Udyoga Parva: Chapter 92

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೨

ಕುರುಸಭೆಗೆ ಶ್ರೀಕೃಷ್ಣನ ಆಗಮನ

ಮರುದಿನ ಬೆಳಿಗ್ಗೆ ಕೃಷ್ಣನು ಪ್ರಾತಃವಿಧಿಗಳನ್ನು ಪೂರೈಸಲು, ಕುರುಸಭೆಯಲ್ಲಿ ಎಲ್ಲರೂ ಸೇರಿರಲು, ದುರ್ಯೋಧನ-ಶಕುನಿಯರು ವಿದುರನ ಮನೆಗೆ ಬಂದು ಕೃಷ್ಣನನ್ನು ಕರೆದುಕೊಂಡು ಹೋದುದು, ಸಾತ್ಯಕಿ-ಕೃತವರ್ಮರು ಅವನನ್ನು ಹಿಂಬಾಲಿಸಿದಿದು (೧-೧೭). ರಾಜಬೀದಿಯಲ್ಲಿ ಮುಂದುವರೆದು ಕೃಷ್ಣನು ಕುರುಸಭೆಯನ್ನು ಪ್ರವೇಶಿಸಿ ಅಂತರಿಕ್ಷದಲ್ಲಿ ನಿಂತಿದ್ದ ಋಷಿಗಳನ್ನು ನೋಡಿ ಋಷಿಗಳಿಗೆ ಮೊದಲು ಆಸನಗಳನ್ನು ಕೊಡುವಂತೆ ಭೀಷ್ಮನಿಗೆ ಸೂಚಿಸಿದುದು (೧೮-೪೩). ಎಲ್ಲರೂ ಕುಳಿತುಕೊಂಡ ನಂತರ ಕೃಷ್ಣನು ಕುಳಿತುಕೊಂಡಿದುದು (೪೪-೫೩).

05092001 ವೈಶಂಪಾಯನ ಉವಾಚ|

05092001a ತಥಾ ಕಥಯತೋರೇವ ತಯೋರ್ಬುದ್ಧಿಮತೋಸ್ತದಾ|

05092001c ಶಿವಾ ನಕ್ಷತ್ರಸಂಪನ್ನಾ ಸಾ ವ್ಯತೀಯಾಯ ಶರ್ವರೀ||

ವೈಶಂಪಾಯನನು ಹೇಳಿದನು: “ಹೀಗೆ ಆ ಬುದ್ಧಿಮತರಿಬ್ಬರ ನಡುವೆ ಮಾತುಕಥೆಯು ನಡೆಯಲು ಮಂಗಳ ನಕ್ಷತ್ರಸಂಪನ್ನ ರಾತ್ರಿಯು ಕಳೆಯಿತು.

05092002a ಧರ್ಮಾರ್ಥಕಾಮಯುಕ್ತಾಶ್ಚ ವಿಚಿತ್ರಾರ್ಥಪದಾಕ್ಷರಾಃ|

05092002c ಶೃಣ್ವತೋ ವಿವಿಧಾ ವಾಚೋ ವಿದುರಸ್ಯ ಮಹಾತ್ಮನಃ||

05092003a ಕಥಾಭಿರನುರೂಪಾಭಿಃ ಕೃಷ್ಣಸ್ಯಾಮಿತತೇಜಸಃ|

05092003c ಅಕಾಮಸ್ಯೇವ ಕೃಷ್ಣಸ್ಯ ಸಾ ವ್ಯತೀಯಾಯ ಶರ್ವರೀ||

ಧರ್ಮಾರ್ಥಕಾಮಯುಕ್ತವಾದ, ವಿಚಿತ್ರಾರ್ಥಪದಾಕ್ಷರಗಳಿಂದ ಕೂಡಿದ ವಿವಿಧ ಮಾತುಗಳನ್ನು ಕೇಳುತ್ತಿದ್ದ ಮಹಾತ್ಮ ವಿದುರನಿಗೆ ಮತ್ತು ಅದಕ್ಕೆ ಸಮನಾದ ಮಾತುಗಳನ್ನು ಕೇಳುತ್ತಿದ್ದ ಅಮಿತ ತೇಜಸ್ವಿ ಕೃಷ್ಣನಿಗೆ ಇಷ್ಟವಾಗದೇ ಇದ್ದರೂ ಆ ರಾತ್ರಿಯು ಕಳೆದು ಹೋಯಿತು.

05092004a ತತಸ್ತು ಸ್ವರಸಂಪನ್ನಾ ಬಹವಃ ಸೂತಮಾಗಧಾಃ|

05092004c ಶಂಖದುಂದುಭಿನಿರ್ಘೋಷೈಃ ಕೇಶವಂ ಪ್ರತ್ಯಬೋಧಯನ್||

ಆಗ ಸ್ವರಸಂಪನ್ನರಾದ ಬಹುಮಂದಿ ಸೂತಮಾಗಧರು ಶಂಖದುಂದುಭಿಗಳ ನಿರ್ಘೋಷಗಳಿಂದ ಕೇಶವನನ್ನು ಎಚ್ಚರಿಸಿದರು.

05092005a ತತ ಉತ್ಥಾಯ ದಾಶಾರ್ಹ ಋಷಭಃ ಸರ್ವಸಾತ್ವತಾಂ|

05092005c ಸರ್ವಮಾವಶ್ಯಕಂ ಚಕ್ರೇ ಪ್ರಾತಃಕಾರ್ಯಂ ಜನಾರ್ದನಃ||

ಆಗ ದಾಶಾರ್ಹ, ಸರ್ವಸಾತ್ವತರ ಋಷಭ, ಜನಾರ್ದನನು ಎದ್ದು ಪ್ರಾತಃಕಾರ್ಯದಲ್ಲಿ ಅವಶ್ಯಕವಾದುದೆಲ್ಲವನ್ನೂ ಮಾಡಿ ಮುಗಿಸಿದನು.

05092006a ಕೃತೋದಕಾರ್ಯಜಪ್ಯಃ ಸ ಹುತಾಗ್ನಿಃ ಸಮಲಂಕೃತಃ|

05092006c ತತ ಆದಿತ್ಯಮುದ್ಯಂತಮುಪಾತಿಷ್ಠತ ಮಾಧವಃ||

ಅವನು ಸಮಲಂಕೃತನಾಗಿ ಉದಕಕಾರ್ಯಗಳನ್ನು ಪೂರೈಸಿ, ಜಪಿಸಿ, ಅಗ್ನಿಯಲ್ಲಿ ಆಹುತಿಯನ್ನಿತ್ತು ಆದಿತ್ಯನನ್ನು ಉಪಾಸಿಸಿದನು.

05092007a ಅಥ ದುರ್ಯೋಧನಃ ಕೃಷ್ಣಂ ಶಕುನಿಶ್ಚಾಪಿ ಸೌಬಲಃ|

05092007c ಸಂಧ್ಯಾಂ ತಿಷ್ಠಂತಮಭ್ಯೇತ್ಯ ದಾಶಾರ್ಹಮಪರಾಜಿತಂ||

ಅಪರಾಜಿತ ದಾಶಾರ್ಹ ಕೃಷ್ಣನು ಸಂಧ್ಯಾವಂದನೆಯಲ್ಲಿ ನಿರತನಾಗಿರಲು ದುರ್ಯೋಧನ ಮತ್ತು ಸೌಬಲ ಶಕುನಿಯರು ಬಂದು ಭೇಟಿಮಾಡಿದರು.

05092008a ಆಚಕ್ಷೇತಾಂ ತು ಕೃಷ್ಣಸ್ಯ ಧೃತರಾಷ್ಟ್ರಂ ಸಭಾಗತಂ|

05092008c ಕುರೂಂಶ್ಚ ಭೀಷ್ಮಪ್ರಮುಖಾನ್ರಾಜ್ಞಾಃ ಸರ್ವಾಂಶ್ಚ ಪಾರ್ಥಿವಾನ್||

ಅವರು ಧೃತರಾಷ್ಟ್ರ, ಭೀಷ್ಮಪ್ರಮುಖ ಕುರುಗಳು ಮತ್ತು ಎಲ್ಲ ಪಾರ್ಥಿವರೂ ರಾಜರೂ ಸಭೆಗೆ ಬಂದಿರುವುದನ್ನು ಕೃಷ್ಣನಿಗೆ ವರದಿಮಾಡಿದರು.

05092009a ತ್ವಾಮರ್ಥಯಂತೇ ಗೋವಿಂದ ದಿವಿ ಶಕ್ರಮಿವಾಮರಾಃ|

05092009c ತಾವಭ್ಯನಂದದ್ ಗೋವಿಂದಃ ಸಾಮ್ನಾ ಪರಮವಲ್ಗುನಾ||

“ಗೋವಿಂದ! ದಿವಿಯಲ್ಲಿ ಅಮರರು ಶಕ್ರನನ್ನು ಹೇಗೋ ಹಾಗೆ ನಿನ್ನ ಬರವನ್ನು ಕಾಯುತ್ತಿದ್ದಾರೆ” ಎನ್ನಲು ಗೋವಿಂದನು ಅವರನ್ನು ಸಾಮದಿಂದ ಪರಮ ಪ್ರೀತಿಯಿಂದ ಅಭಿನಂದಿಸಿದನು.

05092010a ತತೋ ವಿಮಲ ಆದಿತ್ಯೇ ಬ್ರಾಹ್ಮಣೇಭ್ಯೋ ಜನಾರ್ದನಃ|

05092010c ದದೌ ಹಿರಣ್ಯಂ ವಾಸಾಂಸಿ ಗಾಶ್ಚಾಶ್ವಾಂಶ್ಚ ಪರಂತಪಃ||

ಆದಿತ್ಯನು ಸ್ವಲ್ಪ ಮೇಲೆ ಬರಲು ಪರಂತಪ ಜನಾರ್ದನನು ಬ್ರಾಹ್ಮಣರಿಗೆ ಹಿರಣ್ಯ, ವಸ್ತ್ರಗಳು, ಮತ್ತು ಗೋವುಗಳನ್ನು ದಾನವನ್ನಾಗಿತ್ತನು.

05092011a ವಿಸೃಷ್ಟವಂತಂ ರತ್ನಾನಿ ದಾಶಾರ್ಹಮಪರಾಜಿತಂ|

05092011c ತಿಷ್ಠಂತಮುಪಸಂಗಮ್ಯ ವವಂದೇ ಸಾರಥಿಸ್ತದಾ||

ರತ್ನಗಳನ್ನು ಹಂಚಿದ ನಂತರ ಅಪರಾಜಿತ ದಾಶಾರ್ಹನು ನಿಂತುಕೊಳ್ಳಲು ಸಾರಥಿಯು ಬಳಿಬಂದು ವಂದಿಸಿದನು.

05092012a ತಮುಪಸ್ಥಿತಮಾಜ್ಞಾಯ ರಥಂ ದಿವ್ಯಂ ಮಹಾಮನಾಃ|

05092012c ಮಹಾಭ್ರಘನನಿರ್ಘೋಷಂ ಸರ್ವರತ್ನವಿಭೂಷಿತಂ||

ಆ ಮಹಾಮನಸ್ವಿಯು ಮಹಾಮೋಡದಂತೆ ಘೋಷಿಸುವ, ಸರ್ವರತ್ನವಿಭೂಷಿತವಾದ ದಿವ್ಯ ರಥವನ್ನು ತರಲು ಆಜ್ಞಾಪಿಸಿದನು.

05092013a ಅಗ್ನಿಂ ಪ್ರದಕ್ಷಿಣಂ ಕೃತ್ವಾ ಬ್ರಾಹ್ಮಣಾಂಶ್ಚ ಜನಾರ್ದನಃ|

05092013c ಕೌಸ್ತುಭಂ ಮಣಿಮಾಮುಚ್ಯ ಶ್ರಿಯಾ ಪರಮಯಾ ಜ್ವಲನ್||

05092014a ಕುರುಭಿಃ ಸಂವೃತಃ ಕೃಷ್ಣೋ ವೃಷ್ಣಿಭಿಶ್ಚಾಭಿರಕ್ಷಿತಃ|

05092014c ಆತಿಷ್ಠತ ರಥಂ ಶೌರಿಃ ಸರ್ವಯಾದವನಂದನಃ||

ಅಗ್ನಿ ಮತ್ತು ಬ್ರಾಹ್ಮಣರಿಗೆ ಪ್ರದಕ್ಷಿಣೆ ಮಾಡಿ, ಪರಮ ಶ್ರೀಯಿಂದ ಬೆಳಗುತ್ತಿದ್ದ ಕೌಸ್ತುಭ ಮಣಿಯನ್ನು ಧರಿಸಿ, ಕುರುಗಳಿಂದ ಸಂವೃತನಾಗಿ, ವೃಷ್ಣಿಗಳಿಂದ ರಕ್ಷಿತನಾಗಿ ಜನಾರ್ದನ, ಕೃಷ್ಣ, ಶೌರಿ, ಸರ್ವಯಾದವನಂದನನು ರಥವನ್ನೇರಿದನು.

05092015a ಅನ್ವಾರುರೋಹ ದಾಶಾರ್ಹಂ ವಿದುರಃ ಸರ್ವಧರ್ಮವಿತ್|

05092015c ಸರ್ವಪ್ರಾಣಭೃತಾಂ ಶ್ರೇಷ್ಠಂ ಸರ್ವಧರ್ಮಭೃತಾಂ ವರಂ||

ಸರ್ವಧರ್ಮವಿದು ವಿದುರನು ರಥವನ್ನೇರಿ ಸರ್ವಪ್ರಾಣಭೃತರಲ್ಲಿ ಶ್ರೇಷ್ಠನಾದ, ಸರ್ವಧರ್ಮಭೃತರಲ್ಲಿ ಶ್ರೇಷ್ಠನಾದ ದಾಶಾರ್ಹನನ್ನು ಹಿಂಬಾಲಿಸಿದನು.

05092016a ತತೋ ದುರ್ಯೋಧನಃ ಕೃಷ್ಣಂ ಶಕುನಿಶ್ಚಾಪಿ ಸೌಬಲಃ|

05092016c ದ್ವಿತೀಯೇನ ರಥೇನೈನಮನ್ವಯಾತಾಂ ಪರಂತಪಂ||

ಆಗ ದುರ್ಯೋಧನ ಮತ್ತು ಸೌಬಲ ಶಕುನಿಯರೂ ಕೂಡ ಎರಡನೆಯ ರಥದಲ್ಲಿ ಪರಂತಪನನ್ನು ಹಿಂಬಾಲಿಸಿದರು.

05092017a ಸಾತ್ಯಕಿಃ ಕೃತವರ್ಮಾ ಚ ವೃಷ್ಣೀನಾಂ ಚ ಮಹಾರಥಾಃ|

05092017c ಪೃಷ್ಠತೋಽನುಯಯುಃ ಕೃಷ್ಣಂ ರಥೈರಶ್ವೈರ್ಗಜೈರಪಿ||

ವೃಷ್ಣಿಗಳ ಮಹಾರಥರಾದ ಸಾತ್ಯಕಿ-ಕೃತವರ್ಮರು ರಥ, ಕುದುರೆ ಆನೆಗಳೊಂದಿಗೆ ಕೃಷ್ಣನ ಹಿಂದೆ ಹಿಂಬಾಲಿಸಿ ಹೋದರು.

05092018a ತೇಷಾಂ ಹೇಮಪರಿಷ್ಕಾರಾ ಯುಕ್ತಾಃ ಪರಮವಾಜಿಭಿಃ|

05092018c ಗಚ್ಚತಾಂ ಘೋಷಿಣಶ್ಚಿತ್ರಾಶ್ಚಾರು ಬಭ್ರಾಜಿರೇ ರಥಾಃ||

ಉತ್ತಮ ಕುದುರೆಗಳನ್ನು ಕಟ್ಟಿದ, ಬಂಗಾರದಿಂದ ಮಾಡಲ್ಪಟ್ಟ ಅವರ ರಥಗಳು ಹೋಗುತ್ತಿರುವಾಗ ಅವುಗಳಿಗೆ ಕಟ್ಟಿದ್ದ ಬಣ್ಣದ ಸುಂದರ ಗಂಟೆಗಳು ಬಡಿದು ಘೋಷಿಸಿದವು.

05092019a ಸಮ್ಮೃಷ್ಟಸಂಸಿಕ್ತರಜಃ ಪ್ರತಿಪೇದೇ ಮಹಾಪಥಂ|

05092019c ರಾಜರ್ಷಿಚರಿತಂ ಕಾಲೇ ಕೃಷ್ಣೋ ಧೀಮಾಂ ಶ್ರಿಯಾ ಜ್ವಲನ್||

ಸ್ವಲ್ಪವೇ ಸಮಯದಲ್ಲಿ ಧೀಮಾನ್ ಕೃಷ್ಣನು ಶ್ರೀಯಿಂದ ಬೆಳಗುತ್ತಾ, ಗುಡಿಸಿ, ನೀರುಸಿಂಪಡಿಸಿ ಸಿದ್ಧಪಡಿಸಿದ, ರಾಜರ್ಷಿಗಳು ನಡೆದ ಮಹಾಪಥದ ಮೇಲೆ ಬಂದನು.

05092020a ತತಃ ಪ್ರಯಾತೇ ದಾಶಾರ್ಹೇ ಪ್ರಾವಾದ್ಯಂತೈಕಪುಷ್ಕರಾಃ|

05092020c ಶಂಖಾಶ್ಚ ದಧ್ಮಿರೇ ತತ್ರ ವಾದ್ಯಾನ್ಯನ್ಯಾನಿ ಯಾನಿ ಚ||

ದಾಶಾರ್ಹನು ಮುಂದುವರೆಯುತ್ತಿರಲು ಶಂಖಗಳನ್ನು ಊದಿದರು, ಭೇರಿಗಳನ್ನು ಬಡಿದರು ಮತ್ತು ಅನ್ಯ ವಾದ್ಯಗಳನ್ನು ನುಡಿಸಿದರು.

05092021a ಪ್ರವೀರಾಃ ಸರ್ವಲೋಕಸ್ಯ ಯುವಾನಃ ಸಿಂಹವಿಕ್ರಮಾಃ|

05092021c ಪರಿವಾರ್ಯ ರಥಂ ಶೌರೇರಗಚ್ಚಂತ ಪರಂತಪಾಃ||

ಹೋಗುತ್ತಿರುವ ಶೌರಿಯ ರಥವನ್ನು ಸರ್ವಲೋಕ ಪ್ರವೀರ, ಸಿಂಹವಿಕ್ರಮಿ, ಪರಂತಪ ಯುವಕರು ಸುತ್ತುವರೆದಿದ್ದರು.

05092022a ತತೋಽನ್ಯೇ ಬಹುಸಾಹಸ್ರಾ ವಿಚಿತ್ರಾದ್ಭುತವಾಸಸಃ|

05092022c ಅಸಿಪ್ರಾಸಾಯುಧಧರಾಃ ಕೃಷ್ಣಸ್ಯಾಸನ್ಪುರಃಸರಾಃ||

ವಿಚಿತ್ರ ಮತ್ತು ಅದ್ಭುತವಸ್ತ್ರಗಳನ್ನು ಧರಿಸಿದ, ಖಡ್ಗ-ಪ್ರಾಸ ಮೊದಲಾದ ಆಯುಧಗಳನ್ನು ಹಿಡಿದ ಬಹುಸಹಸ್ರ ಸಂಖ್ಯೆಯಲ್ಲಿ ಇನ್ನೂ ಇತರರು ಕೃಷ್ಣನ ಮುಂದೆ ನಡೆದಿದ್ದರು.

05092023a ಗಜಾಃ ಪರಹ್ಶತಾಸ್ತತ್ರ ವರಾಶ್ಚಾಶ್ವಾಃ ಸಹಸ್ರಶಃ|

05092023c ಪ್ರಯಾಂತಮನ್ವಯುರ್ವೀರಂ ದಾಶಾರ್ಹಮಪರಾಜಿತಂ||

ಮುಂದುವರೆಯುತ್ತಿದ್ದ ಆ ಅಪರಾಜಿತ ವೀರ ದಾಶಾರ್ಹನನ್ನು ನೂರಕ್ಕೂ ಅಧಿಕ ಆನೆಗಳು, ಸಹಸ್ರಾರು ಶ್ರೇಷ್ಠ ಕುದುರೆಗಳು ಹಿಂಬಾಲಿಸಿದವು.

05092024a ಪುರಂ ಕುರೂಣಾಂ ಸಂವೃತ್ತಂ ದ್ರಷ್ಟುಕಾಮಂ ಜನಾರ್ದನಂ|

05092024c ಸವೃದ್ಧಬಾಲಂ ಸಸ್ತ್ರೀಕಂ ರಥ್ಯಾಗತಮರಿಂದಮಂ||

ಜನಾರ್ದನನನ್ನು ನೋಡಲು, ವೃದ್ಧ-ಬಾಲಕ-ಸ್ತ್ರೀಯರೊಂದಿಗೆ ಕುರುಗಳ ಪುರವಿಡೀ ದಾರಿಯಲ್ಲಿ ಬಂದು ನೆರೆದಿತ್ತು.

05092025a ವೇದಿಕಾಪಾಶ್ರಿತಾಭಿಶ್ಚ ಸಮಾಕ್ರಾಂತಾನ್ಯನೇಕಶಃ|

05092025c ಪ್ರಚಲಂತೀವ ಭಾರೇಣ ಯೋಷಿದ್ಭಿರ್ಭವನಾನ್ಯುತ||

ಮನೆಯ ಮಹಡಿಗಳು ಅನೇಕ ಸಂಖ್ಯೆಯ ಜನರಿಗೆ ಆಶ್ರಯವನ್ನಿತ್ತು, ಅವರ ಭಾರದಿಂದ ತೂಗುತ್ತಿವೆಯೋ ಎಂದು ತೋರುತ್ತಿದ್ದವು.

05092026a ಸಂಪೂಜ್ಯಮಾನಃ ಕುರುಭಿಃ ಸಂಶೃಣ್ವನ್ವಿವಿಧಾಃ ಕಥಾಃ|

05092026c ಯಥಾರ್ಹಂ ಪ್ರತಿಸತ್ಕುರ್ವನ್ಪ್ರೇಕ್ಷಮಾಣಃ ಶನೈರ್ಯಯೌ||

ಕುರುಗಳು ಗೌರವಿಸುತ್ತಿರಲು, ವಿವಿಧ ಮಾತುಗಳನ್ನು ಕೇಳುತ್ತಾ, ಯಥಾರ್ಹವಾಗಿ ಪ್ರತಿಗೌರವಿಸುತ್ತಾ, ಎಲ್ಲೆಡೆ ನೋಡುತ್ತಾ, ಅವನು ಮೆಲ್ಲಗೆ ಪ್ರಯಾಣಿಸಿದನು.

05092027a ತತಃ ಸಭಾಂ ಸಮಾಸಾದ್ಯ ಕೇಶವಸ್ಯಾನುಯಾಯಿನಃ|

05092027c ಸಶಂಖೈರ್ವೇಣುನಿರ್ಘೋಷೈರ್ದಿಶಃ ಸರ್ವಾ ವ್ಯನಾದಯನ್||

ಆಗ ಸಭೆಯನ್ನು ಸಮೀಪಿಸಲು ಕೇಶವನ ಅನುಯಾಯಿಗಳು ಶಂಖ-ವೇಣುಗಳ ನಿರ್ಘೋಷದಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸಿದರು.

05092028a ತತಃ ಸಾ ಸಮಿತಿಃ ಸರ್ವಾ ರಾಜ್ಞಾಮಮಿತತೇಜಸಾಂ|

05092028c ಸಂಪ್ರಾಕಂಪತ ಹರ್ಷೇಣ ಕೃಷ್ಣಾಗಮನಕಾಂಕ್ಷಯಾ||

ಕೃಷ್ಣನ ಆಗಮನವನ್ನು ಕಾಯುತ್ತಿದ್ದ ಆ ಎಲ್ಲ ಅಮಿತತೇಜಸ್ವಿ ರಾಜರ ಸಭೆಯು ಹರ್ಷದಿಂದ ನಡುಗಿತು.

05092029a ತತೋಽಭ್ಯಾಶಗತೇ ಕೃಷ್ಣೇ ಸಮಹೃಷ್ಯನ್ನರಾಧಿಪಾಃ|

05092029c ಶ್ರುತ್ವಾ ತಂ ರಥನಿರ್ಘೋಷಂ ಪರ್ಜನ್ಯನಿನದೋಪಮಂ||

ಮೋಡದಂತೆ ಮೊಳಗುತ್ತಿದ್ದ ಅವನ ರಥನಿರ್ಘೋಷವನ್ನು ಕೇಳಿ, ಕೃಷ್ಣನು ಬಂದನೆಂದು, ನರಾಧಿಪರು ಪರಮ ಹರ್ಷಿತರಾದರು.

05092030a ಆಸಾದ್ಯ ತು ಸಭಾದ್ವಾರಮೃಷಭಃ ಸರ್ವಸಾತ್ವತಾಂ|

05092030c ಅವತೀರ್ಯ ರಥಾಚ್ಚೌರಿಃ ಕೈಲಾಸಶಿಖರೋಪಮಾತ್||

ಸರ್ವಸಾತ್ವತರ ವೃಷಭ ಶೌರಿಯು ಕೈಲಾಸಶಿಖರೋಪಮ ರಥದಿಂದಿಳಿದು ಸಭಾದ್ವಾರವನ್ನು ತಲುಪಿದನು.

05092031a ನಗಮೇಘಪ್ರತೀಕಾಶಾಂ ಜ್ವಲಂತೀಮಿವ ತೇಜಸಾ|

05092031c ಮಹೇಂದ್ರಸದನಪ್ರಖ್ಯಾಂ ಪ್ರವಿವೇಶ ಸಭಾಂ ತತಃ||

ಆಗ ಅವನು ಪರ್ವತದಂತೆ ಅಥವಾ ಬೃಹತ್ ಮೋಡದಂತೆ ತೋರುತ್ತಿದ್ದ, ತೇಜಸ್ಸಿನಿಂದ ಉರಿಯುತ್ತಿದೆಯೋ ಎಂದು ತೋರುತ್ತಿದ್ದ, ಇಂದ್ರನ ಸದನದಂತಿದ್ದ ಆ ಸಭೆಯನ್ನು ಪ್ರವೇಶಿಸಿದನು.

05092032a ಪಾಣೌ ಗೃಹೀತ್ವಾ ವಿದುರಂ ಸಾತ್ಯಕಿಂ ಚ ಮಹಾಯಶಾಃ|

05092032c ಜ್ಯೋತೀಂಷ್ಯಾದಿತ್ಯವದ್ರಾಜನ್ಕುರೂನ್ಪ್ರಚ್ಚಾದಯಂ ಶ್ರಿಯಾ||

ರಾಜನ್! ಮಹಾಯಶ ವಿದುರ-ಸಾತ್ಯಕಿಯರ ಕೈಹಿಡಿದು ಅವನು ಸೂರ್ಯನು ನಕ್ಷತ್ರಗಳನ್ನು ಮೀರಿ ಮಿರುಗಿ ಅವರ ತೇಜಸ್ಸನ್ನು ಮುಸುಕುವಂತೆ ತನ್ನ ಶ್ರೀಯಿಂದ ಕುರುಗಳನ್ನು ಮುಸುಕಿದನು.

05092033a ಅಗ್ರತೋ ವಾಸುದೇವಸ್ಯ ಕರ್ಣದುರ್ಯೋಧನಾವುಭೌ|

05092033c ವೃಷ್ಣಯಃ ಕೃತವರ್ಮಾ ಚ ಆಸನ್ಕೃಷ್ಣಸ್ಯ ಪೃಷ್ಠತಃ||

ವಾಸುದೇವನ ಮುಂದೆ ಕರ್ಣ-ದುರ್ಯೋಧನರಿಬ್ಬರೂ, ಕೃಷ್ಣನ ಹಿಂದೆ ಕೃತವರ್ಮ ವೃಷ್ಣಿಗಳು ಇದ್ದರು.

05092034a ಧೃತರಾಷ್ಟ್ರಂ ಪುರಸ್ಕೃತ್ಯ ಭೀಷ್ಮದ್ರೋಣಾದಯಸ್ತತಃ|

05092034c ಆಸನೇಭ್ಯೋಽಚಲನ್ಸರ್ವೇ ಪೂಜಯಂತೋ ಜನಾರ್ದನಂ||

ಧೃತರಾಷ್ಟ್ರನೇ ಮೊದಲಾಗಿ ಭೀಷ್ಮ-ದ್ರೋಣಾದಿಗಳು ಎಲ್ಲರೂ ಆಸನಗಳಿಂದ ಮೇಲೆದ್ದು ಜನಾರ್ದನನನ್ನು ಗೌರವಿಸಿದರು.

05092035a ಅಭ್ಯಾಗಚ್ಚತಿ ದಾಶಾರ್ಹೇ ಪ್ರಜ್ಞಾಚಕ್ಷುರ್ಮಹಾಮನಾಃ|

05092035c ಸಹೈವ ಭೀಷ್ಮದ್ರೋಣಾಭ್ಯಾಮುದತಿಷ್ಠನ್ಮಹಾಯಶಾಃ||

ದಾಶಾರ್ಹನು ಆಗಮಿಸುತ್ತಲೇ ಪ್ರಜ್ಞಾಚಕ್ಷುವು ಮಹಾಮನಸ್ಕ, ಮಹಾಯಶ ಭೀಷ್ಮ-ದ್ರೋಣಾದಿಗಳೊಡನೆ ಥಟ್ಟನೇ ಮೇಲೆದ್ದು ನಿಂತನು.

05092036a ಉತ್ತಿಷ್ಠತಿ ಮಹಾರಾಜೇ ಧೃತರಾಷ್ಟ್ರೇ ಜನೇಶ್ವರೇ|

05092036c ತಾನಿ ರಾಜಸಹಸ್ರಾಣಿ ಸಮುತ್ತಸ್ಥುಃ ಸಮಂತತಃ||

ಮಹಾರಾಜ ಜನೇಶ್ವರ ಧೃತರಾಷ್ಟ್ರನು ಎದ್ದು ನಿಲ್ಲಲು ಅಲ್ಲಿ ಸೇರಿದ್ದ ಸಹಸ್ರಾರು ರಾಜರುಗಳೂ ಮೇಲೆದ್ದು ನಿಂತರು.

05092037a ಆಸನಂ ಸರ್ವತೋಭದ್ರಂ ಜಾಂಬೂನದಪರಿಷ್ಕೃತಂ|

05092037c ಕೃಷ್ಣಾರ್ಥೇ ಕಲ್ಪಿತಂ ತತ್ರ ಧೃತರಾಷ್ಟ್ರಸ್ಯ ಶಾಸನಾತ್||

ಧೃತರಾಷ್ಟ್ರನ ಶಾಸನದಂತೆ ಕೃಷ್ಣನಿಗಾಗಿ ಅಲ್ಲಿ ಸರ್ವತೋಭದ್ರವಾದ, ಬಂಗಾರದಿಂದ ಪರಿಷ್ಕರಿಸಲ್ಪಟ್ಟ ಆಸನವನ್ನು ಕಲ್ಪಿಸಲಾಗಿತ್ತು.

05092038a ಸ್ಮಯಮಾನಸ್ತು ರಾಜಾನಂ ಭೀಷ್ಮದ್ರೋಣೌ ಚ ಮಾಧವಃ|

05092038c ಅಭ್ಯಭಾಷತ ಧರ್ಮಾತ್ಮಾ ರಾಜ್ಞಾಶ್ಚಾನ್ಯಾನ್ಯಥಾವಯಃ||

05092039a ತತ್ರ ಕೇಶವಮಾನರ್ಚುಃ ಸಮ್ಯಗಭ್ಯಾಗತಂ ಸಭಾಂ|

05092039c ರಾಜಾನಃ ಪಾರ್ಥಿವಾಃ ಸರ್ವೇ ಕುರವಶ್ಚ ಜನಾರ್ದನಂ||

ಆಗ ಧರ್ಮಾತ್ಮ ಮಾಧವನು ಮುಗುಳ್ನಕ್ಕು ರಾಜನನ್ನು, ಭೀಷ್ಮ-ದ್ರೋಣರನ್ನು, ಇತರ ರಾಜರನ್ನೂ ವಯಸ್ಸಿಗೆ ತಕ್ಕಂತೆ ಮಾತನಾಡಿಸಿದನು. ಸಭೆಗೆ ಬಂದಿದ್ದ ಕೇಶವ ಜನಾರ್ದನನನ್ನು ಎಲ್ಲ ಕುರುಗಳೂ, ರಾಜ ಪಾರ್ಥಿವರೂ ಅರ್ಚಿಸಿದರು.

05092040a ತತ್ರ ತಿಷ್ಠನ್ಸ ದಾಶಾರ್ಹೋ ರಾಜಮಧ್ಯೇ ಪರಂತಪಃ|

05092040c ಅಪಶ್ಯದಂತರಿಕ್ಷಸ್ಥಾನೃಷೀನ್ಪರಪುರಂಜಯಃ||

ಅಲ್ಲಿ ರಾಜರ ಮಧ್ಯೆ ನಿಂತು ಪರಪುರಂಜಯ ಪರಂತಪ ದಾಶಾರ್ಹನು ಅಂತರಿಕ್ಷದಲ್ಲಿ ನಿಂತಿದ್ದ ಋಷಿಗಳನ್ನು ನೋಡಿದನು.

05092041a ತತಸ್ತಾನಭಿಸಂಪ್ರೇಕ್ಷ್ಯ ನಾರದಪ್ರಮುಖಾನೃಷೀನ್|

05092041c ಅಭ್ಯಭಾಷತ ದಾಶಾರ್ಹೋ ಭೀಷ್ಮಂ ಶಾಂತನವಂ ಶನೈಃ||

ನಾರದಪ್ರಮುಖ ಆ ಋಷಿಗಳನ್ನು ನೋಡಿ ದಾಶಾರ್ಹನು ಶಾಂತನವ ಭೀಷ್ಮನಿಗೆ ಮೆಲ್ಲನೇ ಹೇಳಿದನು:

05092042a ಪಾರ್ಥಿವೀಂ ಸಮಿತಿಂ ದ್ರಷ್ಟುಮೃಷಯೋಽಭ್ಯಾಗತಾ ನೃಪ|

05092042c ನಿಮಂತ್ರ್ಯಂತಾಮಾಸನೈಶ್ಚ ಸತ್ಕಾರೇಣ ಚ ಭೂಯಸಾ||

“ನೃಪ! ಈ ಪಾರ್ಥಿವರ ಸಭೆಯನ್ನು ನೋಡಲು ಋಷಿಗಳು ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಿ ಆಸನಗಳನಿತ್ತು ಸತ್ಕರಿಸಬೇಕು.

05092043a ನೈತೇಷ್ವನುಪವಿಷ್ಟೇಷು ಶಕ್ಯಂ ಕೇನ ಚಿದಾಸಿತುಂ|

05092043c ಪೂಜಾ ಪ್ರಯುಜ್ಯತಾಮಾಶು ಮುನೀನಾಂ ಭಾವಿತಾತ್ಮನಾಂ||

ಅವರು ಕುಳಿತುಕೊಳ್ಳದೇ ಇಲ್ಲಿರುವ ಯಾರೂ ಕುಳಿತುಕೊಳ್ಳಲಾರರು. ಆದುದರಿಂದ ಈ ಭಾವಿತಾತ್ಮ ಮುನಿಗಳ ಪೂಜೆಯು ಶೀಘ್ರವಾಗಿ ನಡೆಯಲಿ.”

05092044a ಋಷೀಂ ಶಾಂತನವೋ ದೃಷ್ಟ್ವಾ ಸಭಾದ್ವಾರಮುಪಸ್ಥಿತಾನ್|

05092044c ತ್ವರಮಾಣಸ್ತತೋ ಭೃತ್ಯಾನಾಸನಾನೀತ್ಯಚೋದಯತ್||

ಸಭಾದ್ವಾರದಲ್ಲಿ ನಿಂತಿದ್ದ ಋಷಿಗಳನ್ನು ನೋಡಿ ಶಾಂತನವನು ಅವರಿಗೆ ಬೇಗ ಆಸನಗಳನ್ನು ತರುವಂತೆ ಸೇವಕರಿಗೆ ಆಜ್ಞಾಪಿಸಿದನು.

05092045a ಆಸನಾನ್ಯಥ ಮೃಷ್ಟಾನಿ ಮಹಾಂತಿ ವಿಪುಲಾನಿ ಚ|

05092045c ಮಣಿಕಾಂಚನಚಿತ್ರಾಣಿ ಸಮಾಜಹ್ರುಸ್ತತಸ್ತತಃ||

ಕೂಡಲೆ ಮಣಿಕಾಂಚನಗಳಿಂದ ಅಲಂಕರಿಸಲ್ಪಟ್ಟ, ಹೇರಳವಾದ ದೊಡ್ಡ ದೊಡ್ಡ ಆಸನಗಳನ್ನು ತರಲಾಯಿತು.

05092046a ತೇಷು ತತ್ರೋಪವಿಷ್ಟೇಷು ಗೃಹೀತಾರ್ಘೇಷು ಭಾರತ|

05092046c ನಿಷಸಾದಾಸನೇ ಕೃಷ್ಣೋ ರಾಜಾನಶ್ಚ ಯಥಾಸನಂ||

ಅವರು ಅಲ್ಲಿ ಕುಳಿತುಕೊಂಡು ಅರ್ಘ್ಯಗಳನ್ನು ಸ್ವೀಕರಿಸಿದ ನಂತರ ಕೃಷ್ಣ ಮತ್ತು ರಾಜರು ಆಸನಗಳನ್ನು ಗ್ರಹಿಸಿದರು.

05092047a ದುಃಶಾಸನಃ ಸಾತ್ಯಕಯೇ ದದಾವಾಸನಮುತ್ತಮಂ|

05092047c ವಿವಿಂಶತಿರ್ದದೌ ಪೀಠಂ ಕಾಂಚನಂ ಕೃತವರ್ಮಣೇ||

ದುಃಶಾಸನನು ಸಾತ್ಯಕಿಗೆ ಉತ್ತಮ ಆಸನವನ್ನು ನೀಡಿದನು. ವಿವಿಂಶತಿಯು ಕೃತವರ್ಮನಿಗೆ ಕಾಂಚನ ಪೀಠವನ್ನಿತ್ತನು.

05092048a ಅವಿದೂರೇಽಥ ಕೃಷ್ಣಸ್ಯ ಕರ್ಣದುರ್ಯೋಧನಾವುಭೌ|

05092048c ಏಕಾಸನೇ ಮಹಾತ್ಮಾನೌ ನಿಷೀದತುರಮರ್ಷಣೌ||

ಕೃಷ್ಣನ ಪಕ್ಕದಲ್ಲಿಯೇ ಒಂದೇ ಪೀಠದಲ್ಲಿ ಮಹಾತ್ಮ, ದುಷ್ಟ ಕರ್ಣ-ದುರ್ಯೋಧನರಿಬ್ಬರು ಒಟ್ಟಿಗೇ ಕುಳಿತುಕೊಂಡರು.

05092049a ಗಾಂಧಾರರಾಜಃ ಶಕುನಿರ್ಗಾಂಧಾರೈರಭಿರಕ್ಷಿತಃ|

05092049c ನಿಷಸಾದಾಸನೇ ರಾಜಾ ಸಹಪುತ್ರೋ ವಿಶಾಂ ಪತೇ||

ವಿಶಾಂಪತೇ! ಗಾಂಧಾರರಾಜ ಶಕುನಿಯು ಗಾಂಧಾರರಿಂದ ರಕ್ಷಿತನಾಗಿ ಪುತ್ರನೊಂದಿಗೆ ಅಲ್ಲಿ ಆಸನದಲ್ಲಿ ಕುಳಿತಿದ್ದನು.

05092050a ವಿದುರೋ ಮಣಿಪೀಠೇ ತು ಶುಕ್ಲಸ್ಪರ್ಧ್ಯಾಜಿನೋತ್ತರೇ|

05092050c ಸಂಸ್ಪೃಶನ್ನಾಸನಂ ಶೌರೇರ್ಮಹಾಮತಿರುಪಾವಿಶತ್||

ಮಹಾಮತಿ ವಿದುರನು ಬಿಳಿಯ ಜಿನವಸ್ತ್ರವನ್ನು ಹೊದಿಸಿದ್ದ, ಶೌರಿಯ ಪೀಠಕ್ಕೆ ತಾಗಿಕೊಂಡಿದ್ದ ಮಣಿಪೀಠದಲ್ಲಿ ಕುಳಿತುಕೊಂಡನು.

05092051a ಚಿರಸ್ಯ ದೃಷ್ಟ್ವಾ ದಾಶಾರ್ಹಂ ರಾಜಾನಃ ಸರ್ವಪಾರ್ಥಿವಾಃ|

05092051c ಅಮೃತಸ್ಯೇವ ನಾತೃಪ್ಯನ್ಪ್ರೇಕ್ಷಮಾಣಾ ಜನಾರ್ದನಂ||

ಅಲ್ಲಿದ್ದ ಸರ್ವ ರಾಜ ಪಾರ್ಥಿವರೂ ತುಂಬಾ ಹೊತ್ತು ದಾಶಾರ್ಹನನ್ನು ನೋಡುತ್ತಿದ್ದರೂ ಅಮೃತವನ್ನು ಎಷ್ಟು ಕುಡಿದರೂ ತೃಪ್ತರಾಗದವರಂತೆ ಜನಾರ್ದನನ್ನು ನೋಡಿ ತೃಪ್ತರಾಗಲಿಲ್ಲ.

05092052a ಅತಸೀಪುಷ್ಪಸಂಕಾಶಃ ಪೀತವಾಸಾ ಜನಾರ್ದನಃ|

05092052c ವ್ಯಭ್ರಾಜತ ಸಭಾಮಧ್ಯೇ ಹೇಮ್ನೀವೋಪಹಿತೋ ಮಣಿಃ||

ಅತಸೀಪುಷ್ಪಸಂಕಾಶ, ಪೀತಾಂಬರವನ್ನುಟ್ಟಿದ್ದ ಜನಾರ್ದನನು ಬಂಗಾರದಲ್ಲಿ ಹುದುಗಿದ್ದ ಮಣಿಯಂತೆ ಆ ಸಭಾಮಧ್ಯದಲ್ಲಿ ಹೊಳೆಯುತ್ತಿದ್ದನು.

05092053a ತತಸ್ತೂಷ್ಣೀಂ ಸರ್ವಮಾಸೀದ್ಗೋವಿಂದಗತಮಾನಸಂ|

05092053c ನ ತತ್ರ ಕಶ್ಚಿತ್ಕಿಂ ಚಿದ್ಧಿ ವ್ಯಾಜಹಾರ ಪುಮಾನ್ಕ್ವ ಚಿತ್||

ಗೋವಿಂದನು ಕುಳಿತುಕೊಂಡ ನಂತರ ಎಲ್ಲರೂ ಸುಮ್ಮನಾದರು. ಅಲ್ಲಿದ್ದ ಯಾವ ಪುರುಷನೂ ಏನನ್ನೂ ಹೇಳಲಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣಸಭಾಪ್ರವೇಶೇ ದ್ವನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣಸಭಾಪ್ರವೇಶ ಎನ್ನುವ ತೊಂಭತ್ತೆರಡನೆಯ ಅಧ್ಯಾಯವು.

Related image

Comments are closed.