Virata Parva: Chapter 2

ವಿರಾಟ ಪರ್ವ: ವೈರಾಟ ಪರ್ವ 

ಭೀಮಾರ್ಜುನರ ಪಾತ್ರ ನಿಶ್ಚಯ

ಬಲ್ಲವನೆಂಬ ಹೆಸರನ್ನಿಟ್ಟುಕೊಂಡು ಅಡುಗೆಯವನೆಂದು ಹೇಳಿಕೊಂಡು ರಾಜ ವಿರಾಟನಲ್ಲಿಗೆ ಹೋಗುತ್ತೇನೆಂದು ಭೀಮನು ನಿರ್ಧರಿಸುವುದು (೧-೮). ಷಂಢಕನಾಗಿದ್ದೇನೆಂದು ಪ್ರತಿಜ್ಞೆ ಮಾಡಿ ಬೃಹನ್ನಳಾ ಎನ್ನುವ ಹೆಸರಿನವಳಾಗಿ, ಸ್ತ್ರೀ ಭಾವದಿಂದ ಮಹೀಪಾಲನ ಅಂತಃಪುರದಲ್ಲಿರುತ್ತೇನೆಂದು ಅರ್ಜುನನು ಹೇಳುವುದು (೯-೨೭).

04002001 ಭೀಮ ಉವಾಚ|

04002001a ಪೌರೋಗವೋ ಬ್ರುವಾಣೋಽಹಂ ಬಲ್ಲವೋ ನಾಮ ನಾಮತಃ|

04002001c ಉಪಸ್ಥಾಸ್ಯಾಮಿ ರಾಜಾನಂ ವಿರಾಟಮಿತಿ ಮೇ ಮತಿಃ||

ಭೀಮನು ಹೇಳಿದನು: “ಬಲ್ಲವನೆಂಬ ಹೆಸರನ್ನಿಟ್ಟುಕೊಂಡು ಅಡುಗೆಯವನೆಂದು ಹೇಳಿಕೊಂಡು ರಾಜ ವಿರಾಟನಲ್ಲಿಗೆ ಹೋಗುತ್ತೇನೆಂದು ನನ್ನ ಅಭಿಮತ.

04002002a ಸೂಪಾನಸ್ಯ ಕರಿಷ್ಯಾಮಿ ಕುಶಲೋಽಸ್ಮಿ ಮಹಾನಸೇ|

04002002c ಕೃತಪೂರ್ವಾಣಿ ಯೈರಸ್ಯ ವ್ಯಂಜನಾನಿ ಸುಶಿಕ್ಷಿತೈಃ|

04002002e ತಾನಪ್ಯಭಿಭವಿಷ್ಯಾಮಿ ಪ್ರೀತಿಂ ಸಂಜನಯನ್ನಹಂ||

ಭಾರೀ ಅಡುಗೆಯಲ್ಲಿ ಕುಶಲನಾಗಿದ್ದೇನೆ, ಸೂಪಗಳನ್ನು ತಯಾರಿಸಬಲ್ಲೆ, ಇದಕ್ಕೂ ಮೊದಲು ಪಳಗಿದವರು ಮಾಡಿದ ಪದಾರ್ಥಗಳಿಗೂ ಮೀರಿದ ಅಡುಗೆಯನ್ನು ಮಾಡಬಲ್ಲೆ ಎಂದು ತೋರಿಸಿ ಅವನನ್ನು ಸಂತೋಷ ಪಡಿಸುವೆನು.

04002003a ಆಹರಿಷ್ಯಾಮಿ ದಾರೂಣಾಂ ನಿಚಯಾನ್ಮಹತೋಽಪಿ ಚ|

04002003c ತತ್ಪ್ರೇಕ್ಷ್ಯ ವಿಪುಲಂ ಕರ್ಮ ರಾಜಾ ಪ್ರೀತೋ ಭವಿಷ್ಯತಿ||

ಎಷ್ಟೇ ಭಾರಿಯಾಗಿದ್ದರೂ ಕಟ್ಟಿಗೆಗಳ ಹೊರೆಯನ್ನು ಹೊತ್ತು ತರುತ್ತೇನೆ. ಇಂಥಹ ಭಾರಿ ಕೆಲಸಗಳನ್ನು ನೋಡಿದ ರಾಜನು ಸಂತೋಷಗೊಳ್ಳುತ್ತಾನೆ.

04002004a ದ್ವಿಪಾ ವಾ ಬಲಿನೋ ರಾಜನ್ವೃಷಭಾ ವಾ ಮಹಾಬಲಾಃ|

04002004c ವಿನಿಗ್ರಾಹ್ಯಾ ಯದಿ ಮಯಾ ನಿಗ್ರಹೀಷ್ಯಾಮಿ ತಾನಪಿ||

ರಾಜನ್! ಬಲಶಾಲಿ ಆನೆಗಳನ್ನಾಗಲೀ ಮಹಾಬಲಿ ಹೋರಿಗಳನ್ನಾಗಲೀ ನಿಗ್ರಹಿಸಬೇಕಾಗಿ ಬಂದರೆ ಅವುಗಳನ್ನೂ ನಿಗ್ರಹಿಸುತ್ತೇನೆ.

04002005a ಯೇ ಚ ಕೇ ಚಿನ್ನಿಯೋತ್ಸ್ಯಂತಿ ಸಮಾಜೇಷು ನಿಯೋಧಕಾಃ|

04002005c ತಾನಹಂ ನಿಹನಿಷ್ಯಾಮಿ ಪ್ರೀತಿಂ ತಸ್ಯ ವಿವರ್ಧಯನ್||

ಯಾರಾದರೂ ಜಟ್ಟಿಗಳು ಮಲ್ಲಯುದ್ಧ ಮಾಡಬಯಸಿದರೆ ಅವರನ್ನೂ ಹೊಡೆದುಹಾಕಿ ಅವನ ಸಂತೋಷವನ್ನು ಹೆಚ್ಚಿಸುತ್ತೇನೆ.

04002006a ನ ತ್ವೇತಾನ್ಯುಧ್ಯಮಾನಾನ್ವೈ ಹನಿಷ್ಯಾಮಿ ಕಥಂ ಚನ|

04002006c ತಥೈತಾನ್ಪಾತಯಿಷ್ಯಾಮಿ ಯಥಾ ಯಾಸ್ಯಂತಿ ನ ಕ್ಷಯಂ||

ಆದರೂ ನನ್ನೊಡನೆ ಹೋರಾಡುವವರನ್ನು ಕೊಲ್ಲುವುದಿಲ್ಲ, ನಾಶ ಪಡಿಸದೇ ಅವರನ್ನು ಕೆಡಹುತ್ತೇನೆ.

04002007a ಆರಾಲಿಕೋ ಗೋವಿಕರ್ತಾ ಸೂಪಕರ್ತಾ ನಿಯೋಧಕಃ|

04002007c ಆಸಂ ಯುಧಿಷ್ಠಿರಸ್ಯಾಹಮಿತಿ ವಕ್ಷ್ಯಾಮಿ ಪೃಚ್ಛತಃ||

ಯಾರಾದರೂ ಕೇಳಿದರೆ ಯುಧಿಷ್ಠಿರನಲ್ಲಿ ಅಡುಗೆಯವನಾಗಿ ಅನ್ನ, ಮಾಂಸ ಮತ್ತು ಸಾರನ್ನು ತಯಾರಿಸುವವನೂ ಜಟ್ಟಿಯೂ ಆಗಿದ್ದೆನೆಂದು ಹೇಳುತ್ತೇನೆ.

04002008a ಆತ್ಮಾನಮಾತ್ಮನಾ ರಕ್ಷಂಶ್ಚರಿಷ್ಯಾಮಿ ವಿಶಾಂ ಪತೇ|

04002008c ಇತ್ಯೇತತ್ಪ್ರತಿಜಾನಾಮಿ ವಿಹರಿಷ್ಯಾಮ್ಯಹಂ ಯಥಾ||

ವಿಶಾಂಪತೇ! ನನ್ನನ್ನು ನಾನು ರಕ್ಷಿಸಿಕೊಂಡು ಇರುತ್ತೇನೆ. ಈ ರೀತಿಯಲ್ಲಿ ನಾನು ಇರುತ್ತೇನೆಂದು ತಿಳಿದಿದ್ದೇನೆ.”

04002009 ಯುಧಿಷ್ಠಿರ ಉವಾಚ|

04002009a ಯಮಗ್ನಿರ್ಬ್ರಾಹ್ಮಣೋ ಭೂತ್ವಾ ಸಮಾಗಚ್ಛನ್ನೃಣಾಂ ವರಂ|

04002009c ದಿಧಕ್ಷುಃ ಖಾಂಡವಂ ದಾವಂ ದಾಶಾರ್ಹಸಹಿತಂ ಪುರಾ||

04002010a ಮಹಾಬಲಂ ಮಹಾಬಾಹುಮಜಿತಂ ಕುರುನಂದನಂ|

04002010c ಸೋಽಯಂ ಕಿಂ ಕರ್ಮ ಕೌಂತೇಯಃ ಕರಿಷ್ಯತಿ ಧನಂಜಯಃ||

ಯುಧಿಷ್ಠಿರನು ಹೇಳಿದನು: “ಹಿಂದೆ ಖಾಂಡವವನ್ನು ಸುಡಲು ಬಯಸಿದ ಅಗ್ನಿಯು ಬ್ರಾಹ್ಮಣನಾಗಿ ದಾಶಾರ್ಹನ ಜೊತೆಗಿದ್ದ ಯಾವ ನರಶ್ರೇಷ್ಠ, ಮಹಾಬಲಿ, ಮಹಾಬಾಹು, ಅಜಿತ, ಕುರುನಂದನನ ಬಳಿ ಬಂದಿದ್ದನೋ ಆ ಕೌಂತೇಯ ಧನಂಜಯನು ಯಾವ ಕೆಲಸವನ್ನು ಮಾಡುತ್ತಾನೆ?

04002011a ಯೋಽಯಮಾಸಾದ್ಯ ತಂ ದಾವಂ ತರ್ಪಯಾಮಾಸ ಪಾವಕಂ|

04002011c ವಿಜಿತ್ಯೈಕರಥೇನೇಂದ್ರಂ ಹತ್ವಾ ಪನ್ನಗರಾಕ್ಷಸಾನ್||

04002011e ಶ್ರೇಷ್ಠಃ ಪ್ರತಿಯುಧಾಂ ನಾಮ ಸೋಽರ್ಜುನಃ ಕಿಂ ಕರಿಷ್ಯತಿ||

ಅಲ್ಲಿಗೆ ಹೋಗಿ ಏಕರಥದಲ್ಲಿ ಇಂದ್ರನನ್ನು ಗೆದ್ದು ಪನ್ನಗರಾಕ್ಷಸರನ್ನು ಸಂಹರಿಸಿ ಪಾವಕನನ್ನು ತೃಪ್ತಿಪಡಿಸಿದ ಪ್ರತಿಯುಧರಲ್ಲಿ ಶ್ರೇಷ್ಠನೆಂದು ಹೆಸರನ್ನು ಹೊತ್ತ ಅರ್ಜುನನು ಏನು ಮಾಡುತ್ತಾನೆ?

04002012a ಸೂರ್ಯಃ ಪ್ರತಪತಾಂ ಶ್ರೇಷ್ಠೋ ದ್ವಿಪದಾಂ ಬ್ರಾಹ್ಮಣೋ ವರಃ|

04002012c ಆಶೀವಿಷಶ್ಚ ಸರ್ಪಾಣಾಮಗ್ನಿಸ್ತೇಜಸ್ವಿನಾಂ ವರಃ||

04002013a ಆಯುಧಾನಾಂ ವರೋ ವಜ್ರಃ ಕಕುದ್ಮೀ ಚ ಗವಾಂ ವರಃ|

04002013c ಹ್ರದಾನಾಮುದಧಿಃ ಶ್ರೇಷ್ಠಃ ಪರ್ಜನ್ಯೋ ವರ್ಷತಾಂ ವರಃ||

04002014a ಧೃತರಾಷ್ಟ್ರಶ್ಚ ನಾಗಾನಾಂ ಹಸ್ತಿಷ್ವೈರಾವತೋ ವರಃ|

04002014c ಪುತ್ರಃ ಪ್ರಿಯಾಣಾಮಧಿಕೋ ಭಾರ್ಯಾ ಚ ಸುಹೃದಾಂ ವರಾ||

04002015a ಯಥೈತಾನಿ ವಿಶಿಷ್ಟಾನಿ ಜಾತ್ಯಾಂ ಜಾತ್ಯಾಂ ವೃಕೋದರ|

04002015c ಏವಂ ಯುವಾ ಗುಡಾಕೇಶಃ ಶ್ರೇಷ್ಠಃ ಸರ್ವಧನುಷ್ಮತಾಂ||

04002016a ಸೋಽಯಮಿಂದ್ರಾದನವರೋ ವಾಸುದೇವಾಚ್ಚ ಭಾರತ|

04002016c ಗಾಂಡೀವಧನ್ವಾ ಶ್ವೇತಾಶ್ವೋ ಬೀಭತ್ಸುಃ ಕಿಂ ಕರಿಷ್ಯತಿ||

ಪ್ರತಪತರಲ್ಲಿ ಸೂರ್ಯನು ಶ್ರೇಷ್ಠ, ದ್ವಿಪದರಲ್ಲಿ ಬ್ರಾಹ್ಮಣನು ಶ್ರೇಷ್ಠ, ಸರ್ಪಗಳಲ್ಲಿ ಆಶೀವಿಷ ಮತ್ತು ತೇಜಸ್ವಿಗಳಲ್ಲಿ ಅಗ್ನಿಯು ಶ್ರೇಷ್ಠ, ಆಯುಧಗಳಲ್ಲಿ ವಜ್ರ ಶ್ರೇಷ್ಠ, ಗೋವುಗಳಲ್ಲಿ ಹೋರಿಯು ಶ್ರೇಷ್ಠ, ನೀರುಗಳಲ್ಲಿ ಸಮುದ್ರವು ಶ್ರೇಷ್ಠ, ಮೋಡಗಳಲ್ಲಿ ಪರ್ಜನ್ಯವು ಶ್ರೇಷ್ಠ, ನಾಗಗಳಲ್ಲಿ ಧೃತರಾಷ್ಟ್ರನೂ, ಹಸ್ತಿಗಳಲ್ಲಿ ಐರಾವತನೂ ಶ್ರೇಷ್ಠ, ಪ್ರಿಯರಲ್ಲಿ ಪುತ್ರನು ಅಧಿಕ ಮತ್ತು ಸುಹೃದಯರಲ್ಲಿ ಭಾರ್ಯೆಯು ಶ್ರೇಷ್ಠ. ವೃಕೋದರ! ಆಯಾಯಾ ಜಾತಿಗಳಲ್ಲಿ ಇವು ವಿಶಿಷ್ಟವಾಗಿರುವಂತೆ ಯುವಕರಲ್ಲಿ ಈ ಸರ್ವಧನುಷ್ಮತ ಗುಡಾಕೇಶನು ಶ್ರೇಷ್ಠ. ಭಾರತ! ಇಂದ್ರ-ವಾಸುದೇವರಿಗೂ ಕಡಿಮೆಯಿಲ್ಲದ, ಗಾಂಡೀವ ಧನುರ್ಧಾರಿ, ಶ್ವೇತಾಶ್ವ ಈ ಬೀಭತ್ಸುವು ಏನು ಮಾಡುತ್ತಾನೆ?

04002017a ಉಷಿತ್ವಾ ಪಂಚ ವರ್ಷಾಣಿ ಸಹಸ್ರಾಕ್ಷಸ್ಯ ವೇಶ್ಮನಿ|

04002017c ದಿವ್ಯಾನ್ಯಸ್ತ್ರಾಣ್ಯವಾಪ್ತಾನಿ ದೇವರೂಪೇಣ ಭಾಸ್ವತಾ||

04002018a ಯಂ ಮನ್ಯೇ ದ್ವಾದಶಂ ರುದ್ರಮಾದಿತ್ಯಾನಾಂ ತ್ರಯೋದಶಂ|

04002018c ಯಸ್ಯ ಬಾಹೂ ಸಮೌ ದೀರ್ಘೌ ಜ್ಯಾಘಾತಕಠಿನತ್ವಚೌ||

04002018E ದಕ್ಷಿಣೇ ಚೈವ ಸವ್ಯೇ ಚ ಗವಾಮಿವ ವಹಃ ಕೃತಃ||

04002019a ಹಿಮವಾನಿವ ಶೈಲಾನಾಂ ಸಮುದ್ರಃ ಸರಿತಾಮಿವ|

04002019c ತ್ರಿದಶಾನಾಂ ಯಥಾ ಶಕ್ರೋ ವಸೂನಾಮಿವ ಹವ್ಯವಾಟ್||

04002020a ಮೃಗಾಣಾಮಿವ ಶಾರ್ದೂಲೋ ಗರುಡಃ ಪತತಾಮಿವ|

04002020c ವರಃ ಸಂನಹ್ಯಮಾನಾನಾಮರ್ಜುನಃ ಕಿಂ ಕರಿಷ್ಯತಿ||

ಸಹಸ್ರಾಕ್ಷನ ಮನೆಯಲ್ಲಿ ಪ್ರಕಾಶಿಸುವ ದೇವರೂಪದಿಂದ ಐದು ವರ್ಷಗಳು ಉಳಿದು ದಿವ್ಯಾಸ್ತ್ರಗಳನ್ನು ಪಡೆದ, ಹನ್ನೆರಡನೆಯ ರುದ್ರನೆಂದೂ ಹದಿಮೂರನೆಯ ಆದಿತ್ಯನೆಂದೂ ಮನ್ನಣೆ ಪಡೆದಿರುವ, ಬಿಲ್ಲಿನ ಆಘಾತದಿಂದ ಕಠಿನವಾದ ಚರ್ಮಗಳ, ಗೂಳಿಯ ಹಿಣಿಲುಗಳಂತೆ ಸಮ ಮತ್ತು ದೀರ್ಘವಾದ ಎಡ ಮತ್ತು ಬಲ ಬಾಹುಗಳನ್ನು ಹೊಂದಿರುವ, ಪರ್ವತಗಳಲ್ಲಿ ಹಿಮವಂತನಂತೆ, ಜಲಾಶಯಗಳಲ್ಲಿ ಸಮುದ್ರದಂತೆ, ತ್ರಿದಶರಲ್ಲಿ ಶಕ್ರನಂತೆ, ಮತ್ತು ವಸುಗಳಲ್ಲಿ ಇಂದ್ರನಂತೆ, ಮೃಗಗಳಲ್ಲಿ ಶಾರ್ದೂಲನಂತೆ, ಮತ್ತು ಪಕ್ಷಿಗಳಲ್ಲಿ ಗರುಡನಂತಿರುವ ಯೋದ್ಧರಲ್ಲಿ ಶ್ರೇಷ್ಠ ಅರ್ಜುನನು ಏನು ಮಾಡುತ್ತಾನೆ?”

04002021 ಅರ್ಜುನ ಉವಾಚ|

04002021a ಪ್ರತಿಜ್ಞಾಂ ಷಂಢಕೋಽಸ್ಮೀತಿ ಕರಿಷ್ಯಾಮಿ ಮಹೀಪತೇ|

04002021c ಜ್ಯಾಘಾತೌ ಹಿ ಮಹಾಂತೌ ಮೇ ಸಂವರ್ತುಂ ನೃಪ ದುಷ್ಕರೌ||

ಅರ್ಜುನನು ಹೇಳಿದನು: “ಮಹೀಪತೇ! ಷಂಢಕನಾಗಿದ್ದೇನೆಂದು ಪ್ರತಿಜ್ಞೆ ಮಾಡುತ್ತೇನೆ. ನೃಪ! ಬಿಲ್ಲಿನ ಆಘಾತದ ಗುರುತುಳ್ಳ ನನ್ನ ಈ ಮಹಾ ತೋಳುಗಳನ್ನು ಮುಚ್ಚಿಡಲು ಕಷ್ಟವಾಗುತ್ತದೆ.

04002022a ಕರ್ಣಯೋಃ ಪ್ರತಿಮುಚ್ಯಾಹಂ ಕುಂಡಲೇ ಜ್ವಲನೋಪಮೇ|

04002022c ವೇಣೀಕೃತಶಿರಾ ರಾಜನ್ನಾಮ್ನಾ ಚೈವ ಬೃಹನ್ನಡಾ||

04002023a ಪಠನ್ನಾಖ್ಯಾಯಿಕಾಂ ನಾಮ ಸ್ತ್ರೀಭಾವೇನ ಪುನಃ ಪುನಃ|

04002023c ರಮಯಿಷ್ಯೇ ಮಹೀಪಾಲಮನ್ಯಾಂಶ್ಚಾಂತಃಪುರೇ ಜನಾನ್||

ರಾಜನ್! ಅಗ್ನಿಜ್ವಾಲೆಯಂತೆ ಹೊಳೆಯುವ ಕುಂಡಲಗಳನ್ನು ಕಿವಿಯಲ್ಲಿ ಧರಿಸಿ, ತಲೆಯಲ್ಲಿ ಜಡೆ ಹಾಕಿಕೊಂಡು, ಬೃಹನ್ನಳಾ ಎನ್ನುವ ಹೆಸರಿನವಳಾಗಿ, ಸ್ತ್ರೀ ಭಾವದಿಂದ ಪುನಃ ಪುನಃ ಕಥೆಗಳನ್ನು ಹೇಳುತ್ತಾ, ಮಹೀಪಾಲನ ಅಂತಃಪುರದ ಜನರನ್ನು ರಂಜಿಸುತ್ತೇನೆ.

04002024a ಗೀತಂ ನೃತ್ತಂ ವಿಚಿತ್ರಂ ಚ ವಾದಿತ್ರಂ ವಿವಿಧಂ ತಥಾ|

04002024c ಶಿಕ್ಷಯಿಷ್ಯಾಮ್ಯಹಂ ರಾಜನ್ ವಿರಾಟಭವನೇ ಸ್ತ್ರಿಯಃ||

ರಾಜನ್! ವಿರಾಟಭವನದಲ್ಲಿ ಸ್ತ್ರೀಯರಿಗೆ ನಾನು ಗೀತ, ಅದ್ಭುತ ನೃತ್ಯ, ವಿವಿಧ ವಾದನಗಳನ್ನು ಹೇಳಿಕೊಡುತ್ತೇನೆ.

04002025a ಪ್ರಜಾನಾಂ ಸಮುದಾಚಾರಂ ಬಹು ಕರ್ಮಕೃತಂ ವದನ್|

04002025c ಛಾದಯಿಷ್ಯಾಮಿ ಕೌಂತೇಯ ಮಾಯಯಾತ್ಮಾನಮಾತ್ಮನಾ||

ಕೌಂತೇಯ! ಪ್ರಜೆಗಳ ಒಳ್ಳೆಯ ನಡವಳಿಕೆಗಳನ್ನೂ, ಮಾಡಿದ ಕೆಲಸಗಳನ್ನೂ ಬಹಳಷ್ಟು ಹೊಗಳುತ್ತಾ ಮಾಯೆಯಿಂದ ನನ್ನನ್ನು ನಾನು ಮರೆಮಾಡಿಸಿಕೊಂಡಿರುತ್ತೇನೆ.

04002026a ಯುಧಿಷ್ಠಿರಸ್ಯ ಗೇಹೇಽಸ್ಮಿ ದ್ರೌಪದ್ಯಾಃ ಪರಿಚಾರಿಕಾ|

04002026c ಉಷಿತಾಸ್ಮೀತಿ ವಕ್ಷ್ಯಾಮಿ ಪೃಷ್ಟೋ ರಾಜ್ಞಾ ಚ ಭಾರತ||

ಭಾರತ! ರಾಜನು ಒಮ್ಮೆ ಕೇಳಿದರೆ, ನಾನು ಯುಧಿಷ್ಠಿರನ ಮನೆಯಲ್ಲಿ ದ್ರೌಪದಿಯ ಪರಿಚಾರಿಕೆಯಾಗಿದ್ದೆ ಎಂದು ಹೇಳುತ್ತೇನೆ.

04002027a ಏತೇನ ವಿಧಿನಾ ಛನ್ನಃ ಕೃತಕೇನ ಯಥಾ ನಲಃ|

04002027c ವಿಹರಿಷ್ಯಾಮಿ ರಾಜೇಂದ್ರ ವಿರಾಟಭವನೇ ಸುಖಂ||

ರಾಜೇಂದ್ರ! ಈ ರೀತಿಯಲ್ಲಿ ನಾನು ನಲನಂತೆ ಕೃತಕನಾಗಿ ಮರೆಸಿಕೊಂಡು ವಿರಾಟಭವನದಲ್ಲಿ ಸುಖದಿಂದ ಕಾಲ ಕಳೆಯುತ್ತೇನೆ.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ದ್ವಿತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಎರಡನೆಯ ಅಧ್ಯಾಯವು.

Related image

Comments are closed.