Udyoga Parva: Chapter 74

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೪

ಕೃಷ್ಣನ ಮಾತಿನಿಂದ ಉತ್ತೇಜನಗೊಂಡ ಭೀಮನು “ಸರ್ವ ಲೋಕಗಳೇ ಸಿಟ್ಟಾದರೂ ಭಯವೆನ್ನುವುದು ನನಗೆ ತಿಳಿದಿಲ್ಲ!” ಎಂದು ತನ್ನ ಪರಾಕ್ರಮವನ್ನು ಹೇಳಿಕೊಳ್ಳುತ್ತಾ “ಕೇವಲ ಸೌಹಾರ್ದತೆಯಿಂದ ಮಾತ್ರ ಭರತರು ನಾಶವಾಗಬಾರದೆಂದು ನಾನು ಎಲ್ಲ ಸಂಕ್ಲೇಶಗಳನ್ನು ಸಹಿಸಿಕೊಂಡಿದ್ದೇನೆ” ಎಂದು ಹೇಳಿದುದು (೧-೧೮).

05074001 ವೈಶಂಪಾಯನ ಉವಾಚ|

05074001a ತಥೋಕ್ತೋ ವಾಸುದೇವೇನ ನಿತ್ಯಮನ್ಯುರಮರ್ಷಣಃ|

05074001c ಸದಶ್ವವತ್ಸಮಾಧಾವದ್ಬಭಾಷೇ ತದನಂತರಂ||

ವೈಶಂಪಾಯನನು ಹೇಳಿದನು: “ವಾಸುದೇವನು ಹೀಗೆ ಹೇಳಿದ ನಂತರ ನಿತ್ಯವೂ ಕೋಪದಲ್ಲಿದ್ದ, ಅಮರ್ಷಣನಾದ ಅವನು ಕುದುರೆಯಂತೆ ಓಡಾಡುತ್ತಾ ಹೇಳಿದನು:

05074002a ಅನ್ಯಥಾ ಮಾಂ ಚಿಕೀರ್ಷಂತಮನ್ಯಥಾ ಮನ್ಯಸೇಽಚ್ಯುತ|

05074002c ಪ್ರಣೀತಭಾವಮತ್ಯಂತಂ ಯುಧಿ ಸತ್ಯಪರಾಕ್ರಮಂ||

“ಅಚ್ಯುತ! ನಾನು ಏನು ಮಾಡಬೇಕೆಂದಿದ್ದೇನೆ ಎನ್ನುವುದನ್ನು ನೀನು ಸಂಪೂರ್ಣವಾಗಿ ತಪ್ಪು ತಿಳಿದುಕೊಂಡಿದ್ದೀಯೆ. ನಾನು ಯುದ್ಧದಲ್ಲಿಯೂ ಅತ್ಯಂತ ಸತ್ಯಪರಾಕ್ರಮಿ ಮತ್ತು ಕುಶಲ.

05074003a ವೇತ್ಥ ದಾಶಾರ್ಹ ಸತ್ತ್ವಂ ಮೇ ದೀರ್ಘಕಾಲಂ ಸಹೋಷಿತಃ|

05074003c ಉತ ವಾ ಮಾಂ ನ ಜಾನಾಸಿ ಪ್ಲವನ್ ಹ್ರದ ಇವಾಲ್ಪವಃ|

05074003e ತಸ್ಮಾದಪ್ರತಿರೂಪಾಭಿರ್ವಾಗ್ಭಿರ್ಮಾಂ ತ್ವಂ ಸಮರ್ಚಸಿ||

ದಾಶಾರ್ಹ! ನನ್ನ ಸತ್ವವನ್ನು ಅರ್ಥಮಾಡಿಕೊಳ್ಳುವಷ್ಟು ದೀರ್ಘ ಕಾಲ ನೀನು ನನ್ನೊಡನೆ ವಾಸಿಸಿದ್ದೀಯೆ! ಅಥವಾ ಸರೋವರದಲ್ಲಿ ತೇಲುವವನಂತೆ ನೀನು ನನ್ನನ್ನು ಅರಿತೇ ಇಲ್ಲ. ಆದುದರಿಂದ ನೀನು ಗುರಿಗೆ ಬಹುದೂರವಾಗಿರುವ ಮಾತುಗಳಿಂದ ನನ್ನನ್ನು ಆಕ್ರಮಣ ಮಾಡುತ್ತಿದ್ದೀಯೆ!

05074004a ಕಥಂ ಹಿ ಭೀಮಸೇನಂ ಮಾಂ ಜಾನನ್ಕಶ್ಚನ ಮಾಧವ|

05074004c ಬ್ರೂಯಾದಪ್ರತಿರೂಪಾಣಿ ಯಥಾ ಮಾಂ ವಕ್ತುಮರ್ಹಸಿ||

ಮಾಧವ! ಹೇಗೆ ತಾನೇ ಭೀಮಸೇನ ನನ್ನನ್ನು ತಿಳಿದ ಯಾರೂ ನೀನು ಸಂತೋಷದಿಂದ ಹೇಳಿದಂತ ಆ ದೊಡ್ಡ ಮಾತುಗಳನ್ನು ಆಡಬಲ್ಲರು?

05074005a ತಸ್ಮಾದಿದಂ ಪ್ರವಕ್ಷ್ಯಾಮಿ ವಚನಂ ವೃಷ್ಣಿನಂದನ|

05074005c ಆತ್ಮನಃ ಪೌರುಷಂ ಚೈವ ಬಲಂ ಚ ನ ಸಮಂ ಪರೈಃ||

ಆದುದರಿಂದ ವೃಷ್ಣಿನಂದನ! ನನ್ನ ಪೌರುಷದ ಕುರಿತು ಮತ್ತು ಬೇರೆ ಯಾರಲ್ಲಿಯೂ ಸಮನಾಗಿರದ ಬಲದ ಕುರಿತು ಇದನ್ನು ಹೇಳುತ್ತೇನೆ.

05074006a ಸರ್ವಥಾ ನಾರ್ಯಕರ್ಮೈತತ್ಪ್ರಶಂಸಾ ಸ್ವಯಮಾತ್ಮನಃ|

05074006c ಅತಿವಾದಾಪವಿದ್ಧಸ್ತು ವಕ್ಷ್ಯಾಮಿ ಬಲಮಾತ್ಮನಃ||

ತನ್ನನ್ನು ತಾನೇ ಹೊಗಳಿಕೊಳ್ಳುವುದು ಅರ್ಯರ ನಡತೆಯಲ್ಲ. ಆದರೂ ನೀನು ಅವಹೇಳನ ಮಾಡಿದುದರಿಂದ ನನ್ನ ಬಲದ ಕುರಿತು ಹೇಳುತ್ತೇನೆ.

05074007a ಪಶ್ಯೇಮೇ ರೋದಸೀ ಕೃಷ್ಣ ಯಯೋರಾಸನ್ನಿಮಾಃ ಪ್ರಜಾಃ|

05074007c ಅಚಲೇ ಚಾಪ್ಯನಂತೇ ಚ ಪ್ರತಿಷ್ಠೇ ಸರ್ವಮಾತರೌ||

05074008a ಯದೀಮೇ ಸಹಸಾ ಕ್ರುದ್ಧೇ ಸಮೇಯಾತಾಂ ಶಿಲೇ ಇವ|

05074008c ಅಹಮೇತೇ ನಿಗೃಹ್ಣೀಯಾಂ ಬಾಹುಭ್ಯಾಂ ಸಚರಾಚರೇ||

ಕೃಷ್ಣ! ಒಂದು ವೇಳೆ ಜೀವಿಗಳೆಲ್ಲವೂ ಇರುವ, ಅಚಲವಾಗಿರುವ, ಅನಂತವಾಗಿರುವ, ಎಲ್ಲವುಗಳ ತಾಯಂದಿರೆನಿಸಿಕೊಂಡಿರುವ ಇಲ್ಲಿ ಕಾಣುವ ಆಕಾಶ ಮತ್ತು ಭೂಮಿಗಳೆರಡೂ ಒಮ್ಮಿಂದೊಮ್ಮೆಗೇ ಕೋಪಗೊಂಡು ಶಿಲಾಬಂಡೆಗಳಂತೆ ಒಂದಕ್ಕೊಂದು ಅಪ್ಪಳಿಸಿದರೆ ಕೂಡ ನನ್ನ ಈ ಎರಡು ಬಾಹುಗಳಿಂದ ಸಚರಾಚರಗಳೊಂದಿಗೆ ಅವೆರಡನ್ನೂ ಬೇರೆಬೇರೆ ಮಾಡಿ ಹಿಡಿಯಬಲ್ಲೆ!

05074009a ಪಶ್ಯೈತದಂತರಂ ಬಾಹ್ವೋರ್ಮಹಾಪರಿಘಯೋರಿವ|

05074009c ಯ ಏತತ್ಪ್ರಾಪ್ಯ ಮುಚ್ಯೇತ ನ ತಂ ಪಶ್ಯಾಮಿ ಪೂರುಷಂ||

ಮಹಾ ಪರಿಘಗಳಿಂತಿರುವ ಈ ಎರಡು ಬಾಹುಗಳ ಮಧ್ಯೆ ನೋಡು. ಇವುಗಳ ಮಧ್ಯೆ ಸಿಲುಕಿ ಬಿಡುಗಡೆಯಾಗಬಲ್ಲ ಯಾವ ಪುರುಷನನ್ನೂ ನಾನು ನೋಡೆ!

05074010a ಹಿಮವಾಂಶ್ಚ ಸಮುದ್ರಶ್ಚ ವಜ್ರೀ ಚ ಬಲಭಿತ್ಸ್ವಯಂ|

05074010c ಮಯಾಭಿಪನ್ನಂ ತ್ರಾಯೇರನ್ಬಲಮಾಸ್ಥಾಯ ನ ತ್ರಯಃ||

ಹಿಮವಂತ, ಸಮುದ್ರ ಮತ್ತು ವಜ್ರಿಗಳು ಮೂವರೂ ಒಟ್ಟಿಗೇ ತಮ್ಮ ಬಲದಿಂದ ನಾನು ಬಲವನ್ನುಪಯೋಗಿಸಿ ಹಿಡಿಯುವವನನ್ನು ಬಿಡಿಸಲಾರರು.

05074011a ಯುಧ್ಯೇಯಂ ಕ್ಷತ್ರಿಯಾನ್ಸರ್ವಾನ್ಪಾಂಡವೇಷ್ವಾತತಾಯಿನಃ|

05074011c ಅಧಃ ಪಾದತಲೇನೈತಾನಧಿಷ್ಠಾಸ್ಯಾಮಿ ಭೂತಲೇ||

ಪಾಂಡವರ ಆತತಾಯಿ ಕ್ಷತ್ರಿಯರನ್ನು ಎಲ್ಲರನ್ನೂ ಯುದ್ಧದಲ್ಲಿ ಪಾದದ ಅಡಿಯಲ್ಲಿ ತುಳಿದು ಭೂಮಿಯ ಒಳಗೆ ಕಳುಹಿಸಿಯೇನು!

05074012a ನ ಹಿ ತ್ವಂ ನಾಭಿಜಾನಾಸಿ ಮಮ ವಿಕ್ರಮಮಚ್ಯುತ|

05074012c ಯಥಾ ಮಯಾ ವಿನಿರ್ಜಿತ್ಯ ರಾಜಾನೋ ವಶಗಾಃ ಕೃತಾಃ||

ಅಚ್ಯುತ! ಇಲ್ಲ. ನೀನು ನನ್ನ ವಿಕ್ರಮವನ್ನು ಹೇಗೆ ನಾನು ರಾಜರನ್ನು ಸದೆಬಡಿದು ವಶಮಾಡಿಕೊಂಡೆ ಎನ್ನುವುದನ್ನು - ತಿಳಿದಿಲ್ಲ!

05074013a ಅಥ ಚೇನ್ಮಾಂ ನ ಜಾನಾಸಿ ಸೂರ್ಯಸ್ಯೇವೋದ್ಯತಃ ಪ್ರಭಾಂ|

05074013c ವಿಗಾಢೇ ಯುಧಿ ಸಂಬಾಧೇ ವೇತ್ಸ್ಯಸೇ ಮಾಂ ಜನಾರ್ದನ||

ಅಥವಾ ಉದಯಿಸುತ್ತಿರುವ ಸೂರ್ಯನ ಪ್ರಭೆಯಂತೆ ನನ್ನನ್ನು ನೀನು ತಿಳಿಯದೇ ಇದ್ದರೆ ಜನಾರ್ದನ! ನಾನು ಯುದ್ಧದ ಕುಣಿಯಲ್ಲಿ ಧುಮುಕಿದಾಗ ನೀನು ನನ್ನನ್ನು ತಿಳಿಯುತ್ತೀಯೆ.

05074014a ಕಿಂ ಮಾತ್ಯವಾಕ್ಷೀಃ ಪರುಷೈರ್ವ್ರಣಂ ಸೂಚ್ಯಾ ಇವಾನಘ|

05074014c ಯಥಾಮತಿ ಬ್ರವೀಮ್ಯೇತದ್ವಿದ್ಧಿ ಮಾಮಧಿಕಂ ತತಃ||

ಅನಘ! ಗಾಯವನ್ನು ಸುಚ್ಚುವಂತೆ ಕಟುಮಾತುಗಳಿಂದ ಏಕೆ ನನ್ನನ್ನು ಅಪಮಾನಗೊಳಿಸುತ್ತಿರುವೆ? ನನಗೆ ತಿಳಿದುದನ್ನು ನಾನು ನಿನಗೆ ಹೇಳಿದ್ದೇನೆ. ನಾನು ಅದಕ್ಕಿಂತಲೂ ಅಧಿಕ.

05074015a ದ್ರಷ್ಟಾಸಿ ಯುಧಿ ಸಂಬಾಧೇ ಪ್ರವೃತ್ತೇ ವೈಶಸೇಽಹನಿ|

05074015c ಮಯಾ ಪ್ರಣುನ್ನಾನ್ಮಾತಂಗಾನ್ರಥಿನಃ ಸಾದಿನಸ್ತಥಾ||

ಯುದ್ಧವು ಮುಂದುವರೆಯುವಾಗ, ರಕ್ತವು ಪ್ರವಹಿಸುವ ದಿನದಂದು, ನೀನು ನನ್ನಿಂದ ಪ್ರಾಣವನ್ನು ಕಳೆದುಕೊಳ್ಳುವ ಆನೆಗಳನ್ನೂ ರಥದ ಸಾರಥಿಗಳನ್ನೂ ನೋಡುವಿಯಂತೆ!

05074016a ತಥಾ ನರಾನಭಿಕ್ರುದ್ಧಂ ನಿಘ್ನಂತಂ ಕ್ಷತ್ರಿಯರ್ಷಭಾನ್|

05074016c ದ್ರಷ್ಟಾ ಮಾಂ ತ್ವಂ ಚ ಲೋಕಶ್ಚ ವಿಕರ್ಷಂತಂ ವರಾನ್ವರಾನ್||

ಕೃದ್ಧನಾದ ನಾನು ನರ ಶ್ರೇಷ್ಠರಲ್ಲಿಯೇ ಶ್ರೇಷ್ಠರಾದ ಕ್ಷತ್ರಿಯರ್ಷಭರನ್ನು ಎಳೆದೆಳೆದು ಕೊಲ್ಲುವುದನ್ನು ನೀನು ಮತ್ತು ಲೋಕವು ನೋಡುವಿರಂತೆ!

05074017a ನ ಮೇ ಸೀದಂತಿ ಮಜ್ಜಾನೋ ನ ಮಮೋದ್ವೇಪತೇ ಮನಃ|

05074017c ಸರ್ವಲೋಕಾದಭಿಕ್ರುದ್ಧಾನ್ನ ಭಯಂ ವಿದ್ಯತೇ ಮಮ||

ಇಲ್ಲ! ನನ್ನ ಮಜ್ಜೆಗಳು ಕುಸಿದಿಲ್ಲ! ಮನಸ್ಸು ಕಂಪಿಸುತ್ತಿಲ್ಲ! ಸರ್ವ ಲೋಕಗಳೇ ಸಿಟ್ಟಾದರೂ ಭಯವೆನ್ನುವುದು ನನಗೆ ತಿಳಿದಿಲ್ಲ!

05074018a ಕಿಂ ತು ಸೌಹೃದಮೇವೈತತ್ಕೃಪಯಾ ಮಧುಸೂದನ|

05074018c ಸರ್ವಾಂಸ್ತಿತಿಕ್ಷೇ ಸಂಕ್ಲೇಶಾನ್ಮಾ ಸ್ಮ ನೋ ಭರತಾ ನಶನ್||

ಮಧುಸೂದನ! ಕೇವಲ ಸೌಹಾರ್ದತೆಯಿಂದ ಮಾತ್ರ ಭರತರು ನಾಶವಾಗಬಾರದೆಂದು ನಾನು ಎಲ್ಲ ಸಂಕ್ಲೇಶಗಳನ್ನು ಸಹಿಸಿಕೊಂಡಿದ್ದೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಮವಾಕ್ಯೇ ಚತುಃಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಮವಾಕ್ಯ ಎನ್ನುವ ಎಪ್ಪತ್ನಾಲ್ಕನೆಯ ಅಧ್ಯಾಯವು.

Related image

Comments are closed.