Virata Parva: Chapter 14

ವಿರಾಟ ಪರ್ವ: ಕೀಚಕವಧ ಪರ್ವ

೧೪

ದ್ರೌಪದಿಯು ಸುರಾಪಾತ್ರೆಯನ್ನು ಹಿಡಿದು ಕೀಚಕನ ಮನೆಗೆ ಹೋದುದು

ದ್ರೌಪದಿಯು ಹೋಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸಿ ಸುದೇಷ್ಣೆಯು ಅವಳನ್ನು ಪಾನೀಯವನ್ನು ತರಲು ಅವಳಿಗೇ ಸಿದ್ಧನಾಗಿ ಕಾದು ಕುಳಿತಿದ್ದ ಕೀಚಕನಲ್ಲಿಗೆ ಕಳುಹಿಸುವುದು (೧-೧೭). ದೈವದ ಶರಣು ಹೊಕ್ಕು ಸೂರ್ಯನನ್ನು ಪ್ರಾರ್ಥಿಸಿದ ದ್ರೌಪದಿಗೆ ಅವನು ಅವಳ ರಕ್ಷಣೆಗೆಂದು ಅಗೋಚರ ರಾಕ್ಷಸನೋರ್ವನನ್ನು ನೇಮಿಸುವುದು (೧೮-೨೧).

Image result for sairandhri04014001 ವೈಶಂಪಾಯನ ಉವಾಚ|

04014001a ಪ್ರತ್ಯಾಖ್ಯಾತೋ ರಾಜಪುತ್ರ್ಯಾ ಸುದೇಷ್ಣಾಂ ಕೀಚಕೋಽಬ್ರವೀತ್|

04014001c ಅಮರ್ಯಾದೇನ ಕಾಮೇನ ಘೋರೇಣಾಭಿಪರಿಪ್ಲುತಃ||

ವೈಶಂಪಾಯನನು ಹೇಳಿದನು: “ರಾಜಪುತ್ರಿ ದ್ರೌಪದಿಯಿಂದ ಈ ರೀತಿಯ ಉತ್ತರವನ್ನು ಪಡೆದ ಕೀಚಕನು ಮಿತಿಯಿಲ್ಲದ ಘೋರ ಕಾಮದಿಂದ ತುಂಬಿದವನಾಗಿ ಸುದೇಷ್ಣೆಗೆ ಹೇಳಿದನು:

04014002a ಯಥಾ ಕೈಕೇಯಿ ಸೈರಂಧ್ರ್ಯಾ ಸಮೇಯಾಂ ತದ್ವಿಧೀಯತಾಂ|

04014002c ತಾಂ ಸುದೇಷ್ಣೇ ಪರೀಪ್ಸಸ್ವ ಮಾಹಂ ಪ್ರಾಣಾನ್ಪ್ರಹಾಸಿಷಂ||

“ಕೈಕೇಯೀ! ಸುದೇಷ್ಣೇ! ನನ್ನ ಪ್ರಾಣವು ಹೋಗಬಾರದು ಎನ್ನುವುದಾದರೆ ನಾನು ಸೈರಂಧ್ರಿಯನ್ನು ಸೇರುವಂತೆ ಮಾಡು. ಅವಳು ನನ್ನನ್ನು ಬಯಸುವಂತೆ ಮಾಡು.”

04014003a ತಸ್ಯ ತಾಂ ಬಹುಶಃ ಶ್ರುತ್ವಾ ವಾಚಂ ವಿಲಪತಸ್ತದಾ|

04014003c ವಿರಾಟಮಹಿಷೀ ದೇವೀ ಕೃಪಾಂ ಚಕ್ರೇ ಮನಸ್ವಿನೀ||

ಅವನ ಆ ಅತಿಯಾದ ರಗಳೆಯ ಮಾತುಗಳನ್ನು ಕೇಳಿ, ಮನಸ್ವಿನೀ ವಿರಾಟಮಹಿಷಿ ದೇವಿಯು ಅವನ ಮೇಲೆ ಕೃಪೆದೋರಿದಳು.

04014004a ಸ್ವಮರ್ಥಮಭಿಸಂಧಾಯ ತಸ್ಯಾರ್ಥಮನುಚಿಂತ್ಯ ಚ|

04014004c ಉದ್ವೇಗಂ ಚೈವ ಕೃಷ್ಣಾಯಾಃ ಸುದೇಷ್ಣಾ ಸೂತಮಬ್ರವೀತ್||

ತನ್ನ ಹಿತವನ್ನೂ, ಅವನ ಉದ್ದೇಶವನ್ನೂ ಮತ್ತು ಕೃಷ್ಣೆಯ ಉದ್ವೇಗವನ್ನೂ ಆಲೋಚಿಸಿ ಸುದೇಷ್ಣೆಯು ಸೂತನಿಗೆ ಹೇಳಿದಳು:

04014005a ಪರ್ವಿಣೀಂ ತ್ವಂ ಸಮುದ್ದಿಷ್ಯ ಸುರಾಮನ್ನಂ ಚ ಕಾರಯ|

04014005c ತತ್ರೈನಾಂ ಪ್ರೇಷಯಿಷ್ಯಾಮಿ ಸುರಾಹಾರೀಂ ತವಾಂತಿಕಂ||

“ಹಬ್ಬದ ದಿನದಂದು ನೀನು ಮದ್ಯವನ್ನೂ ಊಟವನ್ನೂ ಸಿದ್ಧಗೊಳಿಸು. ಆಗ ಮದ್ಯವನ್ನು ತರಲು ಅವಳನ್ನು ನಿನ್ನ ಬಳಿ ಕಳುಹಿಸುತ್ತೇನೆ.

04014006a ತತ್ರ ಸಂಪ್ರೇಷಿತಾಮೇನಾಂ ವಿಜನೇ ನಿರವಗ್ರಹಾಂ|

04014006c ಸಾಂತ್ವಯೇಥಾ ಯಥಾಕಾಮಂ ಸಾಂತ್ವ್ಯಮಾನಾ ರಮೇದ್ಯದಿ||

ಅಲ್ಲಿಗೆ ಕಳುಹಲಾಗುವ ಅವಳನ್ನು ಏಕಾಂತದಲ್ಲಿ ಯಾವ ಅಡತಡೆಯೂ ಇಲ್ಲದೇ ಮನಬಂದಂತೆ ಪ್ರಲೋಭನೆಗೊಳಿಸು. ಸಾಂತ್ವನಗೊಂಡು ಅವಳು ನಿನಗೆ ಒಲಿಯಬಹುದು.”

04014007a ಕೀಚಕಸ್ತು ಗೃಹಂ ಗತ್ವಾ ಭಗಿನ್ಯಾ ವಚನಾತ್ತದಾ|

04014007c ಸುರಾಮಾಹಾರಯಾಮಾಸ ರಾಜಾರ್ಹಾಂ ಸುಪರಿಸ್ರುತಾಂ||

ಅಕ್ಕನ ಮಾತಿನಂತೆ ಕೀಚಕನಾದರೋ ಮನೆಗೆ ತೆರಳಿ ರಾಜಯೋಗ್ಯವಾದ ಚೆನ್ನಾಗಿ ಸೋಸಿದ ಮದ್ಯವನ್ನು ತರಿಸಿದನು.

04014008a ಆಜೌರಭ್ರಂ ಚ ಸುಭೃಶಂ ಬಹೂಂಶ್ಚೋಚ್ಚಾವಚಾನ್ಮೃಗಾನ್|

04014008c ಕಾರಯಾಮಾಸ ಕುಶಲೈರನ್ನಪಾನಂ ಸುಶೋಭನಂ||

ಆಡುಕುರಿಗಳ ಮತ್ತು ಬಗೆಬಗೆಯ ಪ್ರಾಣಿಗಳ ಮಾಂಸದ ಅಡುಗೆಯನ್ನು ಅನ್ನಪಾನಗಳನ್ನು ತಜ್ಞರಿಂದ ಚೆನ್ನಾಗಿ ಅಡುಗೆಮಾಡಿಸಿದನು.

04014009a ತಸ್ಮಿನ್ ಕೃತೇ ತದಾ ದೇವೀ ಕೀಚಕೇನೋಪಮಂತ್ರಿತಾ|

04014009c ಸುದೇಷ್ಣಾ ಪ್ರೇಷಯಾಮಾಸ ಸೈರಂಧ್ರೀಂ ಕೀಚಕಾಲಯಂ||

ಅದಾದ ನಂತರ ಕೀಚಕನು ಕೇಳಿಕೊಂಡಿದ್ದಂತೆ ದೇವಿ ಸುದೇಷ್ಣೆಯು ಸೈರಂಧ್ರಿಯನ್ನು ಕೀಚಕನ ಮನೆಗೆ ಕಳುಹಿಸಿದಳು.

04014010 ಸುದೇಷ್ಣೋವಾಚ|

04014010a ಉತ್ತಿಷ್ಠ ಗಚ್ಛ ಸೈರಂಧ್ರಿ ಕೀಚಕಸ್ಯ ನಿವೇಶನಂ|

04014010c ಪಾನಮಾನಯ ಕಲ್ಯಾಣಿ ಪಿಪಾಸಾ ಮಾಂ ಪ್ರಬಾಧತೇ||

ಸುದೇಷ್ಣೆಯು ಹೇಳಿದಳು: “ಏಳು ಸೈರಂಧ್ರಿ! ಕೀಚಕನ ಮನೆಗೆ ಹೋಗು. ಕಲ್ಯಾಣಿ! ಪಾನೀಯವನ್ನು ತೆಗೆದುಕೊಂಡು ಬಾ. ಬಾಯಾರಿಕೆಯು ನನ್ನನ್ನು ಕಾಡುತ್ತಿದೆ.”

04014011 ದ್ರೌಪದ್ಯುವಾಚ|

04014011a ನ ಗಚ್ಛೇಯಮಹಂ ತಸ್ಯ ರಾಜಪುತ್ರಿ ನಿವೇಶನಂ|

04014011c ತ್ವಮೇವ ರಾಜ್ಞಿ ಜಾನಾಸಿ ಯಥಾ ಸ ನಿರಪತ್ರಪಃ||

ದ್ರೌಪದಿಯು ಹೇಳಿದಳು: “ರಾಜಪುತ್ರಿ! ನಾನು ಅವನ ಮನೆಗೆ ಹೋಗಲಾರೆ. ರಾಣಿ! ಅವನು ಎಂತಹ ನಿರ್ಲಜ್ಜನೆಂದು ನಿನಗೇ ಗೊತ್ತು.

04014012a ನ ಚಾಹಮನವದ್ಯಾಂಗಿ ತವ ವೇಶ್ಮನಿ ಭಾಮಿನಿ|

04014012c ಕಾಮವೃತ್ತಾ ಭವಿಷ್ಯಾಮಿ ಪತೀನಾಂ ವ್ಯಭಿಚಾರಿಣೀ||

ಭಾಮಿನೀ! ಅನವದ್ಯಾಂಗಿ! ನಿನ್ನ ಮನೆಯಲ್ಲಿ ಕಾಮಚಾರಣಿಯೂ ಪತಿಗಳಿಗೆ ವ್ಯಭಿಚಾರಿಣಿಯೂ ಆಗುವುದಿಲ್ಲ.

04014013a ತ್ವಂ ಚೈವ ದೇವಿ ಜಾನಾಸಿ ಯಥಾ ಸ ಸಮಯಃ ಕೃತಃ|

04014013c ಪ್ರವಿಶಂತ್ಯಾ ಮಯಾ ಪೂರ್ವಂ ತವ ವೇಶ್ಮನಿ ಭಾಮಿನಿ||

ದೇವಿ! ಭಾಮಿನಿ! ಹಿಂದೆ ನಾನು ನಿನ್ನ ಮನೆಯನ್ನು ಪ್ರವೇಶಿಸುವಾಗ ಮಾಡಿಕೊಂಡ ಒಪ್ಪಂದವು ನಿನಗೆ ತಿಳಿದೇ ಇದೆ.

04014014a ಕೀಚಕಶ್ಚ ಸುಕೇಶಾಂತೇ ಮೂಢೋ ಮದನದರ್ಪಿತಃ|

04014014c ಸೋಽವಮಂಸ್ಯತಿ ಮಾಂ ದೃಷ್ಟ್ವಾ ನ ಯಾಸ್ಯೇ ತತ್ರ ಶೋಭನೇ||

ಸುಂದರ ಕೂದಲಿನವಳೇ! ಮೂಢ ಕೀಚಕನಾದರೋ ಮದನದರ್ಪಿತ. ಅವನು ನನ್ನನ್ನು ಅಪಮಾನಗೊಳಿಸುತ್ತಾನೆ. ಶೋಭನೇ! ನಾನು ಅಲ್ಲಿಗೆ ಹೋಗುವುದಿಲ್ಲ.

04014015a ಸಂತಿ ಬಹ್ವ್ಯಸ್ತವ ಪ್ರೇಷ್ಯಾ ರಾಜಪುತ್ರಿ ವಶಾನುಗಾಃ|

04014015c ಅನ್ಯಾಂ ಪ್ರೇಷಯ ಭದ್ರಂ ತೇ ಸ ಹಿ ಮಾಮವಮಂಸ್ಯತೇ||

ರಾಜಪುತ್ರಿ! ನಿನಗೆ ಬಹಳ ಮಂದಿ ದಾಸಿಯರಿದ್ದಾರೆ. ಬೇರೆ ಯಾರನ್ನಾದರೂ ಕಳುಹಿಸು. ನಿನಗೆ ಒಳಿತಾಗಲಿ! ಅವನು ನನ್ನನ್ನು ಅಪಮಾನಗೊಳಿಸುತ್ತಾನೆ.”

04014016 ಸುದೇಷ್ಣೋವಾಚ|

04014016a ನೈವ ತ್ವಾಂ ಜಾತು ಹಿಂಸ್ಯಾತ್ಸ ಇತಃ ಸಂಪ್ರೇಷಿತಾಂ ಮಯಾ|

ಸುದೇಷ್ಣೆಯು ಹೇಳಿದಳು: “ಇಲ್ಲಿಂದ ನಾನು ಕಳುಹಿಸುತ್ತಿರುವ ನಿನ್ನನ್ನು ಅವನು ಹಿಂಸಿಸುವುದೇ ಇಲ್ಲ.””

04014017 ವೈಶಂಪಾಯನ ಉವಾಚ|

04014017a ಇತ್ಯಸ್ಯಾಃ ಪ್ರದದೌ ಕಾಂಸ್ಯಂ ಸಪಿಧಾನಂ ಹಿರಣ್ಮಯಂ|

04014017c ಸಾ ಶಂಕಮಾನಾ ರುದತೀ ದೈವಂ ಶರಣಮೀಯುಷೀ||

04014017e ಪ್ರಾತಿಷ್ಠತ ಸುರಾಹಾರೀ ಕೀಚಕಸ್ಯ ನಿವೇಶನಂ||

ವೈಶಂಪಾಯನನು ಹೇಳಿದನು: “ಇದನ್ನು ಹೇಳಿ ಅವಳಿಗೆ ಮುಚ್ಚಳವುಳ್ಳ ಚಿನ್ನದ ಪಾನಪಾತ್ರೆಯನ್ನು ಕೊಟ್ಟಳು. ಶಂಕಿತಳಾದ ಅವಳು ಅಳುತ್ತಾ ದೈವದ ಶರಣು ಹೊಕ್ಕು ಮದ್ಯವನ್ನು ತರುವುದಕ್ಕಾಗಿ ಕೀಚಕನ ಮನೆಗೆ ಹೊರಟಳು.

Image result for sairandhri04014018 ದ್ರೌಪದ್ಯುವಾಚ|

04014018a ಯಥಾಹಮನ್ಯಂ ಪಾಂಡುಭ್ಯೋ ನಾಭಿಜಾನಾಮಿ ಕಂ ಚನ|

04014018c ತೇನ ಸತ್ಯೇನ ಮಾಂ ಪ್ರಾಪ್ತಾಂ ಕೀಚಕೋ ಮಾ ವಶೇ ಕೃಥಾಃ||

ದ್ರೌಪದಿಯು ಹೇಳಿದಳು: “ಪಾಂಡವರನ್ನು ಹೊರತು ಇತರ ಯಾರನ್ನೂ ನಾನು ಅರಿತವಳಲ್ಲ ಎನ್ನುವುದು ಸತ್ಯವಾಗಿದ್ದರೆ ಅಲ್ಲಿಗೆ ಹೋಗುವ ನನ್ನನ್ನು ಕೀಚಕನು ವಶಪಡೆಸಿಕೊಳ್ಳದಿರಲಿ.””

04014019 ವೈಶಂಪಾಯನ ಉವಾಚ|

04014019a ಉಪಾತಿಷ್ಠತ ಸಾ ಸೂರ್ಯಂ ಮುಹೂರ್ತಮಬಲಾ ತತಃ|

04014019c  ಸ ತಸ್ಯಾಸ್ತನುಮಧ್ಯಾಯಾಃ ಸರ್ವಂ ಸೂರ್ಯೋಽವಬುದ್ಧವಾನ್||

ವೈಶಂಪಾಯನನು ಹೇಳಿದನು: “ಆಗ ಆ ಅಬಲೆಯು ಒಂದುಕ್ಷಣ ಸೂರ್ಯನನ್ನು ಧ್ಯಾನಿಸಿದಳು. ತಕ್ಷಣವೇ ಸೂರ್ಯನು ಆ ತನುಮಧ್ಯಳ ಕುರಿತು ಎಲ್ಲವನ್ನೂ ತಿಳಿದುಕೊಂಡನು.

04014020a ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥಮಾದಿಶತ್|

04014020c ತಚ್ಚೈನಾಂ ನಾಜಹಾತ್ತತ್ರ ಸರ್ವಾವಸ್ಥಾಸ್ವನಿಂದಿತಾಂ||

ಆಗ ಅವನು ಅವಳನ್ನು ಅಗೋಚರವಾಗಿ ರಕ್ಷಿಸುವಂತೆ ಒಬ್ಬ ರಾಕ್ಷಸನಿಗೆ ಆಜ್ಞಾಪಿಸಿದನು. ಆ ದೋಷರಹಿತೆಯನ್ನು ಅವನು ಎಲ್ಲ ಸಂದರ್ಭಗಳಲ್ಲಿ ಎಡೆಬಿಡದೆ ನೋಡಿಕೊಳ್ಳುತ್ತಿದ್ದನು.

04014021a ತಾಂ ಮೃಗೀಮಿವ ವಿತ್ರಸ್ತಾಂ ದೃಷ್ಟ್ವಾ ಕೃಷ್ಣಾಂ ಸಮೀಪಗಾಂ|

04014021c ಉದತಿಷ್ಠನ್ಮುದಾ ಸೂತೋ ನಾವಂ ಲಬ್ಧ್ವೇವ ಪಾರಗಃ||

ಹೆದರಿದ ಹರಿಣಿಯಂತೆ ಸಮೀಪಕ್ಕೆ ಬಂದ ಕೃಷ್ಣೆಯನ್ನು ಕಂಡ ಆ ಸೂತನು ಸಮುದ್ರದ ದಡವನ್ನು ಸೇರಬಯಸುವವನಿಗೆ ನಾವೆ ಸಿಕ್ಕಿ ಸಂತೋಷಗೊಳ್ಳುವಂತೆ ಮೇಲೆದ್ದನು.

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಸುರಾಹರಣೇ ಚತುರ್ದಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಸುರಾಹರಣದಲ್ಲಿ ಹದಿನಾಲ್ಕನೆಯ ಅಧ್ಯಾಯವು.

Related image

Comments are closed.