Udyoga Parva: Chapter 135

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೫

ಕುಂತಿಯು ಅರ್ಜುನ, ಭೀಮ ಮತ್ತು ಯಮಳರಿಗೆ ಸಂದೇಶವನ್ನಿತ್ತು ಕೃಷ್ಣನನ್ನು ಕಳುಹಿಸಿದುದು (೧-೨೨). ಕೃಷ್ಣನು ಕರ್ಣನೊಡನೆ ಸ್ವಲ್ಪಹೊತ್ತು ಮಾತನಾಡಿ ಉಪಪ್ಲವ್ಯಕ್ಕೆ ಹಿಂದಿರುಗಿದುದು (೨೩-೩೦).

05135001 ಕುಂತ್ಯುವಾಚ|

05135001a ಅರ್ಜುನಂ ಕೇಶವ ಬ್ರೂಯಾಸ್ತ್ವಯಿ ಜಾತೇ ಸ್ಮ ಸೂತಕೇ|

05135001c ಉಪೋಪವಿಷ್ಟಾ ನಾರೀಭಿರಾಶ್ರಮೇ ಪರಿವಾರಿತಾ||

ಕುಂತಿಯು ಹೇಳಿದಳು: “ಕೇಶವ! ಅರ್ಜುನನಿಗೆ ಹೇಳು – “ನೀನು ಹುಟ್ಟಿದಾಗ ನಾನು ನಾರಿಯರಿಂದ ಸುತ್ತುವರೆಯಲ್ಪಟ್ಟು ಆಶ್ರಮದಲ್ಲಿ ಕುಳಿತುಕೊಂಡಿದ್ದೆ.

05135002a ಅಥಾಂತರಿಕ್ಷೇ ವಾಗಾಸೀದ್ದಿವ್ಯರೂಪಾ ಮನೋರಮಾ|

05135002c ಸಹಸ್ರಾಕ್ಷಸಮಃ ಕುಂತಿ ಭವಿಷ್ಯತ್ಯೇಷ ತೇ ಸುತಃ||

ಆಗ ಅಂತರಿಕ್ಷದಲ್ಲಿ ದಿವ್ಯರೂಪದ ಮನೋರಮ ಮಾತಾಯಿತು. “ಕುಂತೀ! ನಿನ್ನ ಮಗನು ಸಹಸ್ರಾಕ್ಷಸಮನಾಗುತ್ತಾನೆ.

05135003a ಏಷ ಜೇಷ್ಯತಿ ಸಂಗ್ರಾಮೇ ಕುರೂನ್ಸರ್ವಾನ್ಸಮಾಗತಾನ್|

05135003c ಭೀಮಸೇನದ್ವಿತೀಯಶ್ಚ ಲೋಕಮುದ್ವರ್ತಯಿಷ್ಯತಿ||

ಇವನು ಸಂಗ್ರಾಮದಲ್ಲಿ ಸೇರುವ ಕುರುಗಳೆಲ್ಲರನ್ನೂ ಭೀಮಸೇನನ ಸಹಾಯದಿಂದ ಜಯಿಸಿ ಲೋಕವನ್ನು ಉದ್ಧರಿಸುತ್ತಾನೆ.

05135004a ಪುತ್ರಸ್ತೇ ಪೃಥಿವೀಂ ಜೇತಾ ಯಶಶ್ಚಾಸ್ಯ ದಿವಸ್ಪೃಶಂ|

05135004c ಹತ್ವಾ ಕುರೂನ್ಗ್ರಾಮಜನ್ಯೇ ವಾಸುದೇವಸಹಾಯವಾನ್||

ನಿನ್ನ ಮಗನು ವಾಸುದೇವನ ಸಹಾಯಕನಾಗಿ ರಣದಲ್ಲಿ ಕುರುಗಳನ್ನು ಕೊಂದು ಪೃಥ್ವಿಯನ್ನು ಗೆದ್ದು ಅವನ ಯಶಸ್ಸು ದಿವವನ್ನೂ ಮುಟ್ಟುತ್ತದೆ.

05135005a ಪಿತ್ರ್ಯಮಂಶಂ ಪ್ರನಷ್ಟಂ ಚ ಪುನರಪ್ಯುದ್ಧರಿಷ್ಯತಿ|

05135005c ಭ್ರಾತೃಭಿಃ ಸಹಿತಃ ಶ್ರೀಮಾಂಸ್ತ್ರೀನ್ಮೇಧಾನಾಹರಿಷ್ಯತಿ||

ಕಳೆದುಹೋದ ಪಿತ್ರ್ಯಂಶವನ್ನು ಪುನಃ ಪಡೆದು ಬೆಳೆಸುತ್ತಾನೆ. ಸಹೋದರರೊಂದಿಗೆ ಈ ಶ್ರೀಮಾನನು ಮೂರು ಯಾಗಗಳನ್ನು ನೆರವೇರಿಸುತ್ತಾನೆ.’’

05135006a ತಂ ಸತ್ಯಸಂಧಂ ಬೀಭತ್ಸುಂ ಸವ್ಯಸಾಚಿನಮಚ್ಯುತ|

05135006c ಯಥಾಹಮೇವಂ ಜಾನಾಮಿ ಬಲವಂತಂ ದುರಾಸದಂ|

05135006e ತಥಾ ತದಸ್ತು ದಾಶಾರ್ಹ ಯಥಾ ವಾಗಭ್ಯಭಾಷತ||

ಅಚ್ಯುತ! ದಾಶಾರ್ಹ! ಆ ಸತ್ಯಸಂಧ, ಬೀಭತ್ಸು, ಸವ್ಯಸಾಚಿಯು ನಾನು ತಿಳಿದಂತೆ ಬಲವಂತನೂ ದುರಾಸದನೂ ಆಗಿದ್ದರೆ ಆ ಮಾತು ಹೇಳಿದಂತೆಯೇ ಆಗುತ್ತದೆ.

05135007a ಧರ್ಮಶ್ಚೇದಸ್ತಿ ವಾರ್ಷ್ಣೇಯ ತಥಾ ಸತ್ಯಂ ಭವಿಷ್ಯತಿ|

05135007c ತ್ವಂ ಚಾಪಿ ತತ್ತಥಾ ಕೃಷ್ಣ ಸರ್ವಂ ಸಂಪಾದಯಿಷ್ಯಸಿ||

ವಾರ್ಷ್ಣೇಯ! ಧರ್ಮವಿದೆಯಂತಾದರೆ ಇದು ಸತ್ಯವಾಗುತ್ತದೆ. ಕೃಷ್ಣ! ನೀನೂ ಕೂಡ ಹಾಗೆಯೇ ಎಲ್ಲವೂ ಆಗುವಂತೆ ಒದಗಿಸಿಕೊಡುತ್ತೀಯೆ.

05135008a ನಾಹಂ ತದಭ್ಯಸೂಯಾಮಿ ಯಥಾ ವಾಗಭ್ಯಭಾಷತ|

05135008c ನಮೋ ಧರ್ಮಾಯ ಮಹತೇ ಧರ್ಮೋ ಧಾರಯತಿ ಪ್ರಜಾಃ||

ಆ ಮಾತು ಆಡಿದುದನ್ನು ನಾನೂ ಕೂಡ ಪ್ರಶ್ನಿಸುವುದಿಲ್ಲ. ಮಹಾ ಧರ್ಮಕ್ಕೆ ನಮಸ್ಕರಿಸುತ್ತೇನೆ. ಧರ್ಮವು ಪ್ರಜೆಗಳನ್ನು ಪಾಲಿಸುತ್ತದೆ.

05135009a ಏತದ್ಧನಂಜಯೋ ವಾಚ್ಯೋ ನಿತ್ಯೋದ್ಯುಕ್ತೋ ವೃಕೋದರಃ|

05135009c ಯದರ್ಥಂ ಕ್ಷತ್ರಿಯಾ ಸೂತೇ ತಸ್ಯ ಕಾಲೋಽಯಮಾಗತಃ|

05135009e ನ ಹಿ ವೈರಂ ಸಮಾಸಾದ್ಯ ಸೀದಂತಿ ಪುರುಷರ್ಷಭಾಃ||

ಇದನ್ನು ಧನಂಜಯನಿಗೆ ಹೇಳು. ಇದನ್ನು ನಿತ್ಯವೂ ಉದ್ಯುಕ್ತನಾಗಿರುವ ವೃಕೋದರನಿಗೆ ಹೇಳು. “ಕ್ಷಾತ್ರಿಣಿಯು ಯಾವ ಕಾರಣಕ್ಕಾಗಿ ಹಡೆಯುತ್ತಾಳೆಯೋ ಅದರ ಕಾಲವು ಬಂದೊದಗಿದೆ. ಪುರುಷರ್ಷಭರು ವೈರವು ಎದುರಾದಾಗ ಹೇಡಿಗಳಾಗುವುದಿಲ್ಲ.”

05135010a ವಿದಿತಾ ತೇ ಸದಾ ಬುದ್ಧಿರ್ಭೀಮಸ್ಯ ನ ಸ ಶಾಮ್ಯತಿ|

05135010c ಯಾವದಂತಂ ನ ಕುರುತೇ ಶತ್ರೂಣಾಂ ಶತ್ರುಕರ್ಶನಃ||

ನಿನಗೆ ತಿಳಿದೇ ಇದೆ. ಶತ್ರುಗಳನ್ನು ಅಂತ್ಯಗೊಳಿಸುವವರೆಗೆ ಆ ಶತ್ರುಕರ್ಶನ ಭೀಮನ ಬುದ್ಧಿಯು ಶಾಂತವಾಗುವುದಿಲ್ಲ.

05135011a ಸರ್ವಧರ್ಮವಿಶೇಷಜ್ಞಾಂ ಸ್ನುಷಾಂ ಪಾಂಡೋರ್ಮಹಾತ್ಮನಃ|

05135011c ಬ್ರೂಯಾ ಮಾಧವ ಕಲ್ಯಾಣೀಂ ಕೃಷ್ಣಾಂ ಕೃಷ್ಣ ಯಶಸ್ವಿನೀಂ||

ಮಾಧವ! ಕೃಷ್ಣ! ಸರ್ವಧರ್ಮಗಳ ವಿಶೇಷತೆಯನ್ನು ತಿಳಿದುಕೊಂಡಿರುವ, ಮಹಾತ್ಮ ಪಾಂಡುವಿನ ಸೊಸೆ, ಕಲ್ಯಾಣೀ, ಯಶಸ್ವಿನೀ ಕೃಷ್ಣೆಗೆ ಇದನ್ನು ಹೇಳು:

05135012a ಯುಕ್ತಮೇತನ್ಮಹಾಭಾಗೇ ಕುಲೇ ಜಾತೇ ಯಶಸ್ವಿನಿ|

05135012c ಯನ್ಮೇ ಪುತ್ರೇಷು ಸರ್ವೇಷು ಯಥಾವತ್ತ್ವಮವರ್ತಿಥಾಃ||

“ಮಹಾಭಾಗೇ! ಯಶಸ್ವಿನೀ! ಉತ್ತಮ ಕುಲದಲ್ಲಿ ಹುಟ್ಟಿದವಳಿಗೆ ತಕ್ಕಂತೆ ನೀನು ನನ್ನ ಮಕ್ಕಳೆಲ್ಲರೊಡನೆ ವರ್ತಿಸಿದ್ದೀಯೆ.”

05135013a ಮಾದ್ರೀಪುತ್ರೌ ಚ ವಕ್ತವ್ಯೌ ಕ್ಷತ್ರಧರ್ಮರತಾವುಭೌ|

05135013c ವಿಕ್ರಮೇಣಾರ್ಜಿತಾನ್ಭೋಗಾನ್ವೃಣೀತಂ ಜೀವಿತಾದಪಿ||

ಕ್ಷತ್ರಧರ್ಮರತರಾದ ಆ ಮಾದ್ರೀಪುತ್ರರಿಬ್ಬರಿಗೂ ಹೇಳು: “ಜೀವಕ್ಕಿಂತ ವಿಕ್ರಮದಿಂದ ಗಳಿಸಿದ ಭೋಗವನ್ನು ಆರಿಸಬೇಕು.

05135014a ವಿಕ್ರಮಾಧಿಗತಾ ಹ್ಯರ್ಥಾಃ ಕ್ಷತ್ರಧರ್ಮೇಣ ಜೀವತಃ|

05135014c ಮನೋ ಮನುಷ್ಯಸ್ಯ ಸದಾ ಪ್ರೀಣಂತಿ ಪುರುಷೋತ್ತಮ||

ಪುರುಷೋತ್ತಮ! ವಿಕ್ರಮದಿಂದ ಗಳಿಸಿದ ಸಂಪತ್ತು ಕ್ಷತ್ರಧರ್ಮದಿಂದ ಜೀವಿಸುವ ಮನುಷ್ಯನ ಮನಸ್ಸನ್ನು ಸದಾ ಸಂತೋಷಗೊಳಿಸುತ್ತದೆ.

05135015a ಯಚ್ಚ ವಃ ಪ್ರೇಕ್ಷಮಾಣಾನಾಂ ಸರ್ವಧರ್ಮೋಪಚಾಯಿನೀ|

05135015c ಪಾಂಚಾಲೀ ಪರುಷಾಣ್ಯುಕ್ತಾ ಕೋ ನು ತತ್ಕ್ಷಂತುಮರ್ಹತಿ||

ನೀವು ನೋಡುತ್ತಿರುವಾಗಲೇ ಸರ್ವಧರ್ಮಗಳನ್ನೂ ಗಳಿಸಿರುವ ಪಾಂಚಾಲಿಗೆ ಗಡುಸಾಗಿ ಮಾತನಾಡಿದ ಯಾರು ತಾನೇ ಕ್ಷಮೆಗೆ ಅರ್ಹರು?

05135016a ನ ರಾಜ್ಯಹರಣಂ ದುಃಖಂ ದ್ಯೂತೇ ಚಾಪಿ ಪರಾಜಯಃ|

05135016c ಪ್ರವ್ರಾಜನಂ ಸುತಾನಾಂ ವಾ ನ ಮೇ ತದ್ದುಃಖಕಾರಣಂ||

ರಾಜ್ಯವನ್ನು ಕಳೆದುಕೊಂಡಿದ್ದುದಾಗಲೀ, ದ್ಯೂತದಲ್ಲಿ ಸೋತಿದ್ದುದೂ, ಮಕ್ಕಳ ದೂರಹೋದುದು ಇವು ಯಾವುವೂ ನನ್ನ ಈ ದುಃಖಕ್ಕೆ ಕಾರಣವಲ್ಲ.

05135017a ಯತ್ತು ಸಾ ಬೃಹತೀ ಶ್ಯಾಮಾ ಸಭಾಯಾಂ ರುದತೀ ತದಾ|

05135017c ಅಶ್ರೌಷೀತ್ಪರುಷಾ ವಾಚಸ್ತನ್ಮೇ ದುಃಖತರಂ ಮತಂ||

ಆಗ ಆ ಬೃಹತೀ ಶ್ಯಾಮೆಯು ಸಭೆಯಲ್ಲಿ ಅಳುತ್ತಾ ಆ ಮಾನಭಂಗದ ಮಾತುಗಳನ್ನು ಕೇಳಬೇಕಾಯಿತಲ್ಲ ಎನ್ನುವುದು ನನ್ನ ಈ ದುಃಖವನ್ನು ಹೆಚ್ಚಿಸಿದೆ.

05135018a ಸ್ತ್ರೀಧರ್ಮಿಣೀ ವರಾರೋಹಾ ಕ್ಷತ್ರಧರ್ಮರತಾ ಸದಾ|

05135018c ನಾಧ್ಯಗಚ್ಚತ್ತದಾ ನಾಥಂ ಕೃಷ್ಣಾ ನಾಥವತೀ ಸತೀ||

ಮುಟ್ಟಾಗಿದ್ದ, ಸದಾ ಕ್ಷತ್ರಧರ್ಮನಿರತಳಾಗಿರುವ ಆ ವರಾರೋಹೆ ಸತೀ ಕೃಷ್ಣೆಯು ನಾಥವತಿಯಾಗಿದ್ದರೂ ಅಲ್ಲಿ ಅನಾಥಳಾಗಿದ್ದಳು.”

05135019a ತಂ ವೈ ಬ್ರೂಹಿ ಮಹಾಬಾಹೋ ಸರ್ವಶಸ್ತ್ರಭೃತಾಂ ವರಂ|

05135019c ಅರ್ಜುನಂ ಪುರುಷವ್ಯಾಘ್ರಂ ದ್ರೌಪದ್ಯಾಃ ಪದವೀಂ ಚರ||

ಮಹಾಬಾಹೋ! ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಪುರುಷವ್ಯಾಘ್ರ ಅರ್ಜುನನಿಗೆ “ದ್ರೌಪದಿಯ ದಾರಿಯಲ್ಲಿ ನಡೆ!” ಎಂದು ಹೇಳು.

05135020a ವಿದಿತೌ ಹಿ ತವಾತ್ಯಂತಂ ಕ್ರುದ್ಧಾವಿವ ಯಮಾಂತಕೌ|

05135020c ಭೀಮಾರ್ಜುನೌ ನಯೇತಾಂ ಹಿ ದೇವಾನಪಿ ಪರಾಂ ಗತಿಂ||

ಅತ್ಯಂತ ಕೃದ್ಧರಾದ ಭೀಮಾರ್ಜುನರಿಬ್ಬರೂ ಯಮ ಅಂತಕನಂತೆ ದೇವತೆಗಳನ್ನೂ ಪರಾಗತಿಗೆ ಕಳುಹಿಸಬಲ್ಲರು ಎಂದು ನಿನಗೆ ತಿಳಿದೇ ಇದೆ.

05135021a ತಯೋಶ್ಚೈತದವಜ್ಞಾನಂ ಯತ್ಸಾ ಕೃಷ್ಣಾ ಸಭಾಗತಾ|

05135021c ದುಃಶಾಸನಶ್ಚ ಯದ್ಭೀಮಂ ಕಟುಕಾನ್ಯಭ್ಯಭಾಷತ|

05135021e ಪಶ್ಯತಾಂ ಕುರುವೀರಾಣಾಂ ತಚ್ಚ ಸಂಸ್ಮಾರಯೇಃ ಪುನಃ||

ದುಃಶಾಸನನು ಕೃಷ್ಣೆಯನ್ನು ಸಭೆಗೆ ಎಳೆದು ತಂದದ್ದು ಮತ್ತು ಭೀಮನಿಗೆ ಕಟುಕಾಗಿ ಮಾತನಾಡಿದುದು ಇವೆರಡರಿಂದಲೂ ಅವರು ಅಪಮಾನಿತರಾಗಿದ್ದರು. ಅವರಿಬ್ಬರಿಗೆ ಇದನ್ನು ಪುನಃ ನೆನಪಿಸಿಕೊಡು.

05135022a ಪಾಂಡವಾನ್ಕುಶಲಂ ಪೃಚ್ಚೇಃ ಸಪುತ್ರಾನ್ಕೃಷ್ಣಯಾ ಸಹ|

05135022c ಮಾಂ ಚ ಕುಶಲಿನೀಂ ಬ್ರೂಯಾಸ್ತೇಷು ಭೂಯೋ ಜನಾರ್ದನ|

05135022e ಅರಿಷ್ಟಂ ಗಚ್ಚ ಪಂಥಾನಂ ಪುತ್ರಾನ್ಮೇ ಪರಿಪಾಲಯ||

ಪುತ್ರರೊಂದಿಗೆ ಮತ್ತು ಕೃಷ್ಣೆಯೊಂದಿಗೆ ಪಾಂಡವರ ಕುಶಲವನ್ನು ಕೇಳು. ಜನಾರ್ದನ! ತಿರುಗಿ ನಾನು ಕುಶಲದಿಂದಿದ್ದೇನೆಂದು ಅವರಿಗೆ ಹೇಳು. ಹೋಗು! ನಿನ್ನ ಪ್ರಯಾಣವು ಸುಖಕರವಾಗಲಿ. ನನ್ನ ಮಕ್ಕಳನ್ನು ಪರಿಪಾಲಿಸು!””

05135023 ವೈಶಂಪಾಯನ ಉವಾಚ|

05135023a ಅಭಿವಾದ್ಯಾಥ ತಾಂ ಕೃಷ್ಣಃ ಕೃತ್ವಾ ಚಾಭಿಪ್ರದಕ್ಷಿಣಂ|

05135023c ನಿಶ್ಚಕ್ರಾಮ ಮಹಾಬಾಹುಃ ಸಿಂಹಖೇಲಗತಿಸ್ತತಃ||

ವೈಶಂಪಾಯನನು ಹೇಳಿದನು: “ಅವಳನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಮಹಾಬಾಹು ಕೃಷ್ಣನು ಸಿಂಹದ ನಡೆಯನ್ನು ನಡೆಯುತ್ತಾ ಹೊರಟನು.

05135024a ತತೋ ವಿಸರ್ಜಯಾಮಾಸ ಭೀಷ್ಮಾದೀನ್ಕುರುಪುಂಗವಾನ್|

05135024c ಆರೋಪ್ಯ ಚ ರಥೇ ಕರ್ಣಂ ಪ್ರಾಯಾತ್ಸಾತ್ಯಕಿನಾ ಸಹ||

ಆಗ ಅವನು ಭೀಷ್ಮಾದಿ ಕುರುಪುಂಗವರನ್ನು ಕಳುಹಿಸಿದನು. ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಸಾತ್ಯಕಿಯೊಂದಿಗೆ ಪ್ರಯಾಣಿಸಿದನು.

05135025a ತತಃ ಪ್ರಯಾತೇ ದಾಶಾರ್ಹೇ ಕುರವಃ ಸಂಗತಾ ಮಿಥಃ|

05135025c ಜಜಲ್ಪುರ್ಮಹದಾಶ್ಚರ್ಯಂ ಕೇಶವೇ ಪರಮಾದ್ಭುತಂ||

ದಾಶಾರ್ಹನು ಹೊರಟುಹೋಗಲು ಕುರುಗಳು ಸೇರಿಕೊಂಡು ಕೇಶವನೊಂದಿಗೆ ನಡೆದ ಪರಮಾದ್ಭುತ ಮಹದಾಶ್ಚರ್ಯದ ಕುರಿತು ಮಾತನಾಡಿಕೊಂಡರು.

05135026a ಪ್ರಮೂಢಾ ಪೃಥಿವೀ ಸರ್ವಾ ಮೃತ್ಯುಪಾಶಸಿತಾ ಕೃತಾ|

05135026c ದುರ್ಯೋಧನಸ್ಯ ಬಾಲಿಶ್ಯಾನ್ನೈತದಸ್ತೀತಿ ಚಾಬ್ರುವನ್||

“ಪ್ರಮೂಢ ಭೂಮಿಯ ಎಲ್ಲರೂ ಮೃತ್ಯುಪಾಶಕ್ಕೆ ಕಟ್ಟಲ್ಪಟ್ಟಿದ್ದಾರೆ. ದುರ್ಯೋಧನನ ಹುಡುಗಾಟದಿಂದ ಹೀಗಾಗಿದೆ!” ಎಂದು ಅವರು ಆಡಿಕೊಂಡರು.

05135027a ತತೋ ನಿರ್ಯಾಯ ನಗರಾತ್ಪ್ರಯಯೌ ಪುರುಷೋತ್ತಮಃ|

05135027c ಮಂತ್ರಯಾಮಾಸ ಚ ತದಾ ಕರ್ಣೇನ ಸುಚಿರಂ ಸಹ||

ಆಗ ನಗರದಿಂದ ಹೊರಟ ಪುರುಷೋತ್ತಮನು ಬಹಳ ಸಮಯ ಕರ್ಣನೊಂದಿಗೆ ಸಮಾಲೋಚನೆ ಮಾಡಿದನು.

05135028a ವಿಸರ್ಜಯಿತ್ವಾ ರಾಧೇಯಂ ಸರ್ವಯಾದವನಂದನಃ|

05135028c ತತೋ ಜವೇನ ಮಹತಾ ತೂರ್ಣಮಶ್ವಾನಚೋದಯತ್||

ಅನಂತರ ರಾಧೇಯನನ್ನು ಕಳುಹಿಸಿ ಸರ್ವಯಾದವನಂದನನು ತುಂಬಾ ವೇಗದಿಂದ ಹೋಗುವಂತೆ ಕುದುರೆಗಳನ್ನು ಪ್ರಚೋದಿಸಿದನು.

05135029a ತೇ ಪಿಬಂತ ಇವಾಕಾಶಂ ದಾರುಕೇಣ ಪ್ರಚೋದಿತಾಃ|

05135029c ಹಯಾ ಜಗ್ಮುರ್ಮಹಾವೇಗಾ ಮನೋಮಾರುತರಂಹಸಃ||

ದಾರುಕನಿಂದ ಪ್ರಚೋದಿತಗೊಂಡ ಕುದುರೆಗಳು ಆಕಾಶವನ್ನೇ ಕುಡಿಯುವಂತೆ ಮನಸ್ಸು-ಮಾರುತಗಳಂತೆ ಮಹಾ ವೇಗದಿಂದ ಹೋದವು.

05135030a ತೇ ವ್ಯತೀತ್ಯ ತಮಧ್ವಾನಂ ಕ್ಷಿಪ್ರಂ ಶ್ಯೇನಾ ಇವಾಶುಗಾಃ|

05135030c ಉಚ್ಚೈಃ ಸೂರ್ಯಮುಪಪ್ಲವ್ಯಂ ಶಾಂಙ್ರಧನ್ವಾನಮಾವಹನ್||

ಆ ದಾರಿಯನ್ನು ವೇಗವುಳ್ಳ ಗಿಡುಗಗಳಂತೆ ದಾಟಿ ಅವು ಆ ಶಾಂಙ್ರಧನ್ವಿಯನ್ನು ಸೂರ್ಯನು ನೆತ್ತಿಯ ಮೇಲಿರುವಾಗ ಉಪಪ್ಲವ್ಯಕ್ಕೆ ಕರೆದೊಯ್ದವು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕುಂತೀವಾಕ್ಯೇ ಪಂಚತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕುಂತೀವಾಕ್ಯದಲ್ಲಿ ನೂರಾಮೂವತ್ತೈದನೆಯ ಅಧ್ಯಾಯವು.

Image result for indian motifs"

Comments are closed.