Udyoga Parva: Chapter 90

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೦

ವಿದುರ-ಕೃಷ್ಣರ ಸಂವಾದ

ಊಟವಾದ ನಂತರ ರಾತ್ರಿ ವಿದುರನು ಕೃಷ್ಣನಿಗೆ “ಬಹುಸಂಖ್ಯೆಯಲ್ಲಿ ಸೇರಿರುವ ಆ ದುಷ್ಟಚೇತಸ ಶತ್ರುಗಳ ಮಧ್ಯೆ ನೀನು ಹೇಗೆ ಹೋಗುತ್ತೀಯೆ?” ಎಂದು ಕೌರವರ ದುಷ್ಟತನವನ್ನೂ ಅವಿಶ್ವಾಸವನ್ನೂ ವರ್ಣಿಸಿದುದು (೧-೨೮).

05090001 ವೈಶಂಪಾಯನ ಉವಾಚ|

05090001a ತಂ ಭುಕ್ತವಂತಮಾಶ್ವಸ್ತಂ ನಿಶಾಯಾಂ ವಿದುರೋಽಬ್ರವೀತ್|

05090001c ನೇದಂ ಸಮ್ಯಗ್ವ್ಯವಸಿತಂ ಕೇಶವಾಗಮನಂ ತವ||

ವೈಶಂಪಾಯನನು ಹೇಳಿದನು: “ಅವನು ಊಟಮಾಡಿ ಚೇತರಿಸಿಕೊಂಡ ನಂತರ ರಾತ್ರಿಯಲ್ಲಿ ವಿದುರನು ಹೇಳಿದನು: “ಕೇಶವ! ನಿನ್ನ ಈ ಆಗಮನವು ಸರಿಯಾಗಿ ವಿಚಾರಮಾಡಿದ್ದುದಲ್ಲ.

05090002a ಅರ್ಥಧರ್ಮಾತಿಗೋ ಮೂಢಃ ಸಂರಂಭೀ ಚ ಜನಾರ್ದನ|

05090002c ಮಾನಘ್ನೋ ಮಾನಕಾಮಶ್ಚ ವೃದ್ಧಾನಾಂ ಶಾಸನಾತಿಗಃ||

ಯಾಕೆಂದರೆ ಜನಾರ್ದನ! ಇವನು ಅರ್ಥಧರ್ಮಗಳನ್ನು ತಿಳಿಯದವನು ಮತ್ತು ದುಡುಕು ಸ್ವಭಾವದವನು. ಇನ್ನೊಬ್ಬರನ್ನು ಹೀಯಾಳಿಸುತ್ತಾನೆ ಆದರೆ ತಾನು ಮಾತ್ರ ಗೌರವವನ್ನು ಬಯಸುತ್ತಾನೆ. ವೃದ್ಧರ ಮಾತನ್ನು ಮೀರಿ ನಡೆಯುತ್ತಾನೆ.

05090003a ಧರ್ಮಶಾಸ್ತ್ರಾತಿಗೋ ಮಂದೋ ದುರಾತ್ಮಾ ಪ್ರಗ್ರಹಂ ಗತಃ|

05090003c ಅನೇಯಃ ಶ್ರೇಯಸಾಂ ಪಾಪೋ ಧಾರ್ತರಾಷ್ಟ್ರೋ ಜನಾರ್ದನ||

ಜನಾರ್ದನ! ಧಾರ್ತರಾಷ್ಟ್ರನು ಧರ್ಮಶಾಸ್ತ್ರಗಳನ್ನು ತಿಳಿಯದವನು. ದುರಾತ್ಮ. ವಿಧಿಯ ಗತಿಗೆ ಸಿಲುಕಿದವನು. ಅಳತೆಗೆ ದೊರಕದವನು. ಶ್ರೇಯಸ್ಸನ್ನು ಬಯಸುವವರಿಗೆ ಕೆಟ್ಟದ್ದನ್ನು ಮಾಡುವವನು.

05090004a ಕಾಮಾತ್ಮಾ ಪ್ರಾಜ್ಞಾಮಾನೀ ಚ ಮಿತ್ರಧ್ರುಕ್ಸರ್ವಶಂಕಿತಃ|

05090004c ಅಕರ್ತಾ ಚಾಕೃತಜ್ಞಾಶ್ಚ ತ್ಯಕ್ತಧರ್ಮಃ ಪ್ರಿಯಾನೃತಃ||

ಅವನು ಕಾಮಾತ್ಮ. ತುಂಬಾ ತಿಳಿದುಕೊಂಡಿದ್ದೇನೆಂದು ಅಭಿಮಾನಪಡುತ್ತಾನೆ. ನಿಜವಾದ ಮಿತ್ರರ ಶತ್ರು. ಎಲ್ಲರನ್ನೂ ಶಂಕಿಸುತ್ತಾನೆ. ಏನನ್ನೂ ಮಾಡುವುದಿಲ್ಲ. ಮಾಡಿದವರಿಗೆ ಅಕೃತಜ್ಞ. ಧರ್ಮವನ್ನು ತ್ಯಜಿಸಿದವನು. ಸುಳ್ಳನ್ನು ಪ್ರೀತಿಸುತ್ತಾನೆ.

05090005a ಏತೈಶ್ಚಾನ್ಯೈಶ್ಚ ಬಹುಭಿರ್ದೋಷೈರೇಷ ಸಮನ್ವಿತಃ|

05090005c ತ್ವಯೋಚ್ಯಮಾನಃ ಶ್ರೇಯೋಽಪಿ ಸಂರಂಭಾನ್ನ ಗ್ರಹೀಷ್ಯತಿ||

ಇವು ಮತ್ತು ಇನ್ನೂ ಇತರ ಬಹಳಷ್ಟು ದೋಷಗಳಿಂದ ಅವನು ಕೂಡಿದ್ದಾನೆ. ನೀನು ಹೇಳುವುದು ಅವನಿಗೆ ಶ್ರೇಯಸ್ಕರವಾದುದಾದರೂ ಅವನು ದುಡುಕಿನಿಂದ ಅದನ್ನು ಸ್ವೀಕರಿಸುವುದಿಲ್ಲ.

05090006a ಸೇನಾಸಮುದಯಂ ದೃಷ್ಟ್ವಾ ಪಾರ್ಥಿವಂ ಮಧುಸೂದನ|

05090006c ಕೃತಾರ್ಥಂ ಮನ್ಯತೇ ಬಾಲ ಆತ್ಮಾನಮವಿಚಕ್ಷಣಃ||

ಮಧುಸೂದನ! ತನ್ನ ಸೇನಾಸಮುದಾಯವನ್ನು ನೋಡಿ ಆ ಬಾಲಕ ಪಾರ್ಥಿವನು ತಾನು ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದಾನೆ.

05090007a ಏಕಃ ಕರ್ಣಃ ಪರಾಂ ಜೇತುಂ ಸಮರ್ಥ ಇತಿ ನಿಶ್ಚಿತಂ|

05090007c ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಸ ಶಮಂ ನೋಪಯಾಸ್ಯತಿ||

ಕರ್ಣನೊಬ್ಬನೇ ಶತ್ರುಗಳನ್ನು ಗೆಲ್ಲಲು ಸಮರ್ಥ ಎಂದು ನಿಶ್ಚಯಿಸಿದ ದುರ್ಬುದ್ಧಿ ಧಾರ್ತರಾಷ್ಟ್ರನು ಶಾಂತಿಯನ್ನು ಬಯಸುವುದಿಲ್ಲ.

05090008a ಭೀಷ್ಮೇ ದ್ರೋಣೇ ಕೃಪೇ ಕರ್ಣೇ ದ್ರೋಣಪುತ್ರೇ ಜಯದ್ರಥೇ|

05090008c ಭೂಯಸೀಂ ವರ್ತತೇ ವೃತ್ತಿಂ ನ ಶಮೇ ಕುರುತೇ ಮನಃ||

ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೋಣಪುತ್ರ ಮತ್ತು ಜಯದ್ರಥರ ಮೇಲೆ ತುಂಬಾ ನಂಬಿಕೆಯನ್ನು ಇಟ್ಟಿದ್ದಾನೆ. ಆದುದರಿಂದ ಅವನು ಶಾಂತಿಗೆ ಮನಸ್ಸುಮಾಡುವುದಿಲ್ಲ.

05090009a ನಿಶ್ಚಿತಂ ಧಾರ್ತರಾಷ್ಟ್ರಾಣಾಂ ಸಕರ್ಣಾನಾಂ ಜನಾರ್ದನ|

05090009c ಭೀಷ್ಮದ್ರೋಣಕೃಪಾನ್ ಪಾರ್ಥಾ ನ ಶಕ್ತಾಃ ಪ್ರತಿವೀಕ್ಷಿತುಂ||

ಜನಾರ್ದನ! ಪಾರ್ಥರು ಭೀಷ್ಮ-ದ್ರೋಣ-ಕೃಪರನ್ನು ನೋಡಲೂ ಕೂಡ ಶಕ್ತರಲ್ಲ ಎಂದು ಕರ್ಣನೊಂದಿಗೆ ಧಾರ್ತರಾಷ್ಟ್ರರು ನಿಶ್ಚಯಿಸಿದ್ದಾರೆ.

05090010a ಸಂವಿಚ್ಚ ಧಾರ್ತರಾಷ್ಟ್ರಾಣಾಂ ಸರ್ವೇಷಾಮೇವ ಕೇಶವ|

05090010c ಶಮೇ ಪ್ರಯತಮಾನಸ್ಯ ತವ ಸೌಭ್ರಾತ್ರಕಾಂಕ್ಷಿಣಃ||

ಕೇಶವ! ಸೌಭ್ರಾತೃತ್ವವನ್ನು ಬಯಸಿ ಶಾಂತಿಗೆ ಪ್ರಯತ್ನಿಸುತ್ತಿರುವ ನೀನು ಧಾರ್ತರಾಷ್ಟ್ರರೆಲ್ಲರನ್ನೂ ಚೆನ್ನಾಗಿ ತಿಳಿದುಕೋ.

05090011a ನ ಪಾಂಡವಾನಾಮಸ್ಮಾಭಿಃ ಪ್ರತಿದೇಯಂ ಯಥೋಚಿತಂ|

05090011c ಇತಿ ವ್ಯವಸಿತಾಸ್ತೇಷು ವಚನಂ ಸ್ಯಾನ್ನಿರರ್ಥಕಂ||

ಪಾಂಡವರಿಗೆ ಯಥೋಚಿತವಾದುದನ್ನು ನಾವು ಕೊಡುವುದಿಲ್ಲ ಎಂದು ನಿರ್ಧರಿಸಿದ ಧಾರ್ತರಾಷ್ಟ್ರರಿಗೆ ನಿನ್ನ ಮಾತು ನಿರರ್ಥಕವಾಗುತ್ತದೆ.

05090012a ಯತ್ರ ಸೂಕ್ತಂ ದುರುಕ್ತಂ ಚ ಸಮಂ ಸ್ಯಾನ್ಮಧುಸೂದನ|

05090012c ನ ತತ್ರ ಪ್ರಲಪೇತ್ಪ್ರಾಜ್ಞೋ ಬಧಿರೇಷ್ವಿವ ಗಾಯನಃ||

ಮಧುಸೂದನ! ಎಲ್ಲಿ ಒಳ್ಳೆಯ ಮಾತು ಮತ್ತು ಕೆಟ್ಟ ಮಾತು ಸಮವೆಂದು ಪರಿಗಣಿಸಲ್ಪಡುತ್ತದೆಯೋ ಅಲ್ಲಿ ಪ್ರಾಜ್ಞನು ಕಿವುಡನಿಗೆ ಗಾಯನ ಮಾಡಿದಂತೆ ಎಂದು ಮಾತನಾಡುವುದೇ ಇಲ್ಲ.

05090013a ಅವಿಜಾನತ್ಸು ಮೂಢೇಷು ನಿರ್ಮರ್ಯಾದೇಷು ಮಾಧವ|

05090013c ನ ತ್ವಂ ವಾಕ್ಯಂ ಬ್ರುವನ್ಯುಕ್ತಶ್ಚಾಂಡಾಲೇಷು ದ್ವಿಜೋ ಯಥಾ||

ಮಾಧವ! ಚಾಂಡಾಲರ ಮುಂದೆ ದ್ವಿಜನ ಮಾತು ಹೇಗೋ ಹಾಗೆ ಯುಕ್ತವಾದ ನಿನ್ನ ಮಾತುಗಳು ತಿಳುವಳಿಕೆಯಿಲ್ಲದಿರುವವರ, ಮೂಢರ ಮತ್ತು ಮರ್ಯಾದೆಯನ್ನು ನೀಡದವರ ಮುಂದೆ.

05090014a ಸೋಽಯಂ ಬಲಸ್ಥೋ ಮೂಢಶ್ಚ ನ ಕರಿಷ್ಯತಿ ತೇ ವಚಃ|

05090014c ತಸ್ಮಿನ್ನಿರರ್ಥಕಂ ವಾಕ್ಯಮುಕ್ತಂ ಸಂಪತ್ಸ್ಯತೇ ತವ||

ಬಲಶಾಲಿಯಾಗಿರುವ ಈ ಮೂಢನು ನಿನ್ನ ಮಾತನ್ನು ನಡೆಸುವುದಿಲ್ಲ. ನೀನು ಅವನಿಗೆ ಏನೆಲ್ಲ ಮಾತುಗಳನ್ನಾಡುತ್ತೀಯೋ ಅವು ನಿರರ್ಥಕ.

05090015a ತೇಷಾಂ ಸಮುಪವಿಷ್ಟಾನಾಂ ಸರ್ವೇಷಾಂ ಪಾಪಚೇತಸಾಂ|

05090015c ತವ ಮಧ್ಯಾವತರಣಂ ಮಮ ಕೃಷ್ಣ ನ ರೋಚತೇ||

ಆ ಎಲ್ಲ ಪಾಪಚೇತನರು ಸೇರಿರುವವರ ಮಧ್ಯೆ ನೀನು ಹೋಗುವುದು ನನಗೆ ಸರಿಯೆನಿಸುತ್ತಿಲ್ಲ ಕೃಷ್ಣ!

05090016a ದುರ್ಬುದ್ಧೀನಾಮಶಿಷ್ಟಾನಾಂ ಬಹೂನಾಂ ಪಾಪಚೇತಸಾಂ|

05090016c ಪ್ರತೀಪಂ ವಚನಂ ಮಧ್ಯೇ ತವ ಕೃಷ್ಣ ನ ರೋಚತೇ||

ಬಹುಸಂಖ್ಯೆಯಲ್ಲಿರುವ ಆ ದುರ್ಬುದ್ಧಿಗಳ, ಅಶಿಷ್ಟರ ಮತ್ತು ಪಾಪಚೇತಸರ ವಿರುದ್ಧ ಅವರ ಮಧ್ಯೆಯೇ ನೀನು ಮಾತನಾಡುವುದು ನನಗೆ ಸರಿಯೆನ್ನಿಸುವುದಿಲ್ಲ, ಕೃಷ್ಣ!

05090017a ಅನುಪಾಸಿತವೃದ್ಧತ್ವಾಚ್ಚ್ರಿಯಾ ಮೋಹಾಚ್ಚ ದರ್ಪಿತಃ|

05090017c ವಯೋದರ್ಪಾದಮರ್ಷಾಚ್ಚ ನ ತೇ ಶ್ರೇಯೋ ಗ್ರಹೀಷ್ಯತಿ||

ವೃದ್ಧರ ಸೇವೆಯನ್ನು ಮಾಡದೇ ಇರುವ, ಸಂಪತ್ತು ಮೋಹಗಳಿಂದ ದರ್ಪಿತರಾದ, ವಯಸ್ಸಿನಿಂದ ದರ್ಪಿತರಾದ, ಕ್ರೂರರಾದ ಅವರು ನಿನ್ನ ಶ್ರೇಯಸ್ಕರ ಮಾತುಗಳನ್ನು ಸ್ವೀಕರಿಸುವುದಿಲ್ಲ.

05090018a ಬಲಂ ಬಲವದಪ್ಯಸ್ಯ ಯದಿ ವಕ್ಷ್ಯಸಿ ಮಾಧವ|

05090018c ತ್ವಯ್ಯಸ್ಯ ಮಹತೀ ಶಂಕಾ ನ ಕರಿಷ್ಯತಿ ತೇ ವಚಃ||

ಮಾಧವ! ಅವನು ಬಲವಾದ ಸೇನೆಯನ್ನು ಒಟ್ಟುಗೂಡಿಸಿದ್ದಾನೆ. ಅವನಿಗೆ ನಿನ್ನ ಮೇಲೆ ಮಹಾ ಶಂಕೆಯಿದೆ. ಆದುದರಿಂದ ಅವನು ನಿನ್ನ ಮಾತಿನಂತೆ ಮಾಡುವುದಿಲ್ಲ.

05090019a ನೇದಮದ್ಯ ಯುಧಾ ಶಕ್ಯಮಿಂದ್ರೇಣಾಪಿ ಸಹಾಮರೈಃ|

05090019c ಇತಿ ವ್ಯವಸಿತಾಃ ಸರ್ವೇ ಧಾರ್ತರಾಷ್ಟ್ರಾ ಜನಾರ್ದನ||

ಜನಾರ್ದನ! ಇಂದು ಯುದ್ಧದಲ್ಲಿ ಅಮರರನ್ನೊಡಗೂಡಿದ ಇಂದ್ರನಿಗೂ ಕೂಡ ತಮ್ಮೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಧಾರ್ತರಾಷ್ಟ್ರರೆಲ್ಲರೂ ನಂಬಿದ್ದಾರೆ.

05090020a ತೇಷ್ವೇವಮುಪಪನ್ನೇಷು ಕಾಮಕ್ರೋಧಾನುವರ್ತಿಷು|

05090020c ಸಮರ್ಥಮಪಿ ತೇ ವಾಕ್ಯಮಸಮರ್ಥಂ ಭವಿಷ್ಯತಿ||

ಅಂಥಹ ಗಾಢನಂಬಿಕೆಯನ್ನಿಟ್ಟಿರುವವನ ಮತ್ತು ಕಾಮಕ್ರೋಧಗಳಂತೆ ನಡೆದುಕೊಳ್ಳುವವನ ಎದಿರು ನಿನ್ನ ಮಾತುಗಳು ಸಮರ್ಥವಾಗಿದ್ದರೂ ಅಸಮರ್ಥವಾಗುತ್ತವೆ.

05090021a ಮಧ್ಯೇ ತಿಷ್ಠನ್ ಹಸ್ತ್ಯನೀಕಸ್ಯ ಮಂದೋ

         ರಥಾಶ್ವಯುಕ್ತಸ್ಯ ಬಲಸ್ಯ ಮೂಢಃ|

05090021c ದುರ್ಯೋಧನೋ ಮನ್ಯತೇ ವೀತಮನ್ಯುಃ

         ಕೃತ್ಸ್ನಾ ಮಯೇಯಂ ಪೃಥಿವೀ ಜಿತೇತಿ||

ಆನೆಗಳ, ರಥಗಳ, ಅಶ್ವಗಳ ಮತ್ತು ಸೇನೆಯ ಮಧ್ಯೆ ನಿಂತು ಆ ಮೂಢ ಮಂದ ದುರ್ಯೋಧನನು ಭಯವನ್ನು ಕಳೆದುಕೊಂಡು ಈಗಾಗಲೇ ತಾನು ಇಡೀ ಭೂಮಿಯನ್ನೇ ಗೆದ್ದುಬಿಟ್ಟಿದ್ದೇನೆ ಎಂದು ತಿಳಿದುಕೊಂಡಿದ್ದಾನೆ.

05090022a ಆಶಂಸತೇ ಧೃತರಾಷ್ಟ್ರಸ್ಯ ಪುತ್ರೋ

         ಮಹಾರಾಜ್ಯಮಸಪತ್ನಂ ಪೃಥಿವ್ಯಾಂ|

05090022c ತಸ್ಮಿಂ ಶಮಃ ಕೇವಲೋ ನೋಪಲಭ್ಯೋ

         ಬದ್ಧಂ ಸಂತಮಾಗತಂ ಮನ್ಯತೇಽರ್ಥಂ||

ಧೃತರಾಷ್ಟ್ರನ ಪುತ್ರನು ಪ್ರತಿಸ್ಪರ್ಧಿಗಳಿಲ್ಲದೇ ಭೂಮಿಯ ಮಹಾರಾಜ್ಯವನ್ನು ಆಳುತ್ತಿದ್ದಾನೆ. ಅವನಿಂದ ಶಾಂತಿಯು ದೊರೆಯುವುದು ಅಸಂಭವ. ತನ್ನಲ್ಲಿರುವುದೆಲ್ಲ ಕೇವಲ ತನಗೇ ಸೇರಿದ್ದುದು ಎಂದು ತಿಳಿದುಕೊಂಡಿದ್ದಾನೆ.

05090023a ಪರ್ಯಸ್ತೇಯಂ ಪೃಥಿವೀ ಕಾಲಪಕ್ವಾ

         ದುರ್ಯೋಧನಾರ್ಥೇ ಪಾಂಡವಾನ್ಯೋದ್ಧುಕಾಮಾಃ|

05090023c ಸಮಾಗತಾಃ ಸರ್ವಯೋಧಾಃ ಪೃಥಿವ್ಯಾಂ

         ರಾಜಾನಶ್ಚ ಕ್ಷಿತಿಪಾಲೈಃ ಸಮೇತಾಃ||

ಕಾಲದಿಂದ ಪಕ್ವವಾದ ಪೃಥ್ವಿಯ ನಾಶವು ಸಮೀಪಿಸುತ್ತಿರುವಂತಿದೆ. ದುರ್ಯೋಧನನಿಗಾಗಿ ಪಾಂಡವರೊಂದಿಗೆ ಯುದ್ಧಮಾಡಲು ಭೂಮಿಯ ಸರ್ವ ಯೋಧರೂ ರಾಜರೂ ಕ್ಷಿತಿಪಾಲರೂ ಬಂದು ಸೇರಿದ್ದಾರೆ.

05090024a ಸರ್ವೇ ಚೈತೇ ಕೃತವೈರಾಃ ಪುರಸ್ತಾತ್

         ತ್ವಯಾ ರಾಜಾನೋ ಹೃತಸಾರಾಶ್ಚ ಕೃಷ್ಣ|

05090024c ತವೋದ್ವೇಗಾತ್ಸಂಶ್ರಿತಾ ಧಾರ್ತರಾಷ್ಟ್ರಾನ್

         ಸುಸಂಹತಾಃ ಸಹ ಕರ್ಣೇನ ವೀರಾಃ||

ಕೃಷ್ಣ! ಇವರೆಲ್ಲರೂ ನಿನ್ನ ಮೇಲೆ ಹಿಂದಿನಿಂದಲೂ ವೈರವನ್ನು ಸಾಧಿಸಿಕೊಂಡು ಬಂದಿದ್ದಾರೆ. ಈ ರಾಜರ ಸಾರವನ್ನೂ ನೀನು ಅಪಹರಿಸಿದ್ದೀಯೆ. ನಿನ್ನ ಕುರಿತಾದ ಉದ್ವೇಗದಿಂದ ಆ ವೀರರು ಕರ್ಣನ ಜೊತೆಸೇರಿಕೊಂಡು ಧಾರ್ತರಾಷ್ಟ್ರರರ ಪಕ್ಷದಲ್ಲಿದ್ದಾರೆ.

05090025a ತ್ಯಕ್ತಾತ್ಮಾನಃ ಸಹ ದುರ್ಯೋಧನೇನ

         ಸೃಷ್ಟಾ ಯೋದ್ಧುಂ ಪಾಂಡವಾನ್ಸರ್ವಯೋಧಾಃ|

05090025c ತೇಷಾಂ ಮಧ್ಯೇ ಪ್ರವಿಶೇಥಾ ಯದಿ ತ್ವಂ

         ನ ತನ್ಮತಂ ಮಮ ದಾಶಾರ್ಹ ವೀರ||

ತಮ್ಮನ್ನು ತಾವೇ ತೊರೆದು ಈ ಎಲ್ಲ ಯೋಧರೂ ದುರ್ಯೋಧನನ ಜೊತೆಗೂಡಿ ಪಾಂಡವರೊಂದಿಗೆ ಯುದ್ಧಮಾಡಲು ದೊರಕಿದೆಯೆಂದು ಸಂತೋಷದಿಂದಿದ್ದಾರೆ. ನೀನು ಅವರ ಮಧ್ಯೆ ಪ್ರವೇಶಿಸುತ್ತೀಯೆ ಎಂದರೆ ನನಗೇನೋ ಹಿಡಿಸುವುದಿಲ್ಲ ವೀರ ದಾಶಾರ್ಹ!

05090026a ತೇಷಾಂ ಸಮುಪವಿಷ್ಟಾನಾಂ ಬಹೂನಾಂ ದುಷ್ಟಚೇತಸಾಂ|

05090026c ಕಥಂ ಮಧ್ಯಂ ಪ್ರಪದ್ಯೇಥಾಃ ಶತ್ರೂಣಾಂ ಶತ್ರುಕರ್ಶನ||

ಶತ್ರುಕರ್ಶನ! ಬಹುಸಂಖ್ಯೆಯಲ್ಲಿ ಸೇರಿರುವ ಆ ದುಷ್ಟಚೇತಸ ಶತ್ರುಗಳ ಮಧ್ಯೆ ನೀನು ಹೇಗೆ ಹೋಗುತ್ತೀಯೆ?

05090027a ಸರ್ವಥಾ ತ್ವಂ ಮಹಾಬಾಹೋ ದೇವೈರಪಿ ದುರುತ್ಸಹಃ|

05090027c ಪ್ರಭಾವಂ ಪೌರುಷಂ ಬುದ್ಧಿಂ ಜಾನಾಮಿ ತವ ಶತ್ರುಹನ್||

ಮಹಾಬಾಹೋ! ನೀನು ಸರ್ವಥಾ ದೇವತೆಗಳಿಗೂ ಗೆಲ್ಲಲಸಾಧ್ಯನು. ಶತ್ರುಹನ್! ನಿನ್ನ ಪ್ರಭಾವ, ಪೌರುಷ ಮತ್ತು ಬುದ್ಧಿಯನ್ನು ತಿಳಿದುಕೊಂಡಿದ್ದೇನೆ.

05090028a ಯಾ ಮೇ ಪ್ರೀತಿಃ ಪಾಂಡವೇಷು ಭೂಯಃ ಸಾ ತ್ವಯಿ ಮಾಧವ|

05090028c ಪ್ರೇಮ್ಣಾ ಚ ಬಹುಮಾನಾಚ್ಚ ಸೌಹೃದಾಚ್ಚ ಬ್ರವೀಮ್ಯಹಂ||

ಆದರೂ ಮಾಧವ! ನಿನ್ನಲ್ಲಿ ಮತ್ತು ಪಾಂಡವರಲ್ಲಿ ನನಗೆ ಪ್ರೀತಿಯಿರುವುದರಿಂದ, ಪ್ರೇಮದಿಂದ, ಸೌಹಾರ್ದತೆಯಿಂದ ಬಹಳ ಗೌರವದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಿದುರಸಂವಾದೇ ನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಿದುರಸಂವಾದ ಎನ್ನುವ ತೊಂಭತ್ತನೆಯ ಅಧ್ಯಾಯವು.

Image result for flowers against white background

Comments are closed.