Udyoga Parva: Chapter 38

ಉದ್ಯೋಗ ಪರ್ವ: ಪ್ರಜಾಗರ ಪರ್ವ

೩೮

ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರೆಸಿದುದು (೧-೪೪).

05038001 ವಿದುರ ಉವಾಚ|

05038001a ಊರ್ಧ್ವಂ ಪ್ರಾಣಾ ಹ್ಯುತ್ಕ್ರಾಮಂತಿ ಯೂನಃ ಸ್ಥವಿರ ಆಯತಿ|

05038001c ಪ್ರತ್ಯುತ್ಥಾನಾಭಿವಾದಾಭ್ಯಾಂ ಪುನಸ್ತಾನ್ಪ್ರತಿಪದ್ಯತೇ||

ವಿದುರನು ಹೇಳಿದನು: “ವೃದ್ಧನು ಬಂದಾಗ ಯುವಕನ ಪ್ರಾಣವು ಮೇಲೇರುತ್ತದೆ. ಆದರೆ ಮೇಲೆದ್ದು ಅವನನ್ನು ನಮಸ್ಕರಿಸುವುದರಿಂದ ಅದನ್ನು ಪುನಃ ಹಿಂದೆ ಪಡೆಯುತ್ತಾನೆ.

05038002a ಪೀಠಂ ದತ್ತ್ವಾ ಸಾಧವೇಽಭ್ಯಾಗತಾಯ

        ಆನೀಯಾಪಃ ಪರಿನಿರ್ಣಿಜ್ಯ ಪಾದೌ|

05038002c ಸುಖಂ ಪೃಷ್ಟ್ವಾ ಪ್ರತಿವೇದ್ಯಾತ್ಮಸಂಸ್ಥಂ

        ತತೋ ದದ್ಯಾದನ್ನಮವೇಕ್ಷ್ಯ ಧೀರಃ||

ಬಂದಿರುವ ಸಾಧುವಿಗೆ ಪೀಠವನ್ನು ನೀಡಿ, ನೀರನ್ನು ತಂದು, ಪಾದಗಳನ್ನು ತೊಳೆದು, ಸುಖವನ್ನು ಕೇಳಿ, ತನ್ನ ಪರಿಸ್ಥಿತಿಯ ಕುರಿತು ಹೇಳಿ, ನಂತರ ಗಮನವಿಟ್ಟು ಊಟವನ್ನು ನೀಡಬೇಕು.

05038003a ಯಸ್ಯೋದಕಂ ಮಧುಪರ್ಕಂ ಚ ಗಾಂ ಚ

        ನಮಂತ್ರವಿತ್ಪ್ರತಿಗೃಹ್ಣಾತಿ ಗೇಹೇ|

05038003c ಲೋಭಾದ್ಭಯಾದರ್ಥಕಾರ್ಪಣ್ಯತೋ ವಾ

        ತಸ್ಯಾನರ್ಥಂ ಜೀವಿತಮಾಹುರಾರ್ಯಾಃ||

ಲೋಭದಿಂದಾಗಲೀ, ಭಯದಿಂದಾಗಲೀ, ಕಾರ್ಪಣ್ಯತೆಯಿಂದಾಗಲೀ ಯಾರ ಮನೆಯಲ್ಲಿ ಮಂತ್ರವತ್ತಾಗಿ ನೀರು, ಮಧುಪರ್ಕ ಮತ್ತು ಗೋವಿನ ಸ್ವೀಕಾರವಾಗುವುದಿಲ್ಲವೋ ಅವನ ಜೀವನವು ಅನರ್ಥವಾದುದು ಎಂದು ಆರ್ಯರು ಹೇಳುತ್ತಾರೆ.

05038004a ಚಿಕಿತ್ಸಕಃ ಶಲ್ಯಕರ್ತಾವಕೀರ್ಣೀ

        ಸ್ತೇನಃ ಕ್ರೂರೋ ಮದ್ಯಪೋ ಭ್ರೂಣಹಾ ಚ|

05038004c ಸೇನಾಜೀವೀ ಶ್ರುತಿವಿಕ್ರಾಯಕಶ್ಚ

        ಭೃಶಂ ಪ್ರಿಯೋಽಪ್ಯತಿಥಿರ್ನೋದಕಾರ್ಹಃ||

ಎಷ್ಟೇ ಪ್ರಿಯರಾಗಿದ್ದರೂ ಈ ಅತಿಥಿಗಳು ಅರ್ಘ್ಯಕ್ಕೆ ಅರ್ಹರಲ್ಲ: ಚಿಕಿತ್ಸಕ, ಬಾಣಗಳನ್ನು ಮಾಡುವವನು, ಅಶ್ಲೀಲ ನಡತೆಯುಳ್ಳವನು, ಕಳ್ಳ, ಕ್ರೂರ, ಕುಡುಕ, ಭ್ರೂಣಹಂತಕ, ಸೈನಿಕ, ಮತ್ತು ವೇದಗಳನ್ನು ಮಾರುವವನು.

05038005a ಅವಿಕ್ರೇಯಂ ಲವಣಂ ಪಕ್ವಮನ್ನಂ

        ದಧಿ ಕ್ಷೀರಂ ಮಧು ತೈಲಂ ಘೃತಂ ಚ|

05038005c ತಿಲಾ ಮಾಂಸಂ ಮೂಲಫಲಾನಿ ಶಾಕಂ

        ರಕ್ತಂ ವಾಸಃ ಸರ್ವಗಂಧಾ ಗುಡಶ್ಚ||

ಇವುಗಳನ್ನು ಮಾರಬಾರದು: ಉಪ್ಪು, ಬೇಯಿಸಿದ ಅನ್ನ, ಮೊಸರು, ಹಾಲು, ಜೇನುತುಪ್ಪ, ಎಣ್ಣೆ, ತುಪ್ಪ, ಎಳ್ಳು, ಮಾಂಸ, ಗೆಡ್ಡೆ-ಹಣ್ಣುಗಳು, ತರಕಾರಿಗಳು, ರಕ್ತ, ಉಡುಪುಗಳು, ಎಲ್ಲ ರೀತಿಯ ಸುಗಂಧಗಳು ಮತ್ತು ಬೆಲ್ಲ.

05038006a ಅರೋಷಣೋ ಯಃ ಸಮಲೋಷ್ಟಕಾಂಚನಃ

        ಪ್ರಹೀಣಶೋಕೋ ಗತಸಂಧಿವಿಗ್ರಹಃ|

05038006c ನಿಂದಾಪ್ರಶಂಸೋಪರತಃ ಪ್ರಿಯಾಪ್ರಿಯೇ

        ಚರನ್ನುದಾಸೀನವದೇಷ ಭಿಕ್ಷುಕಃ||

ಸಿಟ್ಟಿಗೇಳದವನು, ಮಣ್ಣು-ಕಾಂಚನಗಳನ್ನು ಸಮನಾಗಿ ಕಾಣುವವನು, ಶೋಕವನ್ನು ತೊರೆದವನು, ಗೆಳೆತನ-ವೈರ, ನಿಂದೆ-ಪ್ರಶಂಸೆ, ಮತ್ತು ಪ್ರಿಯ-ಅಪ್ರಿಯಗಳನ್ನು ದಾಟಿಹೋದವನು, ಉದಾಸೀನನಾಗಿ ಸಂಚರಿಸುವವನೇ ನಿಜವಾದ ಭಿಕ್ಷುಕ.

05038007a ನೀವಾರಮೂಲೇಂಗುದಶಾಕವೃತ್ತಿಃ

        ಸುಸಮ್ಯತಾತ್ಮಾಗ್ನಿಕಾರ್ಯೇಷ್ವಚೋದ್ಯಃ|

05038007c ವನೇ ವಸನ್ನತಿಥಿಷ್ವಪ್ರಮತ್ತೋ

        ಧುರಂಧರಃ ಪುಣ್ಯಕೃದೇಷ ತಾಪಸಃ||

ಕಾಡು‌ಅಕ್ಕಿ, ಗೆಡ್ಡೆಗಳು, ಬೀಜಗಳು, ಮತ್ತು ತಪ್ಪಲು ಪಲ್ಲೆಗಳನ್ನು ತಿಂದು ಜೀವಿಸುವ, ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ತಾನಾಗಿಯೇ ಅಗ್ನಿಕಾರ್ಯವನ್ನು ಮಾಡುವ, ವನದಲ್ಲಿ ವಾಸಿಸಿಕೊಂಡೂ ಅತಿಥಿಗಳಿಗೆ ನಿರಾಕರಿಸದವನೇ ಧುರಂಧರ ಪುಣ್ಯವಂತ ತಾಪಸಿ.

05038008a ಅಪಕೃತ್ವಾ ಬುದ್ಧಿಮತೋ ದೂರಸ್ಥೋಽಸ್ಮೀತಿ ನಾಶ್ವಸೇತ್|

05038008c ದೀರ್ಘೌ ಬುದ್ಧಿಮತೋ ಬಾಹೂ ಯಾಭ್ಯಾಂ ಹಿಂಸತಿ ಹಿಂಸಿತಃ||

ಬುದ್ಧಿವಂತನಿಗೆ ಕೆಡುಕನ್ನು ಮಾಡಿ ದೂರದಲ್ಲಿದ್ದೇನೆ ಎಂದು ವಿಶ್ವಾಸದಿಂದಿರಬಾರದು. ಏಕೆಂದರೆ, ಬುದ್ಧಿವಂತರ ಕೈ ತುಂಬಾ ಉದ್ದವಾಗಿರುತ್ತದೆ. ಅದರಿಂದ ಅವರು ಹಿಂಸೆಕೊಟ್ಟವರನ್ನು ಹಿಂಸಿಸುತ್ತಾರೆ.

05038009a ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್|

05038009c ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃಂತತಿ||

ವಿಶ್ವಾಸವಿಡಬಾರದವರಲ್ಲಿ ವಿಶ್ವಾಸವಿಡಬಾರದು; ವಿಶ್ವಾಸವನ್ನಿಟ್ಟವರಲ್ಲಿ ಅತಿಯಾದ ವಿಶ್ವಾಸವನ್ನಿಡಬಾರದು. ವಿಶ್ವಾಸದಿಂದ ಭಯವು ಹುಟ್ಟುತ್ತದೆ. ಅದು ಮೂಲವನ್ನೇ ಕಿತ್ತೊಗೆಯುತ್ತದೆ.

05038010a ಅನೀರ್ಷ್ಯುರ್ಗುಪ್ತದಾರಃ ಸ್ಯಾತ್ಸಂವಿಭಾಗೀ ಪ್ರಿಯಂವದಃ|

05038010c ಶ್ಲಕ್ಷ್ಣೋ ಮಧುರವಾಕ್ಸ್ತ್ರೀಣಾಂ ನ ಚಾಸಾಂ ವಶಗೋ ಭವೇತ್||

ಯಾರನ್ನೂ ದ್ವೇಷಿಸಬಾರದು. ಪತ್ನಿಯನ್ನು ಸುರಕ್ಷಿತವಾಗಿಟ್ಟುಕೊಂಡಿರಬೇಕು. ಇದ್ದುದನ್ನು ಹಂಚಿಕೊಳ್ಳಬೇಕು. ಪ್ರಿಯವಾದ ಮಾತುಗಳನ್ನಾಡಬೇಕು. ಸ್ತ್ರೀಯರೊಂದಿಗೆ ಮೃದುವಾಗಿ ಮಧುರವಾಗಿ ಮಾತನ್ನಾಡಬೇಕು. ಆದರೆ ಅವರ ವಶನಾಗಬಾರದು.

05038011a ಪೂಜನೀಯಾ ಮಹಾಭಾಗಾಃ ಪುಣ್ಯಾಶ್ಚ ಗೃಹದೀಪ್ತಯಃ|

05038011c ಸ್ತ್ರಿಯಃ ಶ್ರಿಯೋ ಗೃಹಸ್ಯೋಕ್ತಾಸ್ತಸ್ಮಾದ್ರಕ್ಷ್ಯಾ ವಿಶೇಷತಃ||

ಮನೆಯ ದೀಪ ಬೆಳಗಿಸುವ ಪೂಜನೀಯ, ಮಹಾಭಾಗ, ಪುಣ್ಯ ಸ್ತ್ರೀಯರು ಮನೆಯ ಸಂಪತ್ತು. ಅವರನ್ನು ವಿಶೇಷವಾಗಿ ರಕ್ಷಿಸಬೇಕು.

05038012a ಪಿತುರಂತಃಪುರಂ ದದ್ಯಾನ್ಮಾತುರ್ದದ್ಯಾನ್ಮಹಾನಸಂ|

05038012c ಗೋಷು ಚಾತ್ಮಸಮಂ ದದ್ಯಾತ್ಸ್ವಯಮೇವ ಕೃಷಿಂ ವ್ರಜೇತ್|

05038012e ಭೃತ್ಯೈರ್ವಣಿಜ್ಯಾಚಾರಂ ಚ ಪುತ್ರೈಃ ಸೇವೇತ ಬ್ರಾಹ್ಮಣಾನ್||

ಅಂತಃಪುರವನ್ನು ತಂದೆಗೆ ಒಪ್ಪಿಸಬೇಕು, ಅಡುಗೆ ಮನೆಯನ್ನು ತಾಯಿಗೆ ವಹಿಸಬೇಕು, ಗೋವುಗಳನ್ನು ತನ್ನಂತಿರುವವನಿಗೆ ಒಪ್ಪಿಸಬೇಕು, ಮತ್ತು ಕೃಷಿಯನ್ನು ತಾನೇ ಮಾಡಬೇಕು, ಸೇವಕರ ಮೂಲಕ ವ್ಯಾಪಾರಗಳನ್ನು ಮಾಡಿಸಬೇಕು ಮತ್ತು ಪುತ್ರರ ಮೂಲಕ ಬ್ರಾಹ್ಮಣರ ಸೇವೆಯನ್ನು ಮಾಡಬೇಕು.

05038013a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಂ|

05038013c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ||

ನೀರಿನಿಂದ ಅಗ್ನಿಯು, ಬ್ರಹ್ಮತ್ವದಿಂದ ಕ್ಷತ್ರಿಯತ್ವವು, ಕಲ್ಲಿನಿಂದ ಲೋಹವು ಉತ್ಪತ್ತಿಯಾಗುತ್ತವೆ. ಆದರೆ ಅವೆಲ್ಲವುಗಳ ತೇಜಸ್ಸು ಯಾವುದರಿಂದ ಅವು ಹುಟ್ಟಿದವೋ ಅವುಗಳಲ್ಲಿ ನಾಶವಾಗುತ್ತದೆ.

05038014a ನಿತ್ಯಂ ಸಂತಃ ಕುಲೇ ಜಾತಾಃ ಪಾವಕೋಪಮತೇಜಸಃ|

05038014c ಕ್ಷಮಾವಂತೋ ನಿರಾಕಾರಾಃ ಕಾಷ್ಠೇಽಗ್ನಿರಿವ ಶೇರತೇ||

ಉತ್ತಮ ಕುಲದಲ್ಲಿ ಹುಟ್ಟಿ ನಿತ್ಯವೂ ಸಂತರಾಗಿರುವವರು ಪಾವಕನಂತಿರುವ ತಮ್ಮ ತೇಜಸ್ಸನ್ನು ಕಾಷ್ಠದಲ್ಲಿರುವ ಅಗ್ನಿಯಂತೆ ಕ್ಷಮಾವಂತರಾಗಿ ನಿರಾಕಾರರಾಗಿ ಅಡಗಿಸಿಟ್ಟುಕೊಂಡಿರುತ್ತಾರೆ.

05038015a ಯಸ್ಯ ಮಂತ್ರಂ ನ ಜಾನಂತಿ ಬಾಹ್ಯಾಶ್ಚಾಭ್ಯಂತರಾಶ್ಚ ಯೇ|

05038015c ಸ ರಾಜಾ ಸರ್ವತಶ್ಚಕ್ಷುಶ್ಚಿರಮೈಶ್ವರ್ಯಮಶ್ನುತೇ||

ಯಾರ ಉಪಾಯಗಳನ್ನು ಹೊರಗಿನವರೂ ಒಳಗಿನವರೂ ಯಾರೂ ತಿಳಿದಿಲ್ಲವೋ ಅಂಥಹ ರಾಜನು ಎಲ್ಲಕಡೆ ಕಣ್ಣಿಟ್ಟುಕೊಂಡು ಐಶ್ವರ್ಯವನ್ನು ಕಳೆದುಕೊಳ್ಳುವುದಿಲ್ಲ.

05038016a ಕರಿಷ್ಯನ್ನ ಪ್ರಭಾಷೇತ ಕೃತಾನ್ಯೇವ ಚ ದರ್ಶಯೇತ್|

05038016c ಧರ್ಮಕಾಮಾರ್ಥಕಾರ್ಯಾಣಿ ತಥಾ ಮಂತ್ರೋ ನ ಭಿದ್ಯತೇ||

ಏನು ಮಾಡುವವನಿದ್ದೇನೆಂದು ಹೇಳುವುದಿಲ್ಲ, ಮಾಡಿದ ನಂತರ ಆ ಧರ್ಮಕರ್ಮಾರ್ಥ ಕಾರ್ಯಗಳನ್ನು ತೋರಿಸುತ್ತಾನೆ. ಆಗ ಅವನ ಉಪಾಯವನ್ನು ಭೇದಿಸುವುದಿಲ್ಲ.

05038017a ಗಿರಿಪೃಷ್ಠಮುಪಾರುಹ್ಯ ಪ್ರಾಸಾದಂ ವಾ ರಹೋಗತಃ|

05038017c ಅರಣ್ಯೇ ನಿಃಶಲಾಕೇ ವಾ ತತ್ರ ಮಂತ್ರೋ ವಿಧೀಯತೇ||

ಗಿರಿಶಿಖರವನ್ನು ಏರಿ ಅಥವಾ ಮನೆಯ ಪ್ರಾಸಾದದ ಮೇಲಿರುವಾಗ ಅಥವಾ ಅರಣ್ಯದಲ್ಲಿ ಏಕಾಂತದಲ್ಲಿರುವಾಗ ಉಪಾಯವನ್ನು ಮಾಡಬೇಕು.

05038018a ನಾಸುಹೃತ್ಪರಮಂ ಮಂತ್ರಂ ಭಾರತಾರ್ಹತಿ ವೇದಿತುಂ|

05038018c ಅಪಂಡಿತೋ ವಾಪಿ ಸುಹೃತ್ಪಂಡಿತೋ ವಾಪ್ಯನಾತ್ಮವಾನ್|

05038018e ಅಮಾತ್ಯೇ ಹ್ಯರ್ಥಲಿಪ್ಸಾ ಚ ಮಂತ್ರರಕ್ಷಣಮೇವ ಚ||

ಭಾರತ! ಸ್ನೇಹಿತನಾಗಿರದವನು ಅಥವಾ ಸ್ನೇಹಿತನಾಗಿದ್ದರೂ ಅಪಂಡಿತನಾಗಿರುವವನು ಅಥವಾ ಪಂಡಿತನಾಗಿದ್ದರೂ ಆತ್ಮವಂತನಲ್ಲದವನು ಅಂತಿಮ ಉಪಾಯವನ್ನು ತಿಳಿದಿರಬಾರದು. ಏಕೆಂದರೆ ಉಪಾಯವನ್ನು ರಕ್ಷಿಸಿ ಅದು ಉತ್ತಮ ಫಲಿತಾಂಶವನ್ನು ನೀಡುವಂತೆ ಮಾಡುವ ಜವಾಬ್ಧಾರಿಯು ಮಂತ್ರಿಯದಾಗಿರುತ್ತದೆ.

05038019a ಕೃತಾನಿ ಸರ್ವಕಾರ್ಯಾಣಿ ಯಸ್ಯ ವಾ ಪಾರ್ಷದಾ ವಿದುಃ|

05038019c ಗೂಢಮಂತ್ರಸ್ಯ ನೃಪತೇಸ್ತಸ್ಯ ಸಿದ್ಧಿರಸಂಶಯಂ||

ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದ ನಂತರವೇ ಇತರರು ತಿಳಿದ, ಅಲ್ಲಿಯವರೆಗೆ ಗೂಢವಾಗಿರಿಸಿದ್ದ ನೃಪತಿಯ ಉಪಾಯಗಳು ಸಿದ್ಧಿಯಾಗುವುದರಲ್ಲಿ ಸಂಶಯವಿಲ್ಲ.

05038020a ಅಪ್ರಶಸ್ತಾನಿ ಕರ್ಮಾಣಿ ಯೋ ಮೋಹಾದನುತಿಷ್ಠತಿ|

05038020c ಸ ತೇಷಾಂ ವಿಪರಿಭ್ರಂಶೇ ಭ್ರಶ್ಯತೇ ಜೀವಿತಾದಪಿ||

ಮೋಹದಿಂದ ಅಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಅದು ಮಧ್ಯದಲ್ಲಿ ನಿಂತುಹೋಗುವುದಲ್ಲದೇ ಹಾಗೆ ಮಾಡಿದವನ ಜೀವನವನ್ನೂ ನಾಶಗೊಳಿಸುತ್ತದೆ.

05038021a ಕರ್ಮಣಾಂ ತು ಪ್ರಶಸ್ತಾನಾಮನುಷ್ಠಾನಂ ಸುಖಾವಹಂ|

05038021c ತೇಷಾಮೇವಾನನುಷ್ಠಾನಂ ಪಶ್ಚಾತ್ತಾಪಕರಂ ಮಹತ್||

ಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಸುಖವನ್ನು ತರುತ್ತದೆ. ಅವುಗಳನ್ನು ಕಾರ್ಯಗತಗೊಳಿಸದಿದ್ದರೆ ಮಹತ್ತರ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ.

05038022a ಸ್ಥಾನವೃದ್ಧಿಕ್ಷಯಜ್ಞಾಸ್ಯ ಷಾಡ್ಗುಣ್ಯವಿದಿತಾತ್ಮನಃ|

05038022c ಅನವಜ್ಞಾತಶೀಲಸ್ಯ ಸ್ವಾಧೀನಾ ಪೃಥಿವೀ ನೃಪ||

ನೃಪ! ಯಾರು ಸ್ಥಾನ, ವೃದ್ಧಿ, ಕ್ಷಯಗಳ ಜ್ಞಾನಿಯೋ, ಆರುಗುಣಗಳನ್ನು ತಿಳಿದುಕೊಂಡಿದ್ದಾನೋ, ಕೀಳೆಂದು ಪರಿಗಣಿಸಲ್ಪಟ್ಟ ನಡತೆಯುಳ್ಳವನಲ್ಲವೋ ಅವನಿಗೆ ಪೃಥ್ವಿಯು ಸ್ವಾಧೀನವಾಗಿರುತ್ತದೆ.

05038023a ಅಮೋಘಕ್ರೋಧಹರ್ಷಸ್ಯ ಸ್ವಯಂ ಕೃತ್ಯಾನ್ವವೇಕ್ಷಿಣಃ|

05038023c ಆತ್ಮಪ್ರತ್ಯಯಕೋಶಸ್ಯ ವಸುಧೇಯಂ ವಸುಂಧರಾ||

ಯಾವ ರಾಜ್ಯದ ರಾಜನು ಅವನ ಕ್ರೋಧ-ಹರ್ಷಗಳು ಫಲವನ್ನು ನೀಡುವಂತೆ ಮಾಡುತ್ತಾನೋ, ತಾನೇ ತನ್ನ ಕೆಲಸಗಳನ್ನು ಮಾಡುತ್ತಾನೋ, ಮತ್ತು ತಾನೇ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರುತ್ತಾನೋ ಅದು ಕೋಶವನ್ನು ಉಳಿಸಿಕೊಳ್ಳುತ್ತದೆ.

05038024a ನಾಮಮಾತ್ರೇಣ ತುಷ್ಯೇತ ಚತ್ರೇಣ ಚ ಮಹೀಪತಿಃ|

05038024c ಭೃತ್ಯೇಭ್ಯೋ ವಿಸೃಜೇದರ್ಥಾನ್ನೈಕಃ ಸರ್ವಹರೋ ಭವೇತ್||

ಮಹೀಪತಿಯು ತನ್ನ ಹೆಸರು-ಗೌರವಗಳಿಂದ ಸಂತುಷ್ಟನಾಗಿರಬೇಕು. ಸಂಪತ್ತನ್ನು ತನ್ನ ಅವಲಂಬಿತರೊಂದಿಗೆ ಹಂಚಿಕೊಳ್ಳಬೇಕು. ಎಲ್ಲವನ್ನೂ ತಾನೊಬ್ಬನೇ ಇಟ್ಟುಕೊಳ್ಳಬಾರದು.

05038025a ಬ್ರಾಹ್ಮಣೋ ಬ್ರಾಹ್ಮಣಂ ವೇದ ಭರ್ತಾ ವೇದ ಸ್ತ್ರಿಯಂ ತಥಾ|

05038025c ಅಮಾತ್ಯಂ ನೃಪತಿರ್ವೇದ ರಾಜಾ ರಾಜಾನಮೇವ ಚ||

ಬ್ರಾಹ್ಮನು ಬ್ರಾಹ್ಮಣನನ್ನು ತಿಳಿದಿರುತ್ತಾನೆ. ಹಾಗೆಯೇ ಗಂಡನು ಹೆಂಡತಿಯನ್ನು ತಿಳಿದಿರುತ್ತಾನೆ. ಅಮಾತ್ಯನು ನೃಪತಿಯನ್ನು ತಿಳಿದಿರುತ್ತಾನೆ ಮತ್ತು ರಾಜನೇ ರಾಜನನ್ನು ತಿಳಿದಿರುತ್ತಾನೆ.

05038026a ನ ಶತ್ರುರಂಕಮಾಪನ್ನೋ ಮೋಕ್ತವ್ಯೋ ವಧ್ಯತಾಂ ಗತಃ|

05038026c ಅಹತಾದ್ಧಿ ಭಯಂ ತಸ್ಮಾಜ್ಜಾಯತೇ ನಚಿರಾದಿವ||

ವಧೆಗೆ ಅರ್ಹನಾಗಿರುವ ಶತ್ರುವನ್ನು ತನ್ನ ಪಕ್ಷಕ್ಕೆ ಬಂದಿದ್ದಾನೆಂದು ಬಿಡುಗಡೆಮಾಡಬಾರದು. ಅವನು ಸ್ವಲ್ಪವೇ ಸಮಯದಲ್ಲಿ ಭಯಕ್ಕೆ ಕಾರಣನಾಗಬಹುದು.

05038027a ದೈವತೇಷು ಚ ಯತ್ನೇನ ರಾಜಸು ಬ್ರಾಹ್ಮಣೇಷು ಚ|

05038027c ನಿಯಂತವ್ಯಃ ಸದಾ ಕ್ರೋಧೋ ವೃದ್ಧಬಾಲಾತುರೇಷು ಚ||

ಯಾವಾಗಲೂ ದೇವರಮೇಲಿನ, ರಾಜನ ಮೇಲಿನ, ಬ್ರಾಹ್ಮಣರ ಮೇಲಿನ, ವೃದ್ಧರು ಮತ್ತು ಬಾಲಕರ ಮೇಲಿನ ಕೋಪವನ್ನು ನಿಯಂತ್ರಿಸಬೇಕು.

05038028a ನಿರರ್ಥಂ ಕಲಹಂ ಪ್ರಾಜ್ಞೋ ವರ್ಜಯೇನ್ಮೂಢಸೇವಿತಂ|

05038028c ಕೀರ್ತಿಂ ಚ ಲಭತೇ ಲೋಕೇ ನ ಚಾನರ್ಥೇನ ಯುಜ್ಯತೇ||

ಪ್ರಾಜ್ಞನು ಮೂಢರು ನಡೆಸುವ ಅರ್ಥವಿಲ್ಲದ ವಿವಾದಗಳನ್ನು ವರ್ಜಿಸಬೇಕು. ಇದರಿಂದ ಲೋಕದಲ್ಲಿ ಅವನಿಗೆ ಕೀರ್ತಿಯು ದೊರೆಯುತ್ತದೆ ಮತ್ತು ಯಾವುದೇ ಅನರ್ಥವು ಬಂದೊದಗುವುದಿಲ್ಲ.

05038029a ಪ್ರಸಾದೋ ನಿಷ್ಫಲೋ ಯಸ್ಯ ಕ್ರೋಧಶ್ಚಾಪಿ ನಿರರ್ಥಕಃ|

05038029c ನ ತಂ ಭರ್ತಾರಮಿಚ್ಚಂತಿ ಷಂಢಂ ಪತಿಮಿವ ಸ್ತ್ರಿಯಃ||

ಷಂಡನನ್ನು ಪತಿಯನ್ನಾಗಿ ಸ್ತ್ರೀಯರು ಹೇಗೆ ಬಯಸುವುದಿಲ್ಲವೋ ಹಾಗೆ ಯಾರ ಕರುಣೆಯು ನಿಷ್ಫಲವಾಗಿದೆಯೋ ಮತ್ತು ಕ್ರೋಧವು ನಿರರ್ಥಕವಾಗಿದೆಯೋ ಅಂಥವರನ್ನು ಒಡೆಯನನ್ನಾಗಿ ಇಚ್ಛಿಸುವುದಿಲ್ಲ.

05038030a ನ ಬುದ್ಧಿರ್ಧನಲಾಭಾಯ ನ ಜಾಡ್ಯಮಸಮೃದ್ಧಯೇ|

05038030c ಲೋಕಪರ್ಯಾಯವೃತ್ತಾಂತಂ ಪ್ರಾಜ್ಞೋ ಜಾನಾತಿ ನೇತರಃ||

ಬುದ್ಧಿಯು ಯಾವಾಗಲೂ ಧನಲಾಭವನ್ನು ನೀಡುವುದಿಲ್ಲ. ಜಾಡ್ಯತನವು ಯಾವಾಗಲೂ ಅಸಮೃದ್ಧಿಯನ್ನುಂಟುಮಾಡುವುದಿಲ್ಲ. ಲೋಕದಲ್ಲಿ ನಡೆಯುವ ಏರು ಇಳಿತಗಳನ್ನು ಪಾಜ್ಞರು ತಿಳಿದಿರುತ್ತಾರೆ. ಇತರರಿಗೆ ಇದು ತಿಳಿದಿರುವುದಿಲ್ಲ.

05038031a ವಿದ್ಯಾಶೀಲವಯೋವೃದ್ಧಾನ್ಬುದ್ಧಿವೃದ್ಧಾಂಶ್ಚ ಭಾರತ|

05038031c ಧನಾಭಿಜನವೃದ್ಧಾಂಶ್ಚ ನಿತ್ಯಂ ಮೂಢೋಽವಮನ್ಯತೇ||

ಭಾರತ! ಮೂಢರು ವಿದ್ಯಾಶೀಲರನ್ನು, ವಯೋವೃದ್ಧರನ್ನು, ಬುದ್ಧಿವೃದ್ಧರನ್ನು, ಧನ ಮತ್ತು ಅಭಿಜನ ವೃದ್ಧರನ್ನು ನಿತ್ಯವೂ ಅವಮಾನಿಸುತ್ತಾರೆ.

05038032a ಅನಾರ್ಯವೃತ್ತಮಪ್ರಾಜ್ಞಾಮಸೂಯಕಮಧಾರ್ಮಿಕಂ|

05038032c ಅನರ್ಥಾಃ ಕ್ಷಿಪ್ರಮಾಯಾಂತಿ ವಾಗ್ದುಷ್ಟಂ ಕ್ರೋಧನಂ ತಥಾ||

ಅನಾರ್ಯನಂತೆ ನಡೆದುಕೊಳ್ಳುವ, ಪ್ರಜ್ಞೆಯಿಲ್ಲದಿರುವ, ಅಸೂಯೆಗೊಳ್ಳುವ, ಅಧಾರ್ಮಿಕ, ದುಷ್ಟಮಾತುಗಳನ್ನಾಡುವ, ಕೋಪಿಷ್ಟನಾದವನಿಗೆ ಅನರ್ಥಗಳು ಬೇಗ ಬೇಗನೇ ಬರುತ್ತಿರುತ್ತವೆ.

05038033a ಅವಿಸಂವಾದನಂ ದಾನಂ ಸಮಯಸ್ಯಾವ್ಯತಿಕ್ರಮಃ|

05038033c ಆವರ್ತಯಂತಿ ಭೂತಾನಿ ಸಮ್ಯಕ್ಪ್ರಣಿಹಿತಾ ಚ ವಾಕ್|

ಪ್ರಾಮಾಣಿಕತೆ, ದಾನ, ಒಪ್ಪಂದವನ್ನು ಅತಿಕ್ರಮಿಸದೇ ಇರುವುದು, ಮತ್ತು ಸರಿಯಾಗಿ ಮಾತನಾಡುವುದು ಇವು ಇತರರನ್ನು ಹತ್ತಿರ ಆಕರ್ಶಿಸುತ್ತವೆ.

05038034a ಅವಿಸಂವಾದಕೋ ದಕ್ಷಃ ಕೃತಜ್ಞೋ ಮತಿಮಾನೃಜುಃ|

05038034c ಅಪಿ ಸಂಕ್ಷೀಣಕೋಶೋಽಪಿ ಲಭತೇ ಪರಿವಾರಣಂ||

ಪ್ರಾಮಾಣಿಕ, ದಕ್ಷ, ಕೃತಜ್ಞ, ಬುದ್ಧಿವಂತ, ಸತ್ಯಶೀಲನು, ಕಡಿಮೆ ಧನವನ್ನು ಹೊಂದಿದ್ದರೂ ಅನುಯಾಯಿಗಳನ್ನು ಪಡೆಯುತ್ತಾನೆ.

05038035a ಧೃತಿಃ ಶಮೋ ದಮಃ ಶೌಚಂ ಕಾರುಣ್ಯಂ ವಾಗನಿಷ್ಠುರಾ|

05038035c ಮಿತ್ರಾಣಾಂ ಚಾನಭಿದ್ರೋಹಃ ಸಪ್ತೈತಾಃ ಸಮಿಧಃ ಶ್ರಿಯಃ||

ಧೃತಿ, ಶಾಂತಿ, ಆತ್ಮನಿಯಂತ್ರಣ, ಶುಚಿತ್ವ, ಕರುಣೆ, ನಿಷ್ಠೂರವಾಗಿ ಮಾತನಾಡದಿರುವುದು, ಮಿತ್ರರಿಗೆ ದ್ರೋಹಮಾಡದೇ ಇರುವುದು - ಈ ಏಳು ಸಂಪತ್ತಿಗೆ ಸಮಿಧಗಳಿದ್ದಂತೆ.

05038036a ಅಸಂವಿಭಾಗೀ ದುಷ್ಟಾತ್ಮಾ ಕೃತಘ್ನೋ ನಿರಪತ್ರಪಃ|

05038036c ತಾದೃಂ ನರಾಧಮೋ ಲೋಕೇ ವರ್ಜನೀಯೋ ನರಾಧಿಪ||

ನರಾಧಿಪ! ಹಂಚಿಕೊಳ್ಳದೇ ಇರುವ, ದುಷ್ಟಾತ್ಮ, ಕೃತಘ್ನ, ನಾಚಿಕೆಯಿಲ್ಲದಿರುವ ನರಾಧಮನು ಲೋಕದಲ್ಲಿ ವರ್ಜನೀಯ.

05038037a ನ ಸ ರಾತ್ರೌ ಸುಖಂ ಶೇತೇ ಸಸರ್ಪ ಇವ ವೇಶ್ಮನಿ|

05038037c ಯಃ ಕೋಪಯತಿ ನಿರ್ದೋಷಂ ಸದೋಷೋಽಭ್ಯಂತರಂ ಜನಂ||

ತನ್ನದೇ ದೋಷವಾಗಿದ್ದರೂ, ಮನೆಯೊಳಗಿರುವ ನಿರ್ದೋಷೀ ಜನರ ಮೇಲೆ ಕೋಪಗೊಳ್ಳುವವನು ಬಿಲದಲ್ಲಿರುವ ಹಾವಿನಂತೆ ರಾತ್ರಿಯಲ್ಲಿ ಸುಖವಾಗಿ ಮಲಗುವುದಿಲ್ಲ.

05038038a ಯೇಷು ದುಷ್ಟೇಷು ದೋಷಃ ಸ್ಯಾದ್ಯೋಗಕ್ಷೇಮಸ್ಯ ಭಾರತ|

05038038c ಸದಾ ಪ್ರಸಾದನಂ ತೇಷಾಂ ದೇವತಾನಾಮಿವಾಚರೇತ್||

ಭಾರತ! ಯೋಗಕ್ಷೇಮಕ್ಕೆ ಬಾಧೆತರುವ ದುಷ್ಟರನ್ನು ದೇವತೆಗಳಂತೆ ಸದಾ ಮೆಚ್ಚಿಸುತ್ತಿರಬೇಕು.

05038039a ಯೇಽರ್ಥಾಃ ಸ್ತ್ರೀಷು ಸಮಾಸಕ್ತಾಃ ಪ್ರಥಮೋತ್ಪತಿತೇಷು ಚ|

05038039c ಯೇ ಚಾನಾರ್ಯಸಮಾಸಕ್ತಾಃ ಸರ್ವೇ ತೇ ಸಂಶಯಂ ಗತಾಃ||

ಸ್ತ್ರೀಯರಲ್ಲಿ ಸಮಾಸಕ್ತರಾದವರಲ್ಲಿ, ಮೊದಲಿನಿಂದಲೂ ಪತಿತರಾದವರಲ್ಲಿ, ಅನಾರ್ಯರಲ್ಲಿ ಸಮಾಸಕ್ತರಾದವರಲ್ಲಿ ಇರುವ ಧನವೆಲ್ಲವೂ ಸಂಶಯವಾಗಿ ಹೋಗುತ್ತವೆ.

05038040a ಯತ್ರ ಸ್ತ್ರೀ ಯತ್ರ ಕಿತವೋ ಯತ್ರ ಬಾಲೋಽನುಶಾಸ್ತಿ ಚ|

05038040c ಮಜ್ಜಂತಿ ತೇಽವಶಾ ದೇಶಾ ನದ್ಯಾಮಶ್ಮಪ್ಲವಾ ಇವ||

ಸ್ತ್ರೀ, ಮಗು ಅಥವಾ ಜೂಜುಗಾರನು ಆಳುತ್ತಿರುವ ದೇಶವು ಕಲ್ಲನ್ನು ಕಟ್ಟಿ ನದಿಯಲ್ಲಿ ಬಿಟ್ಟ ತೆಪ್ಪದಂತೆ ಮುಳುಗಿಹೋಗುತ್ತದೆ.

05038041a ಪ್ರಯೋಜನೇಷು ಯೇ ಸಕ್ತಾ ನ ವಿಶೇಷೇಷು ಭಾರತ|

05038041c ತಾನಹಂ ಪಂಡಿತಾನ್ಮನ್ಯೇ ವಿಶೇಷಾ ಹಿ ಪ್ರಸಂಗೇನಃ|

ಭಾರತ! ವಿಶೇಷವಾದವುಗಳಲ್ಲದೇ ಪ್ರಯೋಜನಗಳಲ್ಲಿ ಆಸಕ್ತಿಯಿರುವವರನ್ನು ನಾನು ಪಂಡಿತರೆಂದು ತಿಳಿಯುತ್ತೇನೆ. ಏಕೆಂದರೆ ವಿಶೇಷಗಳು ಪ್ರಾಸಂಗಿಕ.

05038042a ಯಂ ಪ್ರಶಂಸಂತಿ ಕಿತವಾ ಯಂ ಪ್ರಶಂಸಂತಿ ಚಾರಣಾಃ|

05038042c ಯಂ ಪ್ರಶಂಸಂತಿ ಬಂಧಕ್ಯೋ ನ ಸ ಜೀವತಿ ಮಾನವಃ||

ಯಾರನ್ನು ಜೂಜುಗಾರರು ಪ್ರಶಂಸಿಸುತ್ತಾರೋ, ಯಾರನ್ನು ಚಾರಣರು ಪ್ರಶಂಸಿಸುತ್ತಾರೋ, ಯಾರನ್ನು ವೈಶ್ಯೆಯರು ಪ್ರಶಂಸಿಸುತ್ತಾರೋ ಅಂಥಹ ಮಾನವರು ಜೀವಿಸುವುದಿಲ್ಲ.

05038043a ಹಿತ್ವಾ ತಾನ್ಪರಮೇಷ್ವಾಸಾನ್ಪಾಂಡವಾನಮಿತೌಜಸಃ|

05038043c ಆಹಿತಂ ಭಾರತೈಶ್ವರ್ಯಂ ತ್ವಯಾ ದುರ್ಯೋಧನೇ ಮಹತ್||

ಆ ಪರಮೇಷ್ವಾಸ, ಅಮಿತೌಜಸ ಪಾಂಡವರನ್ನು ತೊರೆದು ಭಾರತರ ಐಶ್ವರ್ಯವನ್ನು ದುರ್ಯೋಧನನಿಗಿತ್ತು ನೀನು ಮಹಾ ಅಹಿತವನ್ನು ಮಾಡುತ್ತಿದ್ದೀಯೆ.

05038044a ತಂ ದ್ರಕ್ಷ್ಯಸಿ ಪರಿಭ್ರಷ್ಟಂ ತಸ್ಮಾತ್ತ್ವಂ ನಚಿರಾದಿವ|

05038044c ಐಶ್ವರ್ಯಮದಸಮ್ಮೂಢಂ ಬಲಿಂ ಲೋಕತ್ರಯಾದಿವ||

ಐಶ್ವರ್ಯಮದಸಮ್ಮೂಢ ಬಲಿಯು ಮೂರೂಲೋಕಗಳಿಂದ ಪರಿಭ್ರಷ್ಟನಾದಂತೆ ಇವನೂ ಕೂಡ ಬೇಗನೇ ಪರಿಭ್ರಷ್ಟನಾಗುವುದನ್ನು ನೀನು ನೋಡುತ್ತೀಯೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಅಷ್ಟ್ರತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೆಂಟನೆಯ ಅಧ್ಯಾಯವು.

Related image

Comments are closed.