Udyoga Parva: Chapter 79

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೯

ಕೃಷ್ಣನ ರಾಯಭಾರಕ್ಕೆ ಸಹದೇವ-ಸಾತ್ಯಕಿಯರ ಸಂದೇಶ

“ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು” ಎಂದು ಸಹದೇವನು ಕೃಷ್ಣನಿಗೆ ಹೇಳಲು (೧-೪), “ಈ ಶೂರ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ” ಎಂದು ಸಾತ್ಯಕಿಯು ಸಹದೇವನನ್ನು ಅನುಮೋದಿಸಿದುದು (೫-೯).

05079001 ಸಹದೇವ ಉವಾಚ|

05079001a ಯದೇತತ್ಕಥಿತಂ ರಾಜ್ಞಾ ಧರ್ಮ ಏಷ ಸನಾತನಃ|

05079001c ಯಥಾ ತು ಯುದ್ಧಮೇವ ಸ್ಯಾತ್ತಥಾ ಕಾರ್ಯಮರಿಂದಮ||

ಸಹದೇವನು ಹೇಳಿದನು: “ಅರಿಂದಮ! ರಾಜನು ಏನು ಹೇಳಿದನೋ ಅದು ಸನಾತನ ಧರ್ಮ. ಹಾಗಿದ್ದರೂ ಯುದ್ಧವೇ ನಡೆಯುವ ಹಾಗೆ ಮಾಡು!

05079002a ಯದಿ ಪ್ರಶಮಮಿಚ್ಚೇಯುಃ ಕುರವಃ ಪಾಂಡವೈಃ ಸಹ|

05079002c ತಥಾಪಿ ಯುದ್ಧಂ ದಾಶಾರ್ಹ ಯೋಜಯೇಥಾಃ ಸಹೈವ ತೈಃ||

ದಾಶಾರ್ಹ! ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು.

05079003a ಕಥಂ ನು ದೃಷ್ಟ್ವಾ ಪಾಂಚಾಲೀಂ ತಥಾ ಕ್ಲಿಷ್ಟಾಂ ಸಭಾಗತಾಂ|

05079003c ಅವಧೇನ ಪ್ರಶಾಮ್ಯೇತ ಮಮ ಮನ್ಯುಃ ಸುಯೋಧನೇ||

ಸುಯೋಧನನ ವಧೆಯಾಗದೇ ಪಾಂಚಾಲಿಯನ್ನು ಸಭೆಗೆ ಎಳೆತಂದು ಕಾಡಿಸಿದುದನ್ನು ನೋಡಿದ ನನ್ನ ಈ ಸಿಟ್ಟು ಹೇಗೆ ಶಾಂತಗೊಳ್ಳುತ್ತದೆ?

05079004a ಯದಿ ಭೀಮಾರ್ಜುನೌ ಕೃಷ್ಣ ಧರ್ಮರಾಜಶ್ಚ ಧಾರ್ಮಿಕಃ|

05079004c ಧರ್ಮಮುತ್ಸೃಜ್ಯ ತೇನಾಹಂ ಯೋದ್ಧುಮಿಚ್ಚಾಮಿ ಸಮ್ಯುಗೇ||

ಕೃಷ್ಣ! ಒಂದು ವೇಳೆ ಭೀಮಾರ್ಜುನರಿಬ್ಬರೂ ಮತ್ತು ಧರ್ಮರಾಜನೂ ಧಾರ್ಮಿಕರಾಗಿದ್ದರೆ, ನಾನು ಧರ್ಮವನ್ನು ತೊರೆದು ಯುದ್ಧದಲ್ಲಿ ಅವರೊಂದಿಗೆ ಹೋರಾಡಲು ಬಯಸುತ್ತೇನೆ.”

05079005 ಸಾತ್ಯಕಿರುವಾಚ|

05079005a ಸತ್ಯಮಾಹ ಮಹಾಬಾಹೋ ಸಹದೇವೋ ಮಹಾಮತಿಃ|

05079005c ದುರ್ಯೋಧನವಧೇ ಶಾಂತಿಸ್ತಸ್ಯ ಕೋಪಸ್ಯ ಮೇ ಭವೇತ್||

ಸಾತ್ಯಕಿಯು ಹೇಳಿದನು: “ಮಹಾಬಾಹೋ! ಮಹಾಮತಿ ಸಹದೇವನು ಸತ್ಯವನ್ನೇ ನುಡಿದಿದ್ದಾನೆ. ದುರ್ಯೋದನನ ವಧೆಯಿಂದ ಮಾತ್ರ ಅವನ ಮೇಲೆ ನನಗಿರುವ ಕೋಪವು ಶಾಂತವಾಗುವುದು.

05079006a ಜಾನಾಸಿ ಹಿ ಯಥಾ ದೃಷ್ಟ್ವಾ ಚೀರಾಜಿನಧರಾನ್ವನೇ|

05079006c ತವಾಪಿ ಮನ್ಯುರುದ್ಭೂತೋ ದುಃಖಿತಾನ್ಪ್ರೇಕ್ಷ್ಯ ಪಾಂಡವಾನ್||

ವನದಲ್ಲಿ ಚೀರಜಿನಗಳನ್ನು ಧರಿಸಿ ದುಃಖಿತರಾಗಿದ್ದ ಪಾಂಡವರನ್ನು ನೋಡಿ ನಿನಗೂ ಕೂಡ ಕೋಪವುಂಟಾಗಿತ್ತು ಎಂದು ನಿನಗೆ ತಿಳಿದಿದೆ.

05079007a ತಸ್ಮಾನ್ಮಾದ್ರೀಸುತಃ ಶೂರೋ ಯದಾಹ ಪುರುಷರ್ಷಭಃ|

05079007c ವಚನಂ ಸರ್ವಯೋಧಾನಾಂ ತನ್ಮತಂ ಪುರುಷೋತ್ತಮ||

ಪುರುಷೋತ್ತಮ! ಆದುದರಿಂದ ಈ ಶೂರ ಪುರುಷರ್ಷಭ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ!””

05079008 ವೈಶಂಪಾಯನ ಉವಾಚ|

05079008a ಏವಂ ವದತಿ ವಾಕ್ಯಂ ತು ಯುಯುಧಾನೇ ಮಹಾಮತೌ|

05079008c ಸುಭೀಮಃ ಸಿಂಹನಾದೋಽಭೂದ್ಯೋಧಾನಾಂ ತತ್ರ ಸರ್ವಶಃ||

ವೈಶಂಪಾಯನನು ಹೇಳಿದನು: “ಮಹಾಮತಿ ಯುಯುಧಾನನು ಹೀಗೆ ಮಾತನ್ನಾಡಲು ಅಲ್ಲಿ ಎಲ್ಲ ಯೋಧರಿಂದ ಭಯಂಕರ ಸಿಂಹನಾದವು ಮೊಳಗಿತು.

05079009a ಸರ್ವೇ ಹಿ ಸರ್ವತೋ ವೀರಾಸ್ತದ್ವಚಃ ಪ್ರತ್ಯಪೂಜಯನ್|

05079009c ಸಾಧು ಸಾಧ್ವಿತಿ ಶೈನೇಯಂ ಹರ್ಷಯಂತೋ ಯುಯುತ್ಸವಃ||

ಎಲ್ಲಾ ಕಡೆಯಿಂದ ಎಲ್ಲರೂ ಆ ವೀರನ ಮಾತನ್ನು ಗೌರವಿಸಿ “ಸಾಧು! ಸಾಧು!” ಎಂದು ಕೂಗುತ್ತಾ ಶೈನಿಯನ್ನು ಹರ್ಷಗೊಳಿಸಿದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಸಹದೇವಸಾತ್ಯಕಿವಾಕ್ಯೇ ಏಕೋನಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಸಹದೇವಸಾತ್ಯಕಿವಾಕ್ಯ ಎನ್ನುವ ಎಪ್ಪತ್ತೊಂಭತ್ತನೆಯ ಅಧ್ಯಾಯವು.

Related image

Comments are closed.