Udyoga Parva: Chapter 7

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

ಅರ್ಜುನನು ಕೃಷ್ಣನನ್ನು ಸಾರಥಿಯನ್ನಾಗಿ ಆರಿಸಿಕೊಂಡಿದುದು

ಕೃಷ್ಣನು ದ್ವಾರಕೆಗೆ ಮರಳಿದ್ದಾನೆಂದು ತಿಳಿದ ದುರ್ಯೋಧನನು ಬೇಗನೆ ದ್ವಾರಕೆಗೆ ಹೋದುದು (೧-೨). ಅದೇ ದಿವಸ ಅರ್ಜುನನೂ ದ್ವಾರಕೆಗೆ ಬಂದುದು (೩).  ಕೃಷ್ಣನು ಮಲಗಿರುವಲ್ಲಿಗೆ ಮೊದಲು ಬಂದ ದುರ್ಯೋಧನನು ಮಂಚದ ತಲೆಯ ಹತ್ತಿರ ಕುಳಿತುಕೊಳ್ಳಲು ನಂತರ ಬಂದ ಅರ್ಜುನನು ಮಂಚದ ಕೊನೆಯಲ್ಲಿ ತಲೆಬಾಗಿ ನಿಂತುಕೊಂಡಿದುದು (೪-೭). ಕೃಷ್ಣನು ಎಚ್ಚೆತ್ತು ಮೊದಲು ಕಂಡ ಅರ್ಜುನನಲ್ಲಿ ಬಂದ ಕಾರಣವನ್ನು ಕೇಳಲು ದುರ್ಯೋಧನನು ಕೃಷ್ಣನಿಗೆ ಯುದ್ಧದಲ್ಲಿ ತನಗೆ ಸಹಾಯ ನೀಡಬೇಕೆಂದು, ಕೃಷ್ಣನು ತನಗೆ ಮತ್ತು ಅರ್ಜುನನಿಗೆ ಒಂದೇ ರೀತಿಯ ಸಂಬಂಧಿಕನೆಂದೂ, ಇಲ್ಲಿಗೆ ತಾನು ಮೊದಲು ಬಂದಿರುವುದರಿಂದ ತನ್ನಲ್ಲಿ ಬಂದ ಕಾರಣವನ್ನು ಮೊದಲು ಕೇಳಬೇಕೆಂದು ಹೇಳುವುದು (೮-೧೨). ಇಬ್ಬರಿಗೂ ಸಹಾಯವನ್ನು ಮಾಡುವೆನೆಂದೂ, ಆದರೆ ಮೊದಲ ಆಯ್ಕೆಯನ್ನು ಕಿರಿಯವನಿಗೆ ಕೊಡಬೇಕೆಂದೂ ಹೇಳಿ (೧೩-೧೫), ಕೃಷ್ಣನು “ಯುದ್ಧದಲ್ಲಿ ದುರಾಧರ್ಷ ನಾರಾಯಣಿ ಸೇನೆಯನ್ನು ನಿಮ್ಮಲ್ಲಿ ಒಬ್ಬನಿಗೆ ಮತ್ತು ಯುದ್ಧಮಾಡದೇ ಇರುವ, ಸಂಗ್ರಾಮದಲ್ಲಿ ನಿಃಶಸ್ತ್ರನಾಗಿರುವ ನಾನೊಬ್ಬನು ಇನ್ನೊಬ್ಬನಿಗೆ. ಇದರಲ್ಲಿ ಅರ್ಜುನನು ಮೊದಲು ಆರಿಸಿಕೊಳ್ಳಲಿ” ಎನ್ನುವುದು (೧೬-೧೮). ಅರ್ಜುನನು ಕೃಷ್ಣನನ್ನೂ ದುರ್ಯೋಧನನು ಸೇನೆಯನ್ನೂ ಆರಿಸಿಕೊಂಡಿದುದು (೧೯-೨೧). ದುರ್ಯೋಧನನು ಬಲರಾಮನಲ್ಲಿಗೆ ಹೋಗಿ ಕೇಳಲು ತಾನು ಇಬ್ಬರಲ್ಲಿ ಯಾರಿಗೂ ಸಹಾಯಮಾಡುವುದಿಲ್ಲವೆಂದು ಹೇಳಿದುದು (೨೨-೨೮). ದುರ್ಯೋಧನನು ಕೃತವರ್ಮನಿಂದ ಒಂದು ಅಕ್ಷೌಹಿಣೀ ಸೇನೆಯನ್ನು ಪಡೆದು ಹಿಂದಿರುಗಿದುದು (೨೯-೩೦). ಕೃಷ್ಣನು ಕೇಳಲು ಅವನನ್ನು ಆರಿಸಿಕೊಂಡಿದುದಕ್ಕೆ ಅರ್ಜುನನು ಕಾರಣವನ್ನಿತ್ತು ಕೃಷ್ಣನನ್ನೊಡಗೂಡಿ ಯುಧಿಷ್ಠಿರನಲ್ಲಿಗೆ ಮರಳಿದುದು (೩೧-೩೬).

05007001 ವೈಶಂಪಾಯನ ಉವಾಚ|

05007001a ಗತೇ ದ್ವಾರವತೀಂ ಕೃಷ್ಣೇ ಬಲದೇವೇ ಚ ಮಾಧವೇ|

05007001c ಸಹ ವೃಷ್ಣ್ಯಂಧಕೈಃ ಸರ್ವೈರ್ಭೋಜೈಶ್ಚ ಶತಶಸ್ತಥಾ||

05007002a ಸರ್ವಮಾಗಮಯಾಮಾಸ ಪಾಂಡವಾನಾಂ ವಿಚೇಷ್ಟಿತಂ|

05007002c ಧೃತರಾಷ್ಟ್ರಾತ್ಮಜೋ ರಾಜಾ ದೂತೈಃ ಪ್ರಣಿಹಿತೈಶ್ಚರೈಃ||

ವೈಶಂಪಾಯನನು ಹೇಳಿದನು: “ಮಾಧವ ಕೃಷ್ಣ ಮತ್ತು ಬಲದೇವರು ನೂರಾರು ವೃಷ್ಣಿ, ಅಂಧಕ, ಮತ್ತು ಭೋಜರೆಲ್ಲರೊಡನೆ ದ್ವಾರವತಿಗೆ ಹೋಗಲು, ರಾಜಾ ಧೃತರಾಷ್ಟ್ರನ ಮಗನು, ಕಳುಹಿಸಿದ ಹಿತೈಷಿ ದೂತರ ಮೂಲಕ ಪಾಂಡವರು ನಡೆಸಿದ್ದ ಎಲ್ಲದರ ಕುರಿತು ವಿಷಯಗಳನ್ನು ಸಂಗ್ರಹಿಸಿಕೊಂಡನು.

05007003a ಸ ಶ್ರುತ್ವಾ ಮಾಧವಂ ಯಾತಂ ಸದಶ್ವೈರನಿಲೋಪಮೈಃ|

05007003c ಬಲೇನ ನಾತಿಮಹತಾ ದ್ವಾರಕಾಮಭ್ಯಯಾತ್ಪುರೀಂ||

ಮಾಧವನು ಬರುತ್ತಿದ್ದಾನೆಂದು ಕೇಳಿದ ಅವನು ವಾಯುವೇಗದ ಉತ್ತಮ ಕುದುರೆಗಳನ್ನೇರಿ ಅತಿ ದೊಡ್ಡದಲ್ಲದ ದಂಡಿನೊಂದಿಗೆ ದ್ವಾರಕಾಪುರಿಗೆ ಬಂದನು.

05007004a ತಮೇವ ದಿವಸಂ ಚಾಪಿ ಕೌಂತೇಯಃ ಪಾಂಡುನಂದನಃ|

05007004c ಆನರ್ತನಗರೀಂ ರಮ್ಯಾಂ ಜಗಾಮಾಶು ಧನಂಜಯಃ||

ಅದೇ ದಿವಸ ಕೌಂತೇಯ ಪಾಂಡುನಂದನ ಧನಂಜಯನೂ ಕೂಡ ರಮ್ಯ ಆನರ್ತನಗರಿಗೆ ಬಂದನು.

05007005a ತೌ ಯಾತ್ವಾ ಪುರುಷವ್ಯಾಘ್ರೌ ದ್ವಾರಕಾಂ ಕುರುನಂದನೌ|

05007005c ಸುಪ್ತಂ ದದೃಶತುಃ ಕೃಷ್ಣಂ ಶಯಾನಂ ಚೋಪಜಗ್ಮತುಃ||

ದ್ವಾರಕೆಗೆ ಬಂದ ಆ ಪುರುಷವ್ಯಾಘ್ರ ಕುರುನಂದನರಿಬ್ಬರೂ ಕೃಷ್ಣನು ಮಲಗಿಕೊಂಡಿದ್ದುದನ್ನು ನೋಡಿ ಮಲಗಿರುವವನ ಬಳಿಸಾರಿದರು.

05007006a ತತಃ ಶಯಾನೇ ಗೋವಿಂದೇ ಪ್ರವಿವೇಶ ಸುಯೋಧನಃ|

05007006c ಉಚ್ಚೀರ್ಷತಶ್ಚ ಕೃಷ್ಣಸ್ಯ ನಿಷಸಾದ ವರಾಸನೇ||

ಗೋವಿಂದನು ಮಲಗಿರುವಲ್ಲಿ ಸುಯೋಧನನು ಪ್ರವೇಶಿಸಿದನು ಮತ್ತು ಕೃಷ್ಣನ ಮಂಚದ ತಲೆಯ ಹತ್ತಿರದ ವರಾಸನದಲ್ಲಿ ಕುಳಿತುಕೊಂಡನು.

05007007a ತತಃ ಕಿರೀಟೀ ತಸ್ಯಾನು ಪ್ರವಿವೇಶ ಮಹಾಮನಾಃ|

05007007c ಪಶ್ಚಾರ್ಧೇ ಚ ಸ ಕೃಷ್ಣಸ್ಯ ಪ್ರಹ್ವೋಽತಿಷ್ಠತ್ಕೃತಾಂಜಲಿಃ||

ಅವನ ನಂತರ ಮಹಾಮನಸ್ವಿ ಕಿರೀಟಿಯು ಪ್ರವೇಶಿಸಿದನು ಮತ್ತು ಕೃಷ್ಣನ ಮಂಚದ ಕೊನೆಯಲ್ಲಿ ಕೈಮುಗಿದು ತಲೆಬಾಗಿ ನಿಂತುಕೊಂಡನು.

05007008a ಪ್ರತಿಬುದ್ಧಃ ಸ ವಾರ್ಷ್ಣೇಯೋ ದದರ್ಶಾಗ್ರೇ ಕಿರೀಟಿನಂ|

05007008c ಸ ತಯೋಃ ಸ್ವಾಗತಂ ಕೃತ್ವಾ ಯಥಾರ್ಹಂ ಪ್ರತಿಪೂಜ್ಯ ಚ|

05007008e ತದಾಗಮನಜಂ ಹೇತುಂ ಪಪ್ರಚ್ಚ ಮಧುಸೂದನಃ||

ಆ ವಾರ್ಷ್ಣೇಯನು ಎಚ್ಚೆತ್ತಾಗ ಮೊದಲು ಕಿರೀಟಿಯನ್ನು ಕಂಡನು. ಅವನನ್ನು ಸ್ವಾಗತಿಸಿ ಯಥಾರ್ಹವಾಗಿ ಪ್ರತಿಪೂಜಿಸಿ ಮಧುಸೂದನನು ಅವನ ಆಗಮನದ ಕಾರಣವನ್ನು ಕೇಳಿದನು.

05007009a ತತೋ ದುರ್ಯೋಧನಃ ಕೃಷ್ಣಮುವಾಚ ಪ್ರಹಸನ್ನಿವ|

05007009c ವಿಗ್ರಹೇಽಸ್ಮಿನ್ಭವಾನ್ಸಾಹ್ಯಂ ಮಮ ದಾತುಮಿಹಾರ್ಹತಿ||

ಆಗ ದುರ್ಯೋಧನನು ನಗುತ್ತಾ ಕೃಷ್ಣನಿಗೆ ಹೇಳಿದನು: “ಈ ಯುದ್ಧದಲ್ಲಿ ನೀನು ನನಗೆ ಸಹಾಯವನ್ನು ನೀಡಬೇಕು.

05007010a ಸಮಂ ಹಿ ಭವತಃ ಸಖ್ಯಂ ಮಯಿ ಚೈವಾರ್ಜುನೇಽಪಿ ಚ|

05007010c ತಥಾ ಸಂಬಂಧಕಂ ತುಲ್ಯಮಸ್ಮಾಕಂ ತ್ವಯಿ ಮಾಧವ||

ನನ್ನಲ್ಲಿ ಮತ್ತು ಅರ್ಜುನನನಲ್ಲಿ ನಿನ್ನ ಸಖ್ಯವು ಸಮನಾಗಿದೆ. ಮಾಧವ! ಹಾಗೆಯೇ ನೀನು ನಮ್ಮಿಬ್ಬರೊಡನೆ ಒಂದೇ ರೀತಿಯ ಸಂಬಂಧಿಕನೂ ಹೌದು.

05007011a ಅಹಂ ಚಾಭಿಗತಃ ಪೂರ್ವಂ ತ್ವಾಮದ್ಯ ಮಧುಸೂದನ|

05007011c ಪೂರ್ವಂ ಚಾಭಿಗತಂ ಸಂತೋ ಭಜಂತೇ ಪೂರ್ವಸಾರಿಣಃ|

ಮಧುಸೂದನ! ಇಂದು ನಾನು ನಿನ್ನಲ್ಲಿಗೆ ಮೊದಲು ಬಂದವನು. ಸಂತರು ಮೊದಲು ಬಂದವರಲ್ಲಿ ಬಂದ ಕಾರಣವನ್ನು ಕೇಳುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವುದು.

05007012a ತ್ವಂ ಚ ಶ್ರೇಷ್ಠತಮೋ ಲೋಕೇ ಸತಾಮದ್ಯ ಜನಾರ್ದನ|

05007012c ಸತತಂ ಸಮ್ಮತಶ್ಚೈವ ಸದ್ವೃತ್ತಮನುಪಾಲಯ||

ಜನಾರ್ದನ! ನೀನಾದರೋ ಲೋಕದಲ್ಲಿರುವ ಸಂತರಲ್ಲಿಯೇ ಶ್ರೇಷ್ಠನೆನಿಸಿಕೊಂಡವನು! ಸತತವೂ ಸಮ್ಮತನಾಗಿರುವೆ. ಆದುದರಿಂದ ಒಳ್ಳೆಯ ನಡತೆಯನ್ನು ಅನುಸರಿಸು.”

05007013 ಕೃಷ್ಣ ಉವಾಚ|

05007013a ಭವಾನಭಿಗತಃ ಪೂರ್ವಮತ್ರ ಮೇ ನಾಸ್ತಿ ಸಂಶಯಃ|

05007013c ದೃಷ್ಟಸ್ತು ಪ್ರಥಮಂ ರಾಜನ್ಮಯಾ ಪಾರ್ಥೋ ಧನಂಜಯಃ||

ಕೃಷ್ಣನು ಹೇಳಿದನು: “ರಾಜನ್! ನೀನು ಮೊದಲು ಬಂದಿರುವೆ ಎನ್ನುವುದರಲ್ಲಿ ನಾನು ಸಂಶಯಪಡುವುದಿಲ್ಲ. ಆದರೆ ನನಗೆ ಮೊದಲು ಕಂಡವನು ಪಾರ್ಥ ಧನಂಜಯ.

05007014a ತವ ಪೂರ್ವಾಭಿಗಮನಾತ್ಪೂರ್ವಂ ಚಾಪ್ಯಸ್ಯ ದರ್ಶನಾತ್|

05007014c ಸಾಹಾಯ್ಯಮುಭಯೋರೇವ ಕರಿಷ್ಯಾಮಿ ಸುಯೋಧನ||

ಸುಯೋಧನ! ಮೊದಲು ಬಂದಿರುವುದರಿಂದ ನಿನಗೆ ಮತ್ತು ಮೊದಲು ದರ್ಶನವಾದುದರಿಂದ ಇವನಿಗೆ ಇಬ್ಬರಿಗೂ ನಾನು ಸಹಾಯವನ್ನು ಮಾಡುತ್ತೇನೆ.

05007015a ಪ್ರವಾರಣಂ ತು ಬಾಲಾನಾಂ ಪೂರ್ವಂ ಕಾರ್ಯಮಿತಿ ಶ್ರುತಿಃ|

05007015c ತಸ್ಮಾತ್ಪ್ರವಾರಣಂ ಪೂರ್ವಮರ್ಹಃ ಪಾರ್ಥೋ ಧನಂಜಯಃ||

ಆದರೆ ಮೊದಲ ಆಯ್ಕೆಯನ್ನು ಕಿರಿಯವರಿಗೆ ಕೊಡಬೇಕೆಂದು ಶ್ರುತಿಯು ಹೇಳುತ್ತದೆ. ಆದುದರಿಂದ ಪಾರ್ಥ ಧನಂಜಯನು ಮೊದಲ ಆಯ್ಕೆಗೆ ಅರ್ಹ.

05007016a ಮತ್ಸಂಹನನತುಲ್ಯಾನಾಂ ಗೋಪಾನಾಮರ್ಬುದಂ ಮಹತ್|

05007016c ನಾರಾಯಣಾ ಇತಿ ಖ್ಯಾತಾಃ ಸರ್ವೇ ಸಂಗ್ರಾಮಯೋಧಿನಃ||

ಯುದ್ಧದಲ್ಲಿ ನನ್ನ ಸರಿಸಮರಾಗಿರುವ ಹತ್ತು ಕೋಟಿ ಎಲ್ಲ ಸಂಗ್ರಾಮಯೋಧರ ನಾರಾಯಣ ಎಂದು ಖ್ಯಾತವಾದ ಗೋಪರ ಸೇನೆಯಿದೆ.

05007017a ತೇ ವಾ ಯುಧಿ ದುರಾಧರ್ಷಾ ಭವಂತ್ವೇಕಸ್ಯ ಸೈನಿಕಾಃ|

05007017c ಅಯುಧ್ಯಮಾನಃ ಸಂಗ್ರಾಮೇ ನ್ಯಸ್ತಶಸ್ತ್ರೋಽಹಮೇಕತಃ||

ಯುದ್ಧದಲ್ಲಿ ದುರಾಧರ್ಷ ಈ ಸೇನೆಯನ್ನು ನಿಮ್ಮಲ್ಲಿ ಒಬ್ಬನಿಗೆ ಮತ್ತು ಯುದ್ಧಮಾಡದೇ ಇರುವ, ಸಂಗ್ರಾಮದಲ್ಲಿ ನಿಃಶಸ್ತ್ರನಾಗಿರುವ ನಾನೊಬ್ಬನು ಇನ್ನೊಬ್ಬನಿಗೆ.

05007018a ಆಭ್ಯಾಮನ್ಯತರಂ ಪಾರ್ಥ ಯತ್ತೇ ಹೃದ್ಯತರಂ ಮತಂ|

05007018c ತದ್ವೃಣೀತಾಂ ಭವಾನಗ್ರೇ ಪ್ರವಾರ್ಯಸ್ತ್ವಂ ಹಿ ಧರ್ಮತಃ||

ಪಾರ್ಥ! ಇವೆರಡರಲ್ಲಿ ನಿನ್ನ ಹೃದಯಕ್ಕೆ ಯಾವುದು ಬೇಕೆನಿಸುತ್ತದೆಯೋ ಅದನ್ನು ಆರಿಸಿಕೋ. ಧರ್ಮದಪ್ರಕಾರ ಮೊದಲ ಆಯ್ಕೆ ನಿನಗೇ ಇದೆ.””

Image result for mahabharata05007019 ವೈಶಂಪಾಯನ ಉವಾಚ|

05007019a ಏವಮುಕ್ತಸ್ತು ಕೃಷ್ಣೇನ ಕುಂತೀಪುತ್ರೋ ಧನಂಜಯಃ|

05007019c ಅಯುಧ್ಯಮಾನಂ ಸಂಗ್ರಾಮೇ ವರಯಾಮಾಸ ಕೇಶವಂ||

ವೈಶಂಪಾಯನನು ಹೇಳಿದನು: “ಕೃಷ್ಣನು ಹೀಗೆ ಹೇಳಲು ಕುಂತೀಪುತ್ರ ಧನಂಜಯನು ಸಂಗ್ರಾಮದಲ್ಲಿ ಯುದ್ಧಮಾಡದೇ ಇರುವ ಕೇಶವನನ್ನು ಆರಿಸಿಕೊಂಡನು.

05007020a ಸಹಸ್ರಾಣಾಂ ಸಹಸ್ರಂ ತು ಯೋಧಾನಾಂ ಪ್ರಾಪ್ಯ ಭಾರತ|

05007020c ಕೃಷ್ಣಂ ಚಾಪಹೃತಂ ಜ್ಞಾತ್ವಾ ಸಂಪ್ರಾಪ ಪರಮಾಂ ಮುದಂ||

05007021a ದುರ್ಯೋಧನಸ್ತು ತತ್ಸೈನ್ಯಂ ಸರ್ವಮಾದಾಯ ಪಾರ್ಥಿವಃ|

ಭಾರತ! ಪಾರ್ಥಿವ ದುರ್ಯೋಧನನು ಸಹಸ್ರ ಸಹಸ್ರ ಸಂಖ್ಯೆಯ ಯೋಧರನ್ನು ಪಡೆದು, ಕೃಷ್ಣನು ತನ್ನ ಕಡೆ ಇಲ್ಲವೆಂದು ತಿಳಿದೂ ಆ ಸೈನ್ಯವನ್ನೆಲ್ಲ ಪಡೆದೆನೆಂದು ಪರಮ ಸಂತೋಷವನ್ನು ಹೊಂದಿದನು.

05007021c ತತೋಽಭ್ಯಯಾದ್ಭೀಮಬಲೋ ರೌಹಿಣೇಯಂ ಮಹಾಬಲಂ||

05007022a ಸರ್ವಂ ಚಾಗಮನೇ ಹೇತುಂ ಸ ತಸ್ಮೈ ಸಂನ್ಯವೇದಯತ್|

ಅನಂತರ ಆ ಭೀಮಬಲನು ಮಹಾಬಲ ರೌಹಿಣೇಯನ ಬಳಿ ಹೋಗಿ ಬಂದಿದುದರ ಕಾರಣವನ್ನೆಲ್ಲಾ ಅವನಿಗೆ ನಿವೇದಿಸಿದನು.

05007022c ಪ್ರತ್ಯುವಾಚ ತತಃ ಶೌರಿರ್ಧಾರ್ತರಾಷ್ಟ್ರಮಿದಂ ವಚಃ||

05007023a ವಿದಿತಂ ತೇ ನರವ್ಯಾಘ್ರ ಸರ್ವಂ ಭವಿತುಮರ್ಹತಿ|

05007023c ಯನ್ಮಯೋಕ್ತಂ ವಿರಾಟಸ್ಯ ಪುರಾ ವೈವಾಹಿಕೇ ತದಾ||

ಆಗ ಶೌರಿಯು ಧಾರ್ತರಾಷ್ಟ್ರನಿಗೆ ಈ ಮಾತನ್ನಾಡಿದನು: “ನರವ್ಯಾಘ್ರ! ವಿರಾಟನ ಪುರಿಯಲ್ಲಿ ವಿವಾಹದ ಸಮಯದಲ್ಲಿ ನಾನು ಏನೆಲ್ಲ ಹೇಳಿದೆನೆನ್ನುವುದು ನಿನಗೆ ತಿಳಿದಿರಲೇ ಬೇಕು.

05007024a ನಿಗೃಹ್ಯೋಕ್ತೋ ಹೃಷೀಕೇಶಸ್ತ್ವದರ್ಥಂ ಕುರುನಂದನ|

05007024c ಮಯಾ ಸಂಬಂಧಕಂ ತುಲ್ಯಮಿತಿ ರಾಜನ್ಪುನಃ ಪುನಃ||

ಕುರುನಂದನ! ಆಗ ನಾನು, ನಿನಗೋಸ್ಕರ, ಹೃಷೀಕೇಶನ ವಿರುದ್ಧವಾಗಿ ಮಾತನಾಡಿದೆ. ರಾಜನ್! ಪುನಃ ಪುನಃ ನನ್ನ ಸಂಬಂಧವು ಇಬ್ಬರೊಡನೆಯೂ ಸಮನಾದುದೆಂದು ಹೇಳಿದೆ.

05007025a ನ ಚ ತದ್ವಾಕ್ಯಮುಕ್ತಂ ವೈ ಕೇಶವಃ ಪ್ರತ್ಯಪದ್ಯತ|

05007025c ನ ಚಾಹಮುತ್ಸಹೇ ಕೃಷ್ಣಂ ವಿನಾ ಸ್ಥಾತುಮಪಿ ಕ್ಷಣಂ||

ಆದರೆ ಕೃಷ್ಣನು ಆಗ ಹೇಳಿದ ನನ್ನ ಮಾತುಗಳಂತೆ ನಡೆದುಕೊಳ್ಳಲಿಲ್ಲ. ಮತ್ತು ಕೃಷ್ಣನಿಲ್ಲದೇ ಒಂದು ಕ್ಷಣವಿರಲೂ ನನಗೆ ಉತ್ಸಾಹವಿಲ್ಲ.

05007026a ನಾಹಂ ಸಹಾಯಃ ಪಾರ್ಥಾನಾಂ ನಾಪಿ ದುರ್ಯೋಧನಸ್ಯ ವೈ|

05007026c ಇತಿ ಮೇ ನಿಶ್ಚಿತಾ ಬುದ್ದಿರ್ವಾಸುದೇವಮವೇಕ್ಷ್ಯ ಹ||

ವಾಸುದೇವನ ವಿರುದ್ಧ ಹೋಗಲಾರೆನೆಂದು ತಿಳಿದು ನಾನು ಪಾರ್ಥರಿಗೂ ದುರ್ಯೋಧನನಿಗೂ ಸಹಾಯ ಮಾಡುವುದಿಲ್ಲ ಎಂದು ನಿಶ್ಚಯಿಸಿದ್ದೇನೆ.

05007027a ಜಾತೋಽಸಿ ಭಾರತೇ ವಂಶೇ ಸರ್ವಪಾರ್ಥಿವಪೂಜಿತೇ|

05007027c ಗಚ್ಚ ಯುಧ್ಯಸ್ವ ಧರ್ಮೇಣ ಕ್ಷಾತ್ರೇಣ ಭರತರ್ಷಭ||

ಭರತರ್ಷಭ! ಸರ್ವ ಪಾರ್ಥಿವರಿಂದ ಪೂಜಿತಗೊಂಡ ಭಾರತ ವಂಶದಲ್ಲಿ ಜನಿಸಿದ್ದೀಯೆ. ಹೋಗು. ಕ್ಷಾತ್ರಧರ್ಮದಂತೆ ಯುದ್ಧಮಾಡು.””

05007028a ಇತ್ಯೇವಮುಕ್ತಃ ಸ ತದಾ ಪರಿಷ್ವಜ್ಯ ಹಲಾಯುಧಂ|

05007028c ಕೃಷ್ಣಂ ಚಾಪಹೃತಂ ಜ್ಞಾತ್ವಾ ಯುದ್ಧಾನ್ಮೇನೇ ಜಿತಂ ಜಯಂ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಲು ಅವನು ಹಲಾಯುಧನನ್ನು ಆಲಂಗಿಸಿದನು. ಕೃಷ್ಣನನ್ನು ಜಯನು ಅಪಹರಿಸಿದನೆಂದು ತಿಳಿದೂ ಯುದ್ಧದಲ್ಲಿ ಅವನನ್ನು ಗೆದ್ದುಬಿಟ್ಟೆ ಎಂದು ತಿಳಿದುಕೊಂಡನು.

05007029a ಸೋಽಭ್ಯಯಾತ್ಕೃತವರ್ಮಾಣಂ ಧೃತರಾಷ್ಟ್ರಸುತೋ ನೃಪಃ|

05007029c ಕೃತವರ್ಮಾ ದದೌ ತಸ್ಯ ಸೇನಾಮಕ್ಷೌಹಿಣೀಂ ತದಾ||

ಅನಂತರ ನೃಪ ಧೃತರಾಷ್ಟ್ರಸುತನು ಕೃತವರ್ಮನ ಬಳಿ ಹೋದನು. ಆಗ ಕೃತವರ್ಮನು ಅವನಿಗೆ ಒಂದು ಅಕ್ಷೌಹಿಣೀ ಸೇನೆಯನ್ನು ಕೊಟ್ಟನು.

05007030a ಸ ತೇನ ಸರ್ವಸೈನ್ಯೇನ ಭೀಮೇನ ಕುರುನಂದನಃ|

05007030c ವೃತಃ ಪ್ರತಿಯಯೌ ಹೃಷ್ಟಃ ಸುಹೃದಃ ಸಂಪ್ರಹರ್ಷಯನ್||

ಆ ಭಯಂಕರ ಸರ್ವಸೈನ್ಯಗಳಿಂದ ಸುತ್ತುವರೆಯಲ್ಪಟ್ಟು, ಸಂತೋಷಗೊಂಡ ಸ್ನೇಹಿತರೊಂದಿಗೆ ಹರ್ಷಿಸುತ್ತಾ ಕುರುನಂದನನು ಹೊರಟನು.

05007031a ಗತೇ ದುರ್ಯೋಧನೇ ಕೃಷ್ಣಃ ಕಿರೀಟಿನಮಥಾಬ್ರವೀತ್|

05007031c ಅಯುಧ್ಯಮಾನಃ ಕಾಂ ಬುದ್ಧಿಮಾಸ್ಥಾಯಾಹಂ ತ್ವಯಾ ವೃತಃ||

ದುರ್ಯೋಧನನು ಹೊರಟುಹೋದ ನಂತರ ಕೃಷ್ಣನು ಕಿರೀಟಿಯಲ್ಲಿ ಕೇಳಿದನು: “ಯುದ್ಧವನ್ನೇ ಮಾಡದಿರುವ ನನ್ನನ್ನು ಏನನ್ನು ಯೋಚಿಸಿ ಆರಿಸಿಕೊಂಡೆ?”

05007032 ಅರ್ಜುನ ಉವಾಚ|

05007032a ಭವಾನ್ಸಮರ್ಥಸ್ತಾನ್ಸರ್ವಾನ್ನಿಹಂತುಂ ನಾತ್ರ ಸಂಶಯಃ|

05007032c ನಿಹಂತುಮಹಮಪ್ಯೇಕಃ ಸಮರ್ಥಃ ಪುರುಷೋತ್ತಮ||

ಅರ್ಜುನನು ಹೇಳಿದನು: “ಅವರೆಲ್ಲರನ್ನೂ ನೀನು ಕೊಲ್ಲಲು ಸಮರ್ಥ ಎನ್ನುವುದರಲ್ಲಿ ಸಂಶಯವಿಲ್ಲ. ಪುರುಷೋತ್ತಮ! ನಾನೊಬ್ಬನೇ ಅವರನ್ನು ಕೊಲ್ಲಲು ಸಮರ್ಥ.

05007033a ಭವಾಂಸ್ತು ಕೀರ್ತಿಮಾಽಲ್ಲೋಕೇ ತದ್ಯಶಸ್ತ್ವಾಂ ಗಮಿಷ್ಯತಿ|

05007033c ಯಶಸಾ ಚಾಹಮಪ್ಯರ್ಥೀ ತಸ್ಮಾದಸಿ ಮಯಾ ವೃತಃ||

ನೀನಾದರೋ ಲೋಕದಲ್ಲಿ ಕೀರ್ತಿವಂತನಾಗಿರುವೆ ಮತ್ತು ಅದು ನಿನ್ನೊಂದಿಗೇ ಹೋಗುತ್ತದೆ. ನಾನೂ ಕೂಡ ಯಶಸ್ಸನ್ನು ಬಯಸುತ್ತಿದ್ದೇನಾದುದರಿಂದ ನಿನ್ನನ್ನು ನಾನು ಆರಿಸಿಕೊಂಡೆ.

05007034a ಸಾರಥ್ಯಂ ತು ತ್ವಯಾ ಕಾರ್ಯಮಿತಿ ಮೇ ಮಾನಸಂ ಸದಾ|

05007034c ಚಿರರಾತ್ರೇಪ್ಸಿತಂ ಕಾಮಂ ತದ್ಭವಾನ್ಕರ್ತುಮರ್ಹತಿ||

ನಿನ್ನಿಂದ ಸಾರಥ್ಯವನ್ನು ಮಾಡಿಸಿಕೊಳ್ಳಬೇಕು ಎಂದು ಸದಾ ನನ್ನ ಮನಸ್ಸಿನಲ್ಲಿತ್ತು. ತುಂಬಾ ಸಮಯದಿಂದಿರುವ ಈ ಬಯಕೆಯನ್ನು ನೀನು ಪೂರೈಸಿಕೊಡಬೇಕು.”

05007035 ವಾಸುದೇವ ಉವಾಚ|

05007035a ಉಪಪನ್ನಮಿದಂ ಪಾರ್ಥ ಯತ್ಸ್ಪರ್ಧೇಥಾ ಮಯಾ ಸಹ|

05007035c ಸಾರಥ್ಯಂ ತೇ ಕರಿಷ್ಯಾಮಿ ಕಾಮಃ ಸಂಪದ್ಯತಾಂ ತವ||

ವಾಸುದೇವನು ಹೇಳಿದನು: “ಪಾರ್ಥ! ನನ್ನೊಡನೆ ಸ್ಪರ್ಧಿಸುತ್ತಿದ್ದೀಯೆ ಎನ್ನುವುದು ಇದರಿಂದ ತೋರುತ್ತಿದೆ. ನಿನ್ನ ಸಾರಥ್ಯವನ್ನು ಮಾಡುತ್ತೇನೆ. ನಿನ್ನ ಬಯಕೆಯು ಪೂರೈಸಲಿ!””

05007036 ವೈಶಂಪಾಯನ ಉವಾಚ|

05007036a ಏವಂ ಪ್ರಮುದಿತಃ ಪಾರ್ಥಃ ಕೃಷ್ಣೇನ ಸಹಿತಸ್ತದಾ|

05007036c ವೃತೋ ದಾಶಾರ್ಹಪ್ರವರೈಃ ಪುನರಾಯಾದ್ಯುಧಿಷ್ಠಿರಂ||

ವೈಶಂಪಾಯನನು ಹೇಳಿದನು: “ಹೀಗೆ ಸಂತೋಷಗೊಂಡ ಪಾರ್ಥನು ದಾಶಾರ್ಹಪ್ರವರನೊಡಗೂಡಿ ಪುನಃ ಯುಧಿಷ್ಠಿರನಲ್ಲಿಗೆ ಬಂದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಕೃಷ್ಣಸಾರಥ್ಯಸ್ವೀಕಾರೇ ಸಪ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಕೃಷ್ಣಸಾರಥ್ಯಸ್ವೀಕಾರ ಎನ್ನುವ ಏಳನೆಯ ಅಧ್ಯಾಯವು|

Related image

Comments are closed.