Virata Parva: Chapter 13

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ: ಕೀಚಕವಧ ಪರ್ವ

೧೩

ಕೀಚಕನು ದ್ರೌಪದಿಯನ್ನು ನೋಡಿ ಬಯಸಿದುದು

ದ್ರೌಪದಿಯನ್ನು ನೋಡಿ ಮೋಹಿತನಾದ ಕೀಚಕನು ಅಕ್ಕ ಸುದೇಷ್ಣೆಯಲ್ಲಿ ಅವಳ್ಯಾರೆಂದು ವಿಚಾರಿಸುವುದು (೧-೯). ಕೀಚಕನು ದ್ರೌಪದಿಯನ್ನು ಪುಸಲಾಯಿಸಿದುದು (೧೦-೧೨) ಮತ್ತು ದ್ರೌಪದಿಯು ಅವನನ್ನು ಎಚ್ಚರಿಸುವುದು (೧೩-೨೧).

Image result for kichaka04013001 ವೈಶಂಪಾಯನ ಉವಾಚ|

04013001a ವಸಮಾನೇಷು ಪಾರ್ಥೇಷು ಮತ್ಸ್ಯಸ್ಯ ನಗರೇ ತದಾ|

04013001c ಮಹಾರಥೇಷು ಚನ್ನೇಷು ಮಾಸಾ ದಶ ಸಮತ್ಯಯುಃ||

ವೈಶಂಪಾಯನನು ಹೇಳಿದನು: “ಮಹಾರಥಿ ಪಾರ್ಥರು ಮತ್ಯ್ಸನಗರದಲ್ಲಿ ವೇಷಮರೆಸಿ ವಾಸಿಸುತ್ತಿರಲು ಹತ್ತು ತಿಂಗಳುಗಳು ಕಳೆದವು.

04013002a ಯಾಜ್ಞಸೇನೀ ಸುದೇಷ್ಣಾಂ ತು ಶುಶ್ರೂಷಂತೀ ವಿಶಾಂ ಪತೇ|

04013002c ಅವಸತ್ಪರಿಚಾರಾರ್ಹಾ ಸುದುಃಖಂ ಜನಮೇಜಯ||

ರಾಜ ಜನಮೇಜಯ! ಪರಿಚಾರ ಯೋಗ್ಯಳಾದ ಯಾಜ್ಞಸೇನಿ ದ್ರೌಪದಿಯು ಸುದೇಷ್ಣೆಯ ಶುಶ್ರೂಷೆ ಮಾಡುತ್ತಾ ಬಹುದುಃಖದಲ್ಲಿ ವಾಸಿಸುತ್ತಿದ್ದಳು.

04013003a ತಥಾ ಚರಂತೀಂ ಪಾಂಚಾಲೀಂ ಸುದೇಷ್ಣಾಯಾ ನಿವೇಶನೇ|

04013003c ಸೇನಾಪತಿರ್ವಿರಾಟಸ್ಯ ದದರ್ಶ ಜಲಜಾನನಾಂ||

ಹೀಗೆ ಸುದೇಷ್ಣೆಯ ಅರಮನೆಯಲ್ಲಿ ಸುಳಿದಾಡುತ್ತಿದ್ದ ಕಮಲ ಮುಖಿ ಪಾಂಚಾಲಿಯನ್ನು ವಿರಾಟನ ಸೇನಾಪತಿಯು ನೋಡಿದನು.

04013004a ತಾಂ ದೃಷ್ಟ್ವಾ ದೇವಗರ್ಭಾಭಾಂ ಚರಂತೀಂ ದೇವತಾಮಿವ|

04013004c ಕೀಚಕಃ ಕಾಮಯಾಮಾಸ ಕಾಮಬಾಣಪ್ರಪೀಡಿತಃ||

ದೇವಕನ್ಯೆಯಂತಿದ್ದ, ದೇವತೆಯಂತೆ ಸುಳಿದಾಡುತ್ತಿದ್ದ ಅವಳನ್ನು ನೋಡಿ ಕಾಮಬಾಣಪೀಡಿತನಾದ ಕೀಚಕನು ಅವಳನ್ನು ಕಾಮಿಸಿದನು.

04013005a ಸ ತು ಕಾಮಾಗ್ನಿಸಂತಪ್ತಃ ಸುದೇಷ್ಣಾಮಭಿಗಮ್ಯ ವೈ|

04013005c ಪ್ರಹಸನ್ನಿವ ಸೇನಾನೀರಿದಂ ವಚನಮಬ್ರವೀತ್||

ಕಾಮಾಗ್ನಿಸಂತಪ್ತನಾದ ಆ ಸೇನಾನಿಯು ಸುದೇಷ್ಣೆಯ ಬಳಿ ಹೋಗಿ ನಗುತ್ತಾ ಹೇಳಿದನು:

04013006a ನೇಯಂ ಪುರಾ ಜಾತು ಮಯೇಹ ದೃಷ್ಟಾ|

        ರಾಜ್ಞೋ ವಿರಾಟಸ್ಯ ನಿವೇಶನೇ ಶುಭಾ|

04013006c ರೂಪೇಣ ಚೋನ್ಮಾದಯತೀವ ಮಾಂ ಭೃಶಂ|

        ಗಂಧೇನ ಜಾತಾ ಮದಿರೇವ ಭಾಮಿನೀ||

“ಇಲ್ಲಿ ವಿರಾಟರಾಜನ ಮನೆಯಲ್ಲಿ ಈ ಮಂಗಳೆಯನ್ನು ನಾನು ಹಿಂದೆಂದೂ ಕಂಡಿಲ್ಲ. ಈಗತಾನೇ ತಯಾರಾದ ಮದ್ಯವು ತನ್ನ ಗಂಧದಿಂದಲೇ ಉನ್ಮಾದಿಸುವಂತೆ ಈ ಭಾಮಿನಿಯು ತನ್ನ ರೂಪದಿಂದಲೇ ವಿಶೇಷವಾಗಿ ನನ್ನನ್ನು ಉನ್ಮಾದಗೊಳಿಸುತ್ತಿದ್ದಾಳೆ.

04013007a ಕಾ ದೇವರೂಪಾ ಹೃದಯಂಗಮಾ ಶುಭೇ|

        ಆಚಕ್ಷ್ವ ಮೇ ಕಾ ಚ ಕುತಶ್ಚ ಶೋಭನಾ|

04013007c ಚಿತ್ತಂ ಹಿ ನಿರ್ಮಥ್ಯ ಕರೋತಿ ಮಾಂ ವಶೇ|

        ನ ಚಾನ್ಯದತ್ರೌಷಧಮದ್ಯ ಮೇ ಮತಂ||

ಶುಭೇ! ಈ ದೇವರೂಪಿ ಹೃದಯಂಗಮೆ ಯಾರು? ಈ ಶೋಭನೆಯು ಯಾರು ಮತ್ತು ಎಲ್ಲಿಂದ ಬಂದವಳು ಎನ್ನುವುದನ್ನು ನನಗೆ ಹೇಳು. ನನ್ನ ಚಿತ್ತವನ್ನು ಕಡೆದು ನನ್ನನ್ನು ವಶಪಡಿಸಿಕೊಳ್ಳುತ್ತಿದ್ದಾಳೆ. ಇದಕ್ಕೆ ಇವಳಲ್ಲದೇ ಬೇರೆ ಔಷಧವೇ ಇಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.

04013008a ಅಹೋ ತವೇಯಂ ಪರಿಚಾರಿಕಾ ಶುಭಾ|

        ಪ್ರತ್ಯಗ್ರರೂಪಾ ಪ್ರತಿಭಾತಿ ಮಾಮಿಯಂ|

04013008c ಅಯುಕ್ತರೂಪಂ ಹಿ ಕರೋತಿ ಕರ್ಮ ತೇ|

        ಪ್ರಶಾಸ್ತು ಮಾಂ ಯಚ್ಚ ಮಮಾಸ್ತಿ ಕಿಂ ಚನ||

ಅಹಾ! ಶುಭೆಯಾದ ನಿನ್ನ ಈ ಪರಿಚಾರಿಕೆ ನನಗೆ ನೂತನರೂಪಿಣಿಯಾಗಿ ತೋರುತ್ತಿದ್ದಾಳೆ. ಇಂಥವಳು ನಿನ್ನ ಕೆಲಸಗಾರ್ತಿಯಾಗಿರುವುದು ಸರಿಯಲ್ಲ. ಇವಳು ನನ್ನನ್ನೂ ನನ್ನದೆಲ್ಲವನ್ನೂ ಆಳಲಿ.

04013009a ಪ್ರಭೂತನಾಗಾಶ್ವರಥಂ ಮಹಾಧನಂ|

        ಸಮೃದ್ಧಿಯುಕ್ತಂ ಬಹುಪಾನಭೋಜನಂ|

04013009c ಮನೋಹರಂ ಕಾಂಚನಚಿತ್ರಭೂಷಣಂ|

        ಗೃಹಂ ಮಹಚ್ಚೋಭಯತಾಮಿಯಂ ಮಮ||

ಹೇರಳವಾದ ಆನೆ, ಕುದುರೆ, ತೇರುಗಳನ್ನುಳ್ಳ; ಮಹಾಧನವುಳ್ಳ, ಸಮೃದ್ಧವಾದ ಪಾನ-ಭೋಜನ ವಿಪುಲತೆಯುಳ್ಳ, ಮನೋಹರ ಚಿನ್ನದ ಚಿತ್ರಗಳಿಂದ ಭೂಷಿತವಾದ ನನ್ನ ದೊಡ್ಡ ಅರಮನೆಯನ್ನು ಇವಳು ಬೆಳಗಲಿ.”

04013010a ತತಃ ಸುದೇಷ್ಣಾಮನುಮಂತ್ರ್ಯ ಕೀಚಕಸ್|

        ತತಃ ಸಮಭ್ಯೇತ್ಯ ನರಾಧಿಪಾತ್ಮಜಾಂ|

04013010c ಉವಾಚ ಕೃಷ್ಣಾಮಭಿಸಾಂತ್ವಯಂಸ್ತದಾ|

        ಮೃಗೇಂದ್ರಕನ್ಯಾಮಿವ ಜಂಬುಕೋ ವನೇ||

ಕೀಚಕನು ಸುದೇಷ್ಣೆಯೊಡನೆ ಆಲೋಚಿಸಿದ ನಂತರ ರಾಜಪುತ್ರಿ ದ್ರೌಪದಿಯ ಬಳಿಸಾರಿ ವನದಲ್ಲಿ ಸಿಂಹದ ಕನ್ಯೆಯನ್ನು ನರಿಯು ಪುಸಲಾಯಿಸುವಂತೆ ಪುಸಲಾಯಿಸುತ್ತಾ ಹೇಳಿದನು:

04013011a ಇದಂ ಚ ರೂಪಂ ಪ್ರಥಮಂ ಚ ತೇ ವಯೋ|

        ನಿರರ್ಥಕಂ ಕೇವಲಮದ್ಯ ಭಾಮಿನಿ|

04013011c ಅಧಾರ್ಯಮಾಣಾ ಸ್ರಗಿವೋತ್ತಮಾ ಯಥಾ|

        ನ ಶೋಭಸೇ ಸುಂದರಿ ಶೋಭನಾ ಸತೀ||

“ಭಾಮಿನಿ! ನಿನ್ನ ಈ ರೂಪ ಮತ್ತು ಈ ಯೌವನ ಇಂದು ಕೇವಲ ನಿರರ್ಥಕವಾಗಿವೆ. ಧರಿಸದೇ ಇರುವ ಸುಂದರವಾದ ಮಾಲೆಯಂತೆ ಶೋಭನಾ! ಸತೀ! ನೀನು ಶೋಭಿಸುತ್ತಿದ್ದೀಯೆ.

04013012a ತ್ಯಜಾಮಿ ದಾರಾನ್ಮಮ ಯೇ ಪುರಾತನಾ|

        ಭವಂತು ದಾಸ್ಯಸ್ತವ ಚಾರುಹಾಸಿನಿ|

04013012c ಅಹಂ ಚ ತೇ ಸುಂದರಿ ದಾಸವತ್ಸ್ಥಿತಃ|

        ಸದಾ ಭವಿಷ್ಯೇ ವಶಗೋ ವರಾನನೇ||

ಚಾರುಹಾಸಿನೀ! ನನ್ನ ಮೊದಲಿನ ಪತ್ನಿಯರನ್ನು ತೊರೆದು ಅವರನ್ನು ನಿನ್ನ ದಾಸ್ಯದಲ್ಲಿರುಸುತ್ತೇನೆ. ವರಾನನೇ! ನಾನೂ ಕೂಡ ನಿನ್ನ ದಾಸನಾಗಿದ್ದು ಯಾವಾಗಲೂ ನಿನ್ನ ವಶನಾಗಿರುತ್ತೇನೆ.”

04013013 ದ್ರೌಪದ್ಯುವಾಚ|

04013013a ಅಪ್ರಾರ್ಥನೀಯಾಮಿಹ ಮಾಂ ಸೂತಪುತ್ರಾಭಿಮನ್ಯಸೇ|

04013013c ವಿಹೀನವರ್ಣಾಂ ಸೈರಂಧ್ರೀಂ ಬೀಭತ್ಸಾಂ ಕೇಶಕಾರಿಕಾಂ||

ದ್ರೌಪದಿಯು ಹೇಳಿದಳು: “ಸೂತಪುತ್ರ! ಕೀಳುಜಾತಿಯ, ಜುಗುಪ್ಸೆಯುಂಟುಮಾಡುವ, ಮುಡಿಮಾಡುವ ಸೈರಂಧ್ರಿ, ಅಪ್ರಾರ್ಥನೀಯ ನನ್ನನ್ನು ನೀನು ಬಯಸುತ್ತಿದ್ದೀಯೆ! 

04013014a ಪರದಾರಾಸ್ಮಿ ಭದ್ರಂ ತೇ ನ ಯುಕ್ತಂ ತ್ವಯಿ ಸಾಂಪ್ರತಂ|

04013014c ದಯಿತಾಃ ಪ್ರಾಣಿನಾಂ ದಾರಾ ಧರ್ಮಂ ಸಮನುಚಿಂತಯ||

ನಾನು ಪರ ಪತ್ನಿ. ನಿನಗೆ ಮಂಗಳವಾಗಲಿ! ಇದು ನಿನಗೆ ಯುಕ್ತವಲ್ಲ. ಮನುಷ್ಯರಿಗೆ ಅವರ ಪತ್ನಿಯರೇ ಪ್ರಿಯರು ಎನ್ನುವ ಧರ್ಮದ ಕುರಿತು ಚಿಂತಿಸು.

04013015a ಪರದಾರೇ ನ ತೇ ಬುದ್ಧಿರ್ಜಾತು ಕಾರ್ಯಾ ಕಥಂ ಚನ|

04013015c ವಿವರ್ಜನಂ ಹ್ಯಕಾರ್ಯಾಣಾಮೇತತ್ಸತ್ಪುರುಷವ್ರತಂ||

ನಿನ್ನ ಬುದ್ಧಿಯು ಪರಸತಿಯರಲ್ಲಿ ಎಂದೂ ತೊಡಗದಿರಲಿ. ಮಾಡಬಾರದ ಕೆಲಸದಿಂದ ದೂರವಿರುವುದೇ ಸತ್ಪುರುಷರ ವ್ರತ.

04013016a ಮಿಥ್ಯಾಭಿಗೃಧ್ನೋ ಹಿ ನರಃ ಪಾಪಾತ್ಮಾ ಮೋಹಮಾಸ್ಥಿತಃ|

04013016c ಅಯಶಃ ಪ್ರಾಪ್ನುಯಾದ್ಘೋರಂ ಸುಮಹತ್ಪ್ರಾಪ್ನುಯಾದ್ಭಯಂ||

ಅನುಚಿತ ಕಾಮಿಯೂ, ಪಾಪಾತ್ಮನೂ, ಮೋಹಮಗ್ನನೂ ಆದವನು ಘೋರ ಅಪಕೀರ್ತಿಯನ್ನು ಪಡೆಯುತ್ತಾನೆ ಮತ್ತು ಮಹಾಭಯಕ್ಕೆ ಗುರಿಯಾಗುತ್ತಾನೆ.

04013017a ಮಾ ಸೂತಪುತ್ರ ಹೃಷ್ಯಸ್ವ ಮಾದ್ಯ ತ್ಯಕ್ಷ್ಯಸಿ ಜೀವಿತಂ|

04013017c ದುರ್ಲಭಾಮಭಿಮನ್ವಾನೋ ಮಾಂ ವೀರೈರಭಿರಕ್ಷಿತಾಂ||

ಸೂತಪುತ್ರ! ಹಿಗ್ಗಬೇಡ! ಅಭಿಮಾನಿ ವೀರರಿಂದ ರಕ್ಷಿತಳಾದ ದುರ್ಲಭಳಾದ ನನ್ನನ್ನು ಬಯಸಿ ನೀನು ಇಂದು ಜೀವವನ್ನು ತ್ಯಜಿಸಬೇಡ.

04013018a ನ ಚಾಪ್ಯಹಂ ತ್ವಯಾ ಶಕ್ಯಾ ಗಂಧರ್ವಾಃ ಪತಯೋ ಮಮ|

04013018c ತೇ ತ್ವಾಂ ನಿಹನ್ಯುಃ ಕುಪಿತಾಃ ಸಾಧ್ವಲಂ ಮಾ ವ್ಯನೀನಶಃ||

ನಾನು ನಿನಗೆ ದೊರಕುವವಳಲ್ಲ. ಗಂಧರ್ವರು ನನ್ನ ಗಂಡಂದಿರು. ಕುಪಿತರಾದ ಅವರು ನಿನ್ನನ್ನು ಕೊಲ್ಲುತ್ತಾರೆ. ಸಾಕು. ಸುಮ್ಮನೆ ನಾಶಹೊಂದಬೇಡ.

04013019a ಅಶಕ್ಯರೂಪೈಃ ಪುರುಷೈರಧ್ವಾನಂ ಗಂತುಮಿಚ್ಛಸಿ|

04013019c ಯಥಾ ನಿಶ್ಚೇತನೋ ಬಾಲಃ ಕೂಲಸ್ಥಃ ಕೂಲಮುತ್ತರಂ|

04013019e ತರ್ತುಮಿಚ್ಛತಿ ಮಂದಾತ್ಮಾ ತಥಾ ತ್ವಂ ಕರ್ತುಮಿಚ್ಛಸಿ||

ಮಾನವರಿಗೆ ಅಸಾಧ್ಯವಾದ ಮಾರ್ಗದಲ್ಲಿ ಹೋಗಬಯಸುತ್ತಿರುವೆ. ಮಂದಾತ್ಮನೂ ನಿರ್ಬಲನೂ ಆದ ಬಾಲಕನು ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟಿಹೋಗಲು ಬಯಸುವಂತೆ ನೀನೂ ಬಯಸುತ್ತಿದ್ದೀಯೆ.

04013020a ಅಂತರ್ಮಹೀಂ ವಾ ಯದಿ ವೋರ್ಧ್ವಮುತ್ಪತೇಃ|

        ಸಮುದ್ರಪಾರಂ ಯದಿ ವಾ ಪ್ರಧಾವಸಿ|

04013020c ತಥಾಪಿ ತೇಷಾಂ ನ ವಿಮೋಕ್ಷಮರ್ಹಸಿ|

        ಪ್ರಮಾಥಿನೋ ದೇವಸುತಾ ಹಿ ಮೇ ವರಾಃ||

ನೆಲದೊಳಗನ್ನು ಹೊಕ್ಕರೂ, ಆಕಾಶಕ್ಕೆ ಹಾರಿದರೂ, ಸಮುದ್ರದ ಆಚೆ ದಡಕ್ಕೆ ಓಡಿದರೂ ಅವರಿಂದ ನೀನು ತಪ್ಪಿಸಿಕೊಳ್ಳಲಾರೆ. ನನ್ನ ಪತಿಗಳು ಶತ್ರುಗಳನ್ನು ನಾಶಪಡಿಸುವ ದೇವಸುತರು.

04013021a ತ್ವಂ ಕಾಲರಾತ್ರೀಮಿವ ಕಶ್ಚಿದಾತುರಃ|

        ಕಿಂ ಮಾಂ ದೃಢಂ ಪ್ರಾರ್ಥಯಸೇಽದ್ಯ ಕೀಚಕ|

04013021c ಕಿಂ ಮಾತುರಮ್ಕೇ ಶಯಿತೋ ಯಥಾ ಶಿಶುಶ್|

        ಚಂದ್ರಂ ಜಿಘೃಕ್ಷುರಿವ ಮನ್ಯಸೇ ಹಿ ಮಾಂ||

ಕೀಚಕ! ರೋಗಿಯೋರ್ವನು ಕಾಳರಾತ್ರಿಯನ್ನು ಹೇಗೋ ಹಾಗೆ ನೀನು ನನ್ನನ್ನು ಇಂದು ಏಕೆ ಒತ್ತಾಯಿಸಿ ಬಯಸುತ್ತಿರುವೆ? ತಾಯಿಯ ತೊಡೆಯಮೇಲೆ ಮಲಗಿದ್ದ ಮಗುವು ಚಂದ್ರನನ್ನು ಹಿಡಿಯಬಯಸುವಂತೆ ನನ್ನನ್ನೇಕೆ ಬಯಸುತ್ತಿರುವೆ?”

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕಕೃಷ್ಣಾಸಂವಾದೇ ತ್ರಯೋದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕಕೃಷ್ಣಸಂವಾದದಲ್ಲಿ ಹದಿಮೂರನೆಯ ಅಧ್ಯಾಯವು.

Image result for indian motifs

Comments are closed.