Udyoga Parva: Chapter 76

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೬

ಕೃಷ್ಣರಾಯಭಾರಕ್ಕೆ ಅರ್ಜುನನ ಸಂದೇಶ

 “ಪಾಂಡವರಿಗೆ ಯಾವುದು ಒಳ್ಳೆಯದೆಂದು ತಿಳಿದಿದ್ದೀಯೋ ಅದನ್ನು ಬೇಗನೇ ಮಾಡಿ, ಮುಂದೆ ಮಾಡಬೇಕಾಗಿರುವುದನ್ನು ನಮಗೆ ಬಿಡು!” ಎಂದು ಅರ್ಜುನನು ಕೃಷ್ಣನಿಗೆ ತಿಳಿಸಿದುದು (೧-೨೦).

05076001 ಅರ್ಜುನ ಉವಾಚ|

05076001a ಉಕ್ತಂ ಯುಧಿಷ್ಠಿರೇಣೈವ ಯಾವದ್ವಾಚ್ಯಂ ಜನಾರ್ದನ|

05076001c ತವ ವಾಕ್ಯಂ ತು ಮೇ ಶ್ರುತ್ವಾ ಪ್ರತಿಭಾತಿ ಪರಂತಪ||

05076002a ನೈವ ಪ್ರಶಮಮತ್ರ ತ್ವಂ ಮನ್ಯಸೇ ಸುಕರಂ ಪ್ರಭೋ|

05076002c ಲೋಭಾದ್ವಾ ಧೃತರಾಷ್ಟ್ರಸ್ಯ ದೈನ್ಯಾದ್ವಾ ಸಮುಪಸ್ಥಿತಾತ್||

ಅರ್ಜುನನು ಹೇಳಿದನು: “ಜನಾರ್ದನ! ಹೇಳಬೇಕಾದುದೆಲ್ಲವನ್ನೂ ಯುಧಿಷ್ಠಿರನು ಹೇಳಿದ್ದಾನೆ. ಪರಂತಪ! ಪ್ರಭೋ! ನಿನ್ನ ಮಾತನ್ನು ಕೇಳಿದರೆ ಧೃತರಾಷ್ಟ್ರನ ಲೋಭದಿಂದ ಅಥವಾ ನಮ್ಮಲ್ಲಿ ಸಾಕಷ್ಟು ಬಲವಿಲ್ಲದೇ ಇರುವುದರಿಂದ ಸುಲಭದಲ್ಲಿ ಶಾಂತಿಯನ್ನು ತರಬಹುದು ಎಂದು ನಿನಗನ್ನಿಸುವುದಿಲ್ಲ ಎಂದನ್ನಿಸುತ್ತದೆ.

05076003a ಅಫಲಂ ಮನ್ಯಸೇ ಚಾಪಿ ಪುರುಷಸ್ಯ ಪರಾಕ್ರಮಂ|

05076003c ನ ಚಾಂತರೇಣ ಕರ್ಮಾಣಿ ಪೌರುಷೇಣ ಫಲೋದಯಃ||

ಹಾಗೆಯೇ ಪುರುಷನ ಪರಾಕ್ರಮವು ಫಲವನ್ನು ನೀಡದೇ ಇರುವುದಿಲ್ಲ ಮತ್ತು ಪುರುಷ ಪ್ರಯತ್ನವಿಲ್ಲದೇ ಯಾವುದೂ ಫಲಿಸುವುದಿಲ್ಲ ಎಂದೂ ಅಭಿಪ್ರಾಯಪಡುತ್ತಿದ್ದೀಯೆ.

05076004a ತದಿದಂ ಭಾಷಿತಂ ವಾಕ್ಯಂ ತಥಾ ಚ ನ ತಥೈವ ಚ|

05076004c ನ ಚೈತದೇವಂ ದ್ರಷ್ಟವ್ಯಮಸಾಧ್ಯಮಿತಿ ಕಿಂ ಚನ||

ನೀನು ಹೇಳಿದ ಮಾತಿನಂತೆಯೇ ಆಗಬಹುದು ಆಗದೆಯೂ ಇರಬಹುದು. ಆದರೆ ಯಾವುದನ್ನೂ ಅಸಾಧ್ಯವೆಂದು ಕಾಣಬಾರದು.

05076005a ಕಿಂ ಚೈತನ್ಮನ್ಯಸೇ ಕೃಚ್ಚ್ರಮಸ್ಮಾಕಂ ಪಾಪಮಾದಿತಃ|

05076005c ಕುರ್ವಂತಿ ತೇಷಾಂ ಕರ್ಮಾಣಿ ಯೇಷಾಂ ನಾಸ್ತಿ ಫಲೋದಯಃ||

ಮತ್ತು ನಮ್ಮ ಈ ಕಷ್ಟಗಳೆಲ್ಲವಕ್ಕೂ ಕಾರಣ ಅವರು ಮಾಡಿದ ಪಾಪ ಎಂದು ತಿಳಿದುಕೊಂಡಿದ್ದೀಯಲ್ಲವೇ? ಆದರೆ ಅವರಿಗೆ ಇದೂವರೆಗೆ ಯಾವ ಫಲವೂ ದೊರೆತಂತಿಲ್ಲ!

05076006a ಸಂಪಾದ್ಯಮಾನಂ ಸಮ್ಯಕ್ಚ ಸ್ಯಾತ್ಕರ್ಮ ಸಫಲಂ ಪ್ರಭೋ|

05076006c ಸ ತಥಾ ಕೃಷ್ಣ ವರ್ತಸ್ವ ಯಥಾ ಶರ್ಮ ಭವೇತ್ಪರೈಃ||

ಪ್ರಭೋ! ಚೆನ್ನಾಗಿ ನಡೆಸಿದ ಕಾರ್ಯಕ್ಕೆ ಫಲವೊಂದಿರುತ್ತದೆಯಲ್ಲವೇ? ಕೃಷ್ಣ! ಇತರರೊಂದಿಗೆ ಶಾಂತಿಯುಂಟಾಗುವಂತೆ ವರ್ತಿಸು.

05076007a ಪಾಂಡವಾನಾಂ ಕುರೂಣಾಂ ಚ ಭವಾನ್ಪರಮಕಃ ಸುಹೃತ್|

05076007c ಸುರಾಣಾಮಸುರಾಣಾಂ ಚ ಯಥಾ ವೀರ ಪ್ರಜಾಪತಿಃ||

ವೀರ! ನೀನು ಸುರಾಸುರರಿಗೆ ಪ್ರಜಾಪತಿಯು ಹೇಗೋ ಹಾಗೆ ಪಾಂಡವ-ಕುರುಗಳಿಗೆ ನೀನು ಪರಮ ಮಿತ್ರ.

05076008a ಕುರೂಣಾಂ ಪಾಂಡವಾನಾಂ ಚ ಪ್ರತಿಪತ್ಸ್ವ ನಿರಾಮಯಂ|

05076008c ಅಸ್ಮದ್ಧಿತಮನುಷ್ಠಾತುಂ ನ ಮನ್ಯೇ ತವ ದುಷ್ಕರಂ||

ಕುರುಗಳಿಗೆ ಮತ್ತು ಪಾಂಡವರಿಗೆ ಒಳ್ಳೆಯದಾಗುವ ಹಾಗೆ ಮಾಡು. ಇದನ್ನು ನಡೆಸಿಕೊಡುವುದು ನಿನಗೆ ದುಷ್ಕರವಲ್ಲ ಎಂದು ತಿಳಿದಿದ್ದೇವೆ.

05076009a ಏವಂ ಚೇತ್ಕಾರ್ಯತಾಮೇತಿ ಕಾರ್ಯಂ ತವ ಜನಾರ್ದನ|

05076009c ಗಮನಾದೇವಮೇವ ತ್ವಂ ಕರಿಷ್ಯಸಿ ನ ಸಂಶಯಃ||

ಜನಾರ್ದನ! ಈ ಕಾರ್ಯವನ್ನು ನೀನು ಅಲ್ಲಿ ಹೋಗುವುದರ ಮೂಲಕವೇ ಮಾಡಿ ಮುಗಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.

05076010a ಚಿಕೀರ್ಷಿತಮಥಾನ್ಯತ್ತೇ ತಸ್ಮಿನ್ವೀರ ದುರಾತ್ಮನಿ|

05076010c ಭವಿಷ್ಯತಿ ತಥಾ ಸರ್ವಂ ಯಥಾ ತವ ಚಿಕೀರ್ಷಿತಂ||

ವೀರ! ಆ ದುರಾತ್ಮನೊಂದಿಗೆ ಯಾವ ರೀತಿಯಾದರೂ ನೀನು ಬಯಸಿದಂತೆ ನಡೆದುಕೋ. ಆಗುವುದೆಲ್ಲವೂ ನೀನು ಬಯಸಿದಂತೆಯೇ ಆಗುತ್ತದೆ.

05076011a ಶರ್ಮ ತೈಃ ಸಹ ವಾ ನೋಽಸ್ತು ತವ ವಾ ಯಚ್ಚಿಕೀರ್ಷಿತಂ|

05076011c ವಿಚಾರ್ಯಮಾಣೋ ಯಃ ಕಾಮಸ್ತವ ಕೃಷ್ಣ ಸ ನೋ ಗುರುಃ||

ಅವರೊಂದಿಗೆ ಶಾಂತಿ ನೆಲೆಸುತ್ತದೆಯೋ ಅಥವಾ ಇಲ್ಲವೋ ಅದು ನೀನು ಬಯಸಿದಂತೆ. ಕೃಷ್ಣ! ನಿನ್ನ ಇಚ್ಛೆ ಮತ್ತು ವಿಚಾರಗಳು ನಮಗೆ ದೊಡ್ಡವು.

05076012a ನ ಸ ನಾರ್ಹತಿ ದುಷ್ಟಾತ್ಮಾ ವಧಂ ಸಸುತಬಾಂಧವಃ|

05076012c ಯೇನ ಧರ್ಮಸುತೇ ದೃಷ್ಟ್ವಾ ನ ಸಾ ಶ್ರೀರುಪಮರ್ಷಿತಾ||

ಧರ್ಮಸುತನಲ್ಲಿರುವ ಶ್ರೀಯನ್ನು ಕಂಡು ಅಸೂಯೆಗೊಂಡ ಆ ದುಷ್ಟಾತ್ಮನು ಮಕ್ಕಳು ಬಾಂಧವರೊಂದಿಗೆ ವಧೆಗೆ ಅರ್ಹನಲ್ಲವೇ?

05076013a ಯಚ್ಚಾಪ್ಯಪಶ್ಯತೋಪಾಯಂ ಧರ್ಮಿಷ್ಠಂ ಮಧುಸೂದನ|

05076013c ಉಪಾಯೇನ ನೃಶಂಸೇನ ಹೃತಾ ದುರ್ದ್ಯೂತದೇವಿನಾ||

ಮಧುಸೂದನ! ಧರ್ಮಿಷ್ಠವಾದ ಉಪಾಯವನ್ನು ಕಾಣದೇ ಅವನು ಅದನ್ನು ಕೆಟ್ಟ ದ್ಯೂತದಲ್ಲಿ ಪಣವಾಗಿ, ಮೋಸದ ಉಪಾಯದಿಂದ, ಅಪಹರಿಸಿದನು.

05076014a ಕಥಂ ಹಿ ಪುರುಷೋ ಜಾತಃ ಕ್ಷತ್ರಿಯೇಷು ಧನುರ್ಧರಃ|

05076014c ಸಮಾಹೂತೋ ನಿವರ್ತೇತ ಪ್ರಾಣತ್ಯಾಗೇಽಪ್ಯುಪಸ್ಥಿತೇ||

ಪ್ರಾಣತ್ಯಾಗವನ್ನು ಮಾಡಬೇಕಾಗಿ ಬಂದರೂ ಕ್ಷತ್ರಿಯರಲ್ಲಿ ಹುಟ್ಟಿದ ಧನುರ್ಧರ ಪುರುಷನು ಹೇಗೆ ತಾನೇ ಯುದ್ಧಕ್ಕೆ ಹಿಂಜರಿಯಬಲ್ಲ?

05076015a ಅಧರ್ಮೇಣ ಜಿತಾನ್ದೃಷ್ಟ್ವಾ ವನೇ ಪ್ರವ್ರಜಿತಾಂಸ್ತಥಾ|

05076015c ವಧ್ಯತಾಂ ಮಮ ವಾರ್ಷ್ಣೇಯ ನಿರ್ಗತೋಽಸೌ ಸುಯೋಧನಃ||

ವಾರ್ಷ್ಣೇಯ! ನಮ್ಮನ್ನು ಅಧರ್ಮದಿಂದ ಗೆದ್ದುದನ್ನು ಮತ್ತು ವನಕ್ಕೆ ಕಳುಹಿಸುದುದನ್ನು ನೋಡಿದಾಗಲೇ ಸುಯೋಧನನು ನನಗೆ ವಧಾರ್ಹನಾದ.

05076016a ನ ಚೈತದದ್ಭುತಂ ಕೃಷ್ಣ ಮಿತ್ರಾರ್ಥೇ ಯಚ್ಚಿಕೀರ್ಷಸಿ|

05076016c ಕ್ರಿಯಾ ಕಥಂ ನು ಮುಖ್ಯಾ ಸ್ಯಾನ್ಮೃದುನಾ ವೇತರೇಣ ವಾ||

ಕೃಷ್ಣ! ಮಿತ್ರರಿಗಾಗಿ ನೀನು ಏನು ಮಾಡಲಿಕ್ಕೆ ಹೊರಟಿರುವಿಯೋ ಅದು ಅದ್ಭುತವೇನೂ ಅಲ್ಲ. ಆದರೆ ಮುಖ್ಯ ಕಾರ್ಯವು ಹೇಗೆ ಆಗುತ್ತದೆ - ಮೃದುತ್ವದಿಂದ ಅಥವಾ ಕಲಹದಿಂದ?

05076017a ಅಥ ವಾ ಮನ್ಯಸೇ ಜ್ಯಾಯಾನ್ವಧಸ್ತೇಷಾಮನಂತರಂ|

05076017c ತದೇವ ಕ್ರಿಯತಾಮಾಶು ನ ವಿಚಾರ್ಯಮತಸ್ತ್ವಯಾ||

ಅಥವಾ ಅವರನ್ನು ಕೂಡಲೇ ವಧಿಸುವುದು ಒಳ್ಳೆಯದು ಎಂದು ನಿನಗನ್ನಿಸಿದರೆ ಅದನ್ನೇ ಮಾಡೋಣ. ಅದರಲ್ಲಿ ನೀನು ವಿಚಾರಮಾಡಬೇಡ!

05076018a ಜಾನಾಸಿ ಹಿ ಯಥಾ ತೇನ ದ್ರೌಪದೀ ಪಾಪಬುದ್ಧಿನಾ|

05076018c ಪರಿಕ್ಲಿಷ್ಟಾ ಸಭಾಮಧ್ಯೇ ತಚ್ಚ ತಸ್ಯಾಪಿ ಮರ್ಷಿತಂ||

ಮಾಧವ! ಆ ಪಾಪಬುದ್ಧಿಯು ಹೇಗೆ ದ್ರೌಪದಿಯನ್ನು ಸಭಾಮಧ್ಯದಲ್ಲಿ ಕಾಡಿಸಿದ ಮತ್ತು ಹೇಗೆ ಇತರರು ಅದನ್ನು ಆಗಲು ಬಿಟ್ಟರು ಎನ್ನುವುದನ್ನು ನೀನು ತಿಳಿದಿದ್ದೀಯೆ.

05076019a ಸ ನಾಮ ಸಮ್ಯಗ್ವರ್ತೇತ ಪಾಂಡವೇಷ್ವಿತಿ ಮಾಧವ|

05076019c ನ ಮೇ ಸಂಜಾಯತೇ ಬುದ್ಧಿರ್ಬೀಜಮುಪ್ತಮಿವೋಷರೇ||

ಮಾಧವ! ಅಂಥಹ ಮನುಷ್ಯನು ಪಾಂಡವರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಾನೆ ಎಂದು ನನಗೆ ನಂಬಿಕೆಯಿಲ್ಲ. ಅದು ಉಪ್ಪು ನೆಲದಲ್ಲಿ ಬೀಜವನ್ನು ಬಿತ್ತಿದಂತೆ.

05076020a ತಸ್ಮಾದ್ಯನ್ಮನ್ಯಸೇ ಯುಕ್ತಂ ಪಾಂಡವಾನಾಂ ಚ ಯದ್ಧಿತಂ|

05076020c ತದಾಶು ಕುರು ವಾರ್ಷ್ಣೇಯ ಯನ್ನಃ ಕಾರ್ಯಮನಂತರಂ||

ಆದುದರಿಂದ, ವಾರ್ಷ್ಣೇಯ! ಪಾಂಡವರಿಗೆ ಯಾವುದು ಒಳ್ಳೆಯದೆಂದು ತಿಳಿದಿದ್ದೀಯೋ ಅದನ್ನು ಬೇಗನೇ ಮಾಡಿ, ಮುಂದೆ ಮಾಡಬೇಕಾಗಿರುವುದನ್ನು ನಮಗೆ ಬಿಡು!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಅರ್ಜುನವಾಕ್ಯೇ ಷಟ್‌ಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಎಪ್ಪತ್ತಾರನೆಯ ಅಧ್ಯಾಯವು.

Related image

Comments are closed.