Udyoga Parva: Chapter 45

ಉದ್ಯೋಗ ಪರ್ವ: ಸನತ್ಸುಜಾತ ಪರ್ವ

೪೫

ಬ್ರಹ್ಮವಸ್ತು ನಿರೂಪಣೆ

ಸನತ್ಸುಜಾತನು ಧೃತರಾಷ್ಟ್ರನಿಗೆ ಬ್ರಹ್ಮವಸ್ತುವನ್ನು ವರ್ಣಿಸುವುದು (೧-೨೮).

05045001 ಸನತ್ಸುಜಾತ ಉವಾಚ|

05045001a ಯತ್ತಚ್ಚುಕ್ರಂ ಮಹಜ್ಜ್ಯೋತಿರ್ದೀಪ್ಯಮಾನಂ ಮಹದ್ಯಶಃ|

05045001c ತದ್ವೈ ದೇವಾ ಉಪಾಸಂತೇ ಯಸ್ಮಾದರ್ಕೋ ವಿರಾಜತೇ|

05045001e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಸನತ್ಸುಜಾತನು ಹೇಳಿದನು: “ಯಾವ ವೀರ್ಯ, ಬೆಳಗುತ್ತಿರುವ ಮಹಾಜ್ಯೋತಿ, ಮಹಾ ಯಶಸ್ಸಿನಿಂದ ಸೂರ್ಯನು ವಿರಾಜಿಸುತ್ತಾನೋ ಅದನ್ನೇ ದೇವತೆಗಳು ಉಪಾಸಿಸುತ್ತಾರೆ. ಯೋಗಿಗಳು ಅದನ್ನು ಭಗವಂತ, ಸನಾತನನೆಂದು ಕಾಣುತ್ತಾರೆ.

05045002a ಶುಕ್ರಾದ್ಬ್ರಹ್ಮ ಪ್ರಭವತಿ ಬ್ರಹ್ಮ ಶುಕ್ರೇಣ ವರ್ಧತೇ|

05045002c ತಚ್ಚುಕ್ರಂ ಜ್ಯೋತಿಷಾಂ ಮಧ್ಯೇಽತಪ್ತಂ ತಪತಿ ತಾಪನಂ|

05045002e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಈ ವೀರ್ಯದಿಂದ ಬ್ರಹ್ಮನು ಹುಟ್ಟುತ್ತಾನೆ, ಈ ವೀರ್ಯದಿಂದಲೇ ಬ್ರಹ್ಮನು ವರ್ಧಿಸುತ್ತಾನೆ. ಆ ಶುಕ್ರ ಜ್ಯೋತಿಯೇ ತಾಪಸಿಗಳ ತಪಸ್ಸಿನ ಮಧ್ಯದಲ್ಲಿ ಉರಿಯುತ್ತದೆ. ಯೋಗಿಗಳು ಅದನ್ನು ಭಗವಂತ, ಸನಾತನನೆಂದು ಕಾಣುತ್ತಾರೆ.

05045003a ಆಪೋಽಥ ಅದ್ಭ್ಯಃ ಸಲಿಲಸ್ಯ ಮಧ್ಯೇ

        ಉಭೌ ದೇವೌ ಶಿಶ್ರಿಯಾತೇಽಂತರಿಕ್ಷೇ|

05045003c ಸ ಸಧ್ರೀಚೀಃ ಸ ವಿಷೂಚೀರ್ವಸಾನಾ

        ಉಭೇ ಬಿಭರ್ತಿ ಪೃಥಿವೀಂ ದಿವಂ ಚ||

05045003e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಸಾಗರದಲ್ಲಿರುವ ನೀರಿನಲ್ಲಿ ನೀರಾಗಿರುವ ಮತ್ತು ಅಂತರಿಕ್ಷದಲ್ಲಿರುವ ಇಬ್ಬರು ದೇವತೆಗಳು ದಿಕ್ಕುಗಳನ್ನೂ ಉಪದಿಕ್ಕುಗಳನ್ನೂ ಆವರಿಸಿ ಇಬ್ಬರೂ ಭೂಮಿ-ಆಕಾಶಗಳನ್ನು ಹಿಡಿದಿಡುತ್ತಾರೆ. ಅದನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045004a ಉಭೌ ಚ ದೇವೌ ಪೃಥಿವೀಂ ದಿವಂ ಚ

        ದಿಶಶ್ಚ ಶುಕ್ರಂ ಭುವನಂ ಬಿಭರ್ತಿ|

05045004c ತಸ್ಮಾದ್ದಿಶಃ ಸರಿತಶ್ಚ ಸ್ರವಂತಿ

        ತಸ್ಮಾತ್ಸಮುದ್ರಾ ವಿಹಿತಾ ಮಹಾಂತಃ||

05045004e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಇಬ್ಬರು ದೇವತೆಗಳೂ ಭೂಮಿ-ಆಕಾಶಗಳನ್ನು, ದಿಕ್ಕುಗಳನ್ನೂ, ಶುಕ್ರನನ್ನೂ, ಭುವನವನ್ನೂ ಹೊರುತ್ತಾರೆ. ಅದರಿಂದ ದಿಕ್ಕುಗಳೂ ನದಿಗಳೂ ಹರಿಯುತ್ತವೆ. ಅದರಲ್ಲಿಯೇ ಮಹಾಂತ ಸಮುದ್ರಗಳು ಹುಟ್ಟುತ್ತವೆ. ಅದನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045005a ಚಕ್ರೇ ರಥಸ್ಯ ತಿಷ್ಠಂತಂ ಧ್ರುವಸ್ಯಾವ್ಯಯಕರ್ಮಣಃ|

05045005c ಕೇತುಮಂತಂ ವಹಂತ್ಯಶ್ವಾಸ್ತಂ ದಿವ್ಯಮಜರಂ ದಿವಿ|

05045005e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಅವ್ಯಯವಾಗಿ ದೃಢವಾಗಿ ಚಲಿಸುತ್ತಿರುವ ಧ್ವಜವನ್ನು ಹೊಂದಿದ ರಥದ ಚಕ್ರಗಳಲ್ಲಿದ್ದುಕೊಂಡು, ದಿವಿಯಲ್ಲಿ ಅಶ್ವಗಳಾಗಿ ಹಾರಿಸಿಕೊಂಡು ಹೋಗುವ ಆ ದಿವ್ಯ ಅಜರವನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣತ್ತಾರೆ.

05045006a ನ ಸಾದೃಶ್ಯೇ ತಿಷ್ಠತಿ ರೂಪಮಸ್ಯ

        ನ ಚಕ್ಷುಷಾ ಪಶ್ಯತಿ ಕಶ್ಚಿದೇನಂ|

05045006c ಮನೀಷಯಾಥೋ ಮನಸಾ ಹೃದಾ ಚ

        ಯ ಏವಂ ವಿದುರಮೃತಾಸ್ತೇ ಭವಂತಿ||

05045006e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಅವನ ರೂಪಕ್ಕೆ ಸಮನಾದುದು ಯಾವುದೂ ಇಲ್ಲ. ಯಾರೂ ಕಣ್ಣುಗಳಿಂದ ಅವನನ್ನು ಕಾಣಲಾರರು. ಆದರೆ ಮನಸ್ಸು ಮತ್ತು ಹೃದಯಗಳಿಂದ ಅವನನ್ನು ಅರ್ಥಮಾಡಿಕೊಂಡ ಮನೀಷಿಗಳು ಅಮೃತರಾಗುತ್ತಾರೆ.

05045007a ದ್ವಾದಶಪೂಗಾಂ ಸರಿತಂ ದೇವರಕ್ಷಿತಂ|

05045007c ಮಧು ಈಶಂತಸ್ತದಾ ಸಂಚರಂತಿ ಘೋರಂ|

05045007e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ದೇವರಕ್ಷಿತವಾದ ಮಧುವಿನಂತಿರುವ ಹನ್ನೆರಡು ಗುಂಪುಗಳ ನದಿಯಲ್ಲಿ ಈಶನು ಘೋರ ಪ್ರಯಾಣವನ್ನು ಮಾಡುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045008a ತದರ್ಧಮಾಸಂ ಪಿಬತಿ ಸಂಚಿತ್ಯ ಭ್ರಮರೋ ಮಧು|

05045008c ಈಶಾನಃ ಸರ್ವಭೂತೇಷು ಹವಿರ್ಭೂತಮಕಲ್ಪಯತ್|

05045008e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಭ್ರಮರವು ಮಧುವನ್ನು ಕೂಡಿಟ್ಟುಕೊಂಡು ಅರ್ಧತಿಂಗಳಿಗೊಮ್ಮೆ ಕುಡಿಯುತ್ತವೆ. ಈಶ್ವರನು ಸರ್ವಭೂತಗಳಲ್ಲಿ ಇದನ್ನು ಹವಿಸ್ಸನ್ನಾಗಿ ಕಲ್ಪಿಸಿದ್ದಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045009a ಹಿರಣ್ಯಪರ್ಣಮಶ್ವತ್ಥಮಭಿಪತ್ಯ ಅಪಕ್ಷಕಾಃ|

05045009c ತೇ ತತ್ರ ಪಕ್ಷಿಣೋ ಭೂತ್ವಾ ಪ್ರಪತಂತಿ ಯಥಾದಿಶಂ|

05045009e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ರೆಕ್ಕೆಗಳಿಲ್ಲದ ಪಕ್ಷಿಗಳಾಗಿ ಬಂಗಾರದ ಬಣ್ಣದ ಎಲೆಗಳುಳ್ಳ ಅಶ್ವತ್ಥವೃಕ್ಷದ ಮೇಲೆ ಬಂದು ಕುಳಿತುಕೊಂಡು, ರೆಕ್ಕೆಗಳನ್ನು ಪಡೆದು ಬೇರೆ ಬೇರೆ ದಿಕ್ಕುಗಳಿಗೆ ಹಾರಿ ಹೋಗುತ್ತವೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045010a ಪೂರ್ಣಾತ್ಪೂರ್ಣಾನ್ಯುದ್ಧರಂತಿ

        ಪೂರ್ಣಾತ್ಪೂರ್ಣಾನಿ ಚಕ್ರಿರೇ|

05045010c ಹರಂತಿ ಪೂರ್ಣಾತ್ಪೂರ್ಣಾನಿ        ಪೂರ್ಣಮೇವಾವಶಿಷ್ಯತೇ||

05045010e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಪೂರ್ಣದಿಂದ ಪೂರ್ಣವನ್ನು ತೆಗೆಯುತ್ತಾರೆ; ಪೂರ್ಣದಿಂದ ಪೂರ್ಣವನ್ನು ಮಾಡುತ್ತಾರೆ. ಪೂರ್ಣದಿಂದ ಪೂರ್ಣವನ್ನು ಕಳೆದರೂ ಪೂರ್ಣವೇ ಉಳಿದುಕೊಳ್ಳುತ್ತದೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045011a ತಸ್ಮಾದ್ವೈ ವಾಯುರಾಯಾತಸ್ತಸ್ಮಿಂಶ್ಚ ಪ್ರಯತಃ ಸದಾ|

05045011c ತಸ್ಮಾದಗ್ನಿಶ್ಚ ಸೋಮಶ್ಚ ತಸ್ಮಿಂಶ್ಚ ಪ್ರಾಣ ಆತತಃ||

05045012a ಸರ್ವಮೇವ ತತೋ ವಿದ್ಯಾತ್ತತ್ತದ್ವಕ್ತುಂ ನ ಶಕ್ನುಮಃ|

05045012c ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಅದರಿಂದ ವಾಯುವು ಹುಟ್ಟಿ ಅದರಲ್ಲಿಯೇ ಲಯಹೊಂದುತ್ತಾನೆ. ಅದರಿಂದಲೇ ಅಗ್ನಿ, ಸೋಮಗಳು. ಅದರಿಂದಲೇ ಪ್ರಾಣವೂ ಆವರಿಸಿದೆ. ಅದರಿಂದ ಎಲ್ಲವನ್ನೂ ತಿಳಿದುಕೊಳ್ಳಬಹುದು. ಆದರೆ ಅದನ್ನು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045013a ಅಪಾನಂ ಗಿರತಿ ಪ್ರಾಣಃ ಪ್ರಾಣಂ ಗಿರತಿ ಚಂದ್ರಮಾಃ|

05045013c ಆದಿತ್ಯೋ ಗಿರತೇ ಚಂದ್ರಮಾದಿತ್ಯಂ ಗಿರತೇ ಪರಃ|

05045013e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಪ್ರಾಣವು ಅಪಾನವನ್ನು ನುಂಗುತ್ತದೆ. ಚಂದ್ರಮನು ಪ್ರಾಣವನ್ನು ನುಂಗುತ್ತಾನೆ. ಆದಿತ್ಯನು ಚಂದ್ರನನ್ನು ನುಂಗುತ್ತಾನೆ. ಪರಮಾತ್ಮನು ಸೂರ್ಯನನ್ನು ನುಂಗುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045014a ಏಕಂ ಪಾದಂ ನೋತ್ಕ್ಷಿಪತಿ ಸಲಿಲಾದ್ಧಂಸ ಉಚ್ಚರನ್|

05045014c ತಂ ಚೇತ್ಸತತಮೃತ್ವಿಜಂ ನ ಮೃತ್ಯುರ್ನಾಮೃತಂ ಭವೇತ್|

05045014e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ನೀರನ್ನು ಬಿಟ್ಟು ಹಾರುವಾಗ ಹಂಸವು ಒಂದು ಕಾಲನ್ನು ಎತ್ತುವುದಿಲ್ಲ. ಆ ಕಾಲನ್ನೂ ಅದು ಎತ್ತಿದರೆ ಅಲ್ಲಿ ಮೃತ್ಯುವೂ ಇರುವುದಿಲ್ಲ, ಅಮೃತತ್ವವೂ ಇರುವುದಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045015a ಏವಂ ದೇವೋ ಮಹಾತ್ಮಾ ಸ ಪಾವಕಂ ಪುರುಷೋ ಗಿರನ್|

05045015c ಯೋ ವೈ ತಂ ಪುರುಷಂ ವೇದ ತಸ್ಯೇಹಾತ್ಮಾ ನ ರಿಷ್ಯತೇ|

05045015e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಹೀಗೆ ಮಹಾತ್ಮ ದೇವ ಪುರುಷನು ಬೆಂಕಿಯನ್ನು ನುಂಗುತ್ತಾನೆ. ಯಾರು ಆ ಪುರುಷನನ್ನು ತಿಳಿದುಕೊಳ್ಳುತ್ತಾರೋ ಅವರ ಆತ್ಮವು ವಿನಾಶವಾಗುವುದಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045016a ಯಃ ಸಹಸ್ರಂ ಸಹಸ್ರಾಣಾಂ ಪಕ್ಷಾನ್ಸಂತತ್ಯ ಸಂಪತೇತ್|

05045016c ಮಧ್ಯಮೇ ಮಧ್ಯ ಆಗಚ್ಚೇದಪಿ ಚೇತ್ಸ್ಯಾನ್ಮನೋಜವಃ|

05045016e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಸಾವಿರ ಸಾವಿರ ರೆಕ್ಕೆಗಳನ್ನು ಬಿಚ್ಚಿ ಹಾರಿ, ಮಧ್ಯದ ಕೇಂದ್ರಕ್ಕೆ ಹೋಗುವಾಗ ಅವನು ಮನೋವೇಗದಲ್ಲಿರುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045017a ನ ದರ್ಶನೇ ತಿಷ್ಠತಿ ರೂಪಮಸ್ಯ

        ಪಶ್ಯಂತಿ ಚೈನಂ ಸುವಿಶುದ್ಧಸತ್ತ್ವಾಃ|

05045017c ಹಿತೋ ಮನೀಷೀ ಮನಸಾಭಿಪಶ್ಯೇದ್

        ಯೇ ತಂ ಶ್ರಯೇಯುರಮೃತಾಸ್ತೇ ಭವಂತಿ||

05045017e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಅವನ ರೂಪವು ದೃಷ್ಟಿಗೆ ಸಿಲುಕಲಾರದ್ದು. ಕೇವಲ ವಿಶುದ್ಧ ಸತ್ತ್ವರು ಅವನನ್ನು ಕಾಣುತ್ತಾರೆ. ಹಿತಾಕಾಂಕ್ಷಿ ಮನೀಷಿಗಳು ಅವನನ್ನು ಮನಸ್ಸಿನಿಂದ ನೋಡುತ್ತಾರೆ. ಅವನಿಗೆ ಶರಣುಹೋದವರು ಅಮೃತತ್ವರಾಗಿದ್ದಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045018a ಗೂಹಂತಿ ಸರ್ಪಾ ಇವ ಗಹ್ವರಾಣಿ

        ಸ್ವಶಿಕ್ಷಯಾ ಸ್ವೇನ ವೃತ್ತೇನ ಮರ್ತ್ಯಾಃ|

05045018c ತೇಷು ಪ್ರಮುಹ್ಯಂತಿ ಜನಾ ವಿಮೂಢಾ

        ಯಥಾಧ್ವಾನಂ ಮೋಹಯಂತೇ ಭಯಾಯ||

05045018e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಬಿಲಗಳಲ್ಲಿರುವ ಸರ್ಪದಂತೆ ಮನುಷ್ಯರು ಕಲಿಯುವ ನೆಪದಲ್ಲಿ ಅಥವಾ ಉತ್ತಮ ನಡತೆಯ ನೆಪದಲ್ಲಿ ಅವನನ್ನು ಮುಚ್ಚಿಡುತ್ತಾರೆ. ವಿಮೂಢ ಜನರು ಅದರಿಂದ ಮೋಸಹೋಗುತ್ತಾರೆ ಮತ್ತು ಭಯವನ್ನು ನೀಡುವ ಮಾರ್ಗವನ್ನು ಬಯಸುತ್ತಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045019a ಸದಾ ಸದಾಸತ್ಕೃತಃ ಸ್ಯಾನ್ನ ಮೃತ್ಯುರಮೃತಂ ಕುತಃ|

05045019c ಸತ್ಯಾನೃತೇ ಸತ್ಯಸಮಾನಬಂಧನೇ

        ಸತಶ್ಚ ಯೋನಿರಸತಶ್ಚೈಕ ಏವ||

05045019e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಸದಾ ಇರುವುದಕ್ಕೆ ಮೃತ್ಯು ಮತ್ತು ಅಮೃತ್ಯುವು ಎಲ್ಲಿಂದ? ಸತ್ಯ-ಅಸತ್ಯಗಳೆರಡೂ ಸತ್ಯದ ಸಮಾನಬಂಧುಗಳು. ಇರುವ ಮತ್ತು ಇಲ್ಲದಿರುವ ಎಲ್ಲದರ ಮೂಲವೂ ಒಂದೇ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045020a ನ ಸಾಧುನಾ ನೋತ ಅಸಾಧುನಾ ವಾ

        ಸಮಾನಮೇತದ್ದೃಶ್ಯತೇ ಮಾನುಷೇಷು|

05045020c ಸಮಾನಮೇತದಮೃತಸ್ಯ ವಿದ್ಯಾದ್

        ಏವಮ್ಯುಕ್ತೋ ಮಧು ತದ್ವೈ ಪರೀಪ್ಸೇತ್||

05045020e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಮನುಷ್ಯನು ಸಾಧುವಾಗಿರಲಿ ಅಥವಾ ಅಸಾಧುವಾಗಿರಲಿ, ಅವನಲ್ಲಿರುವುದು ಒಂದೇ ಆಗಿ ಕಾಣುವುದು. ಅದು ಅಮೃತದ ಸಮಾನವಾದುದು ಎಂದು ತಿಳಿ. ಈ ರೀತಿ ಯುಕ್ತನಾಗಿ ಅವನು ಮಧುವನ್ನು ಸವಿಯಲಿ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045021a ನಾಸ್ಯಾತಿವಾದಾ ಹೃದಯಂ ತಾಪಯಂತಿ

        ನಾನಧೀತಂ ನಾಹುತಮಗ್ನಿಹೋತ್ರಂ|

05045021c ಮನೋ ಬ್ರಾಹ್ಮೀಂ ಲಘುತಾಮಾದಧೀತ

        ಪ್ರಜ್ಞಾನಮಸ್ಯ ನಾಮ ಧೀರಾ ಲಭಂತೇ||

05045021e ಯೋಗಿನಸ್ತಂ ಪ್ರಪಶ್ಯಂತಿ ಭಗವಂತಂ ಸನಾತನಂ||

ಅಪವಾದಗಳು ಅವನ ಹೃದಯವನ್ನು ಸುಡುವುದಿಲ್ಲ. ಕಲಿತಿಲ್ಲದ ಪಾಠವೂ, ಆಹುತಿಯನ್ನು ನೀಡದ ಅಗ್ನಿಹೋತ್ರವೂ ಅವನನ್ನು ಕಾಡುವುದಿಲ್ಲ. ಮನಸ್ಸು ಬ್ರಾಹ್ಮೀ ಎಂಬ ಲಘುತ್ವವನ್ನು ಪಡೆಯಬೇಕು. ಪ್ರಜ್ಞಾವಂತರು ಅವನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ.

05045022a ಏವಂ ಯಃ ಸರ್ವಭೂತೇಷು ಆತ್ಮಾನಮನುಪಶ್ಯತಿ|

05045022c ಅನ್ಯತ್ರಾನ್ಯತ್ರ ಯುಕ್ತೇಷು ಕಿಂ ಸ ಶೋಚೇತ್ತತಃ ಪರಂ||

ಈ ರೀತಿಯಾಗಿ ಯಾರು, ಅವರವರ ಕೆಲಸಗಳಲ್ಲಿ ನಿರತರಾದ ಸರ್ವಭೂತಗಳಲ್ಲಿ ತನ್ನನ್ನೇ ನೋಡುತ್ತಾನೋ, ಅವನಿಗೆ ಇನ್ನೂ ಹೆಚ್ಚಿನ ಚಿಂತೆಯಾದರೂ ಏಕೆ?

05045023a ಯಥೋದಪಾನೇ ಮಹತಿ ಸರ್ವತಃ ಸಂಪ್ಲುತೋದಕೇ|

05045023c ಏವಂ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ||

ನೀರು ತುಂಬಿ ಹರಿಯುತ್ತಿರುವ ದೊಡ್ಡ ಬಾವಿಯು ಎಷ್ಟು ಪ್ರಯೋಜನಕಾರಿಯೋ ಹಾಗೆ ಎಲ್ಲ ವೇದಗಳಲ್ಲಿಯೂ ಬ್ರಾಹ್ಮಣನಿಗೆ ತಿಳಿದುಕೊಳ್ಳಲು ಸಾಕಷ್ಟಿವೆ.

05045024a ಅಂಗುಷ್ಠಮಾತ್ರಃ ಪುರುಷೋ ಮಹಾತ್ಮಾ

        ನ ದೃಶ್ಯತೇಽಸೌ ಹೃದಯೇ ನಿವಿಷ್ಟಃ|

05045024c ಅಜಶ್ಚರೋ ದಿವಾರಾತ್ರಮತಂದ್ರಿತಶ್ಚ

        ಸ ತಂ ಮತ್ವಾ ಕವಿರಾಸ್ತೇ ಪ್ರಸನ್ನಃ||

ಅಂಗುಷ್ಠಮಾತ್ರವಾಗಿರುವ ಮಹಾತ್ಮ ಪುರುಷನು ಹೃದಯದಲ್ಲಿ ಎಲ್ಲಿರುವನೆಂದು ಕಾಣುವುದಿಲ್ಲ. ಹುಟ್ಟಿಲ್ಲದ ಅವನು ದಿನರಾತ್ರಿ ಆಯಾಸವಿಲ್ಲದೇ ಸಂಚರಿಸುತ್ತಿರುತ್ತಾನೆ. ಕವಿಗಳು ಅವನನ್ನು ತಿಳಿದು ಪ್ರಸನ್ನರಾಗಿರುತ್ತಾರೆ.

05045025a ಅಹಮೇವಾಸ್ಮಿ ವೋ ಮಾತಾ ಪಿತಾ ಪುತ್ರೋಽಸ್ಮ್ಯಹಂ ಪುನಃ|

05045025c ಆತ್ಮಾಹಮಪಿ ಸರ್ವಸ್ಯ ಯಚ್ಚ ನಾಸ್ತಿ ಯದಸ್ತಿ ಚ||

ನಾನು ನಾನೇ. ನಾನೇ ತಾಯಿ. ನಾನೇ ತಂದೆ. ನಾನೇ ಪುನಃ ಪುತ್ರನಾಗುತ್ತೇನೆ. ಇರುವ ಮತ್ತು ಇಲ್ಲದಿರುವ ಎಲ್ಲದರ ಆತ್ಮವೂ ನಾನೇ.

05045026a ಪಿತಾಮಹೋಽಸ್ಮಿ ಸ್ಥವಿರಃ ಪಿತಾ ಪುತ್ರಶ್ಚ ಭಾರತ|

05045026c ಮಮೈವ ಯೂಯಮಾತ್ಮಸ್ಥಾ ನ ಮೇ ಯೂಯಂ ನ ವೋಽಪ್ಯಹಂ||

ಭಾರತ! ನಾನು ಸ್ಥವಿರ ಪಿತಾಮಹ, ಪಿತ ಮತ್ತು ಪುತ್ರನೂ ಕೂಡ. ನೀನು ನನ್ನ ಆತ್ಮದಲ್ಲಿ ನೆಲೆಸಿದ್ದೀಯೆ. ಆದರೆ ನೀನು ನನ್ನದಲ್ಲ. ನಾನು ನಿನ್ನದಲ್ಲ.

05045027a ಆತ್ಮೈವ ಸ್ಥಾನಂ ಮಮ ಜನ್ಮ ಚಾತ್ಮಾ

        ವೇದಪ್ರೋಕ್ತೋಽಹಮಜರಪ್ರತಿಷ್ಠಃ|

ನನ್ನ ಆತ್ಮವೇ ಸ್ಥಾನ. ನನ್ನ ಆತ್ಮವೇ ಜನ್ಮ. ವೇದವು ಹೇಳಿರುವ ಮುಪ್ಪಿಲ್ಲದ ತಳಪಾಯವೇ ನಾನು.

05045028a ಅಣೋರಣೀಯಾನ್ಸುಮನಾಃ ಸರ್ವಭೂತೇಷು ಜಾಗೃಮಿ|

05045028c ಪಿತರಂ ಸರ್ವಭೂತಾನಾಂ ಪುಷ್ಕರೇ ನಿಹಿತಂ ವಿದುಃ||

ಅಣುವಿಗಿಂತಲೂ ಸೂಕ್ಷ್ಮವಾಗಿರುವ, ಸುಮನಸ್ಕನಾದ ನಾನು ಸರ್ವಭೂತಗಳಲ್ಲಿ ಜಾಗೃತನಾಗಿರುತ್ತೇನೆ. ಸರ್ವಭೂತಗಳ ಪುಷ್ಕರದಲ್ಲಿರುವ ತಂದೆಯನ್ನು ಅವರು ತಿಳಿದಿರುತ್ತಾರೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ಸನತ್ಸುಜಾತವಾಕ್ಯೇ ಪಂಚಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ಸನತ್ಸುಜಾತವಾಕ್ಯದಲ್ಲಿ ನಲ್ವತ್ತೈದನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೯/೧೦೦, ಅಧ್ಯಾಯಗಳು-೭೦೮, ಶ್ಲೋಕಗಳು-೨೩೨೫೯

Related image

Comments are closed.