Udyoga Parva: Chapter 170

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೦

ಭೀಷ್ಮನು ಸ್ವಯಂವರದಿಂದ ಕಾಶಿಕನ್ಯೆಯರನ್ನು ಅಪಹರಿಸಿದುದು

ಶಿಖಂಡಿಯನ್ನು ನೀನು ಏಕೆ ಕೊಲ್ಲುವುದಿಲ್ಲವೆಂದು ದುರ್ಯೋಧನನು ಕೇಳಲು, ಭೀಷ್ಮನು ಎಲ್ಲ ನೃಪರ ಸಮಕ್ಷಮದಲ್ಲಿ ಕಾರಣವನ್ನು ಹೇಳಲು ಪ್ರಾರಂಭಿಸಿದುದು (೧-೩). ತಮ್ಮ ವಿಚಿತ್ರವೀರ್ಯನಿಗೆ ವಿವಾಹಮಾಡಲು ಬಯಸಿ ಭೀಷ್ಮನು ಕಾಶೀರಾಜಕುಮಾರಿಯರ ಸ್ವಯಂವರಕ್ಕೆ ಹೋಗಿ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಎದುರಿಸಿದ ರಾಜರನ್ನೆಲ್ಲ ಏಕರಥನಾಗಿ ಸೋಲಿಸಿ ಹಸ್ತಿನಾಪುರಕ್ಕೆ ಮರಳಿದುದು (೪-೨೨).

05170001 ದುರ್ಯೋಧನ ಉವಾಚ|

05170001a ಕಿಮರ್ಥಂ ಭರತಶ್ರೇಷ್ಠ ನ ಹನ್ಯಾಸ್ತ್ವಂ ಶಿಖಂಡಿನಂ|

05170001c ಉದ್ಯತೇಷುಮಥೋ ದೃಷ್ಟ್ವಾ ಸಮರೇಷ್ವಾತತಾಯಿನಂ||

ದುರ್ಯೋಧನನು ಹೇಳಿದನು: “ಭರತಶ್ರೇಷ್ಠ! ಸಮರದಲ್ಲಿ ಬಾಣಗಳನ್ನು ಗುರಿಯಿಟ್ಟು ನಿನ್ನನ್ನು ಕೊಲ್ಲಲು ಬರುವ ಶಿಖಂಡಿಯನ್ನು ನೋಡಿಯೂ ಅವನನ್ನು ನೀನು ಕೊಲ್ಲದೇ ಇರಲು ಕಾರಣವೇನು?

05170002a ಪೂರ್ವಮುಕ್ತ್ವಾ ಮಹಾಬಾಹೋ ಪಾಂಡವಾನ್ಸಹ ಸೋಮಕೈಃ|

05170002c ವಧಿಷ್ಯಾಮೀತಿ ಗಾಂಗೇಯ ತನ್ಮೇ ಬ್ರೂಹಿ ಪಿತಾಮಹ||

ಮಹಾಬಾಹೋ! ಮೊದಲು ನೀನು ಹೇಳಿದ್ದೆ – ಸೋಮಕರೊಂದಿಗೆ ಪಾಂಡವರನ್ನು ವಧಿಸುತ್ತೇನೆಂದು. ಗಾಂಗೇಯ! ಪಿತಾಮಹ! ಅದನ್ನು ನನಗೆ ಹೇಳು.”

05170003 ಭೀಷ್ಮ ಉವಾಚ|

05170003a ಶೃಣು ದುರ್ಯೋಧನ ಕಥಾಂ ಸಹೈಭಿರ್ವಸುಧಾಧಿಪೈಃ|

05170003c ಯದರ್ಥಂ ಯುಧಿ ಸಂಪ್ರೇಕ್ಷ್ಯ ನಾಹಂ ಹನ್ಯಾಂ ಶಿಖಂಡಿನಂ||

ಭೀಷ್ಮನು ಹೇಳಿದನು: “ದುರ್ಯೋಧನ! ಏಕೆ ನಾನು ಯುದ್ಧದಲ್ಲಿ ಎದುರಾದ ಶಿಖಂಡಿಯನ್ನು ಕೊಲ್ಲುವುದಿಲ್ಲವೆನ್ನುವುದನ್ನು ವಸುಧಾಧಿಪರೊಂದಿಗೆ ಕೇಳು.

05170004a ಮಹಾರಾಜೋ ಮಮ ಪಿತಾ ಶಂತನುರ್ಭರತರ್ಷಭಃ|

05170004c ದಿಷ್ಟಾಂತಂ ಪ್ರಾಪ ಧರ್ಮಾತ್ಮಾ ಸಮಯೇ ಪುರುಷರ್ಷಭ||

ಪುರುಷರ್ಷಭ! ನನ್ನ ತಂದೆ ಭರತರ್ಷಭ ಧರ್ಮಾತ್ಮ ಮಹಾರಾಜಾ ಶಂತನುವು ಸಮಯದಲ್ಲಿ ದೈವನಿಶ್ಚಿತ ಅಂತ್ಯವನ್ನು ಸೇರಿದನು.

05170005a ತತೋಽಹಂ ಭರತಶ್ರೇಷ್ಠ ಪ್ರತಿಜ್ಞಾಂ ಪರಿಪಾಲಯನ್|

05170005c ಚಿತ್ರಾಂಗದಂ ಭ್ರಾತರಂ ವೈ ಮಹಾರಾಜ್ಯೇಽಭ್ಯಷೇಚಯಂ||

ಆಗ ಭರತಶ್ರೇಷ್ಠ! ನಾನು ಪ್ರತಿಜ್ಞೆಯನ್ನು ಪರಿಪಾಲಿಸಿ ತಮ್ಮ ಚಿತ್ರಾಂಗದನನ್ನು ಮಹಾರಾಜನನ್ನಾಗಿ ಅಭಿಷೇಕಿಸಿದೆನು.

05170006a ತಸ್ಮಿಂಶ್ಚ ನಿಧನಂ ಪ್ರಾಪ್ತೇ ಸತ್ಯವತ್ಯಾ ಮತೇ ಸ್ಥಿತಃ|

05170006c ವಿಚಿತ್ರವೀರ್ಯಂ ರಾಜಾನಮಭ್ಯಷಿಂಚಂ ಯಥಾವಿಧಿ||

ಅವನು ನಿಧನವನ್ನು ಹೊಂದಲು ಸತ್ಯವತಿಯ ಸಲಹೆಯಂತೆ ನಡೆದುಕೊಂಡು ಯಥಾವಿಧಿಯಾಗಿ ವಿಚಿತ್ರವೀರ್ಯನನ್ನು ರಾಜನನ್ನಾಗಿ ಅಭಿಷೇಕಿಸಲಾಯಿತು.

05170007a ಮಯಾಭಿಷಿಕ್ತೋ ರಾಜೇಂದ್ರ ಯವೀಯಾನಪಿ ಧರ್ಮತಃ|

05170007c ವಿಚಿತ್ರವೀರ್ಯೋ ಧರ್ಮಾತ್ಮಾ ಮಾಮೇವ ಸಮುದೈಕ್ಷತ||

ರಾಜೇಂದ್ರ! ಇನ್ನೂ ಚಿಕ್ಕವನಾಗಿದ್ದರೂ ವಿಚಿತ್ರವೀರ್ಯನನ್ನು ಧರ್ಮತಃ ನಾನು ಅಭಿಷೇಕಿಸಿದೆನು. ಆ ಧರ್ಮಾತ್ಮನಾದರೋ ಸಲಹೆಗಳಿಗೆ ನನ್ನನ್ನೇ ನೋಡುತ್ತಿದ್ದನು.

05170008a ತಸ್ಯ ದಾರಕ್ರಿಯಾಂ ತಾತ ಚಿಕೀರ್ಷುರಹಮಪ್ಯುತ|

05170008c ಅನುರೂಪಾದಿವ ಕುಲಾದಿತಿ ಚಿಂತ್ಯ ಮನೋ ದಧೇ||

ಮಗೂ! ಅವನಿಗೆ ವಿವಾಹ ಮಾಡಲು ಬಯಸಿ ನಾನು ಅನುರೂಪವಾದ ಕುಲವ್ಯಾವುದೆಂದು ಮನಸ್ಸಿನಲ್ಲಿಯೇ ಚಿಂತಿಸತೊಡಗಿದೆನು.

05170009a ತಥಾಶ್ರೌಷಂ ಮಹಾಬಾಹೋ ತಿಸ್ರಃ ಕನ್ಯಾಃ ಸ್ವಯಂವರೇ|

05170009c ರೂಪೇಣಾಪ್ರತಿಮಾಃ ಸರ್ವಾಃ ಕಾಶಿರಾಜಸುತಾಸ್ತದಾ|

05170009e ಅಂಬಾ ಚೈವಾಂಬಿಕಾ ಚೈವ ತಥೈವಾಂಬಾಲಿಕಾಪರಾ|

ಆಗ ಮಹಾಬಾಹೋ! ರೂಪದಲ್ಲಿ ಅಪ್ರತಿಮರಾದ, ಎಲ್ಲ ಮೂವರು ಕಾಶೀರಾಜ ಸುತೆ ಕನ್ಯೆಯರ - ಅಂಬಾ, ಅಂಬಿಕಾ ಮತ್ತು ಇನ್ನೊಬ್ಬಳು ಅಂಬಾಲಿಕಾ - ಸ್ವಯಂವರವೆಂದು ಕೇಳಿದೆನು.

05170010a ರಾಜಾನಶ್ಚ ಸಮಾಹೂತಾಃ ಪೃಥಿವ್ಯಾಂ ಭರತರ್ಷಭ|

05170010c ಅಂಬಾ ಜ್ಯೇಷ್ಠಾಭವತ್ತಾಸಾಮಂಬಿಕಾ ತ್ವಥ ಮಧ್ಯಮಾ|

05170010e ಅಂಬಾಲಿಕಾ ಚ ರಾಜೇಂದ್ರ ರಾಜಕನ್ಯಾ ಯವೀಯಸೀ||

ಭರತರ್ಷಭ! ಪೃಥ್ವಿಯ ಎಲ್ಲ ರಾಜರನ್ನೂ ಆಹ್ವಾನಿಸಲಾಗಿತ್ತು. ಹಿರಿಯವಳು ಅಂಬಾ. ಅಂಬಿಕೆಯು ಮಧ್ಯದವಳು. ರಾಜೇಂದ್ರ! ರಾಜಕನ್ಯೆ ಅಂಬಾಲಿಕೆಯು ಕಿರಿಯವಳು.

05170011a ಸೋಽಹಮೇಕರಥೇನೈವ ಗತಃ ಕಾಶಿಪತೇಃ ಪುರೀಂ|

05170011c ಅಪಶ್ಯಂ ತಾ ಮಹಾಬಾಹೋ ತಿಸ್ರಃ ಕನ್ಯಾಃ ಸ್ವಲಂಕೃತಾಃ|

05170011e ರಾಜ್ಞಾಶ್ಚೈವ ಸಮಾವೃತ್ತಾನ್ಪಾರ್ಥಿವಾನ್ಪೃಥಿವೀಪತೇ||

ಆಗ ನಾನು ಒಬ್ಬನೇ ರಥದಲ್ಲಿ ಕಾಶೀಪತಿಯ ಪುರಿಗೆ ಹೋದೆನು. ಮಹಾಬಾಹೋ! ಪೃಥಿವೀಪತೇ! ಅಲ್ಲಿ ಸ್ವಲಂಕೃತರಾದ ಮೂವರು ಕನ್ಯೆಯರನ್ನೂ, ಸುತ್ತುವರೆದಿದ್ದ ಪಾರ್ಥಿವ ರಾಜರನ್ನೂ ನೋಡಿದೆನು.

05170012a ತತೋಽಹಂ ತಾನ್ನೃಪಾನ್ಸರ್ವಾನಾಹೂಯ ಸಮರೇ ಸ್ಥಿತಾನ್|

05170012c ರಥಮಾರೋಪಯಾಂ ಚಕ್ರೇ ಕನ್ಯಾಸ್ತಾ ಭರತರ್ಷಭ||

ಭರತರ್ಷಭ! ಆಗ ನಾನು ನಿಂತ ಆ ನೃಪರೆಲ್ಲರನ್ನೂ ಸಮರಕ್ಕೆ ಆಹ್ವಾನಿಸಿ, ಆ ಕನ್ಯೆಯರನ್ನು ರಥದ ಮೇಲೇರಿಸಿಕೊಂಡೆನು.

05170013a ವೀರ್ಯಶುಲ್ಕಾಶ್ಚ ತಾ ಜ್ಞಾತ್ವಾ ಸಮಾರೋಪ್ಯ ರಥಂ ತದಾ|

05170013c ಅವೋಚಂ ಪಾರ್ಥಿವಾನ್ಸರ್ವಾನಹಂ ತತ್ರ ಸಮಾಗತಾನ್|

05170013e ಭೀಷ್ಮಃ ಶಾಂತನವಃ ಕನ್ಯಾ ಹರತೀತಿ ಪುನಃ ಪುನಃ||

ಅವರನ್ನು ವೀರ್ಯಶುಲ್ಕವೆಂದು ತಿಳಿದು ರಥದ ಮೇಲೇರಿಸಿಕೊಂಡು ಅಲ್ಲಿ ಸಮಾಗತರಾಗಿದ್ದ ಸರ್ವ ಪಾರ್ಥಿವರಿಗೆ ಕೂಗಿ “ಭೀಷ್ಮ ಶಾಂತನವನು ಕನ್ಯೆಯರನ್ನು ಅಪಹರಿಸುತ್ತಿದ್ದಾನೆ” ಎಂದು ಪುನಃ ಪುನಃ ಹೇಳಿದೆನು.

05170014a ತೇ ಯತಧ್ವಂ ಪರಂ ಶಕ್ತ್ಯಾ ಸರ್ವೇ ಮೋಕ್ಷಾಯ ಪಾರ್ಥಿವಾಃ|

05170014c ಪ್ರಸಹ್ಯ ಹಿ ನಯಾಮ್ಯೇಷ ಮಿಷತಾಂ ವೋ ನರಾಧಿಪಾಃ||

“ಸರ್ವ ಪಾರ್ಥಿವರೇ! ಪರಮ ಶಕ್ತಿಯನ್ನುಪಯೋಗಿಸಿ ಇವರನ್ನು ನೀವು ಬಿಡಿಸಿಕೊಳ್ಳಿ! ನರಾಧಿಪರೇ! ನಿಮ್ಮ ಕಣ್ಣೆದುರಿಗೇ ನಾನು ಇವರನ್ನು ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ!”

05170015a ತತಸ್ತೇ ಪೃಥಿವೀಪಾಲಾಃ ಸಮುತ್ಪೇತುರುದಾಯುಧಾಃ|

05170015c ಯೋಗೋ ಯೋಗ ಇತಿ ಕ್ರುದ್ಧಾಃ ಸಾರಥೀಂಶ್ಚಾಪ್ಯಚೋದಯನ್||

ಆಗ ಪೃಥಿವೀಪಾಲರು ಕೃದ್ಧರಾಗಿ ಆಯುಧಗಳನ್ನು ಹಿಡಿದೆತ್ತಿ “ರಥಗಳನ್ನು ಹೂಡಿ! ಹೂಡಿ!” ಎಂದು ಸಾರಥಿಗಳನ್ನು ಪ್ರಚೋದಿಸಿದರು.

05170016a ತೇ ರಥೈರ್ಮೇಘಸಂಕಾಶೈರ್ಗಜೈಶ್ಚ ಗಜಯೋಧಿನಃ|

05170016c ಪೃಷ್ಠ್ಯೈಶ್ಚಾಶ್ವೈರ್ಮಹೀಪಾಲಾಃ ಸಮುತ್ಪೇತುರುದಾಯುಧಾಃ||

ಮೇಘಗಳಂತೆ ಗರ್ಜಿಸುವ ರಥಗಳ ಮೇಲೆ, ಗಜಗಳ ಮೇಲೆ ಗಜಯೋದ್ಧರು, ಇತರ ಮಹೀಪಾಲರು ರಥಗಳ ಮೇಲೆ ಆಯುಧಗಳನ್ನು ಎತ್ತಿ ಹಿಡಿದು ಆಕ್ರಮಣಿಸಿದರು.

05170017a ತತಸ್ತೇ ಮಾಂ ಮಹೀಪಾಲಾಃ ಸರ್ವ ಏವ ವಿಶಾಂ ಪತೇ|

05170017c ರಥವ್ರಾತೇನ ಮಹತಾ ಸರ್ವತಃ ಪರ್ಯವಾರಯನ್||

ವಿಶಾಂಪತೇ! ಆಗ ಆ ಮಹೀಪಾಲರೆಲ್ಲರೂ ರಥಗಳ ಮಹಾ ಸಮೂಹದೊಂದಿಗೆ ಎಲ್ಲ ಕಡೆಯಿಂದ ನನ್ನನ್ನು ಸುತ್ತುವರೆದರು.

05170018a ತಾನಹಂ ಶರವರ್ಷೇಣ ಮಹತಾ ಪ್ರತ್ಯವಾರಯಂ|

05170018c ಸರ್ವಾನ್ನೃಪಾಂಶ್ಚಾಪ್ಯಜಯಂ ದೇವರಾಡಿವ ದಾನವಾನ್||

ನಾನು ಮಹಾ ಶರವರ್ಷದಿಂದ, ದೇವರಾಜನು ದಾನವರನ್ನು ಹೇಗೋ ಹಾಗೆ ಆ ಎಲ್ಲ ನೃಪರನ್ನೂ ಸೋಲಿಸಿ ತಡೆದೆನು.

05170019a ತೇಷಾಮಾಪತತಾಂ ಚಿತ್ರಾನ್ಧ್ವಜಾನ್ ಹೇಮಪರಿಷ್ಕೃತಾನ್|

05170019c ಏಕೈಕೇನ ಹಿ ಬಾಣೇನ ಭೂಮೌ ಪಾತಿತವಾನಹಂ||

ಒಂದೊಂದೇ ಬಾಣಗಳಿಂದ ಅವರ ಬಣ್ಣಬಣ್ಣದ ಬಂಗಾರದಿಂದ ಪರಿಷ್ಕೃತಗೊಂಡಿದ್ದ ಧ್ವಜಗಳನ್ನು ನಾನು ಭೂಮಿಯ ಮೇಲೆ ಬೀಳಿಸಿದೆನು.

05170020a ಹಯಾಂಶ್ಚೈಷಾಂ ಗಜಾಂಶ್ಚೈವ ಸಾರಥೀಂಶ್ಚಾಪ್ಯಹಂ ರಣೇ|

05170020c ಅಪಾತಯಂ ಶರೈರ್ದೀಪ್ತೈಃ ಪ್ರಹಸನ್ಪುರುಷರ್ಷಭ||

ಪುರುಷರ್ಷಭ! ರಣದಲ್ಲಿ ನಗುತ್ತಾ, ಉರಿಯುವ ಶರಗಳಿಂದ ಅವರ ಕುದುರೆಗಳನ್ನು, ಆನೆಗಳನ್ನು ಮತ್ತು ಸಾರಥಿಗಳನ್ನೂ ಕೆಳಗುರುಳಿಸಿದೆನು.

05170021a ತೇ ನಿವೃತ್ತಾಶ್ಚ ಭಗ್ನಾಶ್ಚ ದೃಷ್ಟ್ವಾ ತಲ್ಲಾಘವಂ ಮಮ|

05170021c ಅಥಾಹಂ ಹಾಸ್ತಿನಪುರಮಾಯಾಂ ಜಿತ್ವಾ ಮಹೀಕ್ಷಿತಃ||

ನನ್ನ ಲಾಘವವನ್ನು ನೋಡಿ ಅವರು ಭಗ್ನರಾಗಿ ನಿವೃತ್ತರಾದರು. ಮಹೀಕ್ಷಿತರನ್ನು ಗೆದ್ದು ನಾನು ಹಸ್ತಿನಾಪುರಕ್ಕೆ ಬಂದೆನು.

05170022a ಅತೋಽಹಂ ತಾಶ್ಚ ಕನ್ಯಾ ವೈ ಭ್ರಾತುರರ್ಥಾಯ ಭಾರತ|

05170022c ತಚ್ಚ ಕರ್ಮ ಮಹಾಬಾಹೋ ಸತ್ಯವತ್ಯೈ ನ್ಯವೇದಯಂ||

ಭಾರತ! ಮಹಾಬಾಹೋ! ಅಲ್ಲಿ ನಾನು ಸತ್ಯವತಿಗೆ ತಮ್ಮನಿಗಾಗಿ ತಂದ ಆ ಕನ್ಯೆಯರ ಮತ್ತು ನಡೆದ ಕಾರ್ಯಗಳ ಕುರಿತು ನಿವೇದಿಸಿದೆನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಕನ್ಯಾಹರಣೇ ಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಕನ್ಯಾಹರಣದಲ್ಲಿ ನೂರಾಎಪ್ಪತ್ತನೆಯ ಅಧ್ಯಾಯವು.

Image result for flowers against white background"

Comments are closed.