳಾದ ಆ ಕೀಚಕ-ಭೀಮರಿಬ್ಬರೂ ಸ್ಪರ್ಧೆಯಿಂದ ಬಲೋನ್ಮತ್ತರಾಗಿ ಆ ನಿರ್ಜನ ತಾಣದಲ್ಲಿ ನಟ್ಟಿರುಳು ಹೋರಾಡಿದರು.

04021053a ತತಸ್ತದ್ಭವನಶ್ರೇಷ್ಠಂ ಪ್ರಾಕಂಪತ ಮುಹುರ್ಮುಹುಃ|

04021053c ಬಲವಚ್ಚಾಪಿ ಸಂಕ್ರುದ್ಧಾವನ್ಯೋನ್ಯಂ ತಾವಗರ್ಜತಾಂ||

ಹೀಗೆ ಸಂಕೃದ್ಧರಾದ ಅವರಿಬ್ಬರೂ ಪರಸ್ಪರ ಗರ್ಜಿಸುತ್ತಿರಲು ಆ ಶ್ರೇಷ್ಠ ಭವನವು ದೃಢವಾಗಿದ್ದರೂ ಕೂಡ ಮತ್ತೆ ಮತ್ತೆ ಕಂಪಿಸುತ್ತಿತ್ತು.

04021054a ತಲಾಭ್ಯಾಂ ತು ಸ ಭೀಮೇನ ವಕ್ಷಸ್ಯಭಿಹತೋ ಬಲೀ|

04021054c ಕೀಚಕೋ ರೋಷಸಂತಪ್ತಃ ಪದಾನ್ನ ಚಲಿತಃ ಪದಂ||

ಭೀಮನು ಅಂಗೈಯಿಂದ ಎದೆಗೆ ಗುದ್ದಲು ರೋಷಸಂತಪ್ತನಾದ ಬಲಶಾಲಿ ಕೀಚಕನು ಒಂದು ಹೆಜ್ಜೆಯಷ್ಟೂ ವಿಚಲಿತನಾಗಲಿಲ್ಲ.

04021055a ಮುಹೂರ್ತಂ ತು ಸ ತಂ ವೇಗಂ ಸಹಿತ್ವಾ ಭುವಿ ದುಃಸ್ಸಹಂ|

04021055c ಬಲಾದಹೀಯತ ತದಾ ಸೂತೋ ಭೀಮಬಲಾರ್ದಿತಃ||

ಭೀಮನಿಂದ ಬಲವಾಗಿ ಗುದ್ದಲ್ಪಟ್ಟ ಕೀಚಕನು ಲೋಕದಲ್ಲಿ ದುಃಸ್ಸಹವಾದ ಆ ರಭಸವನ್ನು ಮುಹೂರ್ತಕಾಲ ಸಹಿಸಿಕೊಂಡು ಅನಂತರ ಬಲಗುಂದಿದನು.

04021056a ತಂ ಹೀಯಮಾನಂ ವಿಜ್ಞಾಯ ಭೀಮಸೇನೋ ಮಹಾಬಲಃ|

04021056c ವಕ್ಷಸ್ಯಾನೀಯ ವೇಗೇನ ಮಮಂಥೈನಂ ವಿಚೇತಸಂ||

ಅವನು ದುರ್ಬಲನಾದುದನ್ನು ಕಂಡು ಮಹಾಬಲಿ ಭೀಮಸೇನನು ವೇಗದಿಂದ ಅವನನ್ನು ತನ್ನೆಡೆಗೆ ಎಳೆದುಕೊಂಡು ಪ್ರಜ್ಞೆತಪ್ಪುವಂತೆ ಹಿಂಡತೊಡಗಿದನು.

04021057a ಕ್ರೋಧಾವಿಷ್ಟೋ ವಿನಿಃಸ್ಪೃಸ್ಯ ಪುನಶ್ಚೈನಂ ವೃಕೋದರಃ|

04021057c ಜಗ್ರಾಹ ಜಯತಾಂ ಶ್ರೇಷ್ಠಃ ಕೇಶೇಷ್ವೇವ ತದಾ ಭೃಶಂ||

ವಿಜಯಿಗಳಲ್ಲಿ ಶ್ರೇಷ್ಠನೂ ಕ್ರೋಧಾವಿಷ್ಟನೂ ಆದ ವೃಕೋದರನು ಜೋರಾಗಿ ಉಸಿರಾಡುತ್ತಾ ಪುನಃ ಅವನ ಕೂದಲನ್ನು ಬಲವಾಗಿ ಹಿಡಿದುಕೊಂಡನು.

04021058a ಗೃಹೀತ್ವಾ ಕೀಚಕಂ ಭೀಮೋ ವಿರುರಾವ ಮಹಾಬಲಃ|

04021058c ಶಾರ್ದೂಲಃ ಪಿಶಿತಾಕಾಂಕ್ಷೀ ಗೃಹೀತ್ವೇವ ಮಹಾಮೃಗಂ||

ಹುಲಿಯು ಮಾಂಸದ ಬಯಕೆಯಿಂದ ದೊಡ್ಡ ಜಿಂಕೆಯನ್ನು ಹಿಡಿದು ಗರ್ಜಿಸುವಂತೆ ಮಹಾಬಲಿ ಬೀಮನು ಕೀಚಕನನ್ನು ಹಿಡಿದುಕೊಂಡು ಗರ್ಜಿಸಿದನು.

04021059a ತಸ್ಯ ಪಾದೌ ಚ ಪಾಣೀ ಚ ಶಿರೋ ಗ್ರೀವಾಂ ಚ ಸರ್ವಶಃ|

04021059c ಕಾಯೇ ಪ್ರವೇಶಯಾಮಾಸ ಪಶೋರಿವ ಪಿನಾಕಧೃಕ್||

ಪಿನಾಕಪಾಣಿ ಈಶ್ವರನು ಪಶುವಿಗೆ ಮಾಡಿದಂತೆ ಅವನ ಕೈ ಕಾಲು ತಲೆ ಮತ್ತು ಕತ್ತುಗಳನ್ನು ಸಂಪೂರ್ಣವಾಗಿ ಅವನ ದೇಹದೊಳಕ್ಕೆ ತುರುಕಿದನು.

04021060a ತಂ ಸಮ್ಮಥಿತಸರ್ವಾಂಗಂ ಮಾಂಸಪಿಂಡೋಪಮಂ ಕೃತಂ|

04021060c ಕೃಷ್ಣಾಯೈ ದರ್ಶಯಾಮಾಸ ಭೀಮಸೇನೋ ಮಹಾಬಲಃ||

ಎಲ್ಲ ಅಂಗಗಳು ಜಜ್ಜಿಹೋಗಿ ಮಾಂಸದ ಮುದ್ದೆಯಂತಾಗಿದ್ದ ಅವನನ್ನು ಮಹಾಬಲಿ ಭೀಮನು ಕೃಷ್ಣೆಗೆ ತೋರಿಸಿದನು.

04021061a ಉವಾಚ ಚ ಮಹಾತೇಜಾ ದ್ರೌಪದೀಂ ಪಾಂಡುನಂದನಃ|

04021061c ಪಶ್ಯೈನಮೇಹಿ ಪಾಂಚಾಲಿ ಕಾಮುಕೋಽಯಂ ಯಥಾ ಕೃತಃ||

ಮಹಾತೇಜಸ್ವಿ ಪಾಂಡುನಂದನನು ದ್ರೌಪದಿಗೆ ಹೀಗೆ ಹೇಳಿದನು: “ಪಾಂಚಾಲೀ! ಇವನನ್ನು ನೋಡು. ಈ ಕಾಮುಕನಿಗೆ ಏನಾಗಿದೆಯೆಂಬುದನ್ನು ನೋಡು.”

04021062a ತಥಾ ಸ ಕೀಚಕಂ ಹತ್ವಾ ಗತ್ವಾ ರೋಷಸ್ಯ ವೈ ಶಮಂ|

04021062c ಆಮಂತ್ರ್ಯ ದ್ರೌಪದೀಂ ಕೃಷ್ಣಾಂ ಕ್ಷಿಪ್ರಮಾಯಾನ್ಮಹಾನಸಂ||

ಹೀಗೆ ಕೀಚಕನನ್ನು ಕೊಂದು ಕೋಪವನ್ನು ತಣಿಸಿಕೊಂಡ ಆ ಭೀಮನು ದ್ರೌಪದಿ ಕೃಷ್ಣೆಯನ್ನು ಬೀಳ್ಕೊಂಡು ಬೇಗ ಅಡುಗೆಮನೆಗೆ ಹೋದನು.

04021063a ಕೀಚಕಂ ಘಾತಯಿತ್ವಾ ತು ದ್ರೌಪದೀ ಯೋಷಿತಾಂ ವರಾ|

04021063c ಪ್ರಹೃಷ್ಟಾ ಗತಸಂತಾಪಾ ಸಭಾಪಾಲಾನುವಾಚ ಹ||

ಸ್ತ್ರೀಯರಲ್ಲಿ ಶ್ರೇಷ್ಠಳಾದ ದ್ರೌಪದಿಯಾದರೋ ಕೀಚಕನನ್ನು ಕೊಲ್ಲಿಸಿ ಹರ್ಷಿತಳಾಗಿ ಸಂತಾಪವನ್ನು ನೀಗಿ ಭವನರಕ್ಷಕರಿಗೆ ಹೇಳಿದಳು:

04021064a ಕೀಚಕೋಽಯಂ ಹತಃ ಶೇತೇ ಗಂಧರ್ವೈಃ ಪತಿಭಿರ್ಮಮ|

04021064c ಪರಸ್ತ್ರೀಕಾಮಸಮ್ಮತ್ತಃ ಸಮಾಗಚ್ಛತ ಪಶ್ಯತ||

“ಬಂದು ನೋಡಿ! ಪರಸ್ತ್ರೀಕಾಮದಿಂದ ಮತ್ತನಾದ ಈ ಕೀಚಕನು ನನ್ನ ಪತಿಗಳಾದ ಗಂಧರ್ವರಿಂದ ಹತನಾಗಿ ಮಲಗಿದ್ದಾನೆ!”

04021065a ತಚ್ಚ್ರುತ್ವಾ ಭಾಷಿತಂ ತಸ್ಯಾ ನರ್ತನಾಗಾರರಕ್ಷಿಣಃ|

04021065c ಸಹಸೈವ ಸಮಾಜಗ್ಮುರಾದಾಯೋಲ್ಕಾಃ ಸಹಸ್ರಶಃ||

ಅವಳ ಈ ಮಾತುಗಳನ್ನು ಕೇಳಿದ ನಾಟ್ಯಶಾಲೆಯ ರಕ್ಷಕರು ಪಂಜುಗಳನ್ನು ಹಿಡಿದು ಸಹಸ್ರ ಸಂಖ್ಯೆಗಳಲ್ಲಿ ಆ ಕೂಡಲೇ ಬಂದರು.

04021066a ತತೋ ಗತ್ವಾಥ ತದ್ವೇಶ್ಮ ಕೀಚಕಂ ವಿನಿಪಾತಿತಂ|

04021066c ಗತಾಸುಂ ದದೃಶುರ್ಭೂಮೌ ರುಧಿರೇಣ ಸಮುಕ್ಷಿತಂ||

ಅನಂತರ ಆ ಭವನಕ್ಕೆ ಹೋಗಿ ಪ್ರಾಣವಿಲ್ಲದೇ ರಕ್ತದಿಂದ ತೊಯ್ದು ನೆಲದ ಮೇಲೆ ಬಿದ್ದಿದ್ದ ಕೀಚಕನನ್ನು ಕಂಡರು.

04021067a ಕ್ವಾಸ್ಯ ಗ್ರೀವಾ ಕ್ವ ಚರಣೌ ಕ್ವ ಪಾಣೀ ಕ್ವ ಶಿರಸ್ತಥಾ|

04021067c ಇತಿ ಸ್ಮ ತಂ ಪರೀಕ್ಷಂತೇ ಗಂಧರ್ವೇಣ ಹತಂ ತದಾ||

ಗಂಧರ್ವರಿಂದ ಹತನಾದ ಅವನನ್ನು ನೋಡಿ “ಇವನ ಕೊರಳೆಲ್ಲಿ? ಕಾಲುಗಳೆಲ್ಲಿ? ಕೈಗಳೆಲ್ಲಿ? ತಲೆಯಲ್ಲಿ?” ಎಂದು ಹುಡುಕಾಡಿದರು.”

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕವಧೇ ಏಕವಿಂಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕವಧೆಯುಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.