Udyoga Parva: Chapter 139

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೩೯

ತಂದೆ ಅಧಿರಥನ ಮೇಲೆ, ತನ್ನ ಸೂತ ಬಾಂಧವರ ಮೇಲೆ ಮತ್ತು ಮಿತ್ರ ದುರ್ಯೋಧನನ ಮೇಲೆ ತನಗಿರುವ ನಿಷ್ಠೆಯು ಬದಲಾಗುವುದಿಲ್ಲವೆಂದೂ ಒಂದುವೇಳೆ ನನಗೆ ಈ ಸಂಪದ್ಭರಿತ ಮಹಾರಾಜ್ಯವನ್ನು ಒಪ್ಪಿಸಿದರೆ ಅದನ್ನು ನಾನು ದುರ್ಯೋಧನನಿಗೇ ಕೊಟ್ಟುಬಿಡುತ್ತೇನೆ ಎಂದೂ ಹೇಳಿ (೧-೨೮) ಕರ್ಣನು ನಡೆಯಲಿರುವ ಯುದ್ಧವನ್ನು ದುರ್ಯೋಧನನು ನಡೆಸುವ ಮಹಾಯಜ್ಞಕ್ಕೆ ಹೋಲಿಸಿ ನುಡಿಯುವುದು (೨೯-೫೭).

05139001 ಕರ್ಣ ಉವಾಚ|

05139001a ಅಸಂಶಯಂ ಸೌಹೃದಾನ್ಮೇ ಪ್ರಣಯಾಚ್ಚಾತ್ಥ ಕೇಶವ|

05139001c ಸಖ್ಯೇನ ಚೈವ ವಾರ್ಷ್ಣೇಯ ಶ್ರೇಯಸ್ಕಾಮತಯೈವ ಚ||

ಕರ್ಣನು ಹೇಳಿದನು: “ಕೇಶವ! ವಾರ್ಷ್ಣೇಯ! ನನ್ನ ಮೇಲಿನ ಸ್ನೇಹದಿಂದ, ಪ್ರೀತಿಯಿಂದ, ಸಖ್ಯದಿಂದ ಮತ್ತು ನನಗೆ ಶ್ರೇಯಸ್ಸಾಗಬೇಕೆಂದು ಇದನ್ನು ಹೇಳುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ.

05139002a ಸರ್ವಂ ಚೈವಾಭಿಜಾನಾಮಿ ಪಾಂಡೋಃ ಪುತ್ರೋಽಸ್ಮಿ ಧರ್ಮತಃ|

05139002c ನಿಗ್ರಹಾದ್ಧರ್ಮಶಾಸ್ತ್ರಾಣಾಂ ಯಥಾ ತ್ವಂ ಕೃಷ್ಣ ಮನ್ಯಸೇ||

ಕೃಷ್ಣ! ನೀನು ಅಭಿಪ್ರಾಯಪಡುವಂತೆ ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಧರ್ಮತಃ ನಾನು ಪಾಂಡುವಿನ ಮಗನೆಂದು ಎಲ್ಲವನ್ನೂ ತಿಳಿದಿದ್ದೇನೆ.

05139003a ಕನ್ಯಾ ಗರ್ಭಂ ಸಮಾಧತ್ತ ಭಾಸ್ಕರಾನ್ಮಾಂ ಜನಾರ್ದನ|

05139003c ಆದಿತ್ಯವಚನಾಚ್ಚೈವ ಜಾತಂ ಮಾಂ ಸಾ ವ್ಯಸರ್ಜಯತ್||

ಜನಾರ್ದನ! ಆದಿತ್ಯನು ಹೇಳಿದ್ದಂತೆ ಕನ್ಯೆಯಾಗಿದ್ದಾಗಲೇ ಭಾಸ್ಕರನಿಂದ ಗರ್ಭವನ್ನು ಪಡೆದು ಹುಟ್ಟಿದಾಗಲೇ ಅವಳು ನನ್ನನ್ನು ವಿಸರ್ಜಿಸಿದ್ದಳು.

05139004a ಸೋಽಸ್ಮಿ ಕೃಷ್ಣ ತಥಾ ಜಾತಃ ಪಾಂಡೋಃ ಪುತ್ರೋಽಸ್ಮಿ ಧರ್ಮತಃ|

05139004c ಕುಂತ್ಯಾ ತ್ವಹಮಪಾಕೀರ್ಣೋ ಯಥಾ ನ ಕುಶಲಂ ತಥಾ||

ಹೌದು ಕೃಷ್ಣ! ಧರ್ಮತಃ ನಾನು ಪಾಂಡುವಿನ ಪುತ್ರನಾಗಿ ಹುಟ್ಟಿದೆನು. ಆದರೆ ಕುಂತಿಯು ಸತ್ತು ಹುಟ್ಟಿದವನಂತೆ ನನ್ನನ್ನು ಬಿಸಾಡಿದಳು.

05139005a ಸೂತೋ ಹಿ ಮಾಮಧಿರಥೋ ದೃಷ್ಟ್ವೈವ ಅನಯದ್ಗೃಹಾನ್|

05139005c ರಾಧಾಯಾಶ್ಚೈವ ಮಾಂ ಪ್ರಾದಾತ್ಸೌಹಾರ್ದಾನ್ಮಧುಸೂದನ||

ಮಧುಸೂದನ! ಸೂತ ಅಧಿರಥನು ನನ್ನನ್ನು ಕಂಡಕೂಡಲೇ ಮನೆಗೆ ಕರೆತಂದು ಪ್ರೀತಿಯಿಂದ ರಾಧೆಗೆ ಕೊಟ್ಟನು.

05139006a ಮತ್ಸ್ನೇಹಾಚ್ಚೈವ ರಾಧಾಯಾಃ ಸದ್ಯಃ ಕ್ಷೀರಮವಾತರತ್|

05139006c ಸಾ ಮೇ ಮೂತ್ರಂ ಪುರೀಷಂ ಚ ಪ್ರತಿಜಗ್ರಾಹ ಮಾಧವ||

ಮಾಧವ! ನನ್ನ ಮೇಲಿನ ಪ್ರೀತಿಯಿಂದ ಕೂಡಲೇ ಅವಳ ಎದೆಯ ಹಾಲು ಸುರಿಯಿತು. ಅವಳೂ ಕೂಡ ನನ್ನ ಮಲ ಮೂತ್ರಗಳನ್ನು ಸಹಿಸಿಕೊಂಡಳು.

05139007a ತಸ್ಯಾಃ ಪಿಂಡವ್ಯಪನಯಂ ಕುರ್ಯಾದಸ್ಮದ್ವಿಧಃ ಕಥಂ|

05139007c ಧರ್ಮವಿದ್ಧರ್ಮಶಾಸ್ತ್ರಾಣಾಂ ಶ್ರವಣೇ ಸತತಂ ರತಃ||

ನನ್ನಂಥವನು - ಧರ್ಮವನ್ನು ತಿಳಿದವನು ಮತ್ತು ಸತತವೂ ಧರ್ಮಶಾಸ್ತ್ರಗಳನ್ನು ಕೇಳುವುದರಲ್ಲಿ ನಿರತನಾದವನು - ಹೇಗೆ ತಾನೇ ಅವಳಿಗೆ ಪಿಂಡವನ್ನು ನಿರಾಕರಿಸಬಲ್ಲ?

05139008a ತಥಾ ಮಾಮಭಿಜಾನಾತಿ ಸೂತಶ್ಚಾಧಿರಥಃ ಸುತಂ|

05139008c ಪಿತರಂ ಚಾಭಿಜಾನಾಮಿ ತಮಹಂ ಸೌಹೃದಾತ್ಸದಾ||

ಸೂತ ಅಧಿರಥನು ನನ್ನನ್ನು ಮಗನೆಂದು ತಿಳಿದುಕೊಂಡಿದ್ದಾನೆ. ನಾನೂ ಕೂಡ ಪ್ರೀತಿಯಿಂದ ಅವನನ್ನು ತಂದೆಯೆಂದೇ ತಿಳಿದುಕೊಂಡಿದ್ದೇನೆ.

05139009a ಸ ಹಿ ಮೇ ಜಾತಕರ್ಮಾದಿ ಕಾರಯಾಮಾಸ ಮಾಧವ|

05139009c ಶಾಸ್ತ್ರದೃಷ್ಟೇನ ವಿಧಿನಾ ಪುತ್ರಪ್ರೀತ್ಯಾ ಜನಾರ್ದನ||

ಮಾಧವ! ಜನಾರ್ದನ! ಅವನೇ ನನಗೆ ಪುತ್ರಪ್ರೀತಿಯಿಂದ ಶಾಸ್ತ್ರದೃಷ್ಟ ವಿಧಿಗಳಿಂದ ಜಾತಕರ್ಮಾದಿಗಳನ್ನು ಮಾಡಿಸಿದನು.

05139010a ನಾಮ ಮೇ ವಸುಷೇಣೇತಿ ಕಾರಯಾಮಾಸ ವೈ ದ್ವಿಜೈಃ|

05139010c ಭಾರ್ಯಾಶ್ಚೋಢಾ ಮಮ ಪ್ರಾಪ್ತೇ ಯೌವನೇ ತೇನ ಕೇಶವ||

ದ್ವಿಜರಿಂದ ನನಗೆ ವಸುಷೇಣನೆಂಬ ಹೆಸರನ್ನಿತ್ತನು. ಕೇಶವ! ನನಗೆ ಯೌವನ ಪ್ರಾಪ್ತಿಯಾದಾಗ ಅವನೇ ನನಗೆ ಭಾರ್ಯೆಯರನ್ನು ತಂದು ಮದುವೆಮಾಡಿಸಿದನು.

05139011a ತಾಸು ಪುತ್ರಾಶ್ಚ ಪೌತ್ರಾಶ್ಚ ಮಮ ಜಾತಾ ಜನಾರ್ದನ|

05139011c ತಾಸು ಮೇ ಹೃದಯಂ ಕೃಷ್ಣ ಸಂಜಾತಂ ಕಾಮಬಂಧನಂ||

ಜನಾರ್ದನ! ಅವರಲ್ಲಿ ನನಗೆ ಮಕ್ಕಳು ಮೊಮ್ಮಕ್ಕಳು ಹುಟ್ಟಿದ್ದಾರೆ. ಅವರ ಮೇಲೆ ನನ್ನ ಹೃದಯದಲ್ಲಿ ಕಾಮಬಂಧನವು ಬೆಳೆದುಕೊಂಡಿದೆ ಕೃಷ್ಣ!

05139012a ನ ಪೃಥಿವ್ಯಾ ಸಕಲಯಾ ನ ಸುವರ್ಣಸ್ಯ ರಾಶಿಭಿಃ|

05139012c ಹರ್ಷಾದ್ಭಯಾದ್ವಾ ಗೋವಿಂದ ಅನೃತಂ ವಕ್ತುಮುತ್ಸಹೇ||

ಗೋವಿಂದ! ಸಕಲ ಭೂಮಿಯಾಗಲೀ, ಸುವರ್ಣದ ರಾಶಿಗಳಾಗಲೀ, ಹರ್ಷಗಳಾಗಲೀ, ಭಯಗಳಾಗಲೀ ನನ್ನನ್ನು ಮಾತಿಗೆ ಸುಳ್ಳಾಗಿ ನಡೆದುಕೊಳ್ಳುವಂತೆ ಮಾಡಲಾರವು!

05139013a ಧೃತರಾಷ್ಟ್ರಕುಲೇ ಕೃಷ್ಣ ದುರ್ಯೋಧನಸಮಾಶ್ರಯಾತ್|

05139013c ಮಯಾ ತ್ರಯೋದಶ ಸಮಾ ಭುಕ್ತಂ ರಾಜ್ಯಮಕಂಟಕಂ||

ಕೃಷ್ಣ! ಧೃತರಾಷ್ಟ್ರ ಕುಲದಲ್ಲಿ, ದುರ್ಯೋಧನನ ಆಶ್ರಯದಲ್ಲಿ, ಹದಿಮೂರು ವರ್ಷಗಳು ಈ ರಾಜ್ಯವನ್ನು ಅಡೆತಡೆಯಿಲ್ಲದೇ ಭೋಗಿಸಿದ್ದೇನೆ.

05139014a ಇಷ್ಟಂ ಚ ಬಹುಭಿರ್ಯಜ್ಞೈಃ ಸಹ ಸೂತೈರ್ಮಯಾಸಕೃತ್|

05139014c ಆವಾಹಾಶ್ಚ ವಿವಾಹಾಶ್ಚ ಸಹ ಸೂತೈಃ ಕೃತಾ ಮಯಾ||

ಸೂತರೊಂದಿಗೆ ಬಹಳಷ್ಟು ಇಷ್ಟಿ-ಯಜ್ಞಗಳನ್ನು ನಾನು ಮಾಡಿದ್ದೇನೆ. ಕುಟುಂಬದ ಆವಾಹ-ವಿವಾಹಗಳನ್ನೂ ಕೂಡ ನಾನು ಸೂತರೊಂದಿಗೇ ಮಾಡಿದ್ದೇನೆ.

05139015a ಮಾಂ ಚ ಕೃಷ್ಣ ಸಮಾಶ್ರಿತ್ಯ ಕೃತಃ ಶಸ್ತ್ರಸಮುದ್ಯಮಃ|

05139015c ದುರ್ಯೋಧನೇನ ವಾರ್ಷ್ಣೇಯ ವಿಗ್ರಹಶ್ಚಾಪಿ ಪಾಂಡವೈಃ||

ಕೃಷ್ಣ! ವಾರ್ಷ್ಣೇಯ! ನನ್ನನ್ನೇ ಅವಲಂಬಿಸಿ ಶಸ್ತ್ರಗಳನ್ನು ಮೇಲೆತ್ತಿ ದುರ್ಯೋಧನನು ಪಾಂಡವರೊಂದಿಗೆ ಹೋರಾಟ ಮಾಡುತ್ತಿದ್ದಾನೆ.

05139016a ತಸ್ಮಾದ್ರಣೇ ದ್ವೈರಥೇ ಮಾಂ ಪ್ರತ್ಯುದ್ಯಾತಾರಮಚ್ಯುತ|

05139016c ವೃತವಾನ್ಪರಮಂ ಹೃಷ್ಟಃ ಪ್ರತೀಪಂ ಸವ್ಯಸಾಚಿನಃ||

ಅಚ್ಯುತ! ಆದುದರಿಂದಲೇ ರಣದಲ್ಲಿ ರಥಗಳ ದ್ವಂದ್ವಯುದ್ದದಲ್ಲಿ ಸವ್ಯಸಾಚಿಯ ವಿರುದ್ಧವಾಗಿ ನನ್ನನ್ನು ವಿಶ್ವಾಸದಿಂದ ಆರಿಸಿಕೊಂಡು, ಪರಮ ಹರ್ಷಿತನಾಗಿದ್ದಾನೆ.

05139017a ವಧಾದ್ಬಂಧಾದ್ಭಯಾದ್ವಾಪಿ ಲೋಭಾದ್ವಾಪಿ ಜನಾರ್ದನ|

05139017c ಅನೃತಂ ನೋತ್ಸಹೇ ಕರ್ತುಂ ಧಾರ್ತರಾಷ್ಟ್ರಸ್ಯ ಧೀಮತಃ||

ಜನಾರ್ದನ! ಸಾವಾಗಲೀ, ಸೆರೆಯಾಗಲೀ, ಭಯವಾಗಲೀ, ಲೋಭವಾಗಲೀ ಧೀಮತ ಧಾರ್ತರಾಷ್ಟ್ರನಿಗೆ ನಾನು ಕೊಟ್ಟ ಮಾತನ್ನು ಮುರಿಯುವಂತೆ ಮಾಡಲಾರವು.

05139018a ಯದಿ ಹ್ಯದ್ಯ ನ ಗಚ್ಚೇಯಂ ದ್ವೈರಥಂ ಸವ್ಯಸಾಚಿನಾ|

05139018c ಅಕೀರ್ತಿಃ ಸ್ಯಾದ್ಧೃಷೀಕೇಶ ಮಮ ಪಾರ್ಥಸ್ಯ ಚೋಭಯೋಃ||

ಕೇಶವ! ಇಂದು ನಾವು ರಥಗಳ ದ್ವಂದ್ವಯುದ್ಧವನ್ನು ಮಾಡದೇ ಇದ್ದರೆ ನನಗೆ ಮತ್ತು ಪಾರ್ಥ ಇಬ್ಬರಿಗೂ ಅಕೀರ್ತಿಯು ಲಭಿಸುತ್ತದೆ.

05139019a ಅಸಂಶಯಂ ಹಿತಾರ್ಥಾಯ ಬ್ರೂಯಾಸ್ತ್ವಂ ಮಧುಸೂದನ|

05139019c ಸರ್ವಂ ಚ ಪಾಂಡವಾಃ ಕುರ್ಯುಸ್ತ್ವದ್ವಶಿತ್ವಾನ್ನ ಸಂಶಯಃ||

ಮಧುಸೂದನ! ನೀನು ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೀಯೆ ಮತ್ತು ನಿನ್ನ ಮಾರ್ಗದರ್ಶನದಿಂದ ಪಾಂಡವರು ಎಲ್ಲವನ್ನೂ ಸಾಧಿಸುವರು ಎನ್ನುವುದರಲ್ಲಿ ಸಂಶಯವೇ ಇಲ್ಲ.

05139020a ಮಂತ್ರಸ್ಯ ನಿಯಮಂ ಕುರ್ಯಾಸ್ತ್ವಮತ್ರ ಪುರುಷೋತ್ತಮ|

05139020c ಏತದತ್ರ ಹಿತಂ ಮನ್ಯೇ ಸರ್ವಯಾದವನಂದನ||

ಪುರುಷೋತ್ತಮ! ಸರ್ವಯಾದವನಂದನ! ನಾವು ಇಲ್ಲಿ ಮಾತನಾಡಿದುದನ್ನು ಇಲ್ಲಿಯೇ ಇರಿಸಬೇಕು. ಅದರಲ್ಲಿಯೇ ಹಿತವಿದೆ ಎಂದು ನನಗನ್ನಿಸುತ್ತದೆ.

05139021a ಯದಿ ಜಾನಾತಿ ಮಾಂ ರಾಜಾ ಧರ್ಮಾತ್ಮಾ ಸಂಶಿತವ್ರತಃ|

05139021c ಕುಂತ್ಯಾಃ ಪ್ರಥಮಜಂ ಪುತ್ರಂ ನ ಸ ರಾಜ್ಯಂ ಗ್ರಹೀಷ್ಯತಿ||

ನಾನು ಕುಂತಿಯ ಮೊದಲು ಹುಟ್ಟಿದ ಮಗನೆಂದು ಆ ರಾಜಾ ಧರ್ಮಾತ್ಮ ಸಂಶಿತವ್ರತನಿಗೆ ಗೊತ್ತಾದರೆ ಅವನು ರಾಜ್ಯವನ್ನು ಸ್ವೀಕರಿಸುವುದಿಲ್ಲ.

05139022a ಪ್ರಾಪ್ಯ ಚಾಪಿ ಮಹದ್ರಾಜ್ಯಂ ತದಹಂ ಮಧುಸೂದನ|

05139022c ಸ್ಫೀತಂ ದುರ್ಯೋಧನಾಯೈವ ಸಂಪ್ರದದ್ಯಾಮರಿಂದಮ||

ಮಧುಸೂದನ! ಅರಿಂದಮ! ಒಂದುವೇಳೆ ನನಗೆ ಈ ಸಂಪದ್ಭರಿತ ಮಹಾರಾಜ್ಯವನ್ನು ಒಪ್ಪಿಸಿದರೆ ಅದನ್ನು ನಾನು ದುರ್ಯೋಧನನಿಗೇ ಕೊಟ್ಟುಬಿಡುತ್ತೇನೆ.

05139023a ಸ ಏವ ರಾಜಾ ಧರ್ಮಾತ್ಮಾ ಶಾಶ್ವತೋಽಸ್ತು ಯುಧಿಷ್ಠಿರಃ|

05139023c ನೇತಾ ಯಸ್ಯ ಹೃಷೀಕೇಶೋ ಯೋದ್ಧಾ ಯಸ್ಯ ಧನಂಜಯಃ||

ಹೃಷೀಕೇಶನನ್ನು ಮಾರ್ಗದರ್ಶಕನನ್ನಾಗಿ ಮತ್ತು ಧನಂಜಯನನ್ನು ಸೇನಾಪತಿಯಾಗಿ ಪಡೆದಿರುವ ಧರ್ಮಾತ್ಮ ಯುಧಿಷ್ಠಿರನೇ ಶಾಶ್ವತವಾಗಿ ರಾಜನಾಗಲಿ.

05139024a ಪೃಥಿವೀ ತಸ್ಯ ರಾಷ್ಟ್ರಂ ಚ ಯಸ್ಯ ಭೀಮೋ ಮಹಾರಥಃ|

05139024c ನಕುಲಃ ಸಹದೇವಶ್ಚ ದ್ರೌಪದೇಯಾಶ್ಚ ಮಾಧವ||

05139025a ಉತ್ತಮೌಜಾ ಯುಧಾಮನ್ಯುಃ ಸತ್ಯಧರ್ಮಾ ಚ ಸೋಮಕಿಃ|

05139025c ಚೈದ್ಯಶ್ಚ ಚೇಕಿತಾನಶ್ಚ ಶಿಖಂಡೀ ಚಾಪರಾಜಿತಃ||

05139026a ಇಂದ್ರಗೋಪಕವರ್ಣಾಶ್ಚ ಕೇಕಯಾ ಭ್ರಾತರಸ್ತಥಾ|

05139026c ಇಂದ್ರಾಯುಧಸವರ್ಣಶ್ಚ ಕುಂತಿಭೋಜೋ ಮಹಾರಥಃ||

05139027a ಮಾತುಲೋ ಭೀಮಸೇನಸ್ಯ ಸೇನಜಿಚ್ಚ ಮಹಾರಥಃ|

05139027c ಶಂಖಃ ಪುತ್ರೋ ವಿರಾಟಸ್ಯ ನಿಧಿಸ್ತ್ವಂ ಚ ಜನಾರ್ದನ||

ಮಾಧವ! ಯಾರೊಡನೆ ಮಹಾರಥಿ ಭೀಮ, ನಕುಲ-ಸಹದೇವರು, ದ್ರೌಪದೇಯರು, ಉತ್ತಮೌಜ, ಯುಧಾಮನ್ಯು, ಸತ್ಯಧರ್ಮ ಸೋಮಕಿ, ಚೈದ್ಯ, ಚೇಕಿತಾನ, ಅಪರಾಜಿತ ಶಿಖಂಡೀ, ಇಂದ್ರಗೋಪಕ, ವರ್ಣ, ಕೇಕಯ ಸಹೋದರರು, ಇಂದ್ರಾಯುಧ, ಸವರ್ಣ, ಮಹಾರಥಿ ಕುಂತಿಭೋಜ, ಭೀಮಸೇನನ ಮಾವ ಮಹಾರಥಿ ಸೇನಜಿತ್, ವಿರಾಟನ ಪುತ್ರ ಶಂಖ ಮತ್ತು ನಿಧಿಗಾಗಿ ಜನಾರ್ದನ ನೀನಿರುವೆಯೋ ಅವನದ್ದೇ ರಾಷ್ಟ್ರವು ಈ ಭೂಮಿಯಾಗುವುದು.

05139028a ಮಹಾನಯಂ ಕೃಷ್ಣ ಕೃತಃ ಕ್ಷತ್ರಸ್ಯ ಸಮುದಾನಯಃ|

05139028c ರಾಜ್ಯಂ ಪ್ರಾಪ್ತಮಿದಂ ದೀಪ್ತಂ ಪ್ರಥಿತಂ ಸರ್ವರಾಜಸು||

ಕೃಷ್ಣ! ಇಲ್ಲಿ ಸೇರಿರುವ ಮಹಾಸಂಖ್ಯೆಯ ಕ್ಷತ್ರಿಯರು ಒಂದು ಸಾಧನೆಯೇ! ಎಲ್ಲ ರಾಜರಲ್ಲಿಯೇ ಪ್ರಥಿತವಾಗಿರುವ ಬೆಳಗುತ್ತಿರುವ ಈ ರಾಜ್ಯವು ದೊರಕಿದಂತೆಯೇ!

05139029a ಧಾರ್ತರಾಷ್ಟ್ರಸ್ಯ ವಾರ್ಷ್ಣೇಯ ಶಸ್ತ್ರಯಜ್ಞೋ ಭವಿಷ್ಯತಿ|

05139029c ಅಸ್ಯ ಯಜ್ಞಾಸ್ಯ ವೇತ್ತಾ ತ್ವಂ ಭವಿಷ್ಯಸಿ ಜನಾರ್ದನ|

05139029e ಆಧ್ವರ್ಯವಂ ಚ ತೇ ಕೃಷ್ಣ ಕ್ರತಾವಸ್ಮಿನ್ ಭವಿಷ್ಯತಿ||

ವಾರ್ಷ್ಣೇಯ! ಧಾರ್ತರಾಷ್ಟ್ರನು ನಡೆಸುವ ಒಂದು ಶಸ್ತ್ರಯಜ್ಞವು ನಡೆಯಲಿಕ್ಕಿದೆ. ಜನಾರ್ದನ! ಈ ಯಜ್ಞದ ವೇತ್ತನು ನೀನಾಗುವೆ. ಕೃಷ್ಣ! ಈ ಕ್ರತುವಿನ ಅಧ್ವರ್ಯನೂ ನೀನಾಗುವೆ.

05139030a ಹೋತಾ ಚೈವಾತ್ರ ಬೀಭತ್ಸುಃ ಸನ್ನದ್ಧಃ ಸ ಕಪಿಧ್ವಜಃ|

05139030c ಗಾಂಡೀವಂ ಸ್ರುಕ್ತಥಾಜ್ಯಂ ಚ ವೀರ್ಯಂ ಪುಂಸಾಂ ಭವಿಷ್ಯತಿ||

ಅದರ ಹೋತನು ಸನ್ನದ್ಧನಾಗಿರುವ ಕಪಿಧ್ವಜ ಬೀಭತ್ಸುವು. ಗಾಂಡೀವವು ಸ್ರುಕ್ ಮತ್ತು ಪುರುಷರ ವೀರ್ಯವು ಆಜ್ಯವಾಗುತ್ತದೆ.

05139031a ಐಂದ್ರಂ ಪಾಶುಪತಂ ಬ್ರಾಹ್ಮಂ ಸ್ಥೂಣಾಕರ್ಣಂ ಚ ಮಾಧವ|

05139031c ಮಂತ್ರಾಸ್ತತ್ರ ಭವಿಷ್ಯಂತಿ ಪ್ರಯುಕ್ತಾಃ ಸವ್ಯಸಾಚಿನಾ||

ಮಾಧವ! ಸವ್ಯಸಾಚಿಯು ಪ್ರಯೋಗಿಸುವ ಐಂದ್ರ, ಪಾಶುಪತ, ಬ್ರಹ್ಮ, ಮತ್ತು ಸ್ಥೂಣಾಕರ್ಣ ಅಸ್ತ್ರಗಳು ಅದರಲ್ಲಿ ಮಂತ್ರಗಳಾಗುತ್ತವೆ.

05139032a ಅನುಯಾತಶ್ಚ ಪಿತರಮಧಿಕೋ ವಾ ಪರಾಕ್ರಮೇ|

05139032c ಗ್ರಾವಸ್ತೋತ್ರಂ ಸ ಸೌಭದ್ರಃ ಸಮ್ಯಕ್ತತ್ರ ಕರಿಷ್ಯತಿ||

ಪರಾಕ್ರಮದಲ್ಲಿ ತಂದೆಯನ್ನು ಹೋಲುವ ಅಥವಾ ಅವನಿಗಿಂತಲೂ ಅಧಿಕನಾಗಿರುವ ಸೌಭದ್ರನು ಅದರಲ್ಲಿ ಗ್ರಾವಸ್ತೋತ್ರಿಯ ಕೆಲಸವನ್ನು ಮಾಡುತ್ತಾನೆ.

05139033a ಉದ್ಗಾತಾತ್ರ ಪುನರ್ಭೀಮಃ ಪ್ರಸ್ತೋತಾ ಸುಮಹಾಬಲಃ|

05139033c ವಿನದನ್ಸ ನರವ್ಯಾಘ್ರೋ ನಾಗಾನೀಕಾಂತಕೃದ್ರಣೇ||

ರಣದಲ್ಲಿ ಗರ್ಜಿಸಿ ಆನೆಗಳ ಸೇನೆಯನ್ನು ಕೊನೆಗೊಳಿಸುವ ನರವ್ಯಾಘ್ರ ಸುಮಹಾಬಲ ಭೀಮನು ಅದರಲ್ಲಿ ಉದ್ಗಾತನೂ ಪ್ರಸ್ತೋತನೂ ಆಗುತ್ತಾನೆ.

05139034a ಸ ಚೈವ ತತ್ರ ಧರ್ಮಾತ್ಮಾ ಶಶ್ವದ್ರಾಜಾ ಯುಧಿಷ್ಠಿರಃ|

05139034c ಜಪೈರ್ಹೋಮೈಶ್ಚ ಸಂಯುಕ್ತೋ ಬ್ರಹ್ಮತ್ವಂ ಕಾರಯಿಷ್ಯತಿ||

ಆ ಶಾಶ್ವತ ರಾಜ, ಧರ್ಮಾತ್ಮಾ, ಜಪ-ಹೋಮಗಳಲ್ಲಿ ಪಳಗಿರುವ ಯುಧಿಷ್ಠಿರನು ಅದರಲ್ಲಿ ಬ್ರಹ್ಮತ್ವವನ್ನು ಕೈಗೊಳ್ಳುತ್ತಾನೆ.

05139035a ಶಂಖಶಬ್ದಾಃ ಸಮುರಜಾ ಭೇರ್ಯಶ್ಚ ಮಧುಸೂದನ|

05139035c ಉತ್ಕೃಷ್ಟಸಿಂಹನಾದಾಶ್ಚ ಸುಬ್ರಹ್ಮಣ್ಯೋ ಭವಿಷ್ಯತಿ||

ಮಧುಸೂದನ! ಶಂಖಗಳ ಶಬ್ಧ, ನಗಾರಿ ಭೇರಿಗಳ ಶಬ್ಧಗಳು, ಮತ್ತು ಕಿವಿ ಕಿವುಡು ಮಾಡುವ ಸಿಂಹನಾದಗಳು ಸುಬ್ರಹ್ಮಣ್ಯವಾಗುತ್ತವೆ.

05139036a ನಕುಲಃ ಸಹದೇವಶ್ಚ ಮಾದ್ರೀಪುತ್ರೌ ಯಶಸ್ವಿನೌ|

05139036c ಶಾಮಿತ್ರಂ ತೌ ಮಹಾವೀರ್ಯೌ ಸಮ್ಯಕ್ತತ್ರ ಕರಿಷ್ಯತಃ||

ಮಹಾವೀರರಾದ ಯಶಸ್ವಿಗಳಾದ ಮಾದ್ರೀಪುತ್ರ ನಕುಲ-ಸಹದೇವರಿಬ್ಬರೂ ಅದರಲ್ಲಿ ಶಾಮಿತ್ರರ ಕೆಲಸವನ್ನು ಮಾಡುತ್ತಾರೆ.

05139037a ಕಲ್ಮಾಷದಂಡಾ ಗೋವಿಂದ ವಿಮಲಾ ರಥಶಕ್ತಯಃ|

05139037c ಯೂಪಾಃ ಸಮುಪಕಲ್ಪಂತಾಮಸ್ಮಿನ್ಯಜ್ಞೇ ಜನಾರ್ದನ||

ಗೋವಿಂದ! ಜನಾರ್ದನ! ಈ ಯಜ್ಞದಲ್ಲಿ ರಥಗಳಿಗೆ ಕಟ್ಟಿದ ಶುಭ್ರ ಪತಾಕೆಗಳ ದಂಡಗಳು ಯೂಪಗಳಂತೆ ಇರುತ್ತವೆ.

05139038a ಕರ್ಣಿನಾಲೀಕನಾರಾಚಾ ವತ್ಸದಂತೋಪಬೃಹ್ಮಣಾಃ|

05139038c ತೋಮರಾಃ ಸೋಮಕಲಶಾಃ ಪವಿತ್ರಾಣಿ ಧನೂಂಷಿ ಚ||

ಕರ್ಣಿ, ನಾಲೀಕ, ನಾರಾಚ, ವತ್ಸದಂತ ಮತ್ತು ತೋಮರ ಬಾಣಗಳು ಸೋಮಕಲಶಗಳಾಗುತ್ತವೆ ಹಾಗೂ ಧನುಸ್ಸುಗಳು ಪವಿತ್ರಗಳಾಗುತ್ತವೆ.

05139039a ಅಸಯೋಽತ್ರ ಕಪಾಲಾನಿ ಪುರೋಡಾಶಾಃ ಶಿರಾಂಸಿ ಚ|

05139039c ಹವಿಸ್ತು ರುಧಿರಂ ಕೃಷ್ಣ ಅಸ್ಮಿನ್ಯಜ್ಞೇ ಭವಿಷ್ಯತಿ||

ಕೃಷ್ಣ! ಈ ಯಜ್ಞದಲ್ಲಿ ಕಪಾಲ-ಶಿರಗಳು ಪುರೋಡಾಷಗಳೂ, ರಕ್ತವು ಹವಿಸ್ಸಾಗಿಯೂ ಆಗುತ್ತವೆ.

05139040a ಇಧ್ಮಾಃ ಪರಿಧಯಶ್ಚೈವ ಶಕ್ತ್ಯೋಽಥ ವಿಮಲಾ ಗದಾಃ|

05139040c ಸದಸ್ಯಾ ದ್ರೋಣಶಿಷ್ಯಾಶ್ಚ ಕೃಪಸ್ಯ ಚ ಶರದ್ವತಃ||

ಶುಭ್ರವಾದ ಶಕ್ತ್ಯಾಯುಧ ಮತ್ತು ಗದೆಗಳು ಅಗ್ನಿಯನ್ನು ಹೊತ್ತಿಸುವ ಮತ್ತು ಉರಿಸುವ ಕಟ್ಟಿಗೆಗಳಾದರೆ ದ್ರೋಣ ಮತ್ತು ಶರದ್ವತ ಕೃಪನ ಶಿಷ್ಯರು ಸದಸ್ಯರಾಗುತ್ತಾರೆ.

05139041a ಇಷವೋಽತ್ರ ಪರಿಸ್ತೋಮಾ ಮುಕ್ತಾ ಗಾಂಡೀವಧನ್ವನಾ|

05139041c ಮಹಾರಥಪ್ರಯುಕ್ತಾಶ್ಚ ದ್ರೋಣದ್ರೌಣಿಪ್ರಚೋದಿತಾಃ||

ಅಲ್ಲಿ ಗಾಂಡೀವಧನ್ವಿಯು ಸುತ್ತುವರೆದು ಬಿಡುವ ಮತ್ತು ದ್ರೋಣ-ದ್ರೌಣಿಯರು ಪ್ರಯೋಗಿಸುವ ಬಾಣಗಳು ತಲೆದಿಂಬುಗಳಾಗುತ್ತವೆ.

05139042a ಪ್ರಾತಿಪ್ರಸ್ಥಾನಿಕಂ ಕರ್ಮ ಸಾತ್ಯಕಿಃ ಸ ಕರಿಷ್ಯತಿ|

05139042c ದೀಕ್ಷಿತೋ ಧಾರ್ತರಾಷ್ಟ್ರೋಽತ್ರ ಪತ್ನೀ ಚಾಸ್ಯ ಮಹಾಚಮೂಃ||

ಸಾತ್ಯಕಿಯು ಪ್ರಾತಿಪ್ರಸ್ಥಾನಿಕನ ಕೆಲಸವನ್ನು ಮಾಡುತ್ತಾನೆ. ಧಾರ್ತರಾಷ್ಟ್ರನು ಅದರಲ್ಲಿ ದೀಕ್ಷಿತನಾಗುತ್ತಾನೆ ಮತ್ತು ಮಹಾಸೇನೆಯು ಅವನ ಪತ್ನಿ.

05139043a ಘಟೋತ್ಕಚೋಽತ್ರ ಶಾಮಿತ್ರಂ ಕರಿಷ್ಯತಿ ಮಹಾಬಲಃ|

05139043c ಅತಿರಾತ್ರೇ ಮಹಾಬಾಹೋ ವಿತತೇ ಯಜ್ಞಾಕರ್ಮಣಿ||

ಯಜ್ಞಕರ್ಮಗಳು ರಾತ್ರಿಯೂ ಮುಂದುವರಿದರೆ ಆಗ ಅದರಲ್ಲಿ ಮಹಾಬಲ ಮಹಾಬಾಹು ಘಟೋತ್ಕಚನು ಶಾಮಿತ್ರನ ಕೆಲಸವನ್ನು ಮಾಡುತ್ತಾನೆ.

05139044a ದಕ್ಷಿಣಾ ತ್ವಸ್ಯ ಯಜ್ಞಾಸ್ಯ ಧೃಷ್ಟದ್ಯುಮ್ನಃ ಪ್ರತಾಪವಾನ್|

05139044c ವೈತಾನೇ ಕರ್ಮಣಿ ತತೇ ಜಾತೋ ಯಃ ಕೃಷ್ಣ ಪಾವಕಾತ್||

ಕೃಷ್ಣ! ಅಗ್ನಿಯಿಂದ ಹುಟ್ಟಿದ ಪ್ರತಾಪವಾನ್ ಧೃಷ್ಟದ್ಯುಮ್ನನು ಈ ಯಜ್ಞದ ವೈತಾನ ಕರ್ಮಗಳಲ್ಲಿ ದಕ್ಷಿಣೆಯಾಗುತ್ತಾನೆ.

05139045a ಯದಬ್ರುವಮಹಂ ಕೃಷ್ಣ ಕಟುಕಾನಿ ಸ್ಮ ಪಾಂಡವಾನ್|

05139045c ಪ್ರಿಯಾರ್ಥಂ ಧಾರ್ತರಾಷ್ಟ್ರಸ್ಯ ತೇನ ತಪ್ಯೇಽದ್ಯ ಕರ್ಮಣಾ||

05139046a ಯದಾ ದ್ರಕ್ಷ್ಯಸಿ ಮಾಂ ಕೃಷ್ಣ ನಿಹತಂ ಸವ್ಯಸಾಚಿನಾ|

05139046c ಪುನಶ್ಚಿತಿಸ್ತದಾ ಚಾಸ್ಯ ಯಜ್ಞಾಸ್ಯಾಥ ಭವಿಷ್ಯತಿ||

ಕೃಷ್ಣ! ಅಂದು ಧಾರ್ತರಾಷ್ಟ್ರನನ್ನು ಸಂತೋಷಪಡಿಸಲು, ಇಂದು ಆ ಕೆಲಸಕ್ಕೆ ನಾನು ಪಶ್ಚಾತ್ತಾಪ ಪಡುತ್ತಿರುವ, ಪಾಂಡವರಿಗಾಡಿದ ಕಟುಕಾದ ಮಾತುಗಳಿಗೆ ಸವ್ಯಸಾಚಿಯು ನನ್ನನ್ನು ತುಂಡರಿಸುವುದನ್ನು ನೀನು ನೋಡಿದಾಗ ಅದು ಈ ಯಜ್ಞದ ಪುನಶ್ಚಿತಿಯಾಗುತ್ತದೆ.

05139047a ದುಃಶಾಸನಸ್ಯ ರುಧಿರಂ ಯದಾ ಪಾಸ್ಯತಿ ಪಾಂಡವಃ|

05139047c ಆನರ್ದಂ ನರ್ದತಃ ಸಮ್ಯಕ್ತದಾ ಸುತ್ಯಂ ಭವಿಷ್ಯತಿ||

ಪಾಂಡವನು ಜೋರಾಗಿ ಘರ್ಜಿಸಿ ದುಃಶಾಸನನ ರುಧಿರವನ್ನು ಕುಡಿಯುವಾಗ ಅದು ಇದರ ಸುತ್ಯವಾಗುತ್ತದೆ.

05139048a ಯದಾ ದ್ರೋಣಂ ಚ ಭೀಷ್ಮಂ ಚ ಪಾಂಚಾಲ್ಯೌ ಪಾತಯಿಷ್ಯತಃ|

05139048c ತದಾ ಯಜ್ಞಾವಸಾನಂ ತದ್ಭವಿಷ್ಯತಿ ಜನಾರ್ದನ||

ಜನಾರ್ದನ! ಪಾಂಚಾಲರಿಬ್ಬರೂ ದ್ರೋಣ-ಭೀಷ್ಮರನ್ನು ಕೆಳಗುರುಳಿಸಿದಾಗ ಅದು ಯಜ್ಞದ ಅವಸಾನವಾಗುತ್ತದೆ.

05139049a ದುರ್ಯೋಧನಂ ಯದಾ ಹಂತಾ ಭೀಮಸೇನೋ ಮಹಾಬಲಃ|

05139049c ತದಾ ಸಮಾಪ್ಸ್ಯತೇ ಯಜ್ಞೋ ಧಾರ್ತರಾಷ್ಟ್ರಸ್ಯ ಮಾಧವ||

ಮಾಧವ! ಮಹಾಬಲ ಭೀಮಸೇನನು ದುರ್ಯೋಧನನನ್ನು ಕೊಂದಾಗ ಧಾರ್ತರಾಷ್ಟ್ರನ ಈ ಯಜ್ಞವು ಸಮಾಪ್ತವಾಗುತ್ತದೆ.

05139050a ಸ್ನುಷಾಶ್ಚ ಪ್ರಸ್ನುಷಾಶ್ಚೈವ ಧೃತರಾಷ್ಟ್ರಸ್ಯ ಸಂಗತಾಃ|

05139050c ಹತೇಶ್ವರಾ ಹತಸುತಾ ಹತನಾಥಾಶ್ಚ ಕೇಶವ||

05139051a ಗಾಂಧಾರ್ಯಾ ಸಹ ರೋದಂತ್ಯಃ ಶ್ವಗೃಧ್ರಕುರರಾಕುಲೇ|

05139051c ಸ ಯಜ್ಞೇಽಸ್ಮಿನ್ನವಭೃಥೋ ಭವಿಷ್ಯತಿ ಜನಾರ್ದನ||

ಕೇಶವ! ಜನಾರ್ದನ! ಸೊಸೆಯಂದಿರು ಮತ್ತು ಮಕ್ಕಳ ಸೊಸೆಯಂದಿರು ಧೃತರಾಷ್ಟ್ರನನ್ನು ಸೇರಿ ಹತೇಶ್ವರರಾಗಿ, ಹತಸುತರಾಗಿ, ಹತನಾಥರಾಗಿ, ಗಾಂಧಾರಿಯೊಂದಿಗೆ ರೋದಿಸುತ್ತಾ ನಾಯಿ-ಹದ್ದು-ನರಿಗಳಿಂದ ಕೂಡಿದ ಯಜ್ಞಸ್ಥಳದಲ್ಲಿ ಸೇರಿದಾಗ ಅದು ಅವಭೃತವಾಗುತ್ತದೆ.

05139052a ವಿದ್ಯಾವೃದ್ಧಾ ವಯೋವೃದ್ಧಾಃ ಕ್ಷತ್ರಿಯಾಃ ಕ್ಷತ್ರಿಯರ್ಷಭ|

05139052c ವೃಥಾಮೃತ್ಯುಂ ನ ಕುರ್ವೀರಂಸ್ತ್ವತ್ಕೃತೇ ಮಧುಸೂದನ||

ಕ್ಷತ್ರಿಯರ್ಷಭ! ಮಧುಸೂದನ! ವಿದ್ಯಾವೃದ್ಧರಾದ, ವಯೋವೃದ್ಧರಾದ ಈ ಕ್ಷತ್ರಿಯರು ನಿನ್ನಿಂದಾಗಿ ಕುರ್ವೀರರಾಗಿ ವೃಥಾ ಮೃತ್ಯುವನ್ನು ಹೊಂದದಂತಾಗಲಿ.

05139053a ಶಸ್ತ್ರೇಣ ನಿಧನಂ ಗಚ್ಚೇತ್ಸಮೃದ್ಧಂ ಕ್ಷತ್ರಮಂಡಲಂ|

05139053c ಕುರುಕ್ಷೇತ್ರೇ ಪುಣ್ಯತಮೇ ತ್ರೈಲೋಕ್ಯಸ್ಯಾಪಿ ಕೇಶವ||

ಕೇಶವ! ಮೂರುಲೋಕಗಳಲ್ಲಿಯೂ ಪುಣ್ಯತಮವಾಗಿರುವ ಕುರುಕ್ಷೇತ್ರದಲ್ಲಿ ಸಮೃದ್ಧ ಕ್ಷತ್ರಮಂಡಲವು ಶಸ್ತ್ರಗಳ ಮೂಲಕ ನಿಧನ ಹೊಂದಲಿ.

05139054a ತದತ್ರ ಪುಂಡರೀಕಾಕ್ಷ ವಿಧತ್ಸ್ವ ಯದಭೀಪ್ಸಿತಂ|

05139054c ಯಥಾ ಕಾರ್ತ್ಸ್ನ್ಯೆನ ವಾರ್ಷ್ಣೇಯ ಕ್ಷತ್ರಂ ಸ್ವರ್ಗಮವಾಪ್ನುಯಾತ್||

ಪುಂಡರೀಕಾಕ್ಷ! ವಾರ್ಷ್ಣೇಯ! ಸಂಪೂರ್ಣವಾಗಿ ಕ್ಷತ್ರಿಯರು ಸ್ವರ್ಗವನ್ನು ಪಡೆಯುವಂತೆ ಬಯಸಿ ಅದರಂತೆ ಮಾಡು!

05139055a ಯಾವತ್ಸ್ಥಾಸ್ಯಂತಿ ಗಿರಯಃ ಸರಿತಶ್ಚ ಜನಾರ್ದನ|

05139055c ತಾವತ್ಕೀರ್ತಿಭವಃ ಶಬ್ದಃ ಶಾಶ್ವತೋಽಯಂ ಭವಿಷ್ಯತಿ||

ಜನಾರ್ದನ! ಎಲ್ಲಿಯವರೆಗೆ ಗಿರಿಗಳು ನಿಂತಿರುತ್ತವೆಯೋ, ನದಿಗಳು ಹರಿಯುತ್ತಿರುತ್ತವೆಯೋ ಅಲ್ಲಿಯವರೆಗೆ ಈ ಯುದ್ಧದ ಶಬ್ಧದ ಕೀರ್ತಿಯು ಕೇಳಿಬರುತ್ತದೆ. ಶಾಶ್ವತವಾಗಿರುತ್ತದೆ.

05139056a ಬ್ರಾಹ್ಮಣಾಃ ಕಥಯಿಷ್ಯಂತಿ ಮಹಾಭಾರತಮಾಹವಂ|

05139056c ಸಮಾಗಮೇಷು ವಾರ್ಷ್ಣೇಯ ಕ್ಷತ್ರಿಯಾಣಾಂ ಯಶೋಧರಂ||

ವಾರ್ಷ್ಣೇಯ! ಕ್ಷತ್ರಿಯರ ಯಶಸ್ಸನ್ನು ಹೆಚ್ಚಿಸುವ ಈ ಮಹಾಭಾರತ ಯುದ್ಧವನ್ನು ಬ್ರಾಹ್ಮಣರು ಸಮಾಗಮಗಳಲ್ಲಿ ಹೇಳುತ್ತಿರುತ್ತಾರೆ.

05139057a ಸಮುಪಾನಯ ಕೌಂತೇಯಂ ಯುದ್ಧಾಯ ಮಮ ಕೇಶವ|

05139057c ಮಂತ್ರಸಂವರಣಂ ಕುರ್ವನ್ನಿತ್ಯಮೇವ ಪರಂತಪ||

ಕೇಶವ! ಪರಂತಪ! ಕೌಂತೇಯನನ್ನು ಯುದ್ಧಕ್ಕೆ ಕರೆದುಕೊಂಡು ಬಾ. ಈ ಮಾತುಕತೆಯನ್ನು ಗೋಪನೀಯವಾಗಿರಿಸು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.

Image result for indian motifs"

Comments are closed.