Udyoga Parva: Chapter 154

ಉದ್ಯೋಗ ಪರ್ವ: ಭೀಷ್ಮಾಭಿಷೇಚನ ಪರ್ವ

೧೫೪

ಬಲರಾಮನ ತೀರ್ಥಯಾತ್ರಾಗಮನ

ಯುಧಿಷ್ಠಿರನು ದ್ರುಪದ, ವಿರಾಟ, ಸಾತ್ಯಕಿ, ಧೃಷ್ಟದ್ಯುಮ್ನ, ಧೃಷ್ಟಕೇತು, ಶಿಖಂಡಿ, ಮಾಗಧ ಸಹದೇವರನ್ನು ತನ್ನ ಏಳು ಸೇನೆಗಳ ನಾಯಕರನ್ನಾಗಿ,  ಧೃಷ್ಟದ್ಯುಮ್ನನನ್ನು ಸರ್ವಸೇನಾಪತಿಯನ್ನಾಗಿ ಮತ್ತು ಅರ್ಜುನನ್ನು ಸಮಸ್ತ ಸೇನಾಪತಿಯನ್ನಾಗಿ ನಿಯೋಜಿಸಿದುದು (೧-೧೬). ಬಲರಾಮನು ಪಾಂಡವರಲ್ಲಿಗೆ ಬಂದು ಕೌರವರು-ಪಾಂಡವರು ಇಬ್ಬರೂ ತನಗೆ ಸಮನಾದುದರಿಂದ ತಾನು ಇತರ ವೃಷ್ಣಿ ಯುವಕರೊಂದಿಗೆ ಸರಸ್ವತೀ ತೀರದಲ್ಲಿ ನೆಲೆಸುತ್ತೇನೆ ಎಂದು ಬೀಳ್ಕೊಂಡು ಹೋದುದು (೧೭-೩೪).

05154001 ಜನಮೇಜಯ ಉವಾಚ|

05154001a ಆಪಗೇಯಂ ಮಹಾತ್ಮಾನಂ ಭೀಷ್ಮಂ ಶಸ್ತ್ರಭೃತಾಂ ವರಂ|

05154001c ಪಿತಾಮಹಂ ಭಾರತಾನಾಂ ಧ್ವಜಂ ಸರ್ವಮಹೀಕ್ಷಿತಾಂ||

05154002a ಬೃಹಸ್ಪತಿಸಮಂ ಬುದ್ಧ್ಯಾ ಕ್ಷಮಯಾ ಪೃಥಿವೀಸಮಂ|

05154002c ಸಮುದ್ರಮಿವ ಗಾಂಭೀರ್ಯೇ ಹಿಮವಂತಮಿವ ಸ್ಥಿರಂ||

05154003a ಪ್ರಜಾಪತಿಮಿವೌದಾರ್ಯೇ ತೇಜಸಾ ಭಾಸ್ಕರೋಪಮಂ|

05154003c ಮಹೇಂದ್ರಮಿವ ಶತ್ರೂಣಾಂ ಧ್ವಂಸನಂ ಶರವೃಷ್ಟಿಭಿಃ||

05154004a ರಣಯಜ್ಞೇ ಪ್ರತಿಭಯೇ ಸ್ವಾಭೀಲೇ ಲೋಮಹರ್ಷಣ|

05154004c ದೀಕ್ಷಿತಂ ಚಿರರಾತ್ರಾಯ ಶ್ರುತ್ವಾ ರಾಜಾ ಯುಧಿಷ್ಠಿರಃ||

05154005a ಕಿಮಬ್ರವೀನ್ಮಹಾಬಾಹುಃ ಸರ್ವಧರ್ಮವಿಶಾರದಃ|

05154005c ಭೀಮಸೇನಾರ್ಜುನೌ ವಾಪಿ ಕೃಷ್ಣೋ ವಾ ಪ್ರತ್ಯಪದ್ಯತ||

ಜನಮೇಜಯನು ಹೇಳಿದನು: “ಶಸ್ತ್ರಭೃರಲ್ಲಿ ಶ್ರೇಷ್ಠನಾಗಿದ್ದ, ಮಹಾತ್ಮ, ಆಪಗೇಯ ಭೀಷ್ಮನು, ಭಾರತರ ಪಿತಾಮಹನು, ಸರ್ವ ಮಹೀಕ್ಷಿತರ ದ್ವಜದಂತಿದ್ದ, ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾಗಿದ್ದ, ಕ್ಷಮೆಯಲ್ಲಿ ಪೃಥ್ವಿಯ ಸಮನಾಗಿದ್ದ, ಗಾಂಭೀರ್ಯದಲ್ಲಿ ಸಮುದ್ರದಂತಿದ್ದ, ಹಿಮವಂತನಂತೆ ಸ್ಥಿರನಾಗಿದ್ದ, ಔದಾರ್ಯದಲ್ಲಿ ಪ್ರಜಾಪತಿಯಂತಿದ್ದ, ತೇಜಸ್ಸಿನಲ್ಲಿ ಭಾಸ್ಕರನಂತಿದ್ದ, ಮಹೇಂದ್ರನಂತೆ ಶರವೃಷ್ಟಿಗಳಿಂದ ಶತ್ರುಗಳನ್ನು ಧ್ವಂಸಗೊಳಿಸಬಲ್ಲವನಾಗಿದ್ದ ಅವನು ರಣಯಜ್ಞದಲ್ಲಿ ಬಹುಕಾಲದವರೆಗೆ ಸೇನಾಪತಿಯಾಗಿ ದೀಕ್ಷಿತನಾಗಿದ್ದಾನೆಂದು ಕೇಳಿ ಸರ್ವಧರ್ಮವಿಶಾರದ ಮಹಾಬಾಹು ಯುಧಿಷ್ಠಿರನು ಏನು ಹೇಳಿದನು? ಭೀಮಸೇನ ಅರ್ಜುನರು, ಕೃಷ್ಣನೂ ಕೂಡ ಏನು ಹೇಳಿದರು?”

05154006 ವೈಶಂಪಾಯನ ಉವಾಚ|

05154006a ಆಪದ್ಧರ್ಮಾರ್ಥಕುಶಲೋ ಮಹಾಬುದ್ಧಿರ್ಯುಧಿಷ್ಠಿರಃ|

05154006c ಸರ್ವಾನ್ಭ್ರಾತೄನ್ಸಮಾನೀಯ ವಾಸುದೇವಂ ಚ ಸಾತ್ವತಂ||

05154006e ಉವಾಚ ವದತಾಂ ಶ್ರೇಷ್ಠಃ ಸಾಂತ್ವಪೂರ್ವಮಿದಂ ವಚಃ||

ವೈಶಂಪಾಯನನು ಹೇಳಿದನು: “ಆಪದ್ಧರ್ಮಾರ್ಥಕುಶಲನಾದ, ಮಾತನಾಡುವವರಲ್ಲಿ ಶ್ರೇಷ್ಠನಾದ ಮಹಾಬುದ್ಧಿ ಯುಧಿಷ್ಠಿರನು ಎಲ್ಲ ಸಹೋದರರನ್ನೂ, ಸಾತ್ವತ ವಾಸುದೇವನನೂ ಕೂಡಿಸಿ ಸಾಂತ್ವಪೂರ್ವಕ ಈ ಮಾತನ್ನಾಡಿದನು.

05154007a ಪರ್ಯಾಕ್ರಾಮತ ಸೈನ್ಯಾನಿ ಯತ್ತಾಸ್ತಿಷ್ಠತ ದಂಶಿತಾಃ|

05154007c ಪಿತಾಮಹೇನ ವೋ ಯುದ್ಧಂ ಪೂರ್ವಮೇವ ಭವಿಷ್ಯತಿ|

05154007e ತಸ್ಮಾತ್ಸಪ್ತಸು ಸೇನಾಸು ಪ್ರಣೇತಾನ್ಮಮ ಪಶ್ಯತ||

“ಸೇನೆಗಳಲ್ಲಿ ಸುತ್ತಾಡಿ. ಯಾವಾಗಲೂ ಅವು ರಕ್ಷಣೆಯಲ್ಲಿರಲಿ. ಮೊದಲನೆಯ ಯುದ್ಧವು ಪಿತಾಮಹನೊಂದಿಗೆ ನಡೆಯಲಿದೆ. ಆದುದರಿಂದ ಏಳು ಸೇನೆಗಳ ಪ್ರಣೇತಾರರನ್ನು ನನಗೆ ತೋರಿಸಿ.”

05154008 ವಾಸುದೇವ ಉವಾಚ|

05154008a ಯಥಾರ್ಹತಿ ಭವಾನ್ವಕ್ತುಮಸ್ಮಿನ್ಕಾಲ ಉಪಸ್ಥಿತೇ|

05154008c ತಥೇದಮರ್ಥವದ್ವಾಕ್ಯಮುಕ್ತಂ ತೇ ಭರತರ್ಷಭ||

ವಾಸುದೇವನು ಹೇಳಿದನು: “ಬಂದಿರುವ ಕಾಲಕ್ಕೆ ತಕ್ಕುದಾಗಿ ನೀನು ಹೇಳಿದ್ದೀಯೆ. ಭರತರ್ಷಭ! ನೀನು ಹೇಳಿದುದು ಹಾಗೆಯೇ ಅರ್ಥವತ್ತಾಗಿದೆ.

05154009a ರೋಚತೇ ಮೇ ಮಹಾಬಾಹೋ ಕ್ರಿಯತಾಂ ಯದನಂತರಂ|

05154009c ನಾಯಕಾಸ್ತವ ಸೇನಾಯಾಮಭಿಷಿಚ್ಯಂತು ಸಪ್ತ ವೈ||

ಮಹಾಬಾಹೋ! ಅನಂತರ ನಿನ್ನ ಏಳು ಸೇನೆಗಳ ನಾಯಕರನ್ನು ನೀನು ಅಭಿಷೇಕಿಸಬೇಕೆಂದು ನನಗನ್ನಿಸುತ್ತದೆ.””

05154010 ವೈಶಂಪಾಯನ ಉವಾಚ|

05154010a ತತೋ ದ್ರುಪದಮಾನಾಯ್ಯ ವಿರಾಟಂ ಶಿನಿಪುಂಗವಂ|

05154010c ಧೃಷ್ಟದ್ಯುಮ್ನಂ ಚ ಪಾಂಚಾಲ್ಯಂ ಧೃಷ್ಟಕೇತುಂ ಚ ಪಾರ್ಥಿವಂ||

05154010e ಶಿಖಂಡಿನಂ ಚ ಪಾಂಚಾಲ್ಯಂ ಸಹದೇವಂ ಚ ಮಾಗಧಂ||

05154011a ಏತಾನ್ಸಪ್ತ ಮಹೇಷ್ವಾಸಾನ್ವೀರಾನ್ಯುದ್ಧಾಭಿನಂದಿನಃ|

05154011c ಸೇನಾಪ್ರಣೇತಾನ್ವಿಧಿವದಭ್ಯಷಿಂಚದ್ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಆಗ ದ್ರುಪದ, ವಿರಾಟ, ಸಾತ್ಯಕಿ, ಪಾಂಚಾಲ್ಯ ಧೃಷ್ಟದ್ಯುಮ್ನ, ಪಾರ್ಥಿವ ಧೃಷ್ಟಕೇತು, ಪಾಂಚಾಲ್ಯ ಶಿಖಂಡಿ, ಮಾಗಧ ಸಹದೇವ ಈ ಏಳು ಮಹೇಷ್ವಾಸ ವೀರರನ್ನು ಕರೆಯಿಸಿ ಯುದ್ಧಾಭಿನಂದಿನ ಯುಧಿಷ್ಠಿರನು ತನ್ನ ಸೇನಾಪ್ರಣೇತಾರರನ್ನಾಗಿ ವಿಧಿವತ್ತಾಗಿ ಅಭಿಷೇಕಿಸಿದನು.

05154012a ಸರ್ವಸೇನಾಪತಿಂ ಚಾತ್ರ ಧೃಷ್ಟದ್ಯುಮ್ನಮುಪಾದಿಶತ್|

05154012c ದ್ರೋಣಾಂತಹೇತೋರುತ್ಪನ್ನೋ ಯ ಇದ್ಧಾಂ ಜಾತವೇದಸಃ||

ದ್ರೋಣನನ್ನು ಕೊಲ್ಲಲು ಅಗ್ನಿಯಿಂದ ಉತ್ಪನ್ನನಾದ ಆ ಧೃಷ್ಟದ್ಯುಮ್ನನನ್ನು ಸರ್ವಸೇನಾಪತಿಯನ್ನಾಗಿ ನಿಯೋಜಿಸಿದನು.

05154013a ಸರ್ವೇಷಾಮೇವ ತೇಷಾಂ ತು ಸಮಸ್ತಾನಾಂ ಮಹಾತ್ಮನಾಂ|

05154013c ಸೇನಾಪತಿಪತಿಂ ಚಕ್ರೇ ಗುಡಾಕೇಶಂ ಧನಂಜಯಂ||

ಗುಡಾಕೇಶ ಧನಂಜಯನನ್ನು ಅವರೆಲ್ಲ ಸಮಸ್ತ ಮಹಾತ್ಮರಿಗೆ ಸೇನಾಪತಿಯನ್ನಾಗಿ ಮಾಡಿದನು.

05154014a ಅರ್ಜುನಸ್ಯಾಪಿ ನೇತಾ ಚ ಸಮ್ಯಂತಾ ಚೈವ ವಾಜಿನಾಂ|

05154014c ಸಂಕರ್ಷಣಾನುಜಃ ಶ್ರೀಮಾನ್ಮಹಾಬುದ್ಧಿರ್ಜನಾರ್ದನಃ||

ಸಂಕರ್ಷಣನ ಅನುಜ, ಶ್ರೀಮಾನ್, ಮಹಾಬುದ್ಧಿ ಜನಾರ್ದನನನ್ನು ಅರ್ಜುನನಿಗೆ ನೇತಾರನಾಗಿ, ಕುದುರೆಗಳನ್ನು ನಿಯಂತ್ರಿಸುವವನನ್ನಾಗಿ ನಿಯೋಜಿಸಲಾಯಿತು.

05154015a ತದ್ದೃಷ್ಟ್ವೋಪಸ್ಥಿತಂ ಯುದ್ಧಂ ಸಮಾಸನ್ನಂ ಮಹಾತ್ಯಯಂ|

05154015c ಪ್ರಾವಿಶದ್ಭವನಂ ರಾಜ್ಞಾಃ ಪಾಂಡವಸ್ಯ ಹಲಾಯುಧಃ||

05154016a ಸಹಾಕ್ರೂರಪ್ರಭೃತಿಭಿರ್ಗದಸಾಂಬೋಲ್ಮುಕಾದಿಭಿಃ|

05154016c ರೌಕ್ಮಿಣೇಯಾಹುಕಸುತೈಶ್ಚಾರುದೇಷ್ಣಪುರೋಗಮೈಃ||

ಆಗ ಮಹಾ ಕ್ಷಯವನ್ನು ತರುವ ಯುದ್ಧವು ಬರುತ್ತಿದೆ ಎನ್ನುವುದನ್ನು ಕಂಡ ಹಲಾಯುಧನು ಅಕ್ರೂರ, ಗದ, ಸಾಂಬ, ಉಲುಕಾದಿಗಳೊಡನೆ, ರುಕ್ಮಿಣಿಯ ಮಗ, ಆಹುಕಸುತ, ಚಾರುದೇಷ್ಣರನ್ನು ಮುಂದಿಟ್ಟುಕೊಂಡು ರಾಜಾ ಪಾಂಡವನ ಭವನವನ್ನು ಪ್ರವೇಶಿಸಿದನು.

05154017a ವೃಷ್ಣಿಮುಖ್ಯೈರಭಿಗತೈರ್ವ್ಯಾಘ್ರೈರಿವ ಬಲೋತ್ಕಟೈಃ|

05154017c ಅಭಿಗುಪ್ತೋ ಮಹಾಬಾಹುರ್ಮರುದ್ಭಿರಿವ ವಾಸವಃ||

05154018a ನೀಲಕೌಶೇಯವಸನಃ ಕೈಲಾಸಶಿಖರೋಪಮಃ|

05154018c ಸಿಂಹಖೇಲಗತಿಃ ಶ್ರೀಮಾನ್ಮದರಕ್ತಾಂತಲೋಚನಃ||

ವ್ಯಾಘ್ರರಂತೆ ಬಲೋತ್ಕಟರಾಗಿರುವ ವೃಷ್ಣಿಮುಖ್ಯರಿಂದೊಡಗೂಡಿ ಮರುತ್ತುಗಳ ಮಧ್ಯೆ ವಾಸವನಂತೆ ಆ ಮಹಾಬಾಹು ನೀಲಕೌಶೇಯವಸನ, ಕೈಲಾಸಶಿಖರೋಪಮ, ಸಿಂಹದ ನಡುಗೆಯನ್ನುಳ್ಳ, ಮದಿರದಿಂದ ಕಣ್ಣುಗಳು ಕೆಂಪಾಗಿದ್ದ ಆ ಶ್ರೀಮಾನನು ಅಲ್ಲಿಗೆ ಆಗಮಿಸಿದನು.

05154019a ತಂ ದೃಷ್ಟ್ವಾ ಧರ್ಮರಾಜಶ್ಚ ಕೇಶವಶ್ಚ ಮಹಾದ್ಯುತಿಃ|

05154019c ಉದತಿಷ್ಠತ್ತದಾ ಪಾರ್ಥೋ ಭೀಮಕರ್ಮಾ ವೃಕೋದರಃ||

ಅವನನ್ನು ನೋಡಿ ಧರ್ಮರಾಜನೂ, ಮಹಾದ್ಯುತಿ ಕೇಶವನೂ, ಪಾರ್ಥ, ಭೀಮಕರ್ಮಿ ವೃಕೋದರನೂ ಎದ್ದು ನಿಂತರು.

05154020a ಗಾಂಡೀವಧನ್ವಾ ಯೇ ಚಾನ್ಯೇ ರಾಜಾನಸ್ತತ್ರ ಕೇ ಚನ|

05154020c ಪೂಜಯಾಂ ಚಕ್ರುರಭ್ಯೇತ್ಯ ತೇ ಸ್ಮ ಸರ್ವೇ ಹಲಾಯುಧಂ||

ಗಾಂಡೀವಧನ್ವಿಯೂ ಮತ್ತು ಅಲ್ಲಿದ್ದ ಇನ್ನೂ ಇತರ ರಾಜರು ಎಲ್ಲರೂ ಹಲಾಯುಧನನ್ನು ಪೂಜಿಸಿದರು.

05154021a ತತಸ್ತಂ ಪಾಂಡವೋ ರಾಜಾ ಕರೇ ಪಸ್ಪರ್ಶ ಪಾಣಿನಾ|

05154021c ವಾಸುದೇವಪುರೋಗಾಸ್ತು ಸರ್ವ ಏವಾಭ್ಯವಾದಯನ್||

05154022a ವಿರಾಟದ್ರುಪದೌ ವೃದ್ಧಾವಭಿವಾದ್ಯ ಹಲಾಯುಧಃ|

05154022c ಯುಧಿಷ್ಠಿರೇಣ ಸಹಿತ ಉಪಾವಿಶದರಿಂದಮಃ||

ಆಗ ರಾಜಾ ಪಾಂಡವನು ಅವನನ್ನು ಕೈಗಳಿಂದ ಮುಟ್ಟಲು ಅರಿಂದಮ ಹಲಾಯುಧನು ವಾಸುದೇವನ ನಾಯಕತ್ವದಲ್ಲಿದ್ದ ಎಲ್ಲರಿಗೂ ಅಭಿವಾದಿಸಿ, ವೃದ್ಧರಾದ ವಿರಾಟ-ದ್ರುಪದರನ್ನು ನಮಸ್ಕರಿಸಿ ಯುಧಿಷ್ಠಿರನೊಡನೆ ಕುಳಿತುಕೊಂಡನು.

05154023a ತತಸ್ತೇಷೂಪವಿಷ್ಟೇಷು ಪಾರ್ಥಿವೇಷು ಸಮಂತತಃ|

05154023c ವಾಸುದೇವಮಭಿಪ್ರೇಕ್ಷ್ಯ ರೌಹಿಣೇಯೋಽಭ್ಯಭಾಷತ||

ಆಗ ಅಲ್ಲಿ ಸೇರಿದ್ದ ಪಾರ್ಥಿವರು ಕುಳಿತುಕೊಳ್ಳಲು ವಾಸುದೇವನನ್ನು ನೋಡಿ ರೌಹಿಣೇಯನು ಮಾತನಾಡಿದನು:

05154024a ಭವಿತಾಯಂ ಮಹಾರೌದ್ರೋ ದಾರುಣಃ ಪುರುಷಕ್ಷಯಃ|

05154024c ದಿಷ್ಟಮೇತದ್ಧ್ರುವಂ ಮನ್ಯೇ ನ ಶಕ್ಯಮತಿವರ್ತಿತುಂ||

“ಮಹಾರೌದ್ರವಾದ ದಾರುಣ ಪುರುಷಕ್ಷಯವು ನಡೆಯುವುದಿದೆ. ಇದು ಖಂಡಿತವಾಗಿ ದೈವವು ನಿರ್ಧರಿಸಿದುದು. ಇದನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ನನಗನ್ನಿಸುತ್ತದೆ.

05154025a ಅಸ್ಮಾದ್ಯುದ್ಧಾತ್ಸಮುತ್ತೀರ್ಣಾನಪಿ ವಃ ಸಸುಹೃಜ್ಜನಾನ್|

05154025c ಅರೋಗಾನಕ್ಷತೈರ್ದೇಹೈಃ ಪಶ್ಯೇಯಮಿತಿ ಮೇ ಮತಿಃ||

ಈ ಯುದ್ಧದಲ್ಲಿ ನೀವು ಮತ್ತು ನಿಮ್ಮ ಸುಹೃಜ್ಜನರು ಅರೋಗದ, ಅಕ್ಷಯವಾದ ದೇಹಗಳಿಂದ ಉತ್ತೀರ್ಣರಾಗುವುದನ್ನು ಕಾಣುತ್ತೇನೆಂದು ನಾನು ಬಯಸುತ್ತೇನೆ.

05154026a ಸಮೇತಂ ಪಾರ್ಥಿವಂ ಕ್ಷತ್ರಂ ಕಾಲಪಕ್ವಮಸಂಶಯಂ|

05154026c ವಿಮರ್ದಃ ಸುಮಹಾನ್ಭಾವೀ ಮಾಂಸಶೋಣಿತಕರ್ದಮಃ||

ಸೇರಿರುವ ಪಾರ್ಥಿವ ಕ್ಷತ್ರಿಯರೆಲ್ಲರ ಕಾಲವು ಪಕ್ವವಾದುದು ನಿಶ್ಚಯ. ಮಾಂಸ-ರಕ್ತಗಳ ಮಹಾ ಕೆಸರು ಆಗಲಿಕ್ಕಿದೆ.

05154027a ಉಕ್ತೋ ಮಯಾ ವಾಸುದೇವಃ ಪುನಃ ಪುನರುಪಹ್ವರೇ|

05154027c ಸಂಬಂಧಿಷು ಸಮಾಂ ವೃತ್ತಿಂ ವರ್ತಸ್ವ ಮಧುಸೂದನ||

ನಾನು ವಾಸುದೇವನಿಗೆ “ಮಧುಸೂದನ! ಸಂಬಂಧಿಗಳಲ್ಲಿ ಸಮವೃತ್ತಿಯನ್ನಿಟ್ಟುಕೊಂಡು ವರ್ತಿಸು” ಎಂದು ಏಕಾಂತದಲ್ಲಿ ಪುನಃ ಪುನಃ ಹೇಳಿದ್ದೇನೆ.

05154028a ಪಾಂಡವಾ ಹಿ ಯಥಾಸ್ಮಾಕಂ ತಥಾ ದುರ್ಯೋಧನೋ ನೃಪಃ|

05154028c ತಸ್ಯಾಪಿ ಕ್ರಿಯತಾಂ ಯುಕ್ತ್ಯಾ ಸಪರ್ಯೇತಿ ಪುನಃ ಪುನಃ||

ಪಾಂಡವರು ನಮಗೆ ಹೇಗೋ ಹಾಗೆ ನೃಪ ದುರ್ಯೋಧನನೂ ಕೂಡ. ಅವನಿಗೂ ಬೇಕಾದುದನ್ನು ಮಾಡಬೇಕು. ಅವನು ಪುನಃ ಪುನಃ ಕೇಳುತ್ತಿರುತ್ತಾನೆ.

05154029a ತಚ್ಚ ಮೇ ನಾಕರೋದ್ವಾಕ್ಯಂ ತ್ವದರ್ಥೇ ಮಧುಸೂದನಃ|

05154029c ನಿವಿಷ್ಟಃ ಸರ್ವಭಾವೇನ ಧನಂಜಯಮವೇಕ್ಷ್ಯ ಚ||

ಆದರೆ ನಿನಗೋಸ್ಕರವಾಗಿ ಮಧುಸೂದನನು ನನ್ನ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಧನಂಜಯನನ್ನು ನೋಡಿ ಸರ್ವಭಾವದಿಂದ ನಿನಗೆ ನಿಷ್ಠನಾಗಿದ್ದಾನೆ.

05154030a ಧ್ರುವೋ ಜಯಃ ಪಾಂಡವಾನಾಮಿತಿ ಮೇ ನಿಶ್ಚಿತಾ ಮತಿಃ|

05154030c ತಥಾ ಹ್ಯಭಿನಿವೇಶೋಽಯಂ ವಾಸುದೇವಸ್ಯ ಭಾರತ||

ನಾನು ಏನೇ ಯೋಚಿಸಿದರೂ ಪಾಂಡವರ ಜಯವೇ ಖಂಡಿತ ಎಂದು ನಿಶ್ಚಯಿಸಿಯಾಗಿದೆ. ಭಾರತ! ಏಕೆಂದರೆ ಇದೂ ಕೂಡ ವಾಸುದೇವನು ಬಯಸುವುದೇ.

05154031a ನ ಚಾಹಮುತ್ಸಹೇ ಕೃಷ್ಣಮೃತೇ ಲೋಕಮುದೀಕ್ಷಿತುಂ|

05154031c ತತೋಽಹಮನುವರ್ತಾಮಿ ಕೇಶವಸ್ಯ ಚಿಕೀರ್ಷಿತಂ||

ಕೃಷ್ಣನಿಲ್ಲದೇ ನನಗೆ ಲೋಕವನ್ನು ನೋಡುವ ಉತ್ಸಾಹವಿಲ್ಲ. ಆದುದರಿಂದ ಕೇಶವನು ಬಯಸಿದುದನ್ನು ಅನುಸರಿಸುತ್ತೇನೆ.

05154032a ಉಭೌ ಶಿಷ್ಯೌ ಹಿ ಮೇ ವೀರೌ ಗದಾಯುದ್ಧವಿಶಾರದೌ|

05154032c ತುಲ್ಯಸ್ನೇಹೋಽಸ್ಮ್ಯತೋ ಭೀಮೇ ತಥಾ ದುರ್ಯೋಧನೇ ನೃಪೇ||

ಭೀಮ ಮತ್ತು ನೃಪ ದುರ್ಯೋಧನರಿಬ್ಬರೂ ವೀರರು, ನನ್ನ ಶಿಷ್ಯರು, ಗದಾಯುದ್ಧ ವಿಶಾರದರು. ಅವರಿಬ್ಬರ ಮೇಲಿನ ಸ್ನೇಹವು ಸಮನಾದುದು.

05154033a ತಸ್ಮಾದ್ಯಾಸ್ಯಾಮಿ ತೀರ್ಥಾನಿ ಸರಸ್ವತ್ಯಾ ನಿಷೇವಿತುಂ|

05154033c ನ ಹಿ ಶಕ್ಷ್ಯಾಮಿ ಕೌರವ್ಯಾನ್ನಶ್ಯಮಾನಾನುಪೇಕ್ಷಿತುಂ||

ಆದುದರಿಂದ ನಾನು ಸರಸ್ವತಿಯ ತೀರ್ಥಗಳಲ್ಲಿ ನೆಲೆಸುತ್ತೇನೆ. ಕೌರವರ ನಾಶವನ್ನು, ಒಳಗೊಳ್ಳದೇ, ನೋಡಲಾರೆ.”

05154034a ಏವಮುಕ್ತ್ವಾ ಮಹಾಬಾಹುರನುಜ್ಞಾತಶ್ಚ ಪಾಂಡವೈಃ|

05154034c ತೀರ್ಥಯಾತ್ರಾಂ ಯಯೌ ರಾಮೋ ನಿವರ್ತ್ಯ ಮಧುಸೂದನಂ||

ಹೀಗೆ ಹೇಳಿ ಮಹಾಬಾಹು ರಾಮನು ಪಾಂಡವರಿಂದ ಬೀಳ್ಕೊಂಡು, ಮಧುಸೂದನನು ತಡೆದರೂ ತೀರ್ಥಯಾತ್ರೆಗೆ ಹೋದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಣಿ ಬಲರಾಮತೀರ್ಥಯಾತ್ರಾಗಮನೇ ಚತುಃಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವದಲ್ಲಿ ಬಲರಾಮತೀರ್ಥಯಾತ್ರಾಗಮನದಲ್ಲಿ ನೂರಾಐವತ್ನಾಲ್ಕನೆಯ ಅಧ್ಯಾಯವು.

Image result for flowers against white background"

Comments are closed.