Udyoga Parva: Chapter 151

ಉದ್ಯೋಗ ಪರ್ವ: ಸೈನ್ಯನಿರ್ಯಾಣ ಪರ್ವ

೧೫೧

ಯುಧಿಷ್ಠಿರನ ಅನುಮಾನ

ತಮಗೆ ಕ್ಷಮವಾದ ಮಾರ್ಗವನ್ನು ಸೂಚಿಸೆಂದು ಪುನಃ ಯುಧಿಷ್ಠಿರನು ಕೇಳಲು ಕೃಷ್ಣನು ಯುದ್ಧವಲ್ಲದೇ ಬೇರೆ ಮಾರ್ಗವಿಲ್ಲವೆನ್ನುವುದು (೧-೧೫). ಆಗ ಯುಧಿಷ್ಠಿರನು “ಯಾವ ಆಪತ್ತನ್ನು ತಡೆಯುವುದಕ್ಕಾಗಿ ನಾನು ವನವಾಸದ ದುಃಖವನ್ನು ಅನುಭವಿಸಿದೆನೋ ಅದು, ಪ್ರಯತ್ನವು ಪರಮ ಅನರ್ಥವೋ ಎನ್ನುವಂತೆ  ನಮ್ಮನ್ನು ಬಿಡುತ್ತಿಲ್ಲ”ವೆಂದೂ “ಗುರುಗಳನ್ನೂ ವೃದ್ಧರನ್ನೂ ಕೊಂದು ಹೇಗೆ ನಮಗೆ ವಿಜಯವುಂಟಾಗುತ್ತದೆ?” ಎಂದು ಕೇಳಲು ಅರ್ಜುನನು ವಿದುರ ಮತ್ತು ಕುಂತಿಯರು ತಾವು ಯುದ್ಧಮಾಡಬೇಕೆಂದು ಹೇಳಿ ಕಳುಹಿಸಲಿಲ್ಲವೇ ಎಂದು ಹೇಳುವುದು, ಅದನ್ನು ಕೃಷ್ಣನು ಅನುಮೋದಿಸುವುದು (೧೬-೨೭).

05151001 ವೈಶಂಪಾಯನ ಉವಾಚ|

05151001a ವಾಸುದೇವಸ್ಯ ತದ್ವಾಕ್ಯಮನುಸ್ಮೃತ್ಯ ಯುಧಿಷ್ಠಿರಃ|

05151001c ಪುನಃ ಪಪ್ರಚ್ಚ ವಾರ್ಷ್ಣೇಯಂ ಕಥಂ ಮಂದೋಽಬ್ರವೀದಿದಂ||

ವೈಶಂಪಾಯನನು ಹೇಳಿದನು: “ವಾಸುದೇವನ ಆ ಮಾತುಗಳನ್ನು ನೆನಪಿಸಿಕೊಂಡು ಯುಧಿಷ್ಠಿರನು ಪುನಃ ವಾರ್ಷ್ಣೇಯನನ್ನು ಪ್ರಶ್ನಿಸಿದನು: “ಆ ಮಂದನು ಹೇಗೆ ಮಾತನಾಡಿದನು?

05151002a ಅಸ್ಮಿನ್ನಭ್ಯಾಗತೇ ಕಾಲೇ ಕಿಂ ಚ ನಃ ಕ್ಷಮಮಚ್ಯುತ|

05151002c ಕಥಂ ಚ ವರ್ತಮಾನಾ ವೈ ಸ್ವಧರ್ಮಾನ್ನ ಚ್ಯವೇಮಹಿ||

ಅಚ್ಯುತ! ಈಗ ಕಾಲವು ನಮ್ಮ ಬಳಿ ಬಂದಿರುವಾಗ ನಮಗೆ ಒಳ್ಳೆಯದಾದುದು ಏನು? ಸ್ವಧರ್ಮವನ್ನು ತೊರೆಯದೇ ನಾವು ಹೇಗೆ ನಡೆದುಕೊಳ್ಳಬಹುದು?

05151003a ದುರ್ಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ|

05151003c ವಾಸುದೇವ ಮತಜ್ಞೋಽಸಿ ಮಮ ಸಭ್ರಾತೃಕಸ್ಯ ಚ||

ವಾಸುದೇವ! ದುರ್ಯೋಧನ, ಕರ್ಣ, ಶಕುನಿ ಸೌಬಲ, ನನ್ನ ಮತ್ತು ನನ್ನ ಸಹೋದರರ ಮತವನ್ನು ನೀನು ತಿಳಿದಿದ್ದೀಯೆ.

05151004a ವಿದುರಸ್ಯಾಪಿ ತೇ ವಾಕ್ಯಂ ಶ್ರುತಂ ಭೀಷ್ಮಸ್ಯ ಚೋಭಯೋಃ|

05151004c ಕುಂತ್ಯಾಶ್ಚ ವಿಪುಲಪ್ರಜ್ಞಾ ಪ್ರಜ್ಞಾ ಕಾರ್ತ್ಸ್ನ್ಯೆನ ತೇ ಶ್ರುತಾ||

ವಿಪುಲಪ್ರಜ್ಞಾ! ವಿದುರ ಮತ್ತು ಭೀಷ್ಮ ಇಬ್ಬರ ಮಾತುಗಳನ್ನೂ ನೀನು ಕೇಳಿದ್ದೀಯೆ. ಕುಂತಿಯ ಪ್ರಾಜ್ಞ ಮಾತುಗಳನ್ನು ಸಂಪೂರ್ಣವಾಗಿ ನೀನು ಕೇಳಿದ್ದೀಯೆ.

05151005a ಸರ್ವಮೇತದತಿಕ್ರಮ್ಯ ವಿಚಾರ್ಯ ಚ ಪುನಃ ಪುನಃ|

05151005c ಯನ್ನಃ ಕ್ಷಮಂ ಮಹಾಬಾಹೋ ತದ್ಬ್ರವೀಹ್ಯವಿಚಾರಯನ್||

ಮಹಾಬಾಹೋ! ಅವೆಲ್ಲವನ್ನೂ ಬದಿಗಿಟ್ಟು, ಪುನಃ ಪುನಃ ವಿಚಾರಿಸಿ, ಏನೂ ಯೋಚಿಸದೇ ನಮಗೆ ಕ್ಷಮವಾದುದನ್ನು ಹೇಳು.”

05151006a ಶ್ರುತ್ವೈತದ್ಧರ್ಮರಾಜಸ್ಯ ಧರ್ಮಾರ್ಥಸಹಿತಂ ವಚಃ|

05151006c ಮೇಘದುಂದುಭಿನಿರ್ಘೋಷಃ ಕೃಷ್ಣೋ ವಚನಮಬ್ರವೀತ್||

ಧರ್ಮರಾಜನ ಈ ಧರ್ಮಾರ್ಥಸಹಿತ ಮಾತನ್ನು ಕೇಳಿ ಕೃಷ್ಣನು ಮೇಘದುಂದುಭಿಯ ಧ್ವನಿಯಲ್ಲಿ ಈ ಮಾತನ್ನಾಡಿದನು:

05151007a ಉಕ್ತವಾನಸ್ಮಿ ಯದ್ವಾಕ್ಯಂ ಧರ್ಮಾರ್ಥಸಹಿತಂ ಹಿತಂ|

05151007c ನ ತು ತನ್ನಿಕೃತಿಪ್ರಜ್ಞೇ ಕೌರವ್ಯೇ ಪ್ರತಿತಿಷ್ಠತಿ||

“ನಾನು ಯಾವ ಧರ್ಮಾರ್ಥಸಂಹಿತ ಹಿತಮಾತುಗಳನ್ನಾಡಿದೆನೋ ಅದು ನಿಕೃತಿಪ್ರಜ್ಞ ಕೌರವ್ಯನಿಗೆ ತಾಗಲಿಲ್ಲ.

05151008a ನ ಚ ಭೀಷ್ಮಸ್ಯ ದುರ್ಮೇಧಾಃ ಶೃಣೋತಿ ವಿದುರಸ್ಯ ವಾ|

05151008c ಮಮ ವಾ ಭಾಷಿತಂ ಕಿಂ ಚಿತ್ಸರ್ವಮೇವಾತಿವರ್ತತೇ||

ಆ ದುರ್ಬುದ್ಧಿಯು ಭೀಷ್ಮನದಾಗಲೀ, ವಿದುರನದ್ದಾಗಲೀ, ನಾನು ಹೇಳಿದುದನ್ನಾಗಲೀ ಕೇಳಲಿಲ್ಲ. ಎಲ್ಲವನ್ನೂ ನಿರ್ಲಕ್ಷಿಸಿದನು.

05151009a ನ ಸ ಕಾಮಯತೇ ಧರ್ಮಂ ನ ಸ ಕಾಮಯತೇ ಯಶಃ|

05151009c ಜಿತಂ ಸ ಮನ್ಯತೇ ಸರ್ವಂ ದುರಾತ್ಮಾ ಕರ್ಣಮಾಶ್ರಿತಃ||

ಅವನು ಧರ್ಮವನ್ನು ಬಯಸುತ್ತಿಲ್ಲ. ಯಶಸ್ಸನ್ನು ಬಯಸುತ್ತಿಲ್ಲ. ದುರಾತ್ಮ ಕರ್ಣನನ್ನು ಆಶ್ರಯಿಸಿ ಎಲ್ಲವನ್ನೂ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದಾನೆ.

05151010a ಬಂಧಮಾಜ್ಞಾಪಯಾಮಾಸ ಮಮ ಚಾಪಿ ಸುಯೋಧನಃ|

05151010c ನ ಚ ತಂ ಲಬ್ಧವಾನ್ಕಾಮಂ ದುರಾತ್ಮಾ ಶಾಸನಾತಿಗಃ||

ಸುಯೋಧನನು ನನ್ನನ್ನು ಬಂಧಿಸಲೂ ಕೂಡ ಆಜ್ಞಾಪಿಸಿದನು. ಆದರೆ ಆ ದುರಾತ್ಮ ಶಾಸನಾತಿಗನ ಬಯಕೆಯು ಪೂರ್ತಿಯಾಗಲಿಲ್ಲ.

05151011a ನ ಚ ಭೀಷ್ಮೋ ನ ಚ ದ್ರೋಣೋ ಯುಕ್ತಂ ತತ್ರಾಹತುರ್ವಚಃ|

05151011c ಸರ್ವೇ ತಮನುವರ್ತಂತೇ ಋತೇ ವಿದುರಮಚ್ಯುತ||

ಅಚ್ಯುತ ವಿದುರನನ್ನು ಬಿಟ್ಟು ಭೀಷ್ಮನಾಗಲೀ ದ್ರೋಣನಾಗಲೀ ಅಲ್ಲಿ ಯುಕ್ತವಾದುದನ್ನು ಮಾತನಾಡಲಿಲ್ಲ. ಅವರೆಲ್ಲರೂ ಅವನನ್ನು ಅನುಸರಿಸುತ್ತಾರೆ.

05151012a ಶಕುನಿಃ ಸೌಬಲಶ್ಚೈವ ಕರ್ಣದುಃಶಾಸನಾವಪಿ|

05151012c ತ್ವಯ್ಯಯುಕ್ತಾನ್ಯಭಾಷಂತ ಮೂಢಾ ಮೂಢಮಮರ್ಷಣಂ||

ಶಕುನಿ ಸೌಬಲ, ಕರ್ಣ-ದುಃಶಾಸನರೂ ಕೂಡ ಮಾಢರಂತೆ ಮೂಢ ಕೋಪಿಷ್ಟನಿಗೆ ನಿನ್ನ ಕುರಿತು ಅಯುಕ್ತ ಮಾತುಗಳನ್ನಾಡಿದರು.

05151013a ಕಿಂ ಚ ತೇನ ಮಯೋಕ್ತೇನ ಯಾನ್ಯಭಾಷಂತ ಕೌರವಾಃ|

05151013c ಸಂಕ್ಷೇಪೇಣ ದುರಾತ್ಮಾಸೌ ನ ಯುಕ್ತಂ ತ್ವಯಿ ವರ್ತತೇ||

ಕೌರವರು ಏನು ಹೇಳಿದರೆಂದು ನಾನು ಪುನಃ ಹೇಳುವುದು ಏಕೆ? ಸಂಕ್ಷೇಪದಲ್ಲಿ ಆ ದುರಾತ್ಮರು ನಿನ್ನೊಡನೆ ಸರಿಯಾಗಿ ವರ್ತಿಸುತ್ತಿಲ್ಲ.

05151014a ನ ಪಾರ್ಥಿವೇಷು ಸರ್ವೇಷು ಯ ಇಮೇ ತವ ಸೈನಿಕಾಃ|

05151014c ಯತ್ಪಾಪಂ ಯನ್ನ ಕಲ್ಯಾಣಂ ಸರ್ವಂ ತಸ್ಮಿನ್ಪ್ರತಿಷ್ಠಿತಂ||

ಅವನಲ್ಲಿ ಇರುವಷ್ಟು ಪಾಪವು ನಿನ್ನ ಸೈನಿಕರು ಮತ್ತು ಪಾರ್ಥಿವರು ಯಾರಲ್ಲಿಯೂ ಇಲ್ಲ. ಅವನಲ್ಲಿ ಅಷ್ಟೊಂದು ಕಲ್ಯಾಣಗುಣಗಳ ಕೊರತೆಯಿದೆ.

05151015a ನ ಚಾಪಿ ವಯಮತ್ಯರ್ಥಂ ಪರಿತ್ಯಾಗೇನ ಕರ್ಹಿ ಚಿತ್|

05151015c ಕೌರವೈಃ ಶಮಮಿಚ್ಚಾಮಸ್ತತ್ರ ಯುದ್ಧಮನಂತರಂ||

ನಾವೂ ಕೂಡ ಎಂದೂ ಪರಿತ್ಯಾಗಮಾಡಿ ಕೌರವರೊಂದಿಗೆ ಶಾಂತಿಯನ್ನು ಬಯಸುತ್ತಿಲ್ಲ. ಯುದ್ಧವಲ್ಲದೇ ಬೇರೆ ಯಾವ ದಾರಿಯೂ ಇಲ್ಲ.

05151016a ತಚ್ಚ್ರುತ್ವಾ ಪಾರ್ಥಿವಾಃ ಸರ್ವೇ ವಾಸುದೇವಸ್ಯ ಭಾಷಿತಂ|

05151016c ಅಬ್ರುವಂತೋ ಮುಖಂ ರಾಜ್ಞಾಃ ಸಮುದೈಕ್ಷಂತ ಭಾರತ||

ಭಾರತ! ವಾಸುದೇವನಾಡಿದುದನ್ನು ಕೇಳಿ ಎಲ್ಲ ಪಾರ್ಥಿವರೂ ಏನನ್ನೂ ಹೇಳದೇ ರಾಜನ ಮುಖವನ್ನು ನೋಡಿದರು.

05151017a ಯುಧಿಷ್ಠಿರಸ್ತ್ವಭಿಪ್ರಾಯಮುಪಲಭ್ಯ ಮಹೀಕ್ಷಿತಾಂ|

05151017c ಯೋಗಮಾಜ್ಞಾಪಯಾಮಾಸ ಭೀಮಾರ್ಜುನಯಮೈಃ ಸಹ||

ಮಹೀಕ್ಷಿತರ ಅಭಿಪ್ರಾಯವನ್ನು ಪಡೆದ ಯುಧಿಷ್ಠಿರನು ಭೀಮಾರ್ಜುನರು ಮತ್ತು ಯಮಳರೊಂದಿಗೆ ಯೋಗವನ್ನು ಆಜ್ಞಾಪಿಸಿದನು.

05151018a ತತಃ ಕಿಲಕಿಲಾಭೂತಮನೀಕಂ ಪಾಂಡವಸ್ಯ ಹ|

05151018c ಆಜ್ಞಾಪಿತೇ ತದಾ ಯೋಗೇ ಸಮಹೃಷ್ಯಂತ ಸೈನಿಕಾಃ||

ಯೋಗವನ್ನು ಆಜ್ಞಾಪಿಸಿದಾಗ ಪಾಂಡವರ ಸೇನೆಯಲ್ಲಿ ಕಿಲಕಿಲಗಳುಂಟಾಯಿತು. ಸೈನಿಕರು ಬಹಳ ಹರ್ಷಿತರಾದರು.

05151019a ಅವಧ್ಯಾನಾಂ ವಧಂ ಪಶ್ಯನ್ಧರ್ಮರಾಜೋ ಯುಧಿಷ್ಠಿರಃ|

05151019c ನಿಷ್ಟನನ್ಭೀಮಸೇನಂ ಚ ವಿಜಯಂ ಚೇದಮಬ್ರವೀತ್||

ಅವಧ್ಯರ ವಧೆಯನ್ನು ಕಂಡ ಧರ್ಮರಾಜ ಯುಧಿಷ್ಠಿರನು ಆಳವಾದ ನಿಟ್ಟಿಸುರು ಬಿಡುತ್ತಾ ಭೀಮಸೇನ-ವಿಜಯರಿಗೆ ಇದನ್ನು ಹೇಳಿದನು:

05151020a ಯದರ್ಥಂ ವನವಾಸಶ್ಚ ಪ್ರಾಪ್ತಂ ದುಃಖಂ ಚ ಯನ್ಮಯಾ|

05151020c ಸೋಽಯಮಸ್ಮಾನುಪೈತ್ಯೇವ ಪರೋಽನರ್ಥಃ ಪ್ರಯತ್ನತಃ||

“ಯಾವ ಆಪತ್ತನ್ನು ತಡೆಯುವುದಕ್ಕಾಗಿ ನಾನು ವನವಾಸದ ದುಃಖವನ್ನು ಅನುಭವಿಸಿದೆನೋ ಅದು, ಪ್ರಯತ್ನವು ಪರಮ ಅನರ್ಥವೋ ಎನ್ನುವಂತೆ ನಮ್ಮನ್ನು ಬಿಡುತ್ತಿಲ್ಲ.

05151021a ಯಸ್ಮಿನ್ಯತ್ನಃ ಕೃತೋಽಸ್ಮಾಭಿಃ ಸ ನೋ ಹೀನಃ ಪ್ರಯತ್ನತಃ|

05151021c ಅಕೃತೇ ತು ಪ್ರಯತ್ನೇಽಸ್ಮಾನುಪಾವೃತ್ತಃ ಕಲಿರ್ಮಹಾನ್||

ನಾವು ಏನೆಲ್ಲ ಪ್ರಯತ್ನಗಳನ್ನು ಮಾಡಿದ್ದೇವೋ ಅವು ಹೀನ ಪ್ರಯತ್ನಗಳಾಗಿವೆ. ಪ್ರಯತ್ನದಿಂದ ನಾವು ಈ ಮಹಾ ಕಲಿಯನ್ನು ತಪ್ಪಿಸಲು ಅಸಮರ್ಥರಾಗಿದ್ದೇವೆ.

05151022a ಕಥಂ ಹ್ಯವಧ್ಯೈಃ ಸಂಗ್ರಾಮಃ ಕಾರ್ಯಃ ಸಹ ಭವಿಷ್ಯತಿ|

05151022c ಕಥಂ ಹತ್ವಾ ಗುರೂನ್ವೃದ್ಧಾನ್ವಿಜಯೋ ನೋ ಭವಿಷ್ಯತಿ||

ಏಕೆಂದರೆ ಸಂಗ್ರಾಮದಲ್ಲಿ ಅವಧ್ಯರನ್ನು ವಧಿಸುವ ಕಾರ್ಯವು ಹೇಗೆ ನಡೆಯುತ್ತದೆ? ಗುರುಗಳನ್ನೂ ವೃದ್ಧರನ್ನೂ ಕೊಂದು ಹೇಗೆ ನಮಗೆ ವಿಜಯವುಂಟಾಗುತ್ತದೆ?”

05151023a ತಚ್ಚ್ರುತ್ವಾ ಧರ್ಮರಾಜಸ್ಯ ಸವ್ಯಸಾಚೀ ಪರಂತಪಃ|

05151023c ಯದುಕ್ತಂ ವಾಸುದೇವೇನ ಶ್ರಾವಯಾಮಾಸ ತದ್ವಚಃ||

ಧರ್ಮರಾಜನ ಆ ಮಾತುಗಳನ್ನು ಕೇಳಿ ಪರಂತಪ ಸವ್ಯಸಾಚಿಯು ವಾಸುದೇವನು ಹೇಳಿದುದನ್ನೇ ಅವನಿಗೆ ಹೇಳಿದನು.

05151024a ಉಕ್ತವಾನ್ದೇವಕೀಪುತ್ರಃ ಕುಂತ್ಯಾಶ್ಚ ವಿದುರಸ್ಯ ಚ|

05151024c ವಚನಂ ತತ್ತ್ವಯಾ ರಾಜನ್ನಿಖಿಲೇನಾವಧಾರಿತಂ||

“ರಾಜನ್! ದೇವಕೀಪುತ್ರನು ಹೇಳಿದ, ಕುಂತಿ ಮತ್ತು ವಿದುರರು ಹೇಳಿ ಕಳುಹಿಸಿದ ಮಾತುಗಳನ್ನು ನೀನು ಕೇಳಲಿಲ್ಲವೇ?

05151025a ನ ಚ ತೌ ವಕ್ಷ್ಯತೋಽಧರ್ಮಮಿತಿ ಮೇ ನೈಷ್ಠಿಕೀ ಮತಿಃ|

05151025c ನ ಚಾಪಿ ಯುಕ್ತಂ ಕೌಂತೇಯ ನಿವರ್ತಿತುಮಯುಧ್ಯತಃ||

ಅವರಿಬ್ಬರೂ ಎಂದೂ ಅಧರ್ಮವಾದುದನ್ನು ಹೇಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಕೌಂತೇಯ! ಯುದ್ಧವನ್ನು ಮಾಡದೇ ನಾವು ಹಿಂದಿರುಗುವುದು ಯುಕ್ತವಲ್ಲ.”

05151026a ತಚ್ಚ್ರುತ್ವಾ ವಾಸುದೇವೋಽಪಿ ಸವ್ಯಸಾಚಿವಚಸ್ತದಾ|

05151026c ಸ್ಮಯಮಾನೋಽಬ್ರವೀತ್ಪಾರ್ಥಮೇವಮೇತದಿತಿ ಬ್ರುವನ್||

ಸವ್ಯಸಾಚಿಯನ್ನು ಕೇಳಿ ವಾಸುದೇವನೂ ಕೂಡ ಪಾರ್ಥನಿಗೆ “ಇದು ಸರಿ” ಎಂದು ಹೇಳಿದನು.

05151027a ತತಸ್ತೇ ಧೃತಸಂಕಲ್ಪಾ ಯುದ್ಧಾಯ ಸಹಸೈನಿಕಾಃ|

05151027c ಪಾಂಡವೇಯಾ ಮಹಾರಾಜ ತಾಂ ರಾತ್ರಿಂ ಸುಖಮಾವಸನ್||

ಅನಂತರ ಮಹಾರಾಜ! ಪಾಂಡವರು ಸೈನಿಕರೊಂದಿಗೆ ಯುದ್ಧಕ್ಕೆ ಧೃತಸಂಕಲ್ಪರಾಗಿ ಆ ರಾತ್ರಿಯನ್ನು ಸುಖವಾಗಿ ಕಳೆದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೈನ್ಯನಿರ್ಯಾಣ ಪರ್ವಣಿ ಯುಧಿಷ್ಠಿರಾರ್ಜುನಸಂವಾದೇ ಏಕಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೈನ್ಯನಿರ್ಯಾಣ ಪರ್ವದಲ್ಲಿ ಯುಧಿಷ್ಠಿರಾರ್ಜುನಸಂವಾದದಲ್ಲಿ ನೂರಾಐವತ್ತೊಂದನೆಯ ಅಧ್ಯಾಯವು.

Image result for indian motifs

Comments are closed.