Udyoga Parva: Chapter 189

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೯

ಅಂಬೆಯು ದ್ರುಪದನಲ್ಲಿ ಮಗಳಾಗಿ ಹುಟ್ಟಿದುದು; ಶಿಖಂಡಿಯೆಂಬ ಮಗನಾಗಿ ಪಾಲನೆಗೊಂಡಿದುದು

ಭೀಷ್ಮನಿಗೆ ಪ್ರತೀಕಾರವನ್ನುಂಟುಮಾಡುವವನು ಬೇಕೆಂದು ದ್ರುಪದನು ಶಿವನಲ್ಲಿ ಬೇಡಿಕೊಳ್ಳಲು ಶಿವನು “ನಿನಗೆ ಹೆಣ್ಣು ಮತ್ತು ಗಂಡಾಗಿರುವುದು ಆಗುತ್ತದೆ” ಎಂದು ಹೇಳಿದುದು (೧-೬). ದ್ರುಪದನ ಪತ್ನಿಯು ತನಗೆ ಮಗಳು ಹುಟ್ಟಿದ್ದರೂ ಗಂಡು ಮಗನು ಹುಟ್ಟಿದ್ದಾನೆ ಎಂದು ಗಂಡನಿಗೆ ಸುಳ್ಳುಹೇಳಿ ಅವಳಿಗೆ ಶಿಖಂಡಿಯೆಂಬ ಹೆಸರನ್ನಿತ್ತು ಗಂಡುಮಗುವಿನಂತೆಯೇ ಬೆಳೆಸಿದುದು (೭-೧೮).

05189001 ದುರ್ಯೋಧನ ಉವಾಚ|

05189001a ಕಥಂ ಶಿಖಂಡೀ ಗಾಂಗೇಯ ಕನ್ಯಾ ಭೂತ್ವಾ ಸತೀ ತದಾ|

05189001c ಪುರುಷೋಽಭವದ್ಯುಧಿ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ||

ದುರ್ಯೋಧನನು ಹೇಳಿದನು: “ಗಾಂಗೇಯ! ಪಿತಾಮಹ! ಯೋಧಶ್ರೇಷ್ಠ! ಮೊದಲು ಕನ್ಯೆಯಾಗಿದ್ದ ಶಿಖಂಡಿಯು ನಂತರ ಹೇಗೆ ಪುರುಷನಾದನೆನ್ನುವುದನ್ನು ನನಗೆ ಹೇಳು.”

05189002 ಭೀಷ್ಮ ಉವಾಚ|

05189002a ಭಾರ್ಯಾ ತು ತಸ್ಯ ರಾಜೇಂದ್ರ ದ್ರುಪದಸ್ಯ ಮಹೀಪತೇಃ|

05189002c ಮಹಿಷೀ ದಯಿತಾ ಹ್ಯಾಸೀದಪುತ್ರಾ ಚ ವಿಶಾಂ ಪತೇ||

ಭೀಷ್ಮನು ಹೇಳಿದನು: “ರಾಜೇಂದ್ರ! ವಿಶಾಂಪತೇ! ಮಹೀಪತಿ ದ್ರುಪದನ ಪ್ರಿಯ ಮಹಿಷಿಯು ಅಪುತ್ರವತಿಯಾಗಿದ್ದಳು.

05189003a ಏತಸ್ಮಿನ್ನೇವ ಕಾಲೇ ತು ದ್ರುಪದೋ ವೈ ಮಹೀಪತಿಃ|

05189003c ಅಪತ್ಯಾರ್ಥಂ ಮಹಾರಾಜ ತೋಷಯಾಮಾಸ ಶಂಕರಂ||

ಮಹಾರಾಜ! ಇದೇ ಸಮಯದಲ್ಲಿ ಮಹೀಪತಿ ದ್ರುಪದನು ಮಕ್ಕಳಿಗೋಸ್ಕರ ಶಂಕರನನ್ನು ತೃಪ್ತಿಪಡಿಸಿದನು.

05189004a ಅಸ್ಮದ್ವಧಾರ್ಥಂ ನಿಶ್ಚಿತ್ಯ ತಪೋ ಘೋರಂ ಸಮಾಸ್ಥಿತಃ|

05189004c ಲೇಭೇ ಕನ್ಯಾಂ ಮಹಾದೇವಾತ್ಪುತ್ರೋ ಮೇ ಸ್ಯಾದಿತಿ ಬ್ರುವನ್||

ನನ್ನ ವಧೆಗೋಸ್ಕರ[1] ನಿಶ್ಚಯಿಸಿ ಘೋರ ತಪಸ್ಸಿನಲ್ಲಿ ನಿರತನಾದನು. “ನನಗೆ ಪುತ್ರನಾಗಲಿ!” ಎಂದು ಕೇಳಿಕೊಂಡು ಅವನು ಮಹಾದೇವನಿಂದ ಕನ್ಯೆಯನ್ನು ಪಡೆದನು.

05189005a ಭಗವನ್ಪುತ್ರಮಿಚ್ಚಾಮಿ ಭೀಷ್ಮಂ ಪ್ರತಿಚಿಕೀರ್ಷಯಾ|

05189005c ಇತ್ಯುಕ್ತೋ ದೇವದೇವೇನ ಸ್ತ್ರೀಪುಮಾಂಸ್ತೇ ಭವಿಷ್ಯತಿ||

“ಭಗವನ್! ಭೀಷ್ಮನಿಗೆ ಪ್ರತೀಕಾರವನ್ನುಂಟುಮಾಡುವ ಮಗನನ್ನು ಇಚ್ಛಿಸುತ್ತೇನೆ.” ಎಂದು ಕೇಳಿಕೊಳ್ಳಲು ದೇವದೇವನು “ನಿನಗೆ ಹೆಣ್ಣು ಮತ್ತು ಗಂಡಾಗಿರುವುದು ಆಗುತ್ತದೆ.

05189006a ನಿವರ್ತಸ್ವ ಮಹೀಪಾಲ ನೈತಜ್ಜಾತ್ವನ್ಯಥಾ ಭವೇತ್|

05189006c ಸ ತು ಗತ್ವಾ ಚ ನಗರಂ ಭಾರ್ಯಾಮಿದಮುವಾಚ ಹ||

ಮಹೀಪಾಲ! ಹಿಂದಿರುಗು! ಇದಕ್ಕಿಂತ ಬೇರೆಯಾದುದು ಆಗುವುದಿಲ್ಲ.” ಅವನು ನಗರಕ್ಕೆ ಹೋಗಿ ಇದನ್ನು ಪತ್ನಿಗೆ ಹೇಳಿದನು:

05189007a ಕೃತೋ ಯತ್ನೋ ಮಯಾ ದೇವಿ ಪುತ್ರಾರ್ಥೇ ತಪಸಾ ಮಹಾನ್|

05189007c ಕನ್ಯಾ ಭೂತ್ವಾ ಪುಮಾನ್ಭಾವೀ ಇತಿ ಚೋಕ್ತೋಽಸ್ಮಿ ಶಂಭುನಾ||

“ದೇವೀ! ಪುತ್ರನಿಗಾಗಿ ಮಹಾ ತಪಸ್ಸನ್ನಾಚರಿಸಿ ಪ್ರಯತ್ನಿಸಿದೆ. ಕನ್ಯೆಯಾಗಿ ಮುಂದೆ ಪುರುಷನಾಗುತ್ತಾನೆಂದು ಶಂಭುವು ಹೇಳಿದ್ದಾನೆ.

05189008a ಪುನಃ ಪುನರ್ಯಾಚ್ಯಮಾನೋ ದಿಷ್ಟಮಿತ್ಯಬ್ರವೀಚ್ಚಿವಃ|

05189008c ನ ತದನ್ಯದ್ಧಿ ಭವಿತಾ ಭವಿತವ್ಯಂ ಹಿ ತತ್ತಥಾ||

ಪುನಃ ಪುನಃ ಬೇಡಿಕೊಳ್ಳಲು ದೇವ ಶಿವನು ಆಗಲಿರುವುದಕ್ಕಿಂತ ಬೇರೆಯಾಗಿ ಆಗುವುದಿಲ್ಲ ಎಂದನು.”

05189009a ತತಃ ಸಾ ನಿಯತಾ ಭೂತ್ವಾ ಋತುಕಾಲೇ ಮನಸ್ವಿನೀ|

05189009c ಪತ್ನೀ ದ್ರುಪದರಾಜಸ್ಯ ದ್ರುಪದಂ ಸಂವಿವೇಶ ಹ||

ಆಗ ಆ ಮನಸ್ವಿನೀ, ದ್ರುಪದರಾಜನ ಪತ್ನಿಯು ಋತುಕಾಲದಲ್ಲಿ ನಿಯತಳಾಗಿರಲು ದ್ರುಪದನು ಅವಳನ್ನು ಸೇರಿದನು.

05189010a ಲೇಭೇ ಗರ್ಭಂ ಯಥಾಕಾಲಂ ವಿಧಿದೃಷ್ಟೇನ ಹೇತುನಾ|

05189010c ಪಾರ್ಷತಾತ್ಸಾ ಮಹೀಪಾಲ ಯಥಾ ಮಾಂ ನಾರದೋಽಬ್ರವೀತ್||

ಆಗ ಯಥಾಕಾಲದಲ್ಲಿ ವಿಧಿಯು ಕಂಡ ಕಾರಣದಿಂದ ಪಾರ್ಷತನು ಅವಳಿಗೆ ಗರ್ಭವನ್ನು ನೀಡಿದನೆಂದು ನನಗೆ ನಾರದನು[2] ಹೇಳಿದನು.

05189011a ತತೋ ದಧಾರ ತಂ ಗರ್ಭಂ ದೇವೀ ರಾಜೀವಲೋಚನಾ|

05189011c ತಾಂ ಸ ರಾಜಾ ಪ್ರಿಯಾಂ ಭಾರ್ಯಾಂ ದ್ರುಪದಃ ಕುರುನಂದನ|

05189011e ಪುತ್ರಸ್ನೇಹಾನ್ಮಹಾಬಾಹುಃ ಸುಖಂ ಪರ್ಯಚರತ್ತದಾ||

ಕುರುನಂದನ! ರಾಜಾ! ದ್ರುಪದನ ಪ್ರಿಯ ಭಾರ್ಯೆ ಆ ದೇವಿ ರಾಜೀವಲೋಚನೆಯು ಗರ್ಭವನ್ನು ಹೊತ್ತಳು. ಪುತ್ರಸೇಹದಿಂದ ಆ ಮಹಾಬಾಹುವು ಅವಳ ಸುಖಕ್ಕಾಗಿ ಉಪಚಾರ ಮಾಡಿದನು.

05189012a ಅಪುತ್ರಸ್ಯ ತತೋ ರಾಜ್ಞೋ ದ್ರುಪದಸ್ಯ ಮಹೀಪತೇಃ|

05189012c ಕನ್ಯಾಂ ಪ್ರವರರೂಪಾಂ ತಾಂ ಪ್ರಾಜಾಯತ ನರಾಧಿಪ||

ನರಾಧಿಪ! ಅಪುತ್ರನಾಗಿದ್ದ ರಾಜ ದೃಪದ ಮಹೀಪತಿಗೆ ಅವಳು ಸುಂದರ ಕನ್ಯೆಗೆ ಜನ್ಮವಿತ್ತಳು.

05189013a ಅಪುತ್ರಸ್ಯ ತು ರಾಜ್ಞಾಃ ಸಾ ದ್ರುಪದಸ್ಯ ಯಶಸ್ವಿನೀ|

05189013c ಖ್ಯಾಪಯಾಮಾಸ ರಾಜೇಂದ್ರ ಪುತ್ರೋ ಜಾತೋ ಮಮೇತಿ ವೈ||

ರಾಜೇಂದ್ರ! ಆದರೆ ದ್ರುಪದನ ಯಶಸ್ವಿನೀ ಪತ್ನಿಯು ಅಪುತ್ರನಾಗಿದ್ದ ಆ ರಾಜನಿಗೆ “ನನಗೆ ಪುತ್ರನು ಹುಟ್ಟಿದ್ದಾನೆ” ಎಂದು ಹೇಳಿದಳು.

05189014a ತತಃ ಸ ರಾಜಾ ದ್ರುಪದಃ ಪ್ರಚ್ಚನ್ನಾಯಾ ನರಾಧಿಪ|

05189014c ಪುತ್ರವತ್ಪುತ್ರಕಾರ್ಯಾಣಿ ಸರ್ವಾಣಿ ಸಮಕಾರಯತ್||

ನರಾಧಿಪ! ಆಗ ರಾಜ ದ್ರುಪದನು ಆ ಮುಚ್ಚಿಟ್ಟ ಮಗಳಿಗೆ ಪುತ್ರನಂತೆ ಎಲ್ಲ ಪುತ್ರಕರ್ಮಗಳನ್ನೂ ನೆರವೇರಿಸಿದನು.

05189015a ರಕ್ಷಣಂ ಚೈವ ಮಂತ್ರಸ್ಯ ಮಹಿಷೀ ದ್ರುಪದಸ್ಯ ಸಾ|

05189015c ಚಕಾರ ಸರ್ವಯತ್ನೇನ ಬ್ರುವಾಣಾ ಪುತ್ರ ಇತ್ಯುತ|

05189015e ನ ಹಿ ತಾಂ ವೇದ ನಗರೇ ಕಶ್ಚಿದನ್ಯತ್ರ ಪಾರ್ಷತಾತ್||

ಇವನು ಮಗನೆಂದು ಹೇಳುತ್ತಾ ದ್ರುಪದನ ಮಹಿಷಿಯು ಸರ್ವಯತ್ನದಿಂದ ಆ ಸುಳ್ಳನ್ನು ರಕ್ಷಿಸಿದಳು. ಪಾರ್ಷತಳನ್ನು ಬಿಟ್ಟು ಬೇರೆ ಯಾರಿಗೂ ಇಡೀ ನಗರದಲ್ಲಿ ಅದು ಗೊತ್ತಿರಲಿಲ್ಲ.

05189016a ಶ್ರದ್ದಧಾನೋ ಹಿ ತದ್ವಾಕ್ಯಂ ದೇವಸ್ಯಾದ್ಭುತತೇಜಸಃ|

05189016c ಚಾದಯಾಮಾಸ ತಾಂ ಕನ್ಯಾಂ ಪುಮಾನಿತಿ ಚ ಸೋಽಬ್ರವೀತ್||

ಅವಳ ಮಾತಿನಲ್ಲಿ ಶ್ರದ್ಧೆಯನ್ನಿಟ್ಟ ಆ ದೇವ ಅದ್ಭುತತೇಜಸನು ಆ ಕನ್ಯೆಯನ್ನು ಗಂಡೆಂದೇ ಹೇಳಿಕೊಂಡು ಬಂದನು.

05189017a ಜಾತಕರ್ಮಾಣಿ ಸರ್ವಾಣಿ ಕಾರಯಾಮಾಸ ಪಾರ್ಥಿವಃ|

05189017c ಪುಂವದ್ವಿಧಾನಯುಕ್ತಾನಿ ಶಿಖಂಡೀತಿ ಚ ತಾಂ ವಿದುಃ||

ಪಾರ್ಥಿವನು ಗಂಡು ಮಗುವಿಗೆ ಮಾಡಬೇಕಾದ ಜಾತಕರ್ಮಗಳೆಲ್ಲವನ್ನೂ ಅವಳಿಗೆ ಮಾಡಿಸಿ ಶಿಖಂಡೀ ಎಂಬ ಹೆಸರನ್ನಿತ್ತನು.

05189018a ಅಹಮೇಕಸ್ತು ಚಾರೇಣ ವಚನಾನ್ನಾರದಸ್ಯ ಚ|

05189018c ಜ್ಞಾತವಾನ್ದೇವವಾಕ್ಯೇನ ಅಂಬಾಯಾಸ್ತಪಸಾ ತಥಾ||

ನಾನೊಬ್ಬನೇ ಚಾರರ ಮತ್ತು ನಾರದನ ಮಾತುಗಳಿಂದ, ದೇವವಾಕ್ಯದಿಂದ ಮತ್ತು ಅಂಬೆಯ ತಪಸ್ಸಿನಿಂದ ಸತ್ಯವನ್ನು ತಿಳಿದಿದ್ದೆನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಶಿಖಂಡ್ಯುತ್ಪತ್ತೌ ಏಕೋನನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಶಿಖಂಡ್ಯುತ್ಪತ್ತಿಯಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.

Image result for indian motifs

[1] ದ್ರುಪದನು ಏಕೆ ಭೀಷ್ಮನ ವಧೆಯನ್ನು ಬಯಸಿದ್ದ ಎನ್ನುವುದು ಅರ್ಥವಾಗುತ್ತಿಲ್ಲ.

[2] ಭೀಷ್ಮನ ಕಥೆಯಲ್ಲಿ ನಾರದನ ಪಾತ್ರವು ದೊಡ್ಡದಾಗಿದೆ.

Comments are closed.