Udyoga Parva: Chapter 86

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೬

ಕೃಷ್ಣನಿಗೆ ಸತ್ಕಾರವಾಗಿ ಸಂಪತ್ತನ್ನು ಸರ್ವಥಾ ಕೊಟ್ಟರೆ ತನಗೆ ಹೆದರಿ ಕೊಡುತ್ತಿದ್ದಾರೆಂದು ಆತನು ತಿಳಿದುಕೊಳ್ಳುತ್ತಾನೆಂದೂ, “ಯುದ್ಧವನ್ನು ನಿಶ್ಚಯಿಸಿದ ನಂತರ ಆತಿಥ್ಯವನ್ನಿತ್ತು ಹೋರಾಟಕ್ಕೆ ಶಾಂತಿಯನ್ನು ತರಬಾರದು” ಎಂದೂ ದುರ್ಯೋಧನನು ನುಡಿದುದು (೧-೬). ಆಗ ಭೀಷ್ಮನು “ಕೃಷ್ಣನು ಏನನ್ನು ಹೇಳುತ್ತಾನೋ ಅದನ್ನು ಮಾಡು” ಎಂದು ಧೃತರಾಷ್ಟ್ರನಿಗೆ ಹೇಳಲು (೭-೧೧), ದುರ್ಯೋಧನನು ತಾನು ಕೃಷ್ಣನನ್ನು ಸೆರೆಹಿಡಿಯುತ್ತೇನೆ ಎನ್ನುವುದು (೧೨-೧೫). ಧೃತರಾಷ್ಟ್ರನು ಮಗನಿಗೆ ಹಾಗೆ ಮಾಡಬಾರದೆಂದು ಹೇಳಲು (೧೬-೧೮), ಭೀಷ್ಮನು ತಂದೆ-ಮಗ ಇಬ್ಬರನ್ನೂ ನಿಂದಿಸಿ ಸಭಾತ್ಯಾಗ ಮಾಡಿದುದು (೧೮-೨೩).

05086001 ದುರ್ಯೋಧನ ಉವಾಚ|

05086001a ಯದಾಹ ವಿದುರಃ ಕೃಷ್ಣೇ ಸರ್ವಂ ತತ್ಸತ್ಯಮುಚ್ಯತೇ|

05086001c ಅನುರಕ್ತೋ ಹ್ಯಸಂಹಾರ್ಯಃ ಪಾರ್ಥಾನ್ಪ್ರತಿ ಜನಾರ್ದನಃ||

ದುರ್ಯೋಧನನು ಹೇಳಿದನು: “ಕೃಷ್ಣನ ಕುರಿತು ವಿದುರನನು ಹೇಳಿದುದೆಲ್ಲವೂ ಸತ್ಯ. ಜನಾರ್ದನನು ಪಾರ್ಥರಲ್ಲಿ ಬಿಡಿಸಲಸಾಧ್ಯವಾದಷ್ಟು ಅನುರಕ್ತನಾಗಿದ್ದಾನೆ.

05086002a ಯತ್ತು ಸತ್ಕಾರಸಮ್ಯುಕ್ತಂ ದೇಯಂ ವಸು ಜನಾರ್ದನೇ|

05086002c ಅನೇಕರೂಪಂ ರಾಜೇಂದ್ರ ನ ತದ್ದೇಯಂ ಕದಾ ಚನ||

ರಾಜೇಂದ್ರ! ಜನಾರ್ದನನಿಗೆ ಸತ್ಕಾರವಾಗಿ ಏನು ಅನೇಕ ರೂಪದ ಸಂಪತ್ತನ್ನು ಕೊಡುವೆಯೆಂದು ನೀನು ಹೇಳಿದೆಯೋ ಅದನ್ನು ಸರ್ವಥಾ ಕೊಡಬಾರದು.

05086003a ದೇಶಃ ಕಾಲಸ್ತಥಾಯುಕ್ತೋ ನ ಹಿ ನಾರ್ಹತಿ ಕೇಶವಃ|

05086003c ಮಂಸ್ಯತ್ಯಧೋಕ್ಷಜೋ ರಾಜನ್ಭಯಾದರ್ಚತಿ ಮಾಮಿತಿ||

ಇದು ಅದಕ್ಕೆ ತಕ್ಕುದಾದ ಸ್ಥಳವೂ ಅಲ್ಲ, ಸಮಯವೂ ಅಲ್ಲ. ಕೇಶವನು ಅವೆಲ್ಲವಕ್ಕೂ ಅರ್ಹನಿರಬಹುದು. ಆದರೆ ರಾಜನ್! ನನ್ನನ್ನು ಭಯಪಟ್ಟುಕೊಂಡು ಪೂಜಿಸುತ್ತಿದ್ದಾನೆ ಎಂದು ಅಧೋಕ್ಷಜನು ತಿಳಿದುಕೊಳ್ಳುತ್ತಾನೆ.

05086004a ಅವಮಾನಶ್ಚ ಯತ್ರ ಸ್ಯಾತ್ಕ್ಷತ್ರಿಯಸ್ಯ ವಿಶಾಂ ಪತೇ|

05086004c ನ ತತ್ಕುರ್ಯಾದ್ಬುಧಃ ಕಾರ್ಯಮಿತಿ ಮೇ ನಿಶ್ಚಿತಾ ಮತಿಃ||

ವಿಶಾಂಪತೇ! ಬುದ್ಧಿವಂತ ಕ್ಷತ್ರಿಯನು ಅವಮಾನಹೊಂದುವ ಕಾರ್ಯವನ್ನು ಮಾಡಬಾರದು ಎಂದು ನನ್ನ ಅಭಿಪ್ರಾಯ.

05086005a ಸ ಹಿ ಪೂಜ್ಯತಮೋ ದೇವಃ ಕೃಷ್ಣಃ ಕಮಲಲೋಚನಃ|

05086005c ತ್ರಯಾಣಾಮಪಿ ಲೋಕಾನಾಂ ವಿದಿತಂ ಮಮ ಸರ್ವಥಾ||

ಕಮಲಲೋಚನ ದೇವ ಕೃಷ್ಣನು ಮೂರು ಲೋಕಗಳಲ್ಲಿಯೂ ಸರ್ವಥಾ ಅತ್ಯಂತ ಪೂಜನೀಯ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ.

05086006a ನ ತು ತಸ್ಮಿನ್ಪ್ರದೇಯಂ ಸ್ಯಾತ್ತಥಾ ಕಾರ್ಯಗತಿಃ ಪ್ರಭೋ|

05086006c ವಿಗ್ರಹಃ ಸಮುಪಾರಬ್ಧೋ ನ ಹಿ ಶಾಮ್ಯತ್ಯವಿಗ್ರಹಾತ್||

ಆದುದರಿಂದ ಪ್ರಭೋ! ಅವನಿಗೆ ಈಗ ಏನನ್ನೂ ಕೊಡುವುದು ಸರಿಯಲ್ಲ. ಯುದ್ಧವನ್ನು ನಿಶ್ಚಯಿಸಿದ ನಂತರ ಆತಿಥ್ಯವನ್ನಿತ್ತು ಹೋರಾಟಕ್ಕೆ ಶಾಂತಿಯನ್ನು ತರಬಾರದು.””

05086007 ವೈಶಂಪಾಯನ ಉವಾಚ|

05086007a ತಸ್ಯ ತದ್ವಚನಂ ಶ್ರುತ್ವಾ ಭೀಷ್ಮಃ ಕುರುಪಿತಾಮಹಃ|

05086007c ವೈಚಿತ್ರವೀರ್ಯಂ ರಾಜಾನಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಕುರುಪಿತಾಮಹ ಭೀಷ್ಮನು ರಾಜ ವೈಚಿತ್ರವೀರ್ಯನಿಗೆ ಈ ಮಾತನ್ನು ಹೇಳಿದನು:

05086008a ಸತ್ಕೃತೋಽಸತ್ಕೃತೋ ವಾಪಿ ನ ಕ್ರುಧ್ಯೇತ ಜನಾರ್ದನಃ|

05086008c ನಾಲಮನ್ಯಮವಜ್ಞಾತುಮವಜ್ಞಾತೋಽಪಿ ಕೇಶವಃ||

“ಸತ್ಕಾರವನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಜನಾರ್ದನನು ಸಿಟ್ಟಾಗುವವನಲ್ಲ. ಯಾವುದೂ ಅವನನ್ನು ಕಡೆಗಣಿಸಲಾರದು. ಏಕೆಂದರೆ ಕೇಶವನು ಕಡೆಗಣಿಸಲಾಗುವವನಲ್ಲ.

05086009a ಯತ್ತು ಕಾರ್ಯಂ ಮಹಾಬಾಹೋ ಮನಸಾ ಕಾರ್ಯತಾಂ ಗತಂ|

05086009c ಸರ್ವೋಪಾಯೈರ್ನ ತಚ್ಚಕ್ಯಂ ಕೇನ ಚಿತ್ಕರ್ತುಮನ್ಯಥಾ||

ಮಹಾಬಾಹೋ! ಯಾವಕಾರ್ಯವನ್ನು ಮಾಡಬೇಕೆಂದು ಅವನು ಮನಸ್ಸುಮಾಡುತ್ತಾನೋ ಅದನ್ನು ಬೇರೆಯದಾಗಿ ಮಾಡುವುದಕ್ಕೆ ಎಲ್ಲ ಉಪಾಯಗಳನ್ನು ಬಳಸಿದರೂ ಯಾರಿಂದಲೂ ಸಾಧ್ಯವಿಲ್ಲ.

05086010a ಸ ಯದ್ಬ್ರೂಯಾನ್ಮಹಾಬಾಹುಸ್ತತ್ಕಾರ್ಯಮವಿಶಂಕಯಾ|

05086010c ವಾಸುದೇವೇನ ತೀರ್ಥೇನ ಕ್ಷಿಪ್ರಂ ಸಂಶಾಮ್ಯ ಪಾಂಡವೈಃ||

ಏನನ್ನೂ ಶಂಕಿಸದೇ ಆ ಮಹಾಬಾಹುವು ಏನನ್ನು ಹೇಳುತ್ತಾನೋ ಅದನ್ನು ಮಾಡು. ವಾಸುದೇವನ ಮೂಲಕ ಪಾಂಡವರೊಂದಿಗೆ ಬೇಗ ಶಾಂತಿಯನ್ನು ತಾ.

05086011a ಧರ್ಮ್ಯಮರ್ಥ್ಯಂ ಸ ಧರ್ಮಾತ್ಮಾ ಧ್ರುವಂ ವಕ್ತಾ ಜನಾರ್ದನಃ|

05086011c ತಸ್ಮಿನ್ವಾಚ್ಯಾಃ ಪ್ರಿಯಾ ವಾಚೋ ಭವತಾ ಬಾಂಧವೈಃ ಸಹ||

ಆ ಧರ್ಮಾತ್ಮ ಜನಾರ್ದನನು ನಿಶ್ಚಯವಾಗಿಯೂ ಧರ್ಮ ಮತ್ತು ಅರ್ಥಗಳ ಕುರಿತೇ ಹೇಳುತ್ತಾನೆ. ಅವನಿಗೆ ಪ್ರಿಯವಾಗುವ ಮಾತುಗಳನ್ನೇ ನೀನೂ ಕೂಡ ಬಾಂಧವರೊಂದಿಗೆ ಮಾತನಾಡಬೇಕು.”

05086012 ದುರ್ಯೋಧನ ಉವಾಚ|

05086012a ನ ಪರ್ಯಾಯೋಽಸ್ತಿ ಯದ್ರಾಜಂ ಶ್ರಿಯಂ ನಿಷ್ಕೇವಲಾಮಹಂ|

05086012c ತೈಃ ಸಹೇಮಾಮುಪಾಶ್ನೀಯಾಂ ಜೀವಂ ಜೀವೈಃ ಪಿತಾಮಹ||

ದುರ್ಯೋಧನನು ಹೇಳಿದನು: “ಪಿತಾಮಹ! ಕೇವಲ ನನ್ನದಾಗಿರುವ ಈ ಶ್ರೀ-ರಾಜ್ಯವನ್ನು ಅವರೊಂದಿಗೆ ಹಂಚಿಕೊಂಡು ಜೀವಿಸಲು ಸಾಧ್ಯವಿಲ್ಲ.

05086013a ಇದಂ ತು ಸುಮಹತ್ಕಾರ್ಯಂ ಶೃಣು ಮೇ ಯತ್ಸಮರ್ಥಿತಂ|

05086013c ಪರಾಯಣಂ ಪಾಂಡವಾನಾಂ ನಿಯಂಸ್ಯಾಮಿ ಜನಾರ್ದನಂ||

ನಾನು ನಿಶ್ಚಯಿಸಿದಂತೆ ಮುಖ್ಯವಾಗಿ ಮಾಡಬೇಕಾದ ಕಾರ್ಯವೇನೆನ್ನುವುದನ್ನು ಕೇಳಿ: ಪಾಂಡವರ ಪರಾಯಣನಾದ ಜನಾರ್ದನನನ್ನು ಸೆರೆಹಿಡಿಯುತ್ತೇನೆ.

05086014a ತಸ್ಮಿನ್ಬದ್ಧೇ ಭವಿಷ್ಯಂತಿ ವೃಷ್ಣಯಃ ಪೃಥಿವೀ ತಥಾ|

05086014c ಪಾಂಡವಾಶ್ಚ ವಿಧೇಯಾ ಮೇ ಸ ಚ ಪ್ರಾತರಿಹೇಷ್ಯತಿ||

ಅವನನ್ನು ಬಂಧಿಸಿದರೆ ವೃಷ್ಣಿಗಳು, ಇಡೀ ಭೂಮಿ ಮತ್ತು ಪಾಂಡವರು ಕೂಡ ನನ್ನ ವಿಧೇಯರಾಗುತ್ತಾರೆ. ನಾಳೆ ಬೆಳಿಗ್ಗೆ ಅವನು ಇಲ್ಲಿಗೆ ಬರುತ್ತಿದ್ದಾನೆ.

05086015a ಅತ್ರೋಪಾಯಂ ಯಥಾ ಸಮ್ಯಂ ನ ಬುಧ್ಯೇತ ಜನಾರ್ದನಃ|

05086015c ನ ಚಾಪಾಯೋ ಭವೇತ್ಕಶ್ಚಿತ್ತದ್ಭವಾನ್ಪ್ರಬ್ರವೀತು ಮೇ||

ಯಾವ ರೀತಿಯಲ್ಲಿ ಈ ಉಪಾಯವು ಜನಾರ್ದನನಿಗೆ ತಿಳಿಯದಂತೆ ಮಾಡಬಹುದು ಎನ್ನುವುದನ್ನು ನೀವು ನನಗೆ ಹೇಳಿ.””

05086016 ವೈಶಂಪಾಯನ ಉವಾಚ|

05086016a ತಸ್ಯ ತದ್ವಚನಂ ಶ್ರುತ್ವಾ ಘೋರಂ ಕೃಷ್ಣಾಭಿಸಂಹಿತಂ|

05086016c ಧೃತರಾಷ್ಟ್ರಃ ಸಹಾಮಾತ್ಯೋ ವ್ಯಥಿತೋ ವಿಮನಾಭವತ್||

ವೈಶಂಪಾಯನನು ಹೇಳಿದನು: “ಕೃಷ್ಣನಿಗೆ ಕೇಡನ್ನು ಬಯಸುವ ಅವನ ಆ ಘೋರ ಮಾತುಗಳನ್ನು ಕೇಳಿ ಅಮಾತ್ಯರೊಂದಿಗೆ ಧೃತರಾಷ್ಟ್ರನು ವ್ಯತಿಥನಾದನು, ವಿಮನಸ್ಕನಾದನು.

05086017a ತತೋ ದುರ್ಯೋಧನಮಿದಂ ಧೃತರಾಷ್ಟ್ರೋಽಬ್ರವೀದ್ವಚಃ|

05086017c ಮೈವಂ ವೋಚಃ ಪ್ರಜಾಪಾಲ ನೈಷ ಧರ್ಮಃ ಸನಾತನಃ||

ಆಗ ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು: “ನೀನು ಪ್ರಜಾಪಾಲಕನಾಗಿದ್ದರೆ ಈ ರೀತಿ ಮಾತನಾಡಬೇಡ! ಇದು ಸನಾತನ ಧರ್ಮವಲ್ಲ!

05086018a ದೂತಶ್ಚ ಹಿ ಹೃಷೀಕೇಶಃ ಸಂಬಂಧೀ ಚ ಪ್ರಿಯಶ್ಚ ನಃ|

05086018c ಅಪಾಪಃ ಕೌರವೇಯೇಷು ಕಥಂ ಬಂಧನಮರ್ಹತಿ||

ಹೃಷೀಕೇಶನು ದೂತನೂ ನಮ್ಮ ಪ್ರಿಯ ಸಂಬಂಧಿಯೂ ಹೌದು. ಕೌರವರ ಕುರಿತು ಕೆಟ್ಟದ್ದನ್ನು ಬಯಸದ ಅವನು ಹೇಗೆ ಬಂಧಿಸಲು ಅರ್ಹನಾಗಬಹುದು?”

05086019 ಭೀಷ್ಮ ಉವಾಚ|

05086019a ಪರೀತೋ ಧೃತರಾಷ್ಟ್ರಾಯಂ ತವ ಪುತ್ರಃ ಸುಮಂದಧೀಃ|

05086019c ವೃಣೋತ್ಯನರ್ಥಂ ನ ತ್ವರ್ಥಂ ಯಾಚ್ಯಮಾನಃ ಸುಹೃದ್ಗಣೈಃ||

ಭೀಷ್ಮನು ಹೇಳಿದನು: “ಧೃತರಾಷ್ಟ್ರ! ನಿನ್ನ ಈ ಮೂಢ ಮಗನನ್ನು ಭೂತ ಅವರಿಸಿದೆ. ಸುಹೃದಯರು ಒಳ್ಳೆಯದನ್ನು ಹೇಳಿದರೂ ಅವನು ಅನರ್ಥವನ್ನೇ ಆರಿಸಿಕೊಳ್ಳುತ್ತಿದ್ದಾನೆ.

05086020a ಇಮಮುತ್ಪಥಿ ವರ್ತಂತಂ ಪಾಪಂ ಪಾಪಾನುಬಂಧಿನಂ|

05086020c ವಾಕ್ಯಾನಿ ಸುಹೃದಾಂ ಹಿತ್ವಾ ತ್ವಮಪ್ಯಸ್ಯಾನುವರ್ತಸೇ||

ನೀನು ಕೂಡ ಪಾಪಿಷ್ಟರನ್ನು ಕಟ್ಟಿಕೊಂಡು ಪಾಪಿಗಳಂತೆ ವರ್ತಿಸುತ್ತಿರುವವನನ್ನು ಸುಹೃದಯರ ಮಾತುಗಳನ್ನು ತೊರೆದು ಅನುಸರಿಸುತ್ತಿದ್ದೀಯೆ.

05086021a ಕೃಷ್ಣಮಕ್ಲಿಷ್ಟಕರ್ಮಾಣಮಾಸಾದ್ಯಾಯಂ ಸುದುರ್ಮತಿಃ|

05086021c ತವ ಪುತ್ರಃ ಸಹಾಮಾತ್ಯಃ ಕ್ಷಣೇನ ನ ಭವಿಷ್ಯತಿ||

ನಿನ್ನ ಈ ತುಂಬಾ ಕೆಟ್ಟ ಮಗನು ಅಮಾತ್ಯರೊಂದಿಗೆ ಅಕ್ಲಿಷ್ಟಕರ್ಮಿ ಕೃಷ್ಣನನ್ನು ಠಕ್ಕರಿಸಿ ಕ್ಷಣದಲ್ಲಿಯೇ ಇಲ್ಲದಂತಾಗುತ್ತಾನೆ.

05086022a ಪಾಪಸ್ಯಾಸ್ಯ ನೃಶಂಸಸ್ಯ ತ್ಯಕ್ತಧರ್ಮಸ್ಯ ದುರ್ಮತೇಃ|

05086022c ನೋತ್ಸಹೇಽನರ್ಥಸಮ್ಯುಕ್ತಾಂ ವಾಚಂ ಶ್ರೋತುಂ ಕಥಂ ಚನ||

ಈ ಪಾಪಿಯ, ಸುಳ್ಳುಬುರುಕನ, ಧರ್ಮವನ್ನು ತ್ಯಜಿಸಿದ ದುರ್ಮತಿಯು ಹೇಳುತ್ತಿರುವ ಮಾತುಗಳನ್ನು ಕೇಳಲು ನನಗೆ ಎಂದೂ ಉತ್ಸಾಹವಿಲ್ಲ.””

05086023 ವೈಶಂಪಾಯನ ಉವಾಚ|

05086023a ಇತ್ಯುಕ್ತ್ವಾ ಭರತಶ್ರೇಷ್ಠೋ ವೃದ್ಧಃ ಪರಮಮನ್ಯುಮಾನ್|

05086023c ಉತ್ಥಾಯ ತಸ್ಮಾತ್ಪ್ರಾತಿಷ್ಠದ್ಭೀಷ್ಮಃ ಸತ್ಯಪರಾಕ್ರಮಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭರತಶ್ರೇಷ್ಠ, ವೃದ್ಧ, ಸತ್ಯಪರಾಕ್ರಮಿ, ಭೀಷ್ಮನು ಪರಮ ಕುಪಿತನಾಗಿ ಎದ್ದು ಅಲ್ಲಿಂದ ಹೊರಟು ಹೋದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ದುರ್ಯೋಧನವಾಕ್ಯೇ ಷಡಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ದುರ್ಯೋಧನವಾಕ್ಯ ಎನ್ನುವ ಎಂಭತ್ತಾರನೆಯ ಅಧ್ಯಾಯವು.

Related image

Comments are closed.