Udyoga Parva: Chapter 41

ಉದ್ಯೋಗ ಪರ್ವ: ಪ್ರಜಾಗರ ಪರ್ವ

೪೧

ಶೂದ್ರನಾದ ತಾನು ಇದಕ್ಕಿಂತಲೂ ಹೆಚ್ಚಿನದನ್ನು ಹೇಳುವುದಿಲ್ಲ ಆದರೆ ಮೃತ್ಯುವಿಲ್ಲವೆಂದು ಹೇಳಿದ ಸನತ್ಸುಜಾತನು ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕು ಚೆಲ್ಲುತ್ತಾನೆ ಎಂದು ವಿದುರನು ಸನತ್ಸುಜಾತನನ್ನು ಸ್ಮರಿಸಿ ಕರೆಯಿಸಿಕೊಳ್ಳುವುದು (೧-೮). ಧೃತರಾಷ್ಟ್ರನ ಮನಸ್ಸಿನಲ್ಲಿರುವ ಸಂಶಯಗಳನ್ನು ಹೋಗಲಾಡಿಸಬೇಕೆಂದು ಸನತ್ಸುಜಾತನಲ್ಲಿ ವಿದುರನು ಪ್ರಾರ್ಥಿಸಿಕೊಂಡಿದುದು (೯-೧೧).

05041001 ಧೃತರಾಷ್ಟ್ರ ಉವಾಚ|

05041001a ಅನುಕ್ತಂ ಯದಿ ತೇ ಕಿಂ ಚಿದ್ವಾಚಾ ವಿದುರ ವಿದ್ಯತೇ|

05041001c ತನ್ಮೇ ಶುಶ್ರೂಷವೇ ಬ್ರೂಹಿ ವಿಚಿತ್ರಾಣಿ ಹಿ ಭಾಷಸೇ||

ಧೃತರಾಷ್ಟ್ರನು ಹೇಳಿದನು: “ವಿದುರ! ಇನ್ನೂ ಏನನ್ನಾದರೂ ಹೇಳುವುದಿದ್ದರೆ ಹೇಳು. ನಾನು ಕೇಳಲು ಸಿದ್ಧನಿದ್ದೇನೆ. ನಿನ್ನ ಮಾತು ಸ್ವಾರಸ್ಯವಾಗಿದೆ.”

05041002 ವಿದುರ ಉವಾಚ|

05041002a ಧೃತರಾಷ್ಟ್ರ ಕುಮಾರೋ ವೈ ಯಃ ಪುರಾಣಃ ಸನಾತನಃ|

05041002c ಸನತ್ಸುಜಾತಃ ಪ್ರೋವಾಚ ಮೃತ್ಯುರ್ನಾಸ್ತೀತಿ ಭಾರತ||

ವಿದುರನು ಹೇಳಿದನು: “ಧೃತರಾಷ್ಟ್ರ! ಭಾರತ! ಪುರಾಣನೂ ಸನಾತನನೂ ಆದ ಕುಮಾರ ಸನತ್ಸುಜಾತನು ಮೃತ್ಯುವಿಲ್ಲವೆಂದು ಹೇಳಿದನು.

05041003a ಸ ತೇ ಗುಹ್ಯಾನ್ಪ್ರಕಾಶಾಂಶ್ಚ ಸರ್ವಾನ್ ಹೃದಯಸಂಶ್ರಯಾನ್|

05041003c ಪ್ರವಕ್ಷ್ಯತಿ ಮಹಾರಾಜ ಸರ್ವಬುದ್ಧಿಮತಾಂ ವರಃ||

ಮಹಾರಾಜ! ಸರ್ವಬುದ್ಧಿಮತರಲ್ಲಿ ಶ್ರೇಷ್ಠನಾದ ಅವನು ನಿನಗೆ ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕನ್ನು ಬೀರಿ ನಿನ್ನ ಹೃದಯದಲ್ಲಿ ನೆಲೆಸುವಂತೆ ಹೇಳುತ್ತಾನೆ.”

05041004 ಧೃತರಾಷ್ಟ್ರ ಉವಾಚ|

05041004a ಕಿಂ ತ್ವಂ ನ ವೇದ ತದ್ಭೂಯೋ ಯನ್ಮೇ ಬ್ರೂಯಾತ್ಸನಾತನಃ|

05041004c ತ್ವಮೇವ ವಿದುರ ಬ್ರೂಹಿ ಪ್ರಜ್ಞಾಶೇಷೋಽಸ್ತಿ ಚೇತ್ತವ||

ಧೃತರಾಷ್ಟ್ರನು ಹೇಳಿದನು: “ಆ ಸನಾತನ ಋಷಿಯು ನನಗೆ ಏನನ್ನು ಹೇಳಲಿದ್ದಾನೆಯೋ ಅದು ನಿನಗೆ ತಿಳಿದಿಲ್ಲವೇ? ವಿದುರ! ಅದನ್ನು ನೀನೇ ಹೇಳು. ಅಷ್ಟಕ್ಕೆ ನಿನ್ನಲ್ಲಿ ಪ್ರಜ್ಞೆಯಿದೆ.”

05041005 ವಿದುರ ಉವಾಚ|

05041005a ಶೂದ್ರಯೋನಾವಹಂ ಜಾತೋ ನಾತೋಽನ್ಯದ್ವಕ್ತುಮುತ್ಸಹೇ|

05041005c ಕುಮಾರಸ್ಯ ತು ಯಾ ಬುದ್ಧಿರ್ವೇದ ತಾಂ ಶಾಶ್ವತೀಮಹಂ||

ವಿದುರನು ಹೇಳಿದನು: “ನಾನು ಶೂದ್ರಯೋನಿಯಲ್ಲಿ ಹುಟ್ಟಿದ್ದುದರಿಂದ ನಾನು ಇಷ್ಟರವರಗೆ ಹೇಳಿದುದಕ್ಕಿಂತ ಹೆಚ್ಚು ಹೇಳುವುದಿಲ್ಲ. ಆ ಕುಮಾರನಲ್ಲಿರುವ ವೇದಗಳ ಕುರಿತಾದ ಜ್ಞಾನವು ಶಾಶ್ವತವೆಂದು ನನಗನ್ನಿಸುತ್ತದೆ.

05041006a ಬ್ರಾಹ್ಮೀಂ ಹಿ ಯೋನಿಮಾಪನ್ನಃ ಸುಗುಹ್ಯಮಪಿ ಯೋ ವದೇತ್|

05041006c ನ ತೇನ ಗರ್ಹ್ಯೋ ದೇವಾನಾಂ ತಸ್ಮಾದೇತದ್ಬ್ರವೀಮಿ ತೇ||

ಬ್ರಾಹ್ಮಣ ಯೋನಿಯಲ್ಲಿ ಜನಿಸಿದ ಅವನು ತುಂಬಾ ಗುಹ್ಯವಾದುದನ್ನೂ ತಿಳಿದಿದ್ದಾನೆ. ದೇವತೆಗಳು ಅವನನ್ನು ನಿಂದಿಸುವುದಿಲ್ಲ. ಆದುದರಿಂದ ಇದನ್ನು ನಿನಗೆ ಹೇಳುತ್ತಿದ್ದೇನೆ.”

05041007 ಧೃತರಾಷ್ಟ್ರ ಉವಾಚ|

05041007a ಬ್ರವೀಹಿ ವಿದುರ ತ್ವಂ ಮೇ ಪುರಾಣಂ ತಂ ಸನಾತನಂ|

05041007c ಕಥಮೇತೇನ ದೇಹೇನ ಸ್ಯಾದಿಹೈವ ಸಮಾಗಮಃ||

ಧೃತರಾಷ್ಟ್ರನು ಹೇಳಿದನು: “ವಿದುರ! ಈ ದೇಹದಲ್ಲಿದ್ದುಕೊಂಡು ನಾನು ಹೇಗೆ ಆ ಪುರಾಣ ಸನಾತನನನ್ನು ಸಂದರ್ಶಿಸಬಲ್ಲೆ ಹೇಳು!””

05041008 ವೈಶಂಪಾಯನ ಉವಾಚ|

05041008a ಚಿಂತಯಾಮಾಸ ವಿದುರಸ್ತಮೃಷಿಂ ಸಂಶಿತವ್ರತಂ|

05041008c ಸ ಚ ತಚ್ಚಿಂತಿತಂ ಜ್ಞಾತ್ವಾ ದರ್ಶಯಾಮಾಸ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಆಗ ವಿದುರನು ಆ ಸಂಶಿತವ್ರತ ಋಷಿಯ ಕುರಿತು ಚಿಂತಿಸಿದನು. ಅವನು ಚಿಂತಿಸುತ್ತಿರುವುದನ್ನು ತಿಳಿದು ಋಷಿಯು ಅಲ್ಲಿ ಕಾಣಿಸಿಕೊಂಡನು.

05041009a ಸ ಚೈನಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ|

05041009c ಸುಖೋಪವಿಷ್ಟಂ ವಿಶ್ರಾಂತಮಥೈನಂ ವಿದುರೋಽಬ್ರವೀತ್||

ಆಗ ಅವನನ್ನು ವಿಧಿವತ್ತಾಗಿ ಬರಮಾಡಿಕೊಂಡು, ಸುಖವಾಗಿ ಕುಳಿತುಕೊಂಡು, ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ವಿದುರನು ಹೇಳಿದನು:

05041010a ಭಗವನ್ಸಂಶಯಃ ಕಶ್ಚಿದ್ಧೃತರಾಷ್ಟ್ರಸ್ಯ ಮಾನಸೇ|

05041010c ಯೋ ನ ಶಕ್ಯೋ ಮಯಾ ವಕ್ತುಂ ತಮಸ್ಮೈ ವಕ್ತುಮರ್ಹಸಿ||

05041010e ಯಂ ಶ್ರುತ್ವಾಯಂ ಮನುಷ್ಯೇಂದ್ರಃ ಸುಖದುಃಖಾತಿಗೋ ಭವೇತ್||

05041011a ಲಾಭಾಲಾಭೌ ಪ್ರಿಯದ್ವೇಷ್ಯೌ ಯಥೈನಂ ನ ಜರಾಂತಕೌ|

05041011c ವಿಷಹೇರನ್ಭಯಾಮರ್ಷೌ ಕ್ಷುತ್ಪಿಪಾಸೇ ಮದೋದ್ಭವೌ|

05041011e ಅರತಿಶ್ಚೈವ ತಂದ್ರೀ ಚ ಕಾಮಕ್ರೋಧೌ ಕ್ಷಯೋದಯೌ||

“ಭಗವನ್! ಧೃತರಾಷ್ಟ್ರನ ಮನಸ್ಸಿನಲ್ಲಿ ಕೆಲವು ಸಂಶಯಗಳಿವೆ. ನನಗೆ ಶಕ್ಯವಾದಷ್ಟನ್ನು ನಾನು ಹೇಳಿದ್ದೇನೆ. ಯಾವುದನ್ನು ಕೇಳಿ ಈ ಮನುಷ್ಯೇಂದ್ರನು ಸುಖ-ದುಃಖಗಳನ್ನೂ, ಲಾಭಾಲಾಭಗಳನ್ನೂ, ಪ್ರೀತಿ-ದ್ವೇಷಗಳನ್ನೂ, ಮುಪ್ಪು-ಮೃತ್ಯುಗಳನ್ನೂ, ಭಯ-ಮಾತ್ಸರ್ಯಗಳನ್ನೂ, ಹಸಿವು-ಬಾಯಾರಿಕೆಗಳನ್ನೂ, ಮದ ಮತ್ತು ವೈಭವ, ಅರತಿ, ಆಲಸ್ಯ, ಕಾಮ-ಕ್ರೋಧ ಮತ್ತು ಕ್ಷಯ-ಉದಯಗಳನ್ನು ದಾಟಬಹುದೋ ಅದನ್ನು ನೀನೂ ಅವನಿಗೆ ಹೇಳಬೇಕು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರಕೃತಸನತ್ಸುಜಾತಪ್ರಾರ್ಥನೇ ಏಕಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರಕೃತಸನತ್ಸುಜಾತಪ್ರಾರ್ಥನದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೮/೧೦೦, ಅಧ್ಯಾಯಗಳು-೭೦೪, ಶ್ಲೋಕಗಳು-೨೩೧೩೮

Related image

Comments are closed.