Udyoga Parva: Chapter 173

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೩

ಶೈಖಾವತ್ಯ-ಅಂಬೆಯರ ಸಂವಾದ

ಹತಾಶಳಾದ ಅಂಬೆಯು ಶಾಲ್ವ, ತಂದೆ ಮತ್ತು ಭೀಷ್ಮರನ್ನು ನಿಂದಿಸಿ, ತನಗೆ ಕಷ್ಟ ತಂದ ಈ ಮೂವರಲ್ಲಿ ಭೀಷ್ಮನೇ ಮುಖ್ಯನೆಂದೂ, ಅವನನ್ನು ತಪಸ್ಸನ್ನಾಚರಿಸಿಯಾಗಲೀ ಯುದ್ಧದಲ್ಲಿಯಾಗಲೀ ಸೋಲಿಸಬೇಕೆಂದು ನಿಶ್ಚಯಿಸಿ ತಪೋವನವೊಂದನ್ನು ಸೇರಿದುದು (೧-೯). ಅಲ್ಲಿ ಮುನಿ ಶೈಖಾವತ್ಯನಲ್ಲಿ ತನಗೆ ತಪಸ್ಸಿನ ಉಪದೇಶವನ್ನು ನೀಡಬೇಕೆಂದು ಕೇಳಿಕೊಳ್ಳುವುದು (೧೦-೧೮).

05173001 ಭೀಷ್ಮ ಉವಾಚ|

05173001a ಸಾ ನಿಷ್ಕ್ರಮಂತೀ ನಗರಾಚ್ಚಿಂತಯಾಮಾಸ ಭಾರತ|

05173001c ಪೃಥಿವ್ಯಾಂ ನಾಸ್ತಿ ಯುವತಿರ್ವಿಷಮಸ್ಥತರಾ ಮಯಾ|

05173001e ಬಾಂಧವೈರ್ವಿಪ್ರಹೀನಾಸ್ಮಿ ಶಾಲ್ವೇನ ಚ ನಿರಾಕೃತಾ||

ಭೀಷ್ಮನು ಹೇಳಿದನು: “ಭಾರತ! ನಗರದಿಂದ ಹೊರಡುವಾಗ ಅವಳು ಚಿಂತಿಸಿದಳು: “ನನ್ನಂತಹ ವಿಷಮ ಪರಿಸ್ಥಿತಿಯಲ್ಲಿರುವ ಯುವತಿಯು ಭೂಮಿಯ ಮೇಲೇ ಇಲ್ಲ. ಬಾಂಧವರನ್ನು ಕಳೆದುಕೊಂಡಿದ್ದೇನೆ. ಶಾಲ್ವನಿಂದ ನಿರಾಕೃತಳಾಗಿದ್ದೇನೆ.

05173002a ನ ಚ ಶಕ್ಯಂ ಪುನರ್ಗಂತುಂ ಮಯಾ ವಾರಣಸಾಹ್ವಯಂ|

05173002c ಅನುಜ್ಞಾತಾಸ್ಮಿ ಭೀಷ್ಮೇಣ ಶಾಲ್ವಮುದ್ದಿಶ್ಯ ಕಾರಣಂ||

ನಾನು ಪುನಃ ವಾರಣಸಾಹ್ವಯಕ್ಕೆ ಹೋಗಲು ಶಕ್ಯಳಿಲ್ಲ. ಶಾಲ್ವನನ್ನು ಬಯಸಿದ ಕಾರಣದಿಂದ ಭೀಷ್ಮನಿಂದ ಅನುಜ್ಞಾತಳಾಗಿದ್ದೇನೆ.

05173003a ಕಿಂ ನು ಗರ್ಹಾಮ್ಯಥಾತ್ಮಾನಮಥ ಭೀಷ್ಮಂ ದುರಾಸದಂ||

05173003c ಆಹೋ ಸ್ವಿತ್ಪಿತರಂ ಮೂಢಂ ಯೋ ಮೇಽಕಾರ್ಷೀತ್ಸ್ವಯಂವರಂ|

ಆಹೋ! ನನ್ನನ್ನೇ ನಿಂದಿಸಲೇ ಅಥವಾ ದುರಾಸದನಾದ ಭೀಷ್ಮನನ್ನು ದೂರಲೇ? ಅಥವಾ ನನ್ನ ಸ್ವಯಂವರವನ್ನು ಆಯೋಜಿಸಿದ ಮೂಢ ತಂದೆಯನ್ನು ದೂರಲೇ?

05173004a ಮಮಾಯಂ ಸ್ವಕೃತೋ ದೋಷೋ ಯಾಹಂ ಭೀಷ್ಮರಥಾತ್ತದಾ|

05173004c ಪ್ರವೃತ್ತೇ ವೈಶಸೇ ಯುದ್ಧೇ ಶಾಲ್ವಾರ್ಥಂ ನಾಪತಂ ಪುರಾ|

05173004e ತಸ್ಯೇಯಂ ಫಲನಿರ್ವೃತ್ತಿರ್ಯದಾಪನ್ನಾಸ್ಮಿ ಮೂಢವತ್||

ಹಿಂದೆ ಘೋರ ಯುದ್ಧವು ನಡೆಯುತ್ತಿರುವಾಗ ನಾನು ಭೀಷ್ಮನ ರಥದಿಂದ ಕೆಳಗೆ ಹಾರಿ ಶಾಲ್ವನಿಗಾಗಿ ಓಡಿ ಹೋಗದೇ ಇದ್ದುದೇ ನಾನು ಮಾಡಿದ ತಪ್ಪು. ಅದರ ಫಲವನ್ನೇ ಮೂಢಳಂತೆ ನಾನು ಈಗ ಅನುಭವಿಸಬೇಕಾಗಿದೆ!

05173005a ಧಿಗ್ಭೀಷ್ಮಂ ಧಿಕ್ಚ ಮೇ ಮಂದಂ ಪಿತರಂ ಮೂಢಚೇತಸಂ|

05173005c ಯೇನಾಹಂ ವೀರ್ಯಶುಲ್ಕೇನ ಪಣ್ಯಸ್ತ್ರೀವತ್ಪ್ರವೇರಿತಾ||

ಭೀಷ್ಮನಿಗೆ ಧಿಕ್ಕಾರ! ನನ್ನನ್ನು ಈ ರೀತಿ ವೀರ್ಯಶುಲ್ಕದ ಸ್ತ್ರೀಪಣವನ್ನಾಗಿ ಇರಿಸಿದ ನನ್ನ ಮಂದ ಮೂಢಚೇತಸ ತಂದೆಗೆ ಧಿಕ್ಕಾರ.

05173006a ಧಿಂ ಮಾಂ ಧಿಕ್ಶಾಲ್ವರಾಜಾನಂ ಧಿಗ್ಧಾತಾರಮಥಾಪಿ ಚ|

05173006c ಯೇಷಾಂ ದುರ್ನೀತಭಾವೇನ ಪ್ರಾಪ್ತಾಸ್ಮ್ಯಾಪದಮುತ್ತಮಾಂ||

ನನಗೇ ಧಿಕ್ಕಾರ! ಶಾಲ್ವರಾಜನಿಗೆ ಧಿಕ್ಕಾರ! ಧಾತಾರನಿಗೂ ಧಿಕ್ಕಾರ! ಇವರ ದುರ್ನೀತಭಾವದಿಂದ ನಾನು ಈ ಅಧಿಕ ಆಪತ್ತನ್ನು ಹೊಂದಿದ್ದೇನೆ.

05173007a ಸರ್ವಥಾ ಭಾಗಧೇಯಾನಿ ಸ್ವಾನಿ ಪ್ರಾಪ್ನೋತಿ ಮಾನವಃ|

05173007c ಅನಯಸ್ಯಾಸ್ಯ ತು ಮುಖಂ ಭೀಷ್ಮಃ ಶಾಂತನವೋ ಮಮ||

ಮಾನವನು ಎಂದೂ ಭಾಗ್ಯವು ಕೊಟ್ಟಿರುವುದನ್ನು ಪಡೆಯುತ್ತಾನೆ. ಆದರೆ ಭೀಷ್ಮ ಶಾಂತನವನು ನನ್ನ ಕಷ್ಟಗಳನ್ನು ತಂದವರಲ್ಲಿ ಮುಖ್ಯನು.

05173008a ಸಾ ಭೀಷ್ಮೇ ಪ್ರತಿಕರ್ತವ್ಯಮಹಂ ಪಶ್ಯಾಮಿ ಸಾಂಪ್ರತಂ|

05173008c ತಪಸಾ ವಾ ಯುಧಾ ವಾಪಿ ದುಃಖಹೇತುಃ ಸ ಮೇ ಮತಃ|

05173008e ಕೋ ನು ಭೀಷ್ಮಂ ಯುಧಾ ಜೇತುಮುತ್ಸಹೇತ ಮಹೀಪತಿಃ||

ಆದುದರಿಂದ ತಪಸ್ಸನ್ನು ಮಾಡಿ ಅಥವಾ ಯುದ್ಧವನ್ನು ಮಾಡಿ ಭೀಷ್ಮನೊಂದಿಗೆ ಸೇಡು ತೀರಿಸಿಕೊಳ್ಳುವುದೇ ಸರಿಯೆಂದು ತೋರುತ್ತಿದೆ. ಏಕೆಂದರೆ ನನ್ನ ದುಃಖಗಳಿಗೆ ಅವನೇ ಕಾರಣನೆಂದು ನನಗನ್ನಿಸುತ್ತದೆ. ಆದರೆ ಯಾವ ಮಹೀಪತಿಯು ತಾನೇ ಯುದ್ಧದಲ್ಲಿ ಭೀಷ್ಮನನ್ನು ಜಯಿಸಲು ಮುಂದೆ ಬರುತ್ತಾನೆ?”

05173009a ಏವಂ ಸಾ ಪರಿನಿಶ್ಚಿತ್ಯ ಜಗಾಮ ನಗರಾದ್ಬಹಿಃ|

05173009c ಆಶ್ರಮಂ ಪುಣ್ಯಶೀಲಾನಾಂ ತಾಪಸಾನಾಂ ಮಹಾತ್ಮನಾಂ|

05173009e ತತಸ್ತಾಮವಸದ್ರಾತ್ರಿಂ ತಾಪಸೈಃ ಪರಿವಾರಿತಾ||

ಹೀಗೆ ನಿಶ್ಚಯಿಸಿ ಅವಳು ನಗರದಿಂದ ಹೊರಬಂದಳು. ಪುಣ್ಯಶೀಲ ಮಹಾತ್ಮ ತಾಪಸರ ಆಶ್ರಮವನ್ನು ತಲುಪಿ ಅಲ್ಲಿ ತಾಪಸರಿಂದ ಪರಿವಾರಿತಳಾಗಿ ರಾತ್ರಿಯನ್ನು ಕಳೆದಳು.

05173010a ಆಚಖ್ಯೌ ಚ ಯಥಾ ವೃತ್ತಂ ಸರ್ವಮಾತ್ಮನಿ ಭಾರತ|

05173010c ವಿಸ್ತರೇಣ ಮಹಾಬಾಹೋ ನಿಖಿಲೇನ ಶುಚಿಸ್ಮಿತಾ|

05173010e ಹರಣಂ ಚ ವಿಸರ್ಗಂ ಚ ಶಾಲ್ವೇನ ಚ ವಿಸರ್ಜನಂ||

ಭಾರತ! ಮಹಾಬಾಹೋ! ತನಗೆ ನಡೆದುದೆಲ್ಲವನ್ನೂ - ಅಪಹರಣ, ಬಿಡುಗಡೆ ಮತ್ತು ಶಾಲ್ವನಿಂದ ತಿರಸ್ಕೃತಳಾದುದು - ಎಲ್ಲವನ್ನೂ ವಿಸ್ತಾರವಾಗಿ ಏನನ್ನೂ ಬಿಡದೇ ಆ ಶುಚಿಸ್ಮಿತೆಯು ಅವರಿಗೆ ಹೇಳಿದಳು.

05173011a ತತಸ್ತತ್ರ ಮಹಾನಾಸೀದ್ಬ್ರಾಹ್ಮಣಃ ಸಂಶಿತವ್ರತಃ|

05173011c ಶೈಖಾವತ್ಯಸ್ತಪೋವೃದ್ಧಃ ಶಾಸ್ತ್ರೇ ಚಾರಣ್ಯಕೇ ಗುರುಃ||

ಆಗ ಅಲ್ಲಿ ಶೈಖಾವತ್ಯದ ಮಹಾನ್‌ ಬ್ರಾಹ್ಮಣ, ಸಂಶಿತವ್ರತ, ತಪೋವೃದ್ಧ, ಶಾಸ್ತ್ರ-ಅರಣ್ಯಕಗಳ ಗುರುವಿದ್ದನು.

05173012a ಆರ್ತಾಂ ತಾಮಾಹ ಸ ಮುನಿಃ ಶೈಖಾವತ್ಯೋ ಮಹಾತಪಾಃ|

05173012c ನಿಃಶ್ವಸಂತೀಂ ಸತೀಂ ಬಾಲಾಂ ದುಃಖಶೋಕಪರಾಯಣಾಂ||

ಆ ಮಹಾತಪಸ್ವಿ ಮುನಿ ಶೈಖಾವತ್ಯನು ಆರ್ತಳಾದ, ಬಿಸಿಯುಸಿರು ಬಿಡುತ್ತಿದ್ದ, ಸತೀ, ಬಾಲಕಿ, ದುಃಖಶೋಕಪರಾಯಣೆಗೆ ಹೇಳಿದನು:

05173013a ಏವಂ ಗತೇ ಕಿಂ ನು ಭದ್ರೇ ಶಕ್ಯಂ ಕರ್ತುಂ ತಪಸ್ವಿಭಿಃ|

05173013c ಆಶ್ರಮಸ್ಥೈರ್ಮಹಾಭಾಗೈಸ್ತಪೋನಿತ್ಯೈರ್ಮಹಾತ್ಮಭಿಃ||

“ಭದ್ರೇ! ಹೀಗಿರುವಾಗ ಆಶ್ರಮದಲ್ಲಿರುವ ಮಹಾಭಾಗ ತಪೋನಿತ್ಯ ಮಹಾತ್ಮ ತಪಸ್ವಿಗಳಾದರೋ ಏನು ಮಾಡಲು ಶಕ್ಯರು?”

05173014a ಸಾ ತ್ವೇನಮಬ್ರವೀದ್ರಾಜನ್ಕ್ರಿಯತಾಂ ಮದನುಗ್ರಹಃ|

05173014c ಪ್ರವ್ರಾಜಿತುಮಿಹೇಚ್ಚಾಮಿ ತಪಸ್ತಪ್ಸ್ಯಾಮಿ ದುಶ್ಚರಂ||

ರಾಜನ್! ಅವಳು ಅವನಿಗೆ ಹೇಳಿದಳು: “ನನಗೆ ಅನುಗ್ರಹವನ್ನು ಮಾಡಬೇಕು. ನಾನು ಪ್ರವ್ರಾಜಿತಳಾಗಲು ಬಯಸುತ್ತೇನೆ. ದುಶ್ಚರ ತಪಸ್ಸನ್ನು ತಪಿಸುತ್ತೇನೆ.

05173015a ಮಯೈವೈತಾನಿ ಕರ್ಮಾಣಿ ಪೂರ್ವದೇಹೇಷು ಮೂಢಯಾ|

05173015c ಕೃತಾನಿ ನೂನಂ ಪಾಪಾನಿ ತೇಷಾಮೇತತ್ಫಲಂ ಧ್ರುವಂ||

ಹಿಂದಿನ ದೇಹಗಳಲ್ಲಿರುವಾಗ ನಾನು ಮೂಢ ಕರ್ಮಗಳನ್ನು ಮಾಡಿದ್ದಿರಬಹುದು. ಮಾಡಿದ ಪಾಪಗಳಿಗೆ ಈ ಫಲವು ದೊರಕಿದೆ ಎನ್ನುವುದು ಖಂಡಿತ.

05173016a ನೋತ್ಸಹೇಯಂ ಪುನರ್ಗಂತುಂ ಸ್ವಜನಂ ಪ್ರತಿ ತಾಪಸಾಃ|

05173016c ಪ್ರತ್ಯಾಖ್ಯಾತಾ ನಿರಾನಂದಾ ಶಾಲ್ವೇನ ಚ ನಿರಾಕೃತಾ||

ತಾಪಸರೇ! ಶಾಲ್ವನಿಂದ ತನ್ನವಳೆಂದು ಹೇಳಿಸಿಕೊಳ್ಳದೇ, ಸಮಾಧಾನವನ್ನು ಪಡೆಯದೇ, ನಿರಾಕೃತಳಾಗಿ ನನ್ನವರ ಬಳಿ ಪುನಃ ಹೋಗಲು ಬಯಸುವುದಿಲ್ಲ.

05173017a ಉಪದಿಷ್ಟಮಿಹೇಚ್ಚಾಮಿ ತಾಪಸ್ಯಂ ವೀತಕಲ್ಮಷಾಃ|

05173017c ಯುಷ್ಮಾಭಿರ್ದೇವಸಂಕಾಶಾಃ ಕೃಪಾ ಭವತು ವೋ ಮಯಿ||

ಕಲ್ಮಶವಿಲ್ಲದವರೇ! ತಪಸ್ಸಿನ ಕುರಿತು ಉಪದೇಶವನ್ನು ಪಡೆಯಲು ಬಯಸುತ್ತೇನೆ. ದೇವಸಂಕಾಶರಾದ ನೀವು ನನಗೆ ಕೃಪರಾಗಬೇಕು.

05173018a ಸ ತಾಮಾಶ್ವಾಸಯತ್ಕನ್ಯಾಂ ದೃಷ್ಟಾಂತಾಗಮಹೇತುಭಿಃ|

05173018c ಸಾಂತ್ವಯಾಮಾಸ ಕಾರ್ಯಂ ಚ ಪ್ರತಿಜಜ್ಞೇ ದ್ವಿಜೈಃ ಸಹ||

ಅವನು ಆ ಕನ್ಯೆಗೆ ಆಶ್ವಾಸನೆಯನ್ನಿತ್ತನು. ದೃಷ್ಟಾಂತ, ಆಗಮ, ಕಾರಣಗಳಿಂದ ಸಂತವಿಸಿದನು. ದ್ವಿಜರೊಂದಿಗೆ ಕಾರ್ಯವನ್ನು ಮಾಡುತ್ತೇವೆಂದು ಪ್ರತಿಜ್ಞೆಗೈದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಶೈಕಾವತ್ಯಾಂಬಾಸಂವಾದೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಶೈಕಾವತ್ಯಾಂಬಾಸಂವಾದದಲ್ಲಿ ನೂರಾಎಪ್ಪತ್ಮೂರನೆಯ ಅಧ್ಯಾಯವು.

Image result for indian motifs

Comments are closed.