Udyoga Parva: Chapter 75

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೫

“ನಿನ್ನಲ್ಲಿ ನೀನು ಏನೆಲ್ಲ ಉತ್ತಮ ಗುಣಗಳನ್ನು ಕಂಡುಕೊಂಡಿದ್ದೀಯೋ ಅದಕ್ಕಿಂತಲೂ ಸಹಸ್ರ ಪ್ರಮಾಣದ ಗುಣಗಳನ್ನು ನಾನು ನಿನ್ನಲ್ಲಿರುವುದನ್ನು ಕಾಣುತ್ತೇನೆ... ಕುರುಗಳು ತಮ್ಮದೇ ಹಠ ಹಿಡಿದು ನನ್ನ ಮಾತಿಗೆ ಒಪ್ಪಿಕೊಳ್ಳದೇ ಇದ್ದರೆ ಯುದ್ಧವೇ ನಡೆಯುತ್ತದೆ...ಆ ಯುದ್ಧದಲ್ಲಿ ಭಾರವು ನಿನ್ನ ಮೇಲಿರುತ್ತದೆ...” ಆದುದರಿಂದ ಶಂಡನಂತೆ ವರ್ತಿಸಬೇಡವೆಂದು ಕೃಷ್ಣನು ಭೀಮಸೇನನಿಗೆ ಹೇಳಿದುದು (೧-೨೦).

05075001 ಭಗವಾನುವಾಚ|

05075001a ಭಾವಂ ಜಿಜ್ಞಾಸಮಾನೋಽಹಂ ಪ್ರಣಯಾದಿದಮಬ್ರುವಂ|

05075001c ನ ಚಾಕ್ಷೇಪಾನ್ನ ಪಾಂಡಿತ್ಯಾನ್ನ ಕ್ರೋಧಾನ್ನ ವಿವಕ್ಷಯಾ||

ಭಗವಂತನು ಹೇಳಿದನು: “ನಿನ್ನ ಭಾವವನ್ನು ತಿಳಿದುಕೊಳ್ಳಲು ಪ್ರಣಯದಿಂದ ನಾನು ಹೇಳಿದೆ. ನಿನ್ನನ್ನು ಆಕ್ಷೇಪಿಸುವುದಕ್ಕಾಗಲೀ, ನನ್ನ ಪಾಂಡಿತ್ಯವನ್ನು ತೋರಿಸಿಕೊಳ್ಳುವುದಕ್ಕಾಗಲೀ, ಸಿಟ್ಟಿನಿಂದಾಗಲೀ ಅಥವಾ ಅನುಮಾನದಿಂದಾಗಲೀ ಅಲ್ಲ.

05075002a ವೇದಾಹಂ ತವ ಮಾಹಾತ್ಮ್ಯಮುತ ತೇ ವೇದ ಯದ್ಬಲಂ|

05075002c ಉತ ತೇ ವೇದ ಕರ್ಮಾಣಿ ನ ತ್ವಾಂ ಪರಿಭವಾಮ್ಯಹಂ||

ನಿನ್ನ ಮಹಾತ್ಮೆಯನ್ನು ನಾನು ತಿಳಿದಿದ್ದೇನೆ. ನಿನ್ನ ಬಲವೇನೆನ್ನುವುದನ್ನೂ ತಿಳಿದಿದ್ದೇನೆ. ನೀನು ಮಾಡಿದ ಮಹತ್ಕಾರ್ಯಗಳನ್ನು ಬಲ್ಲೆ. ನಾನು ನಿನ್ನನ್ನು ಸೋಲಿಸಲು ಪ್ರಯತ್ನಿಸುತ್ತಿಲ್ಲ.

05075003a ಯಥಾ ಚಾತ್ಮನಿ ಕಲ್ಯಾಣಂ ಸಂಭಾವಯಸಿ ಪಾಂಡವ|

05075003c ಸಹಸ್ರಗುಣಮಪ್ಯೇತತ್ತ್ವಯಿ ಸಂಭಾವಯಾಮ್ಯಹಂ||

ಪಾಂಡವ! ನಿನ್ನಲ್ಲಿ ನೀನು ಏನೆಲ್ಲ ಉತ್ತಮ ಗುಣಗಳನ್ನು ಕಂಡುಕೊಂಡಿದ್ದೀಯೋ ಅದಕ್ಕಿಂತಲೂ ಸಹಸ್ರ ಪ್ರಮಾಣದ ಗುಣಗಳನ್ನು ನಾನು ನಿನ್ನಲ್ಲಿರುವುದನ್ನು ಕಾಣುತ್ತೇನೆ.

05075004a ಯಾದೃಶೇ ಚ ಕುಲೇ ಜನ್ಮ ಸರ್ವರಾಜಾಭಿಪೂಜಿತೇ|

05075004c ಬಂಧುಭಿಶ್ಚ ಸುಹೃದ್ಭಿಶ್ಚ ಭೀಮ ತ್ವಮಸಿ ತಾದೃಶಃ||

ಭೀಮ! ಸರ್ವರಾಜರಿಂದ ಪೂಜಿತ ಕುಲದಲ್ಲಿ ಯಾರು ಹುಟ್ಟುತ್ತಾರೋ ಮತ್ತು ಬಂಧು-ಸುಹೃದಯರಿಂದ ಯಾರು ಸುತ್ತುವರೆದಿರುತ್ತಾರೋ ಅವರಂತೆಯೇ ನೀನು ಇದ್ದೀಯೆ!

05075005a ಜಿಜ್ಞಾಸಂತೋ ಹಿ ಧರ್ಮಸ್ಯ ಸಂದಿಗ್ಧಸ್ಯ ವೃಕೋದರ|

05075005c ಪರ್ಯಾಯಂ ನ ವ್ಯವಸ್ಯಂತಿ ದೈವಮಾನುಷಯೋರ್ಜನಾಃ||

ವೃಕೋದರ! ದೈವ ಮತ್ತು ಮನುಷ್ಯ ಪ್ರಯತ್ನಗಳ ನಡುವಿನ ಧರ್ಮ ಸಂದಿಗ್ಧತೆಯನ್ನು ಜಿಜ್ಞಾಸೆಮಾಡುವವರು ಇಂಥಹುದೇ ಎನ್ನುವ ನಿರ್ಧಾರಕ್ಕೆ ಬಂದವರಿಲ್ಲ.

05075006a ಸ ಏವ ಹೇತುರ್ಭೂತ್ವಾ ಹಿ ಪುರುಷಸ್ಯಾರ್ಥಸಿದ್ಧಿಷು|

05075006c ವಿನಾಶೇಽಪಿ ಸ ಏವಾಸ್ಯ ಸಂದಿಗ್ಧಂ ಕರ್ಮ ಪೌರುಷಂ||

ಪುರುಷನ ಕರ್ಮವು ಸಂದಿಗ್ಧದಲ್ಲಿದೆ. ಪುರುಷನ ಅರ್ಥಸಿದ್ಧಿಗೆ ಏನು ಕಾರಣವೋ ಅದೇ ವಿನಾಶಕ್ಕೂ ಕಾರಣವಾಗಬಲ್ಲದು.

05075007a ಅನ್ಯಥಾ ಪರಿದೃಷ್ಟಾನಿ ಕವಿಭಿರ್ದೋಷದರ್ಶಿಭಿಃ|

05075007c ಅನ್ಯಥಾ ಪರಿವರ್ತಂತೇ ವೇಗಾ ಇವ ನಭಸ್ವತಃ||

ದೋಷಗಳನ್ನು ಕಾಣಬಹುದಾದ ಕವಿಗಳು ಒಂದು ರೀತಿಯಿಂದ ವಿಷಯವನ್ನು ನೋಡಿದರೆ ಅದು ಸುಳಿದಾಡುವ ಗಾಳಿಯಂತೆ ತನ್ನ ದಿಕ್ಕನ್ನೇ ಬದಲಾಯಿಸಬಹುದು.

05075008a ಸುಮಂತ್ರಿತಂ ಸುನೀತಂ ಚ ನ್ಯಾಯತಶ್ಚೋಪಪಾದಿತಂ|

05075008c ಕೃತಂ ಮಾನುಷ್ಯಕಂ ಕರ್ಮ ದೈವೇನಾಪಿ ವಿರುಧ್ಯತೇ||

ಮನುಷ್ಯನು ಮಾಡಿದ ಕೆಲಸವನ್ನು, ಅದು ಎಷ್ಟೇ ಆಲೋಚನೆ ಮಾಡಿ ಮಾಡಿದ್ದಾಗಿರಲಿ, ಉತ್ತಮ ನೀತಿಯುತವಾಗಿರಲಿ ಅಥವಾ ನ್ಯಾಯದಿಂದ ನಡೆಸಲ್ಪಟ್ಟಿರಲಿ, ಅದನ್ನು ಕೂಡ ದೈವವು ವಿರೋಧಿಸುತ್ತದೆ.

05075009a ದೈವಮಪ್ಯಕೃತಂ ಕರ್ಮ ಪೌರುಷೇಣ ವಿಹನ್ಯತೇ|

05075009c ಶೀತಮುಷ್ಣಂ ತಥಾ ವರ್ಷಂ ಕ್ಷುತ್ಪಿಪಾಸೇ ಚ ಭಾರತ||

ಪುರುಷ ಕರ್ಮವು ದೈವವು ಮಾಡದೇ ಇರುವ ಛಳಿ, ಬಿಸಿಲು, ಮಳೆ, ಮತ್ತು ಹಸಿವೆ-ಬಾಯಾರಿಕೆಗಳಿಂದಲೂ ನಾಶಗೊಳ್ಳುತ್ತವೆ.

05075010a ಯದನ್ಯದ್ದಿಷ್ಟಭಾವಸ್ಯ ಪುರುಷಸ್ಯ ಸ್ವಯಂಕೃತಂ|

05075010c ತಸ್ಮಾದನವರೋಧಶ್ಚ ವಿದ್ಯತೇ ತತ್ರ ಲಕ್ಷಣಂ||

ಹಾಗೆಯೇ ಪುರುಷನ ಇಷ್ಟಭಾವದಿಂದ ಸ್ವಯಂಕೃತ ಬೇರೆ ಕರ್ಮಗಳಿಗೆ ವಿರೋಧವಿಲ್ಲದೇ ಇರಬಹುದು.

05075011a ಲೋಕಸ್ಯ ನಾನ್ಯತೋ ವೃತ್ತಿಃ ಪಾಂಡವಾನ್ಯತ್ರ ಕರ್ಮಣಃ|

05075011c ಏವಂಬುದ್ಧಿಃ ಪ್ರವರ್ತೇತ ಫಲಂ ಸ್ಯಾದುಭಯಾನ್ವಯಾತ್||

ಪಾಂಡವ! ಕರ್ಮವಲ್ಲದೇ ಬೇರೆ ಯಾವುದರ ಮೇಲೂ ಲೋಕವು ನಡೆಯುವುದಿಲ್ಲ. ಇದನ್ನು ತಿಳಿದವನು ತನ್ನ ಪ್ರಯತ್ನ ಮತ್ತು ದೈವ ಇವೆರಡರ ಫಲವು ಏನೇ ಆಗಿದ್ದರೂ ಕರ್ಮದಲ್ಲಿಯೇ ಮುಂದುವರೆಯುತ್ತಾನೆ.

05075012a ಯ ಏವಂ ಕೃತಬುದ್ಧಿಃ ಸನ್ಕರ್ಮಸ್ವೇವ ಪ್ರವರ್ತತೇ|

05075012c ನಾಸಿದ್ಧೌ ವ್ಯಥತೇ ತಸ್ಯ ನ ಸಿದ್ಧೌ ಹರ್ಷಮಶ್ನುತೇ||

ಇದನ್ನು ಬುದ್ಧಿಯಲ್ಲಿ ಅಳವಳಡಿಸಿಕೊಂಡವನು ಕರ್ಮದಲ್ಲಿಯೇ ನಿರತನಾಗಿರುತ್ತಾನೆ. ಸಿದ್ಧಿಯಾಗದಿದ್ದರೆ ವ್ಯಥಿತನಾಗುವುದಿಲ್ಲ. ಸಿದ್ಧಿಯಾದರೆ ಅವನಿಗೆ ಹರ್ಷವೂ ಆಗುವುದಿಲ್ಲ.

05075013a ತತ್ರೇಯಮರ್ಥಮಾತ್ರಾ ಮೇ ಭೀಮಸೇನ ವಿವಕ್ಷಿತಾ|

05075013c ನೈಕಾಂತಸಿದ್ಧಿರ್ಮಂತವ್ಯಾ ಕುರುಭಿಃ ಸಹ ಸಮ್ಯುಗೇ||

ಭೀಮಸೇನ! ಇದನ್ನು ಮಾತ್ರ ನಾನು ಹೇಳಲು ಬಯಸಿದೆ.  ಕುರುಗಳೊಂದಿಗೆ ಆಗುವ ಯುದ್ಧದಲ್ಲಿ ನಾವು ಸಂಪೂರ್ಣ ಜಯವೊಂದೇ ಸಿಗುತ್ತದೆ ಎಂದು ಎಣಿಸಿರಬಾರದು.

05075014a ನಾತಿಪ್ರಣೀತರಶ್ಮಿಃ ಸ್ಯಾತ್ತಥಾ ಭವತಿ ಪರ್ಯಯೇ|

05075014c ವಿಷಾದಮರ್ಚೇದ್ ಗ್ಲಾನಿಂ ವಾ ಏತದರ್ಥಂ ಬ್ರವೀಮಿ ತೇ||

ಅದೃಷ್ಟವು ಪಲ್ಲಟವಾದರೆ ಮಂಚೂಣಿಯನ್ನು ಬಿಡಬಾರದು, ಮತ್ತು ವಿಷಾದ ಅಥವಾ ಆಯಾಸಗೊಳ್ಳಬಾರದು. ಅದನ್ನೇ ನಾನು ಹೇಳುತ್ತಿದ್ದೇನೆ.

05075015a ಶ್ವೋಭೂತೇ ಧೃತರಾಷ್ಟ್ರಸ್ಯ ಸಮೀಪಂ ಪ್ರಾಪ್ಯ ಪಾಂಡವ|

05075015c ಯತಿಷ್ಯೇ ಪ್ರಶಮಂ ಕರ್ತುಂ ಯುಷ್ಮದರ್ಥಮಹಾಪಯನ್||

ಪಾಂಡವ! ನಾಳೆ ನಾನು ಧೃತರಾಷ್ಟ್ರನ ಬಳಿ ಹೋಗಿ ನಿಮ್ಮ ಒಳಿತನ್ನು ಬಿಟ್ಟುಕೊಡದೇ ಶಾಂತಿಯನ್ನುಂಟುಮಾಡಲು ಪ್ರಯತ್ನಿಸುತ್ತೇನೆ.

05075016a ಶಮಂ ಚೇತ್ತೇ ಕರಿಷ್ಯಂತಿ ತತೋಽನಂತಂ ಯಶೋ ಮಮ|

05075016c ಭವತಾಂ ಚ ಕೃತಃ ಕಾಮಸ್ತೇಷಾಂ ಚ ಶ್ರೇಯ ಉತ್ತಮಂ||

ಅವರು ಶಾಂತಿಯನ್ನು ಮಾಡಿಕೊಂಡರೆ ಅನಂತವಾದ ಯಶಸ್ಸು ನನ್ನ ಪಾಲಿಗಾಗುತ್ತದೆ, ನಿಮ್ಮ ಆಸೆಯೂ ಪೂರೈಸಿದಂತಾಗುತ್ತದೆ ಮತ್ತು ಅವರಿಗೂ ಉತ್ತಮ ಶ್ರೇಯಸ್ಸುಂಟಾಗುತ್ತದೆ.

05075017a ತೇ ಚೇದಭಿನಿವೇಕ್ಷ್ಯಂತಿ ನಾಭ್ಯುಪೈಷ್ಯಂತಿ ಮೇ ವಚಃ|

05075017c ಕುರವೋ ಯುದ್ಧಮೇವಾತ್ರ ರೌದ್ರಂ ಕರ್ಮ ಭವಿಷ್ಯತಿ||

ಕುರುಗಳು ತಮ್ಮದೇ ಹಠ ಹಿಡಿದು ನನ್ನ ಮಾತಿಗೆ ಒಪ್ಪಿಕೊಳ್ಳದೇ ಇದ್ದರೆ ಆಗ ರೌದ್ರ ಕರ್ಮವಾದ ಯುದ್ಧವೇ ನಡೆಯುತ್ತದೆ.

05075018a ಅಸ್ಮಿನ್ಯುದ್ಧೇ ಭೀಮಸೇನ ತ್ವಯಿ ಭಾರಃ ಸಮಾಹಿತಃ|

05075018c ಧೂರರ್ಜುನೇನ ಧಾರ್ಯಾ ಸ್ಯಾದ್ವೋಢವ್ಯ ಇತರೋ ಜನಃ||

ಭೀಮಸೇನ! ಆ ಯುದ್ಧದಲ್ಲಿ ಭಾರವು ನಿನ್ನ ಮೇಲಿರುತ್ತದೆ, ಮಂಚೂಣಿಯು ಅರ್ಜುನನ ಕೈಯಲ್ಲಿರುತ್ತದೆ, ಮತ್ತು ಇತರರನ್ನು ನಿಮ್ಮ ಜೊತೆಗೇ ಎಳೆದುಕೊಂಡು ಹೋಗುತ್ತೀರಿ.

05075019a ಅಹಂ ಹಿ ಯಂತಾ ಬೀಭತ್ಸೋರ್ಭವಿತಾ ಸಮ್ಯುಗೇ ಸತಿ|

05075019c ಧನಂಜಯಸ್ಯೈಷ ಕಾಮೋ ನ ಹಿ ಯುದ್ಧಂ ನ ಕಾಮಯೇ||

ಆಗುವ ಯುದ್ಧದಲ್ಲಿ ನಾನೇ ಬೀಭತ್ಸುವಿನ ಸಾರಥಿಯಾಗುವೆ. ಇದು ಧನಂಜಯನ ಇಚ್ಛೆ. ಯಾಕೆಂದರೆ ನಾನು ಯುದ್ಧಮಾಡಲು ಬಯಸುವುದಿಲ್ಲ.

05075020a ತಸ್ಮಾದಾಶಂಕಮಾನೋಽಹಂ ವೃಕೋದರ ಮತಿಂ ತವ|

05075020c ತುದನ್ನಕ್ಲೀಬಯಾ ವಾಚಾ ತೇಜಸ್ತೇ ಸಮದೀಪಯಂ||

ವೃಕೋದರ! ನಿನ್ನ ಅಭಿಪ್ರಾಯದ ಮೇಲಿನ ಶಂಕೆಯಿಂದಲೇ ನಾನು ನಿನಗೆ “ಶಂಡನಂತೆ ವರ್ತಿಸಬೇಡ!” ಎಂದು ಮೂದಲಿಸಿ ನಿನ್ನ ತೇಜಸ್ಸನ್ನು ಬೆಳಗಿಸಿದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕೃಷ್ಣವಾಕ್ಯೇ ಪಂಚಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಎಪ್ಪತ್ತೈದನೆಯ ಅಧ್ಯಾಯವು.

Related image

Comments are closed.