Udyoga Parva: Chapter 136

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೬

ದುರ್ಯೋಧನನಿಗೆ ಭೀಷ್ಮ-ದ್ರೋಣರ ಸಲಹೆ

ಕುಂತಿಯ ಮಾತುಗಳನ್ನು ಕೇಳಿ ಭೀಷ್ಮ-ದ್ರೋಣರಿಬ್ಬರೂ ರಾಜ್ಯವನ್ನು ಪಡೆಯದೇ ಪಾಂಡವರು ಶಾಂತಿಮಾರ್ಗದಲ್ಲಿ ಹೋಗುವುದಿಲ್ಲವೆಂದೂ, ಯುದ್ಧದಿಂದ ಕ್ಷತ್ರಿಯರ ವಿನಾಶವು ಖಂಡಿತವೆಂದು ನಿಮಿತ್ತಗಳು ತೋರಿಸುತ್ತಿವೆಯೆಂದೂ ದುರ್ಯೋಧನನಿಗೆ ಹೇಳಿದುದು (೧-೨೬).

05136001 ವೈಶಂಪಾಯನ ಉವಾಚ|

05136001a ಕುಂತ್ಯಾಸ್ತು ವಚನಂ ಶ್ರುತ್ವಾ ಭೀಷ್ಮದ್ರೋಣೌ ಮಹಾರಥೌ|

05136001c ದುರ್ಯೋಧನಮಿದಂ ವಾಕ್ಯಮೂಚತುಃ ಶಾಸನಾತಿಗಂ||

ವೈಶಂಪಾಯನನು ಹೇಳಿದನು: “ಕುಂತಿಯ ಮಾತುಗಳನ್ನು ಕೇಳಿ ಮಹಾರಥಿಗಳಾದ ಭೀಷ್ಮ-ದ್ರೋಣರಿಬ್ಬರೂ ನಿಯಂತ್ರಿಸಲು ಅಸಾಧ್ಯನಾದ ದುರ್ಯೋಧನನಿಗೆ ಹೇಳಿದರು.

05136002a ಶ್ರುತಂ ತೇ ಪುರುಷವ್ಯಾಘ್ರ ಕುಂತ್ಯಾಃ ಕೃಷ್ಣಸ್ಯ ಸನ್ನಿಧೌ|

05136002c ವಾಕ್ಯಮರ್ಥವದವ್ಯಗ್ರಮುಕ್ತಂ ಧರ್ಮ್ಯಮನುತ್ತಮಂ||

“ಪುರುಷವ್ಯಾಘ್ರ! ಕೃಷ್ಣನ ಸನ್ನಿಧಿಯಲ್ಲಿ ಕುಂತಿಯು ಹೇಳಿದ ಅರ್ಥವತ್ತಾದ, ಧರ್ಮದಿಂದ ಕೂಡಿದ, ಉತ್ತಮವಾದ, ಅವ್ಯಗ್ರ ಮಾತುಗಳನ್ನು ಕೇಳಿದೆವು.

05136003a ತತ್ಕರಿಷ್ಯಂತಿ ಕೌಂತೇಯಾ ವಾಸುದೇವಸ್ಯ ಸಮ್ಮತಂ|

05136003c ನ ಹಿ ತೇ ಜಾತು ಶಾಮ್ಯೇರನ್ನೃತೇ ರಾಜ್ಯೇನ ಕೌರವ||

ಕೌರವ! ವಾಸುದೇವನಿಗೆ ಸಮ್ಮತಿಯಿದ್ದಂತೆ ಕೌಂತೇಯರು ಮಾಡುತ್ತಾರೆ. ರಾಜ್ಯವನ್ನು ಪಡೆಯದೇ ಅವರು ಶಾಂತಿಮಾರ್ಗದಲ್ಲಿ ಹೋಗುವುದಿಲ್ಲ.

05136004a ಕ್ಲೇಶಿತಾ ಹಿ ತ್ವಯಾ ಪಾರ್ಥಾ ಧರ್ಮಪಾಶಸಿತಾಸ್ತದಾ|

05136004c ಸಭಾಯಾಂ ದ್ರೌಪದೀ ಚೈವ ತೈಶ್ಚ ತನ್ಮರ್ಷಿತಂ ತವ||

ನೀನು ಪಾರ್ಥರಿಗೆ ಸಾಕಷ್ಟು ಕ್ಲೇಶಗಳನ್ನು ಕೊಟ್ಟಿದ್ದೀಯೆ. ಸಭೆಯಲ್ಲಿ ದ್ರೌಪದಿಯನ್ನೂ ಕಾಡಿಸಿದೆ. ಧರ್ಮಪಾಶಕ್ಕೆ ಬದ್ಧರಾಗಿದ್ದ ಅವರು ನಿನ್ನ ಅವೆಲ್ಲವನ್ನೂ ಸಹಿಸಿಕೊಂಡರು.

05136005a ಕೃತಾಸ್ತ್ರಂ ಹ್ಯರ್ಜುನಂ ಪ್ರಾಪ್ಯ ಭೀಮಂ ಚ ಕೃತನಿಶ್ರಮಂ|

05136005c ಗಾಂಡೀವಂ ಚೇಷುಧೀ ಚೈವ ರಥಂ ಚ ಧ್ವಜಮೇವ ಚ|

05136005e ಸಹಾಯಂ ವಾಸುದೇವಂ ಚ ನ ಕ್ಷಂಸ್ಯತಿ ಯುಧಿಷ್ಠಿರಃ||

ಅಸ್ತ್ರಗಳನ್ನು ಸಂಪಾದಿಸಿದ ಅರ್ಜುನ, ಧೃಢನಿಶ್ಚಯಿ ಭೀಮ, ಗಾಂಡೀವ, ಎರಡು ಅಕ್ಷಯ ಭತ್ತಳಿಕೆಗಳು, ರಥ-ಧ್ವಜಗಳು ಮತ್ತು ವಾಸುದೇವನ ಸಹಾಯವನ್ನು ಪಡೆದಿರುವ ಯುಧಿಷ್ಠಿರ – ಇವರು ಈಗ ನಿನ್ನನ್ನು ಕ್ಷಮಿಸಲಾರರು.

05136006a ಪ್ರತ್ಯಕ್ಷಂ ತೇ ಮಹಾಬಾಹೋ ಯಥಾ ಪಾರ್ಥೇನ ಧೀಮತಾ|

05136006c ವಿರಾಟನಗರೇ ಪೂರ್ವಂ ಸರ್ವೇ ಸ್ಮ ಯುಧಿ ನಿರ್ಜಿತಾಃ||

ಮಹಾಬಾಹೋ! ಹಿಂದೆ ವಿರಾಟನಗರದ ಯುದ್ಧದಲ್ಲಿ ಧೀಮತ ಪಾರ್ಥನು ನಮ್ಮೆಲ್ಲರನ್ನೂ ಸೋಲಿಸಿದುದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ.

05136007a ದಾನವಾನ್ಘೋರಕರ್ಮಾಣೋ ನಿವಾತಕವಚಾನ್ಯುಧಿ|

05136007c ರೌದ್ರಮಸ್ತ್ರಂ ಸಮಾಧಾಯ ದಗ್ಧವಾನಸ್ತ್ರವಹ್ನಿನಾ||

ಅವನು ಯುದ್ಧದಲ್ಲಿ ಘೋರಕರ್ಮಿ ದಾನವ ನಿವಾತಕವಚರನ್ನು ರೌದ್ರಾಸ್ತ್ರವನ್ನು ಬಳಸಿ ಆ ಅಸ್ತ್ರದ ಬೆಂಕಿಯಲ್ಲಿ ಅವರನ್ನು ಸುಟ್ಟನು.

05136008a ಕರ್ಣಪ್ರಭೃತಯಶ್ಚೇಮೇ ತ್ವಂ ಚಾಪಿ ಕವಚೀ ರಥೀ|

05136008c ಮೋಕ್ಷಿತಾ ಘೋಷಯಾತ್ರಾಯಾಂ ಪರ್ಯಾಪ್ತಂ ತನ್ನಿದರ್ಶನಂ||

ಘೋಷಯಾತ್ರೆಯ ವೇಳೆಯಲ್ಲಿ ಕವಚಗಳನ್ನು ಧರಿಸಿ ರಥವನ್ನೇರಿದ್ದ ಅವನು ನಿನ್ನನ್ನು ಮತ್ತು ಕರ್ಣನೇ ಮೊದಲಾದವರನ್ನು ಬಿಡುಗಡೆ ಮಾಡಿದುದೂ ಅದರ ನಿದರ್ಶನವೇ.

05136009a ಪ್ರಶಾಮ್ಯ ಭರತಶ್ರೇಷ್ಠ ಭ್ರಾತೃಭಿಃ ಸಹ ಪಾಂಡವೈಃ|

05136009c ರಕ್ಷೇಮಾಂ ಪೃಥಿವೀಂ ಸರ್ವಾಂ ಮೃತ್ಯೋರ್ದಂಷ್ಟ್ರಾಂತರಂ ಗತಾಂ||

ಭರತಶ್ರೇಷ್ಠ! ಸಹೋದರ ಪಾಂಡವರೊಂದಿಗೆ ಶಾಂತನಾಗು. ಮೃತ್ಯುವಿನ ಹಲ್ಲಿಗೆ ಹೋಗುತ್ತಿರುವ ಈ ಪೃಥ್ವಿಯ ಎಲ್ಲರನ್ನೂ ರಕ್ಷಿಸು.

05136010a ಜ್ಯೇಷ್ಠೋ ಭ್ರಾತಾ ಧರ್ಮಶೀಲೋ ವತ್ಸಲಃ ಶ್ಲಕ್ಷ್ಣವಾಕ್ ಶುಚಿಃ|

05136010c ತಂ ಗಚ್ಚ ಪುರುಷವ್ಯಾಘ್ರಂ ವ್ಯಪನೀಯೇಹ ಕಿಲ್ಬಿಷಂ||

ಈ ದೋಷವನ್ನು ಕಳೆದುಕೊಂಡು ಆ ಪುರುಷವ್ಯಾಘ್ರ, ಶುಚಿ, ಮೃದುವಾದಿ, ವತ್ಸಲ, ಧರ್ಮಶೀಲ ಹಿರಿಯಣ್ಣನ ಬಳಿ ಹೋಗು.

05136011a ದೃಷ್ಟಶ್ಚೇತ್ತ್ವಂ ಪಾಂಡವೇನ ವ್ಯಪನೀತಶರಾಸನಃ|

05136011c ಪ್ರಸನ್ನಭ್ರುಕುಟಿಃ ಶ್ರೀಮಾನ್ಕೃತಾ ಶಾಂತಿಃ ಕುಲಸ್ಯ ನಃ||

ಧನುಸ್ಸನ್ನು ತೊರೆದು ಹುಬ್ಬು ಗಂಟಿಕ್ಕದೇ ಪ್ರಸನ್ನನಾಗಿರುವ ನಿನ್ನನ್ನು ಆ ಶ್ರೀಮಾನನು ನೋಡಿದರೂ ಅದು ಕುಲಕ್ಕೆ ಶಾಂತಿಯನ್ನು ತರುತ್ತದೆ.

05136012a ತಮಭ್ಯೇತ್ಯ ಸಹಾಮಾತ್ಯಃ ಪರಿಷ್ವಜ್ಯ ನೃಪಾತ್ಮಜಂ|

05136012c ಅಭಿವಾದಯ ರಾಜಾನಂ ಯಥಾಪೂರ್ವಮರಿಂದಮ||

ಅರಿಂದಮ! ಅಮಾತ್ಯರೊಂದಿಗೆ ಆ ರಾಜ ನೃಪಾತ್ಮಜನ ಬಳಿಹೋಗಿ ಭ್ರಾತೃತ್ವದಿಂದ ಅವನನ್ನು ಅಪ್ಪಿಕೋ.

05136013a ಅಭಿವಾದಯಮಾನಂ ತ್ವಾಂ ಪಾಣಿಭ್ಯಾಂ ಭೀಮಪೂರ್ವಜಃ|

05136013c ಪ್ರತಿಗೃಹ್ಣಾತು ಸೌಹಾರ್ದಾತ್ಕುಂತೀಪುತ್ರೋ ಯುಧಿಷ್ಠಿರಃ||

ಭೀಮನ ಅಣ್ಣ ಕುಂತೀಪುತ್ರ ಯುಧಿಷ್ಠಿರನು ಅಭಿವಾದಿಸುವ ನಿನ್ನನ್ನು ಸೌಹಾರ್ದತೆಯಿಂದ ತನ್ನೆರಡೂ ಕೈಗಳಿಂದ ಬರಮಾಡಿಕೊಳ್ಳುತ್ತಾನೆ.

05136014a ಸಿಂಹಸ್ಕಂಧೋರುಬಾಹುಸ್ತ್ವಾಂ ವೃತ್ತಾಯತಮಹಾಭುಜಃ|

05136014c ಪರಿಷ್ವಜತು ಬಾಹುಭ್ಯಾಂ ಭೀಮಃ ಪ್ರಹರತಾಂ ವರಃ||

ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎರಡೂ ಕೈಗಳಿಂದ ಸಿಂಹದಂತಿರುವ ನಿನ್ನ ತೊಡೆ ಬಾಹುಗಳನ್ನು ಸುತ್ತುವರೆಸಿ ಬಳಸಿ ಆಲಂಗಿಸುತ್ತಾನೆ.

05136015a ಸಿಂಹಗ್ರೀವೋ ಗುಡಾಕೇಶಸ್ತತಸ್ತ್ವಾಂ ಪುಷ್ಕರೇಕ್ಷಣಃ|

05136015c ಅಭಿವಾದಯತಾಂ ಪಾರ್ಥಃ ಕುಂತೀಪುತ್ರೋ ಧನಂಜಯಃ||

ಸಿಂಹಗ್ರೀವ ಗುಡಾಕೇಶ ಪಾರ್ಥ ಕುಂತೀಪುತ್ರ ಧನಂಜಯನು ಪುಷ್ಕರೇಕ್ಷಣ ನಿನ್ನನ್ನು ನಮಸ್ಕರಿಸುತ್ತಾನೆ.

05136016a ಆಶ್ವಿನೇಯೌ ನರವ್ಯಾಘ್ರೌ ರೂಪೇಣಾಪ್ರತಿಮೌ ಭುವಿ|

05136016c ತೌ ಚ ತ್ವಾಂ ಗುರುವತ್ಪ್ರೇಮ್ಣಾ ಪೂಜಯಾ ಪ್ರತ್ಯುದೀಯತಾಂ||

ಭೂಮಿಯಲ್ಲಿಯೇ ರೂಪದಲ್ಲಿ ಅಪ್ರತಿಮರಾಗಿರುವ ಆ ಅಶ್ವಿನೀಪುತ್ರರು ನಿನ್ನನ್ನು ಗುರುವಂತೆ ಪ್ರೇಮದ ಪೂಜೆಯಿಂದ ನಿನ್ನನ್ನು ಗೌರವಿಸುತ್ತಾರೆ.

05136017a ಮುಂಚಂತ್ವಾನಂದಜಾಶ್ರೂಣಿ ದಾಶಾರ್ಹಪ್ರಮುಖಾ ನೃಪಾಃ|

05136017c ಸಂಗಚ್ಚ ಭ್ರಾತೃಭಿಃ ಸಾರ್ಧಂ ಮಾನಂ ಸಂತ್ಯಜ್ಯ ಪಾರ್ಥಿವ||

ಪಾರ್ಥಿವ! ಅಭಿಮಾನವನ್ನು ತೊರೆದು ಭ್ರಾತೃಗಳ ಬಳಿಸಾರಿ ಅವರನ್ನು ಸೇರಿಕೋ. ಆಗ ದಾಶಾರ್ಹಪ್ರಮುಖ ನೃಪರು ಆನಂದದಿಂದ ಕಣ್ಣೀರು ಸುರಿಸುತ್ತಾರೆ.

05136018a ಪ್ರಶಾಧಿ ಪೃಥಿವೀಂ ಕೃತ್ಸ್ನಾಂ ತತಸ್ತಂ ಭ್ರಾತೃಭಿಃ ಸಹ|

05136018c ಸಮಾಲಿಂಗ್ಯ ಚ ಹರ್ಷೇಣ ನೃಪಾ ಯಾಂತು ಪರಸ್ಪರಂ||

ಆಗ ನೀನು ಸಹೋದರರೊಂದಿಗೆ ಇಡೀ ಪೃಥ್ವಿಯನ್ನೇ ಆಳು. ಹರ್ಷದಿಂದ ಈ ನೃಪರು ಪರಸ್ಪರರನ್ನು ಆಲಂಗಿಸಿ ಹಿಂದಿರುಗಲಿ.

05136019a ಅಲಂ ಯುದ್ಧೇನ ರಾಜೇಂದ್ರ ಸುಹೃದಾಂ ಶೃಣು ಕಾರಣಂ|

05136019c ಧ್ರುವಂ ವಿನಾಶೋ ಯುದ್ಧೇ ಹಿ ಕ್ಷತ್ರಿಯಾಣಾಂ ಪ್ರದೃಶ್ಯತೇ||

ರಾಜೇಂದ್ರ! ಈ ಯುದ್ಧವು ಬೇಡವೆನ್ನುವ ಸ್ನೇಹಿತರ ಕಾರಣವನ್ನು ಕೇಳು. ಈ ಯುದ್ಧದಿಂದ ಕ್ಷತ್ರಿಯರ ವಿನಾಶವು ಖಂಡಿತವೆಂದು ಕಾಣುತ್ತದೆ.

05136020a ಜ್ಯೋತೀಂಷಿ ಪ್ರತಿಕೂಲಾನಿ ದಾರುಣಾ ಮೃಗಪಕ್ಷಿಣಃ|

05136020c ಉತ್ಪಾತಾ ವಿವಿಧಾ ವೀರ ದೃಶ್ಯಂತೇ ಕ್ಷತ್ರನಾಶನಾಃ||

ವೀರ! ಕ್ಷತ್ರಿಯರ ನಾಶವನ್ನು ಸೂಚಿಸುವ ಜ್ಯೋತಿಷ್ಯ, ಮೃಗಪಕ್ಷಿಗಳ ದಾರುಣ ಸಂಕೇತಗಳು, ವಿವಿಧ ಉತ್ಪಾತಗಳು ಕಾಣುತ್ತಿವೆ.

05136021a ವಿಶೇಷತ ಇಹಾಸ್ಮಾಕಂ ನಿಮಿತ್ತಾನಿ ವಿನಾಶನೇ|

05136021c ಉಲ್ಕಾಭಿರ್ಹಿ ಪ್ರದೀಪ್ತಾಭಿರ್ವಧ್ಯತೇ ಪೃತನಾ ತವ||

ಈ ವಿನಾಶದ ನಿಮಿತ್ತಗಳು ವಿಶೇಷತಃ ನಮ್ಮಲ್ಲಿ ಕಂಡುಬರುತ್ತಿವೆ. ಉರಿಯುತ್ತಿರುವ ಉಲ್ಕೆಗಳು ನಿನ್ನ ಪ್ರದೇಶದಲ್ಲಿ ಬಿದ್ದು ಕಾಡುತ್ತಿವೆ.

05136022a ವಾಹನಾನ್ಯಪ್ರಹೃಷ್ಟಾನಿ ರುದಂತೀವ ವಿಶಾಂ ಪತೇ|

05136022c ಗೃಧ್ರಾಸ್ತೇ ಪರ್ಯುಪಾಸಂತೇ ಸೈನ್ಯಾನಿ ಚ ಸಮಂತತಃ||

ವಿಶಾಂಪತೇ! ನಮ್ಮ ವಾಹನಗಳು ಹರ್ಷದಿಂದಿಲ್ಲ. ರೋದಿಸುತ್ತಿರುವಂತಿವೆ. ನಿನ್ನ ಸೇನೆಯ ಸುತ್ತಲೂ ಹದ್ದುಗಳು ಹಾರಾಡುತ್ತಿವೆ.

05136023a ನಗರಂ ನ ಯಥಾಪೂರ್ವಂ ತಥಾ ರಾಜನಿವೇಶನಂ|

05136023c ಶಿವಾಶ್ಚಾಶಿವನಿರ್ಘೋಷಾ ದೀಪ್ತಾಂ ಸೇವಂತಿ ವೈ ದಿಶಂ||

ನಗರವಾಗಲೀ ಅರಮನೆಯಾಗಲೀ ಮೊದಲಿನಂತಿಲ್ಲ. ಕೆಂಪಾಗಿರುವ ನಾಲ್ಕೂ ಕಡೆಗಳಲ್ಲಿ ನರಿಗಳು ಅಮಂಗಳಕರವಾಗಿ ಕೂಗುತ್ತಾ ಓಡಾಡುತ್ತಿವೆ.

05136024a ಕುರು ವಾಕ್ಯಂ ಪಿತುರ್ಮಾತುರಸ್ಮಾಕಂ ಚ ಹಿತೈಷಿಣಾಂ|

05136024c ತ್ವಯ್ಯಾಯತ್ತೋ ಮಹಾಬಾಹೋ ಶಮೋ ವ್ಯಾಯಾಮ ಏವ ಚ||

ಮಹಾಬಾಹೋ! ತಂದೆ ತಾಯಿಯರ ಮತ್ತು ಹಿತೈಷಿಗಳಾದ ನಮ್ಮ ಮಾತಿನಂತೆ ಮಾಡು. ಯುದ್ಧ ಮತ್ತು ಶಾಂತಿ ಎರಡೂ ನಿನ್ನ ಕೈಯಲ್ಲಿದೆ.

05136025a ನ ಚೇತ್ಕರಿಷ್ಯಸಿ ವಚಃ ಸುಹೃದಾಮರಿಕರ್ಶನ|

05136025c ತಪ್ಸ್ಯಸೇ ವಾಹಿನೀಂ ದೃಷ್ಟ್ವಾ ಪಾರ್ಥಬಾಣಪ್ರಪೀಡಿತಾಂ||

ಅರಿಕರ್ಶನ! ಒಂದುವೇಳೆ ಸುಹೃದಯರ ಮಾತಿನಂತೆ ಮಾಡದೇ ಇದ್ದರೆ ಪಾರ್ಥನ ಬಾಣಗಳಿಂದ ಪೀಡಿತವಾದ ಸೇನೆಯನ್ನು ನೋಡಿ ಪರಿತಪಿಸುತ್ತೀಯೆ.

05136026a ಭೀಮಸ್ಯ ಚ ಮಹಾನಾದಂ ನದತಃ ಶುಷ್ಮಿಣೋ ರಣೇ|

05136026c ಶ್ರುತ್ವಾ ಸ್ಮರ್ತಾಸಿ ಮೇ ವಾಕ್ಯಂ ಗಾಂಡೀವಸ್ಯ ಚ ನಿಸ್ವನಂ|

05136026e ಯದ್ಯೇತದಪಸವ್ಯಂ ತೇ ಭವಿಷ್ಯತಿ ವಚೋ ಮಮ||

ರಣದಲ್ಲಿ ಭೀಮನ ಅಟ್ಟಹಾಸವನ್ನು, ಗಾಂಡೀವದ ನಿಸ್ವನವನ್ನೂ ಕೇಳಿ ನಮ್ಮ ಈ ಮಾತನ್ನು ನೆನಪಿಸಿಕೊಳ್ಳುತ್ತೀಯೆ. ಈಗ ನಿನಗೆ ನಾವು ಹೇಳುವುದು ಅಸ್ವೀಕೃತವಾದರೂ ಆಗ ನಾವು ಹೇಳಿದಂತೆಯೇ ಆಗುತ್ತದೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮದ್ರೋಣವಾಕ್ಯೇ ಷಟ್‌ತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನೂರಾಮೂವತ್ತಾರನೆಯ ಅಧ್ಯಾಯವು.

Image result for flowers against white background

Comments are closed.