Udyoga Parva: Chapter 44

ಉದ್ಯೋಗ ಪರ್ವ: ಸನತ್ಸುಜಾತ ಪರ್ವ

೪೪

ಬ್ರಹ್ಮಚರ್ಯ ನಿರೂಪಣೆ

ಸನತ್ಸುಜಾತನು ಧೃತರಾಷ್ಟ್ರನಿಗೆ ಬ್ರಹ್ಮಚರ್ಯದ ಕುರಿತು ವಿವರಿಸುವುದು (೧-೨೪).

05044001 ಧೃತರಾಷ್ಟ್ರ ಉವಾಚ|

05044001a ಸನತ್ಸುಜಾತ ಯದಿಮಾಂ ಪರಾರ್ಥಾಂ

        ಬ್ರಾಹ್ಮೀಂ ವಾಚಂ ಪ್ರವದಸಿ ವಿಶ್ವರೂಪಾಂ|

05044001c ಪರಾಂ ಹಿ ಕಾಮೇಷು ಸುದುರ್ಲಭಾಂ ಕಥಾಂ

        ತದ್ಬ್ರೂಹಿ ಮೇ ವಾಕ್ಯಮೇತತ್ಕುಮಾರ||

ಧೃತರಾಷ್ಟ್ರನು ಹೇಳಿದನು: “ಸನತ್ಸುಜಾತ! ಕುಮಾರ! ನೀನು ಸರ್ವೋತ್ತಮವಾದ, ಬ್ರಹ್ಮಸಂಬಂಧಿಯಾದ, ಬಹುರೂಪದ ಮಾತನ್ನಾಡಿದ್ದೀಯೆ. ಕಾಮಗಳಲ್ಲಿ ಈ ವಿಷಯದ ಕುರಿತ ಮಾತುಕಥೆಯು ದುರ್ಲಭ. ಆದುದರಿಂದ ಇದನ್ನು ಇನ್ನೂ ವಿಸ್ತಾರವಾಗಿ ಹೇಳಬೇಕು.”

05044002 ಸನತ್ಸುಜಾತ ಉವಾಚ|

05044002a ನೈತದ್ಬ್ರಹ್ಮ ತ್ವರಮಾಣೇನ ಲಭ್ಯಂ

        ಯನ್ಮಾಂ ಪೃಚ್ಚಸ್ಯಭಿಹೃಷ್ಯಸ್ಯತೀವ|

05044002c ಅವ್ಯಕ್ತವಿದ್ಯಾಮಭಿಧಾಸ್ಯೇ ಪುರಾಣೀಂ

        ಬುದ್ಧ್ಯಾ ಚ ತೇಷಾಂ ಬ್ರಹ್ಮಚರ್ಯೇಣ ಸಿದ್ಧಾಂ||

ಸನತ್ಸುಜಾತನು ಹೇಳಿದನು: “ಸಂತೋಷದಿಂದ ನೀನು ನನ್ನನ್ನು ಕೇಳುತ್ತಿರುವ ಈ ಬ್ರಹ್ಮವಿದ್ಯೆಯು ಅವಸರ ಮಾಡಿದರೆ ದೊರೆಯುವುದಿಲ್ಲ. ಈ ಪುರಾಣ, ಅವ್ಯಕ್ತ ವಿದ್ಯೆಯನ್ನು ಬ್ರಹ್ಮಚರ್ಯದಿಂದ ಸಿದ್ಧಿಪಡಿಸಿಕೊಳ್ಳಬಹುದು.”

05044003 ಧೃತರಾಷ್ಟ್ರ ಉವಾಚ|

05044003a ಅವ್ಯಕ್ತವಿದ್ಯಾಮಿತಿ ಯತ್ಸನಾತನೀಂ

        ಬ್ರವೀಷಿ ತ್ವಂ ಬ್ರಹ್ಮಚರ್ಯೇಣ ಸಿದ್ಧಾಂ|

05044003c ಅನಾರಭ್ಯಾ ವಸತೀಹಾರ್ಯ ಕಾಲ

        ಕಥಂ ಬ್ರಾಹ್ಮಣ್ಯಮಮೃತತ್ವಂ ಲಭೇತ||

ಧೃತರಾಷ್ಟ್ರನು ಹೇಳಿದನು: “ಬ್ರಹ್ಮಚರ್ಯದಿಂದ ಸಿದ್ಧಿಯಾಗಬಲ್ಲ ಈ ಸನಾತನ ಅವ್ಯಕ್ತ ವಿದ್ಯೆಯ ಕುರಿತು ನೀನು ಹೇಳು. ಅನಾರಭ್ಯವಾದ ಆರ್ಯಕಾಲದಲ್ಲಿ ನೆಲಸಿರುವ ಬ್ರಾಹ್ಮಣ್ಯದ ಅಮೃತತ್ವವನ್ನು ಹೇಗೆ ಪಡೆಯಬಹುದು?”

05044004 ಸನತ್ಸುಜಾತ ಉವಾಚ|

05044004a ಯೇಽಸ್ಮಿಽಲ್ಲೋಕೇ ವಿಜಯಂತೀಹ ಕಾಮಾನ್

        ಬ್ರಾಹ್ಮೀಂ ಸ್ಥಿತಿಮನುತಿತಿಕ್ಷಮಾಣಾಃ|

05044004c ತ ಆತ್ಮಾನಂ ನಿರ್ಹರಂತೀಹ ದೇಹಾನ್

        ಮುಂಜಾದಿಷೀಕಾಮಿವ ಸತ್ತ್ವಸಂಸ್ಥಾಃ||

ಸನತ್ಸುಜಾತನು ಹೇಳಿದನು: “ಯಾರು ಈ ಲೋಕದಲ್ಲಿಯೇ ಇದ್ದುಕೊಂಡು ಕಾಮಗಳನ್ನೂ ಜಯಿಸಿ ಬಾಹ್ಮೀ ಸ್ಥಿತಿಯನ್ನು ಅಪೇಕ್ಷಿಸುತ್ತಾ ಇರುವರೋ ಅವರು ಮುಂಜದ ಹುಲ್ಲಿನಿಂದ ಅದರ ಒಳಗಿರುವ ಮೃದುವಾದ ಕಾಂಡವನ್ನು ಬೇರ್ಪಡಿಸುವಂತೆ, ಆತ್ಮವನ್ನು ದೇಹದಿಂದ ಪ್ರತ್ಯೇಕಿಸುತ್ತಿರುತ್ತಾರೆ.

05044005a ಶರೀರಮೇತೌ ಕುರುತಃ ಪಿತಾ ಮಾತಾ ಚ ಭಾರತ|

05044005c ಆಚಾರ್ಯಶಾಸ್ತಾ ಯಾ ಜಾತಿಃ ಸಾ ಸತ್ಯಾ ಸಾಜರಾಮರಾ||

ಭಾರತ! ತಂದೆ-ತಾಯಿಯರು ಈ ಶರೀರವನ್ನು ಮಾತ್ರ ಮಾಡುತ್ತಾರೆ. ಆದರೆ ಆಚಾರ್ಯನ ಉಪದೇಶದಿಂದ ಯಾವುದು ಹುಟ್ಟುತ್ತದೆಯೋ ಅದು ಸತ್ಯವೂ ಅಜರಾಮರವೂ (ಹುಟ್ಟು-ಸಾವಿಲ್ಲದೂ) ಆದುದು.

05044006a ಆಚಾರ್ಯಯೋನಿಮಿಹ ಯೇ ಪ್ರವಿಶ್ಯ

        ಭೂತ್ವಾ ಗರ್ಭಂ ಬ್ರಹ್ಮಚರ್ಯಂ ಚರಂತಿ|

05044006c ಇಹೈವ ತೇ ಶಾಸ್ತ್ರಕಾರಾ ಭವಂತಿ

        ಪ್ರಹಾಯ ದೇಹಂ ಪರಮಂ ಯಾಂತಿ ಯೋಗಂ||

ಯಾರು ಆಚಾರ್ಯಯೋನಿಯನ್ನು ಪ್ರವೇಶಿಸಿ ಗರ್ಭವಾಗಿ ಬ್ರಹ್ಮಚರ್ಯವನ್ನು ಆಚರಿಸಿಸುತ್ತಾರೋ ಅವರು ಇಲ್ಲಿಯೇ ಶಾಸ್ತ್ರಕಾರರಾಗುತ್ತಾರೆ. ದೇಹವನ್ನು ತೊರೆದು ಪರಮ ಯೋಗವನ್ನು ಹೊಂದುತ್ತಾರೆ.

05044007a ಯ ಆವೃಣೋತ್ಯವಿತಥೇನ ಕರ್ಣಾ

        ವೃತಂ ಕುರ್ವನ್ನಮೃತಂ ಸಂಪ್ರಯಚ್ಚನ್|

05044007c ತಂ ಮನ್ಯೇತ ಪಿತರಂ ಮಾತರಂ ಚ

        ತಸ್ಮೈ ನ ದ್ರುಹ್ಯೇತ್ಕೃತಮಸ್ಯ ಜಾನನ್||

ಯಾರು ಸುಳ್ಳನ್ನು ಸತ್ಯದಿಂದ ಆವೃತಗೊಳಿಸುತ್ತಾನೋ, ಎಲ್ಲವಕ್ಕೂ ಅಮೃತತ್ವವನ್ನು ನೀಡುತ್ತಾನೋ ಅಂಥವನನ್ನು ತಂದೆ-ತಾಯಿಯೆಂದು ಮನ್ನಿಸಬೇಕು. ಅವನಿಗೆ ಮನಸ್ಸಿನಲ್ಲಿಯೂ ದ್ರೋಹವನ್ನೆಸಗಬಾರದು.

05044008a ಗುರುಂ ಶಿಷ್ಯೋ ನಿತ್ಯಮಭಿಮನ್ಯಮಾನಃ

        ಸ್ವಾಧ್ಯಾಯಮಿಚ್ಚೇಚ್ಚುಚಿರಪ್ರಮತ್ತಃ|

05044008c ಮಾನಂ ನ ಕುರ್ಯಾನ್ನ ದಧೀತ ರೋಷಂ

        ಏಷ ಪ್ರಥಮೋ ಬ್ರಹ್ಮಚರ್ಯಸ್ಯ ಪಾದಃ||

ಶಿಷ್ಯನು ಗುರುವಿಗೆ ನಿತ್ಯವೂ ಅಭಿವಂದಿಸಬೇಕು. ಶುಚಿಯಾಗಿದ್ದುಕೊಂಡು, ಅಪ್ರಮತ್ತನಾಗಿ, ಸ್ವಾಧ್ಯಾಯದಲ್ಲಿ ನಿರತನಾಗಿರಬೇಕು. ಅಭಿಮಾನ ಪಡಬಾರದು. ರೋಷಗೊಳ್ಳಬಾರದು. ಇವು ಬ್ರಹ್ಮಚರ್ಯದ ಮೊದಲನೆಯ ಪಾದದ ನಿಯಮಗಳು.

05044009a ಆಚಾರ್ಯಸ್ಯ ಪ್ರಿಯಂ ಕುರ್ಯಾತ್ಪ್ರಾಣೈರಪಿ ಧನೈರಪಿ|

05044009c ಕರ್ಮಣಾ ಮನಸಾ ವಾಚಾ ದ್ವಿತೀಯಃ ಪಾದ ಉಚ್ಯತೇ||

ಪ್ರಾಣದ ಮೂಲಕವಾದರೂ ಅಥವಾ ಧನದ ಮೂಲಕವಾದರೂ, ಕರ್ಮ, ಮನಸ್ಸು, ಮಾತುಗಳಲ್ಲಿ ಆಚಾರ್ಯನಿಗೆ ಪ್ರಿಯವಾದುದನ್ನು ಮಾಡಬೇಕು. ಇದನ್ನು ಎರಡನೆಯ ಪಾದವೆಂದು ಹೇಳುತ್ತಾರೆ.

05044010a ಸಮಾ ಗುರೌ ಯಥಾ ವೃತ್ತಿರ್ಗುರುಪತ್ನ್ಯಾಂ ತಥಾ ಭವೇತ್|

05044010c ಯಥೋಕ್ತಕಾರೀ ಪ್ರಿಯಕೃತ್ತೃತೀಯಃ ಪಾದ ಉಚ್ಯತೇ||

ಗುರುವಿನೊಂದಿಗೆ ಯಾವ ರೀತಿಯ ವರ್ತನೆಯಿರುತ್ತದೆಯೋ ಅದಕ್ಕೆ ಸಮನಾದುದು ಗುರುಪತ್ನಿಯಲ್ಲಿಯೂ ಇರಬೇಕು. ಪ್ರಿಯಕೃತ್ಯವನ್ನು ಮಾಡಬೇಕು ಎನ್ನುವುದನ್ನು ಮೂರನೆಯ ಪಾದವೆಂದು ಹೇಳುತ್ತಾರೆ.

05044011a ನಾಚಾರ್ಯಾಯೇಹೋಪಕೃತ್ವಾ ಪ್ರವಾದಂ

        ಪ್ರಾಜ್ಞಾಃ ಕುರ್ವೀತ ನೈತದಹಂ ಕರೋಮಿ|

05044011c ಇತೀವ ಮನ್ಯೇತ ನ ಭಾಷಯೇತ

        ಸ ವೈ ಚತುರ್ಥೋ ಬ್ರಹ್ಮಚರ್ಯಸ್ಯ ಪಾದಃ||

ಆಚಾರ್ಯನಿಗೆ ವರದಿಮಾಡುವಾಗ ಪ್ರಾಜ್ಞನು ನಾನು ಇದನ್ನು ಮಾಡಲಿಲ್ಲ ಎಂದು ಹೇಳಬಾರದು. ಹಾಗೆ ತಿಳಿದುಕೊಂಡರೂ ಹೇಳಬಾರದು. ಇದೇ ಬ್ರಹ್ಮಚರ್ಯದ ನಾಲ್ಕನೆಯ ಪಾದ.

05044012a ಏವಂ ವಸಂತಂ ಯದುಪಪ್ಲವೇದ್ಧನಂ

        ಆಚಾರ್ಯಾಯ ತದನುಪ್ರಯಚ್ಚೇತ್|

05044012c ಸತಾಂ ವೃತ್ತಿಂ ಬಹುಗುಣಾಮೇವಮೇತಿ

        ಗುರೋಃ ಪುತ್ರೇ ಭವತಿ ಚ ವೃತ್ತಿರೇಷಾ||

ಹೀಗೆ ವಾಸಿಸುವಾಗ ಏನನ್ನು ಗಳಿಸುತ್ತಾನೋ ಆ ಧನವನ್ನು ಆಚಾರ್ಯನಿಗೆ ಕೊಡಬೇಕು. ಇದರಿಂದ ಸಂತರ ಸಂಪತ್ತು ಇಮ್ಮಡಿಯಾಗಿ ಬೆಳೆಯುತ್ತದೆ. ಹೀಗೆಯೇ ಗುರುಪುತ್ರನಲ್ಲಿಯೂ ನಡೆದುಕೊಳ್ಳಬೇಕು.

05044013a ಏವಂ ವಸನ್ಸರ್ವತೋ ವರ್ಧತೀಹ

        ಬಹೂನ್ಪುತ್ರಾಽಲ್ಲಭತೇ ಚ ಪ್ರತಿಷ್ಠಾಂ|

05044013c ವರ್ಷಂತಿ ಚಾಸ್ಮೈ ಪ್ರದಿಶೋ ದಿಶಶ್ಚ

        ವಸಂತ್ಯಸ್ಮಿನ್ಬ್ರಹ್ಮಚರ್ಯೇ ಜನಾಶ್ಚ||

ಹೀಗೆ ವಾಸಿಸುವಾಗ ಅವನ ಎಲ್ಲವೂ ವೃದ್ಧಿಯಾಗುತ್ತದೆ: ಬಹಳ ಪುತ್ರರೂ ಪ್ರತಿಷ್ಠೆಯೂ ದೊರೆಯುತ್ತವೆ. ಎಲ್ಲ ದಿಕ್ಕುಗಳಿಂದಲೂ ಮಳೆಯು ಸುರಿಯುತ್ತದೆ. ಬಹಳ ಜನರು ಅವನಲ್ಲಿ ಬ್ರಹ್ಮಚರ್ಯದಲ್ಲಿ ವಾಸಿಸುತ್ತಾರೆ.

05044014a ಏತೇನ ಬ್ರಹ್ಮಚರ್ಯೇಣ ದೇವಾ ದೇವತ್ವಮಾಪ್ನುವನ್|

05044014c ಋಷಯಶ್ಚ ಮಹಾಭಾಗಾ ಬ್ರಹ್ಮಲೋಕಂ ಮನೀಷಿಣಃ||

05044015a ಗಂಧರ್ವಾಣಾಮನೇನೈವ ರೂಪಮಪ್ಸರಸಾಮಭೂತ್|

05044015c ಏತೇನ ಬ್ರಹ್ಮಚರ್ಯೇಣ ಸೂರ್ಯೋ ಅಹ್ನಾಯ ಜಾಯತೇ||

ಈ ರೀತಿಯ ಬ್ರಹ್ಮಚರ್ಯದಿಂದ ದೇವತೆಗಳು ದೇವತ್ವವನ್ನು, ಮಹಾಭಾಗ ಮನೀಷೀ ಋಷಿಗಳು ಬ್ರಹ್ಮಲೋಕವನ್ನು, ಗಂಧರ್ವ-ಅಪ್ಸರೆಯರು ತಮ್ಮ ರೂಪವನ್ನು ಪಡೆದರು. ಇದೇ ಬ್ರಹ್ಮಚರ್ಯದಿಂದ ಸೂರ್ಯನು ದಿನದಲ್ಲಿ ಹುಟ್ಟುತ್ತಾನೆ.

05044016a ಯ ಆಶಯೇತ್ಪಾಟಯೇಚ್ಚಾಪಿ ರಾಜನ್

        ಸರ್ವಂ ಶರೀರಂ ತಪಸಾ ತಪ್ಯಮಾನಃ|

05044016c ಏತೇನಾಸೌ ಬಾಲ್ಯಮತ್ಯೇತಿ ವಿದ್ವಾನ್

        ಮೃತ್ಯುಂ ತಥಾ ರೋಧಯತ್ಯಂತಕಾಲೇ||

ರಾಜನ್! ಯಾರು ತಪಸ್ಸನ್ನು ತಪಿಸಿ ಶರೀರವೆಲ್ಲವನ್ನೂ ಮಲಗಿಸಿ ಹೊಡೆಯುತ್ತಾನೋ ಅವನು ಬಾಲ್ಯವನ್ನು ಮೀರಿ ವಿದ್ವಾಂಸನಾಗುತ್ತಾನೆ ಮತ್ತು ಕೊನೆಯಲ್ಲಿ ಮೃತ್ಯುವನ್ನೂ ಜಯಿಸುತ್ತಾನೆ.

05044017a ಅಂತವಂತಃ ಕ್ಷತ್ರಿಯ ತೇ ಜಯಂತಿ

        ಲೋಕಾಂ ಜನಾಃ ಕರ್ಮಣಾ ನಿರ್ಮಿತೇನ|

05044017c ಬ್ರಹ್ಮೈವ ವಿದ್ವಾಂಸ್ತೇನ ಅಭ್ಯೇತಿ ಸರ್ವಂ

        ನಾನ್ಯಃ ಪಂಥಾ ಅಯನಾಯ ವಿದ್ಯತೇ||

ಕ್ಷತ್ರಿಯ! ಜನರು ಕರ್ಮದಿಂದ ಗೆಲ್ಲುವ ಲೋಕಗಳು ನಿರ್ಮಾಣದಲ್ಲಿ ಕೊನೆಯುಳ್ಳವುಗಳು. ಬ್ರಹ್ಮವನ್ನು ತಿಳಿದುಕೊಳ್ಳುವುದರಿಂದ ವಿದ್ವಾಂಸನು ಬ್ರಹ್ಮವೆಲ್ಲವನ್ನೂ ಪಡೆಯುತ್ತಾನೆ. ಅದಕ್ಕೆ ಬೇರೆ ಯಾವ ಮಾರ್ಗವೂ ತಿಳಿದಿಲ್ಲ.”

05044018 ಧೃತರಾಷ್ಟ್ರ ಉವಾಚ|

05044018a ಆಭಾತಿ ಶುಕ್ಲಮಿವ ಲೋಹಿತಮಿವ

        ಅಥೋ ಕೃಷ್ಣಮಥಾಂಜನಂ ಕಾದ್ರವಂ ವಾ|

05044018c ತದ್ಬ್ರಾಹ್ಮಣಃ ಪಶ್ಯತಿ ಯೋಽತ್ರ ವಿದ್ವಾನ್

        ಕಥಂರೂಪಂ ತದಮೃತಮಕ್ಷರಂ ಪದಂ||

ಧೃತರಾಷ್ಟ್ರನು ಹೇಳಿದನು: “ಈ ವಿದ್ವಾಂಸ ಬ್ರಾಹ್ಮಣನು ಕಾಣುವ ಆ ಅಮೃತ, ಅಕ್ಷರವು ಎಲ್ಲಿರುತ್ತದೆ ಮತ್ತು ಯಾವರೂಪದ್ದು? ಬೆಳ್ಳಗಿರುವುದೋ? ಕೆಂಪಾಗಿರುವುದೋ? ಅಥವಾ ಅಂಜನದಂತೆ ಕಪ್ಪಾಗಿರುವುದೋ? ಅಥವಾ ಬೂದುಬಣ್ಣದ್ದಾಗಿರುವುದೋ?”

05044019 ಸನತ್ಸುಜಾತ ಉವಾಚ|

05044019a ನಾಭಾತಿ ಶುಕ್ಲಮಿವ ಲೋಹಿತಮಿವ

        ಅಥೋ ಕೃಷ್ಣಮಾಯಸಮರ್ಕವರ್ಣಂ|

05044019c ನ ಪೃಥಿವ್ಯಾಂ ತಿಷ್ಠತಿ ನಾಂತರಿಕ್ಷೇ

        ನೈತತ್ಸಮುದ್ರೇ ಸಲಿಲಂ ಬಿಭರ್ತಿ||

ಸನತ್ಸುಜಾತನು ಹೇಳಿದನು: “ಅದು ಬಿಳಿಯಾಗಿಯೂ, ಕೆಂಪಾಗಿಯೂ, ಕಪ್ಪಾಗಿಯೂ, ಬೂದುಬಣ್ಣದ್ದಾಗಿಯೂ, ಸೂರ್ಯನ ಬೆಳಕಿನಂತೆಯೂ ಹೊಳೆಯುವುದಿಲ್ಲ. ಅದು ಭೂಮಿಯ ಮೇಲಿಲ್ಲ, ಅಂತರಿಕ್ಷದಲ್ಲಿಲ್ಲ. ಸಮುದ್ರದ ನೀರೂ ಕೂಡ ಅದನ್ನು ಹೊತ್ತಿರುವುದಿಲ್ಲ.

05044020a ನ ತಾರಕಾಸು ನ ಚ ವಿದ್ಯುದಾಶ್ರಿತಂ

        ನ ಚಾಭ್ರೇಷು ದೃಶ್ಯತೇ ರೂಪಮಸ್ಯ|

05044020c ನ ಚಾಪಿ ವಾಯೌ ನ ಚ ದೇವತಾಸು

        ನ ತಚ್ಚಂದ್ರೇ ದೃಶ್ಯತೇ ನೋತ ಸೂರ್ಯೇ||

ಅದು ನಕ್ಷತ್ರಗಳಲ್ಲಿಲ್ಲ; ವಿದ್ಯುತ್ತಿನಲ್ಲಿರುವುದಿಲ್ಲ, ಮತ್ತು ಅದರ ರೂಪವು ಮೋಡಗಳಲ್ಲಿ ಕಾಣಿಸುವುದಿಲ್ಲ. ಅದು ಗಾಳಿಯಲ್ಲಿಲ್ಲ, ದೇವತೆಗಳಲ್ಲಿಯೂ ಇಲ್ಲ. ಅದು ಸೂರ್ಯನಲ್ಲಿಯೂ, ಚಂದ್ರನಲ್ಲಿಯೂ ಕಾಣಿಸುವುದಿಲ್ಲ.

05044021a ನೈವರ್ಕ್ಷು ತನ್ನ ಯಜುಃಷು ನಾಪ್ಯಥರ್ವಸು

        ನ ಚೈವ ದೃಶ್ಯತ್ಯಮಲೇಷು ಸಾಮಸು|

05044021c ರಥಂತರೇ ಬಾರ್ಹತೇ ಚಾಪಿ ರಾಜನ್

        ಮಹಾವ್ರತೇ ನೈವ ದೃಶ್ಯೇದ್ಧ್ರುವಂ ತತ್||

ರಾಜನ್! ಅದು ಋಕ್ಕಿನಲ್ಲಿ ದೊರೆಯುವುದಿಲ್ಲ, ಯಜುರ್ವೇದದಲ್ಲಿಲ್ಲ, ಅಥರ್ವದಲ್ಲಿಯೂ ಇಲ್ಲ ಮತ್ತು ಅಮಲ ಸಾಮದಲ್ಲಿಯೂ, ರಥಂತರ-ಬಾರ್ಹತಗಳಲ್ಲಿಯೂ ಕಾಣುವುದಿಲ್ಲ. ಮತ್ತು ಮಹಾವ್ರತದಲ್ಲಿಯೂ ಅದು ಕಾಣುವುದಿಲ್ಲವೆನ್ನುವುದು ಸತ್ಯ.

05044022a ಅಪಾರಣೀಯಂ ತಮಸಃ ಪರಸ್ತಾತ್

        ತದಂತಕೋಽಪ್ಯೇತಿ ವಿನಾಶಕಾಲೇ|

05044022c ಅಣೀಯರೂಪಂ ಕ್ಷುರಧಾರಯಾ ತನ್

        ಮಹಚ್ಚ ರೂಪಂ ತ್ವಪಿ ಪರ್ವತೇಭ್ಯಃ||

ಕತ್ತಲೆಗಿಂತಲೂ ಆಚೆ ಅದಕ್ಕೆ ಹೋಗಲಿಕ್ಕಿಲ್ಲ. ವಿನಾಶಕಾಲದಲ್ಲಿ ಅಂತಕನೂ ಅದರಲ್ಲಿ ಸಾಯುತ್ತಾನೆ. ಅದು ಕತ್ತಿಯ ಅಲುಗಿಗಿಂತ ತೀಕ್ಷ್ಣವಾದುದು ಆದರೆ ಪರ್ವತದಂತೆ ಅತಿ ದೊಡ್ಡ ರೂಪವುಳ್ಳದ್ದು.

05044023a ಸಾ ಪ್ರತಿಷ್ಠಾ ತದಮೃತಂ ಲೋಕಾಸ್ತದ್ಬ್ರಹ್ಮ ತದ್ಯಶಃ|

05044023c ಭೂತಾನಿ ಜಜ್ಞೈರೇ ತಸ್ಮಾತ್ಪ್ರಲಯಂ ಯಾಂತಿ ತತ್ರ ಚ||

ಆ ಅಮೃತವಾದುದು ಲೋಕ ಮತ್ತು ಬ್ರಹ್ಮನ ಅಧಾರ. ಅದರಿಂದ ಇರುವವು ಹುಟ್ಟುತ್ತವೆ ಮತ್ತು ಅದರಲ್ಲಿಯೇ ಪ್ರಲಯವಾಗಿ ಹೋಗುತ್ತವೆ.

05044024a ಅನಾಮಯಂ ತನ್ಮಹದುದ್ಯತಂ ಯಶೋ

        ವಾಚೋ ವಿಕಾರಾನ್ಕವಯೋ ವದಂತಿ|

05044024c ತಸ್ಮಿಂ ಜಗತ್ಸರ್ವಮಿದಂ ಪ್ರತಿಷ್ಠಿತಂ

        ಯೇ ತದ್ವಿದುರಮೃತಾಸ್ತೇ ಭವಂತಿ||

ಅನಾಮಯ, ಉಲ್ಭಣಗೊಳ್ಳುವ ಆ ಮಹಾ ಯಶಸ್ಸು ಮಾತಿನ ವಿಕಾರವೆಂದು ಕವಿಗಳು ಹೇಳುತ್ತಾರೆ. ಅದರಿಂದಲೇ ಈ ಜಗತ್ತೆಲ್ಲವೂ ನಿಂತಿದೆ. ಅದನ್ನು ತಿಳಿದುಕೊಂಡವರು ಮೃತ್ಯುವನ್ನು ಜಯಿಸಿದವರಾಗುತ್ತಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ಸನತ್ಸುಜಾತವಾಕ್ಯೇ ಚತುಶ್ಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ಸನತ್ಸುಜಾತವಾಕ್ಯದಲ್ಲಿ ನಲ್ವತ್ನಾಲ್ಕನೆಯ ಅಧ್ಯಾಯವು.

Related image

Comments are closed.