Udyoga Parva: Chapter 178

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೮

ಪರಶುರಾಮ-ಭೀಷ್ಮರ ಸಂವಾದ

ಪರಶುರಾಮನು ಭೀಷ್ಮನನ್ನು ಕರೆಯಿಸಿ ಅವನು ಅಂಬೆಯನ್ನು ಸ್ವೀಕರಿಸಬೇಕೆಂದು ಆಜ್ಞಾಪಿಸಲು ಭೀಷ್ಮನು ತನ್ನ ಪ್ರತಿಜ್ಞೆಯನ್ನು ನೆನಪಿಸಿಕೊಟ್ಟು ಅಂಬೆಯನ್ನು ಮದುವೆಯಾಗಲು ನಿರಾಕರಿಸಿದುದು (೧-೧೧). ಆಗ ಪರಶುರಾಮನು “ನನ್ನ ಮಾತಿನಂತೆ ಮಾಡದೇ ಇದ್ದರೆ ಇಂದೇ ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಹೇಳಲು ಅವನನ್ನು ಪ್ರೀತಿಯ ಮಾತುಗಳಿಂದ ಭೀಷ್ಮನು ಯಾಚಿಸಿದರೂ ಶಾಂತನಾಗದಿರಲು ಯುದ್ಧವನ್ನು ನಿಶ್ಚಯಿಸಿದುದು (೧೨-೩೮).

05178001 ಭೀಷ್ಮ ಉವಾಚ|

05178001a ತತಸ್ತೃತೀಯೇ ದಿವಸೇ ಸಮೇ ದೇಶೇ ವ್ಯವಸ್ಥಿತಃ|

05178001c ಪ್ರೇಷಯಾಮಾಸ ಮೇ ರಾಜನ್ಪ್ರಾಪ್ತೋಽಸ್ಮೀತಿ ಮಹಾವ್ರತಃ||

ಭೀಷ್ಮನು ಹೇಳಿದನು: “ರಾಜನ್! ಸಮ ಪ್ರದೇಶದಲ್ಲಿ ನೆಲೆಸಿದ ಮೂರನೆಯ ದಿವಸದಲ್ಲಿ ಆ ಮಹಾವ್ರತನು ನಾನು ಬಂದಿದ್ದೇನೆ ಎಂದು ಸಂದೇಶವನ್ನು ನನಗೆ ಕಳುಹಿಸಿದನು.

05178002a ತಮಾಗತಮಹಂ ಶ್ರುತ್ವಾ ವಿಷಯಾಂತಂ ಮಹಾಬಲಂ|

05178002c ಅಭ್ಯಗಚ್ಚಂ ಜವೇನಾಶು ಪ್ರೀತ್ಯಾ ತೇಜೋನಿಧಿಂ ಪ್ರಭುಂ||

05178003a ಗಾಂ ಪುರಸ್ಕೃತ್ಯ ರಾಜೇಂದ್ರ ಬ್ರಾಹ್ಮಣೈಃ ಪರಿವಾರಿತಃ|

05178003c ಋತ್ವಿಗ್ಭಿರ್ದೇವಕಲ್ಪೈಶ್ಚ ತಥೈವ ಚ ಪುರೋಹಿತೈಃ||

ರಾಜೇಂದ್ರ! ನಮ್ಮ ದೇಶದ ಗಡಿಗೆ ಆ ಮಹಾಬಲ ತೇಜೋನಿಧಿ ಪ್ರಭುವು ಬಂದಿದ್ದಾನೆಂದು ಕೇಳಿ ನಾನು ಪ್ರೀತಿಯಿಂದ ಗೋವುಗಳನ್ನು ಮುಂದಿರಿಸಿಕೊಂಡು ಬ್ರಾಹ್ಮಣರು, ಮತ್ತು ದೇವಕಲ್ಪ ಋತ್ವಿಗರು ಹಾಗೂ ಪುರೋಹಿತರಿಂದ ಸುತ್ತುವರೆಯಲ್ಪಟ್ಟು ಅವನಲ್ಲಿಗೆ ಹೋದೆನು.

05178004a ಸ ಮಾಮಭಿಗತಂ ದೃಷ್ಟ್ವಾ ಜಾಮದಗ್ನ್ಯಃ ಪ್ರತಾಪವಾನ್|

05178004c ಪ್ರತಿಜಗ್ರಾಹ ತಾಂ ಪೂಜಾಂ ವಚನಂ ಚೇದಮಬ್ರವೀತ್||

ನಾನು ಬಂದಿದುದನ್ನು ನೋಡಿ ಪ್ರತಾಪವಾನ್ ಜಾಮದಗ್ನಿಯು ಆ ಪೂಜೆಯನ್ನು ಸ್ವೀಕರಿಸಿ ಈ ಮಾತುಗಳನ್ನಾಡಿದನು:

05178005a ಭೀಷ್ಮ ಕಾಂ ಬುದ್ಧಿಮಾಸ್ಥಾಯ ಕಾಶಿರಾಜಸುತಾ ತ್ವಯಾ|

05178005c ಅಕಾಮೇಯಮಿಹಾನೀತಾ ಪುನಶ್ಚೈವ ವಿಸರ್ಜಿತಾ||

“ಭೀಷ್ಮ! ಯಾವ ಬುದ್ಧಿಯನ್ನು ಬಳಸಿ ನೀನು ಮೊದಲು ಬಯಸದೇ ಇದ್ದ ಕಾಶಿರಾಜಸುತೆಯನ್ನು ಕರೆದುಕೊಂಡು ಹೋದೆ, ಮತ್ತು ನಂತರ ಅವಳನ್ನು ವಿಸರ್ಜಿಸಿದೆ?

05178006a ವಿಭ್ರಂಶಿತಾ ತ್ವಯಾ ಹೀಯಂ ಧರ್ಮಾವಾಪ್ತೇಃ ಪರಾವರಾತ್|

05178006c ಪರಾಮೃಷ್ಟಾಂ ತ್ವಯಾ ಹೀಮಾಂ ಕೋ ಹಿ ಗಂತುಮಿಹಾರ್ಹತಿ||

ನಿನ್ನ ಕಾರಣದಿಂದ ಇವಳು ಧರ್ಮದ ಮೇಲ್ಮಟ್ಟದಿಂದ ಕೀಳುಮಟ್ಟಕ್ಕೆ ತಳ್ಳಲ್ಪಟ್ಟಿದ್ದಾಳೆ. ಏಕೆಂದರೆ ನಿನ್ನಿಂದ ಮುಟ್ಟಲ್ಪಟ್ಟ ಇವಳೊಂದಿಗೆ ಯಾರು ತಾನೇ ಹೋಗಲು ಬರುತ್ತದೆ?

05178007a ಪ್ರತ್ಯಾಖ್ಯಾತಾ ಹಿ ಶಾಲ್ವೇನ ತ್ವಯಾ ನೀತೇತಿ ಭಾರತ|

05178007c ತಸ್ಮಾದಿಮಾಂ ಮನ್ನಿಯೋಗಾತ್ಪ್ರತಿಗೃಹ್ಣೀಷ್ವ ಭಾರತ||

ಭಾರತ! ನಿನ್ನಿಂದ ಕರೆದುಕೊಂಡು ಹೋದವಳೆಂದು ಶಾಲ್ವನೂ ಕೂಡ ಇವಳನ್ನು ಹಿಂದೆ ಕಳುಹಿಸಿದ್ದಾನೆ. ಆದುದರಿಂದ ಭಾರತ! ನನ್ನ ನಿಯೋಗದಂತೆ ಇವಳನ್ನು ನೀನು ಸ್ವೀಕರಿಸು.

05178008a ಸ್ವಧರ್ಮಂ ಪುರುಷವ್ಯಾಘ್ರ ರಾಜಪುತ್ರೀ ಲಭತ್ವಿಯಂ|

05178008c ನ ಯುಕ್ತಮವಮಾನೋಽಯಂ ಕರ್ತುಂ ರಾಜ್ಞಾ ತ್ವಯಾನಘ||

ಪುರುಷವ್ಯಾಘ್ರ! ಈ ರಾಜಪುತ್ರಿಯು ಸ್ವಧರ್ಮವನ್ನು ಪಡೆಯಲಿ. ಅನಘ! ರಾಜನಾದ ನೀನು ಇವಳನ್ನು ಅಪಮಾನಿಸುವುದು ಸರಿಯಲ್ಲ.”

05178009a ತತಸ್ತಂ ನಾತಿಮನಸಂ ಸಮುದೀಕ್ಷ್ಯಾಹಮಬ್ರುವಂ|

05178009c ನಾಹಮೇನಾಂ ಪುನರ್ದದ್ಯಾಂ ಭ್ರಾತ್ರೇ ಬ್ರಹ್ಮನ್ಕಥಂ ಚನ||

ಅವನು ತುಂಬಾ ಕುಪಿತನಾಗಿಲ್ಲವೆಂದು ಗ್ರಹಿಸಿ ನಾನು ಹೇಳಿದೆನು: “ಬ್ರಹ್ಮನ್! ಇವಳನ್ನು ನಾನು ಪುನಃ ನನ್ನ ತಮ್ಮನಿಗೆ ಏನು ಮಾಡಿದರೂ ಕೊಡಲಾರೆ.

05178010a ಶಾಲ್ವಸ್ಯಾಹಮಿತಿ ಪ್ರಾಹ ಪುರಾ ಮಾಮಿಹ ಭಾರ್ಗವ|

05178010c ಮಯಾ ಚೈವಾಭ್ಯನುಜ್ಞಾತಾ ಗತಾ ಸೌಭಪುರಂ ಪ್ರತಿ||

ಭಾರ್ಗವ! ಇವಳು ಮೊದಲು “ನಾನು ಶಾಲ್ವನವಳು” ಎಂದು ನನಗೆ ಹೇಳಿದಳು. ಆದರ ನಂತರವೇ ನಾನು ಸೌಭಪುರಕ್ಕೆ ಹೋಗಲು ಅನುಮತಿಯನ್ನು ಕೂಡ ಕೊಟ್ಟೆ.

05178011a ನ ಭಯಾನ್ನಾಪ್ಯನುಕ್ರೋಶಾನ್ನ ಲೋಭಾನ್ನಾರ್ಥಕಾಮ್ಯಯಾ|

05178011c ಕ್ಷತ್ರಧರ್ಮಮಹಂ ಜಹ್ಯಾಮಿತಿ ಮೇ ವ್ರತಮಾಹಿತಂ||

ಭಯದಿಂದಾಗಲೀ, ಅನುಕ್ರೋಶದಿಂದಾಗಲೀ, ಅರ್ಥ-ಕಾಮಗಳ ಲೋಭದಿಂದಾಗಲೀ ಕ್ಷತ್ರ ಧರ್ಮವನ್ನು ತೊರೆಯುವುದಿಲ್ಲ. ಇದು ನಾನು ನಡೆಸಿಕೊಂಡು ಬಂದಿರುವ ವ್ರತ.”

05178012a ಅಥ ಮಾಮಬ್ರವೀದ್ರಾಮಃ ಕ್ರೋಧಪರ್ಯಾಕುಲೇಕ್ಷಣಃ|

05178012c ನ ಕರಿಷ್ಯಸಿ ಚೇದೇತದ್ವಾಕ್ಯಂ ಮೇ ಕುರುಪುಂಗವ||

05178013a ಹನಿಷ್ಯಾಮಿ ಸಹಾಮಾತ್ಯಂ ತ್ವಾಮದ್ಯೇತಿ ಪುನಃ ಪುನಃ|

ಆಗ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ರಾಮನು ನನಗೆ “ಕುರುಪುಂಗವ! ನನ್ನ ಮಾತಿನಂತೆ ಮಾಡದೇ ಇದ್ದರೆ ಇಂದೇ ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಪುನಃ ಪುನಃ ಹೇಳಿದನು.

05178013c ಸಂರಂಭಾದಬ್ರವೀದ್ರಾಮಃ ಕ್ರೋಧಪರ್ಯಾಕುಲೇಕ್ಷಣಃ||

05178014a ತಮಹಂ ಗೀರ್ಭಿರಿಷ್ಟಾಭಿಃ ಪುನಃ ಪುನರರಿಂದಮಂ|

05178014c ಅಯಾಚಂ ಭೃಗುಶಾರ್ದೂಲಂ ನ ಚೈವ ಪ್ರಶಶಾಮ ಸಃ||

ರಾಮನು ಹೀಗೆ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ಆವೇಶದಲ್ಲಿ ಹೇಳಿದನು. ನಾನು ಪುನಃ ಪುನಃ ಆ ಅರಿಂದಮನನ್ನು ಪ್ರೀತಿಯ ಮಾತುಗಳಿಂದ ಯಾಚಿಸಿದೆ. ಆದರೂ ಭೃಗುಶಾರ್ದೂಲನು ಶಾಂತನಾಗಲಿಲ್ಲ.

05178015a ತಮಹಂ ಪ್ರಣಮ್ಯ ಶಿರಸಾ ಭೂಯೋ ಬ್ರಾಹ್ಮಣಸತ್ತಮಂ|

05178015c ಅಬ್ರುವಂ ಕಾರಣಂ ಕಿಂ ತದ್ಯತ್ತ್ವಂ ಯೋದ್ಧುಮಿಹೇಚ್ಚಸಿ||

ಆಗ ನಾನು ಆ ಬ್ರಹ್ಮಣಸತ್ತಮನಿಗೆ ಇನ್ನೊಮ್ಮೆ ಶಿರಸಾ ನಮಸ್ಕರಿಸಿ ಕೇಳಿದೆನು: “ಯಾವ ಕಾರಣಕ್ಕಾಗಿ ನೀನು ನನ್ನೊಡನೆ ಯುದ್ಧ ಮಾಡಲು ಬಯಸುತ್ತೀಯೆ?

05178016a ಇಷ್ವಸ್ತ್ರಂ ಮಮ ಬಾಲಸ್ಯ ಭವತೈವ ಚತುರ್ವಿಧಂ|

05178016c ಉಪದಿಷ್ಟಂ ಮಹಾಬಾಹೋ ಶಿಷ್ಯೋಽಸ್ಮಿ ತವ ಭಾರ್ಗವ||

ಮಹಾಬಾಹೋ! ಬಾಲಕನಾಗಿರುವಾಗಲೇ ನನಗೆ ಚತುರ್ವಿಧದ ಅಸ್ತ್ರಗಳನ್ನು ನೀನು ಉಪದೇಶಿಸಿದ್ದೆ. ನಾನು ನಿನ್ನ ಶಿಷ್ಯ ಭಾರ್ಗವ!”

05178017a ತತೋ ಮಾಮಬ್ರವೀದ್ರಾಮಃ ಕ್ರೋಧಸಂರಕ್ತಲೋಚನಃ|

05178017c ಜಾನೀಷೇ ಮಾಂ ಗುರುಂ ಭೀಷ್ಮ ನ ಚೇಮಾಂ ಪ್ರತಿಗೃಹ್ಣಸೇ|

05178017e ಸುತಾಂ ಕಾಶ್ಯಸ್ಯ ಕೌರವ್ಯ ಮತ್ಪ್ರಿಯಾರ್ಥಂ ಮಹೀಪತೇ||

ಆಗ ರಾಮನು ಕ್ರೋಧದಿಂದ ರಕ್ತಲೋಚನನಾಗಿ ನನಗೆ ಹೇಳಿದನು: “ಭೀಷ್ಮ! ನಾನು ನಿನ್ನ ಗುರುವೆಂದು ನೀನು ತಿಳಿದಿದ್ದೀಯೆ. ಕೌರವ! ಮಹೀಪತೇ! ಆದರೂ ನೀನು ನನ್ನ ಪ್ರೀತಿಗಾಗಿ ಈ ಕಾಶಿಸುತೆಯನ್ನು ಹಿಂದೆ ತೆಗೆದುಕೊಳ್ಳುತ್ತಿಲ್ಲವಲ್ಲ!

05178018a ನ ಹಿ ತೇ ವಿದ್ಯತೇ ಶಾಂತಿರನ್ಯಥಾ ಕುರುನಂದನ|

05178018c ಗೃಹಾಣೇಮಾಂ ಮಹಾಬಾಹೋ ರಕ್ಷಸ್ವ ಕುಲಮಾತ್ಮನಃ|

05178018e ತ್ವಯಾ ವಿಭ್ರಂಶಿತಾ ಹೀಯಂ ಭರ್ತಾರಂ ನಾಭಿಗಚ್ಚತಿ||

ಕುರುನಂದನ! ಅನ್ಯಥಾ ನಿನಗೆ ಶಾಂತಿಯಿಲ್ಲವೆಂದು ತಿಳಿದುಕೋ! ಮಹಾಬಾಹೋ! ಇವಳನ್ನು ಸ್ವೀಕರಿಸಿ ನಿನ್ನ ಕುಲವನ್ನು ರಕ್ಷಿಸು. ನಿನ್ನಿಂದ ಕೀಳುಸ್ಥಾನಕ್ಕೆ ತಳ್ಳಲ್ಪಟ್ಟ ಅವಳು ಭರ್ತಾರನನ್ನು ಪಡೆಯುವುದಿಲ್ಲ.”

05178019a ತಥಾ ಬ್ರುವಂತಂ ತಮಹಂ ರಾಮಂ ಪರಪುರಂಜಯಂ|

05178019c ನೈತದೇವಂ ಪುನರ್ಭಾವಿ ಬ್ರಹ್ಮರ್ಷೇ ಕಿಂ ಶ್ರಮೇಣ ತೇ||

ಹೀಗೆ ಹೇಳುತ್ತಿರುವ ಪರಪುರಂಜಯ ರಾಮನಿಗೆ ನಾನು ಹೇಳಿದೆನು: “ಬ್ರಹ್ಮರ್ಷೇ! ಇದು ಹೀಗೆ ಆಗುವುದೇ ಇಲ್ಲ. ನೀನು ಏಕೆ ಸುಮ್ಮನೆ ಶ್ರಮಪಡುತ್ತೀಯೆ?

05178020a ಗುರುತ್ವಂ ತ್ವಯಿ ಸಂಪ್ರೇಕ್ಷ್ಯ ಜಾಮದಗ್ನ್ಯ ಪುರಾತನಂ|

05178020c ಪ್ರಸಾದಯೇ ತ್ವಾಂ ಭಗವಂಸ್ತ್ಯಕ್ತೈಷಾ ಹಿ ಪುರಾ ಮಯಾ||

ಜಾಮದಗ್ನಿ! ನನ್ನ ಪುರಾತನ ಗುರುವೆಂದು ನಿನ್ನಲ್ಲಿ ಪ್ರಸಾದವನ್ನು ಬೇಡುತ್ತಿದ್ದೇನೆ. ಭಗವನ್! ಇವಳನ್ನು ನಾನು ಹಿಂದೆಯೇ ತ್ಯಜಿಸಿಯಾಗಿದೆ.

05178021a ಕೋ ಜಾತು ಪರಭಾವಾಂ ಹಿ ನಾರೀಂ ವ್ಯಾಲೀಮಿವ ಸ್ಥಿತಾಂ|

05178021c ವಾಸಯೇತ ಗೃಹೇ ಜಾನನ್ ಸ್ತ್ರೀಣಾಂ ದೋಷಾನ್ಮಹಾತ್ಯಯಾನ್||

ಸ್ತ್ರೀಯರ ಮಹಾದೋಷಗಳನ್ನು ತಿಳಿದಿರುವ ಯಾರುತಾನೇ ಇನ್ನೊಬ್ಬನಲ್ಲಿ ಪ್ರೀತಿಯನ್ನಿಟ್ಟುಕೊಂಡಿರುವವಳನ್ನು ಹಾವಿನಂತೆ ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ?

05178022a ನ ಭಯಾದ್ವಾಸವಸ್ಯಾಪಿ ಧರ್ಮಂ ಜಹ್ಯಾಂ ಮಹಾದ್ಯುತೇ|

05178022c ಪ್ರಸೀದ ಮಾ ವಾ ಯದ್ವಾ ತೇ ಕಾರ್ಯಂ ತತ್ಕುರು ಮಾಚಿರಂ||

ವಾಸವನ ಭಯದಿಂದಲೂ ನಾನು ಧರ್ಮವನ್ನು ತೊರೆಯುವುದಿಲ್ಲ ಮಹಾದ್ಯುತೇ! ನನ್ನ ಮೇಲೆ ಕರುಣೆ ತೋರು. ಅಥವಾ ನನಗೇನು ಮಾಡಬೇಕೋ ಅದನ್ನು ಬೇಗನೇ ಮಾಡು.

05178023a ಅಯಂ ಚಾಪಿ ವಿಶುದ್ಧಾತ್ಮನ್ಪುರಾಣೇ ಶ್ರೂಯತೇ ವಿಭೋ|

05178023c ಮರುತ್ತೇನ ಮಹಾಬುದ್ಧೇ ಗೀತಃ ಶ್ಲೋಕೋ ಮಹಾತ್ಮನಾ||

ವಿಶುದ್ಧಾತ್ಮನ್! ವಿಭೋ! ಮಹಾಬುದ್ಧಿ ಮಹಾತ್ಮ ಮರುತ್ತನು ಪುರಾಣಗಳಲ್ಲಿ ಈ ಗೀತ ಶ್ಲೋಕವನ್ನು ಹೇಳಿದ್ದಾನೆ:

05178024a ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|

05178024c ಉತ್ಪಥಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಂ||

“ಗುರುವು ಬಯಸಿದುದನ್ನು ಮಾಡಬೇಕು. ಅವನು ತಿಳಿಯದೇ ಇದ್ದಿರಬಹುದು. ತಪ್ಪು-ಸರಿಗಳನ್ನು ಅರಿಯದೇ ಇದ್ದಿರಬಹುದು. ಅಥವಾ ಧರ್ಮದ ದಾರಿಯನ್ನು ತಪ್ಪಿರಬಹುದು.”

05178025a ಸ ತ್ವಂ ಗುರುರಿತಿ ಪ್ರೇಮ್ಣಾ ಮಯಾ ಸಮ್ಮಾನಿತೋ ಭೃಶಂ|

05178025c ಗುರುವೃತ್ತಂ ನ ಜಾನೀಷೇ ತಸ್ಮಾದ್ಯೋತ್ಸ್ಯಾಮ್ಯಹಂ ತ್ವಯಾ||

ನೀನು ಗುರುವೆಂಬ ಪ್ರೇಮದಿಂದ ನಾನು ನಿನ್ನನ್ನು ತುಂಬಾ ಸಮ್ಮಾನಿಸುತ್ತೇನೆ. ಗುರುವಿನ ನಡತೆಯು ನಿನಗೆ ತಿಳಿದಿಲ್ಲ. ಆದುದರಿಂದ ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ.

05178026a ಗುರುಂ ನ ಹನ್ಯಾಂ ಸಮರೇ ಬ್ರಾಹ್ಮಣಂ ಚ ವಿಶೇಷತಃ|

05178026c ವಿಶೇಷತಸ್ತಪೋವೃದ್ಧಮೇವಂ ಕ್ಷಾಂತಂ ಮಯಾ ತವ||

ಆದರೆ ಸಮರದಲ್ಲಿ ಗುರುವನ್ನು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನನ್ನು, ನಾನು ಕೊಲ್ಲುವುದಿಲ್ಲ. ತಪೋವೃದ್ಧನಾದ ನಿನ್ನಲ್ಲಿ ನನಗೆ ವಿಶೇಷವಾದ ಕ್ಷಾಂತಿಯಿದೆ.

05178027a ಉದ್ಯತೇಷುಮಥೋ ದೃಷ್ಟ್ವಾ ಬ್ರಾಹ್ಮಣಂ ಕ್ಷತ್ರಬಂಧುವತ್|

05178027c ಯೋ ಹನ್ಯಾತ್ಸಮರೇ ಕ್ರುದ್ಧೋ ಯುಧ್ಯಂತಮಪಲಾಯಿನಂ|

05178027e ಬ್ರಹ್ಮಹತ್ಯಾ ನ ತಸ್ಯ ಸ್ಯಾದಿತಿ ಧರ್ಮೇಷು ನಿಶ್ಚಯಃ||

ಆದರೆ ಆಯುಧವನ್ನು ಹಿಡಿದೆತ್ತಿ ಹೋರಾಡುವ ಅಥವಾ ಯುದ್ಧದಲ್ಲಿ ಪಲಾಯನ ಮಾಡದೇ ಇದ್ದ ಬ್ರಾಹ್ಮಣನನ್ನು ಕ್ಷತ್ರಿಯನಾದವನು ಕೊಂದರೆ ಅವನಿಗೆ ಬ್ರಹ್ಮಹತ್ಯಾ ದೋಷವಿಲ್ಲವೆಂದು ಧರ್ಮನಿಶ್ಚಯವಿದೆ.

05178028a ಕ್ಷತ್ರಿಯಾಣಾಂ ಸ್ಥಿತೋ ಧರ್ಮೇ ಕ್ಷತ್ರಿಯೋಽಸ್ಮಿ ತಪೋಧನ|

05178028c ಯೋ ಯಥಾ ವರ್ತತೇ ಯಸ್ಮಿಂಸ್ತಥಾ ತಸ್ಮಿನ್ಪ್ರವರ್ತಯನ್|

05178028e ನಾಧರ್ಮಂ ಸಮವಾಪ್ನೋತಿ ನರಃ ಶ್ರೇಯಶ್ಚ ವಿಂದತಿ||

ತಪೋಧನ! ಕ್ಷತ್ರಿಯರ ಧರ್ಮದಲ್ಲಿರುವ ಕ್ಷತ್ರಿಯನು ನಾನು. ಇನ್ನೊಬ್ಬನು ಹೇಗೆ ವರ್ತಿಸುತ್ತಾನೋ ಅದರ ಪ್ರಕಾರ ಪ್ರವರ್ತಿಸಿದರೆ ಅವನು ಅಧರ್ಮವನ್ನು ಪಡೆಯುವುದಿಲ್ಲ. ಅಂಥಹ ನರನು ಶ್ರೇಯಸ್ಸನ್ನು ಪಡೆಯುತ್ತಾನೆ.

05178029a ಅರ್ಥೇ ವಾ ಯದಿ ವಾ ಧರ್ಮೇ ಸಮರ್ಥೋ ದೇಶಕಾಲವಿತ್|

05178029c ಅನರ್ಥಸಂಶಯಾಪನ್ನಃ ಶ್ರೇಯಾನ್ನಿಃಸಂಶಯೇನ ಚ||

ಅರ್ಥ, ಧರ್ಮ, ಅಥವಾ ದೇಶಕಾಲಗಳಲ್ಲಿ ಸಮರ್ಥನಾದವನು ಅವನಿಗಾಗುವ ಲಾಭಗಳ ಕುರಿತು ಸಂಶಯವಿದ್ದರೆ ಆ ಸಂಶಯವನ್ನು ಹೋಗಲಾಡಿಸಿಕೊಂಡರೆ ಒಳ್ಳೆಯದು.

05178030a ಯಸ್ಮಾತ್ಸಂಶಯಿತೇಽರ್ಥೇಽಸ್ಮಿನ್ಯಥಾನ್ಯಾಯಂ ಪ್ರವರ್ತಸೇ|

05178030c ತಸ್ಮಾದ್ಯೋತ್ಸ್ಯಾಮಿ ಸಹಿತಸ್ತ್ವಯಾ ರಾಮ ಮಹಾಹವೇ|

05178030e ಪಶ್ಯ ಮೇ ಬಾಹುವೀರ್ಯಂ ಚ ವಿಕ್ರಮಂ ಚಾತಿಮಾನುಷಂ||

ಅಸಂಶಯವಾಗಿದ್ದುದನ್ನು ನ್ಯಾಯವೆಂದು ನಿರ್ಣಯಿಸಿ ನೀನು ವರ್ತಿಸುತ್ತಿರುವುದರಿಂದ ನಾನು ನಿನ್ನೊಂದಿಗೆ ಮಹಾರಣದಲ್ಲಿ ಯುದ್ಧಮಾಡುತ್ತೇನೆ. ನನ್ನ ಬಾಹುವೀರ್ಯವನ್ನೂ ಅತಿಮಾನುಷ ವಿಕ್ರಮವನ್ನೂ ನೋಡು!

05178031a ಏವಂ ಗತೇಽಪಿ ತು ಮಯಾ ಯಚ್ಚಕ್ಯಂ ಭೃಗುನಂದನ|

05178031c ತತ್ಕರಿಷ್ಯೇ ಕುರುಕ್ಷೇತ್ರೇ ಯೋತ್ಸ್ಯೇ ವಿಪ್ರ ತ್ವಯಾ ಸಹ|

05178031e ದ್ವಂದ್ವೇ ರಾಮ ಯಥೇಷ್ಟಂ ತೇ ಸಜ್ಜೋ ಭವ ಮಹಾಮುನೇ||

ಭೃಗುನಂದನ! ಇಲ್ಲಿಯ ವರೆಗೆ ಬಂದೂ ನನಗೆ ಏನು ಶಕ್ಯವಾಗುತ್ತದೆಯೋ ಅದನ್ನು ಮಾಡುತ್ತೇನೆ. ವಿಪ್ರ! ನಿನ್ನೊಂದಿಗೆ ಕುರುಕ್ಷೇತ್ರದಲ್ಲಿ ಹೋರಾಡುತ್ತೇನೆ. ರಾಮ! ಇಷ್ಟವಾದಷ್ಟೂ ದ್ವಂದ್ವಯುದ್ಧ ಮಾಡು! ಮಹಾಮುನೇ! ಸಿದ್ಧನಾಗು!

05178032a ತತ್ರ ತ್ವಂ ನಿಹತೋ ರಾಮ ಮಯಾ ಶರಶತಾಚಿತಃ|

05178032c ಲಪ್ಸ್ಯಸೇ ನಿರ್ಜಿತಾಽಲ್ಲೋಕಾಂ ಶಸ್ತ್ರಪೂತೋ ಮಹಾರಣೇ||

ರಾಮ! ಅಲ್ಲಿ ನಿನ್ನನ್ನು ಕೊಲ್ಲುತ್ತೇನೆ. ನನ್ನ ನೂರಾರು ಶರಗಳಿಂದ ಹೊಡೆಯಲ್ಪಟ್ಟು ಮಹಾರಣದಲ್ಲಿ ನನ್ನ ಶಸ್ತ್ರಗಳಿಂದ ಪುನೀತನಾಗಿ ಗೆದ್ದ ಲೋಕಗಳನ್ನು ಸೇರುತ್ತೀಯೆ!

05178033a ಸ ಗಚ್ಚ ವಿನಿವರ್ತಸ್ವ ಕುರುಕ್ಷೇತ್ರಂ ರಣಪ್ರಿಯ|

05178033c ತತ್ರೈಷ್ಯಾಮಿ ಮಹಾಬಾಹೋ ಯುದ್ಧಾಯ ತ್ವಾಂ ತಪೋಧನ||

ಆದುದರಿಂದ ರಣಪ್ರಿಯ! ಹೋಗಿ ಕುರುಕ್ಷೇತ್ರಕ್ಕೆ ಹಿಂದಿರುಗು. ತಪೋಧನ! ಮಹಾಬಾಹೋ! ಅಲ್ಲಿಯೇ ನಿನ್ನನ್ನು ಯುದ್ಧದಲ್ಲಿ ಭೇಟಿಯಾಗುತ್ತೇನೆ.

05178034a ಅಪಿ ಯತ್ರ ತ್ವಯಾ ರಾಮ ಕೃತಂ ಶೌಚಂ ಪುರಾ ಪಿತುಃ|

05178034c ತತ್ರಾಹಮಪಿ ಹತ್ವಾ ತ್ವಾಂ ಶೌಚಂ ಕರ್ತಾಸ್ಮಿ ಭಾರ್ಗವ||

ಭಾರ್ಗವ! ಹಿಂದೆ ಎಲ್ಲಿ ನೀನು ನಿನ್ನ ಪಿತೃಗಳಿಗೆ ಪವಿತ್ರವಾಗಿದ್ದೆಯೋ ಅಲ್ಲಿಯೇ ನಿನ್ನನ್ನು ಕೊಂದು ನಾನು ಶೌಚವನ್ನು ಮಾಡುತ್ತೇನೆ.

05178035a ತತ್ರ ಗಚ್ಚಸ್ವ ರಾಮ ತ್ವಂ ತ್ವರಿತಂ ಯುದ್ಧದುರ್ಮದ|

05178035c ವ್ಯಪನೇಷ್ಯಾಮಿ ತೇ ದರ್ಪಂ ಪೌರಾಣಂ ಬ್ರಾಹ್ಮಣಬ್ರುವ||

ಯುದ್ಧದುರ್ಮದ ರಾಮ! ಅಲ್ಲಿ ಬೇಗ ಹೋಗು. ಹಿಂದಿನಿಂದ ನಿನಗಿರುವ ಈ ಬ್ರಾಹ್ಮಣನೆಂಬ ದರ್ಪವನ್ನು ಕಳೆಯುತ್ತೇನೆ.

05178036a ಯಚ್ಚಾಪಿ ಕತ್ಥಸೇ ರಾಮ ಬಹುಶಃ ಪರಿಷತ್ಸು ವೈ|

05178036c ನಿರ್ಜಿತಾಃ ಕ್ಷತ್ರಿಯಾ ಲೋಕೇ ಮಯೈಕೇನೇತಿ ತಚ್ಚೃಣು||

ರಾಮ! ನಾನೊಬ್ಬನೇ ಲೋಕದ ಕ್ಷತ್ರಿಯರನ್ನು ಸೋಲಿಸಿದೆ ಎಂದು ಬಹಳಷ್ಟು ಪರಿಷತ್ತುಗಳಲ್ಲಿ ಕೊಚ್ಚಿಕೊಳ್ಳುತ್ತಾ ಬಂದಿದ್ದೀಯೆ! ನನ್ನನ್ನು ಕೇಳು!

05178037a ನ ತದಾ ಜಾಯತೇ ಭೀಷ್ಮೋ ಮದ್ವಿಧಃ ಕ್ಷತ್ರಿಯೋಽಪಿ ವಾ|

05178037c ಯಸ್ತೇ ಯುದ್ಧಮಯಂ ದರ್ಪಂ ಕಾಮಂ ಚ ವ್ಯಪನಾಶಯೇತ್||

ಆ ಸಮಯದಲ್ಲಿ ಭೀಷ್ಮನು ಹುಟ್ಟಿರಲಿಲ್ಲ. ಅಥವಾ ಯುದ್ಧದಲ್ಲಿ ನಿನಗಿರುವ ದರ್ಪ ಮತ್ತು ಆಸೆಯನ್ನು ಕಳೆಯುವ ನನ್ನಂಥಹ ಕ್ಷತ್ರಿಯನೂ ಕೂಡ ಇರಲಿಲ್ಲ.

05178038a ಸೋಽಹಂ ಜಾತೋ ಮಹಾಬಾಹೋ ಭೀಷ್ಮಃ ಪರಪುರಂಜಯಃ|

05178038c ವ್ಯಪನೇಷ್ಯಾಮಿ ತೇ ದರ್ಪಂ ಯುದ್ಧೇ ರಾಮ ನ ಸಂಶಯಃ|

ಮಹಾಬಾಹೋ! ಈಗ ನಾನು - ಪರಪುರಂಜಯ ಭೀಷ್ಮನು - ಹುಟ್ಟಿದ್ದೇನೆ. ರಾಮ! ಯುದ್ಧದಲ್ಲಿ ನಿನ್ನ ದರ್ಪವನ್ನು ಮುರಿಯುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣೇ ಅಷ್ಟಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಶುರಾಮಭೀಷ್ಮರ ಕುರುಕ್ಷೇತ್ರಾವತರಣದಲ್ಲಿ ನೂರಾಎಪ್ಪತ್ತೆಂಟನೆಯ ಅಧ್ಯಾಯವು.

Image result for flowers against white background"

Comments are closed.