Udyoga Parva: Chapter 182

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೨

ಪರಶುರಾಮ-ಭೀಷ್ಮರ ಮೂರನೆಯ ದಿನದ ಯುದ್ಧ (೧-೧೬).

05182001 ಭೀಷ್ಮ ಉವಾಚ|

05182001a ಸಮಾಗತಸ್ಯ ರಾಮೇಣ ಪುನರೇವಾತಿದಾರುಣಂ|

05182001c ಅನ್ಯೇದ್ಯುಸ್ತುಮುಲಂ ಯುದ್ಧಂ ತದಾ ಭರತಸತ್ತಮ||

ಭೀಷ್ಮನು ಹೇಳಿದನು: “ಭರತಸತ್ತಮ! ಅವನನ್ನು ಪುನಃ ಎದುರಿಸಿದಾಗ ನನ್ನ ಮತ್ತು ರಾಮನ ನಡುವೆ ಇನ್ನೊಂದು ಅತಿದಾರುಣ ತುಮುಲಯುದ್ಧವು ನಡೆಯಿತು.

05182002a ತತೋ ದಿವ್ಯಾಸ್ತ್ರವಿಚ್ಚೂರೋ ದಿವ್ಯಾನ್ಯಸ್ತ್ರಾಣ್ಯನೇಕಶಃ|

05182002c ಅಯೋಜಯತ ಧರ್ಮಾತ್ಮಾ ದಿವಸೇ ದಿವಸೇ ವಿಭುಃ||

ಆಗ ದಿವಸ ದಿವಸವೂ ಆ ದಿವ್ಯಾಸ್ತ್ರವಿದು ಧರ್ಮಾತ್ಮ ವಿಭು ಶೂರನು ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು.

05182003a ತಾನ್ಯಹಂ ತತ್ಪ್ರತೀಘಾತೈರಸ್ತ್ರೈರಸ್ತ್ರಾಣಿ ಭಾರತ|

05182003c ವ್ಯಧಮಂ ತುಮುಲೇ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್||

ಭಾರತ! ನಾನು ತ್ಯಜಿಸಲು ದುಷ್ಕರವಾದ ಪ್ರಾಣವನ್ನೂ ತ್ಯಜಿಸಿ ಆ ತುಮುಲಯುದ್ಧದಲ್ಲಿ ಅವುಗಳನ್ನು ಪ್ರತಿಘಾತಿಸುವ ಅಸ್ತ್ರಗಳಿಂದ ನಿಷ್ಫಲಗೊಳಿಸಿದೆನು.

05182004a ಅಸ್ತ್ರೈರಸ್ತ್ರೇಷು ಬಹುಧಾ ಹತೇಷ್ವಥ ಚ ಭಾರ್ಗವಃ|

05182004c ಅಕ್ರುಧ್ಯತ ಮಹಾತೇಜಾಸ್ತ್ಯಕ್ತಪ್ರಾಣಃ ಸ ಸಂಯುಗೇ||

ಸಂಯುಗದಲ್ಲಿ ಬಹಳಷ್ಟು ಅಸ್ತ್ರಗಳನ್ನು ಅಸ್ತ್ರಗಳಿಂದ ಹತಗೊಳಿಸಲು ಆ ಮಹಾತೇಜಸ್ವಿ ಭಾರ್ಗವನು ಪ್ರಾಣವನ್ನೂ ತ್ಯಜಿಸಿ ಕ್ರೋಧಿತನಾದನು.

05182005a ತತಃ ಶಕ್ತಿಂ ಪ್ರಾಹಿಣೋದ್ಘೋರರೂಪಾಂ

         ಅಸ್ತ್ರೈ ರುದ್ಧೋ ಜಾಮದಗ್ನ್ಯೋ ಮಹಾತ್ಮಾ|

05182005c ಕಾಲೋತ್ಸೃಷ್ಟಾಂ ಪ್ರಜ್ವಲಿತಾಮಿವೋಲ್ಕಾಂ

         ಸಂದೀಪ್ತಾಗ್ರಾಂ ತೇಜಸಾವೃತ್ಯ ಲೋಕಾನ್||

ಆಗ ಮಹಾತ್ಮ ಜಾಮದಗ್ನಿಯು ಕೋಪದಿಂದ ಘೋರರೂಪದ ಕಾಲನೇ ಬಿಸುಟ ಅಸ್ತ್ರದಂತಿರುವ, ಉಲ್ಕೆಯಂತೆ ಉರಿಯುತ್ತಿರುವ, ಬಾಯಿ ತೆರೆದಿರುವ, ತೇಜಸ್ಸಿನಿಂದ ಲೋಕಗಳನ್ನು ಆವರಿಸಿದ ಶಕ್ತಿಯನ್ನು ನನ್ನ ಮೇಲೆ ಎಸೆದನು.

05182006a ತತೋಽಹಂ ತಾಮಿಷುಭಿರ್ದೀಪ್ಯಮಾನೈಃ

         ಸಮಾಯಾಂತೀಮಂತಕಾಲಾರ್ಕದೀಪ್ತಾಂ|

05182006c ಚಿತ್ತ್ವಾ ತ್ರಿಧಾ ಪಾತಯಾಮಾಸ ಭೂಮೌ

         ತತೋ ವವೌ ಪವನಃ ಪುಣ್ಯಗಂಧಿಃ||

ಆಗ ನಾನು ಉರಿಯುತ್ತಾ ಅಂತಕಾಲದಂತೆ, ಸೂರ್ಯನಂತೆ ಬೆಳಗುತ್ತಾ ಹತ್ತಿರ ಬರುತ್ತಿದ್ದ ಅದನ್ನು ಮೂರುತುಂಡುಗಳನ್ನಾಗಿಸಿ ಭೂಮಿಯ ಮೇಲೆ ಬೀಳಿಸಿದೆನು. ಆಗ ಪುಣ್ಯಗಂಧೀ ಗಾಳಿಯು ಬೀಸಿತು.

05182007a ತಸ್ಯಾಂ ಚಿನ್ನಾಯಾಂ ಕ್ರೋಧದೀಪ್ತೋಽಥ ರಾಮಃ

         ಶಕ್ತೀರ್ಘೋರಾಃ ಪ್ರಾಹಿಣೋದ್ದ್ವಾದಶಾನ್ಯಾಃ|

05182007c ತಾಸಾಂ ರೂಪಂ ಭಾರತ ನೋತ ಶಕ್ಯಂ

         ತೇಜಸ್ವಿತ್ವಾಲ್ಲಾಘವಾಚ್ಚೈವ ವಕ್ತುಂ||

ಅದು ತುಂಡಾಗಲು ಕ್ರೋಧದೀಪ್ತನಾದ ರಾಮನು ಇನ್ನೂ ಹನ್ನೆರಡು ಘೋರ ಶಕ್ತಿಗಳನ್ನು ಎಸೆದನು. ಭಾರತ! ಅವುಗಳ ರೂಪವನ್ನು ವರ್ಣಿಸಲು, ಅವುಗಳ ತೇಜಸ್ಸು ಮತ್ತು ಲಾಘವಗಳ ಕುರಿತು ಹೇಳಲೂ ಅಸಾಧ್ಯವಾಗಿತ್ತು.

05182008a ಕಿಂ ತ್ವೇವಾಹಂ ವಿಹ್ವಲಃ ಸಂಪ್ರದೃಶ್ಯ

         ದಿಗ್ಭ್ಯಃ ಸರ್ವಾಸ್ತಾ ಮಹೋಲ್ಕಾ ಇವಾಗ್ನೇಃ|

05182008c ನಾನಾರೂಪಾಸ್ತೇಜಸೋಗ್ರೇಣ ದೀಪ್ತಾ

         ಯಥಾದಿತ್ಯಾ ದ್ವಾದಶ ಲೋಕಸಂಕ್ಷಯೇ||

ಎಲ್ಲ ಕಡೆಗಳಿಂದಲೂ ಮಹಾ ಉಲ್ಕೆಗಳಂತಿರುವ, ಅಗ್ನಿಗಳಂತಿರುವ, ಲೋಕಸಂಕ್ಷಯದಲ್ಲಿ ದ್ವಾದಶಾದಿತ್ಯರು ಹೇಗೋ ಹಾಗೆ ನಾನಾರೂಪಗಳಲ್ಲಿ ಉಗ್ರ ತೇಜಸ್ಸಿನಿಂದ ಉರಿಯುತ್ತಿರುವ ಅವುಗಳನ್ನು ನೋಡಿ ನಾನು ವಿಹ್ವಲನಾದೆನು.

05182009a ತತೋ ಜಾಲಂ ಬಾಣಮಯಂ ವಿವೃತ್ಯ

         ಸಂದೃಶ್ಯ ಭಿತ್ತ್ವಾ ಶರಜಾಲೇನ ರಾಜನ್|

05182009c ದ್ವಾದಶೇಷೂನ್ಪ್ರಾಹಿಣವಂ ರಣೇಽಹಂ

         ತತಃ ಶಕ್ತೀರ್ವ್ಯಧಮಂ ಘೋರರೂಪಾಃ||

ರಾಜನ್! ಬಂದೆರಗುತ್ತಿದ್ದ ಆ ಬಾಣಗಳ ಜಾಲವನ್ನು ನೋಡಿ ನನ್ನದೇ ಶರಜಾಲದಿಂದ ಹೊಡೆದು ಆ ಹನ್ನೆರಡೂ ಘೋರರೂಪೀ ಶಕ್ತಿಗಳನ್ನು ರಣದಲ್ಲಿ ನಾನು ತುಂಡರಿಸಿದೆನು.

05182010a ತತೋಽಪರಾ ಜಾಮದಗ್ನ್ಯೋ ಮಹಾತ್ಮಾ

         ಶಕ್ತೀರ್ಘೋರಾಃ ಪ್ರಾಕ್ಷಿಪದ್ಧೇಮದಂಡಾಃ|

05182010c ವಿಚಿತ್ರಿತಾಃ ಕಾಂಚನಪಟ್ಟನದ್ಧಾ

         ಯಥಾ ಮಹೋಲ್ಕಾ ಜ್ವಲಿತಾಸ್ತಥಾ ತಾಃ||

ಆಗ ಮಹಾತ್ಮ ಜಾಮದಗ್ನಿಯು ಇನ್ನೊಂದು ಹೇಮದಂಡದ ಘೋರ ಶಕ್ತಿಗಳನ್ನು ಎಸೆದನು. ಬಂಗಾರದಿಂದ ಮಾಡಲ್ಪಟ್ಟಿದ್ದ ಅವು ವಿಚಿತ್ರವಾಗಿದ್ದು ಮಹಾ ಉಲ್ಕೆಗಳಂತೆ ಜ್ವಲಿಸುತ್ತಿದ್ದವು.

05182011a ತಾಶ್ಚಾಪ್ಯುಗ್ರಾಶ್ಚರ್ಮಣಾ ವಾರಯಿತ್ವಾ

         ಖಡ್ಗೇನಾಜೌ ಪಾತಿತಾ ಮೇ ನರೇಂದ್ರ|

05182011c ಬಾಣೈರ್ದಿವ್ಯೈರ್ಜಾಮದಗ್ನ್ಯಸ್ಯ ಸಂಖ್ಯೇ

         ದಿವ್ಯಾಂಶ್ಚಾಶ್ವಾನಭ್ಯವರ್ಷಂ ಸಸೂತಾನ್||

ನರೇಂದ್ರ! ಅವುಗಳನ್ನೂ ಕೂಡ ತೋಮರಗಳಿಂದ ತಡೆದು ಖಡ್ಗದಿಂದ ನಾನು ಕೆಳಗೆ ಬೀಳಿಸಿ, ದಿವ್ಯ ಬಾಣಗಳಿಂದ ಜಾಮದಗ್ನಿಯ ದಿವ್ಯ ರಥವನ್ನೂ ಕುದುರೆಗಳನ್ನೂ ಸಾರಥಿಯೊಂದಿಗೆ ಮುಚ್ಚಿದೆನು.

05182012a ನಿರ್ಮುಕ್ತಾನಾಂ ಪನ್ನಗಾನಾಂ ಸರೂಪಾ

         ದೃಷ್ಟ್ವಾ ಶಕ್ತೀರ್ಹೇಮಚಿತ್ರಾ ನಿಕೃತ್ತಾಃ|

05182012c ಪ್ರಾದುಶ್ಚಕ್ರೇ ದಿವ್ಯಮಸ್ತ್ರಂ ಮಹಾತ್ಮಾ

         ಕ್ರೋಧಾವಿಷ್ಟೋ ಹೈಹಯೇಶಪ್ರಮಾಥೀ||

ನಾನು ಪ್ರಯೋಗಿಸಿದ ಹಾವುಗಳಂತಿದ್ದ ಹೇಮಚಿತ್ರ ಶಕ್ತಿಗಳನ್ನು ನೋಡಿ ಕ್ರೋಧಾವಿಷ್ಟನಾದ ಆ ಮಹಾತ್ಮ ಹೈಹಯೇಶಪ್ರಮಾಥಿಯು ಪುನಃ ದಿವ್ಯಾಸ್ತ್ರಗಳನ್ನು ಬಳಸಿದನು.

05182013a ತತಃ ಶ್ರೇಣ್ಯಃ ಶಲಭಾನಾಮಿವೋಗ್ರಾಃ

         ಸಮಾಪೇತುರ್ವಿಶಿಖಾನಾಂ ಪ್ರದೀಪ್ತಾಃ|

05182013c ಸಮಾಚಿನೋಚ್ಚಾಪಿ ಭೃಶಂ ಶರೀರಂ

         ಹಯಾನ್ಸೂತಂ ಸರಥಂ ಚೈವ ಮಹ್ಯಂ||

ಆಗ ಮಿಡತೆಗಳ ಗುಂಪಿನಂತಿರುವ, ತುದಿಗಳಲ್ಲಿ ರೆಕ್ಕೆಗಳನ್ನುಳ್ಳ, ಉರಿಯುತ್ತಿರುವ ಬಾಣಗಳ ರಾಶಿಯು ನನ್ನ ಶರೀರವನ್ನು, ಕುದುರೆಗಳನ್ನು, ರಥದೊಂದಿಗೆ ಸೂತನನ್ನು ತುಂಬಾ ಆಳವಾಗಿ ಚುಚ್ಚಿದವು.

05182014a ರಥಃ ಶರೈರ್ಮೇ ನಿಚಿತಃ ಸರ್ವತೋಽಭೂತ್

         ತಥಾ ಹಯಾಃ ಸಾರಥಿಶ್ಚೈವ ರಾಜನ್|

05182014c ಯುಗಂ ರಥೇಷಾ ಚ ತಥೈವ ಚಕ್ರೇ

         ತಥೈವಾಕ್ಷಃ ಶರಕೃತ್ತೋಽಥ ಭಗ್ನಃ||

ಅದರ ಹೊಡೆತದಿಂದಾಗಿ ನನ್ನ ರಥ, ಕುದುರೆಗಳು ಮತ್ತು ಸಾರಥಿಯೂ, ರಥದ ಎರಡು ಚಕ್ರಗಳೊಂದಿಗೆ ಎಲ್ಲ ರೀತಿಯಲ್ಲಿ ಮುರಿದು ಬಿದ್ದವು.

05182015a ತತಸ್ತಸ್ಮಿನ್ಬಾಣವರ್ಷೇ ವ್ಯತೀತೇ

         ಶರೌಘೇಣ ಪ್ರತ್ಯವರ್ಷಂ ಗುರುಂ ತಂ|

05182015c ಸ ವಿಕ್ಷತೋ ಮಾರ್ಗಣೈರ್ಬ್ರಹ್ಮರಾಶಿರ್

         ದೇಹಾದಜಸ್ರಂ ಮುಮುಚೇ ಭೂರಿ ರಕ್ತಂ||

ಆ ಬಾಣವರ್ಷವು ಮುಗಿಯಲು ನಾನೂ ಕೂಡ ಶರಗಳ ಮಳೆಯನ್ನು ಗುರುವಿನ ಮೇಲೆ ಸುರಿಸಿದೆನು. ಆ ಬಾಣಗಳಿಂದ ಗಾಯಗೊಂಡ ಆ ಬ್ರಹ್ಮರಾಶಿಯು ತುಂಬಾ ಕಡೆಗಳಿಂದ ಒಂದೇ ಸಮನೆ ರಕ್ತವನ್ನು ಸುರಿಸಿದನು.

05182016a ಯಥಾ ರಾಮೋ ಬಾಣಜಾಲಾಭಿತಪ್ತಸ್

         ತಥೈವಾಹಂ ಸುಭೃಶಂ ಗಾಢವಿದ್ಧಃ|

05182016c ತತೋ ಯುದ್ಧಂ ವ್ಯರಮಚ್ಚಾಪರಾಹ್ಣೇ

         ಭಾನಾವಸ್ತಂ ಪ್ರಾರ್ಥಯಾನೇ ಮಹೀಧ್ರಂ||

ರಾಮನು ಹೇಗೆ ಬಾಣಜಾಲಗಳಿಂದ ನೋಯುತ್ತಿದ್ದನೋ ಹಾಗೆ ನಾನೂ ಕೂಡ ತುಂಬಾ ಗಾಢವಾದ ನೋವಿನಲ್ಲಿದ್ದೆನು. ಕೊನೆಯಲ್ಲಿ ಮಧ್ಯಾಹ್ನದ ನಂತರ ಸೂರ್ಯನು ಅಸ್ತವಾಗಲು ನಮ್ಮ ಯುದ್ಧವೂ ನಿಂತಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ದ್ವಿಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.

Image result for flowers against white background"

Comments are closed.