Udyoga Parva: Chapter 187

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೭

ಅಂಬೆಯ ತಪಸ್ಸು

ತನ್ನಿಂದ ಭೀಷ್ಮನನ್ನು ಸೋಲಿಸಲಿಕ್ಕಾಗಲಿಲ್ಲವೆಂದು ಪರಶುರಾಮನು ಅಂಬೆಗೆ ಹೇಳಲು “ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ” ಎಂದು ಹೇಳಿ ಅಂಬೆಯು ತೀವ್ರ ತಪಸ್ಸನ್ನಾಚರಿಸಿದ್ದುದು (೧-೪೦).

05187001 ರಾಮ ಉವಾಚ|

05187001a ಪ್ರತ್ಯಕ್ಷಮೇತಲ್ಲೋಕಾನಾಂ ಸರ್ವೇಷಾಮೇವ ಭಾಮಿನಿ|

05187001c ಯಥಾ ಮಯಾ ಪರಂ ಶಕ್ತ್ಯಾ ಕೃತಂ ವೈ ಪೌರುಷಂ ಮಹತ್||

ರಾಮನು ಹೇಳಿದನು: “ಭಾಮಿನೀ! ಈ ಲೋಕಗಳೆಲ್ಲವುಗಳ ಮುಂದೆ ನನ್ನಲ್ಲಿದ್ದ ಪರಮ ಶಕ್ತಿಯನ್ನುಪಯೋಗಿಸಿ ಮಹಾ ಪೌರುಷವನ್ನು ತೋರಿಸಿದ್ದೇನೆ.

05187002a ನ ಚೈವ ಯುಧಿ ಶಕ್ನೋಮಿ ಭೀಷ್ಮಂ ಶಸ್ತ್ರಭೃತಾಂ ವರಂ|

05187002c ವಿಶೇಷಯಿತುಮತ್ಯರ್ಥಮುತ್ತಮಾಸ್ತ್ರಾಣಿ ದರ್ಶಯನ್||

ನನ್ನ ಉತ್ತಮ ಅಸ್ತ್ರಗಳನ್ನು ತೋರಿಸಿಯೂ ನಾನು ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಭೀಷ್ಮನನ್ನು ಯುದ್ಧದಲ್ಲಿ ಮೀರಿಸಲು ಶಕ್ಯನಾಗಲಿಲ್ಲ.

05187003a ಏಷಾ ಮೇ ಪರಮಾ ಶಕ್ತಿರೇತನ್ಮೇ ಪರಮಂ ಬಲಂ|

05187003c ಯಥೇಷ್ಟಂ ಗಮ್ಯತಾಂ ಭದ್ರೇ ಕಿಮನ್ಯದ್ವಾ ಕರೋಮಿ ತೇ||

ಇದು ನನ್ನ ಶಕ್ತಿಯ ಮಿತಿ. ಇದು ನನ್ನ ಬಲದ ಮಿತಿ. ಭದ್ರೇ! ನಿನಗಿಷ್ಟವಾದಲ್ಲಿಗೆ ಹೋಗುವವಳಾಗು. ಅಥವಾ ನಿನಗೆ ಬೇರೆ ಏನಾದರೂ ಮಾಡಲೇ?

05187004a ಭೀಷ್ಮಮೇವ ಪ್ರಪದ್ಯಸ್ವ ನ ತೇಽನ್ಯಾ ವಿದ್ಯತೇ ಗತಿಃ|

05187004c ನಿರ್ಜಿತೋ ಹ್ಯಸ್ಮಿ ಭೀಷ್ಮೇಣ ಮಹಾಸ್ತ್ರಾಣಿ ಪ್ರಮುಂಚತಾ||

ಭೀಷ್ಮನನ್ನೇ ಶರಣು ಹೋಗು. ನಿನಗೆ ಬೇರೆ ಗತಿಯೇ ಇಲ್ಲವೆನಿಸುತ್ತದೆ. ಏಕೆಂದರೆ ಮಹಾಸ್ತ್ರಗಳನ್ನು ಪ್ರಯೋಗಿಸಿ ಭೀಷ್ಮನು ನನ್ನನ್ನು ಗೆದ್ದಿದ್ದಾನೆ.””

05187005 ಭೀಷ್ಮ ಉವಾಚ|

05187005a ಏವಮುಕ್ತ್ವಾ ತತೋ ರಾಮೋ ವಿನಿಃಶ್ವಸ್ಯ ಮಹಾಮನಾಃ|

05187005c ತೂಷ್ಣೀಮಾಸೀತ್ತದಾ ಕನ್ಯಾ ಪ್ರೋವಾಚ ಭೃಗುನಂದನಂ||

ಭೀಷ್ಮನು ಹೇಳಿದನು: “ಹೀಗೆ ಹೇಳಿ ಮಹಾಮನಸ್ವಿ ರಾಮನು ನಿಟ್ಟುಸಿರು ಬಿಡುತ್ತಾ ಸುಮ್ಮನಾದನು. ಆಗ ಕನ್ಯೆಯು ಭೃಗುನಂದನನಿಗೆ ಹೇಳಿದಳು:

05187006a ಭಗವನ್ನೇವಮೇವೈತದ್ಯಥಾಹ ಭಗವಾಂಸ್ತಥಾ|

05187006c ಅಜೇಯೋ ಯುಧಿ ಭೀಷ್ಮೋಽಯಮಪಿ ದೇವೈರುದಾರಧೀಃ||

“ಭಗವನ್! ಇನ್ನು ನೀನು ಹೇಳಿದಂತೆಯೇ! ಈ ಉದಾರಧೀ ಭೀಷ್ಮನು ಯುದ್ಧದಲ್ಲಿ ದೇವತೆಗಳಿಗೂ ಅಜೇಯನು.

05187007a ಯಥಾಶಕ್ತಿ ಯಥೋತ್ಸಾಹಂ ಮಮ ಕಾರ್ಯಂ ಕೃತಂ ತ್ವಯಾ|

05187007c ಅನಿಧಾಯ ರಣೇ ವೀರ್ಯಮಸ್ತ್ರಾಣಿ ವಿವಿಧಾನಿ ಚ||

ಯಥಾಶಕ್ತಿಯಾಗಿ ಯಥೋತ್ಸಾಹವಾಗಿ ನೀನು, ರಣದಲ್ಲಿ ನಿನ್ನ ವಿವಿಧ ವೀರ್ಯ ಅಸ್ತ್ರಗಳನ್ನು ಕೆಳಗಿಡದೆಯೇ ನನ್ನ ಕೆಲಸವನ್ನು ಮಾಡಿದ್ದೀಯೆ.

05187008a ನ ಚೈಷ ಶಕ್ಯತೇ ಯುದ್ಧೇ ವಿಶೇಷಯಿತುಮಂತತಃ|

05187008c ನ ಚಾಹಮೇನಂ ಯಾಸ್ಯಾಮಿ ಪುನರ್ಭೀಷ್ಮಂ ಕಥಂ ಚನ||

ಕೊನೆಯಲ್ಲಿಯೂ ಯುದ್ಧದಲ್ಲಿ ಅವನನ್ನು ಮೀರಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಪುನಃ ಎಂದೂ ಭೀಷ್ಮನಲ್ಲಿಗೆ ಹೋಗುವುದಿಲ್ಲ.

05187009a ಗಮಿಷ್ಯಾಮಿ ತು ತತ್ರಾಹಂ ಯತ್ರ ಭೀಷ್ಮಂ ತಪೋಧನ|

05187009c ಸಮರೇ ಪಾತಯಿಷ್ಯಾಮಿ ಸ್ವಯಮೇವ ಭೃಗೂದ್ವಹ||

ತಪೋಧನ! ಭೃಗೂದ್ವಹ! ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ.”

05187010a ಏವಮುಕ್ತ್ವಾ ಯಯೌ ಕನ್ಯಾ ರೋಷವ್ಯಾಕುಲಲೋಚನಾ|

05187010c ತಪಸೇ ಧೃತಸಂಕಲ್ಪಾ ಮಮ ಚಿಂತಯತೀ ವಧಂ||

ಹೀಗೆ ಹೇಳಿ ಆ ರೋಷವ್ಯಾಕುಲಲೋಚನೆ ಕನ್ಯೆಯು ನನ್ನ ವಧೆಯನ್ನೇ ಚಿಂತಿಸುತ್ತಾ ತಪಸ್ಸಿನ ಧೃತ ಸಂಕಲ್ಪವನ್ನು ಮಾಡಿ ಹೊರಟು ಹೋದಳು.

05187011a ತತೋ ಮಹೇಂದ್ರಂ ಸಹ ತೈರ್ಮುನಿಭಿರ್ಭೃಗುಸತ್ತಮಃ|

05187011c ಯಥಾಗತಂ ಯಯೌ ರಾಮೋ ಮಾಮುಪಾಮಂತ್ರ್ಯ ಭಾರತ||

ಭಾರತ! ಆಗ ಆ ಮುನಿ ಭೃಗುಸತ್ತಮ ರಾಮನು ನನ್ನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಆ ಮಹೇಂದ್ರ ಪರ್ವತಕ್ಕೆ ಮುನಿಗಳ ಸಹಿತ ಹೊರಟು ಹೋದನು.

05187012a ತತೋಽಹಂ ರಥಮಾರುಹ್ಯ ಸ್ತೂಯಮಾನೋ ದ್ವಿಜಾತಿಭಿಃ|

05187012c ಪ್ರವಿಶ್ಯ ನಗರಂ ಮಾತ್ರೇ ಸತ್ಯವತ್ಯೈ ನ್ಯವೇದಯಂ|

05187012e ಯಥಾವೃತ್ತಂ ಮಹಾರಾಜ ಸಾ ಚ ಮಾಂ ಪ್ರತ್ಯನಂದತ||

ಆಗ ನಾನು ರಥವನ್ನೇರಿ, ದ್ವಿಜಾತಿಯವರು ಸ್ತುತಿಸುತ್ತಿರಲು ನಗರವನ್ನು ಪ್ರವೇಶಿಸಿ ತಾಯಿ ಸತ್ಯವತಿಗೆ ನಡೆದುದೆಲ್ಲವನ್ನೂ ನಿವೇದಿಸಿದೆನು. ಮಹಾರಾಜ! ಅವಳೂ ಕೂಡ ನನ್ನನ್ನು ಅಭಿನಂದಿಸಿದಳು.

05187013a ಪುರುಷಾಂಶ್ಚಾದಿಶಂ ಪ್ರಾಜ್ಞಾನ್ಕನ್ಯಾವೃತ್ತಾಂತಕರ್ಮಣಿ|

05187013c ದಿವಸೇ ದಿವಸೇ ಹ್ಯಸ್ಯಾ ಗತಜಲ್ಪಿತಚೇಷ್ಟಿತಂ|

05187013e ಪ್ರತ್ಯಾಹರಂಶ್ಚ ಮೇ ಯುಕ್ತಾಃ ಸ್ಥಿತಾಃ ಪ್ರಿಯಹಿತೇ ಮಮ||

ಆ ಕನ್ಯೆಯ ಕೆಲಸಗಳ ವೃತ್ತಾಂತವನ್ನು ತಿಳಿಯಲೋಸುಗ ನಾನು ಪ್ರಾಜ್ಞ ಪುರುಷರನ್ನು ನಿಯೋಜಿಸಿದೆನು. ಅವರು ನನ್ನ ಪ್ರಿಯಹಿತಗಳಲ್ಲಿ ನಿರತರಾಗಿ ದಿವಸ ದಿವಸವೂ ಅವಳ ಓಡಾಟಗಳನ್ನು, ಮಾತುಗಳನ್ನು ಮತ್ತು ನಡತೆಗಳನ್ನು ನನಗೆ ವರದಿ ಮಾಡಿದರು.

05187014a ಯದೈವ ಹಿ ವನಂ ಪ್ರಾಯಾತ್ಕನ್ಯಾ ಸಾ ತಪಸೇ ಧೃತಾ|

05187014c ತದೈವ ವ್ಯಥಿತೋ ದೀನೋ ಗತಚೇತಾ ಇವಾಭವಂ||

ಅವಳು ತಪಸ್ಸಿಗೆ ಹಠಮಾಡಿ ವನಕ್ಕೆ ಹೋದಾಗಿನಿಂದಲೇ ನಾನು ವ್ಯಥಿತನೂ, ದೀನನೂ, ಬುದ್ಧಿಕಳೆದುಕೊಂಡಂಥವನೂ ಆದೆನು.

05187015a ನ ಹಿ ಮಾಂ ಕ್ಷತ್ರಿಯಃ ಕಶ್ಚಿದ್ವೀರ್ಯೇಣ ವಿಜಯೇದ್ಯುಧಿ|

05187015c ಋತೇ ಬ್ರಹ್ಮವಿದಸ್ತಾತ ತಪಸಾ ಸಂಶಿತವ್ರತಾತ್||

ಮಗೂ! ಏಕೆಂದರೆ ಬ್ರಹ್ಮವಿದನಾದ ಸಂಶಿತವ್ರತ ತಾಪಸನನ್ನು ಬಿಟ್ಟು ಬೇರೆ ಯಾವ ಕ್ಷತ್ರಿಯನೂ ವೀರ್ಯದಿಂದ ನನ್ನನ್ನು ಯುದ್ಧದಲ್ಲಿ ಜಯಿಸಲಾರನು!

05187016a ಅಪಿ ಚೈತನ್ಮಯಾ ರಾಜನ್ನಾರದೇಽಪಿ ನಿವೇದಿತಂ|

05187016c ವ್ಯಾಸೇ ಚೈವ ಭಯಾತ್ಕಾರ್ಯಂ ತೌ ಚೋಭೌ ಮಾಮವೋಚತಾಂ||

ರಾಜನ್! ಭಯದಿಂದ ನಾನು ಇದನ್ನು ನಾರದ ಮತ್ತು ವ್ಯಾಸನಿಗೂ ಕೂಡ ಹೇಳುವ ಕಾರ್ಯವನ್ನು ಮಾಡಿದೆ. ಅವರು ನನಗೆ ಹೇಳಿದರು:

05187017a ನ ವಿಷಾದಸ್ತ್ವಯಾ ಕಾರ್ಯೋ ಭೀಷ್ಮ ಕಾಶಿಸುತಾಂ ಪ್ರತಿ|

05187017c ದೈವಂ ಪುರುಷಕಾರೇಣ ಕೋ ನಿವರ್ತಿತುಮುತ್ಸಹೇತ್||

“ಭೀಷ್ಮ! ಕಾಶಿಸುತೆಯ ಕುರಿತು ವಿಷಾದಪಡಬೇಡ. ದೈವವನ್ನು ಪುರುಷ ಕಾರಣಗಳಿಂದ ಯಾರುತಾನೇ ತಡೆಯಲು ಪ್ರಯತ್ನಿಸಬೇಕು?”

05187018a ಸಾ ತು ಕನ್ಯಾ ಮಹಾರಾಜ ಪ್ರವಿಶ್ಯಾಶ್ರಮಮಂಡಲಂ|

05187018c ಯಮುನಾತೀರಮಾಶ್ರಿತ್ಯ ತಪಸ್ತೇಪೇಽತಿಮಾನುಷಂ||

ಮಹಾರಾಜ! ಆ ಕನ್ಯೆಯಾದರೋ ಯಮುನಾತೀರದ ಆಶ್ರಮಮಂಡಲವನ್ನು ಪ್ರವೇಶಿಸಿ ಅತಿಮಾನುಷ ತಪಸ್ಸನ್ನು ತಪಿಸಿದಳು.

05187019a ನಿರಾಹಾರಾ ಕೃಶಾ ರೂಕ್ಷಾ ಜಟಿಲಾ ಮಲಪಂಕಿನೀ|

05187019c ಷಣ್ಮಾಸಾನ್ವಾಯುಭಕ್ಷಾ ಚ ಸ್ಥಾಣುಭೂತಾ ತಪೋಧನಾ||

ಆ ತಪೋಧನೆಯು ನಿರಾಹಾರಳಾಗಿ, ಕೃಶಳಾಗಿ, ರೂಕ್ಷಳಾಗಿ, ಜಟಿಲಳಾಗಿ, ಹೊಲಸುತುಂಬಿಕೊಂಡು ಆರು ತಿಂಗಳು ಗಾಳಿಯನ್ನೇ ಸೇವಿಸುತ್ತಾ ಅಲುಗಾಡದೇ ನಿಂತಿದ್ದಳು.

05187020a ಯಮುನಾತೀರಮಾಸಾದ್ಯ ಸಂವತ್ಸರಮಥಾಪರಂ|

05187020c ಉದವಾಸಂ ನಿರಾಹಾರಾ ಪಾರಯಾಮಾಸ ಭಾಮಿನೀ||

ಇನ್ನೊಂದು ವರ್ಷ ಆ ಭಾಮಿನಿಯು ಯಮುನಾತೀರವನ್ನು ಸೇರಿ ನಿರಾಹಾರಳಾಗಿ ನೀರಿನಲ್ಲಿಯೇ ವಾಸಿಸಿ ಕಳೆದಳು.

05187021a ಶೀರ್ಣಪರ್ಣೇನ ಚೈಕೇನ ಪಾರಯಾಮಾಸ ಚಾಪರಂ|

05187021c ಸಂವತ್ಸರಂ ತೀವ್ರಕೋಪಾ ಪಾದಾಂಗುಷ್ಠಾಗ್ರಧಿಷ್ಠಿತಾ||

ಅನಂತರ ತೀವ್ರಕೋಪದಿಂದ ಪಾದದ ಅಂಗುಷ್ಠದ ಮೇಲೆ ನಿಂತುಕೊಂಡು ಕೇವಲ ಒಂದು ಒಣ ಎಲೆಯನ್ನು ತಿಂದುಕೊಂಡು ಒಂದು ವರ್ಷವನ್ನು ಕಳೆದಳು.

05187022a ಏವಂ ದ್ವಾದಶ ವರ್ಷಾಣಿ ತಾಪಯಾಮಾಸ ರೋದಸೀ|

05187022c ನಿವರ್ತ್ಯಮಾನಾಪಿ ತು ಸಾ ಜ್ಞಾತಿಭಿರ್ನೈವ ಶಕ್ಯತೇ||

ಹೀಗೆ ಆ ರೋದಸಿಯು ಹನ್ನೆರಡು ವರ್ಷಗಳು ತಪಿಸಿದಳು. ಅವಳ ಬಾಂಧವರೂ ಕೂಡ ಅವಳನ್ನು ತಡೆಯಲು ಶಕ್ಯರಾಗಲಿಲ್ಲ.

05187023a ತತೋಽಗಮದ್ವತ್ಸಭೂಮಿಂ ಸಿದ್ಧಚಾರಣಸೇವಿತಾಂ|

05187023c ಆಶ್ರಮಂ ಪುಣ್ಯಶೀಲಾನಾಂ ತಾಪಸಾನಾಂ ಮಹಾತ್ಮನಾಂ||

ಆಗ ಅವಳು ಸಿದ್ಧಚಾರಣಸೇವಿತ ಮಹಾತ್ಮ ತಾಪಸ ಪುಣ್ಯಶೀಲರ ಆಶ್ರಮ ಭೂಮಿಗೆ ಹೋದಳು.

05187024a ತತ್ರ ಪುಣ್ಯೇಷು ದೇಶೇಷು ಸಾಪ್ಲುತಾಂಗೀ ದಿವಾನಿಶಂ|

05187024c ವ್ಯಚರತ್ಕಾಶಿಕನ್ಯಾ ಸಾ ಯಥಾಕಾಮವಿಚಾರಿಣೀ||

ಅಲ್ಲಿ ಪುಣ್ಯದೇಶಗಳಲ್ಲಿ ಸ್ನಾನಮಾಡುತ್ತಾ ಹಗಲು ರಾತ್ರಿ ಕಾಶಿಕನ್ಯೆಯು ತನಗಿಷ್ಟವಾದ ಹಾಗೆ ತಿರುಗಾಡಿದಳು.

05187025a ನಂದಾಶ್ರಮೇ ಮಹಾರಾಜ ತತೋಲೂಕಾಶ್ರಮೇ ಶುಭೇ|

05187025c ಚ್ಯವನಸ್ಯಾಶ್ರಮೇ ಚೈವ ಬ್ರಹ್ಮಣಃ ಸ್ಥಾನ ಏವ ಚ||

05187026a ಪ್ರಯಾಗೇ ದೇವಯಜನೇ ದೇವಾರಣ್ಯೇಷು ಚೈವ ಹ|

05187026c ಭೋಗವತ್ಯಾಂ ತಥಾ ರಾಜನ್ಕೌಶಿಕಸ್ಯಾಶ್ರಮೇ ತಥಾ||

05187027a ಮಾಂಡವ್ಯಸ್ಯಾಶ್ರಮೇ ರಾಜನ್ದಿಲೀಪಸ್ಯಾಶ್ರಮೇ ತಥಾ|

05187027c ರಾಮಹ್ರದೇ ಚ ಕೌರವ್ಯ ಪೈಲಗಾರ್ಗ್ಯಸ್ಯ ಚಾಶ್ರಮೇ||

05187028a ಏತೇಷು ತೀರ್ಥೇಷು ತದಾ ಕಾಶಿಕನ್ಯಾ ವಿಶಾಂ ಪತೇ|

05187028c ಆಪ್ಲಾವಯತ ಗಾತ್ರಾಣಿ ತೀವ್ರಮಾಸ್ಥಾಯ ವೈ ತಪಃ||

ಮಹಾರಾಜ! ರಾಜನ್! ವಿಶಾಂಪತೇ! ಕೌರವ್ಯ! ನಂದಾಶ್ರಮ, ನಂತರ ಶುಭ ಉಲೂಕಾಶ್ರಮ, ಚ್ಯವನಾಶ್ರಮ, ಬ್ರಹ್ಮಸ್ಥಾನ, ದೇವರು ಯಾಜಿಸಿದ, ದೇವರ ಅರಣ್ಯ ಪ್ರಯಾಗ, ಭೋಗವತಿ, ಕೌಶಿಕಾಶ್ರಮ, ಮಾಂಡವ್ಯಾಶ್ರಮ, ದಿಲೀಪನ ಆಶ್ರಮ, ರಾಮಸರೋವರ, ಪೈಲಗಾರ್ಗನ ಆಶ್ರಮ - ಈ ತೀರ್ಥಗಳಲ್ಲಿ ಕಾಶಿಕನ್ಯೆಯು ದೇಹವನ್ನು ತೊಳೆದು ತೀವ್ರ ತಪಸ್ಸಿನಲ್ಲಿದ್ದಳು.

05187029a ತಾಮಬ್ರವೀತ್ಕೌರವೇಯ ಮಮ ಮಾತಾ ಜಲೋತ್ಥಿತಾ|

05187029c ಕಿಮರ್ಥಂ ಕ್ಲಿಶ್ಯಸೇ ಭದ್ರೇ ತಥ್ಯಮೇತದ್ಬ್ರವೀಹಿ ಮೇ||

ಕೌರವೇಯ! ಆಗ ನನ್ನ ಮಾತೆಯು ಜಲದಿಂದ ಮೇಲೆದ್ದು ಅವಳಿಗೆ ಹೇಳಿದಳು: “ಭದ್ರೇ! ಏಕೆ ಈ ಕಷ್ಟಪಡುತ್ತಿರುವೆ? ಕಾರಣವನ್ನು ನನಗೆ ಹೇಳು.”

05187030a ಸೈನಾಮಥಾಬ್ರವೀದ್ರಾಜನ್ಕೃತಾಂಜಲಿರನಿಂದಿತಾ|

05187030c ಭೀಷ್ಮೋ ರಾಮೇಣ ಸಮರೇ ನ ಜಿತಶ್ಚಾರುಲೋಚನೇ||

ರಾಜನ್! ಅವಳಿಗೆ ಆ ಅನಿಂದಿತೆಯು ಕೈಮುಗಿದು ಹೇಳಿದಳು: “ಚಾರುಲೋಚನೇ! ಭೀಷ್ಮನು ಸಮರದಲ್ಲಿ ರಾಮನನ್ನು ಗೆದ್ದನು.

05187031a ಕೋಽನ್ಯಸ್ತಮುತ್ಸಹೇಜ್ಜೇತುಮುದ್ಯತೇಷುಂ ಮಹೀಪತಿಂ|

05187031c ಸಾಹಂ ಭೀಷ್ಮವಿನಾಶಾಯ ತಪಸ್ತಪ್ಸ್ಯೇ ಸುದಾರುಣಂ||

ಯುದ್ಧ ಮಾಡಲು ಬರುವ ಆ ಮಹೀಪತಿಯೊಡನೆ ಬೇರೆ ಯಾರುತಾನೇ ಹೋರಾಡಲು ಬಯಸುವರು? ನಾನು ಭೀಷ್ಮನ ವಿನಾಶಕ್ಕೆ ಈ ಸುದಾರುಣ ತಪಸ್ಸನ್ನು ತಪಿಸುತ್ತಿದ್ದೇನೆ.

05187032a ಚರಾಮಿ ಪೃಥಿವೀಂ ದೇವಿ ಯಥಾ ಹನ್ಯಾಮಹಂ ನೃಪಂ|

05187032c ಏತದ್ವ್ರತಫಲಂ ದೇಹೇ ಪರಸ್ಮಿನ್ಸ್ಯಾದ್ಯಥಾ ಹಿ ಮೇ||

ದೇವೀ! ಆ ನೃಪನನ್ನು ಕೊಲ್ಲಬಹುದೆಂದು ನಾನು ಭೂಮಿಯಲ್ಲಿ ಅಲೆದಾಡುತ್ತಿದ್ದೇನೆ. ಈ ದೇಹದಲ್ಲಿ ಅಥವಾ ಇನ್ನೊಂದರಲ್ಲಿ. ಇದೇ ನನ್ನ ವ್ರತದಿಂದ ಬಯಸುವ ಫಲ.”

05187033a ತತೋಽಬ್ರವೀತ್ಸಾಗರಗಾ ಜಿಹ್ಮಂ ಚರಸಿ ಭಾಮಿನಿ|

05187033c ನೈಷ ಕಾಮೋಽನವದ್ಯಾಂಗಿ ಶಕ್ಯಃ ಪ್ರಾಪ್ತುಂ ತ್ವಯಾಬಲೇ||

ಆಗ ಸಾಗರಗೆಯು ಅವಳಿಗೆ ಹೇಳಿದಳು: “ಭಾಮಿನೀ! ನೀನು ಸುತ್ತಿ ಬಳಸಿ ಹೋಗುತ್ತಿದ್ದೀಯೆ. ಅನವದ್ಯಾಂಗೀ! ಅಬಲೇ! ನಿನ್ನ ಈ ಆಸೆಯನ್ನು ಪೂರೈಸಲು ನೀನು ಶಕ್ಯಳಾಗುವುದಿಲ್ಲ.

05187034a ಯದಿ ಭೀಷ್ಮವಿನಾಶಾಯ ಕಾಶ್ಯೇ ಚರಸಿ ವೈ ವ್ರತಂ|

05187034c ವ್ರತಸ್ಥಾ ಚ ಶರೀರಂ ತ್ವಂ ಯದಿ ನಾಮ ವಿಮೋಕ್ಷ್ಯಸಿ|

05187034e ನದೀ ಭವಿಷ್ಯಸಿ ಶುಭೇ ಕುಟಿಲಾ ವಾರ್ಷಿಕೋದಕಾ||

ಕಾಶ್ಯೇ! ಶುಭೇ! ಭೀಷ್ಮನ ವಿನಾಶಕ್ಕಾಗಿ ನೀನು ವ್ರತವನ್ನು ಆಚರಿಸುತ್ತಿದ್ದೀಯೆ. ಒಂದುವೇಳೆ ವ್ರತಸ್ಥಳಾಗಿದ್ದುಕೊಂಡೇ ನೀನು ಶರೀರವನ್ನು ತೊರೆದರೆ ಮಳೆನೀರಿನಿಂದ ತುಂಬಿಕೊಳ್ಳುವ ಕುಟಿಲ ನದಿಯಾಗುತ್ತೀಯೆ.

05187035a ದುಸ್ತೀರ್ಥಾ ಚಾನಭಿಜ್ಞೇಯಾ ವಾರ್ಷಿಕೀ ನಾಷ್ಟಮಾಸಿಕೀ|

05187035c ಭೀಮಗ್ರಾಹವತೀ ಘೋರಾ ಸರ್ವಭೂತಭಯಂಕರೀ||

ಅಸಾದ್ಯ ತೀರ್ಥವಾಗುತ್ತೀಯೆ. ಮಳೆನೀರಿನಿಂದ ತುಂಬಿ ಭಯಂಕರ ಪ್ರವಾಹವಾಗಿ ಎಂಟು ತಿಂಗಳು ಎಲ್ಲರಿಗೂ ಘೋರವೂ ಭಯಂಕರಿಯೂ ಆಗುತ್ತೀಯೆ.”

05187036a ಏವಮುಕ್ತ್ವಾ ತತೋ ರಾಜನ್ಕಾಶಿಕನ್ಯಾಂ ನ್ಯವರ್ತತ|

05187036c ಮಾತಾ ಮಮ ಮಹಾಭಾಗಾ ಸ್ಮಯಮಾನೇವ ಭಾಮಿನೀ||

ರಾಜನ್! ಹೀಗೆ ಕಾಶಿಕನ್ಯೆಗೆ ಹೇಳಿ ನನ್ನ ಮಾತೆ ಮಹಾಭಾಗೆ ಭಾಮಿನಿಯು ಮುಗುಳ್ನಗುತ್ತಾ ಹಿಂದಿರುಗಿದಳು.

05187037a ಕದಾ ಚಿದಷ್ಟಮೇ ಮಾಸಿ ಕದಾ ಚಿದ್ದಶಮೇ ತಥಾ|

05187037c ನ ಪ್ರಾಶ್ನೀತೋದಕಮಪಿ ಪುನಃ ಸಾ ವರವರ್ಣಿನೀ||

ಆ ವರವರ್ಣಿನಿಯು ಕೆಲವೊಮ್ಮೆ ಎಂಟು ತಿಂಗಳು ಮತ್ತು ಕೆಲವೊಮ್ಮ ಹತ್ತು ತಿಂಗಳು ಏನನ್ನೂ ತಿನ್ನದೇ ನೀರನ್ನೂ ಕುಡಿಯದೇ ಪುನಃ ತಪಸ್ಸನ್ನಾಚರಿಸಿದಳು.

05187038a ಸಾ ವತ್ಸಭೂಮಿಂ ಕೌರವ್ಯ ತೀರ್ಥಲೋಭಾತ್ತತಸ್ತತಃ|

05187038c ಪತಿತಾ ಪರಿಧಾವಂತೀ ಪುನಃ ಕಾಶಿಪತೇಃ ಸುತಾ||

ಕೌರವ್ಯ! ಆ ಕಾಶಿಪತಿಯ ಸುತೆಯು ಅಲ್ಲಿ ಇಲ್ಲಿ ತಿರುಗಾಡುತ್ತ ತೀರ್ಥದ ಆಸೆಯಿಂದ ಪುನಃ ವತ್ಸಭೂಮಿಗೆ ಆಗಮಿಸಿದಳು.

05187039a ಸಾ ನದೀ ವತ್ಸಭೂಮ್ಯಾಂ ತು ಪ್ರಥಿತಾಂಬೇತಿ ಭಾರತ|

05187039c ವಾರ್ಷಿಕೀ ಗ್ರಾಹಬಹುಲಾ ದುಸ್ತೀರ್ಥಾ ಕುಟಿಲಾ ತಥಾ||

ಭಾರತ! ಅವಳು ವತ್ಸಭೂಮಿಯಲ್ಲಿ ಮಳೆನೀರಿನಿಂದ ತುಂಬಿ ಹರಿಯುವ ಬಹಳ ಮೊಸಳೆಗಳಿರುವ, ಕಷ್ಟದ ತೀರ್ಥ, ಕುಟಿಲ ನದಿಯಾದಳೆಂದು ಹೇಳುತ್ತಾರೆ.

05187040a ಸಾ ಕನ್ಯಾ ತಪಸಾ ತೇನ ಭಾಗಾರ್ಧೇನ ವ್ಯಜಾಯತ|

05187040c ನದೀ ಚ ರಾಜನ್ವತ್ಸೇಷು ಕನ್ಯಾ ಚೈವಾಭವತ್ತದಾ||

ರಾಜನ್! ತಪಸ್ಸಿನ ಪ್ರಭಾವದಿಂದ ಆ ಕನ್ಯೆಯ ಅರ್ಧಭಾಗವು ನದಿಯಾಗಿ ಹರಿಯಿತು ಮತ್ತು ಇನ್ನೊಂದು ಅರ್ಧಭಾಗವು ಕನ್ಯೆಯಾಗಿಯೇ ಉಳಿಯಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾತಪಸ್ಯಾಯಾಂ ಸಪ್ತಾಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾತಪಸ್ಯೆಯಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.

Image result for indian motifs

Comments are closed.