Virata Parva: Chapter 19

ವಿರಾಟ ಪರ್ವ: ಕೀಚಕವಧ ಪರ್ವ

೧೯

ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (೧-೩೦).

04019001 ದ್ರೌಪದ್ಯುವಾಚ|

04019001a ಅಹಂ ಸೈರಂಧ್ರಿವೇಷೇಣ ಚರಂತೀ ರಾಜವೇಶ್ಮನಿ|

04019001c ಶೌಚದಾಸ್ಮಿ ಸುದೇಷ್ಣಾಯಾ ಅಕ್ಷಧೂರ್ತಸ್ಯ ಕಾರಣಾತ್||

ದ್ರೌಪದಿಯು ಹೇಳಿದಳು: “ಆ ಕೆಟ್ಟ ಜೂಜಾಳಿಯ ಕಾರಣದಿಂದ ನಾನು ಸೈರಂಧ್ರಿಯ ವೇಷವನ್ನು ಧರಿಸಿ ಅರಮನೆಯಲ್ಲಿ ಇದ್ದುಕೊಂಡು ಸುದೇಷ್ಣೆಯ ಪರಿಚಾರಿಕೆ ಮಾಡುತ್ತಿದ್ದೇನೆ.

04019002a ವಿಕ್ರಿಯಾಂ ಪಶ್ಯ ಮೇ ತೀವ್ರಾಂ ರಾಜಪುತ್ರ್ಯಾಃ ಪರಂತಪ|

04019002c ಆಸೇ ಕಾಲಮುಪಾಸೀನಾ ಸರ್ವಂ ದುಃಖಂ ಕಿಲಾರ್ತವತ್||

ಪರಂತಪ! ರಾಜಪುತ್ರಿಯಾದ ನನ್ನ ಈ ಅತೀವ ಅಸುಖವನ್ನು ನೋಡು. ಆರ್ತಳಂತೆ ದುಃಖವೆಲ್ಲ ಮುಗಿಯುವ ಸಮಯವನ್ನು ಕಾಯುತ್ತಿದ್ದೇನೆ.

04019003a ಅನಿತ್ಯಾ ಕಿಲ ಮರ್ತ್ಯಾನಾಮರ್ಥಸಿದ್ಧಿರ್ಜಯಾಜಯೌ|

04019003c ಇತಿ ಕೃತ್ವಾ ಪ್ರತೀಕ್ಷಾಮಿ ಭರ್ತೄಣಾಮುದಯಂ ಪುನಃ||

ಮನುಷ್ಯರ ಸಂಪತ್ತು, ಸಾಧನೆಗಳು, ಜಯ ಅಪಜಯಗಳು ಅನಿತ್ಯ ಎಂದು ತಿಳಿದು ಪತಿಗಳ ಪುನರೋದಯವನ್ನು ಕಾಯುತ್ತಿದ್ದೇನೆ.

04019004a ಯ ಏವ ಹೇತುರ್ಭವತಿ ಪುರುಷಸ್ಯ ಜಯಾವಹಃ|

04019004c ಪರಾಜಯೇ ಚ ಹೇತುಃ ಸ ಇತಿ ಚ ಪ್ರತಿಪಾಲಯೇ||

ಪುರುಷನ ಜಯಕ್ಕೆ ಯಾವುದು ಕಾರಣವೋ ಅದೇ ಪರಾಜಯಕ್ಕೂ ಕಾರಣವಾಗುವುದೆಂದು ಕಾಯುತ್ತಿದ್ದೇನೆ.

04019005a ದತ್ತ್ವಾ ಯಾಚಂತಿ ಪುರುಷಾ ಹತ್ವಾ ವಧ್ಯಂತಿ ಚಾಪರೇ|

04019005c ಪಾತಯಿತ್ವಾ ಚ ಪಾತ್ಯಂತೇ ಪರೈರಿತಿ ಚ ಮೇ ಶ್ರುತಂ||

ದಾನನೀಡುವವರು ಬೇಡುತ್ತಾರೆ. ಕೊಲ್ಲುವವರು ಇತರರಿಂದ ಕೊಲ್ಲಿಸಿಕೊಳ್ಳುತ್ತಾರೆ. ಬೀಳಿಸುವವರು ಇತರರಿಂದ ಬೀಳಿಸಿಕೊಳ್ಳುತ್ತಾರೆ ಎಂದು ನಾನು ಕೇಳಿದ್ದೇನೆ.

04019006a ನ ದೈವಸ್ಯಾತಿಭಾರೋಽಸ್ತಿ ನ ದೈವಸ್ಯಾತಿವರ್ತನಂ|

04019006c ಇತಿ ಚಾಪ್ಯಾಗಮಂ ಭೂಯೋ ದೈವಸ್ಯ ಪ್ರತಿಪಾಲಯೇ||

ದೈವಕ್ಕೆ ಯಾವುದೂ ಅತಿ ಭಾರವಲ್ಲ. ದೈವವನ್ನು ಮೀರುವಂತಿಲ್ಲ ಎಂದು ತಿಳಿದು ಅದೃಷ್ಟದ ಪುನರಾಗಮನವನ್ನು ಕಾಯುತ್ತಿದ್ದೇನೆ.

04019007a ಸ್ಥಿತಂ ಪೂರ್ವಂ ಜಲಂ ಯತ್ರ ಪುನಸ್ತತ್ರೈವ ತಿಷ್ಠತಿ|

04019007c ಇತಿ ಪರ್ಯಾಯಮಿಚ್ಛಂತೀ ಪ್ರತೀಕ್ಷಾಮ್ಯುದಯಂ ಪುನಃ||

ಹಿಂದೆ ನೀರು ಎಲ್ಲಿ ನಿಲ್ಲುತ್ತಿತ್ತೋ ಅಲ್ಲಿಯೇ ಮತ್ತೆ ನಿಲ್ಲುತ್ತದೆ ಎಂದು ತಿಳಿದು ಬದಲಾವಣೆಯನ್ನು ಬಯಸುತ್ತಾ ಪುನರುದಯವನ್ನು ಪ್ರತೀಕ್ಷಿಸುತ್ತಿದ್ದೇನೆ.

04019008a ದೈವೇನ ಕಿಲ ಯಸ್ಯಾರ್ಥಃ ಸುನೀತೋಽಪಿ ವಿಪದ್ಯತೇ|

04019008c ದೈವಸ್ಯ ಚಾಗಮೇ ಯತ್ನಸ್ತೇನ ಕಾರ್ಯೋ ವಿಜಾನತಾ||

ಚೆನ್ನಾಗಿ ನಡೆಸಿದರೂ ಯಾರ ಉದ್ದೇಶವು ದೈವದಿಂದ ವಿಪತ್ತಿಗೀಡಾಗುತ್ತದೆಯೋ ಅಂಥವನು ವಿವೇಕಿಯಾಗಿ ಮತ್ತೆ ದೈವವೊದಗುವಂತೆ ಪ್ರಯತ್ನಿಸಬೇಕು.

04019009a ಯತ್ತು ಮೇ ವಚನಸ್ಯಾಸ್ಯ ಕಥಿತಸ್ಯ ಪ್ರಯೋಜನಂ|

04019009c ಪೃಚ್ಛ ಮಾಂ ದುಃಖಿತಾಂ ತತ್ತ್ವಮಪೃಷ್ಟಾ ವಾ ಬ್ರವೀಮಿ ತೇ||

ದುಃಖಿತೆಯಾಗಿ ನಾನು ಹೇಳುವ ಮಾತುಗಳ ಪ್ರಯೋಜನವೇನೆಂದು ನೀನು ಕೇಳು ಅಥವಾ ಕೇಳದಿರು. ನಾನು ಹೇಳುವ ಈ ಮಾತಿನ ಉದ್ದೇಶವನ್ನು ನಿನಗೆ ತಿಳಿಸುತ್ತೇನೆ.

04019010a ಮಹಿಷೀ ಪಾಂಡುಪುತ್ರಾಣಾಂ ದುಹಿತಾ ದ್ರುಪದಸ್ಯ ಚ|

04019010c ಇಮಾಮವಸ್ಥಾಂ ಸಂಪ್ರಾಪ್ತಾ ಕಾ ಮದನ್ಯಾ ಜಿಜೀವಿಷೇತ್||

ಪಾಂಡುಪುತ್ರರ ರಾಣಿಯಾಗಿದ್ದು ದ್ರುಪದನ ಮಗಳಾಗಿದ್ದು ಈ ಅವಸ್ಥೆಯನ್ನು ಪಡೆದಿರುವ ನನ್ನಂಥಹ ಇನ್ನ್ಯಾರು ತಾನೆ ಜೀವಿಸಿರಲು ಬಯಸುತ್ತಾರೆ?

04019011a ಕುರೂನ್ಪರಿಭವನ್ಸರ್ವಾನ್ಪಾಂಚಾಲಾನಪಿ ಭಾರತ|

04019011c ಪಾಂಡವೇಯಾಂಶ್ಚ ಸಂಪ್ರಾಪ್ತೋ ಮಮ ಕ್ಲೇಶೋ ಹ್ಯರಿಂದಮ||

ಅರಿಂದಮ! ಭಾರತ! ನನಗೊದಗಿದ ಈ ಕ್ಲೇಶವು ಎಲ್ಲ ಕುರುಗಳನ್ನೂ, ಪಾಂಚಾಲರನ್ನೂ ಮತ್ತು ಪಾಂಡವರನ್ನೂ ಅಪಮಾನಗೊಳಿಸಿದೆ.

04019012a ಭ್ರಾತೃಭಿಃ ಶ್ವಶುರೈಃ ಪುತ್ರೈರ್ಬಹುಭಿಃ ಪರವೀರಹನ್|

04019012c ಏವಂ ಸಮುದಿತಾ ನಾರೀ ಕಾ ನ್ವನ್ಯಾ ದುಃಖಿತಾ ಭವೇತ್||

ಪರವೀರಹನ್! ಬಹುಜನ ಸೋದರರಿಂದಲೂ, ಮಾವಂದಿರಿಂದಲೂ, ಪುತ್ರರಿಂದಲೂ ಪರಿವೃತಳಾಗಿ ಸಂತೋಷದಿಂದಿರಬೇಕಾದ ಬೇರೆ ಯಾರು ತಾನೇ ಹೀಗೆ ದುಃಖಪಡುತ್ತಾಳೆ?

04019013a ನೂನಂ ಹಿ ಬಾಲಯಾ ಧಾತುರ್ಮಯಾ ವೈ ವಿಪ್ರಿಯಂ ಕೃತಂ|

04019013c ಯಸ್ಯ ಪ್ರಸಾದಾದ್ದುರ್ನೀತಂ ಪ್ರಾಪ್ತಾಸ್ಮಿ ಭರತರ್ಷಭ||

ಭರತರ್ಷಭ! ಬಾಲೆಯಾಗಿದ್ದಾಗ ನಾನು ನಿಶ್ಚಯವಾಗಿಯೂ ವಿಧಿಗೆ ಅಪರಾಧಮಾಡಿದ್ದಿರಬೇಕು. ಅದರ ಪ್ರಸಾದದಿಂದ ಈ ದುರವಸ್ಥೆಗೀಡಾಗಿದ್ದೇನೆ.

04019014a ವರ್ಣಾವಕಾಶಮಪಿ ಮೇ ಪಶ್ಯ ಪಾಂಡವ ಯಾದೃಶಂ|

04019014c ಯಾದೃಶೋ ಮೇ ನ ತತ್ರಾಸೀದ್ದುಃಖೇ ಪರಮಕೇ ತದಾ||

ಪಾಂಡವ! ನನ್ನ ಬಣ್ಣವು ಹೇಗಾಗಿದೆಯೆಂಬುದನ್ನು ನೋಡು. ಅಂದು ಅಲ್ಲಿ ಪರಮ ದುಃಖದಲ್ಲಿಯೂ ಹೀಗಾಗಿರಲಿಲ್ಲ.

04019015a ತ್ವಮೇವ ಭೀಮ ಜಾನೀಷೇ ಯನ್ಮೇ ಪಾರ್ಥ ಸುಖಂ ಪುರಾ|

04019015c ಸಾಹಂ ದಾಸತ್ವಮಾಪನ್ನಾ ನ ಶಾಂತಿಮವಶಾ ಲಭೇ||

ಭೀಮ! ಪಾರ್ಥ! ಹಿಂದಿನ ನನ್ನ ಸುಖವನ್ನು ನೀನೊಬ್ಬನೇ ಬಲ್ಲೆ. ಅಂತಹ ನಾನು ದಾಸಿಯಾಗಿದ್ದೇನೆ. ಅವಶಳಾದ ನನಗೆ ಶಾಂತಿ ‌ಎನ್ನುವುದೇ ಸಿಗುತ್ತಿಲ್ಲ.

04019016a ನಾದೈವಿಕಮಿದಂ ಮನ್ಯೇ ಯತ್ರ ಪಾರ್ಥೋ ಧನಂಜಯಃ|

04019016c ಭೀಮಧನ್ವಾ ಮಹಾಬಾಹುರಾಸ್ತೇ ಶಾಂತ ಇವಾನಲಃ||

ಭೀಮಧನ್ವಿ ಮಹಾಬಾಹು ಪಾರ್ಥ ಧನಂಜಯನು ತಣ್ಣಗಾದ ಬೆಂಕಿಯಂತಿರುವುದು ದೈವವಲ್ಲದೇ ಬೇರೆಯಲ್ಲ ಎಂದು ಭಾವಿಸುತ್ತೇನೆ.

04019017a ಅಶಕ್ಯಾ ವೇದಿತುಂ ಪಾರ್ಥ ಪ್ರಾಣಿನಾಂ ವೈ ಗತಿರ್ನರೈಃ|

04019017c ವಿನಿಪಾತಮಿಮಂ ಮನ್ಯೇ ಯುಷ್ಮಾಕಮವಿಚಿಂತಿತಂ||

ಭೀಮ! ಜೀವಿಗಳ ಗತಿಯನ್ನು ತಿಳಿಯಲು ನರರಿಗೆ ಸಾಧ್ಯವಿಲ್ಲ. ನಿಮ್ಮ ಈ ಪತನವು ಮೊದಲೇ ತಿಳಿದಿರಲಿಲ್ಲ ಎಂದು ಭಾವಿಸುತ್ತೇನೆ.

04019018a ಯಸ್ಯಾ ಮಮ ಮುಖಪ್ರೇಕ್ಷಾ ಯೂಯಮಿಂದ್ರಸಮಾಃ ಸದಾ|

04019018c ಸಾ ಪ್ರೇಕ್ಷೇ ಮುಖಮನ್ಯಾಸಾಮವರಾಣಾಂ ವರಾ ಸತೀ||

ಇಂದ್ರಸಮಾನರಾದ ನೀವು ಅಪ್ಪಣೆಗಾಗಿ ಸದಾ ನನ್ನ ಮುಖವನ್ನು ನೋಡುತ್ತಿದ್ದಿರಿ. ಅಂಥಹ ಶ್ರೇಷ್ಠ ಸತಿ ನಾನೇ ಇಂದು ಅಪ್ಪಣೆಗಾಗಿ ಕೀಳಾದ ಇತರರ ಮುಖವನ್ನು ನೋಡುವವಳಂತಾಗಿದ್ದೇನೆ.

04019019a ಪಶ್ಯ ಪಾಂಡವ ಮೇಽವಸ್ಥಾಂ ಯಥಾ ನಾರ್ಹಾಮಿ ವೈ ತಥಾ|

04019019c ಯುಷ್ಮಾಸು ಧ್ರಿಯಮಾಣೇಷು ಪಶ್ಯ ಕಾಲಸ್ಯ ಪರ್ಯಯಂ||

ಪಾಂಡವ! ನನ್ನ ಈ ಅವಸ್ಥೆಯನ್ನು ನೋಡು. ನೀವು ಬದುಕಿರುವಾಗ ನನಗೆ ಇದು ತಕ್ಕುದಲ್ಲ. ಕಾಲವಿಪರ್ಯವನ್ನು ನೋಡು.

04019020a ಯಸ್ಯಾಃ ಸಾಗರಪರ್ಯಂತಾ ಪೃಥಿವೀ ವಶವರ್ತಿನೀ|

04019020c ಆಸೀತ್ಸಾದ್ಯ ಸುದೇಷ್ಣಾಯಾ ಭೀತಾಹಂ ವಶವರ್ತಿನೀ||

ಸಾಗರಪರ್ಯಂತವಾದ ಪೃಥ್ವಿ ಯಾರ ವಶವರ್ತಿನಿಯಾಗಿತ್ತೋ ಆ ನಾನು ಇಂದು ಸುದೇಷ್ಣೆಯ ವಶವರ್ತಿನಿಯಾಗಿ ಅವಳಿಗೆ ಹೆದರುತ್ತೇನೆ.

04019021a ಯಸ್ಯಾಃ ಪುರಃಸ್ಸರಾ ಆಸನ್ಪೃಷ್ಠತಶ್ಚಾನುಗಾಮಿನಃ|

04019021c ಸಾಹಮದ್ಯ ಸುದೇಷ್ಣಾಯಾಃ ಪುರಃ ಪಶ್ಚಾಚ್ಚ ಗಾಮಿನೀ||

04019021e ಇದಂ ತು ದುಃಖಂ ಕೌಂತೇಯ ಮಮಾಸಹ್ಯಂ ನಿಬೋಧ ತತ್||

ಯಾರ ಹಿಂದೆ ಮತ್ತು ಮುಂದೆ ಅನುಚರರು ಇರುತ್ತಿದ್ದರೋ ಆ ನಾನು ಇಂದು ಸುದೇಷ್ಣೇಯ ಹಿಂದೆ ಮುಂದೆ ತಿರುಗುತ್ತಿದ್ದೇನೆ. ಕೌಂತೇಯ! ನನ್ನ ಈ ಅಸಹ್ಯ ದುಃಖವನ್ನು ಅರ್ಥಮಾಡಿಕೋ.

04019022a ಯಾ ನ ಜಾತು ಸ್ವಯಂ ಪಿಂಷೇ ಗಾತ್ರೋದ್ವರ್ತನಮಾತ್ಮನಃ|

04019022c ಅನ್ಯತ್ರ ಕುಂತ್ಯಾ ಭದ್ರಂ ತೇ ಸಾದ್ಯ ಪಿಂಷಾಮಿ ಚಂದನಂ|

04019022e ಪಶ್ಯ ಕೌಂತೇಯ ಪಾಣೀ ಮೇ ನೈವಂ ಯೌ ಭವತಃ ಪುರಾ||

ಯಾರು ಕುಂತಿಯ ಹೊರತು ತನಗಾಗಿ ಕೂಡ ಸುಗಂಧದ್ರವ್ಯವನ್ನು ತೇಯುತ್ತಿರಲಿಲ್ಲವೋ ಆ ನಾನೇ ಇಂದು ಸುದೇಷ್ಣೇಗಾಗಿ ಚಂದನವನ್ನು ತೇಯುತ್ತಿದ್ದೇನೆ. ನನ್ನ ಕೈಗಳನ್ನು ನೋಡು ಕೌಂತೇಯ! ಹಿಂದೆ ಇವು ಹೀಗಿರಲಿಲ್ಲ. ನಿನಗೆ ಮಂಗಳವಾಗಲಿ!””

04019023 ವೈಶಂಪಾಯನ ಉವಾಚ|

04019023a ಇತ್ಯಸ್ಯ ದರ್ಶಯಾಮಾಸ ಕಿಣಬದ್ಧೌ ಕರಾವುಭೌ|

ವೈಶಂಪಾಯನನು ಹೇಳಿದನು: “ಹೀಗೆಂದು ಅವಳು ದಡ್ಡುಗಟ್ಟಿದ ಎರಡೂ ಕೈಗಳನ್ನೂ ಅವನಿಗೆ ತೋರಿಸಿದಳು.

04019024 ದ್ರೌಪದ್ಯುವಾಚ|

04019024a ಬಿಭೇಮಿ ಕುಂತ್ಯಾ ಯಾ ನಾಹಂ ಯುಷ್ಮಾಕಂ ವಾ ಕದಾ ಚನ|

04019024c ಸಾದ್ಯಾಗ್ರತೋ ವಿರಾಟಸ್ಯ ಭೀತಾ ತಿಷ್ಠಾಮಿ ಕಿಂಕರೀ||

04019025a ಕಿಂ ನು ವಕ್ಷ್ಯತಿ ಸಮ್ರಾಣ್ಮಾಂ ವರ್ಣಕಃ ಸುಕೃತೋ ನ ವಾ|

04019025c ನಾನ್ಯಪಿಷ್ಟಂ ಹಿ ಮತ್ಸ್ಯಸ್ಯ ಚಂದನಂ ಕಿಲ ರೋಚತೇ||

ದ್ರೌಪದಿಯು ಹೇಳಿದಳು: “ಕುಂತಿಗಾಗಲೀ ನಿಮಗಾಗಲೀ ಎಂದೂ ಹೆದರದಿದ್ದ ನಾನು ಇಂದು ವಿರಾಟನ ಮುಂದೆ ಸೇವಕಿಯಾಗಿ ಅನುಲೇಪನ ಚೆನ್ನಾಗಿ ಸಿದ್ಧವಾಗಿದೆಯೋ ಇಲ್ಲವೋ? ನನಗೆ ದೊರೆಯು ಏನೆನ್ನುತ್ತಾನೋ ಎಂದು ಅಳುಕುತ್ತಾ ನಿಂತಿರುತ್ತೇನೆ. ಬೇರೆಯವರು ತೇಯ್ದ ಚಂದನವು ವಿರಾಟನಿಗೆ ಹಿಡಿಸುವುದಿಲ್ಲ.””

04019026 ವೈಶಂಪಾಯನ ಉವಾಚ|

04019026a ಸಾ ಕೀರ್ತಯಂತೀ ದುಃಖಾನಿ ಭೀಮಸೇನಸ್ಯ ಭಾಮಿನೀ|

04019026c ರುರೋದ ಶನಕೈಃ ಕೃಷ್ಣಾ ಭೀಮಸೇನಮುದೀಕ್ಷತೀ||

ವೈಶಂಪಾಯನನು ಹೇಳಿದನು: “ಈ ರೀತಿ ಭೀಮಸೇನನ ಭಾಮಿನಿ ಕೃಷ್ಣೆಯು ತನ್ನ ದುಃಖಗಳನ್ನು ಹೇಳಿಕೊಳ್ಳುತ್ತಾ ಭೀಮಸೇನನ ಮುಖವನ್ನೇ ನೋಡುತ್ತಾ ಮೌನವಾಗಿ ಅತ್ತಳು.

04019027a ಸಾ ಬಾಷ್ಪಕಲಯಾ ವಾಚಾ ನಿಃಶ್ವಸಂತೀ ಪುನಃ ಪುನಃ|

04019027c ಹೃದಯಂ ಭೀಮಸೇನಸ್ಯ ಘಟ್ಟಯಂತೀದಮಬ್ರವೀತ್||

ಅವಳು ಮತ್ತೆ ಮತ್ತೆ ನಿಟ್ಟುಸಿರುಬಿಡುತ್ತಾ ಭೀಮಸೇನನ ಹೃದಯವನ್ನು ಕಲಕುತ್ತಾ ಬಾಷ್ಪಗದ್ಗದ ಮಾತುಗಳಿಂದ ಹೀಗೆಂದಳು:

04019028a ನಾಲ್ಪಂ ಕೃತಂ ಮಯಾ ಭೀಮ ದೇವಾನಾಂ ಕಿಲ್ಬಿಷಂ ಪುರಾ|

04019028c ಅಭಾಗ್ಯಾ ಯತ್ತು ಜೀವಾಮಿ ಮರ್ತವ್ಯೇ ಸತಿ ಪಾಂಡವ||

“ಭೀಮ! ಪಾಂಡವ! ಹಿಂದೆ ನಾನು ದೇವತೆಗಳಿಗೆಸಗಿದ ಅಪರಾಧವು ಅಲ್ಪವಾಗಿರಲಿಕ್ಕಿಲ್ಲ. ಸಾಯಬೇಕಾಗಿರುವ ಅಭಾಗ್ಯಳಾದ ನಾನು ಬದುಕಿದ್ದೇನೆ.”

04019029a ತತಸ್ತಸ್ಯಾಃ ಕರೌ ಶೂನೌ ಕಿಣಬದ್ಧೌ ವೃಕೋದರಃ|

04019029c ಮುಖಮಾನೀಯ ವೇಪಂತ್ಯಾ ರುರೋದ ಪರವೀರಹಾ||

ಬಳಿಕ ಆ ಪರವೀರಹ ವೃಕೋದರನು ಕಂಪಿಸುತ್ತಿದ್ದ ದ್ರೌಪದಿಯ ದಡ್ಡುಗಟ್ಟಿ ಊದಿಕೊಂಡಿದ್ದ ಕೈಗಳನ್ನು ತನ್ನ ಮುಖದ ಮೇಲಿಟ್ಟುಕೊಂಡು ಅತ್ತುಬಿಟ್ಟನು. 

04019030a ತೌ ಗೃಹೀತ್ವಾ ಚ ಕೌಂತೇಯೋ ಬಾಷ್ಪಮುತ್ಸೃಜ್ಯ ವೀರ್ಯವಾನ್|

04019030c ತತಃ ಪರಮದುಃಖಾರ್ತ ಇದಂ ವಚನಮಬ್ರವೀತ್||

ಪರಾಕ್ರಮಿಯಾದ ಆ ಕೌಂತೇಯನು ಅವುಗಳನ್ನು ಹಿಡಿದುಕೊಂಡು ಪರಮ ದುಃಖಾರ್ತನಾಗಿ ಕಣ್ಣೀರ್ಗರೆಯುತ್ತಾ ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಏಕೋನವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.

Related image

Comments are closed.