Udyoga Parva: Chapter 172

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೨

ಶಾಲ್ವನು ಅಂಬೆಯನ್ನು ತಿರಸ್ಕರಿಸಿದುದು

ಅನುಜ್ಞೆಯನ್ನು ಪಡೆದ ಅಂಬೆಯು ಶಾಲ್ವನಲ್ಲಿಗೆ ಹೋಗಲು, ಅವನು ಅವಳನ್ನು ಎಷ್ಟು ಹೇಳಿದರೂ ತಿರಸ್ಕರಿಸಿದುದು (೧-೨೩).

05172001 ಭೀಷ್ಮ ಉವಾಚ|

05172001a ತತೋಽಹಂ ಸಮನುಜ್ಞಾಪ್ಯ ಕಾಲೀಂ ಸತ್ಯವತೀಂ ತದಾ|

05172001c ಮಂತ್ರಿಣಶ್ಚ ದ್ವಿಜಾಂಶ್ಚೈವ ತಥೈವ ಚ ಪುರೋಹಿತಾನ್|

05172001e ಸಮನುಜ್ಞಾಸಿಷಂ ಕನ್ಯಾಂ ಜ್ಯೇಷ್ಠಾಮಂಬಾಂ ನರಾಧಿಪ||

ಭೀಷ್ಮನು ಹೇಳಿದನು: “ನರಾಧಿಪ! ಆಗ ನಾನು ಕಾಲೀ ಸತ್ಯವತಿಯ, ಹಾಗೆಯೇ ಮಂತ್ರಿಗಳು, ದ್ವಿಜರು ಮತ್ತು ಪುರೋಹಿತರ ಅನುಜ್ಞೆಯನ್ನು ಪಡೆದು ಆ ಹಿರಿಯ ಕನ್ಯೆ ಅಂಬೆಗೆ ಅನುಜ್ಞೆಯನ್ನಿತ್ತೆನು[1].

05172002a ಅನುಜ್ಞಾತಾ ಯಯೌ ಸಾ ತು ಕನ್ಯಾ ಶಾಲ್ವಪತೇಃ ಪುರಂ|

05172002c ವೃದ್ಧೈರ್ದ್ವಿಜಾತಿಭಿರ್ಗುಪ್ತಾ ಧಾತ್ರ್ಯಾ ಚಾನುಗತಾ ತದಾ|

05172002e ಅತೀತ್ಯ ಚ ತಮಧ್ವಾನಮಾಸಸಾದ ನರಾಧಿಪಂ||

ನನ್ನಿಂದ ಅನುಜ್ಞಾತಳಾಗಿ ಆ ಕನ್ಯೆಯು ಶಾಲ್ವಪತಿಯ ಪುರಕ್ಕೆ ಹೋದಳು. ಹೋಗುವಾಗ ಅವಳು ವೃದ್ಧ ದ್ವಿಜರಿಂದ ರಕ್ಷಿತಳಾಗಿದ್ದಳು. ಅವಳನ್ನು ಓರ್ವ ದಾಸಿಯೂ ಅನುಸರಿಸಿ ಹೋಗಿದ್ದಳು. ಆ ದೂರವನ್ನು ಪ್ರಯಾಣಿಸಿ ನರಾಧಿಪನನ್ನು ತಲುಪಿದಳು.

05172003a ಸಾ ತಮಾಸಾದ್ಯ ರಾಜಾನಂ ಶಾಲ್ವಂ ವಚನಮಬ್ರವೀತ್|

05172003c ಆಗತಾಹಂ ಮಹಾಬಾಹೋ ತ್ವಾಮುದ್ದಿಶ್ಯ ಮಹಾದ್ಯುತೇ||

ರಾಜ ಶಾಲ್ವನ ಬಳಿಹೋಗಿ ಅವಳು ಈ ಮಾತುಗಳನ್ನಾಡಿದಳು: “ಮಹಾಬಾಹೋ! ಮಹಾದ್ಯುತೇ! ನಿನ್ನನ್ನು ಬಯಸಿ ನಾನು ಬಂದಿದ್ದೇನೆ.”

05172004a ತಾಮಬ್ರವೀಚ್ಚಾಲ್ವಪತಿಃ ಸ್ಮಯನ್ನಿವ ವಿಶಾಂ ಪತೇ|

05172004c ತ್ವಯಾನ್ಯಪೂರ್ವಯಾ ನಾಹಂ ಭಾರ್ಯಾರ್ಥೀ ವರವರ್ಣಿನಿ||

ವಿಶಾಂಪತೇ! ಶಾಲ್ವಪತಿಯು ಮುಗುಳ್ನಗುತ್ತಾ ಅವಳಿಗೆ ಹೇಳಿದನು: “ವರವರ್ಣಿನೀ! ಈ ಮೊದಲು ಬೇರೆಯವನಳಾಗಿದ್ದವಳನ್ನು ನನ್ನ ಭಾರ್ಯೆಯನ್ನಾಗಿಸಿಕೊಳ್ಳಲು ಬಯಸುವುದಿಲ್ಲ.

05172005a ಗಚ್ಚ ಭದ್ರೇ ಪುನಸ್ತತ್ರ ಸಕಾಶಂ ಭಾರತಸ್ಯ ವೈ|

05172005c ನಾಹಮಿಚ್ಚಾಮಿ ಭೀಷ್ಮೇಣ ಗೃಹೀತಾಂ ತ್ವಾಂ ಪ್ರಸಹ್ಯ ವೈ||

ಭದ್ರೇ! ಪುನಃ ಆ ಭಾರತನ ಬಳಿ ಹೋಗು. ಭೀಷ್ಮನು ಬಲಾತ್ಕರಿಸಿ ಕರೆದುಕೊಂಡು ಹೋದವಳನ್ನು ನಾನು ಇಚ್ಛಿಸುವುದಿಲ್ಲ.

05172006a ತ್ವಂ ಹಿ ನಿರ್ಜಿತ್ಯ ಭೀಷ್ಮೇಣ ನೀತಾ ಪ್ರೀತಿಮತೀ ತದಾ|

05172006c ಪರಾಮೃಶ್ಯ ಮಹಾಯುದ್ಧೇ ನಿರ್ಜಿತ್ಯ ಪೃಥಿವೀಪತೀನ್|

05172006e ನಾಹಂ ತ್ವಯ್ಯನ್ಯಪೂರ್ವಾಯಾಂ ಭಾರ್ಯಾರ್ಥೀ ವರವರ್ಣಿನಿ||

ಮಹಾಯುದ್ಧಲ್ಲಿ ಪೃಥಿವೀಪತಿಗಳನ್ನು ಗೆದ್ದು ನಿನ್ನನ್ನು ಕರೆದುಕೊಂಡು ಹೋಗುವಾಗ ನೀನು ಸಂತೋಷದಿಂದಲೇ ಅವನನ್ನು ಅನುಸರಿಸಿ ಹೋಗಿದ್ದೆ. ವರವರ್ಣಿನೀ! ಈ ಮೊದಲು ಇನ್ನೊಬ್ಬನದ್ದಾಗಿರುವವಳನ್ನು ನಾನು ಪತ್ನಿಯನ್ನಾಗಿ ಬಯಸುವುದಿಲ್ಲ.

05172007a ಕಥಮಸ್ಮದ್ವಿಧೋ ರಾಜಾ ಪರಪೂರ್ವಾಂ ಪ್ರವೇಶಯೇತ್|

05172007c ನಾರೀಂ ವಿದಿತವಿಜ್ಞಾನಃ ಪರೇಷಾಂ ಧರ್ಮಮಾದಿಶನ್|

05172007e ಯಥೇಷ್ಟಂ ಗಮ್ಯತಾಂ ಭದ್ರೇ ಮಾ ತೇ ಕಾಲೋಽತ್ಯಗಾದಯಂ||

ನನ್ನಂತಹ ವಿಜ್ಞಾನಗಳನ್ನು ತಿಳಿದವನು ಮತ್ತು ಇತರರಿಗೆ ಧರ್ಮದ ಆದೇಶವನ್ನು ನೀಡುವವನು ಹೇಗೆ ತಾನೇ ಇನ್ನೊಬ್ಬನ ಅರಮನೆಯನ್ನು ಪ್ರವೇಶಿಸಿದವಳನ್ನು ಸ್ವೀಕರಿಸಿಯಾನು? ಭದ್ರೇ! ಕಾಲವನ್ನು ವ್ಯರ್ಥಮಾಡಬೇಡ. ನಿನಗಿಷ್ಟವಾದಲ್ಲಿಗೆ ಹೋಗು.”

05172008a ಅಂಬಾ ತಮಬ್ರವೀದ್ರಾಜನ್ನನಂಗಶರಪೀಡಿತಾ|

05172008c ಮೈವಂ ವದ ಮಹೀಪಾಲ ನೈತದೇವಂ ಕಥಂ ಚನ||

ರಾಜನ್! ಅನಂಗಶರಪೀಡಿತಳಾದ ಅಂಬೆಯು ಅವನಿಗೆ ಹೇಳಿದಳು: “ಮಹೀಪಾಲ! ಹೀಗೆ ಹೇಳಬೇಡ! ಹಾಗೇನೂ ನಡೆದಿಲ್ಲ.

05172009a ನಾಸ್ಮಿ ಪ್ರೀತಿಮತೀ ನೀತಾ ಭೀಷ್ಮೇಣಾಮಿತ್ರಕರ್ಶನ|

05172009c ಬಲಾನ್ನೀತಾಸ್ಮಿ ರುದತೀ ವಿದ್ರಾವ್ಯ ಪೃಥಿವೀಪತೀನ್||

ಅಮಿತ್ರಕರ್ಶನ! ಭೀಷ್ಮನು ಕರೆದುಕೊಂಡು ಹೋಗುವಾಗ ನಾನು ಸಂತೋಷಪಟ್ಟಿರಲಿಲ್ಲ. ಅವನು ಪೃಥಿವೀಪತಿಗಳನ್ನು ಗೆದ್ದು ಬಲಾತ್ಕಾರವಾಗಿ ಕರೆದೊಯ್ಯುತ್ತಿರುವಾಗ ನಾನು ಅಳುತ್ತಿದ್ದೆ.

05172010a ಭಜಸ್ವ ಮಾಂ ಶಾಲ್ವಪತೇ ಭಕ್ತಾಂ ಬಾಲಾಮನಾಗಸಂ|

05172010c ಭಕ್ತಾನಾಂ ಹಿ ಪರಿತ್ಯಾಗೋ ನ ಧರ್ಮೇಷು ಪ್ರಶಸ್ಯತೇ||

ಶಾಲ್ವಪತೇ! ನನ್ನನ್ನು ಈ ಬಾಲೆ, ಭಕ್ತೆ, ಅನಾಗಸಳನ್ನು - ಪ್ರೀತಿಸು! ಭಕ್ತರನ್ನು ಪರಿತ್ಯಜಿಸುವುದನ್ನು ಧರ್ಮವೆಂದು ಹೇಳುವುದಿಲ್ಲ.

05172011a ಸಾಹಮಾಮಂತ್ರ್ಯ ಗಾಂಗೇಯಂ ಸಮರೇಷ್ವನಿವರ್ತಿನಂ|

05172011c ಅನುಜ್ಞಾತಾ ಚ ತೇನೈವ ತವೈವ ಗೃಹಮಾಗತಾ||

ಸಮರದಿಂದ ಹಿಂಜರಿಯದ ಗಾಂಗೇಯನ ಸಲಹೆಯನ್ನು ಕೇಳಿ, ಅವನಿಂದ ಅನುಜ್ಞಾತಳಾಗಿ ನಾನು ನಿನ್ನ ಮನೆಗೆ ಬಂದಿದ್ದೇನೆ.

05172012a ನ ಸ ಭೀಷ್ಮೋ ಮಹಾಬಾಹುರ್ಮಾಮಿಚ್ಚತಿ ವಿಶಾಂ ಪತೇ|

05172012c ಭ್ರಾತೃಹೇತೋಃ ಸಮಾರಂಭೋ ಭೀಷ್ಮಸ್ಯೇತಿ ಶ್ರುತಂ ಮಯಾ||

ವಿಶಾಂಪತೇ! ಆ ಮಹಾಬಾಹು ಭೀಷ್ಮನಾದರೋ ನನ್ನನ್ನು ಬಯಸುವುದಿಲ್ಲ. ತನ್ನ ತಮ್ಮನಿಗಾಗಿ ಭೀಷ್ಮನು ಇದನ್ನು ಮಾಡಿದನೆಂದು ನಾನು ಕೇಳಿದ್ದೇನೆ.

05172013a ಭಗಿನ್ಯೌ ಮಮ ಯೇ ನೀತೇ ಅಂಬಿಕಾಂಬಾಲಿಕೇ ನೃಪ|

05172013c ಪ್ರಾದಾದ್ವಿಚಿತ್ರವೀರ್ಯಾಯ ಗಾಂಗೇಯೋ ಹಿ ಯವೀಯಸೇ||

ನೃಪ! ಕರೆದುಕೊಂಡ ಹೋದ ನನ್ನ ತಂಗಿಯರಾದ ಅಂಬಿಕಾ-ಅಂಬಾಲಿಕೆಯರನ್ನು ಗಾಂಗೇಯನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಟಿದ್ದಾನೆ.

05172014a ಯಥಾ ಶಾಲ್ವಪತೇ ನಾನ್ಯಂ ನರಂ ಧ್ಯಾಮಿ ಕಥಂ ಚನ|

05172014c ತ್ವಾಮೃತೇ ಪುರುಷವ್ಯಾಘ್ರ ತಥಾ ಮೂರ್ಧಾನಮಾಲಭೇ||

ಶಾಲ್ವಪತೇ! ಪುರುಷವ್ಯಾಘ್ರ! ನನ್ನ ನೆತ್ತಿಯ ಮೇಲೆ ಕೈಯಿಟ್ಟು ಹೇಳುತ್ತಿದ್ದೇನೆ - ನಿನ್ನನ್ನು ಬಿಟ್ಟು ಬೇರೆ ಯಾವ ನರನನ್ನೂ ನಾನು ಎಂದೂ ಯೋಚಿಸಿಲ್ಲ.

05172015a ನ ಚಾನ್ಯಪೂರ್ವಾ ರಾಜೇಂದ್ರ ತ್ವಾಮಹಂ ಸಮುಪಸ್ಥಿತಾ|

05172015c ಸತ್ಯಂ ಬ್ರವೀಮಿ ಶಾಲ್ವೈತತ್ಸತ್ಯೇನಾತ್ಮಾನಮಾಲಭೇ||

ರಾಜೇಂದ್ರ! ಹಿಂದೆ ಇನ್ನೊಬ್ಬರವಳಾಗಿ ನಾನು ನಿನ್ನ ಬಳಿ ಬಂದಿಲ್ಲ. ಶಾಲ್ವ! ನನ್ನ ಆತ್ಮದ ಮೇಲೆ ಆಣೆಯಿಟ್ಟು ಸತ್ಯವನ್ನೇ ಹೇಳುತ್ತಿದ್ದೇನೆ.

05172016a ಭಜಸ್ವ ಮಾಂ ವಿಶಾಲಾಕ್ಷ ಸ್ವಯಂ ಕನ್ಯಾಮುಪಸ್ಥಿತಾಂ|

05172016c ಅನನ್ಯಪೂರ್ವಾಂ ರಾಜೇಂದ್ರ ತ್ವತ್ಪ್ರಸಾದಾಭಿಕಾಂಕ್ಷಿಣೀಂ||

ವಿಶಾಲಾಕ್ಷ! ರಾಜೇಂದ್ರ! ತಾನಾಗಿಯೇ ಬಂದಿರುವ, ಇದಕ್ಕೂ ಮೊದಲು ಬೇರೆಯವರದ್ದಾಗಿರದ, ನಿನ್ನ ಕರುಣೆಯನ್ನು ಬಯಸುವ ಕನ್ಯೆ ನನ್ನನ್ನು ಪ್ರೀತಿಸು.”

05172017a ತಾಮೇವಂ ಭಾಷಮಾಣಾಂ ತು ಶಾಲ್ವಃ ಕಾಶಿಪತೇಃ ಸುತಾಂ|

05172017c ಅತ್ಯಜದ್ಭರತಶ್ರೇಷ್ಠ ತ್ವಚಂ ಜೀರ್ಣಾಮಿವೋರಗಃ||

ಭರತಶ್ರೇಷ್ಠ! ಈ ರೀತಿ ಅವಳು ಮಾತನಾಡಿದರೂ ಶಾಲ್ವನು ಕಾಶೀಪತಿಯ ಮಗಳನ್ನು ಹಾವು ಜೀರ್ಣವಾದ ಚರ್ಮವನ್ನು ಹೇಗೋ ಹಾಗೆ ತೊರೆದನು.

05172018a ಏವಂ ಬಹುವಿಧೈರ್ವಾಕ್ಯೈರ್ಯಾಚ್ಯಮಾನಸ್ತಯಾನಘ|

05172018c ನಾಶ್ರದ್ದಧಚ್ಚಾಲ್ವಪತಿಃ ಕನ್ಯಾಯಾ ಭರತರ್ಷಭ||

ಅನಘ! ಭರತರ್ಷಭ! ಈ ರೀತಿ ಬಹುವಿಧ ಮಾತುಗಳಲ್ಲಿ ಬೇಡಿಕೊಂಡರೂ ಶಾಲ್ವಪತಿಯು ಆ ಕನ್ಯೆಯಲ್ಲಿ ಆಸಕ್ತಿಯನ್ನು ತೋರಿಸಲಿಲ್ಲ.

05172019a ತತಃ ಸಾ ಮನ್ಯುನಾವಿಷ್ಟಾ ಜ್ಯೇಷ್ಠಾ ಕಾಶಿಪತೇಃ ಸುತಾ|

05172019c ಅಬ್ರವೀತ್ಸಾಶ್ರುನಯನಾ ಬಾಷ್ಪವಿಹ್ವಲಯಾ ಗಿರಾ||

ಆಗ ಆ ಕಾಶಿಪತಿಯ ಹಿರಿಯ ಮಗಳು ಕೋಪಾವಿಷ್ಟಳಾಗಿ, ಕಣ್ಣೀರು ಸುರಿಸಿ, ಕಣ್ಣೀರು ಉದ್ವೇಗಗಳು ತುಂಬಿದ ಧ್ವನಿಯಲ್ಲಿ ಹೇಳಿದಳು:

05172020a ತ್ವಯಾ ತ್ಯಕ್ತಾ ಗಮಿಷ್ಯಾಮಿ ಯತ್ರ ಯತ್ರ ವಿಶಾಂ ಪತೇ|

05172020c ತತ್ರ ಮೇ ಸಂತು ಗತಯಃ ಸಂತಃ ಸತ್ಯಂ ಯಥಾಬ್ರುವಂ||

“ವಿಶಾಂಪತೇ! ನಿನ್ನಿಂದ ತ್ಯಕ್ತಳಾಗಿ ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲಿ ಸಂತರು ನನ್ನನ್ನು ರಕ್ಷಿಸುತ್ತಾರೆ. ಸತ್ಯವನ್ನೇ ಹೇಳುತ್ತೇನೆ.”

05172021a ಏವಂ ಸಂಭಾಷಮಾಣಾಂ ತು ನೃಶಂಸಃ ಶಾಲ್ವರಾಟ್ತದಾ|

05172021c ಪರ್ಯತ್ಯಜತ ಕೌರವ್ಯ ಕರುಣಂ ಪರಿದೇವತೀಂ||

ಈ ರೀತಿ ಮಾತನಾಡಿದರೂ ಶಾಲ್ವರಾಜನು ಕರುಣೆಯಿಂದ ಪರಿವೇದಿಸುತ್ತಿರುವ ಅವಳನ್ನು ಕ್ರೂರನಾಗಿ ಪರಿತ್ಯಜಿಸಿದನು.

05172022a ಗಚ್ಚ ಗಚ್ಚೇತಿ ತಾಂ ಶಾಲ್ವಃ ಪುನಃ ಪುನರಭಾಷತ|

05172022c ಬಿಭೇಮಿ ಭೀಷ್ಮಾತ್ಸುಶ್ರೋಣಿ ತ್ವಂ ಚ ಭೀಷ್ಮಪರಿಗ್ರಹಃ||

“ಹೋಗು! ಹೋಗು! ಸುಶ್ರೋಣೀ! ಭೀಷ್ಮನಿಗೆ ಹೆದರುತ್ತೇನೆ. ಮತ್ತು ನೀನು ಭೀಷ್ಮನ ಸ್ವತ್ತು” ಎಂದು ಶಾಲ್ವನು ಪುನಃ ಪುನಃ ಹೇಳಿದನು.

05172023a ಏವಮುಕ್ತಾ ತು ಸಾ ತೇನ ಶಾಲ್ವೇನಾದೀರ್ಘದರ್ಶಿನಾ|

05172023c ನಿಶ್ಚಕ್ರಾಮ ಪುರಾದ್ದೀನಾ ರುದತೀ ಕುರರೀ ಯಥಾ||

ದೀರ್ಘದರ್ಶಿಯಲ್ಲದ ಶಾಲ್ವನು ಹೀಗೆ ಹೇಳಲು ಅವಳು ದೀನಳಾಗಿ ಕುರರಿಯಂತೆ ರೋದಿಸುತ್ತಾ ಪುರದಿಂದ ಹೊರಬಂದಳು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ದ್ವಿಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.

Image result for flowers against white background"

[1] ಈ ವಿಷಯದ ಕುರಿತು ಬಾಹ್ಲೀಕನು ಭೀಷ್ಮನಿಗೆ ಹೇಳಿದ ಮಾತುಗಳು ಮುಂದೆ ಅನುಶಾಸನ ಪರ್ವದ ಅಧ್ಯಾಯ ೪೪ರಲ್ಲಿ ಬರುತ್ತವೆ.

Comments are closed.