Udyoga Parva: Chapter 20

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೨೦

ದ್ರುಪದ ಪುರೋಹಿತನ ರಾಯಭಾರ

ಪಾಂಡವರು ಹೇಗೆ ಪಿತೃ ಸಂಪತ್ತನ್ನು ಪಡೆಯಲೇ ಇಲ್ಲವೆಂದೂ, ಹಿಂದಾದ ಕಿಲ್ಬಿಷಗಳೆಲ್ಲವನ್ನೂ ಮರೆತು ಅವರು ಕುರುಗಳೊಂದಿಗೆ ಸಾಮದಿಂದಿರಲು ಇಚ್ಛಿಸುತ್ತಾರೆಂದೂ, ಬಲಶಾಲಿಗಳಾಗಿದ್ದರೂ ಅವರು ಕುರುಗಳೊಂದಿಗೆ ಯುದ್ಧಮಾಡುವುದಿಲ್ಲವೆಂದೂ, ಈಗಾಗಲೇ ಏಳು ಅಕ್ಷೋಹಿಣೀ ಸೇನೆಯೂ, ಧನಂಜಯನೇ ಮೊದಲಾದ ಸಹಸ್ರ ಅಕ್ಷೋಹಿಣೀ ಸೇನೆಗಳಿಗೂ ಸಮಾನರಾದ ಯೋಧರು ಯುಧಿಷ್ಠಿರನನ್ನು ಸೇರಿಕೊಂಡಿದ್ದಾರೆಂದೂ ದ್ರುಪದನ ಪುರೋಹಿತನು ಪಾಂಡವರ ದೂತನಾಗಿ ಬಂದು ಕುರುಸಭೆಯಲ್ಲಿ ಹೇಳಿದುದು (೧-೨೧).

05020001 ವೈಶಂಪಾಯನ ಉವಾಚ|

05020001a ಸ ತು ಕೌರವ್ಯಮಾಸಾದ್ಯ ದ್ರುಪದಸ್ಯ ಪುರೋಹಿತಃ|

05020001c ಸತ್ಕೃತೋ ಧೃತರಾಷ್ಟ್ರೇಣ ಭೀಷ್ಮೇಣ ವಿದುರೇಣ ಚ||

ವೈಶಂಪಾಯನನು ಹೇಳಿದನು: “ದ್ರುಪದನ ಪುರೋಹಿತನು ಕೌರವ್ಯನ ಬಳಿಸಾರಿ ಧೃತರಾಷ್ಟ್ರ, ಭೀಷ್ಮ ಮತ್ತು ವಿದುರನಿಂದ ಸತ್ಕೃತನಾದನು.

05020002a ಸರ್ವಂ ಕೌಶಲ್ಯಮುಕ್ತ್ವಾದೌ ಪೃಷ್ಟ್ವಾ ಚೈವಮನಾಮಯಂ|

05020002c ಸರ್ವಸೇನಾಪ್ರಣೇತೄಣಾಂ ಮಧ್ಯೇ ವಾಕ್ಯಮುವಾಚ ಹ||

ಎಲ್ಲರ ಕೌಶಲ್ಯದ ಕುರಿತೂ ಹೇಳಿ, ಅವರ ಕೌಶಲ್ಯದ ಕುರಿತೂ ಕೇಳಿ ಅವನು ಸರ್ವಸೇನಾಪ್ರಣೀತರ ಮಧ್ಯೆ ಈ ಮಾತುಗಳನ್ನಾಡಿದನು:

05020003a ಸರ್ವೈರ್ಭವದ್ಭಿರ್ವಿದಿತೋ ರಾಜಧರ್ಮಃ ಸನಾತನಃ|

05020003c ವಾಕ್ಯೋಪಾದಾನಹೇತೋಸ್ತು ವಕ್ಷ್ಯಾಮಿ ವಿದಿತೇ ಸತಿ||

“ನೀವೆಲ್ಲರೂ ಸನಾತನ ರಾಜಧರ್ಮವನ್ನು ತಿಳಿದಿದ್ದೀರಿ. ತಿಳಿದಿದ್ದರೂ ನನ್ನ ಮಾತಿನ ಪೀಠಿಕೆಯಾಗಿ ಹೇಳುತ್ತೇನೆ.

05020004a ಧೃತರಾಷ್ಟ್ರಶ್ಚ ಪಾಂಡುಶ್ಚ ಸುತಾವೇಕಸ್ಯ ವಿಶ್ರುತೌ|

05020004c ತಯೋಃ ಸಮಾನಂ ದ್ರವಿಣಂ ಪೈತೃಕಂ ನಾತ್ರ ಸಂಶಯಃ||

ಧೃತರಾಷ್ಟ್ರ ಮತ್ತು ಪಾಂಡು ಇಬ್ಬರೂ ಒಬ್ಬನೇ ತಂದೆಯ ಮಕ್ಕಳೆಂದು ವಿಶ್ರುತರು. ಪಿತೃ ಸಂಪತ್ತಿಗೆ ಅವರಿಬ್ಬರೂ ಸಮಾನರು ಎನ್ನುವುದರಲ್ಲಿ ಸಂಶಯವಿಲ್ಲ.

05020005a ಧೃತರಾಷ್ಟ್ರಸ್ಯ ಯೇ ಪುತ್ರಾಸ್ತೇ ಪ್ರಾಪ್ತಾಃ ಪೈತೃಕಂ ವಸು|

05020005c ಪಾಂಡುಪುತ್ರಾಃ ಕಥಂ ನಾಮ ನ ಪ್ರಾಪ್ತಾಃ ಪೈತೃಕಂ ವಸು||

ಧೃತರಾಷ್ಟ್ರನ ಪುತ್ರರು ಪಿತೃಸಂಪತ್ತನ್ನು ಪಡೆದಿದ್ದಾರೆ. ಪಾಂಡುಪುತ್ರರು ಹೇಗೆ ಈ ಪಿತೃ ಸಂಪತ್ತನ್ನು ಪಡೆಯಲೇ ಇಲ್ಲ?

05020006a ಏವಂ ಗತೇ ಪಾಂಡವೇಯೈರ್ವಿದಿತಂ ವಃ ಪುರಾ ಯಥಾ|

05020006c ನ ಪ್ರಾಪ್ತಂ ಪೈತೃಕಂ ದ್ರವ್ಯಂ ಧಾರ್ತರಾಷ್ಟ್ರೇಣ ಸಂವೃತಂ||

ಧಾರ್ತರಾಷ್ಟ್ರರು ತಮ್ಮದನ್ನಾಗಿಸಿಕೊಂಡ ಪಿತೃಸಂಪತ್ತನ್ನು ಹಿಂದೆ ಹೇಗೆ ಪಾಂಡವೇಯರು ಪಡೆಯಲಿಲ್ಲ ಎನ್ನುವುದು ನಿಮಗೆ ತಿಳಿದೇ ಇದೆ.

05020007a ಪ್ರಾಣಾಂತಿಕೈರಪ್ಯುಪಾಯೈಃ ಪ್ರಯತದ್ಭಿರನೇಕಶಃ|

05020007c ಶೇಷವಂತೋ ನ ಶಕಿತಾ ನಯಿತುಂ ಯಮಸಾದನಂ||

ಅನೇಕ ಉಪಾಯಗಳಿಂದ ಅವರ ಪ್ರಾಣಗಳನ್ನು ಕೊನೆಗೊಳಿಸಲು ಪ್ರಯತ್ನಿಸಿದರೂ ಶೇಷವಂತರಾದ ಅವರನ್ನು ಯಮಸಾದನಕ್ಕೆ ಕಳುಹಿಸಲು ಸಾಧ್ಯವಾಗಲಿಲ್ಲ.

05020008a ಪುನಶ್ಚ ವರ್ಧಿತಂ ರಾಜ್ಯಂ ಸ್ವಬಲೇನ ಮಹಾತ್ಮಭಿಃ|

05020008c ಚದ್ಮನಾಪಹೃತಂ ಕ್ಷುದ್ರೈರ್ಧಾರ್ತರಾಷ್ಟ್ರೈಃ ಸಸೌಬಲೈಃ||

ಆ ಮಹಾತ್ಮರು ಸ್ವಬಲದಿಂದ ಅಭಿವೃದ್ಧಿಗೊಳಿಸಿದ ರಾಜ್ಯವನ್ನು ಕ್ಷುದ್ರ ಧಾರ್ತರಾಷ್ಟ್ರರು ಸೌಬಲನೊಂದಿಗೆ ಪುನಃ ಮೋಸದಿಂದ ಅಪಹರಿಸಿದರು.

05020009a ತದಪ್ಯನುಮತಂ ಕರ್ಮ ತಥಾಯುಕ್ತಮನೇನ ವೈ|

05020009c ವಾಸಿತಾಶ್ಚ ಮಹಾರಣ್ಯೇ ವರ್ಷಾಣೀಹ ತ್ರಯೋದಶ||

ಯಾವಾಗಿನಂತೆ ಆ ಕೆಲಸಕ್ಕೆ ಕೂಡ ಅನುಮತಿಯು ದೊರೆಯಿತು. ಹದಿಮೂರು ವರ್ಷಗಳು ಮಹಾರಣ್ಯದಲ್ಲಿ ವಾಸಿಸಲು ಕಳುಹಿಸಲಾಯಿತು.

05020010a ಸಭಾಯಾಂ ಕ್ಲೇಶಿತೈರ್ವೀರೈಃ ಸಹಭಾರ್ಯೈಸ್ತಥಾ ಭೃಶಂ|

05020010c ಅರಣ್ಯೇ ವಿವಿಧಾಃ ಕ್ಲೇಶಾಃ ಸಂಪ್ರಾಪ್ತಾಸ್ತೈಃ ಸುದಾರುಣಾಃ||

ಭಾರ್ಯೆಯೊಂದಿಗೆ ಆ ವೀರರು ಸಭೆಯಲ್ಲಿ ತುಂಬಾ ಕ್ಲೇಶಗಳನ್ನು ಅನುಭವಿಸಿದುದಲ್ಲದೇ ಅರಣ್ಯದಲ್ಲಿಯೂ ವಿವಿಧ ಸುದಾರುಣ ಕ್ಲೇಶಗಳನ್ನು ಹೊಂದಿದರು.

05020011a ತಥಾ ವಿರಾಟನಗರೇ ಯೋನ್ಯಂತರಗತೈರಿವ|

05020011c ಪ್ರಾಪ್ತಃ ಪರಮಸಂಕ್ಲೇಶೋ ಯಥಾ ಪಾಪೈರ್ಮಹಾತ್ಮಭಿಃ||

ಪಾಪಿಗಳು ಕೀಳು ಯೋನಿಗಳನ್ನು ಸೇರಿ ಪಡೆಯುವಂತೆ ಆ ಮಹಾತ್ಮರು ವಿರಾಟನಗರದಲ್ಲಿ ಪರಮ ಸಂಕ್ಲೇಶಗಳನ್ನು ಹೊಂದಿದರು.

05020012a ತೇ ಸರ್ವೇ ಪೃಷ್ಠತಃ ಕೃತ್ವಾ ತತ್ಸರ್ವಂ ಪೂರ್ವಕಿಲ್ಬಿಷಂ|

05020012c ಸಾಮೈವ ಕುರುಭಿಃ ಸಾರ್ಧಮಿಚ್ಚಂತಿ ಕುರುಪುಂಗವಾಃ||

ಹಿಂದಾದ ಈ ಎಲ್ಲ ಕಿಲ್ಬಿಷಗಳನ್ನೂ ಹಿಂದೆ ಸರಿಸಿ ಆ ಕುರುಪುಂಗವರು ಕುರುಗಳೊಂದಿಗೆ ಸಾಮದಿಂದ ಜೊತೆಯಿರಲು ಇಚ್ಛಿಸುತ್ತಾರೆ.

05020013a ತೇಷಾಂ ಚ ವೃತ್ತಮಾಜ್ಞಾಯ ವೃತ್ತಂ ದುರ್ಯೋಧನಸ್ಯ ಚ|

05020013c ಅನುನೇತುಮಿಹಾರ್ಹಂತಿ ಧೃತರಾಷ್ಟ್ರಂ ಸುಹೃಜ್ಜನಾಃ||

ಅವರ ನಡತೆಯನ್ನೂ ದುರ್ಯೋಧನನ ನಡತೆಯನ್ನೂ ತಿಳಿದುಕೊಂಡು ಧೃತರಾಷ್ಟ್ರನ ಸುಹೃಜ್ಜನರು ಶಾಂತಿಯನ್ನು ತರಬೇಕು.

05020014a ನ ಹಿ ತೇ ವಿಗ್ರಹಂ ವೀರಾಃ ಕುರ್ವಂತಿ ಕುರುಭಿಃ ಸಹ|

05020014c ಅವಿನಾಶೇನ ಲೋಕಸ್ಯ ಕಾಂಕ್ಷಂತೇ ಪಾಂಡವಾಃ ಸ್ವಕಂ||

ಆ ವೀರರು ಕುರುಗಳೊಂದಿಗೆ ಯುದ್ಧವನ್ನು ಮಾಡುವುದಿಲ್ಲ. ಸ್ವಯಂ ಪಾಂಡವರು ಲೋಕದ ಅವಿನಾಶವನ್ನು ಬಯಸುವುದಿಲ್ಲ.

05020015a ಯಶ್ಚಾಪಿ ಧಾರ್ತರಾಷ್ಟ್ರಸ್ಯ ಹೇತುಃ ಸ್ಯಾದ್ವಿಗ್ರಹಂ ಪ್ರತಿ|

05020015c ಸ ಚ ಹೇತುರ್ನ ಮಂತವ್ಯೋ ಬಲೀಯಾಂಸಸ್ತಥಾ ಹಿ ತೇ||

ಧಾರ್ತರಾಷ್ಟ್ರರು ಯುದ್ಧದ ಪರವಾಗಿ ಏನಾದರೂ ಕಾರಣವನ್ನಿತ್ತರೂ ಅದು ಸರಿಯಾದ ಕಾರಣವೆನಿಸಿಕೊಳ್ಳುವುದಿಲ್ಲ. ಅವರು ಬಲಶಾಲಿಗಳಾಗಿದ್ದಾರಲ್ಲವೇ?

05020016a ಅಕ್ಷೌಹಿಣ್ಯೋ ಹಿ ಸಪ್ತೈವ ಧರ್ಮಪುತ್ರಸ್ಯ ಸಂಗತಾಃ|

05020016c ಯುಯುತ್ಸಮಾನಾಃ ಕುರುಭಿಃ ಪ್ರತೀಕ್ಷಂತೇಽಸ್ಯ ಶಾಸನಂ||

ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾಗಿ ಅವನ ಶಾಸನವನ್ನು ಪ್ರತೀಕ್ಷಿಸುತ್ತಾ ಏಳು ಅಕ್ಷೌಹಿಣಿಗಳು ಧರ್ಮಪುತ್ರನನ್ನು ಸೇರಿಯಾಗಿವೆ.

05020017a ಅಪರೇ ಪುರುಷವ್ಯಾಘ್ರಾಃ ಸಹಸ್ರಾಕ್ಷೌಹಿಣೀಸಮಾಃ|

05020017c ಸಾತ್ಯಕಿರ್ಭೀಮಸೇನಶ್ಚ ಯಮೌ ಚ ಸುಮಹಾಬಲೌ||

ಸಹಸ್ರ ಅಕ್ಷೌಹಿಣಿಗೆ ಸಮನಾದ ಇತರ ಪುರುಷವ್ಯಾಘ್ರರಿದ್ದಾರೆ: ಸಾತ್ಯಕಿ, ಭೀಮಸೇನ ಮತ್ತು ಸುಮಹಾಬಲ ಯಮಳರೀರ್ವರು.

05020018a ಏಕಾದಶೈತಾಃ ಪೃತನಾ ಏಕತಶ್ಚ ಸಮಾಗತಾಃ|

05020018c ಏಕತಶ್ಚ ಮಹಾಬಾಹುರ್ಬಹುರೂಪೋ ಧನಂಜಯಃ||

ಹನ್ನೊಂದು ಅಕ್ಷೌಹಿಣಿಗಳು ಒಂದು ಕಡೆ ಸಮಾಗತರಾಗಿದ್ದಾರೆನ್ನುವುದು ಸತ್ಯ. ಆದರೆ ಇನ್ನೊಂದುಕಡೆ ಬಹುರೂಪೀ ಮಹಾಬಾಹು ಧನಂಜಯನಿದ್ದಾನೆ.

05020019a ಯಥಾ ಕಿರೀಟೀ ಸೇನಾಭ್ಯಃ ಸರ್ವಾಭ್ಯೋ ವ್ಯತಿರಿಚ್ಯತೇ|

05020019c ಏವಮೇವ ಮಹಾಬಾಹುರ್ವಾಸುದೇವೋ ಮಹಾದ್ಯುತಿಃ||

ಹೇಗೆ ಕಿರೀಟಿಯು ಈ ಎಲ್ಲ ಸೇನೆಗಳನ್ನೂ ಮೀರುತ್ತಾನೋ ಹಾಗೆಯೇ ಮಹಾದ್ಯುತಿ ಮಹಾಬಾಹು ವಾಸುದೇವನೂ ಇದ್ದಾನೆ.

05020020a ಬಹುಲತ್ವಂ ಚ ಸೇನಾನಾಂ ವಿಕ್ರಮಂ ಚ ಕಿರೀಟಿನಃ|

05020020c ಬುದ್ಧಿಮತ್ತಾಂ ಚ ಕೃಷ್ಣಸ್ಯ ಬುದ್ಧ್ವಾ ಯುಧ್ಯೇತ ಕೋ ನರಃ||

ಸೇನೆಗಳ ಬಹುಲತ್ವದ, ಕಿರೀಟಿಯ ವಿಕ್ರಮದ, ಮತ್ತು ಕೃಷ್ಣನ ಬುದ್ಧಿವಂತಿಕೆಯ ವಿರುದ್ಧ ಯಾವ ನರನು ಯುದ್ಧ ಮಾಡಿಯಾನು?

05020021a ತೇ ಭವಂತೋ ಯಥಾಧರ್ಮಂ ಯಥಾಸಮಯಮೇವ ಚ|

05020021c ಪ್ರಯಚ್ಚಂತು ಪ್ರದಾತವ್ಯಂ ಮಾ ವಃ ಕಾಲೋಽತ್ಯಗಾದಯಂ||

ಆದುದರಿಂದ ಯಥಾಧರ್ಮವಾಗಿ, ಒಪ್ಪಂದದಂತೆ ಕೊಡಬೇಕಾದುದನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಈ ಅವಕಾಶವು ತಪ್ಪಿಹೋಗದಂತೆ ಮಾಡಿ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಯಾನೇ ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಯಾನದಲ್ಲಿ ಇಪ್ಪತ್ತನೆಯ ಅಧ್ಯಾಯವು.

Related image

Comments are closed.