Udyoga Parva: Chapter 85

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೫

“ಅವನು ಏನನ್ನು ಬಯಸಿ ಬರುತ್ತಿದ್ದಾನೋ ಅದನ್ನೇ ಅವನಿಗೆ ಕೊಡು” ಎಂದು ಹೇಳಿ ವಿದುರನು ಧೃತರಾಷ್ಟ್ರನ ಕಪಟತನವನ್ನು ಅವನಿಗೇ ತೋರಿಸಿಕೊಟ್ಟಿದುದು (೧-೧೭).

05085001 ವಿದುರ ಉವಾಚ|

05085001a ರಾಜನ್ಬಹುಮತಶ್ಚಾಸಿ ತ್ರೈಲೋಕ್ಯಸ್ಯಾಪಿ ಸತ್ತಮಃ|

05085001c ಸಂಭಾವಿತಶ್ಚ ಲೋಕಸ್ಯ ಸಮ್ಮತಶ್ಚಾಸಿ ಭಾರತ||

ವಿದುರನು ಹೇಳಿದನು: “ರಾಜನ್! ಭಾರತ! ನೀನು ಸತ್ತಮನೆಂದು ಮೂರು ಲೋಕಗಳಲ್ಲಿಯೂ ಬಹುಮತವಿದೆ. ಲೋಕದಲ್ಲಿ ನೀನು ಸಂಭಾವಿತನೆಂದೂ ಸಮ್ಮತಿಯಿದೆ.

05085002a ಯತ್ತ್ವಮೇವಂಗತೇ ಬ್ರೂಯಾಃ ಪಶ್ಚಿಮೇ ವಯಸಿ ಸ್ಥಿತಃ|

05085002c ಶಾಸ್ತ್ರಾದ್ವಾ ಸುಪ್ರತರ್ಕಾದ್ವಾ ಸುಸ್ಥಿರಃ ಸ್ಥವಿರೋ ಹ್ಯಸಿ||

ಶಾಸ್ತ್ರವನ್ನು ಆಧರಿಸಿ ಅಥವಾ ಉತ್ತಮ ತರ್ಕವನ್ನು ಆಧರಿಸಿ ನೀನು ಏನೇ ಹೇಳಿದರೂ, ಕೊನೆಯ ವಯಸ್ಸಿನಲ್ಲಿರುವ ನೀನು ವೃದ್ಧನಾಗಿರುವುದರಿಂದ ಅದು ಸುಸ್ಥಿರವೆನಿಸಿಕೊಳ್ಳುತ್ತದೆ.

05085003a ಲೇಖಾಶ್ಮನೀವ ಭಾಃ ಸೂರ್ಯೇ ಮಹೋರ್ಮಿರಿವ ಸಾಗರೇ|

05085003c ಧರ್ಮಸ್ತ್ವಯಿ ಮಹಾನ್ರಾಜನ್ನಿತಿ ವ್ಯವಸಿತಾಃ ಪ್ರಜಾಃ||

ರಾಜನ್! ಕಲ್ಲುಗಳ ಮೇಲೆ ಗೆರೆಗಳಿರುವಂತೆ, ಸೂರ್ಯನಲ್ಲಿ ಬೆಳಕಿರುವಂತೆ ಮತ್ತು ಸಾಗರದಲ್ಲಿ ಅಲೆಗಳಿರುವಂತೆ ನಿನ್ನಲ್ಲಿ ಮಹಾ ಧರ್ಮವಿದೆ ಎಂದು ಪ್ರಜೆಗಳು ತಿಳಿದುಕೊಂಡಿದ್ದಾರೆ.

05085004a ಸದೈವ ಭಾವಿತೋ ಲೋಕೋ ಗುಣೌಘೈಸ್ತವ ಪಾರ್ಥಿವ|

05085004c ಗುಣಾನಾಂ ರಕ್ಷಣೇ ನಿತ್ಯಂ ಪ್ರಯತಸ್ವ ಸಬಾಂಧವಃ||

ಪಾರ್ಥಿವ! ನಿನ್ನಲ್ಲಿರುವ ಉತ್ತಮ ಗುಣಗಳಿಂದ ಲೋಕವು ಸದಾ ನಿನ್ನನ್ನು ಗೌರವಿಸುತ್ತದೆ. ಬಾಂಧವರೊಂದಿಗೆ ಆ ಗುಣಗಳನ್ನು ಕಾಪಾಡಿಕೊಳ್ಳಲು ನಿತ್ಯವೂ ಪ್ರಯತ್ನಿಸು.

05085005a ಆರ್ಜವಂ ಪ್ರತಿಪದ್ಯಸ್ವ ಮಾ ಬಾಲ್ಯಾದ್ಬಹುಧಾ ನಶೀಃ|

05085005c ರಾಜ್ಯಂ ಪುತ್ರಾಂಶ್ಚ ಪೌತ್ರಾಂಶ್ಚ ಸುಹೃದಶ್ಚಾಪಿ ಸುಪ್ರಿಯಾನ್||

ಬಾಲ್ಯತನದಿಂದ ಬಹುರೀತಿಯಲ್ಲಿ ನಿನ್ನ ರಾಜ್ಯ, ಮಕ್ಕಳು, ಮೊಮ್ಮೊಕ್ಕಳೂ, ಸುಹೃದಯರು ಮತ್ತು ಪ್ರಿಯರು ನಾಶವಾಗದಂತೆ ಆರ್ಜವವನ್ನು ನಿನ್ನದಾಗಿಸಿಕೋ!

05085006a ಯತ್ತ್ವಂ ದಿತ್ಸಸಿ ಕೃಷ್ಣಾಯ ರಾಜನ್ನತಿಥಯೇ ಬಹು|

05085006c ಏತದನ್ಯಚ್ಚ ದಾಶಾರ್ಹಃ ಪೃಥಿವೀಮಪಿ ಚಾರ್ಹತಿ||

ರಾಜನ್! ಕೃಷ್ಣನಿಗೆ ನೀನು ಆತಿಥ್ಯದಿಂದ ಏನೆಲ್ಲ ಕೊಡಲು ಬಯಸುವೆಯೋ ಅದಕ್ಕಿಂತಲೂ ಹೆಚ್ಚಿನದಕ್ಕೆ, ಇಡೀ ಭೂಮಿಗೇ, ಆ ದಾಶಾರ್ಹನು ಅರ್ಹ!

05085007a ನ ತು ತ್ವಂ ಧರ್ಮಮುದ್ದಿಶ್ಯ ತಸ್ಯ ವಾ ಪ್ರಿಯಕಾರಣಾತ್|

05085007c ಏತದಿಚ್ಚಸಿ ಕೃಷ್ಣಾಯ ಸತ್ಯೇನಾತ್ಮಾನಮಾಲಭೇ||

ಆದರೆ ನೀನು ಅವೆಲ್ಲವನ್ನು ಧರ್ಮದ ಉದ್ದೇಶದಿಂದ ಅಥವ ಕೃಷ್ಣನ ಮೇಲೆ ನಿನಗಿರುವ ಪ್ರೀತಿಯ ಕಾರಣದಿಂದ ಕೊಡಲು ಬಯಸುತ್ತಿಲ್ಲ. ನನ್ನ ಆತ್ಮದ ಸಾಕ್ಷಿಯಾಗಿ ಇದು ಸತ್ಯವೆಂದು ಹೇಳುತ್ತೇನೆ.

05085008a ಮಾಯೈಷಾತತ್ತ್ವಮೇವೈತಚ್ಚದ್ಮೈತದ್ಭೂರಿದಕ್ಷಿಣ|

05085008c ಜಾನಾಮಿ ತೇ ಮತಂ ರಾಜನ್ಗೂಢಂ ಬಾಹ್ಯೇನ ಕರ್ಮಣಾ||

ಭೂರಿದಕ್ಷಿಣ! ಇದೊಂದು ಮೋಸ, ಸುಳ್ಳು, ಮೇಲ್ನೋಟ! ರಾಜನ್! ನೀನು ಹೊರಗಡೆಯವರ ತೋರಿಕೆಗೆ ಮಾಡುವ ಈ ಕೆಲಸದ ಹಿಂದೆ ಅಡಗಿರುವ ಯೋಚನೆಯನ್ನು ನಾನು ತಿಳಿದಿದ್ದೇನೆ.

05085009a ಪಂಚ ಪಂಚೈವ ಲಿಪ್ಸಂತಿ ಗ್ರಾಮಕಾನ್ಪಾಂಡವಾ ನೃಪ|

05085009c ನ ಚ ದಿತ್ಸಸಿ ತೇಭ್ಯಸ್ತಾಂಸ್ತಚ್ಚಮಂ ಕಃ ಕರಿಷ್ಯತಿ||

ನೃಪ! ಪಾಂಡವರು ಐದೇ ಐದು ಗ್ರಾಮಗಳನ್ನು ಕೇಳುತ್ತಿದ್ದಾರೆ. ಅದನ್ನು ಕೊಡಲೂ ನೀನು ಬಯಸುತ್ತಿಲ್ಲ. ಹೀಗಿರುವಾಗ ಯಾರುತಾನೇ ಶಾಂತಿಯನ್ನುಂಟುಮಾಡುತ್ತಾರೆ?

05085010a ಅರ್ಥೇನ ತು ಮಹಾಬಾಹುಂ ವಾರ್ಷ್ಣೇಯಂ ತ್ವಂ ಜಿಹೀರ್ಷಸಿ|

05085010c ಅನೇನೈವಾಭ್ಯುಪಾಯೇನ ಪಾಂಡವೇಭ್ಯೋ ಬಿಭಿತ್ಸಸಿ||

ಸಂಪತ್ತಿನಿಂದ ಮಹಾಬಾಹು ವಾರ್ಷ್ಣೇಯನನ್ನು ನೀನು ಗೆಲ್ಲಲು ಬಯಸುತ್ತಿದ್ದೀಯೆ. ಈ ಉಪಾಯಗಳಿಂದ ಅವನನ್ನು ಪಾಂಡವರಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದೀಯೆ.

05085011a ನ ಚ ವಿತ್ತೇನ ಶಕ್ಯೋಽಸೌ ನೋದ್ಯಮೇನ ನ ಗರ್ಹಯಾ|

05085011c ಅನ್ಯೋ ಧನಂಜಯಾತ್ಕರ್ತುಮೇತತ್ತತ್ತ್ವಂ ಬ್ರವೀಮಿ ತೇ||

ನಾನು ನಿನಗೆ ಹೇಳುತ್ತಿದ್ದೇನೆ. ವಿತ್ತದಿಂದಾಗಲೀ, ಪ್ರಯತ್ನದಿಂದಾಗಲೀ, ಬೈಯುವುದರಿಂದಾಗಲೀ ಅಥವಾ ಬೇರೆ ಯಾವುದರಿಂದಾಗಲೀ ಅವನನ್ನು ಧನಂಜಯನಿಂದ ಬೇರ್ಪಡಿಸಲು ಸಾಧ್ಯವಿಲ್ಲ.

05085012a ವೇದ ಕೃಷ್ಣಸ್ಯ ಮಾಹಾತ್ಮ್ಯಂ ವೇದಾಸ್ಯ ದೃಢಭಕ್ತಿತಾಂ|

05085012c ಅತ್ಯಾಜ್ಯಮಸ್ಯ ಜಾನಾಮಿ ಪ್ರಾಣೈಸ್ತುಲ್ಯಂ ಧನಂಜಯಂ||

ಕೃಷ್ಣನ ಮಹಾತ್ಮೆಯನ್ನು ತಿಳಿದಿದ್ದೇನೆ. ಅವನ ದೃಢಭಕ್ತಿಯನ್ನು ತಿಳಿದಿದ್ದೇನೆ. ತನ್ನ ಪ್ರಾಣಕ್ಕೆ ಸಮನಾದ ಧನಂಜಯನನ್ನು ಅವನು ತ್ಯಜಿಸುವುದಿಲ್ಲ ಎನ್ನುವುದನ್ನೂ ತಿಳಿದಿದ್ದೇನೆ.

05085013a ಅನ್ಯತ್ಕುಂಭಾದಪಾಂ ಪೂರ್ಣಾದನ್ಯತ್ಪಾದಾವಸೇಚನಾತ್|

05085013c ಅನ್ಯತ್ಕುಶಲಸಂಪ್ರಶ್ನಾನ್ನೈಷಿಷ್ಯತಿ ಜನಾರ್ದನಃ||

ಪಾದಗಳನ್ನು ತೊಳೆಯಲು ಸಾಕಾಗುವಷ್ಟು ಒಂದು ಬಿಂದಿಗೆ ನೀರು ಮತ್ತು ಕುಶಲದ ಕುರಿತಾದ ಪ್ರಶ್ನೆ ಇವುಗಳನ್ನು ಮಾತ್ರ ನಿನ್ನಿಂದ ಜನಾರ್ದನನು ಬಯಸುತ್ತಾನೆ.

05085014a ಯತ್ತ್ವಸ್ಯ ಪ್ರಿಯಮಾತಿಥ್ಯಂ ಮಾನಾರ್ಹಸ್ಯ ಮಹಾತ್ಮನಃ|

05085014c ತದಸ್ಮೈ ಕ್ರಿಯತಾಂ ರಾಜನ್ಮಾನಾರ್ಹೋ ಹಿ ಜನಾರ್ದನಃ||

ಆದುದರಿಂದ ಮಾನಾರ್ಹನಾದ ಆ ಮಹಾತ್ಮನಿಗೆ ಪ್ರೀತಿಯ ಆತಿಥ್ಯವನ್ನು ನೀಡಲು ಪ್ರಯತ್ನಿಸು. ಅದನ್ನೇ ಮಾಡು ರಾಜನ್! ಏಕೆಂದರೆ ಜನಾರ್ದನನು ಮಾನಾರ್ಹ.

05085015a ಆಶಂಸಮಾನಃ ಕಲ್ಯಾಣಂ ಕುರೂನಭ್ಯೇತಿ ಕೇಶವಃ|

05085015c ಯೇನೈವ ರಾಜನ್ನರ್ಥೇನ ತದೇವಾಸ್ಮಾ ಉಪಾಕುರು||

ಕೇಶವನು ಒಂದೇ ಒಂದು ಒಳ್ಳೆಯದನ್ನು ಬಯಸಿ ಕುರುಗಳಲ್ಲಿಗೆ ಬರುತ್ತಿದ್ದಾನೆ. ರಾಜನ್! ಅವನು ಏನನ್ನು ಬಯಸಿ ಬರುತ್ತಿದ್ದಾನೋ ಅದನ್ನೇ ಅವನಿಗೆ ಕೊಡು.

05085016a ಶಮಮಿಚ್ಚತಿ ದಾಶಾರ್ಹಸ್ತವ ದುರ್ಯೋಧನಸ್ಯ ಚ|

05085016c ಪಾಂಡವಾನಾಂ ಚ ರಾಜೇಂದ್ರ ತದಸ್ಯ ವಚನಂ ಕುರು||

ರಾಜೇಂದ್ರ! ದಾಶಾರ್ಹನು ನಿನ್ನ ದುರ್ಯೋಧನ ಮತ್ತು ಪಾಂಡವರಲ್ಲಿ ಶಾಂತಿಯನ್ನು ಇಚ್ಛಿಸುತ್ತಾನೆ. ಅವನ ಮಾತಿನಂತೆ ಮಾಡು.

05085017a ಪಿತಾಸಿ ರಾಜನ್ಪುತ್ರಾಸ್ತೇ ವೃದ್ಧಸ್ತ್ವಂ ಶಿಶವಃ ಪರೇ|

05085017c ವರ್ತಸ್ವ ಪಿತೃವತ್ತೇಷು ವರ್ತಂತೇ ತೇ ಹಿ ಪುತ್ರವತ್||

ರಾಜನ್! ನೀನು ಅವರ ತಂದೆ, ಅವರು ನಿನ್ನ ಮಕ್ಕಳು. ನೀನು ವೃದ್ಧ. ಇತರರು ಸಣ್ಣವರು. ಅವರೊಡನೆ ತಂದೆಯಂತೆ ನಡೆದುಕೋ. ಏಕೆಂದರೆ ಅವರು ನಿನ್ನೊಡನೆ ಮಕ್ಕಳಂತೆ ನಡೆದುಕೊಳ್ಳುತ್ತಿದ್ದಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುರವಾಕ್ಯೇ ಪಂಚಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುರವಾಕ್ಯ ಎನ್ನುವ ಎಂಭತ್ತೈದನೆಯ ಅಧ್ಯಾಯವು.

Related image

Comments are closed.