ಉದ್ಯೋಗ ಪರ್ವ: ಪ್ರಜಾಗರ ಪರ್ವ
Contents
Toggle೩೪
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರಿಸಿದುದು (೧-೮೩).
05034001 ಧೃತರಾಷ್ಟ್ರ ಉವಾಚ|
05034001a ಜಾಗ್ರತೋ ದಹ್ಯಮಾನಸ್ಯ ಯತ್ಕಾರ್ಯಮನುಪಶ್ಯಸಿ|
05034001c ತದ್ಬ್ರೂಹಿ ತ್ವಂ ಹಿ ನಸ್ತಾತ ಧರ್ಮಾರ್ಥಕುಶಲಃ ಶುಚಿಃ||
ಧೃತರಾಷ್ಟ್ರನು ಹೇಳಿದನು: “ನಿದ್ದೆ ಬಾರದಿರುವನು ಮತ್ತು ಬೇಗೆಯುಳ್ಳವನು ಏನು ಮಾಡಬೇಕು? ಅದನ್ನು ಹೇಳು! ಅಯ್ಯಾ! ನೀನೇ ಧರ್ಮಾರ್ಥಕುಶಲನೂ ಶುಚಿಯೂ ಅಲ್ಲವೇ?
05034002a ತ್ವಂ ಮಾಂ ಯಥಾವದ್ವಿದುರ ಪ್ರಶಾದಿ
ಪ್ರಜ್ಞಾಪೂರ್ವಂ ಸರ್ವಮಜಾತಶತ್ರೋಃ|
05034002c ಯನ್ಮನ್ಯಸೇ ಪಥ್ಯಮದೀನಸತ್ತ್ವ
ಶ್ರೇಯಸ್ಕರಂ ಬ್ರೂಹಿ ತದ್ವೈ ಕುರೂಣಾಂ||
ವಿದುರ! ಅದೀನಸತ್ವ! ಆಜಾತಶತ್ರುವಿಗೆ ಎಲ್ಲರಿಗೂ ಸರಿಯಾಗಿರುವುದು ಏನು ಮತ್ತು ಕುರುಗಳಿಗೆ ಶ್ರೇಯಸ್ಕರವಾದುದು ಏನು ಎಂದು ನಿನಗನ್ನಿಸುತ್ತದೆಯೋ ಅದನ್ನು ಯಥಾವತ್ತಾಗಿ ಹೇಳು.
05034003a ಪಾಪಾಶಂಕೀ ಪಾಪಮೇವಾನುಪಶ್ಯನ್
ಪೃಚ್ಚಾಮಿ ತ್ವಾಂ ವ್ಯಾಕುಲೇನಾತ್ಮನಾಹಂ|
05034003c ಕವೇ ತನ್ಮೇ ಬ್ರೂಹಿ ಸರ್ವಂ ಯಥಾವನ್
ಮನೀಷಿತಂ ಸರ್ವಮಜಾತಶತ್ರೋಃ||
ಮುಂದೆ ಕೆಡುಕಾಗಬಹುದೆಂದು ಶಂಕಿಸಿ ನಾನು ಹಿಂದೆ ಮಾಡಿದ ಪಾಪಗಳನ್ನೇ ಕಾಣುತ್ತಿದ್ದೇನೆ. ಕವೇ! ವ್ಯಾಕುಲಾತ್ಮನಾಗಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಅಜಾತಶತ್ರುವಿನ ಯೋಚನೆಯಲ್ಲಿರಬಹುದಾದುದೆಲ್ಲವನ್ನೂ ನನಗೆ ಯಥಾವತ್ತಾಗಿ ಹೇಳು.”
05034004 ವಿದುರ ಉವಾಚ|
05034004a ಶುಭಂ ವಾ ಯದಿ ವಾ ಪಾಪಂ ದ್ವೇಷ್ಯಂ ವಾ ಯದಿ ವಾ ಪ್ರಿಯಂ|
05034004c ಅಪೃಷ್ಟಸ್ತಸ್ಯ ತದ್ಬ್ರೂಯಾದ್ಯಸ್ಯ ನೇಚ್ಚೇತ್ಪರಾಭವಂ||
ವಿದುರನು ಹೇಳಿದನು: “ಯಾರ ಸೋಲನ್ನು ಬಯಸುವುದಿಲ್ಲವೋ ಅವನಿಗೆ, ಕೇಳದೇ ಇದ್ದರೂ, ಅದು ಅವನಿಗೆ ಶುಭವೆಂದೆನಿಸಲಿ ಅಥವಾ ಪಾಪವೆಂದೆನಿಸಲಿ, ದ್ವೇಷ ಅಥವಾ ಪ್ರಿಯವಾದುದೆಂದೆನಿಸಲಿ, ಸತ್ಯವನ್ನೇ ನುಡಿಯಬೇಕು.
05034005a ತಸ್ಮಾದ್ವಕ್ಷ್ಯಾಮಿ ತೇ ರಾಜನ್ಭವಮಿಚ್ಚನ್ಕುರೂನ್ಪ್ರತಿ|
05034005c ವಚಃ ಶ್ರೇಯಸ್ಕರಂ ಧರ್ಮ್ಯಂ ಬ್ರುವತಸ್ತನ್ನಿಬೋಧ ಮೇ||
ರಾಜನ್! ಆದುದರಿಂದ ಕುರುಗಳಿಗೆ ಒಳ್ಳೆಯದನ್ನೇ ಬಯಸಿ ನಿನಗೆ ಶ್ರೇಯಸ್ಕರವಾದ, ಧರ್ಮಯುಕ್ತ ಮಾತುಗಳನ್ನು ಹೇಳುತ್ತಿದ್ದೇನೆ. ಅರ್ಥಮಾಡಿಕೋ!
05034006a ಮಿಥ್ಯೋಪೇತಾನಿ ಕರ್ಮಾಣಿ ಸಿಧ್ಯೇಯುರ್ಯಾನಿ ಭಾರತ|
05034006c ಅನುಪಾಯಪ್ರಯುಕ್ತಾನಿ ಮಾ ಸ್ಮ ತೇಷು ಮನಃ ಕೃಥಾಃ||
ಭಾರತ! ಮೋಸ ಮತ್ತು ಕೆಟ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾಗುವ ಕರ್ಮಗಳಲ್ಲಿ ನಿನ್ನ ಮನಸ್ಸನ್ನು ತೊಡಗಿಸಬೇಡ.
05034007a ತಥೈವ ಯೋಗವಿಹಿತಂ ನ ಸಿಧ್ಯೇತ್ಕರ್ಮ ಯನ್ನೃಪ|
05034007c ಉಪಾಯಯುಕ್ತಂ ಮೇಧಾವೀ ನ ತತ್ರ ಗ್ಲಪಯೇನ್ಮನಃ||
ನೃಪ! ಸರಿಯಾಗಿ ಕೈಗೊಂಡ ಉತ್ತಮ ಕಾರ್ಯವು ಸಿದ್ಧಿಯನ್ನು ಕೊಡದಿದ್ದರೂ ಮೇಧಾವಿಯು ತನ್ನ ಮನಸ್ಸನ್ನು ಆಯಾಸಗೊಳ್ಳಲು ಬಿಡುವುದಿಲ್ಲ.
05034008a ಅನುಬಂಧಾನವೇಕ್ಷೇತ ಸಾನುಬಂಧೇಷು ಕರ್ಮಸು|
05034008c ಸಂಪ್ರಧಾರ್ಯ ಚ ಕುರ್ವೀತ ನ ವೇಗೇನ ಸಮಾಚರೇತ್||
ಕರ್ಮಗಳೊಂದಿಗೆ ಪರಿಣಾಮಗಳು ಜೋಡಿಕೊಂಡಿರುವುದರಿಂದ ಪರಿಣಾಮಗಳ ಕುರಿತು ಯೋಚಿಸಿ ಕಾರ್ಯಗಳನ್ನು ಕೈಗೊಳ್ಳಬೇಕು; ಅವಸರದಲ್ಲಿ ಮಾಡಬಾರದು.
05034009a ಅನುಬಂಧಂ ಚ ಸಂಪ್ರೇಕ್ಷ್ಯ ವಿಪಾಕಾಂಶ್ಚೈವ ಕರ್ಮಣಾಂ|
05034009c ಉತ್ಥಾನಮಾತ್ಮನಶ್ಚೈವ ಧೀರಃ ಕುರ್ವೀತ ವಾ ನ ವಾ||
ಕರ್ಮಗಳಿಂದ ಮುಂದಾಗುವ ಪರಿಣಾಮಗಳನ್ನು ಮತ್ತು ಅವುಗಳನ್ನು ಸಹಿಸಿಕೊಳ್ಳಲು ತನ್ನಲ್ಲಿರುವ ಶಕ್ತಿಯನ್ನು ನೋಡಿಕೊಂಡು ಅದನ್ನು ಮಾಡಬೇಕೋ ಅಥವಾ ಇಲ್ಲವೋ ಎಂದು ನಿರ್ಧರಿಸಬೇಕು.
05034010a ಯಃ ಪ್ರಮಾಣಂ ನ ಜಾನಾತಿ ಸ್ಥಾನೇ ವೃದ್ಧೌ ತಥಾ ಕ್ಷಯೇ|
05034010c ಕೋಶೇ ಜನಪದೇ ದಂಡೇ ನ ಸ ರಾಜ್ಯೇಽವತಿಷ್ಠತೇ||
ಯಾವ ರಾಜನಿಗೆ ಸ್ಥಾನ, ಲಾಭ, ನಷ್ಟ, ಹಣ, ಜನರು ಮತ್ತು ಶಿಕ್ಷೆಗಳ ಪ್ರಮಾಣಗಳು ತಿಳಿದಿಲ್ಲವೋ ಅವನು ಬಹುಕಾಲ ರಾಜನಾಗಿ ಉಳಿಯುವುದಿಲ್ಲ.
05034011a ಯಸ್ತ್ವೇತಾನಿ ಪ್ರಮಾಣಾನಿ ಯಥೋಕ್ತಾನ್ಯನುಪಶ್ಯತಿ|
05034011c ಯುಕ್ತೋ ಧರ್ಮಾರ್ಥಯೋರ್ಜ್ಞಾನೇ ಸ ರಾಜ್ಯಮಧಿಗಚ್ಚತಿ||
ಯಾರು ಈ ಹಿಂದೆ ಹೇಳಿದ ಪ್ರಮಾಣಗಳನ್ನು ಧರ್ಮಾರ್ಥಯುಕ್ತನಾಗಿ ತಿಳಿದುಕೊಂಡು ನಡೆಯುತ್ತಾನೋ ಅವನು ರಾಜತ್ವವನ್ನು ಪಡೆಯುತ್ತಾನೆ.
05034012a ನ ರಾಜ್ಯಂ ಪ್ರಾಪ್ತಮಿತ್ಯೇವ ವರ್ತಿತವ್ಯಮಸಾಂಪ್ರತಂ|
05034012c ಶ್ರಿಯಂ ಹ್ಯವಿನಯೋ ಹಂತಿ ಜರಾ ರೂಪಮಿವೋತ್ತಮಂ||
“ರಾಜ್ಯವನ್ನು ಪಡೆದಿದ್ದೇನೆ!” ಎಂದು ಒಳ್ಳೆಯದಾಗಿ ನಡೆದುಕೊಳ್ಳದೇ ಇದ್ದರೆ, ಆ ಅವಿನಯವು, ವೃದ್ಧಾಪ್ಯವು ಉತ್ತಮ ರೂಪವನ್ನು ಹೇಗೋ ಹಾಗೆ, ಸಂಪತ್ತನ್ನು ನಾಶಗೊಳಿಸುತ್ತದೆ.
05034013a ಭಕ್ಷ್ಯೋತ್ತಮಪ್ರತಿಚ್ಚನ್ನಂ ಮತ್ಸ್ಯೋ ಬಡಿಶಮಾಯಸಂ|
05034013c ರೂಪಾಭಿಪಾತೀ ಗ್ರಸತೇ ನಾನುಬಂಧಮವೇಕ್ಷತೇ||
ಒಂದು ಮೀನು, ತೋರುವಿಕೆಗೆ ಮಾತ್ರ ಹಾರಿ, ಉತ್ತಮ ಆಹಾರದಲ್ಲಿ ಮುಚ್ಚಿಟ್ಟಿರುವ ಉಕ್ಕಿನ ಮುಳ್ಳನ್ನು, ಅದರ ಪರಿಣಾಮವೇನಾಗಬಹುದು ಎಂದು ಯೋಚಿಸದೇ ನುಂಗುತ್ತದೆ.
05034014a ಯಚ್ಚಕ್ಯಂ ಗ್ರಸಿತುಂ ಗ್ರಸ್ಯಂ ಗ್ರಸ್ತಂ ಪರಿಣಮೇಚ್ಚ ಯತ್|
05034014c ಹಿತಂ ಚ ಪರಿಣಾಮೇ ಯತ್ತದದ್ಯಂ ಭೂತಿಮಿಚ್ಚತಾ||
ಒಳ್ಳೆಯದನ್ನು ಬಯಸುವವನು ಏನನ್ನು ತಿನ್ನಬಹುದೋ ಅದನ್ನು ಹುಡುಕುತ್ತಾನೆ, ತಿಂದ ಮೇಲೆ ಅದು ಹೇಗೆ ಜೀರ್ಣವಾಗುತ್ತದೆ ಎನ್ನುವುದರ ಕುರಿತು ಯೋಚಿಸುತ್ತಾನೆ, ಮತ್ತು ಜೀರ್ಣಗೊಂಡ ನಂತರ ಈ ಆಹಾರವು ಒಳ್ಳೆಯದನ್ನು ಉಂಟುಮಾಡಬಲ್ಲದೋ ಎಂದೂ ಯೋಚಿಸುತ್ತಾನೆ.
05034015a ವನಸ್ಪತೇರಪಕ್ವಾನಿ ಫಲಾನಿ ಪ್ರಚಿನೋತಿ ಯಃ|
05034015c ಸ ನಾಪ್ನೋತಿ ರಸಂ ತೇಭ್ಯೋ ಬೀಜಂ ಚಾಸ್ಯ ವಿನಶ್ಯತಿ||
ಮರದಿಂದ ಇನ್ನೂ ಹಣ್ಣಾಗಿರದ ಫಲವನ್ನು ಕಿತ್ತರೆ ಅದರ ರಸವೂ ಸಿಗುವುದಿಲ್ಲ ಮತ್ತು ಅದರಲ್ಲಿರುವ ಬೀಜವೂ ನಷ್ಟವಾಗುತ್ತದೆ.
05034016a ಯಸ್ತು ಪಕ್ವಮುಪಾದತ್ತೇ ಕಾಲೇ ಪರಿಣತಂ ಫಲಂ|
05034016c ಫಲಾದ್ರಸಂ ಸ ಲಭತೇ ಬೀಜಾಚ್ಚೈವ ಫಲಂ ಪುನಃ||
ಆದರೆ ಹಣ್ಣಾದ ಕಾಲದಲ್ಲಿ ಹಣ್ಣನ್ನು ಕಿತ್ತರೆ ಫಲದಿಂದ ರಸವು ದೊರೆಯುತ್ತದೆ ಮತ್ತು ಬೀಜದಿಂದ ಪುನಃ ಫಲವು ದೊರೆಯುತ್ತದೆ.
05034017a ಯಥಾ ಮಧು ಸಮಾದತ್ತೇ ರಕ್ಷನ್ಪುಷ್ಪಾಣಿ ಷಟ್ಪದಃ|
05034017c ತದ್ವದರ್ಥಾನ್ಮನುಷ್ಯೇಭ್ಯ ಆದದ್ಯಾದವಿಹಿಂಸಯಾ||
ಜೇನು ಹುಳುಗಳು ಹೇಗೆ ಹೂಗಳನ್ನು ರಕ್ಷಿಸಿ ಜೇನನ್ನು ಮಾತ್ರ ಶೇಕರಿಸುತ್ತವೆಯೋ ಹಾಗೆ ಮನುಷ್ಯನೂ ಕೂಡ ಇತರರನ್ನು ಹಿಂಸಿಸದೇ ಸಂಪತ್ತನ್ನು ಗಳಿಸಬೇಕು.
05034018a ಪುಷ್ಪಂ ಪುಷ್ಪಂ ವಿಚಿನ್ವೀತ ಮೂಲಚ್ಚೇದಂ ನ ಕಾರಯೇತ್|
05034018c ಮಾಲಾಕಾರ ಇವಾರಾಮೇ ನ ಯಥಾಂಗಾರಕಾರಕಃ||
ಮಾಲೆಗಳನ್ನು ಕಟ್ಟಿ ಮಾರುವವನಂತೆ ಹೂವುಗಳನ್ನು ಮಾತ್ರ ಕೀಳಬೇಕೇ ಹೊರತು, ಇದ್ದಲು ಮಾಡಿ ಮಾರುವವನಂತೆ ಬೇರಿನ ಸಹಿತ ಗಿಡವನ್ನು ಕೀಳಬಾರದು.
05034019a ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ|
05034019c ಇತಿ ಕರ್ಮಾಣಿ ಸಂಚಿಂತ್ಯ ಕುರ್ಯಾದ್ವಾ ಪುರುಷೋ ನ ವಾ||
ಇದನ್ನು ಮಾಡಿದರೆ ನನಗೇನಾಗುತ್ತದೇ? ಮಾಡದೇ ಇದ್ದರೆ ನನಗೆ ಏನಾಗುತ್ತದೆ? ಎಂದು ಪುರುಷನು ಪ್ರತಿಯೊಂದು ಕರ್ಮದ ಕುರಿತೂ ಆಲೋಚಿಸಿ ಅದನ್ನು ಮಾಡಬೇಕು ಅಥವಾ ಮಾಡಬಾರದು.
05034020a ಅನಾರಭ್ಯಾ ಭವಂತ್ಯರ್ಥಾಃ ಕೇ ಚಿನ್ನಿತ್ಯಂ ತಥಾಗತಾಃ|
05034020c ಕೃತಃ ಪುರುಷಕಾರೋಽಪಿ ಭವೇದ್ಯೇಷು ನಿರರ್ಥಕಃ||
ಕೆಲವೊಂದು ವಿಷಯಗಳ ಕುರಿತು ಏನನ್ನೂ ಮಾಡಬಾರದು, ಮತ್ತು ಅವು ಯಾವಾಗಲೂ ಹಾಗೆಯೇ ಇರುತ್ತವೆ. ಏಕೆಂದರೆ ಅದರ ಕುರಿತು ಪುರುಷನು ಎಷ್ಟೇ ಮಾಡಿದರೂ ಅದು ನಿರರ್ಥಕವಾಗುತ್ತದೆ.
05034021a ಕಾಂಶ್ಚಿದರ್ಥಾನ್ನರಃ ಪ್ರಾಜ್ಞೋ ಲಘುಮೂಲಾನ್ಮಹಾಫಲಾನ್|
05034021c ಕ್ಷಿಪ್ರಮಾರಭತೇ ಕರ್ತುಂ ನ ವಿಘ್ನಯತಿ ತಾದೃಶಾನ್||
ಇನ್ನು ಕೆಲವು ಕರ್ಮಗಳು ಸ್ವಲ್ಪವೇ ಬೇರುಗಳಿದ್ದರೂ ಹೆಚ್ಚಿನ ಫಲವನ್ನು ನೀಡುವಂಥಹುದು. ಪ್ರಾಜ್ಞ ನರನು ಅಂಥವುಗಳನ್ನು ಕ್ಷಿಪ್ರವಾಗಿ ಕೈಗೊಳ್ಳುತ್ತಾನೆ ಮತ್ತು ಅಂಥವುಗಳಿಗೆ ವಿಘ್ನವನ್ನು ತರುವುದಿಲ್ಲ.
05034022a ಋಜು ಪಶ್ಯತಿ ಯಃ ಸರ್ವಂ ಚಕ್ಷುಷಾನುಪಿಬನ್ನಿವ|
05034022c ಆಸೀನಮಪಿ ತೂಷ್ಣೀಕಮನುರಜ್ಯಂತಿ ತಂ ಪ್ರಜಾಃ||
ಕಣ್ಣುಗಳಿಂದಲೇ ಕುಡಿಯುವಂತೆ ಯಾರು ಎಲ್ಲವನ್ನೂ ನೇರವಾಗಿ ಕಾಣುತ್ತಾರೋ ಅವರು ಸುಮ್ಮನೆ ಕುಳಿತುಕೊಂಡಿದ್ದರೂ ಪ್ರಜೆಗಳು ಸಂತೋಷಗೊಳ್ಳುತ್ತಾರೆ.
05034023a ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಂ|
05034023c ಪ್ರಸಾದಯತಿ ಲೋಕಂ ಯಃ ತಂ ಲೋಕೋಽನುಪ್ರಸೀದತಿ||
ಯಾರು ನಾಲ್ಕು ವಿಧಗಳಿಂದ - ದೃಷ್ಟಿ, ಯೋಚನೆ, ಮಾತು ಮತ್ತು ಕೆಲಸ - ಲೋಕವನ್ನು ಪ್ರೀತಿಸುತ್ತಾನೋ ಅವನನ್ನು ಲೋಕವೂ ಪ್ರೀತಿಸುತ್ತದೆ.
05034024a ಯಸ್ಮಾತ್ತ್ರಸ್ಯಂತಿ ಭೂತಾನಿ ಮೃಗವ್ಯಾಧಾನ್ಮೃಗಾ ಇವ|
05034024c ಸಾಗರಾಂತಾಮಪಿ ಮಹೀಂ ಲಬ್ಧ್ವಾ ಸ ಪರಿಹೀಯತೇ||
ಆದರೆ ಅವನಿಗೆ, ಬೇಟೆಗಾರನಿಗೆ ಜಿಂಕೆಗಳು ಹೇಗೋ ಹಾಗೆ, ಪ್ರಜೆಗಳು ಹೆದರಿದರೆ, ಅವನು ಸಾಗರದ ಅಂಚಿನವರೆಗಿನ ಭೂಮಿಯನ್ನು ಪಡೆದಿದ್ದರೂ ತಿರಸ್ಕರಿಸಲ್ಪಡುತ್ತಾನೆ.
05034025a ಪಿತೃಪೈತಾಮಹಂ ರಾಜ್ಯಂ ಪ್ರಾಪ್ತವಾನ್ಸ್ವೇನ ತೇಜಸಾ|
05034025c ವಾಯುರಭ್ರಮಿವಾಸಾದ್ಯ ಭ್ರಂಶಯತ್ಯನಯೇ ಸ್ಥಿತಃ||
ತನ್ನದೇ ತೇಜಸ್ಸಿನಿಂದ ಪಿತೃಪೈತಾಮಹರ ರಾಜ್ಯವನ್ನು ಪಡೆಯಬಹುದು. ಆದರೆ ಅವನು ಅನ್ಯಾಯದ ದಾರಿಯಲ್ಲಿ ನಡೆದರೆ ಭಿರುಗಾಳಿಯು ಮೋಡವನ್ನು ಚದುರಿಸುವಂತೆ ಅದನ್ನು ತುಂಡರಿಸಿಬಿಡಬಹುದು.
05034026a ಧರ್ಮಮಾಚರತೋ ರಾಜ್ಞಾಃ ಸದ್ಭಿಶ್ಚರಿತಮಾದಿತಃ|
05034026c ವಸುಧಾ ವಸುಸಂಪೂರ್ಣಾ ವರ್ಧತೇ ಭೂತಿವರ್ಧನೀ||
ಮೊದಲಿನಿಂದಲೂ ಸಾಧುಗಳು ಆಚರಿಸಿ ಕೊಂಡು ಬಂದಿರುವ ಧರ್ಮವನ್ನು ಆಚರಿಸುವ ರಾಜನ ಭೂಮಿಯು ಅಭಿವೃದ್ಧಿ ಹೊಂದುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.
05034027a ಅಥ ಸಂತ್ಯಜತೋ ಧರ್ಮಮಧರ್ಮಂ ಚಾನುತಿಷ್ಠತಃ|
05034027c ಪ್ರತಿಸಂವೇಷ್ಟತೇ ಭೂಮಿರಗ್ನೌ ಚರ್ಮಾಹಿತಂ ಯಥಾ||
ಆದರೆ ಧರ್ಮವನ್ನು ತೊರೆದು ಅಧರ್ಮವವನ್ನು ಅನುಸರಿಸುವವನ ಆಸ್ತಿಯು ಬೆಂಕಿಗೆ ತಗುಲಿದ ಚರ್ಮದಂತೆ ಮುದುಡಿಕೊಳ್ಳುವುದು.
05034028a ಯ ಏವ ಯತ್ನಃ ಕ್ರಿಯತೇ ಪರರಾಷ್ಟ್ರಾವಮರ್ದನೇ|
05034028c ಸ ಏವ ಯತ್ನಃ ಕರ್ತವ್ಯಃ ಸ್ವರಾಷ್ಟ್ರಪರಿಪಾಲನೇ||
ಶತ್ರುಗಳ ರಾಷ್ಟ್ರವನ್ನು ಸದೆಬಡಿಯಲು ಎಷ್ಟು ಪ್ರಯತ್ನ ಮಾಡುತ್ತೇವೆಯೋ ಅಷ್ಟೇ ಪ್ರಯತ್ನವನ್ನು ತನ್ನ ರಾಷ್ಟ್ರದ ಪರಿಪಾಲನೆಯ ಕರ್ತವ್ಯದಲ್ಲಿಯೂ ಮಾಡಬೇಕು.
05034029a ಧರ್ಮೇಣ ರಾಜ್ಯಂ ವಿಂದೇತ ಧರ್ಮೇಣ ಪರಿಪಾಲಯೇತ್|
05034029c ಧರ್ಮಮೂಲಾಂ ಶ್ರಿಯಂ ಪ್ರಾಪ್ಯ ನ ಜಹಾತಿ ನ ಹೀಯತೇ||
ಧರ್ಮದಿಂದ ರಾಜ್ಯವನ್ನು ಸ್ಥಾಪಿಸಬೇಕು, ಧರ್ಮದಿಂದ ಅದನ್ನು ಪರಿಪಾಲಿಸಬೇಕು. ಧರ್ಮಮೂಲವಾದ ಶ್ರೀಯು ನಷ್ಟವಾಗುವುದಿಲ್ಲ. ಜಯಿಸಲ್ಪಡುವುದೂ ಇಲ್ಲ.
05034030a ಅಪ್ಯುನ್ಮತ್ತಾತ್ಪ್ರಲಪತೋ ಬಾಲಾಚ್ಚ ಪರಿಸರ್ಪತಃ|
05034030c ಸರ್ವತಃ ಸಾರಮಾದದ್ಯಾದಶ್ಮಭ್ಯ ಇವ ಕಾಂಚನಂ||
ಕಲ್ಲಿನಿಂದ ಕಾಂಚನವನ್ನು ಹೇಗೋ ಹಾಗೆ ಹುಚ್ಚನ ಪ್ರಲಾಪದಿಂದಾಗಲೀ ಹರಿದಾಡುವ ಮಗುವಿನಿಂದಾಗಲೀ ಸಾರವುಳ್ಳ ಏನಾದರೂ ದೊರೆಯುತ್ತದೆಯೇ?
05034031a ಸುವ್ಯಾಹೃತಾನಿ ಸುಧಿಯಾಂ ಸುಕೃತಾನಿ ತತಸ್ತತಃ|
05034031c ಸಂಚಿನ್ವನ್ಧೀರ ಆಸೀತ ಶಿಲಾಹಾರೀ ಶಿಲಂ ಯಥಾ||
ತಿಳಿದವನು, ಶಿಲಾಹಾರಿಯುವ ಶಿಲವನ್ನು ಹೇಗೋ ಹಾಗೆ, ಸಾಧುಗಳು ಆಗಾಗ ಮಾಡಿದ ಸುವ್ಯವಹಾರ-ಸುಕೃತಗಳನ್ನು ಒಟ್ಟು ಹಾಕಿಕೊಂಡು ಮೆಲಕು ಹಾಕುತ್ತಿರುತ್ತಾನೆ.
05034032a ಗಂಧೇನ ಗಾವಃ ಪಶ್ಯಂತಿ ವೇದೈಃ ಪಶ್ಯಂತಿ ಬ್ರಾಹ್ಮಣಾಃ|
05034032c ಚಾರೈಃ ಪಶ್ಯಂತಿ ರಾಜಾನಶ್ಚಕ್ಷುರ್ಭ್ಯಾಮಿತರೇ ಜನಾಃ||
ಗೋವುಗಳು ವಾಸನೆಯಿಂದ ನೋಡುತ್ತವೆ, ಬ್ರಾಹ್ಮಣರು ವೇದಗಳ ಮೂಲಕ ನೋಡುತ್ತಾರೆ, ರಾಜರು ಚಾರರ ಮೂಲಕ ನೋಡುತ್ತಾರೆ ಮತ್ತು ಇತರ ಜನರೆಲ್ಲರೂ ಕಣ್ಣುಗಳಿಂದ ನೋಡುತ್ತಾರೆ.
05034033a ಭೂಯಾಂಸಂ ಲಭತೇ ಕ್ಲೇಶಂ ಯಾ ಗೌರ್ಭವತಿ ದುರ್ದುಹಾ|
05034033c ಅಥ ಯಾ ಸುದುಹಾ ರಾಜನ್ನೈವ ತಾಂ ವಿನಯಂತ್ಯಪಿ||
ಹಾಲನ್ನು ಕೊಡದೇ ಇರುವ ಗೋವು ಕಷ್ಟವನ್ನು ಅನುಭವಿಸಬಹುದು. ಆದರೆ, ರಾಜನ್! ಉತ್ತಮ ಹಾಲುಕರೆಯುವವನನ್ನು ಯಾರೂ ಬಗ್ಗಿಸಲಾರರು.
05034034a ಯದತಪ್ತಂ ಪ್ರಣಮತಿ ನ ತತ್ಸಂತಾಪಯಂತ್ಯಪಿ|
05034034c ಯಚ್ಚ ಸ್ವಯಂ ನತಂ ದಾರು ನ ತತ್ಸಮ್ನಾಮಯಂತ್ಯಪಿ||
ಕಾಯಿಸದೆಯೇ ಬಗ್ಗಿಸಬಹುದಾದುದನ್ನು ಜನರು ಕಾಯಿಸುವುದಿಲ್ಲ. ಸ್ವಯಂ ಬಗ್ಗುವ ಗಿಡವನ್ನು ಬಗ್ಗಿಸಲು ಬಲವನ್ನು ಉಪಯೋಗಿಸುವುದಿಲ್ಲ.
05034035a ಏತಯೋಪಮಯಾ ಧೀರಃ ಸಮ್ನಮೇತ ಬಲೀಯಸೇ|
05034035c ಇಂದ್ರಾಯ ಸ ಪ್ರಣಮತೇ ನಮತೇ ಯೋ ಬಲೀಯಸೇ||
ಈ ಉಪಮೇಯದ ಪ್ರಕಾರ ಧೀರನು ತನಗಿಂತ ಹೆಚ್ಚಿನ ಬಲಶಾಲಿಗೆ ಮಣಿಯುತ್ತಾನೆ. ಬಲಶಾಲಿಗೆ ಮಣಿಯುವವರನ್ನು ಇಂದ್ರನೂ ನಮಸ್ಕರಿಸುತ್ತಾನೆ.
05034036a ಪರ್ಜನ್ಯನಾಥಾಃ ಪಶವೋ ರಾಜಾನೋ ಮಿತ್ರಬಾಂಧವಾಃ|
05034036c ಪತಯೋ ಬಾಂಧವಾಃ ಸ್ತ್ರೀಣಾಂ ಬ್ರಾಹ್ಮಣಾ ವೇದಬಾಂಧವಾಃ||
ಪಶುಗಳಿಗೆ ಮಳೆಯು ನಾಥ, ರಾಜನಿಗೆ ಮಿತ್ರರೇ ಬಾಂಧವರು, ಸ್ತ್ರೀಯರಿಗೆ ಪತಿಗಳೇ ಬಾಂಧವರು, ಮತ್ತು ಬ್ರಾಹ್ಮಣರಿಗೆ ವೇದಗಳೇ ಬಾಂಧವರು.
05034037a ಸತ್ಯೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ|
05034037c ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ||
ಧರ್ಮವು ಸತ್ಯದಿಂದ ರಕ್ಷಿಸಲ್ಪಡುತ್ತದೆ, ವಿದ್ಯೆಯು ಯೋಗದಿಂದ ರಕ್ಷಿಸಲ್ಪಡುತ್ತದೆ, ತೊಳೆಯುವುದರಿಂದ ರೂಪವು ರಕ್ಷಿಸಲ್ಪಡುತ್ತದೆ ಮತ್ತು ಕುಲವು ನಡತೆಯಿಂದ ರಕ್ಷಿಸಲ್ಪಡುತ್ತದೆ.
05034038a ಮಾನೇನ ರಕ್ಷ್ಯತೇ ಧಾನ್ಯಮಶ್ವಾನ್ರಕ್ಷತ್ಯನುಕ್ರಮಃ|
05034038c ಅಭೀಕ್ಷ್ಣದರ್ಶನಾದ್ಗಾವಃ ಸ್ತ್ರಿಯೋ ರಕ್ಷ್ಯಾಃ ಕುಚೇಲತಃ||
ಧಾನ್ಯವು ಅಳತೆಯಿಂದ ರಕ್ಷಿಸಲ್ಪಡುತ್ತದೆ, ಅಶ್ವಗಳು ವ್ಯಾಯಾಮದಿಂದ ರಕ್ಷಿಸಲ್ಪಡುತ್ತವೆ, ಕಾಯುವುದರಿಂದ ಗೋವುಗಳು ರಕ್ಷಿಸಲ್ಪಡುತ್ತವೆ ಮತ್ತು ಸ್ತ್ರೀಯರು ಉಡುಪುಗಳಿಂದ ರಕ್ಷಿಸಲ್ಪಡುತ್ತಾರೆ.
05034039a ನ ಕುಲಂ ವೃತ್ತಹೀನಸ್ಯ ಪ್ರಮಾಣಮಿತಿ ಮೇ ಮತಿಃ|
05034039c ಅಂತ್ಯೇಷ್ವಪಿ ಹಿ ಜಾತಾನಾಂ ವೃತ್ತಮೇವ ವಿಶಿಷ್ಯತೇ||
ಉತ್ತಮ ನಡತೆಯಿಲ್ಲದವನಿಗೆ ಕುಲವು ಪ್ರಮಾಣವಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ ಹೀನ ಕುಲದಲ್ಲಿ ಜನಿಸಿದ್ದರೂ ಅವರ ನಡತೆಯು ವಿಶೇಷವಾಗಿರಬಹುದು.
05034040a ಯ ಈರ್ಷ್ಯುಃ ಪರವಿತ್ತೇಷು ರೂಪೇ ವೀರ್ಯೇ ಕುಲಾನ್ವಯೇ|
05034040c ಸುಖೇ ಸೌಭಾಗ್ಯಸತ್ಕಾರೇ ತಸ್ಯ ವ್ಯಾಧಿರನಂತಕಃ||
ಇನ್ನೊಬ್ಬರ ಸಂಪತ್ತು, ರೂಪ, ವೀರ್ಯ, ಉತ್ತಮ ಕುಲ, ಸುಖ, ಸೌಭಾಗ್ಯ ಮತ್ತು ಸತ್ಕಾರಗಳ ಬಗ್ಗೆ ಅಸೂಯೆ ಪಡುವವರ ವ್ಯಾಧಿಗೆ ಅಂತ್ಯವಿಲ್ಲ.
05034041a ಅಕಾರ್ಯಕರಣಾದ್ಭೀತಃ ಕಾರ್ಯಾಣಾಂ ಚ ವಿವರ್ಜನಾತ್|
05034041c ಅಕಾಲೇ ಮಂತ್ರಭೇದಾಚ್ಚ ಯೇನ ಮಾದ್ಯೇನ್ನ ತತ್ಪಿಬೇತ್||
ಮಾಡಬಾರದ್ದನ್ನು ಮಾಡಿಯೇನು ಎಂದು ಭಯವಿರುವಾಗ, ಅಕಾಲದಲ್ಲಿ ಗೊಂದಲಕ್ಕೀಡಾದಾಗ, ಮತ್ತೇರಿಸುವ ಏನನ್ನೂ ಕುಡಿಯಬೇಡ.
05034042a ವಿದ್ಯಾಮದೋ ಧನಮದಸ್ತೃತೀಯೋಽಭಿಜನೋ ಮದಃ|
05034042c ಏತೇ ಮದಾವಲಿಪ್ತಾನಾಮೇತ ಏವ ಸತಾಂ ದಮಾಃ|
ವಿದ್ಯಾಮದ, ಧನಮದ ಮತ್ತು ಮೂರನೆಯದಾಗಿ ಜನಬೆಂಬಲದ ಮದ. ಇವು ಪುರುಷನನ್ನು ಮುಳುಗಿಸುವ ಮದಗಳು. ಇವುಗಳನ್ನೇ ಸಜ್ಜನರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ.
05034043a ಅಸಂತೋಽಭ್ಯರ್ಥಿತಾಃ ಸದ್ಭಿಃ ಕಿಂ ಚಿತ್ಕಾರ್ಯಂ ಕದಾ ಚನ|
05034043c ಮನ್ಯಂತೇ ಸಂತಮಾತ್ಮಾನಮಸಂತಮಪಿ ವಿಶ್ರುತಂ||
ಸಂತರು ಅಸಂತರಲ್ಲಿ ಏನಾದರೂ ಒಂದು ಕೆಲಸವನ್ನು ಕೇಳಿದರೂ ಕೂಡ, ಅವರು ಅಸಂತರೆಂದು ವಿಶ್ರುತರಾಗಿದ್ದರೂ ತಮ್ಮನ್ನು ತಾವೇ ಸಂತರೆಂದು ತಿಳಿದುಕೊಂಡುಬಿಡುತ್ತಾರೆ.
05034044a ಗತಿರಾತ್ಮವತಾಂ ಸಂತಃ ಸಂತ ಏವ ಸತಾಂ ಗತಿಃ|
05034044c ಅಸತಾಂ ಚ ಗತಿಃ ಸಂತೋ ನ ತ್ವಸಂತಃ ಸತಾಂ ಗತಿಃ||
ಸಂತರು ಆತ್ಮವಂತರ ಗತಿ, ಸಂತರು ಸತ್ಯವಂತರ ಗತಿ. ಅಸತರನ್ನು ಸಂತರು ನಡೆಸಬಲ್ಲರು ಆದರೆ ಅಸಂತರು ಸಂತರನ್ನು ಎಂದೂ ನಡೆಸುವುದಿಲ್ಲ.
05034045a ಜಿತಾ ಸಭಾ ವಸ್ತ್ರವತಾ ಸಮಾಶಾ ಗೋಮತಾ ಜಿತಾ|
05034045c ಅಧ್ವಾ ಜಿತೋ ಯಾನವತಾ ಸರ್ವಂ ಶೀಲವತಾ ಜಿತಂ||
ಉತ್ತಮ ಉಡುಪನ್ನು ಧರಿಸಿದವನು ಸಭೆಯನ್ನು ಗೆಲ್ಲಬಹುದು. ಹಲವಾರು ಗೋವುಗಳನ್ನು ಹೊಂದಿದ ಶ್ರೀಮಂತನು ಬಡವರನ್ನು ಗೆಲ್ಲಬಹುದು. ವಾಹನವಿರುವವನು ದಾರಿಯನ್ನು ಗೆಲ್ಲಬಹುದು. ಆದರೆ ಶೀಲವಂತನು ಎಲ್ಲವನ್ನೂ ಗೆಲ್ಲುತ್ತಾನೆ.
05034046a ಶೀಲಂ ಪ್ರಧಾನಂ ಪುರುಷೇ ತದ್ಯಸ್ಯೇಹ ಪ್ರಣಶ್ಯತಿ|
05034046c ನ ತಸ್ಯ ಜೀವಿತೇನಾರ್ಥೋ ನ ಧನೇನ ನ ಬಂಧುಭಿಃ||
ಪುರುಷನಿಗೆ ಶೀಲವೇ ಪ್ರಧಾನ. ಅದನ್ನು ಕಳೆದುಕೊಂಡರೆ ಅವನಿಗೆ ಜೀವನದಿಂದಲೂ, ಸಂಪತ್ತಿನಿಂದಲೂ, ಬಂಧುಗಳಿಂದಲೂ ಪ್ರಯೋಜನವಾಗುವುದಿಲ್ಲ.
05034047a ಆಢ್ಯಾನಾಂ ಮಾಂಸಪರಮಂ ಮಧ್ಯಾನಾಂ ಗೋರಸೋತ್ತರಂ|
05034047c ಲವಣೋತ್ತರಂ ದರಿದ್ರಾಣಾಂ ಭೋಜನಂ ಭರತರ್ಷಭ||
ಭರತರ್ಷಭ! ಅತಿ ಶ್ರೀಮಂತನಿಗೆ ಮಾಂಸವು ಪರಮ ಭೋಜನ, ಮಧ್ಯಮರಿಗೆ ಹಸುವಿನ ಹಾಲು ಮತ್ತು ದರಿದ್ರರಿಗೆ ಉಪ್ಪೇ ಪರಮ ಭೋಜನ.
05034048a ಸಂಪನ್ನತರಮೇವಾನ್ನಂ ದರಿದ್ರಾ ಭುಂಜತೇ ಸದಾ|
05034048c ಕ್ಷುತ್ಸ್ವಾದುತಾಂ ಜನಯತಿ ಸಾ ಚಾಢ್ಯೇಷು ಸುದುರ್ಲಭಾ||
ಆದರೂ ದರಿದ್ರರು ಚೆನ್ನಾಗಿ ಊಟಮಾಡುತ್ತಾರೆ; ಹಸಿವೆಯು ಅವರ ಊಟವನ್ನು ರುಚಿಯಾಗಿಸುತ್ತದೆ. ಅದು ಧನಿಕರಿಗೆ ತುಂಬಾ ದುರ್ಲಭ.
05034049a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ|
05034049c ದರಿದ್ರಾಣಾಂ ತು ರಾಜೇಂದ್ರ ಅಪಿ ಕಾಷ್ಠಂ ಹಿ ಜೀರ್ಯತೇ||
ರಾಜೇಂದ್ರ! ಲೋಕದಲ್ಲಿ ಶ್ರೀಮಂತರಿಗೆ ಚೆನ್ನಾಗಿ ಹಸಿವೆಯಾಗುವುದಿಲ್ಲ ಎಂದು ಕಂಡುಬರುತ್ತದೆ. ಆದರೆ ದರಿದ್ರರು ಕಟ್ಟಿಗೆಯನ್ನೂ ಕೂಡ ಜೀರ್ಣಿಸಿಕೊಳ್ಳಬಲ್ಲರು.
05034050a ಅವೃತ್ತಿರ್ಭಯಮಂತ್ಯಾನಾಂ ಮಧ್ಯಾನಾಂ ಮರಣಾದ್ಭಯಂ|
05034050c ಉತ್ತಮಾನಾಂ ತು ಮರ್ತ್ಯಾನಾಮವಮಾನಾತ್ಪರಂ ಭಯಂ||
ಕೆಳಗಿನವರಿಗೆ ಕೆಲಸ ದೊರೆಯದೇ ಇರುವುದರ ಭಯ ಮತ್ತು ಮಧ್ಯಮರಿಗೆ ಮರಣದ ಭಯ. ಉತ್ತಮ ಜನರಿಗೆ ಅವಮಾನವೇ ಪರಮ ಭಯ.
05034051a ಐಶ್ವರ್ಯಮದಪಾಪಿಷ್ಠಾ ಮದಾಃ ಪಾನಮದಾದಯಃ|
05034051c ಐಶ್ವರ್ಯಮದಮತ್ತೋ ಹಿ ನಾಪತಿತ್ವಾ ವಿಬುಧ್ಯತೇ||
ಮದ್ಯಪಾನದಿಂದುಟಾಗುವ ಮತ್ತಿಗಿಂತ ಐಶ್ವರ್ಯಮದವು ಪಾಪಿಷ್ಠವಾದುದು. ಐಶ್ವರ್ಯ ಮದದಿಂದ ಮತ್ತನಾದವನಿಗೆ ಬಿದ್ದರೂ ಬುದ್ಧಿ ಬರುವುದಿಲ್ಲ.
05034052a ಇಂದ್ರಿಯೈರಿಂದ್ರಿಯಾರ್ಥೇಷು ವರ್ತಮಾನೈರನಿಗ್ರಹೈಃ|
05034052c ತೈರಯಂ ತಾಪ್ಯತೇ ಲೋಕೋ ನಕ್ಷತ್ರಾಣಿ ಗ್ರಹೈರಿವ||
ತಮ್ಮ ಆಸೆಗಳನ್ನು ಪೂರೈಸಲು ಕಡಿವಾಣವಿಲ್ಲದೇ ನಡೆದುಕೊಳ್ಳುವವರನ್ನು, ನಕ್ಷತ್ರಗಳನ್ನು ಗ್ರಹಗಳು ಹೇಗೋ ಹಾಗೆ, ಇಂದ್ರಿಯಗಳು ಕಾಡುತ್ತವೆ.
05034053a ಯೋ ಜಿತಃ ಪಂಚವರ್ಗೇಣ ಸಹಜೇನಾತ್ಮಕರ್ಶಿನಾ|
05034053c ಆಪದಸ್ತಸ್ಯ ವರ್ಧಂತೇ ಶುಕ್ಲಪಕ್ಷ ಇವೋಡುರಾಟ್||
ಯಾರ ಸಹಜವಾಗಿರುವ ಐದು ಇಂದ್ರಿಯಗಳು ಆತ್ಮವನ್ನು ಗೆದ್ದು ಎಳೆದುಕೊಂಡು ಹೋಗುತ್ತವೆಯೋ ಅವನ ಆಪತ್ತುಗಳು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತವೆ.
05034054a ಅವಿಜಿತ್ಯ ಯ ಆತ್ಮಾನಮಮಾತ್ಯಾನ್ವಿಜಿಗೀಷತೇ|
05034054c ಅಮಿತ್ರಾನ್ವಾಜಿತಾಮಾತ್ಯಃ ಸೋಽವಶಃ ಪರಿಹೀಯತೇ||
ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ ತನ್ನ ಅಮಾತ್ಯರನ್ನು ನಿಯಂತ್ರಿಸುವವನು ಮತ್ತು ಅಮಾತ್ಯರನ್ನು ವಶಪಡಿಸಿಕೊಳ್ಳದೇ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸುವವನು ಸೋಲುತ್ತಾನೆ.
05034055a ಆತ್ಮಾನಮೇವ ಪ್ರಥಮಂ ದೇಶರೂಪೇಣ ಯೋ ಜಯೇತ್|
05034055c ತತೋಽಮಾತ್ಯಾನಮಿತ್ರಾಂಶ್ಚ ನ ಮೋಘಂ ವಿಜಿಗೀಷತೇ||
ದೇಶರೂಪದ ತನ್ನನ್ನೇ ಯಾರು ಮೊದಲು ಗೆಲ್ಲುತ್ತಾನೋ ಅವನಿಗೆ ಅಮಾತ್ಯರನ್ನೂ ಶತ್ರುಗಳನ್ನೂ ಗೆಲ್ಲುವುದು ಕಷ್ಟವಾಗುವುದಿಲ್ಲ.
05034056a ವಶ್ಯೇಂದ್ರಿಯಂ ಜಿತಾಮಾತ್ಯಂ ಧೃತದಂಡಂ ವಿಕಾರಿಷು|
05034056c ಪರೀಕ್ಷ್ಯಕಾರಿಣಂ ಧೀರಮತ್ಯಂತಂ ಶ್ರೀರ್ನಿಷೇವತೇ||
ಇಂದ್ರಿಯಗಳನ್ನು ಗೆದ್ದಿರುವ, ಅಮಾತ್ಯರನ್ನು ಗೆದ್ದಿರುವ, ಅಪರಾಧಿಗಳನ್ನು ಶಿಕ್ಷಿಸುವ, ಚೆನ್ನಾಗಿ ಪರೀಕ್ಷಿಸಿ ಕಾರ್ಯಮಾಡುವ ಧೀರನನ್ನು ಸಂಪತ್ತು ಬಹಳವಾಗಿ ವರಿಸುತ್ತದೆ.
05034057a ರಥಃ ಶರೀರಂ ಪುರುಷಸ್ಯ ರಾಜನ್
ನಾತ್ಮಾ ನಿಯಂತೇಂದ್ರಿಯಾಣ್ಯಸ್ಯ ಚಾಶ್ವಾಃ|
05034057c ತೈರಪ್ರಮತ್ತಃ ಕುಶಲಃ ಸದಶ್ವೈರ್
ದಾಂತೈಃ ಸುಖಂ ಯಾತಿ ರಥೀವ ಧೀರಃ||
ರಾಜನ್! ಪುರುಷನ ಶರೀರವು ಒಂದು ರಥವಿದ್ದಂತೆ. ಆತ್ಮವು ಸಾರಥಿ, ಇಂದ್ರಿಯಗಳು ಕುದುರೆಗಳು. ಅಶ್ವಗಳನ್ನು ಚೆನ್ನಾಗಿ ನಿಯಂತ್ರಿಸುವ ಅಪ್ರಮತ್ತ, ಕುಶಲ, ಧೀರ ರಥಿಕನು ಸುಖವನ್ನು ಹೊಂದುತ್ತಾನೆ.
05034058a ಏತಾನ್ಯನಿಗೃಹೀತಾನಿ ವ್ಯಾಪಾದಯಿತುಮಪ್ಯಲಂ|
05034058c ಅವಿಧೇಯಾ ಇವಾದಾಂತಾ ಹಯಾಃ ಪಥಿ ಕುಸಾರಥಿಂ||
ಅವಿಧೇಯ, ನಿಯಂತ್ರಣದಲ್ಲಿಲ್ಲದ ಕುದುರೆಗಳು ಪ್ರಯಾಣಿಸುತ್ತಿರುವ ಸಾರಥಿಗೆ ಹೇಗೋ ಹಾಗೆ ನಿಯಂತ್ರಣದಲ್ಲಿಲ್ಲದ ಇಂದ್ರಿಯಗಳು ಆಪತ್ತುಗಳನ್ನು ತಂದೊಡ್ಡುತ್ತವೆ.
05034059a ಅನರ್ಥಮರ್ಥತಃ ಪಶ್ಯನ್ನರ್ಥಂ ಚೈವಾಪ್ಯನರ್ಥತಃ|
05034059c ಇಂದ್ರಿಯೈಃ ಪ್ರಸೃತೋ ಬಾಲಃ ಸುದುಃಖಂ ಮನ್ಯತೇ ಸುಖಂ||
ಇಂದ್ರಿಯಗಳಿಂದ ನಡೆಸಲ್ಪಟ್ಟ ಬಾಲಕನು ಲಾಭವಿಲ್ಲದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ಲಾಭವಿಲ್ಲದುದೆಂದೂ ತಿಳಿದು ಅತೀ ದುಃಖವನ್ನು ತರುವಂಥಹುದನ್ನು ಸುಖವೆಂದು ಪರಿಗಣಿಸುತ್ತಾನೆ.
05034060a ಧರ್ಮಾರ್ಥೌ ಯಃ ಪರಿತ್ಯಜ್ಯ ಸ್ಯಾದಿಂದ್ರಿಯವಶಾನುಗಃ|
05034060c ಶ್ರೀಪ್ರಾಣಧನದಾರೇಭ್ಯ ಕ್ಷಿಪ್ರಂ ಸ ಪರಿಹೀಯತೇ||
ಧರ್ಮಾರ್ಥಗಳನ್ನು ಪರಿತ್ಯಜಿಸಿ ಇಂದ್ರಿಯಗಳ ವಶನಾಗುವವನನ್ನು ಅದೃಷ್ಟ, ಸಂಪತ್ತು, ಪ್ರಾಣ, ಮತ್ತು ಪತ್ನಿ ಬೇಗನೇ ತೊರೆಯುತ್ತವೆ.
05034061a ಅರ್ಥಾನಾಮೀಶ್ವರೋ ಯಃ ಸ್ಯಾದಿಂದ್ರಿಯಾಣಾಮನೀಶ್ವರಃ|
05034061c ಇಂದ್ರಿಯಾಣಾಮನೈಶ್ವರ್ಯಾದೈಶ್ವರ್ಯಾದ್ಭ್ರಶ್ಯತೇ ಹಿ ಸಃ||
ಸಂಪತ್ತಿನ ಒಡೆಯನಾಗಿದ್ದರೂ ಇಂದ್ರಿಯಗಳ ಮೇಲೆ ಒಡೆತನವಿಲ್ಲದಿದ್ದರೆ ಒಡೆಯನಿಲ್ಲದ ಇಂದ್ರಿಯಗಳು ಅವನ ಐಶ್ವರ್ಯವನ್ನು ಅವನಿಂದ ದೂರಮಾಡುವವು.
05034062a ಆತ್ಮನಾತ್ಮಾನಮನ್ವಿಚ್ಚೇನ್ಮನೋಬುದ್ಧೀಂದ್ರಿಯೈರ್ಯತೈಃ|
05034062c ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||
ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ಒಂದುಗೂಡಿಸಿ ತನ್ನ ಆತ್ಮವನ್ನು ತಾನೇ ಹುಡುಕಿಕೊಳ್ಳಬೇಕು. ಆತ್ಮವೇ ತನ್ನ ಬಂಧು ಮತ್ತು ಆತ್ಮವೇ ತನ್ನ ಶತ್ರುವೂ ಕೂಡ.
05034063a ಕ್ಷುದ್ರಾಕ್ಷೇಣೇವ ಜಾಲೇನ ಝಷಾವಪಿಹಿತಾವುಭೌ|
05034063c ಕಾಮಶ್ಚ ರಾಜನ್ಕ್ರೋಧಶ್ಚ ತೌ ಪ್ರಜ್ಞಾನಂ ವಿಲುಂಪತಃ||
ರಾಜನ್! ದುರ್ಬಲ ಜಾಲದಲ್ಲಿ ಹಿಡಿದಿಟ್ಟಿರುವ ಎರಡು ಬಲಶಾಲಿ ಮೀನುಗಳಂತೆ ಕಾಮ-ಕ್ರೋಧಗಳೆರಡೂ ಪ್ರಜ್ಞಾನವನ್ನು ಹರಿದು ಚಿಂದಿ ಮಾಡುತ್ತವೆ.
05034064a ಸಮವೇಕ್ಷ್ಯೇಹ ಧರ್ಮಾರ್ಥೌ ಸಂಭಾರಾನ್ಯೋಽಧಿಗಚ್ಚತಿ|
05034064c ಸ ವೈ ಸಂಭೃತಸಂಭಾರಃ ಸತತಂ ಸುಖಮೇಧತೇ||
ಧರ್ಮಾರ್ಥಗಳೆರಡನ್ನೂ ನೋಡಿಕೊಂಡು ಅವಶ್ಯವಿರುವವುಗಳನ್ನು ಯಾರು ಒಟ್ಟುಗೂಡಿಸಿಕೊಳ್ಳುತ್ತಾರೋ ಅವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಸತತವೂ ಸುಖವಾಗಿರುತ್ತಾರೆ.
05034065a ಯಃ ಪಂಚಾಭ್ಯಂತರಾಂ ಶತ್ರೂನವಿಜಿತ್ಯ ಮತಿಕ್ಷಯಾನ್|
05034065c ಜಿಗೀಷತಿ ರಿಪೂನನ್ಯಾನ್ರಿಪವೋಽಭಿಭವಂತಿ ತಂ||
ಒಳಗಿರುವ ಈ ಐದು ಶತ್ರುಗಳನ್ನು ಜಯಿಸದೇ ಯಾರು ಹೊರಗಿನ ಶತ್ರುಗಳನ್ನು ಜಯಿಸಲು ಹೊರಡುತ್ತಾನೋ ಅವನನ್ನು ರಿಪುಗಳೇ ಗೆಲ್ಲುತ್ತಾರೆ.
05034066a ದೃಶ್ಯಂತೇ ಹಿ ದುರಾತ್ಮಾನೋ ವಧ್ಯಮಾನಾಃ ಸ್ವಕರ್ಮಭಿಃ|
05034066c ಇಂದ್ರಿಯಾಣಾಮನೀಶತ್ವಾದ್ರಾಜಾನೋ ರಾಜ್ಯವಿಭ್ರಮೈಃ||
ರಾಜ್ಯದ ಹುಚ್ಚಿನಿಂದಾಗಿ ತಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವ ದುರಾತ್ಮ ರಾಜರುಗಳು ತಮ್ಮದೇ ಕರ್ಮಗಳಿಂದ ಮರಣಹೊಂದಿದುದನ್ನು ನೋಡಿದ್ದೇವಲ್ಲ!
05034067a ಅಸಂತ್ಯಾಗಾತ್ಪಾಪಕೃತಾಮಪಾಪಾಂಸ್
ತುಲ್ಯೋ ದಂಡಃ ಸ್ಪೃಶತೇ ಮಿಶ್ರಭಾವಾತ್|
05034067c ಶುಷ್ಕೇಣಾರ್ದ್ರಂ ದಹ್ಯತೇ ಮಿಶ್ರಭಾವಾತ್
ತಸ್ಮಾತ್ಪಾಪೈಃ ಸಹ ಸಂಧಿಂ ನ ಕುರ್ಯಾತ್||
ಒಣಹುಲ್ಲಿನ ಜೊತೆಗೆ ಅದರೊಡನೆ ಸೇರಿಕೊಂಡಿದ್ದ ಹಸಿ ಹುಲ್ಲುಕೂಡ ಸುಟ್ಟುಹೋಗುವಂತೆ ಪಾಪಕರ್ಮ ಮಾಡುವವರೊಡನಿರುವ ನಿಷ್ಪಾಪಿಗಳೂ ಕೂಡ ಶಿಕ್ಷೆಯನ್ನು ಅನುಭವಿಸುತ್ತಾರೆ. ಆದುದರಿಂದ ಪಾಪಿಷ್ಟರೊಂದಿಗೆ ಸೇರಿಕೊಳ್ಳಬಾರದು.
05034068a ನಿಜಾನುತ್ಪತತಃ ಶತ್ರೂನ್ಪಂಚ ಪಂಚಪ್ರಯೋಜನಾನ್|
05034068c ಯೋ ಮೋಹಾನ್ನ ನಿಗೃಹ್ಣಾತಿ ತಮಾಪದ್ಗ್ರಸತೇ ನರಂ||
ಯಾವ ನರನು ಮೋಹದಿಂದ ತನ್ನ ಐದು ಪ್ರಯೋಜನಗಳಿಗೆ ಆಸೆಬುರುಕರಾಗಿರುವ ಐವರು ಶತ್ರುಗಳನ್ನು ನಿಗ್ರಹಿಸಿಟ್ಟುಕೊಳ್ಳುವುದೋ ಅವನನ್ನು ಆಪತ್ತು ಹಿಡಿದುಕೊಳ್ಳುತ್ತದೆ.
05034069a ಅನಸೂಯಾರ್ಜವಂ ಶೌಚಂ ಸಂತೋಷಃ ಪ್ರಿಯವಾದಿತಾ|
05034069c ದಮಃ ಸತ್ಯಮನಾಯಾಸೋ ನ ಭವಂತಿ ದುರಾತ್ಮನಾಂ||
ಅಸೂಯೆಪಡದಿರುವುದು, ಸರಳತೆ, ಶುಚಿತ್ವ, ಸಂತೋಷ, ಪ್ರಿಯವಾಗಿ ಮಾತನಾಡುವುದು, ಆತ್ಮನಿಗ್ರಹ, ಸತ್ಯ, ಅನಾಯಾಸ ಇವು ಎಂದೂ ದುರಾತ್ಮನದ್ದಾಗುವವಲ್ಲ.
05034070a ಆತ್ಮಜ್ಞಾನಮನಾಯಾಸಸ್ತಿತಿಕ್ಷಾ ಧರ್ಮನಿತ್ಯತಾ|
05034070c ವಾಕ್ಚೈವ ಗುಪ್ತಾ ದಾನಂ ಚ ನೈತಾನ್ಯಂತ್ಯೇಷು ಭಾರತ||
ಭಾರತ! ಆತ್ಮಜ್ಞಾನ, ಅನಾಯಾಸವಾಗಿ ನಿರಂತರವಾಗಿ ಧರ್ಮದಲ್ಲಿ ನೆಲೆಸಿರುವುದು, ಮಾತು ಮತ್ತು ದಾನಗಳನ್ನು ಗುಪ್ತವಾಗಿಟ್ಟುಕೊಳ್ಳುವುದು ಇವು ಕೀಳು ಜನರಲ್ಲಿ ಇರುವುದಿಲ್ಲ.
05034071a ಆಕ್ರೋಶಪರಿವಾದಾಭ್ಯಾಂ ವಿಹಿಂಸಂತ್ಯಬುಧಾ ಬುಧಾನ್|
05034071c ವಕ್ತಾ ಪಾಪಮುಪಾದತ್ತೇ ಕ್ಷಮಮಾಣೋ ವಿಮುಚ್ಯತೇ||
05034072a ಹಿಂಸಾ ಬಲಮಸಾಧೂನಾಂ ರಾಜ್ಞಾಂ ದಂಡವಿಧಿರ್ಬಲಂ|
05034072c ಶುಶ್ರೂಷಾ ತು ಬಲಂ ಸ್ತ್ರೀಣಾಂ ಕ್ಷಮಾ ಗುಣವತಾಂ ಬಲಂ||
ಹಿಂಸೆಯಲ್ಲಿ ಅಸಾಧುಗಳ ಬಲವೂ, ರಾಜರಲ್ಲಿ ದಂಡವನ್ನು ವಿಧಿಸಬಲ್ಲ ಶಕ್ತಿಯೂ, ಸ್ತ್ರೀಯರಲ್ಲಿ ಶುಶ್ರೂಷದ ಬಲವೂ ಗುಣವಂತರಲ್ಲಿ ಕ್ಷಮೆಯ ಬಲವೂ ಇವೆ.
05034073a ವಾಕ್ಸಮ್ಯಮೋ ಹಿ ನೃಪತೇ ಸುದುಷ್ಕರತಮೋ ಮತಃ|
05034073c ಅರ್ಥವಚ್ಚ ವಿಚಿತ್ರಂ ಚ ನ ಶಕ್ಯಂ ಬಹು ಭಾಷಿತುಂ|
ನೃಪತೇ! ವಾಕ್ ಸಂಯಮವು ಎಲ್ಲಕಿಂತ ಸುದುಷ್ಕರವಾದದ್ದು ಎಂಬ ಮತವಿದೆ. ತುಂಬಾ ಮಾತನಾಡುವವನಿಗೆ ಅರ್ಥವತ್ತಾಗಿ ಸ್ವಾರಸ್ಯವಾಗಿ ಹೇಳಲು ಸಾಧ್ಯವಾಗುವುದಿಲ್ಲ.
05034074a ಅಭ್ಯಾವಹತಿ ಕಲ್ಯಾಣಂ ವಿವಿಧಾ ವಾಕ್ಸುಭಾಷಿತಾ|
05034074c ಸೈವ ದುರ್ಭಾಷಿತಾ ರಾಜನ್ನನರ್ಥಾಯೋಪಪದ್ಯತೇ||
ಒಳ್ಳೆಯ ಮಾತು ವಿವಿಧ ಉತ್ತಮ ಫಲಗಳನ್ನು ನೀಡುತ್ತದೆ. ಆದರೆ ರಾಜನ್! ಕೆಟ್ಟ ಮಾತು ಅನರ್ಥಗಳನ್ನುಂಟುಮಾಡುತ್ತದೆ.
05034075a ಸಂರೋಹತಿ ಶರೈರ್ವಿದ್ಧಂ ವನಂ ಪರಶುನಾ ಹತಂ|
05034075c ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಂ||
ಬಾಣಗಳಿಂದ ಅಥವಾ ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಚಿಗುರುತ್ತದೆ. ಆದರೆ ಕೆಟ್ಟ ಮಾತುಗಳಿಂದ ನೊಂದ, ಮುದುಡಿದ ಹೃದಯವು ಮತ್ತೆ ಚಿಗುರುವುದಿಲ್ಲ.
05034076a ಕರ್ಣಿನಾಲೀಕನಾರಾಚಾ ನಿರ್ಹರಂತಿ ಶರೀರತಃ|
05034076c ವಾಕ್ಶಲ್ಯಸ್ತು ನ ನಿರ್ಹರ್ತುಂ ಶಕ್ಯೋ ಹೃದಿಶಯೋ ಹಿ ಸಃ||
ಶರೀರವನ್ನು ಹೊಕ್ಕ ಬಾಣ ಈಟಿ ಮೊದಲಾದ ಆಯುಧಗಳನ್ನು ಕೀಳಬಹುದು. ಆದರೆ ಹೃದಯವನ್ನು ಹೊಕ್ಕ ಮಾತಿನ ಬಾಣವನ್ನು ಕೀಳಲಿಕ್ಕಾಗುವುದಿಲ್ಲ.
05034077a ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ|
05034077c ಪರಸ್ಯ ನಾಮರ್ಮಸು ತೇ ಪತಂತಿ
ತಾನ್ಪಂಡಿತೋ ನಾವಸೃಜೇತ್ಪರೇಷು||
ಮಾತಿನ ಈಟಿಯು ಬಾಯಿಯಿಂದ ಹೊರಬೀಳುತ್ತದೆ. ಇದರಿಂದ ಪೆಟ್ಟುತಿಂದವನು ರಾತ್ರಿ-ದಿನಗಳಲ್ಲಿ ಚಿಂತಿಸುತ್ತಾನೆ. ಪಂಡಿತರು ಇಂತಹ ಈಟಿಯನ್ನು ಅವರ ಮರ್ಮಗಳನ್ನು ಭೇದಿಸಬಾರದೆಂದು ಇತರರ ಮೇಲೆ ಎಂದೂ ಪ್ರಯೋಗಿಸುವುದಿಲ್ಲ.
05034078a ಯಸ್ಮೈ ದೇವಾಃ ಪ್ರಯಚ್ಚಂತಿ ಪುರುಷಾಯ ಪರಾಭವಂ|
05034078c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ||
ಯಾವ ಪುರುಷನ ಪರಾಭವವನ್ನು ದೇವತೆಗಳು ಇಚ್ಛಿಸುತ್ತಾರೋ ಅವನ ಬುದ್ಧಿಯನ್ನು ಅಪಹರಿಸುತ್ತಾರೆ. ಇದರಿಂದ ಅವನು ಬರುತ್ತಿರುವ ಆಪತ್ತನ್ನು ಕಾಣುವುದಿಲ್ಲ.
05034079a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ|
05034079c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ||
ಬುದ್ಧಿಯು ಕಲುಷಿತವಾದಾಗ ಭೂತಗಳ ವಿನಾಶವು ಹತ್ತಿರವಾಗುತ್ತದೆ. ಅನ್ಯಾಯವು ನ್ಯಾಯವಾಗಿ ತೋರಿ ಹೃದಯವನ್ನು ಸುತ್ತಿಕೊಳ್ಳುತ್ತದೆ.
05034080a ಸೇಯಂ ಬುದ್ಧಿಃ ಪರೀತಾ ತೇ ಪುತ್ರಾಣಾಂ ತವ ಭಾರತ|
05034080c ಪಾಂಡವಾನಾಂ ವಿರೋಧೇನ ನ ಚೈನಾಮವಬುಧ್ಯಸೇ||
ಭಾರತ! ಪಾಂಡವರ ವಿರೋಧದಿಂದ ನಿನ್ನ ಪುತ್ರರ ಬುದ್ಧಿಯು ಮಸುಕಾಗಿದೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ.
05034081a ರಾಜಾ ಲಕ್ಷಣಸಂಪನ್ನಸ್ತ್ರೈಲೋಕ್ಯಸ್ಯಾಪಿ ಯೋ ಭವೇತ್|
05034081c ಶಿಷ್ಯಸ್ತೇ ಶಾಸಿತಾ ಸೋಽಸ್ತು ಧೃತರಾಷ್ಟ್ರ ಯುಧಿಷ್ಠಿರಃ||
05034082a ಅತೀವ ಸರ್ವಾನ್ಪುತ್ರಾಂಸ್ತೇ ಭಾಗಧೇಯಪುರಸ್ಕೃತಃ|
ಧೃತರಾಷ್ಟ್ರ! ಮೂರೂ ಲೋಕಗಳ ರಾಜನೂ ಆಗಬಲ್ಲ ಲಕ್ಷಣ ಸಂಪನ್ನನಾದ ಯುಧಿಷ್ಠಿರನು ನಿನ್ನ ಶಿಷ್ಯ. ಅವನಿಗೆ ಆಳಲು ಬಿಡು. ನಿನ್ನ ಪುತ್ರರೆಲ್ಲರಲ್ಲಿ ಅವನು ತುಂಬಾ ಗೌರವಾನ್ವಿತ ಭಾಗಧೇಯನು.
05034082c ತೇಜಸಾ ಪ್ರಜ್ಞಾಯಾ ಚೈವ ಯುಕ್ತೋ ಧರ್ಮಾರ್ಥತತ್ತ್ವವಿತ್||
05034083a ಆನೃಶಂಸ್ಯಾದನುಕ್ರೋಶಾದ್ಯೋಽಸೌ ಧರ್ಮಭೃತಾಂ ವರಃ|
05034083c ಗೌರವಾತ್ತವ ರಾಜೇಂದ್ರ ಬಹೂನ್ ಕ್ಲೇಶಾಂಸ್ತಿತಿಕ್ಷತಿ||
ತೇಜಸ್ಸು ಮತ್ತು ಪ್ರಜ್ಞೆಯಿಂದ ಕೂಡಿದ, ಧರ್ಮಾರ್ಥಗಳ ತತ್ತ್ವವನ್ನು ತಿಳಿದ, ಅನೃಶಂಸನೂ ಅಕ್ರೋಶಾದ್ಯನೂ ಆದ ಈ ಧರ್ಮಭೃತರಲ್ಲಿ ಶ್ರೇಷ್ಠನು ನಿನ್ನ ಗೌರವಕ್ಕಾಗಿ ಬಹಳಷ್ಟು ಕ್ಲೇಶಗಳನ್ನು ಸಹಿಸಿದ್ದಾನೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಚತುಸ್ತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ನಾಲ್ಕನೆಯ ಅಧ್ಯಾಯವು.
