Udyoga Parva: Chapter 163

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೩

ಭೀಷ್ಮನು ದುರ್ಯೋಧನನ ಸೇನೆಯಲ್ಲಿರುವ ಕಾಂಬೋಜದ ಸುದಕ್ಷಿಣ, ಮಾಹಿಷ್ಮತಿಯ ನೀಲ, ಅವಂತಿಯ ವಿಂದಾನುವಿಂದರು, ಐವರು ತ್ರಿಗರ್ತ ಸಹೋದರರು, ದುರ್ಯೋಧನನ ಮಗ ಲಕ್ಷ್ಮಣ, ದುಃಶಾಸನನ ಮಗ, ರಾಜ ದಂಡಧಾರ, ಕೋಸಲದ ಬೃಹದ್ಬಲ, ಮತ್ತು ಕೃಪರು ರಥರೆಂದು ಹೇಳುವುದು (೧-೨೨).

05163001 ಭೀಷ್ಮ ಉವಾಚ|

05163001a ಸುದಕ್ಷಿಣಸ್ತು ಕಾಂಬೋಜೋ ರಥ ಏಕಗುಣೋ ಮತಃ|

05163001c ತವಾರ್ಥಸಿದ್ಧಿಮಾಕಾಂಕ್ಷನ್ಯೋತ್ಸ್ಯತೇ ಸಮರೇ ಪರೈಃ||

ಭೀಷ್ಮನು ಹೇಳಿದನು: “ನನ್ನ ಅಭಿಪ್ರಾಯದಲ್ಲಿ ಕಾಂಬೋಜ ಸುದಕ್ಷಿಣನು ಒಬ್ಬ ರಥನಿಗೆ ಸಮ. ನಿನ್ನ ಉದ್ದೇಶ ಸಿದ್ಧಿಯನ್ನು ಬಯಸಿ ಅವನು ಸಮರದಲ್ಲಿ ಶತ್ರುಗಳೊಡನೆ ಹೋರಾಡುತ್ತಾನೆ.

05163002a ಏತಸ್ಯ ರಥಸಿಂಹಸ್ಯ ತವಾರ್ಥೇ ರಾಜಸತ್ತಮ|

05163002c ಪರಾಕ್ರಮಂ ಯಥೇಂದ್ರಸ್ಯ ದ್ರಕ್ಷ್ಯಂತಿ ಕುರವೋ ಯುಧಿ||

ರಾಜಸತ್ತಮ! ಯುದ್ಧದಲ್ಲಿ ನಿನಗಾಗಿ ಹೋರಾಡುವ ಇಂದ್ರನಂತಿರುವ ಈ ರಥಸಿಂಹನ ಪರಾಕ್ರಮವನ್ನು ಕುರುಗಳು ನೋಡುತ್ತಾರೆ.

05163003a ಏತಸ್ಯ ರಥವಂಶೋ ಹಿ ತಿಗ್ಮವೇಗಪ್ರಹಾರಿಣಾಂ|

05163003c ಕಾಂಬೋಜಾನಾಂ ಮಹಾರಾಜ ಶಲಭಾನಾಮಿವಾಯತಿಃ||

ಮಹಾರಾಜ! ತಿಗ್ಮವೇಗಪ್ರಹಾರಿಗಳಾದ ಕಾಂಬೋಜರ ರಥಸೇನೆಯು ಕೀಟಗಳ ಗುಂಪಿನಂತೆ ಬಂದು ಮುತ್ತುತ್ತವೆ.

05163004a ನೀಲೋ ಮಾಹಿಷ್ಮತೀವಾಸೀ ನೀಲವರ್ಮಧರಸ್ತವ|

05163004c ರಥವಂಶೇನ ಶತ್ರೂಣಾಂ ಕದನಂ ವೈ ಕರಿಷ್ಯತಿ||

ಮಾಹಿಷ್ಮತೀವಾಸಿ, ನೀಲಿ ಕವಚವನ್ನು ತೊಡುವ ನೀಲನು ನಿನ್ನ ರಥರಲ್ಲಿ ಒಬ್ಬ. ಅವನು ಸೇನೆಯೊಂದಿಗೆ ಶತ್ರುಗಳೊಡನೆ ಕಾದಾಡುತ್ತಾನೆ.

05163005a ಕೃತವೈರಃ ಪುರಾ ಚೈವ ಸಹದೇವೇನ ಪಾರ್ಥಿವಃ|

05163005c ಯೋತ್ಸ್ಯತೇ ಸತತಂ ರಾಜಂಸ್ತವಾರ್ಥೇ ಕುರುಸತ್ತಮ||

ರಾಜನ್! ಕುರುಸತ್ತಮ! ಹಿಂದೆ ಸಹದೇವನೊಂದಿಗೆ ವೈರವನ್ನು ಕಟ್ಟಿಕೊಂಡಿದ್ದ ಆ ಪಾರ್ಥಿವನು ನಿನಗಾಗಿ ಸತತವೂ ಹೋರಾಡುತ್ತಾನೆ.

05163006a ವಿಂದಾನುವಿಂದಾವಾವಂತ್ಯೌ ಸಮೇತೌ ರಥಸತ್ತಮೌ|

05163006c ಕೃತಿನೌ ಸಮರೇ ತಾತ ದೃಢವೀರ್ಯಪರಾಕ್ರಮೌ||

ಅವಂತಿಯ ವಿಂದಾನುವಿಂದರು ಇಬ್ಬರೂ ರಥಸತ್ತಮರು. ಮಗೂ! ಸಮರದಲ್ಲಿ ಇಬ್ಬರೂ ಪಳಗಿದವರು ಮತ್ತು ದೃಢವೀರ್ಯಪರಾಕ್ರಮಿಗಳು.

05163007a ಏತೌ ತೌ ಪುರುಷವ್ಯಾಘ್ರೌ ರಿಪುಸೈನ್ಯಂ ಪ್ರಧಕ್ಷ್ಯತಃ|

05163007c ಗದಾಪ್ರಾಸಾಸಿನಾರಾಚೈಸ್ತೋಮರೈಶ್ಚ ಭುಜಚ್ಯುತೈಃ||

ಇವರಿಬ್ಬರು ಪುರುಷವ್ಯಾಘ್ರರೂ ನಿನ್ನ ರಿಪುಸೇನೆಯನ್ನು ಭುಜಗಳಿಂದ ಪ್ರಯೋಗಿಸುವ ಗದೆ, ಪ್ರಾಸ, ಖಡ್ಗ, ನಾರಾಚ, ತೋಮರಗಳಿಂದ ಸುಟ್ಟು ಬಿಡುತ್ತಾರೆ.

05163008a ಯುದ್ಧಾಭಿಕಾಮೌ ಸಮರೇ ಕ್ರೀಡಂತಾವಿವ ಯೂಥಪೌ|

05163008c ಯೂಥಮಧ್ಯೇ ಮಹಾರಾಜ ವಿಚರಂತೌ ಕೃತಾಂತವತ್||

ಮಹಾರಾಜ! ಹಿಂಡಿನಲ್ಲಿ ಆಡುವ ಆನೆಗಳಂತೆ ಯುದ್ಧೋತ್ಸುಕರಾಗಿ ಸೇನೆಯಮಧ್ಯದಲ್ಲಿ ಇವರಿಬ್ಬರೂ ಯಮನಂತೆ ಸಂಚರಿಸುತ್ತಾರೆ.

05163009a ತ್ರಿಗರ್ತಾ ಭ್ರಾತರಃ ಪಂಚ ರಥೋದಾರಾ ಮತಾ ಮಮ|

05163009c ಕೃತವೈರಾಶ್ಚ ಪಾರ್ಥೇನ ವಿರಾಟನಗರೇ ತದಾ||

ನನ್ನ ಅಭಿಪ್ರಾಯದಲ್ಲಿ ರಥರೆಂದೆನಿಸಿಕೊಂಡ ಐವರು ತ್ರಿಗರ್ತ ಸಹೋದರರು ಅಂದು ವಿರಾಟನಗರದಲ್ಲಿ ಪಾರ್ಥನೊಂದಿಗೆ ವೈರ ಕಟ್ಟಿಕೊಂಡರು.

05163010a ಮಕರಾ ಇವ ರಾಜೇಂದ್ರ ಸಮುದ್ಧತತರಂಗಿಣೀಂ|

05163010c ಗಂಗಾಂ ವಿಕ್ಷೋಭಯಿಷ್ಯಂತಿ ಪಾರ್ಥಾನಾಂ ಯುಧಿ ವಾಹಿನೀಂ||

ರಾಜೇಂದ್ರ! ಗಂಗೆಯಲ್ಲಿ ಅಲೆಗಳನ್ನು ಅನುಸರಿಸಿ ಹೋಗುವ ಮೊಸಳೆಗಳಂತೆ ಅವರು ಯುದ್ಧದಲ್ಲಿ ಪಾರ್ಥರ ಸೇನೆಯನ್ನು ವಿಕ್ಷೋಭಗೊಳಿಸುತ್ತಾರೆ.

05163011a ತೇ ರಥಾಃ ಪಂಚ ರಾಜೇಂದ್ರ ಯೇಷಾಂ ಸತ್ಯರಥೋ ಮುಖಂ|

05163011c ಏತೇ ಯೋತ್ಸ್ಯಂತಿ ಸಮರೇ ಸಂಸ್ಮರಂತಃ ಪುರಾ ಕೃತಂ||

05163012a ವ್ಯಲೀಕಂ ಪಾಂಡವೇಯೇನ ಭೀಮಸೇನಾನುಜೇನ ಹ|

05163012c ದಿಶೋ ವಿಜಯತಾ ರಾಜನ್ ಶ್ವೇತವಾಹೇನ ಭಾರತ||

ರಾಜೇಂದ್ರ! ಭಾರತ! ರಾಜನ್! ಸತ್ಯರಥನ ನಾಯಕತ್ವದಲ್ಲಿರುವ ಈ ಐವರು ರಥರು ಹಿಂದೆ ದಿಕ್ಕುಗಳನ್ನು ಗೆಲ್ಲುವ ಸಮಯದಲ್ಲಿ ಭೀಮಸೇನಾನುಜ ಶ್ವೇತವಾಹನ ಪಾಂಡವನು ಅವರಿಗೆ ಮಾಡಿದುದನ್ನು ಸ್ಮರಿಸಿಕೊಂಡು ಸಮರದಲ್ಲಿ ಯುದ್ಧಮಾಡುತ್ತಾರೆ.

05163013a ತೇ ಹನಿಷ್ಯಂತಿ ಪಾರ್ಥಾನಾಂ ಸಮಾಸಾದ್ಯ ಮಹಾರಥಾನ್|

05163013c ವರಾನ್ವರಾನ್ಮಹೇಷ್ವಾಸಾನ್ ಕ್ಷತ್ರಿಯಾಣಾಂ ಧುರಂಧರಾಃ||

ಕ್ಷತ್ರಿಯರ ಧುರಂಧರರಾದ ಅವರು ಪಾರ್ಥರ ಮಹಾರಥಿಗಳನ್ನು ಎದುರಿಸಿ ಅವರಲ್ಲಿರುವ ಶೇಷ್ಠ ಶ್ರೇಷ್ಠರಾದ ಮಹೇಷ್ವಾಸರನ್ನು ಕೊಲ್ಲುತ್ತಾರೆ.

05163014a ಲಕ್ಷ್ಮಣಸ್ತವ ಪುತ್ರಸ್ತು ತಥಾ ದುಃಶಾಸನಸ್ಯ ಚ|

05163014c ಉಭೌ ತೌ ಪುರುಷವ್ಯಾಘ್ರೌ ಸಂಗ್ರಾಮೇಷ್ವನಿವರ್ತಿನೌ||

ನಿನ್ನ ಮಗ ಲಕ್ಷ್ಮಣ ಮತ್ತು ದುಃಶಾಸನನ ಮಗ ಇಬ್ಬರು ಪುರುಷವ್ಯಾಘ್ರರೂ ಸಂಗ್ರಾಮದಿಂದ ಹಿಂದೆ ಸರಿಯುವವರಲ್ಲ.

05163015a ತರುಣೌ ಸುಕುಮಾರೌ ಚ ರಾಜಪುತ್ರೌ ತರಸ್ವಿನೌ|

05163015c ಯುದ್ಧಾನಾಂ ಚ ವಿಶೇಷಜ್ಞೌ ಪ್ರಣೇತಾರೌ ಚ ಸರ್ವಶಃ||

05163016a ರಥೌ ತೌ ರಥಶಾರ್ದೂಲ ಮತೌ ಮೇ ರಥಸತ್ತಮೌ|

05163016c ಕ್ಷತ್ರಧರ್ಮರತೌ ವೀರೌ ಮಹತ್ಕರ್ಮ ಕರಿಷ್ಯತಃ||

ಈ ಇಬ್ಬರು ತರುಣ, ಸುಕುಮಾರ, ತರಸ್ವೀ ರಾಜಪುತ್ರರೂ ಯುದ್ಧಗಳ ವಿಶೇಷಜ್ಞರು, ಎಲ್ಲದರಲ್ಲಿ ಪ್ರಣೇತಾರರು. ರಥಶಾರ್ದೂಲ! ನನ್ನ ಅಭಿಪ್ರಾಯದಲ್ಲಿ ಅವರಿಬ್ಬರು ರಥಸತ್ತಮರು. ಕ್ಷತ್ರಧರ್ಮರತರಾದ ವೀರರಿಬ್ಬರೂ ಮಹಾ ಕರ್ಮಗಳನ್ನು ಮಾಡುತ್ತಾರೆ.

05163017a ದಂಡಧಾರೋ ಮಹಾರಾಜ ರಥ ಏಕೋ ನರರ್ಷಭಃ|

05163017c ಯೋತ್ಸ್ಯತೇ ಸಮರಂ ಪ್ರಾಪ್ಯ ಸ್ವೇನ ಸೈನ್ಯೇನ ಪಾಲಿತಃ||

ಮಹಾರಾಜ! ನರರ್ಷಭ ದಂಡಧಾರನು ಏಕ ರಥ. ತನ್ನ ಸೇನೆಯಿಂದ ಪಾಲಿತನಾದ ಅವನು ಸಮರವನ್ನು ಸೇರಿ ಯುದ್ಧವನ್ನು ಮಾಡುತ್ತಾನೆ.

05163018a ಬೃಹದ್ಬಲಸ್ತಥಾ ರಾಜಾ ಕೌಸಲ್ಯೋ ರಥಸತ್ತಮಃ|

05163018c ರಥೋ ಮಮ ಮತಸ್ತಾತ ದೃಢವೇಗಪರಾಕ್ರಮಃ||

ಅಯ್ಯಾ! ಕೋಸಲ ರಾಜ ಬೃಹದ್ಬಲನು ರಥಸತ್ತಮ. ಆ ದೃಢವೇಗಪರಾಕ್ರಮಿಯು ರಥನೆಂದು ನನಗನಿಸುತ್ತದೆ.

05163019a ಏಷ ಯೋತ್ಸ್ಯತಿ ಸಂಗ್ರಾಮೇ ಸ್ವಾಂ ಚಮೂಂ ಸಂಪ್ರಹರ್ಷಯನ್|

05163019c ಉಗ್ರಾಯುಧೋ ಮಹೇಷ್ವಾಸೋ ಧಾರ್ತರಾಷ್ಟ್ರಹಿತೇ ರತಃ||

ಈ ಉಗ್ರಾಯುಧ, ಮಹೇಷ್ವಾಸ, ಧಾರ್ತರಾಷ್ಟ್ರಹಿತರತನು ತನ್ನ ಸೇನೆಯನ್ನು ಹರ್ಷಗೊಳಿಸುತ್ತಾ ಸಂಗ್ರಾಮದಲ್ಲಿ ಹೋರಾಡುತ್ತಾನೆ.

05163020a ಕೃಪಃ ಶಾರದ್ವತೋ ರಾಜನ್ರಥಯೂಥಪಯೂಥಪಃ|

05163020c ಪ್ರಿಯಾನ್ಪ್ರಾಣಾನ್ಪರಿತ್ಯಜ್ಯ ಪ್ರಧಕ್ಷ್ಯತಿ ರಿಪೂಂಸ್ತವ||

ರಾಜನ್! ರಥಯೂಥಪಯೂಥಪನಾದ ಶಾರದ್ವತ ಕೃಪನು ಪ್ರಿಯ ಪ್ರಾಣವನ್ನು ಪರಿತ್ಯಜಿಸಿ ನಿನ್ನ ಶತ್ರುಗಳನ್ನು ಸುಟ್ಟುಬಿಡುತ್ತಾನೆ.

05163021a ಗೌತಮಸ್ಯ ಮಹರ್ಷೇರ್ಯ ಆಚಾರ್ಯಸ್ಯ ಶರದ್ವತಃ|

05163021c ಕಾರ್ತ್ತಿಕೇಯ ಇವಾಜೇಯಃ ಶರಸ್ತಂಬಾತ್ಸುತೋಽಭವತ್||

ಆರ್ಯ! ಆ ಮಹರ್ಷಿ ಆಚಾರ್ಯ ಅಜೇಯನು ಕಾರ್ತಿಕೇಯನಂತೆ ಶರಸ್ತಂಭದಲ್ಲಿ ಶರದ್ವತ ಗೌತಮನಲ್ಲಿ ಜನಿಸಿದನು.

05163022a ಏಷ ಸೇನಾಂ ಬಹುವಿಧಾಂ ವಿವಿಧಾಯುಧಕಾರ್ಮುಕಾಂ|

05163022c ಅಗ್ನಿವತ್ಸಮರೇ ತಾತ ಚರಿಷ್ಯತಿ ವಿಮರ್ದಯನ್||

ಅಯ್ಯಾ! ಇವನು ಸಮರದಲ್ಲಿ ಅಗ್ನಿಯಂತೆ ಸಂಚರಿಸಿ ವಿವಿಧ ಆಯುಧಗಳಿಂದ ಕೂಡಿದ ಬಹುವಿಧದ ಸೇನೆಗಳನ್ನು ಧ್ವಂಸಗೊಳಿಸುತ್ತಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ತ್ರಿಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ಮೂರನೆಯ ಅಧ್ಯಾಯವು.

Image result for indian motifs

Comments are closed.