Udyoga Parva: Chapter 164

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೪

ಶಕುನಿಯು ಏಕರಥನೆಂದೂ, ಜೀವವನ್ನು ಅತಿಯಾಗಿ ಇಚ್ಛಿಸುವ ಅಶ್ವತ್ಥಾಮನು ರಥನೂ ಅಲ್ಲ ಅತಿರಥನೂ ಅಲ್ಲವೆಂದು ಭೀಷ್ಮನು ಹೇಳಿ ಅಶ್ವತ್ಥಾಮನ ಗುಣಗಳನ್ನು ವರ್ಣಿಸಿದುದು (೧-೨೧). ಪೌರವ, ಕರ್ಣಪುತ್ರ ವೃಷಷೇಣ, ಮಾಗಧ ಜಲಸಂಧ, ಬಾಹ್ಲೀಕ, ಸತ್ಯವಾನ, ರಾಕ್ಷಸ ಅಲಾಯುಧ, ಭಗದತ್ತ, ಇವರು ಮಹಾರಥರೆಂದು ಭೀಷ್ಮನು ವರ್ಣಿಸಿದುದು (೨೨-೩೮).

05164001 ಭೀಷ್ಮ ಉವಾಚ|

05164001a ಶಕುನಿರ್ಮಾತುಲಸ್ತೇಽಸೌ ರಥ ಏಕೋ ನರಾಧಿಪ|

05164001c ಪ್ರಸಜ್ಯ ಪಾಂಡವೈರ್ವೈರಂ ಯೋತ್ಸ್ಯತೇ ನಾತ್ರ ಸಂಶಯಃ||

ಭೀಷ್ಮನು ಹೇಳಿದನು: “ನರಾಧಿಪ! ನಿನ್ನ ಸೋದರಮಾವ ಶಕುನಿಯು ಏಕರಥ. ಅವನು ಪಾಂಡವರೊಂದಿಗಿನ ವೈರವನ್ನು ಮುಂದಿಟ್ಟುಕೊಂಡು ಯುದ್ಧಮಾಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05164002a ಏತಸ್ಯ ಸೈನ್ಯಾ ದುರ್ಧರ್ಷಾಃ ಸಮರೇಽಪ್ರತಿಯಾಯಿನಃ|

05164002c ವಿಕೃತಾಯುಧಭೂಯಿಷ್ಠಾ ವಾಯುವೇಗಸಮಾ ಜವೇ||

ಇವನ ಸೇನೆಗಳು ಗೆಲ್ಲಲಸಾಧ್ಯವಾದವುಗಳು. ಸಮರದಲ್ಲಿ ಹಿಂಜರಿಯದವುಗಳು. ವಿಕೃತಾಯುಧಗಳನ್ನು ಹೊಂದಿ ಅವು ವೇಗದಲ್ಲಿ ವಾಯುವೇಗಕ್ಕೆ ಸಮನಾದವುಗಳು.

05164003a ದ್ರೋಣಪುತ್ರೋ ಮಹೇಷ್ವಾಸಃ ಸರ್ವೇಷಾಮತಿ ಧನ್ವಿನಾಂ|

05164003c ಸಮರೇ ಚಿತ್ರಯೋಧೀ ಚ ದೃಢಾಸ್ತ್ರಶ್ಚ ಮಹಾರಥಃ||

ದ್ರೋಣಪುತ್ರನು ಮಹೇಷ್ವಾಸ, ಸರ್ವ ಧನ್ವಿಗಳನ್ನು ಮೀರಿಸಿದವನು. ಸಮರದಲ್ಲಿ ಚಿತ್ರಯೋಧೀ. ದೃಢಾಸ್ತ್ರ ಮತ್ತು ಮಹಾರಥ.

05164004a ಏತಸ್ಯ ಹಿ ಮಹಾರಾಜ ಯಥಾ ಗಾಂಡೀವಧನ್ವನಃ|

05164004c ಶರಾಸನಾದ್ವಿನಿರ್ಮುಕ್ತಾಃ ಸಂಸಕ್ತಾ ಯಾಂತಿ ಸಾಯಕಾಃ||

ಮಹಾರಾಜ! ಗಾಂಡೀವಧನುಸ್ಸನ್ನು ಹಿಡಿದವನಂತೆ ಇವನ ಧನುಸ್ಸಿನಿಂದ ಹೊರಟ ಬಾಣಗಳೂ ಕೂಡ ಒಂದಕ್ಕೊಂದು ತಾಗಿ ಒಂದೇ ಸಾಲಿನಲ್ಲಿ ಸಾಗುತ್ತವೆ.

05164005a ನೈಷ ಶಕ್ಯೋ ಮಯಾ ವೀರಃ ಸಂಖ್ಯಾತುಂ ರಥಸತ್ತಮಃ|

05164005c ನಿರ್ದಹೇದಪಿ ಲೋಕಾಂಸ್ತ್ರೀನಿಚ್ಚನ್ನೇಷ ಮಹಾಯಶಾಃ||

ಈ ಮಹಾಯಶನು ಇಚ್ಛಿಸಿದರೆ ಮೂರು ಲೋಕಗಳನ್ನೂ ಸುಡಬಲ್ಲವನಾದರೂ ಈ ವೀರನನ್ನು ರಥಸತ್ತಮರ ಲೆಖ್ಕಕ್ಕೆ ಸೇರಿಸಲು ಬರುವುದಿಲ್ಲ.

05164006a ಕ್ರೋಧಸ್ತೇಜಶ್ಚ ತಪಸಾ ಸಂಭೃತೋಽಶ್ರಮವಾಸಿನಾ|

05164006c ದ್ರೋಣೇನಾನುಗೃಹೀತಶ್ಚ ದಿವ್ಯೈರಸ್ತ್ರೈರುದಾರಧೀಃ||

ಆಶ್ರಮವಾಸಿಯಾಗಿದ್ದಾಗ ಇವನು ಸಾಕಷ್ಟು ಕ್ರೋಧ ಮತ್ತು ತೇಜಸ್ಸುಗಳನ್ನು ಬೆಳೆಸಿಕೊಂಡಿದ್ದಾನೆ. ದ್ರೋಣನಿಂದ ಅನುಗೃಹೀತನಾಗಿ ಈ ಉದಾರಧಿಯು ದಿವ್ಯಾಸ್ತ್ರಗಳನ್ನು ಪಡೆದಿದ್ದಾನೆ.

05164007a ದೋಷಸ್ತ್ವಸ್ಯ ಮಹಾನೇಕೋ ಯೇನೈಷ ಭರತರ್ಷಭ|

05164007c ನ ಮೇ ರಥೋ ನಾತಿರಥೋ ಮತಃ ಪಾರ್ಥಿವಸತ್ತಮ||

ಭರತರ್ಷಭ! ಪಾರ್ಥಿವಸತ್ತಮ! ಇವನಲ್ಲಿ ಒಂದೇ ಒಂದು ಮಹಾ ದೋಷವಿರುವ ಕಾರಣದಿಂದ ಅವನು ರಥ ಅಥವಾ ಅತಿರಥನೆಂದು ನನಗನಿಸುವುದಿಲ್ಲ.

05164008a ಜೀವಿತಂ ಪ್ರಿಯಮತ್ಯರ್ಥಮಾಯುಷ್ಕಾಮಃ ಸದಾ ದ್ವಿಜಃ|

05164008c ನ ಹ್ಯಸ್ಯ ಸದೃಶಃ ಕಶ್ಚಿದುಭಯೋಃ ಸೇನಯೋರಪಿ||

ಜೀವವು ಅವನಿಗೆ ಅತ್ಯಂತ ಪ್ರಿಯವಾದುದು. ಆ ದ್ವಿಜನು ಸದಾ ಬದುಕಿರಲು ಬಯಸುತ್ತಾನೆ[1]. ಎರಡೂ ಸೇನೆಗಳಲ್ಲಿ ಅವನ ಸದೃಶರಾದವರು ಯಾರೂ ಇಲ್ಲ.

05164009a ಹನ್ಯಾದೇಕರಥೇನೈವ ದೇವಾನಾಮಪಿ ವಾಹಿನೀಂ|

05164009c ವಪುಷ್ಮಾಂಸ್ತಲಘೋಷೇಣ ಸ್ಫೋಟಯೇದಪಿ ಪರ್ವತಾನ್||

ಇವನೊಬ್ಬನೇ ರಥದಲ್ಲಿ ದೇವತೆಗಳ ಸೇನೆಯನ್ನೂ ಸದೆಬಡಿಯ ಬಲ್ಲನು. ಈ ಸುಂದರನು ಕೈ ಚಪ್ಪಾಳೆಯ ಘೋಷದಿಂದ ಪರ್ವತಗಳನ್ನೂ ಸ್ಪೋಟಿಸಬಲ್ಲನು.

05164010a ಅಸಂಖ್ಯೇಯಗುಣೋ ವೀರಃ ಪ್ರಹರ್ತಾ ದಾರುಣದ್ಯುತಿಃ|

05164010c ದಂಡಪಾಣಿರಿವಾಸಹ್ಯಃ ಕಾಲವತ್ಪ್ರಚರಿಷ್ಯತಿ||

ಅಸಂಖ್ಯ ಗುಣಗಳುಳ್ಳ ಈ ದಾರುಣದ್ಯುತಿ, ಪ್ರಹರ್ತ ವೀರನು ದಂಡಪಾಣಿ ಕಾಲನಂತೆ ಸಹಿಸಲಸಾಧ್ಯನಾಗಿ ಸುತ್ತಾಡುತ್ತಾನೆ.

05164011a ಯುಗಾಂತಾಗ್ನಿಸಮಃ ಕ್ರೋಧೇ ಸಿಂಹಗ್ರೀವೋ ಮಹಾಮತಿಃ|

05164011c ಏಷ ಭಾರತ ಯುದ್ಧಸ್ಯ ಪೃಷ್ಟಂ ಸಂಶಮಯಿಷ್ಯತಿ||

ಭಾರತ! ಕ್ರೋಧದಲ್ಲಿ ಯುಗಾಂತದ ಅಗ್ನಿಯ ಸಮನಾದ ಈ ಸಿಂಹಗ್ರೀವ ಮಹಾಮತಿಯು ಯುದ್ಧದ ಬೆನ್ನು ಮುರಿಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05164012a ಪಿತಾ ತ್ವಸ್ಯ ಮಹಾತೇಜಾ ವೃದ್ಧೋಽಪಿ ಯುವಭಿರ್ವರಃ|

05164012c ರಣೇ ಕರ್ಮ ಮಹತ್ಕರ್ತಾ ತತ್ರ ಮೇ ನಾಸ್ತಿ ಸಂಶಯಃ||

ಇವನ ತಂದೆ, ವೃದ್ಧನಾದರೂ ಯುವಕರಿಗಿಂತ ಶ್ರೇಷ್ಠನಾಗಿರುವ ಮಹಾತೇಜಸ್ವಿಯು ರಣದಲ್ಲಿ ಮಹಾಕಾರ್ಯಗಳನ್ನು ಎಸಗುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

05164013a ಅಸ್ತ್ರವೇಗಾನಿಲೋದ್ಧೂತಃ ಸೇನಾಕಕ್ಷೇಂಧನೋತ್ಥಿತಃ|

05164013c ಪಾಂಡುಪುತ್ರಸ್ಯ ಸೈನ್ಯಾನಿ ಪ್ರಧಕ್ಷ್ಯತಿ ಜಯೇ ಧೃತಃ||

ಅಸ್ತ್ರವೇಗಗಳ ಗಾಳಿಯಿಂದ ಉರಿಸಲ್ಪಟ್ಟು, ಒಣ ಕಟ್ಟಿಗೆಯಂತಿರುವ ಸೇನೆಯಿಂದ ಮೇಲೆದ್ದ ಬೆಂಕಿಯಿಂದ ಜಯದಲ್ಲಿ ಧೃತನಾಗಿರುವ ಇವನು ಪಾಂಡುಪುತ್ರರ ಸೇನೆಯನ್ನು ಸುಟ್ಟುಹಾಕುತ್ತಾನೆ.

05164014a ರಥಯೂಥಪಯೂಥಾನಾಂ ಯೂಥಪಃ ಸ ನರರ್ಷಭಃ|

05164014c ಭಾರದ್ವಾಜಾತ್ಮಜಃ ಕರ್ತಾ ಕರ್ಮ ತೀವ್ರಂ ಹಿತಾಯ ವಃ||

ರಥಯೂಥಪಯೂಥರ ಯೂಥಪನಾಗಿರುವ ಆ ನರಷರ್ಷಭ ಭರದ್ವಾಜಾತ್ಮಜನು ನಿನ್ನ ಹಿತದಲ್ಲಿ ತೀವ್ರ ಕರ್ಮಗಳನ್ನು ಮಾಡುತ್ತಾನೆ.

05164015a ಸರ್ವಮೂರ್ಧಾಭಿಷಿಕ್ತಾನಾಮಾಚಾರ್ಯಃ ಸ್ಥವಿರೋ ಗುರುಃ|

05164015c ಗಚ್ಚೇದಂತಂ ಸೃಂಜಯಾನಾಂ ಪ್ರಿಯಸ್ತ್ವಸ್ಯ ಧನಂಜಯಃ||

ಮೂರ್ಧಾಭಿಷಿಕ್ತರಾದ ಎಲ್ಲರ ಆಚಾರ್ಯ, ಈ ವೃದ್ಧ ಗುರುವು ಸೃಂಜಯರನ್ನು ಕೊನೆಗೊಳಿಸುತ್ತಾನೆ. ಆದರೆ ಧನಂಜಯನು ಇವನಿಗೆ ಪ್ರಿಯನಾದವನು.

05164016a ನೈಷ ಜಾತು ಮಹೇಷ್ವಾಸಃ ಪಾರ್ಥಮಕ್ಲಿಷ್ಟಕಾರಿಣಂ|

05164016c ಹನ್ಯಾದಾಚಾರ್ಯಕಂ ದೀಪ್ತಂ ಸಂಸ್ಮೃತ್ಯ ಗುಣನಿರ್ಜಿತಂ||

ತನ್ನ ಆಚಾರ್ಯತ್ವದ ಗುಣಗಳಿಂದ ಗೆದ್ದ ಈ ದೀಪವನ್ನು ನೆನಪಿನಲ್ಲಿಟ್ಟುಕೊಂಡು ಈ ಮಹೇಷ್ವಾಸನು ಅಕ್ಲಿಷ್ಟಕಾರಿ ಪಾರ್ಥನನ್ನು ಕೊಲ್ಲುವುದಿಲ್ಲ.

05164017a ಶ್ಲಾಘತ್ಯೇಷ ಸದಾ ವೀರಃ ಪಾರ್ಥಸ್ಯ ಗುಣವಿಸ್ತರೈಃ|

05164017c ಪುತ್ರಾದಭ್ಯಧಿಕಂ ಚೈವ ಭಾರದ್ವಾಜೋಽನುಪಶ್ಯತಿ||

ಭಾರದ್ವಾಜನು ಯಾವಾಗಲೂ ವೀರ ಪಾರ್ಥನ ಗುಣಗಳನ್ನು ವಿಸ್ತರಿಸಿ ಹೊಗಳುತ್ತಾನೆ. ತನ್ನ ಮಗನಿಗಿಂತಲೂ ಹೆಚ್ಚಾಗಿ ಇವನನ್ನು ಕಾಣುತ್ತಾನೆ.

05164018a ಹನ್ಯಾದೇಕರಥೇನೈವ ದೇವಗಂಧರ್ವದಾನವಾನ್|

05164018c ಏಕೀಭೂತಾನಪಿ ರಣೇ ದಿವ್ಯೈರಸ್ತ್ರೈಃ ಪ್ರತಾಪವಾನ್||

ಈ ಪ್ರತಾಪವಂತನು ಒಂದೇ ರಥದಲ್ಲಿ ದಿವ್ಯಾಸ್ತ್ರಗಳಿಂದ ರಣದಲ್ಲಿ ಒಂದಾಗಿ ಬಂದರೂ ದೇವ-ಗಂಧರ್ವ-ದಾನವರನ್ನು ಸಂಹರಿಸಬಲ್ಲನು.

05164019a ಪೌರವೋ ರಾಜಶಾರ್ದೂಲಸ್ತವ ರಾಜನ್ಮಹಾರಥಃ|

05164019c ಮತೋ ಮಮ ರಥೋ ವೀರ ಪರವೀರರಥಾರುಜಃ||

ರಾಜನ್! ವೀರ! ರಾಜಶಾರ್ದೂಲ ನಿನ್ನ ಮಹಾರಥಿ ಪೌರವನು, ಪರವೀರರ ರಥಗಳನ್ನು ಸದೆಬಡಿಯಬಲ್ಲ ರಥನೆಂದು ನನ್ನ ಮತ.

05164020a ಸ್ವೇನ ಸೈನ್ಯೇನ ಸಹಿತಃ ಪ್ರತಪಂ ಶತ್ರುವಾಹಿನೀಂ|

05164020c ಪ್ರಧಕ್ಷ್ಯತಿ ಸ ಪಾಂಚಾಲಾನ್ಕಕ್ಷಂ ಕೃಷ್ಣಗತಿರ್ಯಥಾ||

ತನ್ನ ಸೇನೆಯೊಂದಿಗೆ ಶತ್ರುವಾಹಿನಿಯನ್ನು ಸುಡುವ ಅವನು ಒಣಹುಲ್ಲನ್ನು ಬೆಂಕಿಯು ಹತ್ತಿ ಸುಡುವಂತೆ ಪಾಂಚಾಲರನ್ನು ಸುಟ್ಟುಹಾಕುತ್ತಾನೆ.

05164021a ಸತ್ಯವ್ರತೋ ರಥವರೋ ರಾಜಪುತ್ರೋ ಮಹಾರಥಃ|

05164021c ತವ ರಾಜನ್ ರಿಪುಬಲೇ ಕಾಲವತ್ಪ್ರಚರಿಷ್ಯತಿ||

ರಾಜನ್! ಆ ಸತ್ಯವ್ರತ, ರಥವರ, ರಾಜಪುತ್ರ, ಮಹಾರಥನು ನಿನ್ನ ಶತ್ರುಬಲದಲ್ಲಿ ಕಾಲನಂತೆ ಸಂಚರಿಸುತ್ತಾನೆ.

05164022a ಏತಸ್ಯ ಯೋಧಾ ರಾಜೇಂದ್ರ ವಿಚಿತ್ರಕವಚಾಯುಧಾಃ|

05164022c ವಿಚರಿಷ್ಯಂತಿ ಸಂಗ್ರಾಮೇ ನಿಘ್ನಂತಃ ಶಾತ್ರವಾಂಸ್ತವ||

ರಾಜೇಂದ್ರ! ಈ ವಿಚಿತ್ರಕವಚಾಯುಧ ಯೋಧನು ಸಂಗ್ರಾಮದಲ್ಲಿ ನಿನ್ನ ಶತ್ರುಗಳನ್ನು ಸಂಹರಿಸುತ್ತಾ ತಿರುಗಾಡುತ್ತಾನೆ.

05164023a ವೃಷಸೇನೋ ರಥಾಗ್ರ್ಯಸ್ತೇ ಕರ್ಣಪುತ್ರೋ ಮಹಾರಥಃ|

05164023c ಪ್ರಧಕ್ಷ್ಯತಿ ರಿಪೂಣಾಂ ತೇ ಬಲಾನಿ ಬಲಿನಾಂ ವರಃ||

ನಿನ್ನ ರಥದ ಮುಂದಿರುವ ಕರ್ಣಪುತ್ರ ಮಹಾರಥಿ ಬಲಶಾಲಿಗಳಲ್ಲಿ ಶ್ರೇಷ್ಠ ವೃಷಸೇನನು ನಿನ್ನ ರಿಪುಗಳ ಬಲವನ್ನು ಸುಟ್ಟುಹಾಕುತ್ತಾನೆ.

05164024a ಜಲಸಂಧೋ ಮಹಾತೇಜಾ ರಾಜನ್ರಥವರಸ್ತವ|

05164024c ತ್ಯಕ್ಷ್ಯತೇ ಸಮರೇ ಪ್ರಾಣಾನ್ಮಾಗಧಃ ಪರವೀರಹಾ||

ರಾಜನ್! ನಿನ್ನ ರಥವರ್ಯ ಮಹಾತೇಜಸ್ವಿ, ಪರವೀರಹ, ಮಾಗಧ ಜಲಸಂಧನು ಸಮರದಲ್ಲಿ ಪ್ರಾಣಗಳನ್ನು ತೆಗೆದುಕೊಳ್ಳುತ್ತಾನೆ.

05164025a ಏಷ ಯೋತ್ಸ್ಯತಿ ಸಂಗ್ರಾಮೇ ಗಜಸ್ಕಂಧವಿಶಾರದಃ|

05164025c ರಥೇನ ವಾ ಮಹಾಬಾಹುಃ ಕ್ಷಪಯಂ ಶತ್ರುವಾಹಿನೀಂ||

ಗಜಸ್ಕಂಧವಿಶಾರದನಾದ ಈ ಮಹಾಬಾಹುವು ಸಂಗ್ರಾಮದಲ್ಲಿ ರಥದ ಮೇಲೆ ಹೋರಾಡಿ ಶತ್ರುವಾಹಿನಿಯನ್ನು ಕಡಿಮೆಮಾಡುತ್ತಾನೆ.

05164026a ರಥ ಏಷ ಮಹಾರಾಜ ಮತೋ ಮಮ ನರರ್ಷಭಃ|

05164026c ತ್ವದರ್ಥೇ ತ್ಯಕ್ಷ್ಯತಿ ಪ್ರಾಣಾನ್ಸಹ ಸೈನ್ಯೋ ಮಹಾರಣೇ||

ಮಹಾರಾಜ! ಈ ನರರ್ಷಭನು ರಥನೆಂದು ನನ್ನ ಅಭಿಪ್ರಾಯ. ಇವನು ನಿನಗೋಸ್ಕರ ಮಹಾರಣದಲ್ಲಿ ಪ್ರಾಣಗಳನ್ನೂ ಸಹ ತೊರೆಯುತ್ತಾನೆ.

05164027a ಏಷ ವಿಕ್ರಾಂತಯೋಧೀ ಚ ಚಿತ್ರಯೋಧೀ ಚ ಸಂಗರೇ|

05164027c ವೀತಭೀಶ್ಚಾಪಿ ತೇ ರಾಜನ್ ಶಾತ್ರವೈಃ ಸಹ ಯೋತ್ಸ್ಯತೇ||

ರಾಜನ್! ಸಂಗರದಲ್ಲಿ ಇವನು ವಿಕ್ರಾಂತಯೋಧೀ ಮತ್ತು ಚಿತ್ರಯೋಧೀ. ಇವನು ಭಯವನ್ನು ತೊರೆದು ನಿನ್ನ ಶತ್ರುಗಳೊಂದಿಗೆ ಹೋರಾಡುತ್ತಾನೆ.

05164028a ಬಾಹ್ಲೀಕೋಽತಿರಥಶ್ಚೈವ ಸಮರೇ ಚಾನಿವರ್ತಿತಾ|

05164028c ಮಮ ರಾಜನ್ಮತೋ ಯುದ್ಧೇ ಶೂರೋ ವೈವಸ್ವತೋಪಮಃ||

ಸಮರದಲ್ಲಿ ಹಿಂದೆ ಸರಿಯದ ಬಾಹ್ಲೀಕನೂ ಅತಿರಥನೇ. ರಾಜನ್! ನನ್ನ ಅಭಿಪ್ರಾಯದಲ್ಲಿ ಆ ಶೂರನು ಯುದ್ಧದಲ್ಲಿ ವೈವಸ್ವತನಂತೆ.

05164029a ನ ಹ್ಯೇಷ ಸಮರಂ ಪ್ರಾಪ್ಯ ನಿವರ್ತೇತ ಕಥಂ ಚನ|

05164029c ಯಥಾ ಸತತಗೋ ರಾಜನ್ನಾಭಿಹತ್ಯ ಪರಾನ್ರಣೇ||

ರಾಜನ್! ಇವನು ಸಮರವನ್ನು ಸೇರಿ, ಶತ್ರುಗಳನ್ನು ರಣದಲ್ಲಿ ಕೊಲ್ಲದೇ ಸತತವಾಗಿ ಎಂದೂ ಹಿಂದಿರುಗುವುದಿಲ್ಲ.

05164030a ಸೇನಾಪತಿರ್ಮಹಾರಾಜ ಸತ್ಯವಾಂಸ್ತೇ ಮಹಾರಥಃ|

05164030c ರಣೇಷ್ವದ್ಭುತಕರ್ಮಾ ಚ ರಥಃ ಪರರಥಾರುಜಃ||

ಮಹಾರಾಜ! ನಿನ್ನ ಸೇನಾಪತಿ ಸತ್ಯವಾನನು ಮಹಾರಥ. ರಣದಲ್ಲಿ ಅದ್ಭುತಕರ್ಮಗಳನ್ನು ಮಾಡುತ್ತಾನೆ. ಆ ರಥನು ಪರರ ರಥವನ್ನು ಪುಡಿಮಾಡುತ್ತಾನೆ.

05164031a ಏತಸ್ಯ ಸಮರಂ ದೃಷ್ಟ್ವಾ ನ ವ್ಯಥಾಸ್ತಿ ಕಥಂ ಚನ|

05164031c ಉತ್ಸ್ಮಯನ್ನಭ್ಯುಪೈತ್ಯೇಷ ಪರಾನ್ರಥಪಥೇ ಸ್ಥಿತಾನ್||

ಇವನು ಸಮರವನ್ನು ನೋಡಿ ಎಂದೂ ವ್ಯಥೆಪಡುವುದಿಲ್ಲ. ತನ್ನ ರಥದ ಮಾರ್ಗದಲ್ಲಿ ನಿಲ್ಲುವ ಶತ್ರುಗಳನ್ನು ಎದುರಿಸಿ ಅವರ ಮೇಲೆ ಬೀಳುತ್ತಾನೆ.

05164032a ಏಷ ಚಾರಿಷು ವಿಕ್ರಾಂತಃ ಕರ್ಮ ಸತ್ಪುರುಷೋಚಿತಂ|

05164032c ಕರ್ತಾ ವಿಮರ್ದೇ ಸುಮಹತ್ತ್ವದರ್ಥೇ ಪುರುಷೋತ್ತಮಃ||

ಸತ್ಪುರುಷರಿಗೆ ಉಚಿತವಾದ ವಿಕ್ರಾಂತ ಕರ್ಮಗಳನ್ನು ಮಾಡಿ ಈ ಪುರುಷೋತ್ತಮನು ನಿನಗಾಗಿ ಸುಮಹತ್ತರ ಯುದ್ಧವನ್ನು ಮಾಡುತ್ತಾನೆ.

05164033a ಅಲಾಯುಧೋ ರಾಕ್ಷಸೇಂದ್ರಃ ಕ್ರೂರಕರ್ಮಾ ಮಹಾಬಲಃ|

05164033c ಹನಿಷ್ಯತಿ ಪರಾನ್ರಾಜನ್ಪೂರ್ವವೈರಮನುಸ್ಮರನ್||

ರಾಜನ್! ರಾಕ್ಷಸೇಂದ್ರ, ಕ್ರೂರಕರ್ಮಿ, ಮಹಾಬಲಿ ಅಲಾಯುಧನು ಹಿಂದಿನ ವೈರವನ್ನು ನೆನಪಿಸಿಕೊಂಡು ಶತ್ರುಗಳನ್ನು ಸಂಹರಿಸುತ್ತಾನೆ.

05164034a ಏಷ ರಾಕ್ಷಸಸೈನ್ಯಾನಾಂ ಸರ್ವೇಷಾಂ ರಥಸತ್ತಮಃ|

05164034c ಮಾಯಾವೀ ದೃಢವೈರಶ್ಚ ಸಮರೇ ವಿಚರಿಷ್ಯತಿ||

ಇವನು ರಾಕ್ಷಸ ಸೇನೆಯ ಎಲ್ಲರಲ್ಲಿ ರಥಸತ್ತಮನು. ಈ ಮಾಯಾವಿ ದೃಢವೈರಿಯು ಸಮರದಲ್ಲಿ ಸಂಚರಿಸುತ್ತಾನೆ.

05164035a ಪ್ರಾಗ್ಜ್ಯೋತಿಷಾಧಿಪೋ ವೀರೋ ಭಗದತ್ತಃ ಪ್ರತಾಪವಾನ್|

05164035c ಗಜಾಂಕುಶಧರಶ್ರೇಷ್ಠೋ ರಥೇ ಚೈವ ವಿಶಾರದಃ||

ಪ್ರಾಗ್ಜೋತಿಷಾಧಿಪ ವೀರ ಭಗದತ್ತನು ಪ್ರತಾಪವಂತನು. ಈ ಗಜಾಂಕುಶಧರಶ್ರೇಷ್ಠನು ರಥದಲ್ಲಿಯೂ ವಿಶಾರದನು.

05164036a ಏತೇನ ಯುದ್ಧಮಭವತ್ಪುರಾ ಗಾಂಡೀವಧನ್ವನಃ|

05164036c ದಿವಸಾನ್ಸುಬಹೂನ್ರಾಜನ್ನುಭಯೋರ್ಜಯಗೃದ್ಧಿನೋಃ||

ರಾಜನ್! ಹಿಂದೆ ಇವನೊಂದಿಗೆ ಗಾಂಡೀವಧನ್ವಿಯು ಯುದ್ಧ ಮಾಡಿದ್ದನು. ವಿಜಯವನ್ನು ಬಯಸಿದ್ದ ಇಬ್ಬರ ನಡುವೆ ಬಹುದಿನಗಳ ಯುದ್ಧ ನಡೆದಿತ್ತು[2].

05164037a ತತಃ ಸಖಾಯಂ ಗಾಂಧಾರೇ ಮಾನಯನ್ಪಾಕಶಾಸನಂ|

05164037c ಅಕರೋತ್ಸಂವಿದಂ ತೇನ ಪಾಂಡವೇನ ಮಹಾತ್ಮನಾ||

ಆಗ ಗಾಂಧಾರೇ! ಪಾಕಶಾಸನನನ್ನು ಸಖನೆಂದು ಮನ್ನಿಸಿ ಮಹಾತ್ಮ ಪಾಂಡವನೊಂದಿಗೆ ಅವನು ಸಂಧಿ ಮಾಡಿಕೊಂಡನು.

05164038a ಏಷ ಯೋತ್ಸ್ಯತಿ ಸಂಗ್ರಾಮೇ ಗಜಸ್ಕಂಧವಿಶಾರದಃ|

05164038c ಐರಾವತಗತೋ ರಾಜಾ ದೇವಾನಾಮಿವ ವಾಸವಃ||

ಈ ಗಜಸ್ಕಂಧ ವಿಶಾರದನು ಐರಾವತವನ್ನೇರಿ ದೇವತೆಗಳ ರಾಜ ವಾಸವನಂತೆ ಸಂಗ್ರಾಮದಲ್ಲಿ ಯುದ್ಧ ಮಾಡುತ್ತಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಚತುಃಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ನಾಲ್ಕನೆಯ ಅಧ್ಯಾಯವು.

Image result for flowers against white background"

[1] ಅಶ್ವತ್ಥಾಮನಿಗೆ ಚಿರಂಜೀವಿಯಾಗಿರುವ ವರ/ಶಾಪವನ್ನು ಮುಂದೆ ಯುದ್ಧದ ಕೊನೆಯಲ್ಲಿ ಕೃಷ್ಣನು ಕೊಡುವವನಿದ್ದಾನೆ (ಸೌಪ್ತಿಕ ಪರ್ವ, ಅಧ್ಯಾಯ ೧೬).

[2] ದಿಗ್ವಿಜಯದ ಸಮಯದಲ್ಲಿ ಅರ್ಜುನನು ಭಗದತ್ತನೊಡನೆ ಎಂಟು ದಿನಗಳ ಯುದ್ಧವನ್ನು ಮಾಡಿದ್ದನು (ಸಭಾಪರ್ವ, ಅಧ್ಯಾಯ ೨೩).

Comments are closed.