Virata Parva: Chapter 15

ವಿರಾಟ ಪರ್ವ: ಕೀಚಕವಧ ಪರ್ವ

೧೫

ಕೀಚಕನಿಂದ ದ್ರೌಪದಿಯು ಕಷ್ಟಕ್ಕೊಳಗಾದುದು

ಕೀಚಕನು ಕೈ ಹಿಡಿಯಲು ಅವಳು ಓಡಿ ಹೋಗುತ್ತಿದ್ದಾಗ ದ್ರೌಪದಿಯ ಕೂದಲನ್ನು ಎಳೆದು ಒದೆದು ವಿರಾಟನ ಆಸ್ಥಾನದಲ್ಲಿ ಕೆಡಹುವುದು (೧-೭). ಅಗೋಚರ ರಾಕ್ಷಸನಿಂದ ಹೊಡೆಯಲ್ಪಟ್ಟು ಕೀಚಕನು ಮೂರ್ಛಿತನಾಗಿ ಬೀಳುವುದು (೮-೯). ಸಿಟ್ಟಿಗೆದ್ದ ಭೀಮಸೇನನನ್ನು ಯುಧಿಷ್ಠಿರನು ತಡೆದುದು (೧೦-೧೨). ಕುಪಿತಳಾದ ದ್ರೌಪದಿಯು ಆಸ್ಥಾನದಲ್ಲಿ ವಿರಾಟನನ್ನುದ್ದೇಶಿಸಿ ರೋದಿಸುವುದು (೧೩-೨೬). ವಿರಾಟ, ಯುಧಿಷ್ಠಿರ ಮತ್ತು ಸಭಾಸದರು ಅವಳನ್ನು ಅರಮನೆಗೆ ಮರಳಲು ಹೇಳಿದುದು (೨೭-೩೬). ದ್ರೌಪದಿಯು ಸುದೇಷ್ಣೆಯಲ್ಲಿಗೆ ಮರಳಿ ಅವಳ ಗಂಡಂದಿರು ಕೀಚಕನನ್ನು ಅವಶ್ಯವಾಗಿ ಕೊಲ್ಲುವರೆಂದು ಹೇಳುವುದು (೩೭-೪೧).

04015001 ಕೀಚಕ ಉವಾಚ|

04015001a ಸ್ವಾಗತಂ ತೇ ಸುಕೇಶಾಂತೇ ಸುವ್ಯುಷ್ಟಾ ರಜನೀ ಮಮ|

04015001c ಸ್ವಾಮಿನೀ ತ್ವಮನುಪ್ರಾಪ್ತಾ ಪ್ರಕುರುಷ್ವ ಮಮ ಪ್ರಿಯಂ||

ಕೀಚಕನು ಹೇಳಿದನು: “ಚೆಲುಗೂದಲಿನವಳೇ! ನಿನಗೆ ಸ್ವಾಗತ. ಇರುಳು ನನಗೆ ಸುಪ್ರಭಾತವನ್ನು ತಂದಿದೆ. ನನ್ನ ಒಡತಿಯಂತೆ ನೀನು ಬಂದಿರುವೆ. ನನ್ನನ್ನು ಸಂತೋಷಗೊಳಿಸು.

04015002a ಸುವರ್ಣಮಾಲಾಃ ಕಂಬೂಶ್ಚ ಕುಂಡಲೇ ಪರಿಹಾಟಕೇ|

04015002c ಆಹರಂತು ಚ ವಸ್ತ್ರಾಣಿ ಕೌಶಿಕಾನ್ಯಜಿನಾನಿ ಚ||

ಚಿನ್ನದ ಸರಗಳನ್ನೂ, ಬಳೆಗಳನ್ನು, ಸುವರ್ಣಕುಂಡಲಗಳನ್ನೂ, ರೇಷ್ಮೆ ವಸ್ತ್ರಗಳನ್ನೂ, ಜಿಂಕೆಯ ಚರ್ಮಗಳನ್ನೂ ತರಿಸುತ್ತೇನೆ.

04015003a ಅಸ್ತಿ ಮೇ ಶಯನಂ ಶುಭ್ರಂ ತ್ವದರ್ಥಮುಪಕಲ್ಪಿತಂ|

04015003c ಏಹಿ ತತ್ರ ಮಯಾ ಸಾರ್ಧಂ ಪಿಬಸ್ವ ಮಧುಮಾಧವೀಂ||

ನಿನಗಾಗಿ ನನ್ನ ಹಾಸಿಗೆ ಶುಭ್ರವಾಗಿ ಅಣಿಯಾಗಿದೆ. ಅಲ್ಲಿಗೆ ಬಾ. ನನ್ನೊಡನೆ ಮಾಧವೀ ಮಧುವನ್ನು ಕುಡಿ.”

04015004 ದ್ರೌಪದ್ಯುವಾಚ|

04015004a ಅಪ್ರೈಷೀದ್ರಾಜಪುತ್ರೀ ಮಾಂ ಸುರಾಹಾರೀಂ ತವಾಂತಿಕಂ|

04015004c ಪಾನಮಾನಯ ಮೇ ಕ್ಷಿಪ್ರಂ ಪಿಪಾಸಾ ಮೇತಿ ಚಾಬ್ರವೀತ್||

ದ್ರೌಪದಿಯು ಹೇಳಿದಳು: “ರಾಜಪುತ್ರಿಯು ನನ್ನನ್ನು ನಿನ್ನ ಬಳಿ ಸುರೆಯನ್ನು ತರುವುದಕ್ಕಾಗಿ ಕಳುಹಿಸಿದ್ದಾಳೆ. ‘ನನಗೆ ಪಾನೀಯವನ್ನು ಬೇಗ ತಾ. ಬಾಯಾರಿಕೆಯಾಗಿದೆ!’ ಎಂದು ಹೇಳಿ ಕಳುಹಿಸಿದ್ದಾಳೆ.”

04015005 ಕೀಚಕ ಉವಾಚ|

04015005a ಅನ್ಯಾ ಭದ್ರೇ ನಯಿಷ್ಯಂತಿ ರಾಜಪುತ್ರ್ಯಾಃ ಪರಿಸ್ರುತಂ|

ಕೀಚಕನು ಹೇಳಿದನು: “ಭದ್ರೇ! ರಾಜಪುತ್ರಿಗೆ ಮದ್ಯವನ್ನು ಬೇರೆಯವರು ಒಯ್ಯುತ್ತಾರೆ.””

04015006 ವೈಶಂಪಾಯನ ಉವಾಚ|

04015006a ಇತ್ಯೇನಾಂ ದಕ್ಷಿಣೇ ಪಾಣೌ ಸೂತಪುತ್ರಃ ಪರಾಮೃಶತ್|

04015006c ಸಾ ಗೃಹೀತಾ ವಿಧುನ್ವಾನಾ ಭೂಮಾವಾಕ್ಷಿಪ್ಯ ಕೀಚಕಂ||

04015006e ಸಭಾಂ ಶರಣಮಾಧಾವದ್ಯತ್ರ ರಾಜಾ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಸೂತಪುತ್ರನು ಅವಳ ಬಲಗೈಯನ್ನು ಹಿಡಿದುಕೊಂಡನು. ಹಿಡಿತಕ್ಕೆ ಸಿಕ್ಕಿದ ಅವಳು ನಡುಗುತ್ತಾ ಕೀಚಕನನ್ನು ನೆಲಕ್ಕೆ ಕೆಡವಿ ರಾಜ ಯುಧಿಷ್ಠಿರನಿದ್ದ ಸಭೆಗೆ ರಕ್ಷಣೆಗಾಗಿ ಓಡಿದಳು.

04015007a ತಾಂ ಕೀಚಕಃ ಪ್ರಧಾವಂತೀಂ ಕೇಶಪಕ್ಷೇ ಪರಾಮೃಶತ್|

04015007c ಅಥೈನಾಂ ಪಶ್ಯತೋ ರಾಜ್ಞಃ ಪಾತಯಿತ್ವಾ ಪದಾವಧೀತ್||

ಓಡುತ್ತಿದ್ದ ಅವಳ ಕೇಶವನ್ನು ಕೀಚಕನು ಹಿಡಿದುಕೊಂಡು ರಾಜನು ನೋಡುತ್ತಿದ್ದಂತೆಯೇ ಅವಳನ್ನು ಬೀಳಿಸಿ ಕಾಲಿನಿಂದ ಒದೆದನು.

04015008a ತತೋ ಯೋಽಸೌ ತದಾರ್ಕೇಣ ರಾಕ್ಷಸಃ ಸಂನಿಯೋಜಿತಃ|

04015008c ಸ ಕೀಚಕಮಪೋವಾಹ ವಾತವೇಗೇನ ಭಾರತ||

ಭಾರತ! ಆಗ ಸೂರ್ಯನಿಂದ ನಿಯೋಜಿತನಾಗಿದ್ದ ರಾಕ್ಷಸನು ಭಿರುಗಾಳಿಯ ವೇಗದಿಂದ ಕೀಚಕನನ್ನು ತಳ್ಳಿದನು.

v04015009a ಸ ಪಪಾತ ತತೋ ಭೂಮೌ ರಕ್ಷೋಬಲಸಮಾಹತಃ|

04015009c ವಿಘೂರ್ಣಮಾನೋ ನಿಶ್ಚೇಷ್ಟಶ್ಚಿನ್ನಮೂಲ ಇವ ದ್ರುಮಃ||

ರಾಕ್ಷಸನ ಶಕ್ತಿಯುತ ಹೊಡೆತಕ್ಕೆ ಸಿಕ್ಕಿದ ಕೀಚಕನು ತಿರುಗುತ್ತಾ ಬೇರು ಕಡಿದ ಮರದಂತೆ ಪ್ರಜ್ಞೆತಪ್ಪಿ ನೆಲದ ಮೇಲೆ ಬಿದ್ದನು.

04015010a ತಾಂ ಚಾಸೀನೌ ದದೃಶತುರ್ಭೀಮಸೇನಯುಧಿಷ್ಠಿರೌ|

04015010c ಅಮೃಷ್ಯಮಾಣೌ ಕೃಷ್ಣಾಯಾಃ ಕೀಚಕೇನ ಪದಾ ವಧಂ||

ಅಲ್ಲಿ ಕುಳಿತಿದ್ದ ಭೀಮಸೇನ-ಯುಧಿಷ್ಠಿರರಿಬ್ಬರೂ ಕೀಚಕನು ಕೃಷ್ಣೆಯನ್ನು ಕಾಲಿನಿಂದ ಒದೆದುದನ್ನು ನೋಡಿ ಕುಪಿತರಾದರು.

04015011a ತಸ್ಯ ಭೀಮೋ ವಧಪ್ರೇಪ್ಸುಃ ಕೀಚಕಸ್ಯ ದುರಾತ್ಮನಃ|

04015011c ದಂತೈರ್ದಂತಾಂಸ್ತದಾ ರೋಷಾನ್ನಿಷ್ಪಿಪೇಷ ಮಹಾಮನಾಃ||

ಆ ಮಹಾಮನ ಭೀಮನು ಅಲ್ಲಿಯೇ ದುರಾತ್ಮ ಕೀಚಕನನ್ನು ಕೊಲ್ಲ ಬಯಸಿ ರೋಷದಿಂದ ಹಲ್ಲು ಕಡಿದನು.

04015012a ಅಥಾಂಗುಷ್ಠೇನಾವಮೃದ್ನಾದಂಗುಷ್ಠಂ ತಸ್ಯ ಧರ್ಮರಾಟ್|

04015012c ಪ್ರಬೋಧನಭಯಾದ್ರಾಜನ್ಭೀಮಸ್ಯ ಪ್ರತ್ಯಷೇಧಯತ್||

ರಾಜನ್! ಆಗ ಧರ್ಮರಾಜನು ತಮ್ಮ ಕುರಿತು ತಿಳಿದುಬಿಡುತ್ತದೆಯೋ ಎನ್ನುವ ಭಯದಿಂದ ಅವನ ಅಂಗುಷ್ಠದಿಂದ ಭೀಮನ ಅಂಗುಷ್ಠವನ್ನು ಅದುಮಿ ತಡೆದನು.

04015013a ಸಾ ಸಭಾದ್ವಾರಮಾಸಾದ್ಯ ರುದತೀ ಮತ್ಸ್ಯಮಬ್ರವೀತ್|

04015013c ಅವೇಕ್ಷಮಾಣಾ ಸುಶ್ರೋಣೀ ಪತೀಂಸ್ತಾನ್ದೀನಚೇತಸಃ||

04015014a ಆಕಾರಮಭಿರಕ್ಷಂತೀ ಪ್ರತಿಜ್ಞಾಂ ಧರ್ಮಸಂಹಿತಾಂ|

04015014c ದಹ್ಯಮಾನೇವ ರೌದ್ರೇಣ ಚಕ್ಷುಷಾ ದ್ರುಪದಾತ್ಮಜಾ||

ಆ ಸುಂದರಿ ದ್ರೌಪದಿಯು ಅಳುತ್ತಾ, ದೀನಚೇತಸರಾದ ತನ್ನ ಆ ಪತಿಗಳನ್ನು ನೋಡುತ್ತಾ, ಮಾರುವೇಷವನ್ನೂ ಧರ್ಮಸಂಹಿತ ಪ್ರತಿಜ್ಞೆಯನ್ನೂ ಕಾಪಾಡಿಕೊಳ್ಳುತ್ತಾ, ಸಭಾದ್ವಾರವನ್ನು ಸೇರಿ ರೌದ್ರಾಕಾರದ ಕಣ್ಣುಗಳಿಂದ ಮತ್ಸ್ಯನಿಗೆ ಹೇಳಿದಳು.

04015015 ದ್ರೌಪದ್ಯುವಾಚ|

04015015a ಯೇಷಾಂ ವೈರೀ ನ ಸ್ವಪಿತಿ ಪದಾ ಭೂಮಿಮುಪಸ್ಪೃಶನ್|

04015015c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್||

ದ್ರೌಪದಿಯು ಹೇಳಿದಳು: “ಭೂಮಿಯನ್ನು ಕಾಲಿನಿಂದ ಮೆಟ್ಟಿ ಯಾರ ವೈರಿಯು ನಿದ್ರಿಸಲಾರನೋ ಅವರ ಭಾರ್ಯೆಯಾದ ಮಾನಿನಿಯಾದ ನನ್ನನ್ನು ಸೂತಪುತ್ರನು ಒದೆದನಲ್ಲ!

04015016a ಯೇ ದದ್ಯುರ್ನ ಚ ಯಾಚೇಯುರ್ಬ್ರಹ್ಮಣ್ಯಾಃ ಸತ್ಯವಾದಿನಃ|

04015016c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್||

ದಾನಿಗಳೂ, ಯಾಚಿಸದವರೂ, ಬ್ರಾಹ್ಮಣಪೂಜಕರೂ, ಸತ್ಯವಾದಿಗಳೂ ಆದವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015017a ಯೇಷಾಂ ದುಂದುಭಿನಿರ್ಘೋಷೋ ಜ್ಯಾಘೋಷಃ ಶ್ರೂಯತೇಽನಿಶಂ|

04015017c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್||

ಯಾರ ದುಂದುಭಿಯ ನಿರ್ಘೋಷವೂ, ಬಿಲ್ಲಿನ ಹೆದೆಯ ಘೋಷವೂ ಸದಾ ಕೇಳಿಬರುತ್ತದೆಯೋ ಅವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015018a ಯೇ ತೇ ತೇಜಸ್ವಿನೋ ದಾಂತಾ ಬಲವಂತೋಽಭಿಮಾನಿನಃ|

04015018c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್||

ತೇಜಸ್ವಿಗಳೂ ಉದಾರಿಗಳೂ, ಬಲಶಾಲಿಗಳೂ, ಅಭಿಮಾನಿಗಳೂ ಆದವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015019a ಸರ್ವಲೋಕಮಿಮಂ ಹನ್ಯುರ್ಧರ್ಮಪಾಶಸಿತಾಸ್ತು ಯೇ|

04015019c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್||

ಯಾರು ಈ ಸಮಸ್ತ ಲೋಕವನ್ನೇ ನಾಶಮಾಡಬಲ್ಲರೋ, ಧರ್ಮಪಾಶಬದ್ಧರೋ, ಅವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತ ಪುತ್ರನು ಕಾಲಿನಿಂದ ಒದೆದನಲ್ಲ!

04015020a ಶರಣಂ ಯೇ ಪ್ರಪನ್ನಾನಾಂ ಭವಂತಿ ಶರಣಾರ್ಥಿನಾಂ|

04015020c ಚರಂತಿ ಲೋಕೇ ಪ್ರಚ್ಛನ್ನಾಃ ಕ್ವ ನು ತೇಽದ್ಯ ಮಹಾರಥಾಃ||

ಮೊರೆಹೊಕ್ಕ ಶರಣಾರ್ಥಿಗಳಿಗೆ ಆಶ್ರಯವಾಗುವ, ಲೋಕದಲ್ಲಿ ಗುಪ್ತರಾಗಿ ಸಂಚರಿಸುವ ಆ ಮಹಾರಥರು ಇಂದು ಎಲ್ಲಿ?

04015021a ಕಥಂ ತೇ ಸೂತಪುತ್ರೇಣ ವಧ್ಯಮಾನಾಂ ಪ್ರಿಯಾಂ ಸತೀಂ|

04015021c ಮರ್ಷಯಂತಿ ಯಥಾ ಕ್ಲೀಬಾ ಬಲವಂತೋಽಮಿತೌಜಸಃ||

ಪ್ರಿಯಪತ್ನಿಯನ್ನು ಸೂತಪುತ್ರನು ಒದೆಯುವುದನ್ನು ಬಲಶಾಲಿಗಳೂ, ಮಹಾತೇಜಸ್ವಿಗಳು ಆದ ಅವರು ನಪುಂಸಕರಂತೆ ಹೇಗೆ ತಾನೆ ಸಹಿಸಿಕೊಳ್ಳುತ್ತಾರೆ?

04015022a ಕ್ವ ನು ತೇಷಾಮಮರ್ಷಶ್ಚ ವೀರ್ಯಂ ತೇಜಶ್ಚ ವರ್ತತೇ|

04015022c ನ ಪರೀಪ್ಸಂತಿ ಯೇ ಭಾರ್ಯಾಂ ವಧ್ಯಮಾನಾಂ ದುರಾತ್ಮನಾ||

ದುರಾತ್ಮನಿಂದ ಒದೆಯಿಸಿಕೊಳ್ಳುತ್ತಿರುವ ಭಾರ್ಯೆಯ ಬಳಿ ಧಾವಿಸದಿರುವ ಅವರ ಕೋಪ, ಪರಾಕ್ರಮ, ತೇಜಸ್ಸು ಎಲ್ಲಿ ಹೋಯಿತು?

04015023a ಮಯಾತ್ರ ಶಕ್ಯಂ ಕಿಂ ಕರ್ತುಂ ವಿರಾಟೇ ಧರ್ಮದೂಷಣಂ|

04015023c ಯಃ ಪಶ್ಯನ್ಮಾಂ ಮರ್ಷಯತಿ ವಧ್ಯಮಾನಾಮನಾಗಸಂ||

ತಪ್ಪಿಲ್ಲದೇ ಒದೆಯಿಸಿಕೊಳ್ಳುತ್ತಿರುವ ನನ್ನನ್ನು ನೋಡಿಯೂ ಈ ಧರ್ಮದೂಷಣವನ್ನು ಸಹಿಸಿಕೊಂಡಿರುವ ವಿರಾಟನ ವಿಷಯದಲ್ಲಿ ನಾನೇನು ತಾನೇ ಮಾಡಬಲ್ಲೆ?

04015024a ನ ರಾಜನ್ರಾಜವತ್ಕಿಂ ಚಿತ್ಸಮಾಚರಸಿ ಕೀಚಕೇ|

04015024c ದಸ್ಯೂನಾಮಿವ ಧರ್ಮಸ್ತೇ ನ ಹಿ ಸಂಸದಿ ಶೋಭತೇ||

ರಾಜನ್! ಕೀಚಕನ ವಿಷಯದಲ್ಲಿ ನೀನು ರಾಜನಂತೆ ಸ್ವಲ್ಪವೂ ವರ್ತಿಸುತ್ತಿಲ್ಲ. ದಸ್ಯುಗಳದಂತಿರುವ ನಿನ್ನ ಈ ಧರ್ಮವು ಸಭೆಯಲ್ಲಿ ಶೋಭಿಸುವುದಿಲ್ಲ.

04015025a ನ ಕೀಚಕಃ ಸ್ವಧರ್ಮಸ್ಥೋ ನ ಚ ಮತ್ಸ್ಯಃ ಕಥಂ ಚನ|

04015025c ಸಭಾಸದೋಽಪ್ಯಧರ್ಮಜ್ಞಾ ಯ ಇಮಂ ಪರ್ಯುಪಾಸತೇ||

ಕೀಚಕನು ಸ್ವಧರ್ಮವನ್ನು ಅನುಸರಿಸುತ್ತಿಲ್ಲ. ಮತ್ಸ್ಯರಾಜನೂ ಯಾವಾಗಲೂ ಸ್ವಧರ್ಮವನ್ನು ಪಾಲಿಸಲಿಲ್ಲ. ಈತನನ್ನು ಸೇವಿಸುತ್ತಿರುವ ಸಭಾಸದರೂ ಧರ್ಮಜ್ಞರಲ್ಲ.

04015026a ನೋಪಾಲಭೇ ತ್ವಾಂ ನೃಪತೇ ವಿರಾಟ ಜನಸಂಸದಿ|

04015026c ನಾಹಮೇತೇನ ಯುಕ್ತಾ ವೈ ಹಂತುಂ ಮತ್ಸ್ಯ ತವಾಂತಿಕೇ|

04015026e ಸಭಾಸದಸ್ತು ಪಶ್ಯಂತು ಕೀಚಕಸ್ಯ ವ್ಯತಿಕ್ರಮಂ||

ವಿರಾಟ ರಾಜ! ಜನರ ಸಭೆಯಲ್ಲಿ ನಿನ್ನನ್ನು ನಿಂದಿಸುವುದಿಲ್ಲ. ಮತ್ಸ್ಯ! ನಿನ್ನ ಆಶ್ರಯದಲ್ಲಿದ್ದ ನಾನು ಇವನ ಹಿಂಸೆಗೊಳಗಾಗುವುದು ಯುಕ್ತವಲ್ಲ. ಕೀಚಕನ ಮಿತಿಮೀರಿದ ನಡತೆಯನ್ನು ಸಭಾಸದರೂ ನೋಡಲಿ.”

04015027 ವಿರಾಟ ಉವಾಚ|

04015027a ಪರೋಕ್ಷಂ ನಾಭಿಜಾನಾಮಿ ವಿಗ್ರಹಂ ಯುವಯೋರಹಂ|

04015027c ಅರ್ಥತತ್ತ್ವಮವಿಜ್ಞಾಯ ಕಿಂ ನು ಸ್ಯಾತ್ಕುಶಲಂ ಮಮ||

ವಿರಾಟನು ಹೇಳಿದನು: “ಪರೋಕ್ಷವಾಗಿ ನಡೆದ ನಿಮ್ಮಿಬ್ಬರ ಜಗಳವು ನನಗೆ ತಿಳಿಯದು. ವಸ್ತುಸ್ಥಿತಿಯನ್ನು ಸರಿಯಾಗಿ ತಿಳಿಯದೇ ನಾನು ಹೇಗೆ ತಾನೇ ತೀರ್ಮಾನ ನೀಡುವುದು ಉಚಿತ?””

04015028 ವೈಶಂಪಾಯನ ಉವಾಚ|

04015028a ತತಸ್ತು ಸಭ್ಯಾ ವಿಜ್ಞಾಯ ಕೃಷ್ಣಾಂ ಭೂಯೋಽಭ್ಯಪೂಜಯನ್|

04015028c ಸಾಧು ಸಾಧ್ವಿತಿ ಚಾಪ್ಯಾಹುಃ ಕೀಚಕಂ ಚ ವ್ಯಗರ್ಹಯನ್||

ವೈಶಂಪಾಯನನು ಹೇಳಿದನು: “ಬಳಿಕ ಸಭಾಸದರು ಎಲ್ಲವನ್ನೂ ತಿಳಿದು “ಸಾಧು! ಸಾಧು!” ಎಂದು ಕೃಷ್ಣೆಯನ್ನು ಹೊಗಳಿದರು ಮತ್ತು ಕೀಚಕನನ್ನು ಹಳಿದರು.

04015029 ಸಭ್ಯಾ ಊಚುಃ|

04015029a ಯಸ್ಯೇಯಂ ಚಾರುಸರ್ವಾಂಗೀ ಭಾರ್ಯಾ ಸ್ಯಾದಾಯತೇಕ್ಷಣಾ|

04015029c ಪರೋ ಲಾಭಶ್ಚ ತಸ್ಯ ಸ್ಯಾನ್ನ ಸ ಶೋಚೇತ್ಕದಾ ಚನ||

ಸಭಾಸದರು ಹೇಳಿದರು: “ಈ ಸುಂದರಿ ಸರ್ವಾಂಗೀ ಮತ್ತು ವಿಶಾಲ ಕಣ್ಣುಗಳುಳ್ಳವಳು ಯಾರ ಭಾರ್ಯೆಯೋ ಅವನಿಗೆ ಪರಮ ಲಾಭದೊರೆತು ಎಂದೂ ದುಃಖವನ್ನು ಪಡೆಯುವುದಿಲ್ಲ!””

04015030 ವೈಶಂಪಾಯನ ಉವಾಚ|

04015030a ಏವಂ ಸಂಪೂಜಯಂಸ್ತತ್ರ ಕೃಷ್ಣಾಂ ಪ್ರೇಕ್ಷ್ಯ ಸಭಾಸದಃ|

04015030c ಯುಧಿಷ್ಠಿರಸ್ಯ ಕೋಪಾತ್ತು ಲಲಾಟೇ ಸ್ವೇದ ಆಸಜತ್||

ವೈಶಂಪಾಯನನು ಹೇಳಿದನು: “ಹೀಗೆ ಸಭಾಸದರು ಕೃಷ್ಣೆಯನ್ನು ಹೊಗಳುತ್ತಿರುವುದನ್ನು ನೋಡಿದ ಯುಧಿಷ್ಠಿರನ ಹಣೆಯಲ್ಲಿ ಕೋಪದ ಬೆವರು ಇಳಿಯಿತು.

04015031a ಅಥಾಬ್ರವೀದ್ರಾಜಪುತ್ರೀಂ ಕೌರವ್ಯೋ ಮಹಿಷೀಂ ಪ್ರಿಯಾಂ|

04015031c ಗಚ್ಛ ಸೈರಂಧ್ರಿ ಮಾತ್ರ ಸ್ಥಾಃ ಸುದೇಷ್ಣಾಯಾ ನಿವೇಶನಂ||

ಆಗ ಆ ಕೌರವ್ಯನು ಪ್ರಿಯ ರಾಣಿ ರಾಜಪುತ್ರಿಗೆ ಹೇಳಿದನು: “ಸೈರಂಧ್ರಿ! ಇಲ್ಲಿ ನಿಲ್ಲಬೇಡ! ಸುದೇಷ್ಣೆಯ ಅರಮನೆಗೆ ಹೋಗು!

04015032a ಭರ್ತಾರಮನುರುಧ್ಯಂತ್ಯಃ ಕ್ಲಿಶ್ಯಂತೇ ವೀರಪತ್ನಯಃ|

04015032c ಶುಶ್ರೂಷಯಾ ಕ್ಲಿಶ್ಯಮಾನಾಃ ಪತಿಲೋಕಂ ಜಯಂತ್ಯುತ||

ವೀರಪತ್ನಿಯರು ಪತಿಯನ್ನನುಸರಿಸಿ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಕಷ್ಟದಲ್ಲಿಯೂ ಅವನ ಒಳಿತನ್ನು ಬಯಸಿ ಪತಿಯ ಕಷ್ಟಗಳನ್ನು ಗೆಲ್ಲುತ್ತಾರೆ.

04015033a ಮನ್ಯೇ ನ ಕಾಲಂ ಕ್ರೋಧಸ್ಯ ಪಶ್ಯಂತಿ ಪತಯಸ್ತವ|

04015033c ತೇನ ತ್ವಾಂ ನಾಭಿಧಾವಂತಿ ಗಂಧರ್ವಾಃ ಸೂರ್ಯವರ್ಚಸಃ||

ನಿನ್ನ ಆ ಸೂರ್ಯವರ್ಚಸ ಗಂಧರ್ವ ಗಂಡಂದಿರು ಇದು ಸಿಟ್ಟಿಗೇಳುವ ಸಮಯವಲ್ಲವೆಂದು ತಿಳಿದು ನಿನ್ನನ್ನು ರಕ್ಷಿಸಲು ಇಲ್ಲಿಗೆ ಬರಲಿಲ್ಲವೆಂದು ಭಾವಿಸುತ್ತೇನೆ.

04015034a ಅಕಾಲಜ್ಞಾಸಿ ಸೈರಂಧ್ರಿ ಶೈಲೂಷೀವ ವಿಧಾವಸಿ|

04015034c ವಿಘ್ನಂ ಕರೋಷಿ ಮತ್ಸ್ಯಾನಾಂ ದೀವ್ಯತಾಂ ರಾಜಸಂಸದಿ|

04015034e ಗಚ್ಛ ಸೈರಂಧ್ರಿ ಗಂಧರ್ವಾಃ ಕರಿಷ್ಯಂತಿ ತವ ಪ್ರಿಯಂ||

ಸೈರಂಧ್ರಿ! ನಿನಗೆ ಸಮಯ ಜ್ಞಾನವಿಲ್ಲ! ನಟಿಯಂತೆ ಇಲ್ಲಿ ಓಡಿಬಂದು ರಾಜಸಂಸದಿಯಲ್ಲಿ ಮತ್ಸ್ಯರಾಜನ ಪಗಡೆಯಾಟಕ್ಕೆ ವಿಘ್ನವನ್ನು ತಂದೊಡ್ಡುತ್ತಿದ್ದೀಯೆ! ಹೋಗು ಸೈರಂಧ್ರಿ! ಗಂಧರ್ವರು ನಿನಗೆ ಒಳ್ಳೆಯದನ್ನು ಮಾಡುತ್ತಾರೆ.”

04015035 ದ್ರೌಪದ್ಯುವಾಚ|

04015035a ಅತೀವ ತೇಷಾಂ ಘೃಣಿನಾಮರ್ಥೇಽಹಂ ಧರ್ಮಚಾರಿಣೀ|

04015035c ತಸ್ಯ ತಸ್ಯೇಹ ತೇ ವಧ್ಯಾ ಯೇಷಾಂ ಜ್ಯೇಷ್ಠೋಽಕ್ಷದೇವಿತಾ||

ದ್ರೌಪದಿಯು ಹೇಳಿದಳು: “ಅತೀವ ಕೃಪಾಳುಗಳಾದ ಅವರಿಗೋಸ್ಕರವಾಗಿಯೇ ನಾನು ಧರ್ಮಚಾರಿಣಿಯಾಗಿದ್ದೇನೆ. ಅವರಲ್ಲಿ ಹಿರಿಯನಾದವನ ಜೂಜಿನಲ್ಲಿರುವ ಪರಮಾಸಕ್ತಿಯ ಕಾರಣದಿಂದಲೇ ಅವರು ಕಷ್ಟಕ್ಕೊಳಗಾಗಿದ್ದಾರೆ.””

04015036 ವೈಶಂಪಾಯನ ಉವಾಚ|

04015036a ಇತ್ಯುಕ್ತ್ವಾ ಪ್ರಾದ್ರವತ್ಕೃಷ್ಣಾ ಸುದೇಷ್ಣಾಯಾ ನಿವೇಶನಂ|

04015036c ಕೇಶಾನ್ಮುಕ್ತ್ವಾ ತು ಸುಶ್ರೋಣೀ ಸಂರಂಭಾಲ್ಲೋಹಿತೇಕ್ಷಣಾ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಸುಶ್ರೋಣಿಯು ಮುಡಿಬಿಚ್ಚಿಕೊಂಡು ಕೋಪದಿಂದ ಕೆಂಪಾದ ಕಣ್ಣುಗಳುಳ್ಳವಳಾಗಿ ಸುದೇಷ್ಣೆಯ ಅರಮನೆಗೆ ಓಡಿದಳು.

04015037a ಶುಶುಭೇ ವದನಂ ತಸ್ಯಾ ರುದಂತ್ಯಾ ವಿರತಂ ತದಾ|

04015037c ಮೇಘಲೇಖಾವಿನಿರ್ಮುಕ್ತಂ ದಿವೀವ ಶಶಿಮಂಡಲಂ||

ಒಂದೇಸಮನೆ ಅಳುತ್ತಿದ್ದ ಅವಳ ಮುಖವು ಆಕಾಶದಲ್ಲಿ ಮೋಡಗಳಿಂದ ಬಿಡುಗಡೆಹೊಂದಿದ ಚಂದ್ರಮಂಡಲದಂತೆ ಶೋಭಿಸುತ್ತಿತ್ತು.

04015038 ಸುದೇಷ್ಣೋವಾಚ|

04015038a ಕಸ್ತ್ವಾವಧೀದ್ವರಾರೋಹೇ ಕಸ್ಮಾದ್ರೋದಿಷಿ ಶೋಭನೇ|

04015038c ಕಸ್ಯಾದ್ಯ ನ ಸುಖಂ ಭದ್ರೇ ಕೇನ ತೇ ವಿಪ್ರಿಯಂ ಕೃತಂ||

ಸುದೇಷ್ಣೆಯು ಹೇಳಿದಳು: “ವರಾರೋಹೇ! ಯಾರು ನಿನ್ನನ್ನು ಹೊಡೆದರು? ಏತಕ್ಕೆ ಅಳುತ್ತಿರುವೆ ಶೋಭನೇ? ಭದ್ರೇ! ಯಾರಿಂದ ನಿನಗೆ ಈ ದುಃಖವು ಪ್ರಾಪ್ತವಾಯಿತು? ಯಾರಿಂದ ನಿನಗೆ ಈ ಅಪ್ರಿಯವಾದುದು ನಡೆಯಿತು?”

04015039 ದ್ರೌಪದ್ಯುವಾಚ|

04015039a ಕೀಚಕೋ ಮಾವಧೀತ್ತತ್ರ ಸುರಾಹಾರೀಂ ಗತಾಂ ತವ|

04015039c ಸಭಾಯಾಂ ಪಶ್ಯತೋ ರಾಜ್ಞೋ ಯಥೈವ ವಿಜನೇ ತಥಾ||

ದ್ರೌಪದಿಯು ಹೇಳಿದಳು: “ನಿನಗೆ ಸುರೆಯನ್ನು ತರಲು ಹೋದಾಗ ಅಲ್ಲಿ ನನ್ನನ್ನು ಕೀಚಕನು ಸಭೆಯಲ್ಲಿ ರಾಜನು ನೋಡುತ್ತಿದ್ದಂತೆಯೇ ಯಾರೂ ಇಲ್ಲದೆಡೆಯಲ್ಲಿ ಹೇಗೆ ಒದೆಯುತ್ತಾರೋ ಹಾಗೆ ಒದೆದನು.”

04015040 ಸುದೇಷ್ಣೋವಾಚ|

04015040a ಘಾತಯಾಮಿ ಸುಕೇಶಾಂತೇ ಕೀಚಕಂ ಯದಿ ಮನ್ಯಸೇ|

04015040c ಯೋಽಸೌ ತ್ವಾಂ ಕಾಮಸಮ್ಮತ್ತೋ ದುರ್ಲಭಾಮಭಿಮನ್ಯತೇ||

ಸುದೇಷ್ಣೆಯು ಹೇಳಿದಳು: “ಸುಂದರ ಕೂದಲಿನವಳೇ! ನೀನು ಇಷ್ಟಪಟ್ಟರೆ ಕೀಚಕನನ್ನು ಕೊಲ್ಲಿಸುತ್ತೇನೆ. ಕಾಮದಿಂದ ಹುಚ್ಚನಾದ ನಿನ್ನನ್ನು ಪೀಡಿಸುತ್ತಿದ್ದಾನೆ.”

04015041 ದ್ರೌಪದ್ಯುವಾಚ|

04015041a ಅನ್ಯೇ ವೈ ತಂ ವಧಿಷ್ಯಂತಿ ಯೇಷಾಮಾಗಃ ಕರೋತಿ ಸಃ|

04015041c ಮನ್ಯೇ ಚಾದ್ಯೈವ ಸುವ್ಯಕ್ತಂ ಪರಲೋಕಂ ಗಮಿಷ್ಯತಿ||

ದ್ರೌಪದಿಯು ಹೇಳಿದಳು: “ಯಾರಿಗೆ ಅವನು ಅಪರಾದವನ್ನೆಸಗಿದ್ದಾನೆಯೋ ಅವರೇ ಅವನನ್ನು ವಧಿಸುತ್ತಾರೆ. ಇಂದೇ ಅವನು ಪರಲೋಕಕ್ಕೆ ಹೋಗುತ್ತಾನೆ ಎನ್ನುವುದು ಸ್ಪಷ್ಟವೆಂದು ಭಾವಿಸುತ್ತೇನೆ.””

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಪರಿಭವೇ ಪಂಚದಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಪರಿಭವದಲ್ಲಿ ಹದಿನೈದನೆಯ ಅಧ್ಯಾಯವು.

Related image

Comments are closed.