Udyoga Parva: Chapter 71

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೧

ಕೃಷ್ಣನು ರಾಯಭಾರಕ್ಕೆ ಒಪ್ಪಿಕೊಂಡಿದುದು

“ಭಿಕ್ಷೆಬೇಡುವುದು ಕ್ಷತ್ರಿಯನ ಕೆಲಸವಲ್ಲ... ಎಲ್ಲಿಯವರೆಗೆ ನೀನು ಕರುಣೆಯಿಂದ ಅವರೊಡನೆ ನಡೆದುಕೊಳ್ಳುತ್ತೀಯೋ ಅಲ್ಲಿಯವರಗೆ ಅವರು ನಿನ್ನ ರಾಜ್ಯವನ್ನು ನಿನ್ನಿಂದ ದೂರವಿಟ್ಟುಕೊಳ್ಳುತ್ತಾರೆ... ಅನಾರ್ಯ ಚಾರಿತ್ರ್ಯವುಳ್ಳ ಕೌರವರನ್ನು ಕೊಲ್ಲುವುದು, ಬೇರುಗಳನ್ನು ಕಳೆದುಕೊಂಡು ಕೇವಲ ಬುಡದ ಮೇಲೆ ನಿಂತಿರುವ ಮರವನ್ನು ಕೆಡಹುವಂತೆ, ಅತೀ ಸುಲಭ... ಪೌರ ಜಾನಪದರಲ್ಲಿ, ವೃದ್ಧ ಬಾಲಕರಲ್ಲಿ, ನಾಲ್ಕು ವರ್ಣದವರು ಸೇರುವಲ್ಲಿ ಅವನೇ ತಪ್ಪಿತಸ್ಥನೆಂದು ಹೇಳುತ್ತೇನೆ... ಏನೇ ಆದರೂ ಅವರೊಂದಿಗೆ ಯುದ್ಧವನ್ನೇ ನಾನು ಶಂಕಿಸುತ್ತಿದ್ದೇನೆ. ನಿಮಿತ್ತಗಳೆಲ್ಲವೂ ನನಗೆ ಅದನ್ನೇ ಸೂಚಿಸುತ್ತಿವೆ...ಸಂಗ್ರಾಮಕ್ಕೆ ಸಿದ್ಧನಾಗು” ಎಂದು ಯುಧಿಷ್ಠಿರನಿಗೆ ಹೇಳಿ ಕೃಷ್ಣನು ರಾಯಭಾರಕ್ಕೆ ಒಪ್ಪಿಕೊಳ್ಳುವುದು (೧-೩೭).

05071001 ಭಗವಾನುವಾಚ|

05071001a ಸಂಜಯಸ್ಯ ಶ್ರುತಂ ವಾಕ್ಯಂ ಭವತಶ್ಚ ಶ್ರುತಂ ಮಯಾ|

05071001c ಸರ್ವಂ ಜಾನಾಮ್ಯಭಿಪ್ರಾಯಂ ತೇಷಾಂ ಚ ಭವತಶ್ಚ ಯಃ||

ಭಗವಂತನು ಹೇಳಿದನು: “ಸಂಜಯನ ಮಾತನ್ನೂ ನಿನ್ನದನ್ನೂ ಕೇಳಿದ್ದೇನೆ. ಅವರ ಮತ್ತು ನಿನ್ನ ಎಲ್ಲ ಅಭಿಪ್ರಾಯಗಳನ್ನೂ ತಿಳಿದಿದ್ದೇನೆ.

05071002a ತವ ಧರ್ಮಾಶ್ರಿತಾ ಬುದ್ಧಿಸ್ತೇಷಾಂ ವೈರಾಶ್ರಿತಾ ಮತಿಃ|

05071002c ಯದಯುದ್ಧೇನ ಲಭ್ಯೇತ ತತ್ತೇ ಬಹುಮತಂ ಭವೇತ್||

ನಿನ್ನ ಬುದ್ಧಿಯು ಧರ್ಮವನ್ನು ಆಶ್ರಯಿಸಿದ್ದರೆ ಅವರ ಮತಿಯು ವೈರವನ್ನು ಆಶ್ರಯಿಸಿದೆ. ಯುದ್ಧವಿಲ್ಲದೇ ಏನೆಲ್ಲ ದೊರೆಯುತ್ತದೆಯೋ ಅದು ನಿನ್ನ ಬಹುಮತವಾಗುತ್ತದೆ.

05071003a ನ ಚ ತನ್ನೈಷ್ಠಿಕಂ ಕರ್ಮ ಕ್ಷತ್ರಿಯಸ್ಯ ವಿಶಾಂ ಪತೇ|

05071003c ಆಹುರಾಶ್ರಮಿಣಃ ಸರ್ವೇ ಯದ್ಭೈಕ್ಷಂ ಕ್ಷತ್ರಿಯಶ್ಚರೇತ್||

ವಿಶಾಂಪತೇ! ಭಿಕ್ಷೆಬೇಡುವುದು ಕ್ಷತ್ರಿಯನ ಕೆಲಸವಲ್ಲ. ಆಶ್ರಮಗಳನ್ನು ತಿಳಿದವರು ಕ್ಷತ್ರಿಯರು ಏನನ್ನು ಬೇಡಬೇಕೆಂದು ಹೇಳಿದ್ದಾರೆ.

05071004a ಜಯೋ ವಧೋ ವಾ ಸಂಗ್ರಾಮೇ ಧಾತ್ರಾ ದಿಷ್ಟಃ ಸನಾತನಃ|

05071004c ಸ್ವಧರ್ಮಃ ಕ್ಷತ್ರಿಯಸ್ಯೈಷ ಕಾರ್ಪಣ್ಯಂ ನ ಪ್ರಶಸ್ಯತೇ||

ಸಂಗ್ರಾಮದಲ್ಲಿ ಜಯ ಅಥವಾ ಸಾವು. ಇದೇ ಸನಾತನವಾಗಿ ಧಾತ್ರನು ತೋರಿಸಿಕೊಟ್ಟ ಕ್ಷತ್ರಿಯರ ಸ್ವಧರ್ಮ. ಹೇಡಿತನವು ಹೇಳಿದ್ದುದಲ್ಲ.

05071005a ನ ಹಿ ಕಾರ್ಪಣ್ಯಮಾಸ್ಥಾಯ ಶಕ್ಯಾ ವೃತ್ತಿರ್ಯುಧಿಷ್ಠಿರ|

05071005c ವಿಕ್ರಮಸ್ವ ಮಹಾಬಾಹೋ ಜಹಿ ಶತ್ರೂನರಿಂದಮ||

ಯುಧಿಷ್ಠಿರ! ಹೇಡಿತನವನ್ನು ಬಳಸಿ ಜೀವನ ಮಾಡುವುದು ಶಕ್ಯವಿಲ್ಲ. ಮಹಾಬಾಹೋ! ಅರಿಂದಮ! ವಿಕ್ರಮದಿಂದ ಶತ್ರುಗಳನ್ನು ಜಯಿಸು.

05071006a ಅತಿಗೃದ್ಧಾಃ ಕೃತಸ್ನೇಹಾ ದೀರ್ಘಕಾಲಂ ಸಹೋಷಿತಾಃ|

05071006c ಕೃತಮಿತ್ರಾಃ ಕೃತಬಲಾ ಧಾರ್ತರಾಷ್ಟ್ರಾಃ ಪರಂತಪ||

ಪರಂತಪ! ಅತಿ ಆಸೆಯಿಂದ ದೀರ್ಘಕಾಲ ಸ್ನೇಹವನ್ನು ಬಳಸಿ, ಸಂತೋಷಗೊಳಿಸಿ ಧಾರ್ತರಾಷ್ಟ್ರರು ಮಿತ್ರರನ್ನು ಮಾಡಿಕೊಂಡಿದ್ದಾರೆ. ಸೇನೆಗಳನ್ನು ಒಟ್ಟುಗೂಡಿಸಿದ್ದಾರೆ.

05071007a ನ ಪರ್ಯಾಯೋಽಸ್ತಿ ಯತ್ಸಾಮ್ಯಂ ತ್ವಯಿ ಕುರ್ಯುರ್ವಿಶಾಂ ಪತೇ|

05071007c ಬಲವತ್ತಾಂ ಹಿ ಮನ್ಯಂತೇ ಭೀಷ್ಮದ್ರೋಣಕೃಪಾದಿಭಿಃ||

ವಿಶಾಂಪತೇ! ಅವರು ನಿನ್ನನ್ನು ಎಂದೂ ಸರಿಸಮನೆಂದು ಪರಿಗಣಿಸುವುದಿಲ್ಲ. ಭೀಷ್ಮ, ದ್ರೋಣ, ಕೃಪ, ಮೊದಲಾದವರ ಕಾರಣದಿಂದ ತಾವೇ ಬಲವಂತರೆಂದು ತಿಳಿದುಕೊಂಡಿದ್ದಾರೆ.

05071008a ಯಾವಚ್ಚ ಮಾರ್ದವೇನೈತಾನ್ರಾಜನ್ನುಪಚರಿಷ್ಯಸಿ|

05071008c ತಾವದೇತೇ ಹರಿಷ್ಯಂತಿ ತವ ರಾಜ್ಯಮರಿಂದಮ||

ಅರಿಂದಮ! ರಾಜನ್! ಎಲ್ಲಿಯವರೆಗೆ ನೀನು ಕರುಣೆಯಿಂದ ಅವರೊಡನೆ ನಡೆದುಕೊಳ್ಳುತ್ತೀಯೋ ಅಲ್ಲಿಯವರಗೆ ಅವರು ನಿನ್ನ ರಾಜ್ಯವನ್ನು ನಿನ್ನಿಂದ ದೂರವಿಟ್ಟುಕೊಳ್ಳುತ್ತಾರೆ.

05071009a ನಾನುಕ್ರೋಶಾನ್ನ ಕಾರ್ಪಣ್ಯಾನ್ನ ಚ ಧರ್ಮಾರ್ಥಕಾರಣಾತ್|

05071009c ಅಲಂ ಕರ್ತುಂ ಧಾರ್ತರಾಷ್ಟ್ರಾಸ್ತವ ಕಾಮಮರಿಂದಮ||

ಅರಿಂದಮ! ಅನುಕ್ರೋಶವಾಗಲೀ, ಕಾರ್ಪಣ್ಯವಾಗಲೀ, ಧರ್ಮಾರ್ಥಕಾರಣವಾಗಲೀ ಧಾರ್ತರಾಷ್ಟ್ರನು ನಿನಗಿಷ್ಟಬಂದಂತೆ ನಡೆದುಕೊಳ್ಳುವಂತೆ ಮಾಡಲಾರವು.

05071010a ಏತದೇವ ನಿಮಿತ್ತಂ ತೇ ಪಾಂಡವಾಸ್ತು ಯಥಾ ತ್ವಯಿ|

05071010c ನಾನ್ವತಪ್ಯಂತ ಕೌಪೀನಂ ತಾವತ್ಕೃತ್ವಾಪಿ ದುಷ್ಕರಂ||

ಪಾಂಡವ! ಯಾವಾಗ ನಿನಗೆ ಕೌಪೀನವನ್ನು ತೊಡಿಸಿ ಬಿಟ್ಟರೋ ಆಗ ಅವರು ತಮ್ಮ ತಪ್ಪಿಗೆ ಪರಿತಪಿಸಲಿಲ್ಲ ಎನ್ನುವುದೇ ನಿನಗೆ ಇದರ ಕುರಿತಾದ ಸಾಕ್ಷಿ.

05071011a ಪಿತಾಮಹಸ್ಯ ದ್ರೋಣಸ್ಯ ವಿದುರಸ್ಯ ಚ ಧೀಮತಃ|

05071011c ಪಶ್ಯತಾಂ ಕುರುಮುಖ್ಯಾನಾಂ ಸರ್ವೇಷಾಮೇವ ತತ್ತ್ವತಃ||

05071012a ದಾನಶೀಲಂ ಮೃದುಂ ದಾಂತಂ ಧರ್ಮಕಾಮಮನುವ್ರತಂ|

05071012c ಯತ್ತ್ವಾಮುಪಧಿನಾ ರಾಜನ್ದ್ಯೂತೇನಾವಂಚಯತ್ತದಾ||

05071012e ನ ಚಾಪತ್ರಪತೇ ಪಾಪೋ ನೃಶಂಸಸ್ತೇನ ಕರ್ಮಣಾ||

05071013a ತಥಾಶೀಲಸಮಾಚಾರೇ ರಾಜನ್ಮಾ ಪ್ರಣಯಂ ಕೃಥಾಃ|

ಪಿತಾಮಹ, ದ್ರೋಣ, ಧೀಮತ ವಿದುರ ಮತ್ತು ಎಲ್ಲ ಕುರುಮುಖ್ಯರೂ ನೋಡುತ್ತಿರುವಾಗಲೇ ದಾನಶೀಲನಾದ, ಮೃದುವಾದ, ನಿಯಂತ್ರಣದಲ್ಲಿರುವ, ಧರ್ಮವನ್ನು ಬಯಸುವ, ಮಾತಿನಂತೆ ನಡೆದುಕೊಳ್ಳುವ ನಿನ್ನನ್ನು ದ್ಯೂತದಲ್ಲಿ ಮೋಸಗೊಳಿಸಿ, ಆ ಕ್ರೂರ ಕರ್ಮದಿಂದ ನಾಚಿ ಮುದುಡಿಹೋಗದೇ ಇದ್ದ ಆ ಪಾಪಿ, ನಡತೆ ವಿಚಾರಗಳಿಲ್ಲದಿರುವವನೊಂದಿಗೆ ರಾಜನ್! ಸ್ವಲ್ಪವೂ ಪ್ರೀತಿಯನ್ನು ತೋರಿಸಬೇಡ!

05071013c ವಧ್ಯಾಸ್ತೇ ಸರ್ವಲೋಕಸ್ಯ ಕಿಂ ಪುನಸ್ತವ ಭಾರತ||

05071014a ವಾಗ್ಭಿಸ್ತ್ವಪ್ರತಿರೂಪಾಭಿರತುದತ್ಸಕನೀಯಸಂ|

05071014c ಶ್ಲಾಘಮಾನಃ ಪ್ರಹೃಷ್ಟಃ ಸನ್ಭಾಷತೇ ಭ್ರಾತೃಭಿಃ ಸಹ||

ಅವರು ಲೋಕದಲ್ಲಿ ಎಲ್ಲರಿಂದ ವಧಾರ್ಹರು. ಪುನಃ ನಿನ್ನಿಂದಾದರೇನು ಭಾರತ! ಅವನು ಸಹೋದರರೊಂದಿಗೆ ಜಂಬದಿಂದ ನಗುತ್ತಾ ಹೊಲಸು ಮಾತುಗಳಿಂದ ನಿನ್ನನ್ನು ಈ ರೀತಿ ಹೇಳಿ ನೋಯಿಸಲಿಲ್ಲವೇ?

05071015a ಏತಾವತ್ಪಾಂಡವಾನಾಂ ಹಿ ನಾಸ್ತಿ ಕಿಂ ಚಿದಿಹ ಸ್ವಕಂ|

05071015c ನಾಮಧೇಯಂ ಚ ಗೋತ್ರಂ ಚ ತದಪ್ಯೇಷಾಂ ನ ಶಿಷ್ಯತೇ||

“ಈಗ ಪಾಂಡವರಲ್ಲಿ ತಮ್ಮದು ಎಂದು ಹೇಳಿಕೊಳ್ಳುವುದು ಏನೂ ಉಳಿದಿಲ್ಲ! ಅವರ ಹೆಸರೂ ಗೋತ್ರವೂ ಕೂಡ ಅವರದ್ದಾಗಿ ಉಳಿಯುವುದಿಲ್ಲ!

05071016a ಕಾಲೇನ ಮಹತಾ ಚೈಷಾಂ ಭವಿಷ್ಯತಿ ಪರಾಭವಃ|

05071016c ಪ್ರಕೃತಿಂ ತೇ ಭಜಿಷ್ಯಂತಿ ನಷ್ಟಪ್ರಕೃತಯೋ ಜನಾಃ||

ಬಹು ಕಾಲದ ನಂತರ ಅವರ ಪರಾಭವವಾಗುತ್ತದೆ. ತಮ್ಮ ಪ್ರಕೃತಿಯನ್ನು ಕಳೆದುಕೊಂಡು ಪ್ರಕೃತಿಯನ್ನೇ ಸೇರಿಕೊಳ್ಳುತ್ತಾರೆ!”

05071017a ಏತಾಶ್ಚಾನ್ಯಾಶ್ಚ ಪರುಷಾ ವಾಚಃ ಸ ಸಮುದೀರಯನ್|

05071017c ಶ್ಲಾಘತೇ ಜ್ಞಾತಿಮಧ್ಯೇ ಸ್ಮ ತ್ವಯಿ ಪ್ರವ್ರಜಿತೇ ವನಂ||

ನೀನು ವನಕ್ಕೆ ಹೊರಟಿರುವಾಗ ಕುಲಬಾಂಧವರ ನಡುವೆ ಅವನು ಇದು ಮತ್ತು ಇನ್ನೂ ಇತರ ಪೌರುಷದ ಜಂಬದ ಮಾತನಾಡಿದನು.

05071018a ಯೇ ತತ್ರಾಸನ್ಸಮಾನೀತಾಸ್ತೇ ದೃಷ್ಟ್ವಾ ತ್ವಾಮನಾಗಸಂ|

05071018c ಅಶ್ರುಕಂಠಾ ರುದಂತಶ್ಚ ಸಭಾಯಾಮಾಸತೇ ತದಾ||

ತಪ್ಪಿಲ್ಲದ ನಿನ್ನನ್ನು ನೋಡಿ ಅಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲರೂ ಗಂಟಲಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಅಳುತ್ತಾ ಕುಳಿತಿದ್ದರು.

05071019a ನ ಚೈನಮಭ್ಯನಂದಂಸ್ತೇ ರಾಜಾನೋ ಬ್ರಾಹ್ಮಣೈಃ ಸಹ|

05071019c ಸರ್ವೇ ದುರ್ಯೋಧನಂ ತತ್ರ ನಿಂದಂತಿ ಸ್ಮ ಸಭಾಸದಃ||

ರಾಜರೂ ಬ್ರಾಹ್ಮಣರೂ ಅವನನ್ನು ಅಭಿನಂದಿಸಲಿಲ್ಲ. ಅಲ್ಲಿ ಎಲ್ಲ ಸಭಾಸದರೂ ದುರ್ಯೋಧನನನ್ನು ನಿಂದಿಸಿದರು.

05071020a ಕುಲೀನಸ್ಯ ಚ ಯಾ ನಿಂದಾ ವಧಶ್ಚಾಮಿತ್ರಕರ್ಶನ|

05071020c ಮಹಾಗುಣೋ ವಧೋ ರಾಜನ್ನ ತು ನಿಂದಾ ಕುಜೀವಿಕಾ||

ಅಮಿತ್ರಕರ್ಶನ! ಕುಲೀನನಿಗೆ ನಿಂದೆ ಮತ್ತು ಸಾವಿದೆ. ಆದರೆ ರಾಜನ್! ಕುಜೀವಿಕನ ನಿಂದೆಗಿಂತ ಸಾವೇ ಅವನಿಗೆ ಬೇಕಾದುದಾಗುತ್ತದೆ.

05071021a ತದೈವ ನಿಹತೋ ರಾಜನ್ಯದೈವ ನಿರಪತ್ರಪಃ|

05071021c ನಿಂದಿತಶ್ಚ ಮಹಾರಾಜ ಪೃಥಿವ್ಯಾಂ ಸರ್ವರಾಜಸು||

ರಾಜನ್! ಮಹಾರಾಜ! ಎಂದು ಭೂಮಿಯ ಸರ್ವ ರಾಜರುಗಳು ಅವನ ನಾಚಿಕೆಗೇಡುತನವನ್ನು ನಿಂದಿಸಿದರೋ ಅಂದೇ ಅವನು ಸತ್ತುಹೋದ!

05071022a ಈಷತ್ಕಾರ್ಯೋ ವಧಸ್ತಸ್ಯ ಯಸ್ಯ ಚಾರಿತ್ರಮೀದೃಶಂ|

05071022c ಪ್ರಸ್ಕಂಭನಪ್ರತಿಸ್ತಬ್ಧಶ್ಚಿನ್ನಮೂಲ ಇವ ದ್ರುಮಃ||

ಯಾರ ಚಾರಿತ್ರ್ಯವು ಈ ರೀತಿ ಇದೆಯೋ ಅವನನ್ನು ಕೊಲ್ಲುವುದು, ಬೇರುಗಳನ್ನು ಕಳೆದುಕೊಂಡು ಕೇವಲ ಬುಡದ ಮೇಲೆ ನಿಂತಿರುವ ಮರವನ್ನು ಕೆಡಹುವಂತೆ, ಅತೀ ಸುಲಭ.

05071023a ವಧ್ಯಃ ಸರ್ಪ ಇವಾನಾರ್ಯಃ ಸರ್ವಲೋಕಸ್ಯ ದುರ್ಮತಿಃ|

05071023c ಜಹ್ಯೇನಂ ತ್ವಮಮಿತ್ರಘ್ನ ಮಾ ರಾಜನ್ವಿಚಿಕಿತ್ಸಿಥಾಃ||

ಅನಾರ್ಯನಾದ, ಸರ್ವಲೋಕ್ಕೆ ದುರ್ಮತಿಯಾದ, ಇವನನ್ನು ಸರ್ಪದಂತೆ ಕೊಲ್ಲಬೇಕು. ಅಮಿತ್ರಘ್ನ! ರಾಜನ್! ಶಂಕಿಸಬೇಡ!

05071024a ಸರ್ವಥಾ ತ್ವತ್ಕ್ಷಮಂ ಚೈತದ್ರೋಚತೇ ಚ ಮಮಾನಘ|

05071024c ಯತ್ತ್ವಂ ಪಿತರಿ ಭೀಷ್ಮೇ ಚ ಪ್ರಣಿಪಾತಂ ಸಮಾಚರೇಃ||

ಅನಘ! ಅದೇನೇ ಇದ್ದರೂ, ತಂದೆ ಮತ್ತು ಭೀಷ್ಮರಿಗೆ ಶರಣುಹೋಗುವ ನಿನ್ನ ಈ ಕ್ಷಮಾಬುದ್ಧಿಯು ನನಗೆ ಹಿಡಿಸುತ್ತದೆ.

05071025a ಅಹಂ ತು ಸರ್ವಲೋಕಸ್ಯ ಗತ್ವಾ ಚೇತ್ಸ್ಯಾಮಿ ಸಂಶಯಂ|

05071025c ಯೇಷಾಮಸ್ತಿ ದ್ವಿಧಾಭಾವೋ ರಾಜನ್ದುರ್ಯೋಧನಂ ಪ್ರತಿ||

ರಾಜನ್! ನಾನು ಹೋಗಿ ದುರ್ಯೋಧನನ ಕುರಿತು ಇನ್ನೂ ದ್ವಂದ್ವಭಾವವನ್ನು ಹೊಂದಿರುವ ಎಲ್ಲರ ಸಂಶಯವನ್ನು ಕೊನೆಗೊಳಿಸುತ್ತೇನೆ.

05071026a ಮಧ್ಯೇ ರಾಜ್ಞಾಮಹಂ ತತ್ರ ಪ್ರಾತಿಪೌರುಷಿಕಾನ್ಗುಣಾನ್|

05071026c ತವ ಸಂಕೀರ್ತಯಿಷ್ಯಾಮಿ ಯೇ ಚ ತಸ್ಯ ವ್ಯತಿಕ್ರಮಾಃ||

ರಾಜರುಗಳ ಮಧ್ಯೆ ನಿನ್ನಲ್ಲಿರುವ ಪೌರುಷ ಗುಣಗಳ ಮತ್ತು ಅವನ ದುರ್ನಡತೆಯ ಸಂಕೀರ್ತನ ಮಾಡುತ್ತೇನೆ.

05071027a ಬ್ರುವತಸ್ತತ್ರ ಮೇ ವಾಕ್ಯಂ ಧರ್ಮಾರ್ಥಸಹಿತಂ ಹಿತಂ|

05071027c ನಿಶಮ್ಯ ಪಾರ್ಥಿವಾಃ ಸರ್ವೇ ನಾನಾಜನಪದೇಶ್ವರಾಃ||

05071028a ತ್ವಯಿ ಸಂಪ್ರತಿಪತ್ಸ್ಯಂತೇ ಧರ್ಮಾತ್ಮಾ ಸತ್ಯವಾಗಿತಿ|

05071028c ತಸ್ಮಿಂಶ್ಚಾಧಿಗಮಿಷ್ಯಂತಿ ಯಥಾ ಲೋಭಾದವರ್ತತ||

ಅಲ್ಲಿ ನಾನು ಹೇಳುವ ಧರ್ಮಾರ್ಥಸಂಹಿತವಾದ ಹಿತವಾದ ಮಾತುಗಳನ್ನು ಕೇಳಿ ಸರ್ವ ಪಾರ್ಥಿವರೂ, ನಾನಾ ಜನಪದೇಶ್ವರರೂ ನೀನು ಧರ್ಮಾತ್ಮ ಮತ್ತು ಸತ್ಯವನ್ನು ಹೇಳುವವನೆಂದೂ ಅವನು ಲೋಭದಿಂದ ನಡೆದುಕೊಳ್ಳುತ್ತಿದ್ದಾನೆಂದೂ ತಿಳಿಯುತ್ತಾರೆ.

05071029a ಗರ್ಹಯಿಷ್ಯಾಮಿ ಚೈವೈನಂ ಪೌರಜಾನಪದೇಷ್ವಪಿ|

05071029c ವೃದ್ಧಬಾಲಾನುಪಾದಾಯ ಚಾತುರ್ವರ್ಣ್ಯಸಮಾಗಮೇ||

ಪೌರ ಜಾನಪದರಲ್ಲಿ, ವೃದ್ಧ ಬಾಲಕರಲ್ಲಿ, ನಾಲ್ಕು ವರ್ಣದವರು ಸೇರುವಲ್ಲಿ ಅವನೇ ತಪ್ಪಿತಸ್ಥನೆಂದು ಹೇಳುತ್ತೇನೆ.

05071030a ಶಮಂ ಚೇದ್ಯಾಚಮಾನಸ್ತ್ವಂ ನ ಧರ್ಮಂ ತತ್ರ ಲಪ್ಸ್ಯಸೇ|

05071030c ಕುರೂನ್ವಿಗರ್ಹಯಿಷ್ಯಂತಿ ಧೃತರಾಷ್ಟ್ರಂ ಚ ಪಾರ್ಥಿವಾಃ||

ಶಾಂತಿಯನ್ನು ಅರಸುವಾಗ ನೀನು ಅಲ್ಲಿ ಯಾವ ಅಧರ್ಮವನ್ನೂ ಎಸಗುವುದಿಲ್ಲ. ರಾಜರು ಕುರುಗಳನ್ನೂ ಧೃತರಾಷ್ಟ್ರನನ್ನೂ ನಿಂದಿಸುತ್ತಾರೆ.

05071031a ತಸ್ಮಿಽಲ್ಲೋಕಪರಿತ್ಯಕ್ತೇ ಕಿಂ ಕಾರ್ಯಮವಶಿಷ್ಯತೇ|

05071031c ಹತೇ ದುರ್ಯೋಧನೇ ರಾಜನ್ಯದನ್ಯತ್ಕ್ರಿಯತಾಮಿತಿ||

ಲೋಕವೇ ಅವರನ್ನು ಪರಿತ್ಯಜಿಸಿದಾಗ ಮಾಡುವುದೇನು ಉಳಿಯುತ್ತದೆ? ರಾಜನ್! ದುರ್ಯೋಧನನು ಹತನಾದ ನಂತರ ಮಾಡುವುದಾದರೂ ಏನಿದೆ?

05071032a ಯಾತ್ವಾ ಚಾಹಂ ಕುರೂನ್ಸರ್ವಾನ್ಯುಷ್ಮದರ್ಥಮಹಾಪಯನ್|

05071032c ಯತಿಷ್ಯೇ ಪ್ರಶಮಂ ಕರ್ತುಂ ಲಕ್ಷಯಿಷ್ಯೇ ಚ ಚೇಷ್ಟಿತಂ||

ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಕುರುಗಳೆಲ್ಲರ ಬಳಿ ಹೋಗುತ್ತೇನೆ. ನಿನ್ನ ಲಾಭವನ್ನು ಕಡೆಗೆಣಿಸದೇ ಶಾಂತಿಯನ್ನು ತರಲು ಪ್ರಯತ್ನಿಸುತ್ತೇನೆ ಮತ್ತು ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಗಮನಿಸುತ್ತೇನೆ.

05071033a ಕೌರವಾಣಾಂ ಪ್ರವೃತ್ತಿಂ ಚ ಗತ್ವಾ ಯುದ್ಧಾಧಿಕಾರಿಕಾಂ|

05071033c ನಿಶಾಮ್ಯ ವಿನಿವರ್ತಿಷ್ಯೇ ಜಯಾಯ ತವ ಭಾರತ||

ಕೌರವರ ಯುದ್ಧದ ತಯಾರಿಯನ್ನು ನೋಡಿಕೊಂಡು, ಭಾರತ! ನಿನಗೆ ಜಯವನ್ನು ತರಲು ಹಿಂದಿರುಗುತ್ತೇನೆ.

05071034a ಸರ್ವಥಾ ಯುದ್ಧಮೇವಾಹಮಾಶಂಸಾಮಿ ಪರೈಃ ಸಹ|

05071034c ನಿಮಿತ್ತಾನಿ ಹಿ ಸರ್ವಾಣಿ ತಥಾ ಪ್ರಾದುರ್ಭವಂತಿ ಮೇ||

ಏನೇ ಆದರೂ ಅವರೊಂದಿಗೆ ಯುದ್ಧವನ್ನೇ ನಾನು ಶಂಕಿಸುತ್ತಿದ್ದೇನೆ. ನಿಮಿತ್ತಗಳೆಲ್ಲವೂ ನನಗೆ ಅದನ್ನೇ ಸೂಚಿಸುತ್ತಿವೆ.

05071035a ಮೃಗಾಃ ಶಕುಂತಾಶ್ಚ ವದಂತಿ ಘೋರಂ

        ಹಸ್ತ್ಯಶ್ವಮುಖ್ಯೇಷು ನಿಶಾಮುಖೇಷು|

05071035c ಘೋರಾಣಿ ರೂಪಾಣಿ ತಥೈವ ಚಾಗ್ನಿರ್

        ವರ್ಣಾನ್ಬಹೂನ್ಪುಷ್ಯತಿ ಘೋರರೂಪಾನ್|

ಮೃಗಪಕ್ಷಿಗಳು ಘೋರವಾಗಿ ಕೂಗುತ್ತಿವೆ. ರಾತ್ರಿಯಾಗುವಾಗ ಆನೆ ಕುದುರೆಗಳು ಘೋರ ರೂಪವನ್ನು ತಾಳುತ್ತಿವೆ. ಮತ್ತು ಬೆಂಕಿಯು ಬಹು ಬಣ್ಣಗಳನ್ನು ತಳೆದು ಘೋರರೂಪಗಳನ್ನು ಕರೆಯುತ್ತಿದೆ.

05071035e ಮನುಷ್ಯಲೋಕಕ್ಷಪಣೋಽಥ ಘೋರೋ

        ನೋ ಚೇದನುಪ್ರಾಪ್ತ ಇಹಾಂತಕಃ ಸ್ಯಾತ್|

05071036a ಶಸ್ತ್ರಾಣಿ ಪತ್ರಂ ಕವಚಾನ್ರಥಾಂಶ್ಚ

        ನಾಗಾನ್ಧ್ವಜಾಂಶ್ಚ ಪ್ರತಿಪಾದಯಿತ್ವಾ||

ಮನುಷ್ಯ ಲೋಕವನ್ನು ಕೊನೆಗೊಳಿಸಲು ಘೋರ ಅಂತಕನು ಬರುತ್ತಿದ್ದಾನಲ್ಲದೇ ಈ ರೀತಿ ತೋರಿಸಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳು, ಬಾಣಗಳು, ಕವಚಗಳು, ರಥಗಳು, ಆನೆಗಳು ಮತ್ತು ಧ್ವಜಗಳು ಸಿದ್ಧವಾಗಿರಲಿ.

05071036c ಯೋಧಾಶ್ಚ ಸರ್ವೇ ಕೃತನಿಶ್ರಮಾಸ್ತೇ

        ಭವಂತು ಹಸ್ತ್ಯಶ್ವರಥೇಷು ಯತ್ತಾಃ|

05071036e ಸಾಂಗ್ರಾಮಿಕಂ ತೇ ಯದುಪಾರ್ಜನೀಯಂ

        ಸರ್ವಂ ಸಮಗ್ರಂ ಕುರು ತನ್ನರೇಂದ್ರ||

ನರೇಂದ್ರ! ನಿನ್ನ ಎಲ್ಲ ಯೋಧರೂ ತಮ್ಮ ತರಬೇತಿಗಳನ್ನು ಮುಗಿಸಿ, ಕುದುರೆ, ಆನೆ ಮತ್ತು ರಥಗಳಲ್ಲಿ ಸಿದ್ಧರಾಗಿರಲಿ. ಸಂಗ್ರಾಮಕ್ಕೆ ಬೇಕಾದುದೆಲ್ಲವೂ ಸಿದ್ಧವಾಗಿದೆಯೆಂದು ನೋಡಿಕೋ.

05071037a ದುರ್ಯೋಧನೋ ನ ಹ್ಯಲಮದ್ಯ ದಾತುಂ

        ಜೀವಂಸ್ತವೈತನ್ನೃಪತೇ ಕಥಂ ಚಿತ್|

05071037c ಯತ್ತೇ ಪುರಸ್ತಾದಭವತ್ಸಮೃದ್ಧಂ

        ದ್ಯೂತೇ ಹೃತಂ ಪಾಂಡವಮುಖ್ಯ ರಾಜ್ಯಂ||

ನೃಪತೇ! ಪಾಂಡವಮುಖ್ಯ! ಹಿಂದೆ ನಿನ್ನದಾಗಿದ್ದ ಮತ್ತೆ ದ್ಯೂತದಲ್ಲಿ ಅಪಹರಿಸಲ್ಪಟ್ಟ ಸಮೃದ್ಧ ರಾಜ್ಯವನ್ನು ಜೀವವಿರುವವರೆಗೆ ದುರ್ಯೋಧನನು ನಿನಗೆ ಕೊಡಲು ಏನು ಮಾಡಿದರೂ ಸಿದ್ಧನಿರುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕೃಷ್ಣವಾಕ್ಯೇ ಏಕಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಎಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.