Udyoga Parva: Chapter 87

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೭

ಹಸ್ತಿನಾಪುರಕ್ಕೆ ಶ್ರೀಕೃಷ್ಣನ ಆಗಮನ-ಧೃತರಾಷ್ಟ್ರನೊಂದಿಗೆ ಭೇಟಿ

ಕೃಷ್ಣನು ಹಸ್ತಿನಾಪುರವನ್ನು ಪ್ರವೇಶಿಸಿ ಧೃತರಾಷ್ಟ್ರನನ್ನು ಮತ್ತು ಇತರ ರಾಜರನ್ನು ಭೇಟಿಯಾದುದು (೧-೨೧). ಅನಂತರ ವಿದುರನ ಮನೆಗೆ ನಡೆದುದು (೨೨-೨೬).

05087001 ವೈಶಂಪಾಯನ ಉವಾಚ|

05087001a ಪ್ರಾತರುತ್ಥಾಯ ಕೃಷ್ಣಸ್ತು ಕೃತವಾನ್ಸರ್ವಮಾಹ್ನಿಕಂ|

05087001c ಬ್ರಾಹ್ಮಣೈರಭ್ಯನುಜ್ಞಾತಃ ಪ್ರಯಯೌ ನಗರಂ ಪ್ರತಿ||

ವೈಶಂಪಾಯನನು ಹೇಳಿದನು: “ಕೃಷ್ಣನಾದರೋ ಬೆಳಿಗ್ಗೆ ಎದ್ದು ಆಹ್ನೀಕವನ್ನೆಲ್ಲ ಪೂರೈಸಿ, ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ನಗರದ ಕಡೆ ಪ್ರಯಾಣಿಸಿದನು.

05087002a ತಂ ಪ್ರಯಾಂತಂ ಮಹಾಬಾಹುಮನುಜ್ಞಾಪ್ಯ ತತೋ ನೃಪ|

05087002c ಪರ್ಯವರ್ತಂತ ತೇ ಸರ್ವೇ ವೃಕಸ್ಥಲನಿವಾಸಿನಃ||

ನೃಪ! ಹೊರಟ ಆ ಮಹಾಬಾಹುವುವನ್ನು ಬೀಳ್ಕೊಂಡು ವೃಕಸ್ಥಲ ನಿವಾಸಿಗಳೆಲ್ಲರೂ ಹಿಂದಿರುಗಿದರು.

05087003a ಧಾರ್ತರಾಷ್ಟ್ರಾಸ್ತಮಾಯಾಂತಂ ಪ್ರತ್ಯುಜ್ಜಗ್ಮುಃ ಸ್ವಲಂಕೃತಾಃ|

05087003c ದುರ್ಯೋಧನಮೃತೇ ಸರ್ವೇ ಭೀಷ್ಮದ್ರೋಣಕೃಪಾದಯಃ||

ದುರ್ಯೋಧನನನ್ನು ಬಿಟ್ಟು ಎಲ್ಲ ಧಾರ್ತರಾಷ್ಟ್ರರೂ, ಭೀಷ್ಮ, ದ್ರೋಣ, ಕೃಪ ಮೊದಲಾದವರೂ ಸ್ವಲಂಕೃತರಾಗಿ ಅವನನ್ನು ಭೇಟಿಮಾಡಲು ಹೊರಟರು.

05087004a ಪೌರಾಶ್ಚ ಬಹುಲಾ ರಾಜನ್ ಹೃಷೀಕೇಶಂ ದಿದೃಕ್ಷವಃ|

05087004c ಯಾನೈರ್ಬಹುವಿಧೈರನ್ಯೇ ಪದ್ಭಿರೇವ ತಥಾಪರೇ||

ರಾಜನ್! ಬಹಳ ಮಂದಿ ಪೌರರೂ ಕೂಡ ಬಹುವಿಧದ ಯಾನಗಳ ಮೇಲೆ ಮತ್ತು ಇತರರು ಕಾಲ್ನಡುಗೆಯಲ್ಲಿ, ಹೃಷೀಕೇಶನನ್ನು ನೋಡಲು ಹೊರಟರು.

05087005a ಸ ವೈ ಪಥಿ ಸಮಾಗಮ್ಯ ಭೀಷ್ಮೇಣಾಕ್ಲಿಷ್ಟಕರ್ಮಣಾ|

05087005c ದ್ರೋಣೇನ ಧಾರ್ತರಾಷ್ಟ್ರೈಶ್ಚ ತೈರ್ವೃತೋ ನಗರಂ ಯಯೌ||

ದಾರಿಯಲ್ಲಿ ಅಕ್ಲಿಷ್ಟಕರ್ಮಿ ಭೀಷ್ಮ, ದ್ರೋಣ, ಮತ್ತು ಧಾರ್ತರಾಷ್ಟ್ರರನ್ನು ಭೇಟಿ ಮಾಡಿ ಅವರಿಂದ ಸುತ್ತುವರೆದು ನಗರಕ್ಕೆ ಬಂದನು.

05087006a ಕೃಷ್ಣಸಮ್ಮಾನನಾರ್ಥಂ ಚ ನಗರಂ ಸಮಲಂಕೃತಂ|

05087006c ಬಭೂವೂ ರಾಜಮಾರ್ಗಾಶ್ಚ ಬಹುರತ್ನಸಮಾಚಿತಾಃ||

ಕೃಷ್ಣನ ಸಮ್ಮಾನಾರ್ಥವಾಗಿ ನಗರವು ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು. ರಾಜಮಾರ್ಗಗಳನ್ನು ಬಹುವಿಧದ ರತ್ನಗಳಿಂದ ಅಲಂಕರಿಸಲಾಗಿತ್ತು.

05087007a ನ ಸ್ಮ ಕಶ್ಚಿದ್ಗೃಹೇ ರಾಜಂಸ್ತದಾಸೀದ್ಭರತರ್ಷಭ|

05087007c ನ ಸ್ತ್ರೀ ನ ವೃದ್ಧೋ ನ ಶಿಶುರ್ವಾಸುದೇವದಿದೃಕ್ಷಯಾ||

ರಾಜನ್! ಭರತರ್ಷಭ! ಆಗ ವಾಸುದೇವನನ್ನು ನೋಡುವ ಇಚ್ಛೆಯಿಂದ ಯಾವ ಸ್ತ್ರೀಯೂ, ವೃದ್ಧನೂ, ಶಿಶುವೂ, ಯಾವುದೇ ಮನೆಯ ಒಳಗೆ ಇದ್ದಿರಲಿಲ್ಲ.

05087008a ರಾಜಮಾರ್ಗೇ ನರಾ ನ ಸ್ಮ ಸಂಭವಂತ್ಯವನಿಂ ಗತಾಃ|

05087008c ತಥಾ ಹಿ ಸುಮಹದ್ರಾಜನ್ ಹೃಷೀಕೇಶಪ್ರವೇಶನೇ||

ರಾಜನ್! ಹೃಷೀಕೇಶನು ಪ್ರವೇಶಿಸುವಾಗ ರಾಜ ಮಾರ್ಗಗಳಲ್ಲಿ ಬಹುಸಂಖ್ಯೆಗಳಲ್ಲಿ ನರರು ನಿಂತು ನೆಲವನ್ನು ನೋಡುತ್ತಾ ಅವನನ್ನು ಗೌರವಿಸಿದರು.

05087009a ಆವೃತಾನಿ ವರಸ್ತ್ರೀಭಿರ್ಗೃಹಾಣಿ ಸುಮಹಾಂತ್ಯಪಿ|

05087009c ಪ್ರಚಲಂತೀವ ಭಾರೇಣ ದೃಶ್ಯಂತೇ ಸ್ಮ ಮಹೀತಲೇ||

ಎತ್ತರದ ಮನೆಗಳ ಗಚ್ಚುಗಳು ಬಹು ಸಂಖ್ಯೆಗಳ ವರಸ್ತ್ರೀಯರ ಭಾರದಿಂದ ಕುಸಿದು ಬೀಳುತ್ತವೆಯೋ ಎಂಬಂತೆ ತೋರುತ್ತಿದ್ದವು.

05087010a ತಥಾ ಚ ಗತಿಮಂತಸ್ತೇ ವಾಸುದೇವಸ್ಯ ವಾಜಿನಃ|

05087010c ಪ್ರನಷ್ಟಗತಯೋಽಭೂವನ್ರಾಜಮಾರ್ಗೇ ನರೈರ್ವೃತೇ||

ವಾಸುದೇವನ ಕುದುರೆಗಳು ಅತಿ ವೇಗದಲ್ಲಿ ಚಲಿಸಬಹುದಾಗಿದ್ದರೂ, ಮನುಷ್ಯರಿಂದ ತುಂಬಿಹೋಗಿದ್ದ ರಾಜಮಾರ್ಗದಲ್ಲಿ ತಮ್ಮ ವೇಗವನ್ನು ಕಳೆದುಕೊಂಡವು.

05087011a ಸ ಗೃಹಂ ಧೃತರಾಷ್ಟ್ರಸ್ಯ ಪ್ರಾವಿಶಚ್ಚತ್ರುಕರ್ಶನಃ|

05087011c ಪಾಂಡುರಂ ಪುಂಡರೀಕಾಕ್ಷಃ ಪ್ರಾಸಾದೈರುಪಶೋಭಿತಂ||

ಪುಂಡರೀಕಾಕ್ಷ ಶತ್ರುಕರ್ಶನನು ಉಪ ಪ್ರಾಸಾದಗಳಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಬೂದುಬಣ್ಣದ ಅರಮನೆಯನ್ನು ಪ್ರವೇಶಿಸಿದನು.

05087012a ತಿಸ್ರಃ ಕಕ್ಷ್ಯಾ ವ್ಯತಿಕ್ರಮ್ಯ ಕೇಶವೋ ರಾಜವೇಶ್ಮನಃ|

05087012c ವೈಚಿತ್ರವೀರ್ಯಂ ರಾಜಾನಮಭ್ಯಗಚ್ಚದರಿಂದಮಃ||

ಆ ರಾಜಗೃಹದ ಮೂರು ಕಕ್ಷೆಗಳನ್ನು ದಾಟಿ ಅರಿಂದಮ ಕೇಶವನು ರಾಜ ವೈಚಿತ್ರವೀರ್ಯನ ಬಳಿ ಬಂದನು.

05087013a ಅಭ್ಯಾಗಚ್ಚತಿ ದಾಶಾರ್ಹೇ ಪ್ರಜ್ಞಾಚಕ್ಷುರ್ನರೇಶ್ವರಃ|

05087013c ಸಹೈವ ದ್ರೋಣಭೀಷ್ಮಾಭ್ಯಾಮುದತಿಷ್ಠನ್ಮಹಾಯಶಾಃ||

ದಾಶಾರ್ಹನು ಆಗಮಿಸುತ್ತಿದ್ದಂತೆ ಪ್ರಜ್ಞಾಚಕ್ಷು ನರೇಶ್ವರನು ಮಹಾಯಶರಾದ ದ್ರೋಣ-ಭೀಷ್ಮಾದಿಗಳೊಂದಿಗೆ ಮೇಲೆದ್ದು ನಿಂತನು.

05087014a ಕೃಪಶ್ಚ ಸೋಮದತ್ತಶ್ಚ ಮಹಾರಾಜಶ್ಚ ಬಾಹ್ಲಿಕಃ|

05087014c ಆಸನೇಭ್ಯೋಽಚಲನ್ಸರ್ವೇ ಪೂಜಯಂತೋ ಜನಾರ್ದನಂ||

ಕೃಪ, ಸೋಮದತ್ತ, ಮತ್ತು ಮಹಾರಾಜ ಬಾಹ್ಲಿಕ ಎಲ್ಲರೂ ಜನಾರ್ದನನನ್ನು ಗೌರವಿಸುತ್ತಾ ಆಸನಗಳಿಂದ ಮೇಲೆದ್ದು ನಿಂತರು.

05087015a ತತೋ ರಾಜಾನಮಾಸಾದ್ಯ ಧೃತರಾಷ್ಟ್ರಂ ಯಶಸ್ವಿನಂ|

05087015c ಸ ಭೀಷ್ಮಂ ಪೂಜಯಾಮಾಸ ವಾರ್ಷ್ಣೇಯೋ ವಾಗ್ಭಿರಂಜಸಾ||

ಆಗ ವಾರ್ಷ್ಣೇಯನು ಯಶಸ್ವಿ ರಾಜ ಧೃತರಾಷ್ಟ್ರನನ್ನೂ ಭೀಷ್ಮನನ್ನೂ ಸಮೀಪಿಸಿ ಪೂಜಿಸಿದನು.

05087016a ತೇಷು ಧರ್ಮಾನುಪೂರ್ವೀಂ ತಾಂ ಪ್ರಯುಜ್ಯ ಮಧುಸೂದನಃ|

05087016c ಯಥಾವಯಃ ಸಮೀಯಾಯ ರಾಜಭಿಸ್ತತ್ರ ಮಾಧವಃ||

ಮಧುಸೂದನ ಮಾಧವನು ಧರ್ಮಾನುಸಾರವಾಗಿ, ವಯಸ್ಸಿಗೆ ತಕ್ಕಂತೆ ಅಲ್ಲಿರುವ ರಾಜರನ್ನು ಭೇಟಿಮಾಡಿದನು.

05087017a ಅಥ ದ್ರೋಣಂ ಸಪುತ್ರಂ ಸ ಬಾಹ್ಲೀಕಂ ಚ ಯಶಸ್ವಿನಂ|

05087017c ಕೃಪಂ ಚ ಸೋಮದತ್ತಂ ಚ ಸಮೀಯಾಯ ಜನಾರ್ದನಃ||

ಆಗ ಪುತ್ರನೊಂದಿಗೆ ದ್ರೋಣ, ಯಶಸ್ವಿ ಬಾಹ್ಲೀಕ, ಕೃಪ ಮತ್ತು ಸೋಮದತ್ತರನ್ನು ಭೇಟಿಮಾಡಿದನು.

05087018a ತತ್ರಾಸೀದೂರ್ಜಿತಂ ಮೃಷ್ಟಂ ಕಾಂಚನಂ ಮಹದಾಸನಂ|

05087018c ಶಾಸನಾದ್ಧೃತರಾಷ್ಟ್ರಸ್ಯ ತತ್ರೋಪಾವಿಶದಚ್ಯುತಃ||

ಅಲ್ಲಿದ್ದ ದೊಡ್ಡದಾದ ಗಟ್ಟಿಯಾದ ಕಾಂಚನದಿಂದ ಮಾಡಲ್ಪಟ್ಟ ಆಸನದಲ್ಲಿ ಧೃತರಾಷ್ಟ್ರನ ಶಾಸನದಂತೆ ಅಚ್ಯುತನು ಕುಳಿತುಕೊಂಡನು.

05087019a ಅಥ ಗಾಂ ಮಧುಪರ್ಕಂ ಚಾಪ್ಯುದಕಂ ಚ ಜನಾರ್ದನೇ|

05087019c ಉಪಜಹ್ರುರ್ಯಥಾನ್ಯಾಯಂ ಧೃತರಾಷ್ಟ್ರಪುರೋಹಿತಾಃ||

ಆಗ ಧೃತರಾಷ್ಟ್ರನ ಪುರೋಹಿತರು ಜನಾರ್ದನನಿಗೆ ಯಥಾನ್ಯಾಯವಾಗಿ ಗೋವು, ಮಧುಪರ್ಕ ಮತ್ತು ನೀರನ್ನು ನೀಡಿದರು.

05087020a ಕೃತಾತಿಥ್ಯಸ್ತು ಗೋವಿಂದಃ ಸರ್ವಾನ್ಪರಿಹಸನ್ಕುರೂನ್|

05087020c ಆಸ್ತೇ ಸಂಬಂಧಕಂ ಕುರ್ವನ್ಕುರುಭಿಃ ಪರಿವಾರಿತಃ||

ಆತಿಥ್ಯವಾದ ನಂತರ ಗೋವಿಂದನು ಎಲ್ಲ ಕುರುಗಳಿಂದ ಸುತ್ತುವರೆಯಲ್ಪಟ್ಟು ನಗುತ್ತಾ ಎಲ್ಲರೊಡನೆ ವ್ಯವಹರಿಸಿದನು.

05087021a ಸೋಽರ್ಚಿತೋ ಧೃತರಾಷ್ಟ್ರೇಣ ಪೂಜಿತಶ್ಚ ಮಹಾಯಶಾಃ|

05087021c ರಾಜಾನಂ ಸಮನುಜ್ಞಾಪ್ಯ ನಿರಾಕ್ರಾಮದರಿಂದಮಃ||

ಧೃತರಾಷ್ಟ್ರನಿಂದ ಅರ್ಚಿತನಾಗಿ, ಮಹಾಯಶರಿಂದ ಪೂಜಿತನಾಗಿ ಆ ಅರಿಂದಮನು ರಾಜನ ಅನುಮತಿಯನ್ನು ಪಡೆದು ಬೀಳ್ಕೊಂಡನು.

05087022a ತೈಃ ಸಮೇತ್ಯ ಯಥಾನ್ಯಾಯಂ ಕುರುಭಿಃ ಕುರುಸಂಸದಿ|

05087022c ವಿದುರಾವಸಥಂ ರಮ್ಯಮುಪಾತಿಷ್ಠತ ಮಾಧವಃ||

ಯಥಾನ್ಯಾಯವಾಗಿ ಕುರುಸಂಸದಿಯಲ್ಲಿ ಕುರುಗಳೊಂದಿಗೆ ಕಲೆತು ಮಾಧವನು ವಿದುರನ ರಮ್ಯ ವಸತಿಯಕಡೆ ನಡೆದನು.

05087023a ವಿದುರಃ ಸರ್ವಕಲ್ಯಾಣೈರಭಿಗಮ್ಯ ಜನಾರ್ದನಂ|

05087023c ಅರ್ಚಯಾಮಾಸ ದಾಶಾರ್ಹಂ ಸರ್ವಕಾಮೈರುಪಸ್ಥಿತಂ||

ವಿದುರನು ಸರ್ವ ಕಲ್ಯಾಣಗಳಿಂದ ಜನಾರ್ದನನನ್ನು ಸ್ವಾಗತಿಸಿ ದಾಶಾರ್ಹನಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಅರ್ಚಿಸಿದನು.

05087024a ಕೃತಾತಿಥ್ಯಂ ತು ಗೋವಿಂದಂ ವಿದುರಃ ಸರ್ವಧರ್ಮವಿತ್|

05087024c ಕುಶಲಂ ಪಾಂಡುಪುತ್ರಾಣಾಮಪೃಚ್ಚನ್ಮಧುಸೂದನಂ||

ಗೋವಿಂದನಿಗೆ ಆತಿಥ್ಯವನ್ನು ಪೂರೈಸಿ ಸರ್ವಧರ್ಮವಿದು ವಿದುರನು ಮಧುಸೂದನನಿಗೆ ಪಾಂಡುಪುತ್ರರ ಕುಶಲದ ಕುರಿತು ಪ್ರಶ್ನಿಸಿದನು.

05087025a ಪ್ರೀಯಮಾಣಸ್ಯ ಸುಹೃದೋ ವಿದುಷೋ ಬುದ್ಧಿಸತ್ತಮಃ|

05087025c ಧರ್ಮನಿತ್ಯಸ್ಯ ಚ ತದಾ ಗತದೋಷಸ್ಯ ಧೀಮತಃ||

05087026a ತಸ್ಯ ಸರ್ವಂ ಸವಿಸ್ತಾರಂ ಪಾಂಡವಾನಾಂ ವಿಚೇಷ್ಟಿತಂ|

05087026c ಕ್ಷತ್ತುರಾಚಷ್ಟ ದಾಶಾರ್ಹಃ ಸರ್ವಪ್ರತ್ಯಕ್ಷದರ್ಶಿವಾನ್||

ಆಗ ತನ್ನ ಪ್ರೀತಿಯ ಗೆಳೆಯ, ವಿದುಷ, ಬುದ್ಧಿಸತ್ತಮ, ಧರ್ಮನಿತ್ಯ, ದೋಷಗಳಿಲ್ಲದ ಧೀಮಂತ ಕ್ಷತ್ತನಿಗೆ ಎಲ್ಲವನ್ನು ಪ್ರತ್ಯಕ್ಷವಾಗಿ ಕಂಡಿರುವ ದಾಶಾರ್ಹನು ಪಾಂಡವರು ನಡೆಸಿದುದನ್ನು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಧೃತರಾಷ್ಟ್ರಗೃಹಪ್ರವೇಶಪೂರ್ವಕಂ ಶ್ರೀಕೃಷ್ಣಸ್ಯ ವಿದುರಗೃಹಪ್ರವೇಶೇ ಸಪ್ತಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಧೃತರಾಷ್ಟ್ರನ ಗೃಹಪ್ರವೇಶದ ಪೂರ್ವಕವಾಗಿ ಶ್ರೀಕೃಷ್ಣನು ವಿದುರನ ಗೃಹಪ್ರವೇಶಿಸಿದುದು ಎನ್ನುವ ಎಂಭತ್ತೇಳನೆಯ ಅಧ್ಯಾಯವು.

Related image

Comments are closed.