Udyoga Parva: Chapter 61

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೧

ಕರ್ಣನ ಶಸ್ತ್ರನ್ಯಾಸ

ಪಾರ್ಥನ ಕುರಿತು ಇನ್ನೂ ಕೇಳತೊಡಗಿರುವ ಧೃತರಾಷ್ಟ್ರನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ದುರ್ಯೋಧನನನ್ನು ಹರ್ಷಗೊಳಿಸುತ್ತಾ ಕರ್ಣನು ತನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳಲು (೧-೬), ಭೀಷ್ಮನು ಅವನನ್ನು ಹೀಯಾಳಿಸಿದುದು (೭-೧೧). ಅದಕ್ಕೆ ನೊಂದು ಕರ್ಣನು “ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ” ಎಂದು ಹೇಳಿ ಸಭಾತ್ಯಾಗ ಮಾಡಿದುದು (೧೨-೧೮).

05061001 ವೈಶಂಪಾಯನ ಉವಾಚ|

05061001a ತಥಾ ತು ಪೃಚ್ಚಂತಮತೀವ ಪಾರ್ಥಾನ್

         ವೈಚಿತ್ರವೀರ್ಯಂ ತಮಚಿಂತಯಿತ್ವಾ|

05061001c ಉವಾಚ ಕರ್ಣೋ ಧೃತರಾಷ್ಟ್ರಪುತ್ರಂ

         ಪ್ರಹರ್ಷಯನ್ಸಂಸದಿ ಕೌರವಾಣಾಂ||

ವೈಶಂಪಾಯನನು ಹೇಳಿದನು: “ಪಾರ್ಥನ ಕುರಿತು ಇನ್ನೂ ಕೇಳತೊಡಗಿದ ವೈಚಿತ್ರವೀರ್ಯನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ಟ್ರಪುತ್ರನನ್ನು ಹರ್ಷಗೊಳಿಸುತ್ತಾ ಕರ್ಣನು ಹೇಳಿದನು.

05061002a ಮಿಥ್ಯಾ ಪ್ರತಿಜ್ಞಾಯ ಮಯಾ ಯದಸ್ತ್ರಂ

         ರಾಮಾದ್ಧೃತಂ ಬ್ರಹ್ಮಪುರಂ ಪುರಸ್ತಾತ್|

05061002c ವಿಜ್ಞಾಯ ತೇನಾಸ್ಮಿ ತದೈವಮುಕ್ತಸ್-

         ತವಾಂತಕಾಲೇಽಪ್ರತಿಭಾಸ್ಯತೀತಿ||

“ನಾನು ಸುಳ್ಳುಹೇಳಿ ಆ ಪುರಾತನ ಬ್ರಹ್ಮಪುರ ಅಸ್ತ್ರವನ್ನು ರಾಮನಿಂದ ಪಡೆದೆನೆಂದು ತಿಳಿದ ರಾಮನು “ನಿನ್ನ ಅಂತಕಾಲದಲ್ಲಿ ನಿನಗೆ ಇದನ್ನು ಪ್ರಯೋಗಿಸುವ ವಿಧಾನವು ಮರೆತುಹೋಗುತ್ತದೆ!” ಎಂದಿದ್ದನು.

05061003a ಮಹಾಪರಾಧೇ ಹ್ಯಪಿ ಸಂನತೇನ

         ಮಹರ್ಷಿಣಾಹಂ ಗುರುಣಾ ಚ ಶಪ್ತಃ|

05061003c ಶಕ್ತಃ ಪ್ರದಗ್ಧುಂ ಹ್ಯಪಿ ತಿಗ್ಮತೇಜಾಃ

         ಸಸಾಗರಾಮಪ್ಯವನಿಂ ಮಹರ್ಷಿಃ||

ಅಷ್ಟೊಂದು ಮಹಾ ಅಪರಾಧವನ್ನೆಸಗಿದ್ದರೂ ನನ್ನ ಗುರು ಮಹರ್ಷಿಯಿಂದ ಲಘುವಾಗಿಯೇ ಶಪಿಸಲ್ಪಟ್ಟಿದ್ದೇನೆ. ಆ ತಿಗ್ಮತೇಜ ಮಹರ್ಷಿಯು ಸಾಗರಗಳಿಂದೊಡಗೂಡಿದ ಈ ಅವನಿಯನ್ನೂ ಭಸ್ಮಮಾಡಲು ಶಕ್ತ.

05061004a ಪ್ರಸಾದಿತಂ ಹ್ಯಸ್ಯ ಮಯಾ ಮನೋಽಭೂಚ್-

         ಚುಶ್ರೂಷಯಾ ಸ್ವೇನ ಚ ಪೌರುಷೇಣ|

05061004c ತತಸ್ತದಸ್ತ್ರಂ ಮಮ ಸಾವಶೇಷಂ

         ತಸ್ಮಾತ್ಸಮರ್ಥೋಽಸ್ಮಿ ಮಮೈಷ ಭಾರಃ||

ಮನಸ್ಥೈರ್ಯದಿಂದ ಮತ್ತು ಪೌರುಷದಿಂದ ನಾನು ಅವನ ಶುಶ್ರೂಷೆ ಮಾಡಿ ಮೆಚ್ಚಿಸಿದೆ. ಆ ಅಸ್ತ್ರವು ಇನ್ನೂ ನನ್ನಲ್ಲಿದೆ. ಮತ್ತು ನನ್ನ ಆಯಸ್ಸು ಇನ್ನೂ ಮುಗಿದಿಲ್ಲ! ಆದುದರಿಂದ ಸಮರ್ಥನಾಗಿದ್ದೇನೆ. ಆ ಭಾರವು ನನಗಿರಲಿ.

05061005a ನಿಮೇಷಮಾತ್ರಂ ತಮೃಷಿಪ್ರಸಾದಂ

         ಅವಾಪ್ಯ ಪಾಂಚಾಲಕರೂಷಮತ್ಸ್ಯಾನ್|

05061005c ನಿಹತ್ಯ ಪಾರ್ಥಾಂಶ್ಚ ಸಪುತ್ರಪೌತ್ರಾಽಲ್-

         ಲೋಕಾನಹಂ ಶಸ್ತ್ರಜಿತಾನ್ಪ್ರಪತ್ಸ್ಯೇ||

ಆ ಋಷಿಯ ಪ್ರಸಾದದಿಂದ, ಕಣ್ಣುಮುಚ್ಚಿತೆರೆಯುವುದರೊಳಗೆ ನಾನು ಶಸ್ತ್ರದಿಂದ ಪಾಂಚಾಲ, ಕರೂಷ, ಮತ್ಸ್ಯರನ್ನು, ಪಾರ್ಥರನ್ನು ಅವರ ಮಕ್ಕಳು ಮೊಮ್ಮಕ್ಕಳೊಂದಿಗೆ ಲೋಕಗಳನ್ನು ಜಯಿಸಿ ಒಪ್ಪಿಸುತ್ತೇನೆ.

05061006a ಪಿತಾಮಹಸ್ತಿಷ್ಠತು ತೇ ಸಮೀಪೇ

         ದ್ರೋಣಶ್ಚ ಸರ್ವೇ ಚ ನರೇಂದ್ರಮುಖ್ಯಾಃ|

05061006c ಯಥಾಪ್ರಧಾನೇನ ಬಲೇನ ಯಾತ್ವಾ

         ಪಾರ್ಥಾನ್ ಹನಿಷ್ಯಾಮಿ ಮಮೈಷ ಭಾರಃ||

ಪಿತಾಮಹ, ದ್ರೋಣ ಮತ್ತು ನರೇಂದ್ರಮುಖ್ಯರೆಲ್ಲರೂ ನಿನ್ನ ಸಮೀಪದಲ್ಲಿಯೇ ಇರಲಿ. ಪ್ರಧಾನ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಸಂಹರಿಸುತ್ತೇನೆ. ಆ ಭಾರವು ನನಗಿರಲಿ.”

05061007a ಏವಂ ಬ್ರುವಾಣಂ ತಮುವಾಚ ಭೀಷ್ಮ

         ಕಿಂ ಕತ್ಥಸೇ ಕಾಲಪರೀತಬುದ್ಧೇ|

05061007c ನ ಕರ್ಣ ಜಾನಾಸಿ ಯಥಾ ಪ್ರಧಾನೇ

         ಹತೇ ಹತಾಃ ಸ್ಯುರ್ಧೃತರಾಷ್ಟ್ರಪುತ್ರಾಃ||

ಹೀಗೆ ಹೇಳುತ್ತಿದ್ದ ಅವನಿಗೆ ಭೀಷ್ಮನು ಹೇಳಿದನು: “ಏನು ಹೇಳುತ್ತಿರುವೆ? ನಿನ್ನ ಅಂತ್ಯವು ಬಂದು ಬುದ್ಧಿ ಕೆಟ್ಟಿದೆ. ಪ್ರಧಾನನು ಹತನಾದರೆ ಎಲ್ಲ ಧೃತರಾಷ್ಟ್ರಪುತ್ರರೂ ಹತರಾಗುತ್ತಾರೆ ಎಂದು ನಿನಗೆ ತಿಳಿದಿಲ್ಲವೇ?

05061008a ಯತ್ಖಾಂಡವಂ ದಾಹಯತಾ ಕೃತಂ ಹಿ

         ಕೃಷ್ಣದ್ವಿತೀಯೇನ ಧನಂಜಯೇನ|

05061008c ಶ್ರುತ್ವೈವ ತತ್ಕರ್ಮ ನಿಯಂತುಮಾತ್ಮಾ

         ಶಕ್ಯಸ್ತ್ವಯಾ ವೈ ಸಹ ಬಾಂಧವೇನ||

ಖಾಂಡವವನ್ನು ಸುಡುವಾಗ ಕೃಷ್ಣನೊಬ್ಬನ ಸಹಾಯದಿಂದಲೇ ಧನಂಜಯನು ಮಾಡಿದುದನ್ನು ಕೇಳಿಯೂ ಕೂಡ, ಬಾಂಧವರೊಂದಿಗೆ ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು.

05061009a ಯಾಂ ಚಾಪಿ ಶಕ್ತಿಂ ತ್ರಿದಶಾಧಿಪಸ್ತೇ

         ದದೌ ಮಹಾತ್ಮಾ ಭಗವಾನ್ಮಹೇಂದ್ರಃ|

05061009c ಭಸ್ಮೀಕೃತಾಂ ತಾಂ ಪತಿತಾಂ ವಿಶೀರ್ಣಾಂ

         ಚಕ್ರಾಹತಾಂ ದ್ರಕ್ಷ್ಯಸಿ ಕೇಶವೇನ||

ಯಾವ ಶಕ್ತಿಯನ್ನು ನಿನಗೆ ತ್ರಿದಶಾಧಿಪ ಮಹಾತ್ಮ ಭಗವಾನ್ ಮಹೇಂದ್ರನು ಕೊಟ್ಟಿದ್ದನೋ ಅದನ್ನೂ ಕೂಡ ಕೇಶವನು ಚಕ್ರದಿಂದ ಹೊಡೆದು ಚೂರಾಗಿ ಭಸ್ಮೀಕೃತವಾಗಿ ಕೆಳಗೆ ಬೀಳಿಸುವುದನ್ನು ನೋಡುವಿಯಂತೆ!

05061010a ಯಸ್ತೇ ಶರಃ ಸರ್ಪಮುಖೋ ವಿಭಾತಿ

         ಸದಾಗ್ರ್ಯಮಾಲ್ಯೈರ್ಮಹಿತಃ ಪ್ರಯತ್ನಾತ್|

05061010c ಸ ಪಾಂಡುಪುತ್ರಾಭಿಹತಃ ಶರೌಘೈಃ

         ಸಹ ತ್ವಯಾ ಯಾಸ್ಯತಿ ಕರ್ಣ ನಾಶಂ||

ಕರ್ಣ! ಯಾವ ಶರವು ಸರ್ಪಮುಖದಲ್ಲಿ ಹೊಳೆಯುತ್ತಿರುವುದೋ, ಪ್ರಯತ್ನ ಪಟ್ಟು ನೀನು ಯಾವುದನ್ನು ಮಾಲೆಗಳನ್ನು ಹಾಕಿ ಪೂಜಿಸುತ್ತಿರುವೆಯೋ ಅದನ್ನು ಕೂಡ ಪಾಂಡುಪುತ್ರನು ಹರಿತ ಶರಗಳಿಂದ ಹೊಡೆದು ನಿನ್ನೊಂದಿಗೆ ಅದೂ ನಾಶವಾಗುತ್ತದೆ.

05061011a ಬಾಣಸ್ಯ ಭೌಮಸ್ಯ ಚ ಕರ್ಣ ಹಂತಾ

         ಕಿರೀಟಿನಂ ರಕ್ಷತಿ ವಾಸುದೇವಃ|

05061011c ಯಸ್ತ್ವಾದೃಶಾನಾಂ ಚ ಗರೀಯಸಾಂ ಚ

         ಹಂತಾ ರಿಪೂಣಾಂ ತುಮುಲೇ ಪ್ರಗಾಢೇ||

ಕರ್ಣ! ಬಾಣ ಮತ್ತು ಭೌಮ (ನರಕ) ರ ಹಂತಕ ವಾಸುದೇವನು ಕಿರೀಟಿಯನ್ನು ರಕ್ಷಿಸುತ್ತಾನೆ. ಪ್ರಗಾಢ ತುಮುಲದಲ್ಲಿ ಅವನು ನಿನ್ನಂಥಹ ಮತ್ತು ನಿನಗಿಂಥಲೂ ಹೆಚ್ಚಿನ ಶತ್ರುಗಳನ್ನು ಹತಗೊಳಿಸುತ್ತಾನೆ.”

05061012 ಕರ್ಣ ಉವಾಚ|

05061012a ಅಸಂಶಯಂ ವೃಷ್ಣಿಪತಿರ್ಯಥೋಕ್ತಸ್-

         ತಥಾ ಚ ಭೂಯಶ್ಚ ತತೋ ಮಹಾತ್ಮಾ|

05061012c ಅಹಂ ಯದುಕ್ತಃ ಪರುಷಂ ತು ಕಿಂ ಚಿತ್

         ಪಿತಾಮಹಸ್ತಸ್ಯ ಫಲಂ ಶೃಣೋತು||

ಕರ್ಣನು ಹೇಳಿದನು: “ವೃಷ್ಣಿಪತಿಯು ಹೇಳಿದಂತೆಯೇ ಇದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ಮಹಾತ್ಮನು ಅದಕ್ಕಿಂತಲೂ ಹೆಚ್ಚಿನವನು. ಆದರೆ ಪಿತಾಮಹನಾಡಿದ ಈ ಕಠೋರ ಮಾತುಗಳ ಪರಿಣಾಮವನ್ನು ಕೇಳಿ.

05061013a ನ್ಯಸ್ಯಾಮಿ ಶಸ್ತ್ರಾಣಿ ನ ಜಾತು ಸಂಖ್ಯೇ

         ಪಿತಾಮಹೋ ದ್ರಕ್ಷ್ಯತಿ ಮಾಂ ಸಭಾಯಾಂ|

05061013c ತ್ವಯಿ ಪ್ರಶಾಂತೇ ತು ಮಮ ಪ್ರಭಾವಂ

         ದ್ರಕ್ಷ್ಯಂತಿ ಸರ್ವೇ ಭುವಿ ಭೂಮಿಪಾಲಾಃ||

ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ.””

05061014 ವೈಶಂಪಾಯನ ಉವಾಚ|

05061014a ಇತ್ಯೇವಮುಕ್ತ್ವಾ ಸ ಮಹಾಧನುಷ್ಮಾನ್

         ಹಿತ್ವಾ ಸಭಾಂ ಸ್ವಂ ಭವನಂ ಜಗಾಮ|

05061014c ಭೀಷ್ಮಸ್ತು ದುರ್ಯೋಧನಮೇವ ರಾಜನ್

         ಮಧ್ಯೇ ಕುರೂಣಾಂ ಪ್ರಹಸನ್ನುವಾಚ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಧನುಷ್ಮಂತನು ಸಭೆಯನ್ನು ತೊರೆದು ಸ್ವ-ಭವನಕ್ಕೆ ತೆರಳಿದನು. ರಾಜನ್! ಭೀಷ್ಮನಾದರೋ ಕುರುಗಳ ಮಧ್ಯದಲ್ಲಿ ಜೋರಾಗಿ ನಕ್ಕು ದುರ್ಯೋಧನನಿಗೆ ಹೇಳಿದನು.

05061015a ಸತ್ಯಪ್ರತಿಜ್ಞಾಃ ಕಿಲ ಸೂತಪುತ್ರಸ್-

         ತಥಾ ಸ ಭಾರಂ ವಿಷಹೇತ ಕಸ್ಮಾತ್|

05061015c ವ್ಯೂಹಂ ಪ್ರತಿವ್ಯೂಹ್ಯ ಶಿರಾಂಸಿ ಭಿತ್ತ್ವಾ

         ಲೋಕಕ್ಷಯಂ ಪಶ್ಯತ ಭೀಮಸೇನಾತ್||

05061016a ಆವಂತ್ಯಕಾಲಿಂಗಜಯದ್ರಥೇಷು

         ವೇದಿಧ್ವಜೇ ತಿಷ್ಠತಿ ಬಾಹ್ಲಿಕೇ ಚ|

05061016c ಅಹಂ ಹನಿಷ್ಯಾಮಿ ಸದಾ ಪರೇಷಾಂ

         ಸಹಸ್ರಶಶ್ಚಾಯುತಶಶ್ಚ ಯೋಧಾನ್||

“ಸೂತಪುತ್ರನು ತನ್ನ ಪ್ರತಿಜ್ಞೆಯನ್ನು ಸತ್ಯವಾಗಿಸುತ್ತಾನಲ್ಲವೇ? ಭೀಮಸೇನನು ನೋಡುತ್ತಿದ್ದಂತೆ ವ್ಯೂಹ-ಪ್ರತಿವ್ಯೂಹಗಳ ಶಿರಗಳನ್ನು ಕತ್ತರಿಸಿ ಲೋಕಕ್ಷಯವನ್ನುಂಟುಮಾಡುತ್ತೇನೆ ಮತ್ತು ಅವಂತಿ, ಕಲಿಂಗ, ಜಯದ್ರಥರ ಧ್ವಜಗಳ ಮಧ್ಯದಲ್ಲಿ ಬಾಹ್ಲೀಕನನ್ನು ನಿಲ್ಲಿಸಿ ನಾನು ಸದಾ ಶತ್ರುಗಳ ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ ಎಂದು ಹೇಳಿದ ಅವನು ತನ್ನ ಆ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸುತ್ತಾನೆ?

05061017a ಯದೈವ ರಾಮೇ ಭಗವತ್ಯನಿಂದ್ಯೇ

         ಬ್ರಹ್ಮ ಬ್ರುವಾಣಃ ಕೃತವಾಂಸ್ತದಸ್ತ್ರಂ|

05061017c ತದೈವ ಧರ್ಮಶ್ಚ ತಪಶ್ಚ ನಷ್ಟಂ

         ವೈಕರ್ತನಸ್ಯಾಧಮಪೂರುಷಸ್ಯ||

ಅನಿಂದ್ಯ, ಭಗವಂತ ರಾಮನನಿಗೆ ಬ್ರಾಹ್ಮಣನೆಂದು ಹೇಳಿ ಆ ಅಸ್ತ್ರವನ್ನು ಪಡೆದಾಗಲೇ ಆ ಅಧಮ ಪುರುಷ ವೈಕರ್ತನನ ಧರ್ಮ ತಪಸ್ಸುಗಳು ನಷ್ಟವಾಗಿ ಹೋಗಿದ್ದವು.”

05061018a ಅಥೋಕ್ತವಾಕ್ಯೇ ನೃಪತೌ ತು ಭೀಷ್ಮೇ

         ನಿಕ್ಷಿಪ್ಯ ಶಸ್ತ್ರಾಣಿ ಗತೇ ಚ ಕರ್ಣೇ|

05061018c ವೈಚಿತ್ರವೀರ್ಯಸ್ಯ ಸುತೋಽಲ್ಪಬುದ್ಧಿರ್-

         ದುರ್ಯೋಧನಃ ಶಾಂತನವಂ ಬಭಾಷೇ||

ಶಸ್ತ್ರಗಳನ್ನು ಬಿಸುಟು ಹೊರಟುಹೋದ ಕರ್ಣನ ಕುರಿತು ಭೀಷ್ಮನು ನೃಪತಿಗಳಿಗೆ ಹೇಳಲು ಬುದ್ಧಿಯಿಲ್ಲದ, ವೈಚಿತ್ರವೀರ್ಯನ ಮಗ ದುರ್ಯೋಧನನು ಶಾಂತನವನಿಗೆ ಹೇಳಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಕರ್ಣಭೀಷ್ಮವಾಕ್ಯೇ ಏಕಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಕರ್ಣಭೀಷ್ಮವಾಕ್ಯದಲ್ಲಿ ಅರವತ್ತೊಂದನೆಯ ಅಧ್ಯಾಯವು.

Related image

Comments are closed.