Udyoga Parva: Chapter 180

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೦

ಪರಶುರಾಮ-ಭೀಷ್ಮರ ಯುದ್ಧ

ಪರಶುರಾಮ-ಭೀಷ್ಮರ ಮೊದಲನೆಯ ದಿನದ ಯುದ್ಧ (೧-೩೯).

05180001 ಭೀಷ್ಮ ಉವಾಚ|

05180001a ತಮಹಂ ಸ್ಮಯನ್ನಿವ ರಣೇ ಪ್ರತ್ಯಭಾಷಂ ವ್ಯವಸ್ಥಿತಂ|

05180001c ಭೂಮಿಷ್ಠಂ ನೋತ್ಸಹೇ ಯೋದ್ಧುಂ ಭವಂತಂ ರಥಮಾಸ್ಥಿತಃ||

ಭೀಷ್ಮನು ಹೇಳಿದನು: “ರಣದಲ್ಲಿ ನಿಂತಿದ್ದ ಅವನಿಗೆ ನಗುತ್ತಾ ಹೇಳಿದೆನು: “ರಥದ ಮೇಲೆ ನಿಂತು ನೆಲದ ಮೇಲೆ ನಿಂತಿರುವ ನಿನ್ನೊಂದಿಗೆ ಯುದ್ಧಮಾಡಲು ಉತ್ಸಾಹವಾಗುತ್ತಿಲ್ಲ.

05180002a ಆರೋಹ ಸ್ಯಂದನಂ ವೀರ ಕವಚಂ ಚ ಮಹಾಭುಜ|

05180002c ಬಧಾನ ಸಮರೇ ರಾಮ ಯದಿ ಯೋದ್ಧುಂ ಮಯೇಚ್ಚಸಿ||

ವೀರ! ಮಹಾಭುಜ! ರಣದಲ್ಲಿ ನನ್ನೊಂದಿಗೆ ಯುದ್ಧಮಾಡಲು ಬಯಸುವೆಯಾದರೆ ರಥವನ್ನೇರು! ಕವಚವನ್ನು ಧರಿಸು!”

05180003a ತತೋ ಮಾಮಬ್ರವೀದ್ರಾಮಃ ಸ್ಮಯಮಾನೋ ರಣಾಜಿರೇ|

05180003c ರಥೋ ಮೇ ಮೇದಿನೀ ಭೀಷ್ಮ ವಾಹಾ ವೇದಾಃ ಸದಶ್ವವತ್||

ಆಗ ಆ ರಣದಲ್ಲಿ ರಾಮನು ನಗುತ್ತಾ ನನಗೆ ಹೇಳಿದನು: “ಭೀಷ್ಮ! ಮೇದಿನಿಯೇ ನನ್ನ ರಥ. ವೇದಗಳು ನಡೆಸುವ ಅಶ್ವಗಳಂತೆ.

05180004a ಸೂತೋ ಮೇ ಮಾತರಿಶ್ವಾ ವೈ ಕವಚಂ ವೇದಮಾತರಃ|

05180004c ಸುಸಂವೀತೋ ರಣೇ ತಾಭಿರ್ಯೋತ್ಸ್ಯೇಽಹಂ ಕುರುನಂದನ||

ಗಾಳಿಯು ನನ್ನ ಸಾರಥಿ. ವೇದಮಾತರೆಯು ನನ್ನ ಕವಚ. ಕುರುನಂದನ! ಇವುಗಳಿಂದ ಸುರಕ್ಷಿತನಾಗಿ ನಾನು ರಣದಲ್ಲಿ ನಿನ್ನೊಂದಿಗೆ ಯುದ್ಧ ಮಾಡುತ್ತೇನೆ.”

05180005a ಏವಂ ಬ್ರುವಾಣೋ ಗಾಂಧಾರೇ ರಾಮೋ ಮಾಂ ಸತ್ಯವಿಕ್ರಮಃ|

05180005c ಶರವ್ರಾತೇನ ಮಹತಾ ಸರ್ವತಃ ಪರ್ಯವಾರಯತ್||

ಗಾಂಧಾರೇ! ಹೀಗೆ ಹೇಳಿ ಸತ್ಯವಿಕ್ರಮಿ ರಾಮನು ನನ್ನನ್ನು ಮಹಾ ಶರಗಳ ಮಳೆಯಿಂದ ಎಲ್ಲ ಕಡೆಯಿಂದಲೂ ಮುಚ್ಚಿದನು.

05180006a ತತೋಽಪಶ್ಯಂ ಜಾಮದಗ್ನ್ಯಂ ರಥೇ ದಿವ್ಯೇ ವ್ಯವಸ್ಥಿತಂ|

05180006c ಸರ್ವಾಯುಧಧರೇ ಶ್ರೀಮತ್ಯದ್ಭುತೋಪಮದರ್ಶನೇ||

ಆಗ ನಾನು ಜಾಮದಗ್ನ್ಯನನ್ನು ದಿವ್ಯ ರಥದ ಮೇಲೆ ಸರ್ವಾಯುಧಧರನಾಗಿ, ಶ್ರೀಮತ್ ಅದ್ಭುತ ಸುಂದರನಾಗಿ ವ್ಯವಸ್ಥಿತನಾಗಿದ್ದುದು ಕಂಡುಬಂದಿತು.

05180007a ಮನಸಾ ವಿಹಿತೇ ಪುಣ್ಯೇ ವಿಸ್ತೀರ್ಣೇ ನಗರೋಪಮೇ|

05180007c ದಿವ್ಯಾಶ್ವಯುಜಿ ಸನ್ನದ್ಧೇ ಕಾಂಚನೇನ ವಿಭೂಷಿತೇ||

ಅವನ ಪುಣ್ಯ ಮನಸ್ಸಿನಿಂದ ನಿರ್ಮಿಸಿದ ರಥವು ನಗರದಂತೆ ವಿಸ್ತೀರ್ಣವಾಗಿತ್ತು. ಕಾಂಚನ ವಿಭೂಷಿತ ದಿವ್ಯಾಶ್ವಗಳನ್ನು ಕಟ್ಟಲಾಗಿತ್ತು. ಸನ್ನದ್ಧವಾಗಿತ್ತು.

05180008a ಧ್ವಜೇನ ಚ ಮಹಾಬಾಹೋ ಸೋಮಾಲಂಕೃತಲಕ್ಷ್ಮಣಾ|

05180008c ಧನುರ್ಧರೋ ಬದ್ಧತೂಣೋ ಬದ್ಧಗೋಧಾಂಗುಲಿತ್ರವಾನ್||

ಆ ಮಹಾಬಾಹುವುವಿನ ಧ್ವಜವು ಸೋಮಾಲಂಕೃತ ಲಕ್ಷಣದ್ದಾಗಿತ್ತು. ಆ ಧನುರ್ಧರನು ತೂಣೀರಗಳನ್ನು ಕಟ್ಟಿಕೊಂಡಿದ್ದನು. ಉಗುರುಗಳಿಗೆ ಗೋಧಗಳನ್ನು ಕಟ್ಟಿಕೊಂಡಿದ್ದನು.

05180009a ಸಾರಥ್ಯಂ ಕೃತವಾಂಸ್ತತ್ರ ಯುಯುತ್ಸೋರಕೃತವ್ರಣಃ|

05180009c ಸಖಾ ವೇದವಿದತ್ಯಂತಂ ದಯಿತೋ ಭಾರ್ಗವಸ್ಯ ಹ||

ಆ ಯೋಧನಿಗೆ ಭಾರ್ಗವನ ಅತ್ಯಂತ ಪ್ರಿಯ ಸಖ, ವೇದವಿದ ಅಕೃತವ್ರಣನು ಸಾರಥ್ಯವನ್ನು ಮಾಡುತ್ತಿದ್ದನು.

05180010a ಆಹ್ವಯಾನಃ ಸ ಮಾಂ ಯುದ್ಧೇ ಮನೋ ಹರ್ಷಯತೀವ ಮೇ|

05180010c ಪುನಃ ಪುನರಭಿಕ್ರೋಶನ್ನಭಿಯಾಹೀತಿ ಭಾರ್ಗವಃ||

ಮನಸ್ಸಿನಲ್ಲಿ ಅತೀವ ಹರ್ಷಗೊಂಡು ಭಾರ್ಗವನು ಯುದ್ಧದಲ್ಲಿ ನನ್ನನ್ನು ಮುಂದೆ ಬಾ ಎಂದು ಪುನಃ ಪುನಃ ಕೂಗಿ ಕರೆಯುತ್ತಿದ್ದನು.

05180011a ತಮಾದಿತ್ಯಮಿವೋದ್ಯಂತಮನಾಧೃಷ್ಯಂ ಮಹಾಬಲಂ|

05180011c ಕ್ಷತ್ರಿಯಾಂತಕರಂ ರಾಮಮೇಕಮೇಕಃ ಸಮಾಸದಂ||

ಆಗ ಆದಿತ್ಯನಂತೆ ಬೆಳಗುತ್ತಿದ್ದ, ಅನಾದೃಷ್ಯನಾದ, ಮಹಾಬಲ ಕ್ಷತ್ರಿಯಾಂತಕ ರಾಮನನ್ನು ಏಕನಾಗಿ ಏಕನನ್ನು ಎದುರಿಸಿದೆನು.

05180012a ತತೋಽಹಂ ಬಾಣಪಾತೇಷು ತ್ರಿಷು ವಾಹಾನ್ನಿಗೃಹ್ಯ ವೈ|

05180012c ಅವತೀರ್ಯ ಧನುರ್ನ್ಯಸ್ಯ ಪದಾತಿರೃಷಿಸತ್ತಮಂ||

ಅವನು ಮೂರು ಬಾಣಗಳನ್ನು ಬಿಟ್ಟು ನನ್ನ ಕುದುರೆಗಳನ್ನು ತಡೆದಾಗ ನಾನು ರಥದಿಂದ ಕೆಳಗಿಳಿದು ಧನುಸ್ಸನ್ನು ಆ ಋಷಿಸತ್ತಮನ ಪಾದಗಳಲ್ಲಿಟ್ಟೆನು.

05180013a ಅಭ್ಯಗಚ್ಚಂ ತದಾ ರಾಮಮರ್ಚಿಷ್ಯನ್ದ್ವಿಜಸತ್ತಮಂ|

05180013c ಅಭಿವಾದ್ಯ ಚೈನಂ ವಿಧಿವದಬ್ರುವಂ ವಾಕ್ಯಮುತ್ತಮಂ||

ಆಗ ದ್ವಿಜಸತ್ತಮ ರಾಮನನ್ನು ಅರ್ಚಿಸಿ ವಿಧಿವತ್ತಾಗಿ ಅಭಿವಂದಿಸಿ ಈ ಉತ್ತಮ ವಾಕ್ಯಗಳನ್ನು ಹೇಳಿದೆನು:

05180014a ಯೋತ್ಸ್ಯೇ ತ್ವಯಾ ರಣೇ ರಾಮ ವಿಶಿಷ್ಟೇನಾಧಿಕೇನ ಚ|

05180014c ಗುರುಣಾ ಧರ್ಮಶೀಲೇನ ಜಯಮಾಶಾಸ್ಸ್ವ ಮೇ ವಿಭೋ||

“ರಾಮ! ನನಗಿಂತ ನೀನು ವಿಶಿಷ್ಟನಾಗಿದ್ದೀಯೆ. ಮತ್ತು ಅಧಿಕನಾಗಿದ್ದೀಯೆ. ಆದರೂ ಗುರು ಧರ್ಮಶೀಲನಾದ ನಿನ್ನೊಂದಿಗೆ ಯುದ್ಧ ಮಾಡುತ್ತಿದ್ದೇನೆ. ವಿಭೋ! ನನಗೆ ಜಯವನ್ನು ಆಶೀರ್ವದಿಸು!”

05180015 ರಾಮ ಉವಾಚ|

05180015a ಏವಮೇತತ್ಕುರುಶ್ರೇಷ್ಠ ಕರ್ತವ್ಯಂ ಭೂತಿಮಿಚ್ಚತಾ|

05180015c ಧರ್ಮೋ ಹ್ಯೇಷ ಮಹಾಬಾಹೋ ವಿಶಿಷ್ಟೈಃ ಸಹ ಯುಧ್ಯತಾಂ||

ರಾಮನು ಹೇಳಿದನು: “ಮಹಾಬಾಹೋ! ಕುರುಶ್ರೇಷ್ಠ! ಒಳ್ಳೆಯದನ್ನು ಬಯಸುವವನಿಗೆ ಇದೇ ಕರ್ತವ್ಯ. ತಮಗಿಂತಲೂ ವಿಶಿಷ್ಟವಾಗಿರುವವರೊಂದಿಗೆ ಯುದ್ಧಮಾಡುವವರ ಧರ್ಮವೇ ಇದು.

05180016a ಶಪೇಯಂ ತ್ವಾಂ ನ ಚೇದೇವಮಾಗಚ್ಚೇಥಾ ವಿಶಾಂ ಪತೇ|

05180016c ಯುಧ್ಯಸ್ವ ತ್ವಂ ರಣೇ ಯತ್ತೋ ಧೈರ್ಯಮಾಲಂಬ್ಯ ಕೌರವ||

ವಿಶಾಂಪತೇ! ಈ ರೀತಿ ಬರದೇ ಇದ್ದಿದ್ದರೆ ನಾನು ನಿನ್ನನ್ನು ಶಪಿಸುತ್ತಿದ್ದೆನು[1]. ಈಗ ಹೋಗು! ನಿನ್ನಲ್ಲಿರುವ ಬಲವನ್ನು ಅವಲಂಬಿಸಿ ರಣದಲ್ಲಿ ಯುದ್ಧಮಾಡು.

05180017a ನ ತು ತೇ ಜಯಮಾಶಾಸೇ ತ್ವಾಂ ಹಿ ಜೇತುಮಹಂ ಸ್ಥಿತಃ|

05180017c ಗಚ್ಚ ಯುಧ್ಯಸ್ವ ಧರ್ಮೇಣ ಪ್ರೀತೋಽಸ್ಮಿ ಚರಿತೇನ ತೇ||

ಆದರೆ ನಾನು ನಿನಗೆ ಜಯವನ್ನು ಬಯಸುವುದಿಲ್ಲ. ಏಕೆಂದರೆ ನಿನ್ನನ್ನು ಗೆಲ್ಲಲೇ ನಾನು ಇಲ್ಲಿ ನಿಂತಿದ್ದೇನೆ. ಹೋಗು! ಧರ್ಮದಿಂದ ಯುದ್ಧಮಾಡು! ನಿನ್ನ ನಡತೆಯನ್ನು ಮೆಚ್ಚಿದ್ದೇನೆ.””

05180018 ಭೀಷ್ಮ ಉವಾಚ|

05180018a ತತೋಽಹಂ ತಂ ನಮಸ್ಕೃತ್ಯ ರಥಮಾರುಹ್ಯ ಸತ್ವರಃ|

05180018c ಪ್ರಾಧ್ಮಾಪಯಂ ರಣೇ ಶಂಖಂ ಪುನರ್ಹೇಮವಿಭೂಷಿತಂ||

ಭೀಷ್ಮನು ಹೇಳಿದನು: “ಆಗ ನಾನು ಅವನನ್ನು ನಮಸ್ಕರಿಸಿ ಬೇಗನೇ ರಥವನ್ನೇರಿದೆನು. ಇನ್ನೊಮ್ಮೆ ಹೇಮ ವಿಭೂಷಿತ ಶಂಖವನ್ನು ರಣದಲ್ಲಿ ಊದಿದೆನು.

05180019a ತತೋ ಯುದ್ಧಂ ಸಮಭವನ್ಮಮ ತಸ್ಯ ಚ ಭಾರತ|

05180019c ದಿವಸಾನ್ಸುಬಹೂನ್ರಾಜನ್ಪರಸ್ಪರಜಿಗೀಷಯಾ||

ಭಾರತ! ರಾಜನ್! ಆಗ ಪರಸ್ಪರರನ್ನು ಗೆಲ್ಲಲು ಬಯಸಿದ ಅವನ ಮತ್ತು ನನ್ನ ನಡುವೆ ಬಹಳ ದಿನಗಳ ಮಹಾ ಯುದ್ಧವು ನಡೆಯಿತು.

05180020a ಸ ಮೇ ತಸ್ಮಿನ್ರಣೇ ಪೂರ್ವಂ ಪ್ರಾಹರತ್ಕಂಕಪತ್ರಿಭಿಃ|

05180020c ಷಷ್ಟ್ಯಾ ಶತೈಶ್ಚ ನವಭಿಃ ಶರಾಣಾಮಗ್ನಿವರ್ಚಸಾಂ||

ರಣದಲ್ಲಿ ಮೊದಲು ಅವನು ನನ್ನನ್ನು ಒಂಬೈನೂರಾ ಅರವತ್ತು ಅಗ್ನಿವರ್ಚಸ ಕಂಕಪತ್ರಿ ಬಾಣಗಳಿಂದ ಹೊಡೆದನು.

05180021a ಚತ್ವಾರಸ್ತೇನ ಮೇ ವಾಹಾಃ ಸೂತಶ್ಚೈವ ವಿಶಾಂ ಪತೇ|

05180021c ಪ್ರತಿರುದ್ಧಾಸ್ತಥೈವಾಹಂ ಸಮರೇ ದಂಶಿತಃ ಸ್ಥಿತಃ||

ವಿಶಾಂಪತೇ! ನನ್ನ ನಾಲ್ಕು ಕುದುರೆಗಳು ಮತ್ತು ಸೂತನು ತಡೆಹಿಡಿಯಲ್ಪಟ್ಟರು. ಆದರೆ ನಾನು ಸಮರದಲ್ಲಿ ಕವಚಗಳಿಂದ ರಕ್ಷಿತನಾಗಿ ನಿಂತೆನು.

05180022a ನಮಸ್ಕೃತ್ಯ ಚ ದೇವೇಭ್ಯೋ ಬ್ರಾಹ್ಮಣೇಭ್ಯಶ್ಚ ಭಾರತ|

05180022c ತಮಹಂ ಸ್ಮಯನ್ನಿವ ರಣೇ ಪ್ರತ್ಯಭಾಷಂ ವ್ಯವಸ್ಥಿತಂ||

ಭಾರತ! ದೇವತೆಗಳಿಗೂ ಬ್ರಾಹ್ಮಣರಿಗೂ ನಮಸ್ಕರಿಸಿ ನಾನು ನಗುತ್ತಾ ರಣದಲ್ಲಿ ನಿಂತಿದ್ದ ಅವನಿಗೆ ಹೇಳಿದೆನು:

05180023a ಆಚಾರ್ಯತಾ ಮಾನಿತಾ ಮೇ ನಿರ್ಮರ್ಯಾದೇ ಹ್ಯಪಿ ತ್ವಯಿ|

05180023c ಭೂಯಸ್ತು ಶೃಣು ಮೇ ಬ್ರಹ್ಮನ್ಸಂಪದಂ ಧರ್ಮಸಂಗ್ರಹೇ||

“ನೀನು ಮರ್ಯಾದೆಗಳನ್ನು ದಾಟಿದರೂ ಆಚಾರ್ಯನೆಂದು ಗೌರವಿಸಿದೆ. ಬ್ರಹ್ಮನ್! ಧರ್ಮಸಂಗ್ರಹದ ಮಾರ್ಗವೇನೆಂದು ಇನ್ನೊಮ್ಮೆ ನನ್ನನ್ನು ಕೇಳು.

05180024a ಯೇ ತೇ ವೇದಾಃ ಶರೀರಸ್ಥಾ ಬ್ರಾಹ್ಮಣ್ಯಂ ಯಚ್ಚ ತೇ ಮಹತ್|

05180024c ತಪಶ್ಚ ಸುಮಹತ್ತಪ್ತಂ ನ ತೇಭ್ಯಃ ಪ್ರಹರಾಮ್ಯಹಂ||

ನಿನ್ನ ದೇಹದಲ್ಲಿ ನೆಲೆಸಿರುವ ವೇದಗಳನ್ನು, ಬ್ರಾಹ್ಮಣ್ಯವನ್ನು ಮತ್ತು ಸುಮಹತ್ತರವಾಗಿ ತಪಿಸಿದ ತಪವನ್ನು ನಾನು ಹೊಡೆಯಲಾರೆನು.

05180025a ಪ್ರಹರೇ ಕ್ಷತ್ರಧರ್ಮಸ್ಯ ಯಂ ತ್ವಂ ರಾಮ ಸಮಾಸ್ಥಿತಃ|

05180025c ಬ್ರಾಹ್ಮಣಃ ಕ್ಷತ್ರಿಯತ್ವಂ ಹಿ ಯಾತಿ ಶಸ್ತ್ರಸಮುದ್ಯಮಾತ್||

ರಾಮ! ನೀನು ಸಮಾಸ್ಥಿತನಾಗಿರುವ ಕ್ಷತ್ರಧರ್ಮಕ್ಕೆ ಹೊಡೆಯುತ್ತೇನೆ. ಏಕೆಂದರೆ ಶಸ್ತ್ರಗಳನ್ನು ಹಿಡಿದು ಬ್ರಾಹ್ಮಣನು ಕ್ಷತ್ರಿಯತ್ವವನ್ನು ಪಡೆಯುತ್ತಾನೆ.

05180026a ಪಶ್ಯ ಮೇ ಧನುಷೋ ವೀರ್ಯಂ ಪಶ್ಯ ಬಾಹ್ವೋರ್ಬಲಂ ಚ ಮೇ|

05180026c ಏಷ ತೇ ಕಾರ್ಮುಕಂ ವೀರ ದ್ವಿಧಾ ಕುರ್ಮಿ ಸಸಾಯಕಂ||

ನನ್ನ ಧನುಸ್ಸಿನ ವೀರ್ಯವನ್ನು ನೋಡು! ನನ್ನ ಬಾಹುಗಳ ಬಲವನ್ನು ನೋಡು! ವೀರ! ನಾನು ನಿನ್ನ ಬಿಲ್ಲು ಬಾಣಗಳನ್ನು ತುಂಡರಿಸುತ್ತೇನೆ!”

05180027a ತಸ್ಯಾಹಂ ನಿಶಿತಂ ಭಲ್ಲಂ ಪ್ರಾಹಿಣ್ವಂ ಭರತರ್ಷಭ|

05180027c ತೇನಾಸ್ಯ ಧನುಷಃ ಕೋಟಿಶ್ಚಿನ್ನಾ ಭೂಮಿಮಥಾಗಮತ್||

ಭರತರ್ಷಭ! ಆಗ ನಾನು ಹರಿತಾದ ಭಲ್ಲವನ್ನು ಅವನ ಮೇಲೆ ಎಸೆಯಲು ಅದು ಅವನ ಧನುಸ್ಸಿನ ತುದಿಯನ್ನು ತುಂಡುಮಾಡಿ ನೆಲಕ್ಕೆ ಬೀಳಿಸಿತು.

05180028a ನವ ಚಾಪಿ ಪೃಷತ್ಕಾನಾಂ ಶತಾನಿ ನತಪರ್ವಣಾಂ|

05180028c ಪ್ರಾಹಿಣ್ವಂ ಕಂಕಪತ್ರಾಣಾಂ ಜಾಮದಗ್ನ್ಯರಥಂ ಪ್ರತಿ||

ಜಾಮದಗ್ನಿಯ ರಥದ ಮೇಲೆ ಒಂಭೈನೂರು ನೇರ ಕಂಕಪತ್ರಿ ಬಾಣಗಳನ್ನು ಪ್ರಯೋಗಿಸಿದೆನು.

05180029a ಕಾಯೇ ವಿಷಕ್ತಾಸ್ತು ತದಾ ವಾಯುನಾಭಿಸಮೀರಿತಾಃ|

05180029c ಚೇಲುಃ ಕ್ಷರಂತೋ ರುಧಿರಂ ನಾಗಾ ಇವ ಚ ತೇ ಶರಾಃ||

ಅವನ ದೇಹಕ್ಕೆ ಗುರಿಯಾಗಿಟ್ಟ, ಗಾಳಿಯಿಂದ ವೇಗವಾಗಿ ಹೋದ ಆ ಶರಗಳು ರಕ್ತಕಾರುವ ನಾಗಗಳಂತೆ ಹಾರಿಹೋದವು.

05180030a ಕ್ಷತಜೋಕ್ಷಿತಸರ್ವಾಂಗಃ ಕ್ಷರನ್ಸ ರುಧಿರಂ ವ್ರಣೈಃ|

05180030c ಬಭೌ ರಾಮಸ್ತದಾ ರಾಜನ್ಮೇರುರ್ಧಾತೂನಿವೋತ್ಸೃಜನ್||

ರಾಜನ್! ಅವನ ಇಡೀ ದೇಹವು ಗಾಯಗಳಿಂದ ಒದ್ದೆಯಾಗಿ ರಕ್ತವು ಸುರಿಯಲು ರಾಮನು ಧಾತುಗಳನ್ನು ಸುರಿಸುತ್ತಿದ್ದ ಮೇರು ಪರ್ವತದಂತೆ ತೋರಿದನು.

05180031a ಹೇಮಂತಾಂತೇಽಶೋಕ ಇವ ರಕ್ತಸ್ತಬಕಮಂಡಿತಃ|

05180031c ಬಭೌ ರಾಮಸ್ತದಾ ರಾಜನ್ಕ್ವ ಚಿತ್ಕಿಂಶುಕಸಮ್ನಿಭಃ||

ರಾಜನ್! ಹೇಮಂತ ಋತುವಿನ ಅಂತ್ಯದಲ್ಲಿ ಕೆಂಪು ಹೂವುಗಳಿಂದ ತುಂಬಿದ ಅಶೋಕದಂತೆ ಅಥವಾ ಕಿಂಶುಕವೃಕ್ಷದಂತೆ ರಾಮನು ಕಾಣಿಸಿದನು.

05180032a ತತೋಽನ್ಯದ್ಧನುರಾದಾಯ ರಾಮಃ ಕ್ರೋಧಸಮನ್ವಿತಃ|

05180032c ಹೇಮಪುಂಖಾನ್ಸುನಿಶಿತಾಂ ಶರಾಂಸ್ತಾನ್ ಹಿ ವವರ್ಷ ಸಃ||

ಆಗ ಕ್ರೋಧಸಮನ್ವಿತನಾಗಿ ರಾಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಹೇಮಪುಂಖಗಳ, ಹರಿತ ಬಾಣಗಳ ಮಳೆಯನ್ನು ಸುರಿಸಿದನು.

05180033a ತೇ ಸಮಾಸಾದ್ಯ ಮಾಂ ರೌದ್ರಾ ಬಹುಧಾ ಮರ್ಮಭೇದಿನಃ|

05180033c ಅಕಂಪಯನ್ಮಹಾವೇಗಾಃ ಸರ್ಪಾನಲವಿಷೋಪಮಾಃ||

ಆ ರೌದ್ರ ಮರ್ಮಭೇದೀ ಸರ್ಪಾನಲವಿಷಗಳಂತಿರುವ ಬಹು ಬಾಣಗಳು ನನ್ನನ್ನು ಹೊಡೆದು ತತ್ತರಿಸುವಂತೆ ಮಾಡಿದವು.

05180034a ತತೋಽಹಂ ಸಮವಷ್ಟಭ್ಯ ಪುನರಾತ್ಮಾನಮಾಹವೇ|

05180034c ಶತಸಂಖ್ಯೈಃ ಶರೈಃ ಕ್ರುದ್ಧಸ್ತದಾ ರಾಮಮವಾಕಿರಂ||

ಆಗ ನಾನು ಯುದ್ಧದಲ್ಲಿ ಪುನಃ ಚೇತರಿಸಿಕೊಂಡು ಕೋಪದಿಂದ ರಾಮನನ್ನು ನೂರಾರು ಬಾಣಗಳಿಂದ ಹೊಡೆದೆನು.

05180035a ಸ ತೈರಗ್ನ್ಯರ್ಕಸಂಕಾಶೈಃ ಶರೈರಾಶೀವಿಷೋಪಮೈಃ|

05180035c ಶಿತೈರಭ್ಯರ್ದಿತೋ ರಾಮೋ ಮಂದಚೇತಾ ಇವಾಭವತ್||

ಆ ಅಗ್ನಿ-ಅರ್ಕ ಸಂಕಾಶ, ವಿಷಗಳಂತಿದ್ದ ಹರಿತ ಬಾಣಗಳ ರಾಶಿಯಿಂದ ಹೊಡೆತ ತಿಂದು ರಾಮನು ಮೂರ್ಛೆಗೊಂಡಂತಾದನು.

05180036a ತತೋಽಹಂ ಕೃಪಯಾವಿಷ್ಟೋ ವಿನಿಂದ್ಯಾತ್ಮಾನಮಾತ್ಮನಾ|

05180036c ಧಿಗ್ಧಿಗಿತ್ಯಬ್ರುವನ್ಯುದ್ಧಂ ಕ್ಷತ್ರಂ ಚ ಭರತರ್ಷಭ||

ಭರತರ್ಷಭ! ಆಗ ನಾನು ಕೃಪಾವಿಷ್ಟನಾಗಿ “ಕ್ಷತ್ರಧರ್ಮಕ್ಕೆ ಧಿಕ್ಕಾರ! ಯುದ್ಧಕ್ಕೆ ಧಿಕ್ಕಾರ!” ಎಂದು ಹೇಳಿ ನನ್ನನ್ನು ನಾನೇ ನಿಂದಿಸಿಕೊಂಡೆನು.

05180037a ಅಸಕೃಚ್ಚಾಬ್ರುವಂ ರಾಜಂ ಶೋಕವೇಗಪರಿಪ್ಲುತಃ|

05180037c ಅಹೋ ಬತ ಕೃತಂ ಪಾಪಂ ಮಯೇದಂ ಕ್ಷತ್ರಕರ್ಮಣಾ||

ರಾಜನ್! ಶೋಕವೇಗಪರಿಪ್ಲುತನಾಗಿ ತಪ್ಪಾಯಿತೆಂದು ಹೇಳಿದೆನು: “ಅಹೋ! ಕ್ಷತ್ರನಾಗಿ ನಾನು ಇಂದು ಈ ಪಾಪವನ್ನು ಮಾಡಿದೆನು.

05180038a ಗುರುರ್ದ್ವಿಜಾತಿರ್ಧರ್ಮಾತ್ಮಾ ಯದೇವಂ ಪೀಡಿತಃ ಶರೈಃ|

05180038c ತತೋ ನ ಪ್ರಾಹರಂ ಭೂಯೋ ಜಾಮದಗ್ನ್ಯಾಯ ಭಾರತ||

ನನ್ನ ಗುರು, ಧರ್ಮಾತ್ಮಾ ಬ್ರಾಹ್ಮಣನನ್ನು ಈ ರೀತಿಯಾಗಿ ಬಾಣಗಳಿಂದ ಪೀಡಿಸಿದೆನಲ್ಲ!” ಭಾರತ! ಆಗ ನಾನು ಜಾಮದಗ್ನಿಗೆ ಇನ್ನು ಹೊಡೆಯಲಿಲ್ಲ!

05180039a ಅಥಾವತಾಪ್ಯ ಪೃಥಿವೀಂ ಪೂಷಾ ದಿವಸಸಂಕ್ಷಯೇ|

05180039c ಜಗಾಮಾಸ್ತಂ ಸಹಸ್ರಾಂಶುಸ್ತತೋ ಯುದ್ಧಮುಪಾರಮತ್||

ಅಷ್ಟರಲ್ಲಿಯೇ ಸಹಸ್ರಾಂಶುವು ಪೃಥ್ವಿಯನ್ನು ಬೆಳಗಿಸಿ ದಿವಸಕ್ಷಯದಲ್ಲಿ ಅಸ್ತಮವಾಗಲು ನಮ್ಮ ಯುದ್ಧವೂ ನಿಂತಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ಅಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.

Image result for flowers against white background"

[1] ಮುಂದೆ ಮಹಾಭಾರತ ಯುದ್ಧದ ಅರಂಭದಲ್ಲಿ ಯುಧಿಷ್ಠಿರನು ಭೀಷ್ಮನನ್ನು ನಮಸ್ಕರಿಸಲು ಹೋದಾಗ ಭೀಷ್ಮನು ಅವನಿಗೆ ಇದೇ ಮಾತನ್ನಾಡುತ್ತಾನೆ (ಭೀಷ್ಮ ಪರ್ವ, ಅಧ್ಯಾಯ).

Comments are closed.