Udyoga Parva: Chapter 155

ಉದ್ಯೋಗ ಪರ್ವ: ಭೀಷ್ಮಾಭಿಷೇಚನ ಪರ್ವ

೧೫೫

ರುಕ್ಮಿಯನ್ನು ಯಾರೂ ಯುದ್ಧಕ್ಕೆ ಸೇರಿಸಿಕೊಳ್ಳದೇ ಇದ್ದುದು

ಇಂದ್ರನ ವಿಜಯ ಧನುಸ್ಸನ್ನು ಪಡೆದಿದ್ದ ರುಕ್ಮಿಯು ಪಾಂಡವರಲ್ಲಿಗೆ ಬಂದು ತಾನು ತನ್ನ ಒಂದು ಅಕ್ಷೋಹಿಣೀ ಸೇನೆಯೊಂದಿಗೆ ಅವರೊಡನೆ ಸೇರಿ ಯುದ್ಧಮಾಡಿ ಅರ್ಜುನನಿಗೆ ಸಹಾಯಮಾಡುತ್ತೇನೆಂದು ಜಂಬ ಕೊಚ್ಚಿಕೊಳ್ಳಲು ಅವನನ್ನು ಯುದ್ಧಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದು ಹೇಳಿ ಕಳುಹಿಸುವುದು (೧-೩೩). ದುರ್ಯೋಧನನೂ ರುಕ್ಮಿಯನ್ನು ತಿರಸ್ಕರಿಸಿದ್ದುದು (೩೪-೩೮).

05155001 ವೈಶಂಪಾಯನ ಉವಾಚ|

05155001a ಏತಸ್ಮಿನ್ನೇವ ಕಾಲೇ ತು ಭೀಷ್ಮಕಸ್ಯ ಮಹಾತ್ಮನಃ|

05155001c ಹಿರಣ್ಯಲೋಮ್ನೋ ನೃಪತೇಃ ಸಾಕ್ಷಾದಿಂದ್ರಸಖಸ್ಯ ವೈ||

05155002a ಆಹೃತೀನಾಮಧಿಪತೇರ್ಭೋಜಸ್ಯಾತಿಯಶಸ್ವಿನಃ|

05155002c ದಾಕ್ಷಿಣಾತ್ಯಪತೇಃ ಪುತ್ರೋ ದಿಕ್ಷು ರುಕ್ಮೀತಿ ವಿಶ್ರುತಃ||

ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ನೃಪತಿ ಹಿರಣ್ಯಲೋಮನೆಂಬ ಹೆಸರಿನಿಂದಲೂ ಕರೆಯಲ್ಪಡುವ, ಸಾಕ್ಷಾತ್ ಇಂದ್ರನ ಸಖನಾಗಿದ್ದ, ಭೋಜರ ಯಶಸ್ವಿನೀ ಅಧಿಪತಿಯಾದ, ದಾಕ್ಷಿಣ್ಯಾತ್ಯಪತಿ ಮಹಾತ್ಮ ಭೀಷ್ಮಕನ ಪುತ್ರ, ದಿಕ್ಕುಗಳಲ್ಲಿ ರುಕ್ಮಿ ಎಂದು ವಿಶ್ರುತನಾಗಿದ್ದನು.

05155003a ಯಃ ಕಿಂಪುರುಷಸಿಂಹಸ್ಯ ಗಂಧಮಾದನವಾಸಿನಃ|

05155003c ಶಿಷ್ಯಃ ಕೃತ್ಸ್ನಂ ಧನುರ್ವೇದಂ ಚತುಷ್ಪಾದಮವಾಪ್ತವಾನ್||

05155004a ಯೋ ಮಾಹೇಂದ್ರಂ ಧನುರ್ಲೇಭೇ ತುಲ್ಯಂ ಗಾಂಡೀವತೇಜಸಾ|

05155004c ಶಾಂಙ್ರೇಣ ಚ ಮಹಾಬಾಹುಃ ಸಮ್ಮಿತಂ ದಿವ್ಯಮಕ್ಷಯಂ||

ಆ ಮಹಾಬಾಹುವು ಗಂಧಮಾದನವಾಸಿ ಕಿಂಪುರುಷಸಿಂಹನ ಶಿಷ್ಯನಾಗಿ ಧನುರ್ವೇದದ ನಾಲ್ಕೂ ಪಾದಗಳನ್ನು ಸಂಪೂರ್ಣವಾಗಿ ಕಲಿತು ತೇಜಸ್ಸಿನಲ್ಲಿ ಗಾಂಡೀವಕ್ಕೆ ಮತ್ತು ಶಾಂಙ್ರಕ್ಕೆ ಸಮನಾದ ದಿವ್ಯವೂ ಅಕ್ಷಯವೂ ಆದ ಧನುವನ್ನು ಮಹೇಂದ್ರನಿಂದ ಪಡೆದಿದ್ದನು.

05155005a ತ್ರೀಣ್ಯೇವೈತಾನಿ ದಿವ್ಯಾನಿ ಧನೂಂಷಿ ದಿವಿಚಾರಿಣಾಂ|

05155005c ವಾರುಣಂ ಗಾಂಡಿವಂ ತತ್ರ ಮಾಹೇಂದ್ರಂ ವಿಜಯಂ ಧನುಃ||

05155006a ಶಾಂಙ್ರಂ ತು ವೈಷ್ಣವಂ ಪ್ರಾಹುರ್ದಿವ್ಯಂ ತೇಜೋಮಯಂ ಧನುಃ|

05155006c ಧಾರಯಾಮಾಸ ಯತ್ಕೃಷ್ಣಃ ಪರಸೇನಾಭಯಾವಹಂ||

ದಿವಿಚಾರಿಗಳ ಮೂರೇ ದಿವ್ಯ ಧನುಗಳಿವೆಯೆಂದು ಹೇಳುತ್ತಾರೆ - ವರುಣನ ಗಾಂಡೀವ, ಮಹೇಂದ್ರನ ವಿಜಯವೆಂಬ ಧನುಸ್ಸು, ಮತ್ತು ವಿಷ್ಣುವಿನ ತೇಜೋಮಯ ಶಾಂಙ್ರ ಧನುಸ್ಸು. ಆ ಪರಸೇನಾಭಯಾವಹ ಧನುಸ್ಸನ್ನು ಕೃಷ್ಣನು ಧರಿಸಿದ್ದನು.

05155007a ಗಾಂಡೀವಂ ಪಾವಕಾಲ್ಲೇಭೇ ಖಾಂಡವೇ ಪಾಕಶಾಸನಿಃ|

05155007c ದ್ರುಮಾದ್ರುಕ್ಮೀ ಮಹಾತೇಜಾ ವಿಜಯಂ ಪ್ರತ್ಯಪದ್ಯತ||

ಗಾಂಡೀವವನ್ನು ಅರ್ಜುನನು ಖಾಂಡವದಲ್ಲಿ ಅಗ್ನಿಯಿಂದ ಪಡೆದಿದ್ದನು. ಮಹಾತೇಜಸ್ವಿ ವಿಜಯವನ್ನು ರುಕ್ಮಿಯು ದ್ರುಮನಿಂದ ಪಡೆದಿದ್ದನು.

05155008a ಸಂಚಿದ್ಯ ಮೌರವಾನ್ಪಾಶಾನ್ನಿಹತ್ಯ ಮುರಮೋಜಸಾ|

05155008c ನಿರ್ಜಿತ್ಯ ನರಕಂ ಭೌಮಮಾಹೃತ್ಯ ಮಣಿಕುಂಡಲೇ||

05155009a ಷೋಡಶ ಸ್ತ್ರೀಸಹಸ್ರಾಣಿ ರತ್ನಾನಿ ವಿವಿಧಾನಿ ಚ|

05155009c ಪ್ರತಿಪೇದೇ ಹೃಷೀಕೇಶಃ ಶಾಙ್ರಂ ಚ ಧನುರುತ್ತಮಂ||

ಮುರನ ಪಾಶಗಳನ್ನು ಕಡಿದು ಓಜಸ್ಸಿನಿಂದ ಮುರನನ್ನು ಕೊಂದು, ಭೂಮಿಯ ಮಗ ನರಕನನ್ನು ಗೆದ್ದು ಮಣಿಕುಂಡಲಗಳನ್ನು ದೊರಕಿಸಿಕೊಳ್ಳುವಾಗ, ಹದಿನಾರು ಸಾವಿರ ವಿವಿಧ ಸ್ತ್ರೀರತ್ನರನ್ನು ವಿಮೋಚನಗೊಳಿಸಿ ಹೃಷೀಕೇಶನು ಉತ್ತಮ ಶಾಂಙ್ರಧನುಸ್ಸನ್ನು ಪಡೆದಿದ್ದನು.

05155010a ರುಕ್ಮೀ ತು ವಿಜಯಂ ಲಬ್ಧ್ವಾ ಧನುರ್ಮೇಘಸಮಸ್ವನಂ|

05155010c ವಿಭೀಷಯನ್ನಿವ ಜಗತ್ಪಾಂಡವಾನಭ್ಯವರ್ತತ||

ಮೇಘದಂತೆ ಮೊಳಗುವ ವಿಜಯ ಧನುಸ್ಸನ್ನು ಪಡೆದು ರುಕ್ಮಿಯು ಜಗತ್ತಿಗೇ ಭಯವನ್ನುಂಟುಮಾಡುವಂತೆ ಪಾಂಡವರ ಬಳಿ ಬಂದನು.

05155011a ನಾಮೃಷ್ಯತ ಪುರಾ ಯೋಽಸೌ ಸ್ವಬಾಹುಬಲದರ್ಪಿತಃ|

05155011c ರುಕ್ಮಿಣ್ಯಾ ಹರಣಂ ವೀರೋ ವಾಸುದೇವೇನ ಧೀಮತಾ||

ಹಿಂದೆ ಸ್ವಬಾಹುಬಲದರ್ಪಿತನಾದ ಅವನು ತನ್ನ ತಂಗಿ ರುಕ್ಮಿಣಿಯನ್ನು ಧೀಮತ ವೀರ ವಾಸುದೇವನು ಅಪಹರಿಸಿದ್ದುದನ್ನು ಸಹಿಸಿರಲಿಲ್ಲ.

05155012a ಕೃತ್ವಾ ಪ್ರತಿಜ್ಞಾಂ ನಾಹತ್ವಾ ನಿವರ್ತಿಷ್ಯಾಮಿ ಕೇಶವಂ|

05155012c ತತೋಽನ್ವಧಾವದ್ವಾರ್ಷ್ಣೇಯಂ ಸರ್ವಶಸ್ತ್ರಭೃತಾಂ ವರಂ||

05155013a ಸೇನಯಾ ಚತುರಂಗಿಣ್ಯಾ ಮಹತ್ಯಾ ದೂರಪಾತಯಾ|

05155013c ವಿಚಿತ್ರಾಯುಧವರ್ಮಿಣ್ಯಾ ಗಂಗಯೇವ ಪ್ರವೃದ್ಧಯಾ||

ಕೇಶವನನ್ನು ಕೊಲ್ಲದೇ ಹಿಂದಿರುಗುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿ ಆ ಸರ್ವಶಸ್ತ್ರಭೃತರಲ್ಲಿ ಶೇಷ್ಠನು ಬಹುದೂರದವರೆಗೆ ವ್ಯಾಪ್ತಗೊಂಡ, ವಿಚಿತ್ರ ಆಯುಧ ಕವಚಗಳನ್ನು ಧರಿಸಿದ, ಗಂಗೆಯಂತೆ ಭೋರ್ಗರೆಯುತ್ತಿದ್ದ ಚತುರಂಗ ಸೇನೆಯೊಂದಿಗೆ ವಾರ್ಷ್ಣೇಯನನ್ನು ಬೆನ್ನುಹತ್ತಿದ್ದನು.

05155014a ಸ ಸಮಾಸಾದ್ಯ ವಾರ್ಷ್ಣೇಯಂ ಯೋಗಾನಾಮೀಶ್ವರಂ ಪ್ರಭುಂ|

05155014c ವ್ಯಂಸಿತೋ ವ್ರೀಡಿತೋ ರಾಜನ್ನಾಜಗಾಮ ಸ ಕುಂಡಿನಂ||

ರಾಜನ್! ಯೋಗಗಳ ಈಶ್ವರ ಪ್ರಭು ವಾರ್ಷ್ಣೇಯನನ್ನು ಎದುರಿಸಿ ಸೋತು ನಾಚಿಕೊಂಡು ಅವನು ಕುಂಡಿನಕ್ಕೆ ಹಿಂದಿರುಗಲಿಲ್ಲ.

05155015a ಯತ್ರೈವ ಕೃಷ್ಣೇನ ರಣೇ ನಿರ್ಜಿತಃ ಪರವೀರಹಾ|

05155015c ತತ್ರ ಭೋಜಕಟಂ ನಾಮ ಚಕ್ರೇ ನಗರಮುತ್ತಮಂ||

ಪರವೀರಹ ಕೃಷ್ಣನಿಂದ ರಣದಲ್ಲಿ ಸೋಲನ್ನಪ್ಪಿದ ಸ್ಥಳದಲ್ಲಿಯೇ ಅವನು ಭೋಜಕಟ ಎಂಬ ಹೆಸರಿನ ಉತ್ತಮ ನಗರವನ್ನು ನಿರ್ಮಿಸಿದ್ದನು.

05155016a ಸೈನ್ಯೇನ ಮಹತಾ ತೇನ ಪ್ರಭೂತಗಜವಾಜಿನಾ|

05155016c ಪುರಂ ತದ್ಭುವಿ ವಿಖ್ಯಾತಂ ನಾಮ್ನಾ ಭೋಜಕಟಂ ನೃಪ||

ನೃಪ! ಅವನ ಆ ಮಹಾಸೇನೆ, ಆನೆ, ಕುದುರೆಗಳಿಂದ ತುಂಬಿದ ಆ ಪುರವು ಭುವಿಯಲ್ಲಿ ಭೋಜಕಟವೆಂಬ ಹೆಸರಿನಲ್ಲಿ ವಿಖ್ಯಾತವಾಗಿತ್ತು.

05155017a ಸ ಭೋಜರಾಜಃ ಸೈನ್ಯೇನ ಮಹತಾ ಪರಿವಾರಿತಃ|

05155017c ಅಕ್ಷೌಹಿಣ್ಯಾ ಮಹಾವೀರ್ಯಃ ಪಾಂಡವಾನ್ಸಮುಪಾಗಮತ್||

05155018a ತತಃ ಸ ಕವಚೀ ಖಡ್ಗೀ ಶರೀ ಧನ್ವೀ ತಲೀ ರಥೀ|

05155018c ಧ್ವಜೇನಾದಿತ್ಯವರ್ಣೇನ ಪ್ರವಿವೇಶ ಮಹಾಚಮೂಂ||

ಆ ಭೋಜರಾಜನು ಒಂದು ಅಕ್ಷೌಹಿಣೀ ಮಹಾಸೇನೆಯಿಂದ ಸುತ್ತುವರೆಯಲ್ಪಟ್ಟು, ಮಹಾವೀರ್ಯದಿಂದ, ಕವಚ, ಖಡ್ಗ, ಬಾಣ, ಬಿಲ್ಲು, ಧ್ವಜ ಮತ್ತು ರಥಗಳಿಂದ, ಆದಿತ್ಯವರ್ಣದಿಂದ ಬೆಳಗುತ್ತಾ ಪಾಂಡವರ ಬಳಿಬಂದು ಮಹಾಸೇನೆಯನ್ನು ಪ್ರವೇಶಿಸಿದನು.

05155019a ವಿದಿತಃ ಪಾಂಡವೇಯಾನಾಂ ವಾಸುದೇವಪ್ರಿಯೇಪ್ಸಯಾ|

05155019c ಯುಧಿಷ್ಠಿರಸ್ತು ತಂ ರಾಜಾ ಪ್ರತ್ಯುದ್ಗಮ್ಯಾಭ್ಯಪೂಜಯತ್||

ವಾಸುದೇವನಿಗೆ ಪ್ರಿಯವಾದುದನ್ನು ಮಾಡಲು ಬಯಸುತ್ತಾನೆಂದು ಪಾಂಡವರಿಗೆ ತಿಳಿಸಿದನು. ಯುಧಿಷ್ಠಿರನಾದರೋ ಮುಂದುವರೆದು ಆ ರಾಜನನ್ನು ಪೂಜಿಸಿದನು.

05155020a ಸ ಪೂಜಿತಃ ಪಾಂಡುಸುತೈರ್ಯಥಾನ್ಯಾಯಂ ಸುಸತ್ಕೃತಃ|

05155020c ಪ್ರತಿಪೂಜ್ಯ ಚ ತಾನ್ಸರ್ವಾನ್ವಿಶ್ರಾಂತಃ ಸಹಸೈನಿಕಃ|

05155020e ಉವಾಚ ಮಧ್ಯೇ ವೀರಾಣಾಂ ಕುಂತೀಪುತ್ರಂ ಧನಂಜಯಂ||

ಪಾಂಡುಸುತನಿಂದ ಯಥಾನ್ಯಾಯವಾಗಿ ಪೂಜಿತನಾಗಿ ಸುಸತ್ಕೃತನಾದ ನಂತರ, ರುಕ್ಮಿಯು ಅವರೆಲ್ಲರನ್ನೂ ಪ್ರತಿಪೂಜಿಸಿ ಸೈನಿಕರೊಂದಿಗೆ ವಿಶ್ರಮಿಸಿದನು. ವೀರರ ಮದ್ಯೆ ಕುಂತೀಪುತ್ರ ಧನಂಜಯನಿಗೆ ಹೇಳಿದನು:

05155021a ಸಹಾಯೋಽಸ್ಮಿ ಸ್ಥಿತೋ ಯುದ್ಧೇ ಯದಿ ಭೀತೋಽಸಿ ಪಾಂಡವ|

05155021c ಕರಿಷ್ಯಾಮಿ ರಣೇ ಸಾಹ್ಯಮಸಹ್ಯಂ ತವ ಶತ್ರುಭಿಃ||

“ಪಾಂಡವ! ಯುದ್ಧದಲ್ಲಿ ಭಯವಾದರೆ ನಾನು ಸಹಾಯ ಮಾಡಲು ಇದ್ದೇನೆ. ನಾನು ಕೊಡುವ ಸಹಾಯವು ಶತ್ರುಗಳಿಗೂ ಸಹಿಸಲಾಗದಂತೆ ಮಾಡುತ್ತೇನೆ.

05155022a ನ ಹಿ ಮೇ ವಿಕ್ರಮೇ ತುಲ್ಯಃ ಪುಮಾನಸ್ತೀಹ ಕಶ್ಚನ|

05155022c ನಿಹತ್ಯ ಸಮರೇ ಶತ್ರೂಂಸ್ತವ ದಾಸ್ಯಾಮಿ ಫಲ್ಗುನ||

ವಿಕ್ರಮದಲ್ಲಿ ನನ್ನನ್ನು ಹೋಲುವ ಪುರುಷನು ಯಾರೂ ಇಲ್ಲ. ಫಲ್ಗುನ! ಸಮರದಲ್ಲಿ ಶತ್ರುಗಳನ್ನು ಸಂಹರಿಸಿ ನಿನಗೆ ಕೊಡುತ್ತೇನೆ.”

05155023a ಇತ್ಯುಕ್ತೋ ಧರ್ಮರಾಜಸ್ಯ ಕೇಶವಸ್ಯ ಚ ಸನ್ನಿಧೌ|

05155023c ಶೃಣ್ವತಾಂ ಪಾರ್ಥಿವೇಂದ್ರಾಣಾಮನ್ಯೇಷಾಂ ಚೈವ ಸರ್ವಶಃ||

ಇದನ್ನು ಧರ್ಮರಾಜ ಮತ್ತು ಕೇಶವನ ಸನ್ನಿಧಿಯಲ್ಲಿ,  ಪಾರ್ಥಿವೇಂದ್ರರು ಮತ್ತು ಇತರ ಎಲ್ಲರೂ ಕೇಳುವ ಹಾಗೆ ಹೇಳಿದನು.

05155024a ವಾಸುದೇವಮಭಿಪ್ರೇಕ್ಷ್ಯ ಧರ್ಮರಾಜಂ ಚ ಪಾಂಡವಂ|

05155024c ಉವಾಚ ಧೀಮಾನ್ಕೌಂತೇಯಃ ಪ್ರಹಸ್ಯ ಸಖಿಪೂರ್ವಕಂ||

ವಾಸುದೇವನನ್ನೂ, ಪಾಂಡವ ಧರ್ಮರಾಜನನ್ನೂ ನೋಡಿ ಧೀಮಾನ್ ಕೌಂತೇಯನು ಸಖ್ಯದಿಂದ ನಸುನಗುತ್ತಾ ಹೇಳಿದನು:

05155025a ಯುಧ್ಯಮಾನಸ್ಯ ಮೇ ವೀರ ಗಂಧರ್ವೈಃ ಸುಮಹಾಬಲೈಃ|

05155025c ಸಹಾಯೋ ಘೋಷಯಾತ್ರಾಯಾಂ ಕಸ್ತದಾಸೀತ್ಸಖಾ ಮಮ||

“ವೀರ! ಘೋಷಯಾತ್ರೆಯ ಸಮಯದಲ್ಲಿ ಸುಮಹಾಬಲರಾದ ಗಂಧರ್ವರೊಡನೆ ಯುದ್ಧಮಾಡುತ್ತಿರುವಾಗ ನನ್ನ ಸಹಾಯಕ್ಕೆಂದು ಯಾವ ಸಖನಿದ್ದನು?

05155026a ತಥಾ ಪ್ರತಿಭಯೇ ತಸ್ಮಿನ್ದೇವದಾನವಸಂಕುಲೇ|

05155026c ಖಾಂಡವೇ ಯುಧ್ಯಮಾನಸ್ಯ ಕಃ ಸಹಾಯಸ್ತದಾಭವತ್||

ದೇವದಾನವ ಸಂಕುಲವು ಖಾಂಡವದಲ್ಲಿ ಬೆಳಗಿ ಯುದ್ಧಮಾಡುತ್ತಿರುವಾಗ ನನಗೆ ಯಾರು ಸಹಾಯಕರಾಗಿದ್ದರು?

05155027a ನಿವಾತಕವಚೈರ್ಯುದ್ಧೇ ಕಾಲಕೇಯೈಶ್ಚ ದಾನವೈಃ|

05155027c ತತ್ರ ಮೇ ಯುಧ್ಯಮಾನಸ್ಯ ಕಃ ಸಹಾಯಸ್ತದಾಭವತ್||

ನಿವಾತಕವಚರು ಮತ್ತು ಕಾಲಕೇಯ ದಾನವರೊಂದಿಗೆ ಯುದ್ಧಮಾಡುವಾಗ ಅಲ್ಲಿ ನನಗೆ ಯಾರು ಸಹಾಯಕರಾಗಿದ್ದರು?

05155028a ತಥಾ ವಿರಾಟನಗರೇ ಕುರುಭಿಃ ಸಹ ಸಂಗರೇ|

05155028c ಯುಧ್ಯತೋ ಬಹುಭಿಸ್ತಾತ ಕಃ ಸಹಾಯೋಽಭವನ್ಮಮ||

ಅಯ್ಯಾ! ಹಾಗೆಯೇ ವಿರಾಟನಗರದ ಸಂಗರದಲ್ಲಿ ಬಹಳ ಕುರುಗಳೊಂದಿಗೆ ಯುದ್ಧಮಾಡುವಾಗ ಯಾರು ನನ್ನ ಸಹಾಯಕರಾಗಿದ್ದರು?

05155029a ಉಪಜೀವ್ಯ ರಣೇ ರುದ್ರಂ ಶಕ್ರಂ ವೈಶ್ರವಣಂ ಯಮಂ|

05155029c ವರುಣಂ ಪಾವಕಂ ಚೈವ ಕೃಪಂ ದ್ರೋಣಂ ಚ ಮಾಧವಂ||

05155030a ಧಾರಯನ್ಗಾಂಡಿವಂ ದಿವ್ಯಂ ಧನುಸ್ತೇಜೋಮಯಂ ದೃಢಂ|

05155030c ಅಕ್ಷಯ್ಯಶರಸಮ್ಯುಕ್ತೋ ದಿವ್ಯಾಸ್ತ್ರಪರಿಬೃಂಹಿತಃ||

05155031a ಕೌರವಾಣಾಂ ಕುಲೇ ಜಾತಃ ಪಾಂಡೋಃ ಪುತ್ರೋ ವಿಶೇಷತಃ|

05155031c ದ್ರೋಣಂ ವ್ಯಪದಿಶಂ ಶಿಷ್ಯೋ ವಾಸುದೇವಸಹಾಯವಾನ್||

05155032a ಕಥಮಸ್ಮದ್ವಿಧೋ ಬ್ರೂಯಾದ್ಭೀತೋಽಸ್ಮೀತ್ಯಯಶಸ್ಕರಂ|

05155032c ವಚನಂ ನರಶಾರ್ದೂಲ ವಜ್ರಾಯುಧಮಪಿ ಸ್ವಯಂ||

ರಣದಲ್ಲಿ ರುದ್ರನಿಗೂ, ಶಕ್ರನಿಗೂ, ಕುಬೇರನಿಗೂ, ಯಮನಿಗೂ, ವರುಣನಿಗೂ, ಅಗ್ನಿಗೂ, ಕೃಪನಿಗೂ, ದ್ರೋಣನಿಗೂ ಮತ್ತು ಮಾಧವನಿಗೂ ನಮಸ್ಕರಿಸಿ, ದಿವ್ಯ ತೇಜೋಮಯ, ದೃಢ ಗಾಂಡೀವವನ್ನು ಧರಿಸಿ, ಅಕ್ಷಯ ಭತ್ತಳಿಕೆಗಳಿಂದ ಕೂಡಿದವನಾಗಿ, ದಿವ್ಯಾಸ್ತ್ರಗಳನ್ನು ಪಡೆದು, ಕೌರವರ ಕುಲದಲ್ಲಿ ಹುಟ್ಟಿ, ಪಾಂಡುವಿನ ವಿಶೇಷ ಪುತ್ರನಾಗಿ, ದ್ರೋಣನ ಶಿಷ್ಯನೆನಿಸಿಕೊಂಡಿರುವ, ವಾಸುದೇವನನ್ನು ಸಹಾಯಕನನ್ನಾಗಿ ಪಡೆದ ನಾನು ಅಯಶಸ್ಕರನಂತೆ ಭೀತನಾಗಿದ್ದೇನೆ ಎಂದು, ಸ್ವಯಂ ವಜ್ರಾಯುಧಕ್ಕಾದರೂ ಹೇಗೆ ತಾನೇ ಹೇಳಲಿ?

05155033a ನಾಸ್ಮಿ ಭೀತೋ ಮಹಾಬಾಹೋ ಸಹಾಯಾರ್ಥಶ್ಚ ನಾಸ್ತಿ ಮೇ|

05155033c ಯಥಾಕಾಮಂ ಯಥಾಯೋಗಂ ಗಚ್ಚ ವಾನ್ಯತ್ರ ತಿಷ್ಠ ವಾ||

ಮಹಾಬಾಹೋ! ನನಗೆ ಹೆದರಿಕೆಯಿಲ್ಲ. ನನಗೆ ಸಹಾಯವೂ ಬೇಕಾಗಿಲ್ಲ. ನಿನಗಿಷ್ಟವಾದ ಹಾಗೆ, ನಿನಗೆ ಸರಿಯೆನಿಸುವ ಹಾಗೆ ಹೋಗು ಅಥವಾ ಅಲ್ಲಿ ನಿಲ್ಲು!”

05155034a ವಿನಿವರ್ತ್ಯ ತತೋ ರುಕ್ಮೀ ಸೇನಾಂ ಸಾಗರಸಮ್ನಿಭಾಂ|

05155034c ದುರ್ಯೋಧನಮುಪಾಗಚ್ಚತ್ತಥೈವ ಭರತರ್ಷಭ||

ಭರತರ್ಷಭ! ಆಗ ರುಕ್ಮಿಯು ಸಾಗರಸನ್ನಿಭ ಸೇನೆಯೊಂದಿಗೆ ಹಿಂದಿರುಗಿ ಹಾಗೆಯೇ ದುರ್ಯೋಧನನ ಬಳಿ ಹೋದನು.

05155035a ತಥೈವ ಚಾಭಿಗಮ್ಯೈನಮುವಾಚ ಸ ನರಾಧಿಪಃ|

05155035c ಪ್ರತ್ಯಾಖ್ಯಾತಶ್ಚ ತೇನಾಪಿ ಸ ತದಾ ಶೂರಮಾನಿನಾ||

ಅಲ್ಲಿಗೆ ಹೋಗಿ ಆ ನರಾಧಿಪನು ಹಾಗೆಯೇ ಹೇಳಿದನು. ಅವನನ್ನು ಕೇಳಿದ ಆ ಶೂರಮಾನಿನಿಯೂ ಕೂಡ ಅವನನ್ನು ಹಾಗೆಯೇ ತಿರಸ್ಕರಿಸಿದನು.

05155036a ದ್ವಾವೇವ ತು ಮಹಾರಾಜ ತಸ್ಮಾದ್ಯುದ್ಧಾದ್ವ್ಯಪೇಯತುಃ|

05155036c ರೌಹಿಣೇಯಶ್ಚ ವಾರ್ಷ್ಣೇಯೋ ರುಕ್ಮೀ ಚ ವಸುಧಾಧಿಪಃ||

ಮಹಾರಾಜ! ಇಬ್ಬರೇ ಆ ಯುದ್ಧದಿಂದ ದೂರವಿದ್ದರು: ವಾರ್ಷ್ಣೇಯ ರೌಹಿಣೇಯ ಮತ್ತು ವಸುಧಾಧಿಪ ರುಕ್ಮಿ.

05155037a ಗತೇ ರಾಮೇ ತೀರ್ಥಯಾತ್ರಾಂ ಭೀಷ್ಮಕಸ್ಯ ಸುತೇ ತಥಾ|

05155037c ಉಪಾವಿಶನ್ಪಾಂಡವೇಯಾ ಮಂತ್ರಾಯ ಪುನರೇವ ಹಿ||

ರಾಮನು ತೀರ್ಥಯಾತ್ರೆಗೆ ಮತ್ತು ಭೀಷ್ಮಕನ ಮಗನು ಹಾಗೆ ಹೋಗಲು ಪಾಂಡವೇಯರು ಪುನಃ ಮಂತ್ರಾಲೋಚನೆಗೆ ಕುಳಿತುಕೊಂಡರು.

05155038a ಸಮಿತಿರ್ಧರ್ಮರಾಜಸ್ಯ ಸಾ ಪಾರ್ಥಿವಸಮಾಕುಲಾ|

05155038c ಶುಶುಭೇ ತಾರಕಾಚಿತ್ರಾ ದ್ಯೌಶ್ಚಂದ್ರೇಣೇವ ಭಾರತ||

ಭಾರತ! ಪಾರ್ಥಿವರ ಸಮಾಕುಲವಾಗಿದ್ದ ಧರ್ಮರಾಜನ ಆ ಸಮಿತಿಯು ಆಕಾಶದಲ್ಲಿ ತಾರೆಗಳ ಮಧ್ಯೆ ಇರುವ ಚಂದ್ರನಂತೆ ಶೋಭಿಸಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಣಿ ರುಕ್ಮಿಪ್ರತ್ಯಾಸ್ಥಾನೇ ಪಂಚಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವದಲ್ಲಿ ರುಕ್ಮಿಪ್ರತ್ಯಾಸ್ಥಾನದಲ್ಲಿ ನೂರಾಐವತ್ತೈದನೆಯ ಅಧ್ಯಾಯವು.

Image result for indian motifs

Comments are closed.