Udyoga Parva: Chapter 73

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೩

ಕೃಷ್ಣನು ಭೀಮನನ್ನು ಉತ್ತೇಜಿಸಿದುದು

ಭೀಮನ ಆ ಅಭೂತಪೂರ್ವ ಮೃದುತ್ವವನ್ನು ನೋಡಿ ಕೃಷ್ಣನು ಜೋರಾಗಿ ನಕ್ಕು ಬೆಂಕಿಯನ್ನು ಇನ್ನೂ ಉರಿಸುವ ಗಾಳಿಯಂತಹ ಮಾತುಗಳಿಂದ ಅವನನ್ನು ಚೇಡಿಸಿ ಉತ್ತೇಜಿಸಿದುದು (೧-೨೩).

05073001 ವೈಶಂಪಾಯನ ಉವಾಚ|

05073001a ಏತಚ್ಚ್ರುತ್ವಾ ಮಹಾಬಾಹುಃ ಕೇಶವಃ ಪ್ರಹಸನ್ನಿವ|

05073001c ಅಭೂತಪೂರ್ವಂ ಭೀಮಸ್ಯ ಮಾರ್ದವೋಪಗತಂ ವಚಃ||

ವೈಶಂಪಾಯನನು ಹೇಳಿದನು: “ಭೀಮನ ಈ ಅಭೂತಪೂರ್ವ, ಮೃದು ಮಾತುಗಳನ್ನು ಕೇಳಿ ಮಹಾಬಾಹು ಕೇಶವನು ಜೋರಾಗಿ ನಕ್ಕನು.

05073002a ಗಿರೇರಿವ ಲಘುತ್ವಂ ತಚ್ಚೀತತ್ವಮಿವ ಪಾವಕೇ|

05073002c ಮತ್ವಾ ರಾಮಾನುಜಃ ಶೌರಿಃ ಶಾಂಙ್ರಧನ್ವಾ ವೃಕೋದರಂ||

05073003a ಸಂತೇಜಯಂಸ್ತದಾ ವಾಗ್ಭಿರ್ಮಾತರಿಶ್ವೇವ ಪಾವಕಂ|

05073003c ಉವಾಚ ಭೀಮಮಾಸೀನಂ ಕೃಪಯಾಭಿಪರಿಪ್ಲುತಂ||

ಪರ್ವತವೇ ಹಗುರಾಗಿದೆಯೋ, ಬೆಂಕಿಯು ತಣ್ಣಗಾಗಿದೆಯೋ ಎಂದು ಭಾವಿಸಿ ರಾಮನ ತಮ್ಮ, ಶೌರಿ, ಶಾಂಙ್ರಧನ್ವಿಯು ಬೆಂಕಿಯನ್ನು ಇನ್ನೂ ಉರಿಸುವ ಗಾಳಿಯಂತಿರುವ ಮಾತುಗಳಿಂದ, ಕೃಪಾಭರಿತನಾಗಿ ಕುಳಿತುಕೊಂಡಿದ್ದ ವೃಕೋದರ ಭೀಮನಿಗೆ ಹೇಳಿದನು:

05073004a ತ್ವಮನ್ಯದಾ ಭೀಮಸೇನ ಯುದ್ಧಮೇವ ಪ್ರಶಂಸಸಿ|

05073004c ವಧಾಭಿನಂದಿನಃ ಕ್ರೂರಾನ್ಧಾರ್ತರಾಷ್ಟ್ರಾನ್ಮಿಮರ್ದಿಷುಃ||

“ಭೀಮಸೇನ! ಬೇರೆ ಎಲ್ಲ ಸಮಯಗಳಲ್ಲಿ ನೀನು ಕೊಲ್ಲುವುದರಿಂದ ಆನಂದಪಡುವ ಕ್ರೂರ ಧಾರ್ತರಾಷ್ಟ್ರರನ್ನು ವಿಮರ್ದಿಸುವ ಯುದ್ಧವೇ ಬೇಕೆಂದು ಹೇಳುತ್ತಿದ್ದೆ.

05073005a ನ ಚ ಸ್ವಪಿಷಿ ಜಾಗರ್ಷಿ ನ್ಯುಬ್ಜಃ ಶೇಷೇ ಪರಂತಪ|

05073005c ಘೋರಾಮಶಾಂತಾಂ ರುಶತೀಂ ಸದಾ ವಾಚಂ ಪ್ರಭಾಷಸೇ||

05073006a ನಿಃಶ್ವಸನ್ನಗ್ನಿವರ್ಣೇನ ಸಂತಪ್ತಃ ಸ್ವೇನ ಮನ್ಯುನಾ|

05073006c ಅಪ್ರಶಾಂತಮನಾ ಭೀಮ ಸಧೂಮ ಇವ ಪಾವಕಃ||

ಪರಂತಪ! ನೀನು ನಿದ್ದೆಮಾಡುವುದಿಲ್ಲ, ತಲೆಕೆಳಗೆ ಮಾಡಿ ಮಲಗಿಕೊಂಡಿದ್ದರೂ ಎಚ್ಚೆತ್ತೇ ಇರುತ್ತೀಯೆ. ಯಾವಾಗಲೂ ಘೋರವಾದ, ನೋಯಿಸುವ, ಸಿಟ್ಟಿನ ಮಾತನ್ನೇ ಆಡುತ್ತಿರುತ್ತೀಯೆ. ಭೀಮ! ನೀನು ಸಿಟ್ಟಿನಿಂದ ಶಾಂತಿಯಿಲ್ಲದೇ ಹೊಗೆತುಂಬಿದ ಬೆಂಕಿಯಂತೆ ಸಂತಪ್ತನಾಗಿ ಬೆಂಕಿಯ ನಿಟ್ಟುಸಿರನ್ನು ಬಿಡುತ್ತಿರುತ್ತೀಯೆ.

05073007a ಏಕಾಂತೇ ನಿಷ್ಟನಂ ಶೇಷೇ ಭಾರಾರ್ತ ಇವ ದುರ್ಬಲಃ|

05073007c ಅಪಿ ತ್ವಾಂ ಕೇ ಚಿದುನ್ಮತ್ತಂ ಮನ್ಯಂತೇಽತದ್ವಿದೋ ಜನಾಃ||

ಭಾರವನ್ನು ಹೊರಲಾರದ ದುರ್ಬಲನಂತೆ ನರಳುತ್ತಾ ಏಕಾಂತದಲ್ಲಿ ಬೇರೆಯಾಗಿಯೇ ಮಲಗುತ್ತೀಯೆ. ನಿನ್ನನ್ನು ಚೆನ್ನಾಗಿ ತಿಳಿಯದ ಜನರು ನೀನು ಹುಚ್ಚನೋ ಎಂದೂ ಆಡಿಕೊಳ್ಳುತ್ತಾರೆ.

05073008a ಆರುಜ್ಯ ವೃಕ್ಷಾನ್ನಿರ್ಮೂಲಾನ್ಗಜಃ ಪರಿಭುಜನ್ನಿವ|

05073008c ನಿಘ್ನನ್ಪದ್ಭಿಃ ಕ್ಷಿತಿಂ ಭೀಮ ನಿಷ್ಟನನ್ಪರಿಧಾವಸಿ||

ಮೇಯುವ ಆನೆಯಂತೆ ಮರಗಳನ್ನು ಕಿತ್ತು ನಿರ್ಮೂಲನ ಮಾಡುತ್ತೀಯೆ ಮತ್ತು ಭೀಮ! ಜೋರಾಗಿ ಕಿರುಚಿ ಕಾಲಿನಿಂದ ಭೂಮಿಯನ್ನು ಮೆಟ್ಟಿ ತುಳಿದು ಓಡುತ್ತಿರುತ್ತೀಯೆ.

05073009a ನಾಸ್ಮಿಂ ಜನೇಽಭಿರಮಸೇ ರಹಃ ಕ್ಷಿಯಸಿ ಪಾಂಡವ|

05073009c ನಾನ್ಯಂ ನಿಶಿ ದಿವಾ ವಾಪಿ ಕದಾ ಚಿದಭಿನಂದಸಿ||

ಪಾಂಡವ! ನೀನು ಈ ಜನರೊಂದಿಗೆ ರಮಿಸುತ್ತಿಲ್ಲ, ಅವರಿಂದ ದೂರವಿರಲು ಇಷ್ಟಪಡುತ್ತೀಯೆ. ರಾತ್ರಿಯಾಗಲೀ ಹಗಲಾಗಲೀ ನೀನು ಇನ್ನೊಬ್ಬರು ಬರುವುದನ್ನು ಇಷ್ಟಪಡುವುದಿಲ್ಲ.

05073010a ಅಕಸ್ಮಾತ್ಸ್ಮಯಮಾನಶ್ಚ ರಹಸ್ಯಾಸ್ಸೇ ರುದನ್ನಿವ|

05073010c ಜಾನ್ವೋರ್ಮೂರ್ಧಾನಮಾಧಾಯ ಚಿರಮಾಸ್ಸೇ ಪ್ರಮೀಲಿತಃ||

ಅಕಸ್ಮಾತ್ತಾಗಿ ನಗುತ್ತಾ ಅಥವಾ ಅಳುತ್ತಿರುವಂತೆ ಅಥವಾ ಬಹಳ ಹೊತ್ತು ಕಣ್ಣನ್ನು ಮುಚ್ಚಿಕೊಂಡು ನಿನ್ನ ಮೊಳಕಾಲಮೇಲೆ ತಲೆಯನ್ನಿರಿಸಿ ಕುಳಿತುಕೊಂಡಿರುತ್ತೀಯೆ.

05073011a ಭ್ರುಕುಟಿಂ ಚ ಪುನಃ ಕುರ್ವನ್ನೋಷ್ಠೌ ಚ ವಿಲಿಹನ್ನಿವ|

05073011c ಅಭೀಕ್ಷ್ಣಂ ದೃಶ್ಯಸೇ ಭೀಮ ಸರ್ವಂ ತನ್ಮನ್ಯುಕಾರಿತಂ||

ಕೆಲವೊಮ್ಮೆ ಕಣ್ಣುಹುಬ್ಬುಗಳನ್ನು ಗಂಟುಹಾಕಿಕೊಂಡಿರುತ್ತೀಯೆ ಅಥವಾ ತುಟಿಯನ್ನು ನೆಕ್ಕುತ್ತಿರುತ್ತೀಯೆ. ಭೀಮ! ಇವೆಲ್ಲವೂ ನೀನು ಸಿಟ್ಟಾಗಿರುವುದರಿಂದಲೇ ಎಂದು ತೋರುತ್ತವೆ.

05073012a ಯಥಾ ಪುರಸ್ತಾತ್ಸವಿತಾ ದೃಶ್ಯತೇ ಶುಕ್ರಮುಚ್ಚರನ್|

05073012c ಯಥಾ ಚ ಪಶ್ಚಾನ್ನಿರ್ಮುಕ್ತೋ ಧ್ರುವಂ ಪರ್ಯೇತಿ ರಶ್ಮಿವಾನ್||

05073013a ತಥಾ ಸತ್ಯಂ ಬ್ರವೀಮ್ಯೇತನ್ನಾಸ್ತಿ ತಸ್ಯ ವ್ಯತಿಕ್ರಮಃ|

05073013c ಹಂತಾಹಂ ಗದಯಾಭ್ಯೇತ್ಯ ದುರ್ಯೋಧನಮಮರ್ಷಣಂ||

“ಹೇಗೆ ಪೂರ್ವದಲ್ಲಿ ಸೂರ್ಯನು ಬೆಳಕನ್ನು ಪಸರಿಸಿ ಕಾಣಿಸಿಕೊಳ್ಳುತ್ತಾನೆ, ಮತ್ತು ಹೇಗೆ ಧೃವ ನಕ್ಷತ್ರವನ್ನು ಸುತ್ತುವರಿದು ರಶ್ಮಿವಂತನು ಪಶ್ಚಿಮದಲ್ಲಿ ಮುಳುಗುತ್ತಾನೋ ಹಾಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ - ಅದನ್ನು ಅತಿಕ್ರಮಿಸುವುದಿಲ್ಲ – ಈ ಅಮರ್ಷಣ ದುರ್ಯೋಧನನನ್ನು ನಾನು ಗದೆಯಿಂದ ಹೊಡೆದು ಕೊಲ್ಲುತ್ತೇನೆ.”

05073014a ಇತಿ ಸ್ಮ ಮಧ್ಯೇ ಭ್ರಾತೄಣಾಂ ಸತ್ಯೇನಾಲಭಸೇ ಗದಾಂ|

05073014c ತಸ್ಯ ತೇ ಪ್ರಶಮೇ ಬುದ್ಧಿರ್ಧೀಯತೇಽದ್ಯ ಪರಂತಪ||

ಎಂದು ನಿನ್ನ ಸಹೋದರರ ಮಧ್ಯೆ, ಹಿಡಿದ ಗದೆಯ ಆಣೆಯಿಟ್ಟು ನೀನು ಪ್ರತಿಜ್ಞೆ ಮಾಡಿದ್ದೆ. ಪರಂತಪ! ಆ ನಿನ್ನ ಬುದ್ಧಿಯೇ ಇಂದು ಈ ಶಾಂತಿಯ ಮಾತುಗಳನ್ನಾಡುತ್ತಿದೆಯೇ?

05073015a ಅಹೋ ಯುದ್ಧಪ್ರತೀಪಾನಿ ಯುದ್ಧಕಾಲ ಉಪಸ್ಥಿತೇ|

05073015c ಪಶ್ಯಸೀವಾಪ್ರತೀಪಾನಿ ಕಿಂ ತ್ವಾಂ ಭೀರ್ಭೀಮ ವಿಂದತಿ||

ಅಹೋ ಭೀಮ! ಯುದ್ಧದ ಸಮಯವು ಬಂದಿರುವಾಗ, ಯದ್ಧದ ಲಕ್ಷಣಗಳು ಹೌದೋ ಅಲ್ಲವೋ ಎಂದು ಕಾಣುತ್ತಿರುವಾಗ ನೀನು ಭೀತಿಗೊಳ್ಳಲಿಲ್ಲ ತಾನೇ?

05073016a ಅಹೋ ಪಾರ್ಥ ನಿಮಿತ್ತಾನಿ ವಿಪರೀತಾನಿ ಪಶ್ಯಸಿ|

05073016c ಸ್ವಪ್ನಾಂತೇ ಜಾಗರಾಂತೇ ಚ ತಸ್ಮಾತ್ಪ್ರಶಮಮಿಚ್ಚಸಿ||

ಅಹೋ ಪಾರ್ಥ! ಸ್ವಪ್ನದಲ್ಲಿಯಾಗಲೀ ಎಚ್ಚರವಿರುವಾಗಲಾಗಲೀ ನೀನು ಕೆಟ್ಟ ನಿಮಿತ್ತಗಳನ್ನು ನೋಡುತ್ತಿದ್ದೀಯಾ? ಅದಕ್ಕೇ ಶಾಂತಿಯನ್ನು ಬಯಸುತ್ತಿದ್ದೀಯಾ?

05073017a ಅಹೋ ನಾಶಂಸಸೇ ಕಿಂ ಚಿತ್ಪುಂಸ್ತ್ವಂ ಕ್ಲೀಬ ಇವಾತ್ಮನಿ|

05073017c ಕಶ್ಮಲೇನಾಭಿಪನ್ನೋಽಸಿ ತೇನ ತೇ ವಿಕೃತಂ ಮನಃ||

ಅಹೋ! ತನ್ನಲ್ಲಿ ಪುರುಷತ್ವವನ್ನು ಕಾಣದ ನಪುಂಸಕನೇನಾದರೂ ಆಗಿಬಿಟ್ಟಿದ್ದೀಯಾ? ಹೇಡಿತನವು ನಿನ್ನನ್ನು ಆವರಿಸಿದೆ. ಅದರಿಂದಲೇ ನಿನ್ನ ಮನಸ್ಸು ವಿಕೃತವಾಗಿದೆ.

05073018a ಉದ್ವೇಪತೇ ತೇ ಹೃದಯಂ ಮನಸ್ತೇ ಪ್ರವಿಷೀದತಿ|

05073018c ಊರುಸ್ತಂಭಗೃಹೀತೋಽಸಿ ತಸ್ಮಾತ್ಪ್ರಶಮಮಿಚ್ಚಸಿ||

ನಿನ್ನ ಹೃದಯವು ಕಂಪಿಸುತ್ತಿದೆ. ಮನಸ್ಸು ನಿರಾಶೆಗೊಂಡಿದೆ. ನಿನ್ನ ತೊಡೆಗಳು ಮರಗಟ್ಟಿವೆ. ಆದುದರಿಂದಲೇ ನೀನು ಶಾಂತಿಯನ್ನು ಬಯಸುತ್ತಿದ್ದೀಯೆ!

05073019a ಅನಿತ್ಯಂ ಕಿಲ ಮರ್ತ್ಯಸ್ಯ ಚಿತ್ತಂ ಪಾರ್ಥ ಚಲಾಚಲಂ|

05073019c ವಾತವೇಗಪ್ರಚಲಿತಾ ಅಷ್ಠೀಲಾ ಶಾಲ್ಮಲೇರಿವ||

ಪಾರ್ಥ! ಮನುಷ್ಯನ ಬದಲಾಗುವ ಚಿತ್ತವು ಭಿರುಗಾಳಿಯ ವೇಗದಿಂದ ಸುಯ್ದಾಡುವ ಶಾಲ್ಮಲೀ ಮರದ ಮೇಲಿನ ಗೆಡ್ಡೆಯಂತೆ!

05073020a ತವೈಷಾ ವಿಕೃತಾ ಬುದ್ಧಿರ್ಗವಾಂ ವಾಗಿವ ಮಾನುಷೀ|

05073020c ಮನಾಂಸಿ ಪಾಂಡುಪುತ್ರಾಣಾಂ ಮಜ್ಜಯತ್ಯಪ್ಲವಾನಿವ||

ಹಸುವಿಗೆ ಮಾತು ಹೇಗೋ ಹಾಗೆ ಈ ಅಭಿಪ್ರಾಯವು ನಿನಗೆ ಸ್ವಾಭಾವಿಕವಾದುದಲ್ಲ. ಇದು ಮುಳುಗುತ್ತಿರುವ ಹಡಗಿನಲ್ಲಿರುವ ಸಮುದ್ರಯಾನಿಗಳಂತಿರುವ ಪಾಂಡುಪುತ್ರರ ಮನಸ್ಸುಗಳನ್ನು ಕುಸಿಯುತ್ತದೆ.

05073021a ಇದಂ ಮೇ ಮಹದಾಶ್ಚರ್ಯಂ ಪರ್ವತಸ್ಯೇವ ಸರ್ಪಣಂ|

05073021c ಯದೀದೃಶಂ ಪ್ರಭಾಷೇಥಾ ಭೀಮಸೇನಾಸಮಂ ವಚಃ||

ಭೀಮಸೇನ! ನಿನಗೆ ತಕ್ಕುದಲ್ಲದ ಈ ಮಾತನ್ನಾಡುತ್ತಿದ್ದೀಯಾ ಎಂದರೆ ಪರ್ವತವೇ ಹರಿದು ಹೋಗಲು ಪ್ರಾರಂಭಿಸಿದೆಯೋ ಎನ್ನುವಷ್ಟು ಮಹದಾಶ್ಚರ್ಯವಾಗುತ್ತಿದೆ.

05073022a ಸ ದೃಷ್ಟ್ವಾ ಸ್ವಾನಿ ಕರ್ಮಾಣಿ ಕುಲೇ ಜನ್ಮ ಚ ಭಾರತ|

05073022c ಉತ್ತಿಷ್ಠಸ್ವ ವಿಷಾದಂ ಮಾ ಕೃಥಾ ವೀರ ಸ್ಥಿರೋ ಭವ||

ಭಾರತ! ನಿನ್ನ ಉತ್ತಮ ಕುಲದಲ್ಲಿಯ ಜನ್ಮವನ್ನು ಮತ್ತು ನಿನ್ನ ಮಹತ್ಕಾರ್ಯಗಳನ್ನು ನೋಡಿಕೋ! ವೀರ! ಎದ್ದೇಳು! ವಿಷಾದಿಸಬೇಡ! ಸ್ಥಿರನಾಗಿರು!

05073023a ನ ಚೈತದನುರೂಪಂ ತೇ ಯತ್ತೇ ಗ್ಲಾನಿರರಿಂದಮ|

05073023c ಯದೋಜಸಾ ನ ಲಭತೇ ಕ್ಷತ್ರಿಯೋ ನ ತದಶ್ನುತೇ||

ಅರಿಂದಮ! ಈ ರೀತಿಯ ಅಸಡ್ಡತನವು ನಿನಗೆ ಅನುರೂಪವಾದುದಲ್ಲ. ಕ್ಷತ್ರಿಯನು ಯಾವುದನ್ನು ತನ್ನ ವೀರ್ಯದಿಂದ ಪಡೆಯುವುದಿಲ್ಲವೋ ಅದನ್ನು ಉಣ್ಣುವುದಿಲ್ಲ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಮೋತ್ತೇಜಕ ಶ್ರೀಕೃಷ್ಣವಾಕ್ಯೇ ತ್ರಿಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಮೋತ್ತೇಜಕ ಶ್ರೀಕೃಷ್ಣವಾಕ್ಯ ಎನ್ನುವ ಎಪ್ಪತ್ಮೂರನೆಯ ಅಧ್ಯಾಯವು.

Related image

Comments are closed.