Udyoga Parva: Chapter 117

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೭

ಗಾಲವನು ಗರುಡನಿಗೆ ಇನ್ನೂ ೨೦೦ ಕುದುರೆಗಳ ಕೊರತೆಯಿದೆ ಎಂದು ಹೇಳಲು ಗರುಡನು ಅಂಥಹ ಕುದುರೆಗಳಿರುವುದೇ ೬೦೦ ಎಂದು ಹೇಳಿ ಅವುಗಳೊಂದಿಗೆ ಮಾಧವಿಯನ್ನು ವಿಶ್ವಾಮಿತ್ರನಿಗಿತ್ತು ಗುರುದಕ್ಷಿಣೆಯನ್ನು ಪೂರ್ಣಗೊಳಿಸೆಂದು ಸೂಚಿಸುವುದು (೧-೯). ವಿಶ್ವಾಮಿತ್ರನು ಕುದುರೆಗಳನ್ನು ಮತ್ತು ಮಾಧವಿಯನ್ನು ಸ್ವೀಕರಿಸಿ ಗಾಲವನನ್ನು ಋಣಮುಕ್ತನನ್ನಾಗಿ ಮಾಡಿ, ಮಾಧವಿಯಲ್ಲಿ ಅಷ್ಟಕನೆನ್ನುವ ಪುತ್ರನನ್ನು ಪಡೆದುದು (೧೦-೧೭). ಗಾಲವನು ಮಾಧವಿಯನ್ನು ಅವಳ ತಂದೆಗೆ ಒಪ್ಪಿಸಿ ವನಕ್ಕೆ ತೆರಳಿದುದು (೧೮-೨೩).

05117001 ನಾರದ ಉವಾಚ|

05117001a ಗಾಲವಂ ವೈನತೇಯೋಽಥ ಪ್ರಹಸನ್ನಿದಮಬ್ರವೀತ್|

05117001c ದಿಷ್ಟ್ಯಾ ಕೃತಾರ್ಥಂ ಪಶ್ಯಾಮಿ ಭವಂತಮಿಹ ವೈ ದ್ವಿಜ||

ನಾರದನು ಹೇಳಿದನು: “ಗಾಲವನಿಗೆ ವೈನತೇಯನು ಮುಗುಳ್ನಕ್ಕು ಹೇಳಿದನು: “ಒಳ್ಳೆಯದಾಯಿತು ದ್ವಿಜ! ನೀನು ಕೃತಾರ್ಥನಾದುದನ್ನು ಕಾಣುತ್ತಿದ್ದೇನೆ.”

05117002a ಗಾಲವಸ್ತು ವಚಃ ಶ್ರುತ್ವಾ ವೈನತೇಯೇನ ಭಾಷಿತಂ|

05117002c ಚತುರ್ಭಾಗಾವಶಿಷ್ಟಂ ತದಾಚಖ್ಯೌ ಕಾರ್ಯಮಸ್ಯ ಹಿ||

ವೈನತೇಯನು ಹೇಳಿದುದನ್ನು ಕೇಳಿ ಗಾಲವನು ಕಾರ್ಯದ ನಾಲ್ಕನೆಯ ಒಂದು ಭಾಗವು ಇನ್ನೂ ಮಾಡುವುದಿದೆಯೆಂದು ಹೇಳಿದನು.

05117003a ಸುಪರ್ಣಸ್ತ್ವಬ್ರವೀದೇನಂ ಗಾಲವಂ ಪತತಾಂ ವರಃ|

05117003c ಪ್ರಯತ್ನಸ್ತೇ ನ ಕರ್ತವ್ಯೋ ನೈಷ ಸಂಪತ್ಸ್ಯತೇ ತವ||

ಆಗ ಪಕ್ಷಿಗಳಲ್ಲಿ ಶ್ರೇಷ್ಠ ಸುಪರ್ಣನು ಗಾಲವನಿಗೆ ಹೇಳಿದನು: “ಅದಕ್ಕೆ ಪ್ರಯತ್ನಿಸಬೇಡ! ಅದು ನಿನ್ನಿಂದ ಸಂಪೂರ್ಣವಾಗುವುದಿಲ್ಲ.

05117004a ಪುರಾ ಹಿ ಕನ್ಯಕುಬ್ಜೇ ವೈ ಗಾಧೇಃ ಸತ್ಯವತೀಂ ಸುತಾಂ|

05117004c ಭಾರ್ಯಾರ್ಥೇಽವರಯತ್ಕನ್ಯಾಮೃಚೀಕಸ್ತೇನ ಭಾಷಿತಃ||

05117005a ಏಕತಃಶ್ಯಾಮಕರ್ಣಾನಾಂ ಹಯಾನಾಂ ಚಂದ್ರವರ್ಚಸಾಂ|

05117005c ಭಗವನ್ದೀಯತಾಂ ಮಹ್ಯಂ ಸಹಸ್ರಮಿತಿ ಗಾಲವ||

ಏಕೆಂದರೆ ಗಾಲವ! ಹಿಂದೆ ಕನ್ಯಕುಬ್ಜದಲ್ಲಿ ಗಾಧಿಯು ಮಗಳು ಸತ್ಯವತಿಯನ್ನು ಪತ್ನಿಯನ್ನಾಗಿ ಋಚೀಕನು ವರಿಸುವಾಗ “ಒಂದೇ ಕಿವಿಯು ಕಪ್ಪಾಗಿರುವ ಚಂದ್ರವರ್ಚಸ ಒಂದು ಸಾವಿರ ಕುದುರೆಗಳನ್ನು ನನಗೆ ಕೊಡು” ಎಂದು ಹೇಳಿದ್ದನು.

05117006a ಋಚೀಕಸ್ತು ತಥೇತ್ಯುಕ್ತ್ವಾ ವರುಣಸ್ಯಾಲಯಂ ಗತಃ|

05117006c ಅಶ್ವತೀರ್ಥೇ ಹಯಾಽಲ್ಲಬ್ಧ್ವಾ ದತ್ತವಾನ್ಪಾರ್ಥಿವಾಯ ವೈ||

ಹಾಗೆಯೇ ಆಗಲೆಂದು ಋಚೀಕನು ವರುಣಾಲಯಕ್ಕೆ ಹೋದನು. ಅಶ್ವತೀರ್ಥದಲ್ಲಿ ಕುದುರೆಗಳನ್ನು ಪಡೆದು ಪಾರ್ಥಿವನಿಗೆ ಕೊಟ್ಟಿದ್ದನು.

05117007a ಇಷ್ಟ್ವಾ ತೇ ಪುಂಡರೀಕೇಣ ದತ್ತಾ ರಾಜ್ಞಾ ದ್ವಿಜಾತಿಷು|

05117007c ತೇಭ್ಯೋ ದ್ವೇ ದ್ವೇ ಶತೇ ಕ್ರೀತ್ವಾ ಪ್ರಾಪ್ತಾಸ್ತೇ ಪಾರ್ಥಿವೈಸ್ತದಾ||

ರಾಜನು ಪುಂಡರೀಕ ಇಷ್ಟಿಯನ್ನು ಮಾಡುವಾಗ ದ್ವಿಜರಲ್ಲಿ ಆ ಕುದುರೆಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತಿದ್ದನು. ಅವರಿಂದ ನೀನು ಹೋಗಿದ್ದ ರಾಜರು ಎರಡೆರಡು ನೂರನ್ನು ಖರೀದಿಸಿ ಪಡೆದಿದ್ದರು.

05117008a ಅಪರಾಣ್ಯಪಿ ಚತ್ವಾರಿ ಶತಾನಿ ದ್ವಿಜಸತ್ತಮ|

05117008c ನೀಯಮಾನಾನಿ ಸಂತಾರೇ ಹೃತಾನ್ಯಾಸನ್ ವಿತಸ್ತಯಾ|

05117008e ಏವಂ ನ ಶಕ್ಯಮಪ್ರಾಪ್ಯಂ ಪ್ರಾಪ್ತುಂ ಗಾಲವ ಕರ್ಹಿ ಚಿತ್||

ದ್ವಿಜಸತ್ತಮ! ಉಳಿದ ನಾಲ್ನೂರನ್ನು ತರುವಾಗ ಸೇತುವೆಯಿಂದ ವಿತಸ್ತನು ಅಪಹರಿಸಿದ್ದನು. ಹೀಗೆ ಗಾಲವ! ಅಪ್ರಾಪ್ಯವಾದುದನ್ನು ಪಡೆಯಲು ಎಂದೂ ಸಾಧ್ಯವಿಲ್ಲ.

05117009a ಇಮಾಮಶ್ವಶತಾಭ್ಯಾಂ ವೈ ದ್ವಾಭ್ಯಾಂ ತಸ್ಮೈ ನಿವೇದಯ|

05117009c ವಿಶ್ವಾಮಿತ್ರಾಯ ಧರ್ಮಾತ್ಮನ್ ಷಡ್ಭಿರಶ್ವಶತೈಃ ಸಹ|

05117009e ತತೋಽಸಿ ಗತಸಮ್ಮೋಹಃ ಕೃತಕೃತ್ಯೋ ದ್ವಿಜರ್ಷಭ||

ಧರ್ಮಾತ್ಮನ್! ನಿನ್ನಲ್ಲಿರುವ ಆರುನೂರು ಕುದುರೆಗಳೊಂದಿಗೆ, ಉಳಿದ ಇನ್ನೂರು ಕುದುರೆಗಳಿಗೆ ಬದಲಾಗಿ ಈ ಕನ್ಯೆಯನ್ನು ನೀನು ವಿಶ್ವಾಮಿತ್ರನಿಗಿತ್ತು ಕೃತಕೃತ್ಯನಾಗು. ದ್ವಿಜರ್ಷಭ! ಆಗ ನೀನು ಚಿಂತೆ ಕಳೆದುಕೊಂಡವನಾಗುತ್ತೀಯೆ.”

05117010a ಗಾಲವಸ್ತಂ ತಥೇತ್ಯುಕ್ತ್ವಾ ಸುಪರ್ಣಸಹಿತಸ್ತತಃ|

05117010c ಆದಾಯಾಶ್ವಾಂಶ್ಚ ಕನ್ಯಾಂ ಚ ವಿಶ್ವಾಮಿತ್ರಮುಪಾಗಮತ್||

ಹಾಗೆಯೇ ಆಗಲೆಂದು ಹೇಳಿ ಗಾಲವನು ಸುಪರ್ಣನ ಸಹಿತ ಆ ಕನ್ಯೆಯನ್ನೂ ಕರೆದುಕೊಂಡು ವಿಶ್ವಾಮಿತ್ರನಲ್ಲಿಗೆ ಹೋದನು.

05117011 ಗಾಲವ ಉವಾಚ|

05117011a ಅಶ್ವಾನಾಂ ಕಾಂಕ್ಷಿತಾರ್ಥಾನಾಂ ಷಡಿಮಾನಿ ಶತಾನಿ ವೈ|

05117011c ಶತದ್ವಯೇನ ಕನ್ಯೇಯಂ ಭವತಾ ಪ್ರತಿಗೃಹ್ಯತಾಂ||

ಗಾಲವನು ಹೇಳಿದನು: “ನೀನು ಕೇಳಿದಂತಹ ಆರುನೂರು ಕುದುರೆಗಳು ಮಾತ್ರ ಇವೆ. ಉಳಿದ ಇನ್ನೂರಕ್ಕೆ ಬದಲಾಗಿ ಈ ಕನ್ಯೆಯನ್ನು ಸ್ವೀಕರಿಸಬೇಕು.

05117012a ಅಸ್ಯಾಂ ರಾಜರ್ಷಿಭಿಃ ಪುತ್ರಾ ಜಾತಾ ವೈ ಧಾರ್ಮಿಕಾಸ್ತ್ರಯಃ|

05117012c ಚತುರ್ಥಂ ಜನಯತ್ವೇಕಂ ಭವಾನಪಿ ನರೋತ್ತಮ||

ಇವಳಿಂದ ಮೂವರು ಧಾರ್ಮಿಕ ರಾಜರ್ಷಿಗಳು ಪುತ್ರರನ್ನು ಪಡೆದಿದ್ದಾರೆ. ನರೋತ್ತಮ! ನಿನ್ನಿಂದ ನಾಲ್ಕನೆಯವನು ಇವಳಲ್ಲಿ ಹುಟ್ಟಲಿ.

05117013a ಪೂರ್ಣಾನ್ಯೇವಂ ಶತಾನ್ಯಷ್ಟೌ ತುರಗಾಣಾಂ ಭವಂತು ತೇ|

05117013c ಭವತೋ ಹ್ಯನೃಣೋ ಭೂತ್ವಾ ತಪಃ ಕುರ್ಯಾಂ ಯಥಾಸುಖಂ||

ಹೀಗೆ ಎಂಟು ನೂರು ಕುದುರೆಗಳು ಸಂಪೂರ್ಣವಾಗಿ ನಿನಗೆ ಸಲ್ಲಿಸಿದಂತಾದವು. ನಿನ್ನಿಂದ ಋಣಮುಕ್ತನಾಗಿ ಯಥಾಸುಖವಾಗಿ ತಪಸ್ಸನ್ನು ಮಾಡುತ್ತೇನೆ.””

05117014 ನಾರದ ಉವಾಚ|

05117014a ವಿಶ್ವಾಮಿತ್ರಸ್ತು ತಂ ದೃಷ್ಟ್ವಾ ಗಾಲವಂ ಸಹ ಪಕ್ಷಿಣಾ|

05117014c ಕನ್ಯಾಂ ಚ ತಾಂ ವರಾರೋಹಾಮಿದಮಿತ್ಯಬ್ರವೀದ್ವಚಃ||

ನಾರದನು ಹೇಳಿದನು: “ವಿಶ್ವಾಮಿತ್ರನು ಪಕ್ಷಿಯೊಂದಿಗಿರುವ ಗಾಲವನನ್ನು ಮತ್ತು ಆ ವರಾರೋಹೆ ಕನ್ಯೆಯನ್ನು ನೋಡಿ ಈ ಮಾತನ್ನಾಡಿದನು.

05117015a ಕಿಮಿಯಂ ಪೂರ್ವಮೇವೇಹ ನ ದತ್ತಾ ಮಮ ಗಾಲವ|

05117015c ಪುತ್ರಾ ಮಮೈವ ಚತ್ವಾರೋ ಭವೇಯುಃ ಕುಲಭಾವನಾಃ||

“ಗಾಲವ! ಈ ಮೊದಲೇ ಇವಳನ್ನು ನನಗೆ ಏಕೆ ಕೊಡಲಿಲ್ಲ? ನನಗೇ ನಾಲ್ಕು ಕುಲಭಾವನ ಮಕ್ಕಳು ಆಗುತ್ತಿದ್ದರಲ್ಲ!

05117016a ಪ್ರತಿಗೃಹ್ಣಾಮಿ ತೇ ಕನ್ಯಾಮೇಕಪುತ್ರಫಲಾಯ ವೈ|

05117016c ಅಶ್ವಾಶ್ಚಾಶ್ರಮಮಾಸಾದ್ಯ ತಿಷ್ಠಂತು ಮಮ ಸರ್ವಶಃ||

ಒಬ್ಬನೇ ಮಗನಿಗಾದರೂ ನಿನ್ನ ಕನ್ಯೆಯನ್ನು ಸ್ವೀಕರಿಸುತ್ತೇನೆ. ಕುದುರೆಗಳು ಎಲ್ಲವೂ ನನ್ನ ಆಶ್ರಮದಲ್ಲಿಯೇ ನೆಲೆಸಲಿ.”

05117017a ಸ ತಯಾ ರಮಮಾಣೋಽಥ ವಿಶ್ವಾಮಿತ್ರೋ ಮಹಾದ್ಯುತಿಃ|

05117017c ಆತ್ಮಜಂ ಜನಯಾಮಾಸ ಮಾಧವೀಪುತ್ರಮಷ್ಟಕಂ||

ಆಗ ಮಹಾದ್ಯುತಿ ವಿಶ್ವಾಮಿತ್ರನು ಅವಳೊಂದಿಗೆ ರಮಿಸಿದನು. ಮಾಧವಿಯಲ್ಲಿ ಮಗ ಅಷ್ಟಕನನ್ನು ಹುಟ್ಟಿಸಿದನು.

05117018a ಜಾತಮಾತ್ರಂ ಸುತಂ ತಂ ಚ ವಿಶ್ವಾಮಿತ್ರೋ ಮಹಾದ್ಯುತಿಃ|

05117018c ಸಂಯೋಜ್ಯಾರ್ಥೈಸ್ತಥಾ ಧರ್ಮೈರಶ್ವೈಸ್ತೈಃ ಸಮಯೋಜಯತ್||

ಹುಟ್ಟಿದ ಕೂಡಲೇ ಮಹಾದ್ಯುತಿ ವಿಶ್ವಾಮಿತ್ರನು ಮಗನಿಗೆ ಅರ್ಥ-ಧರ್ಮಗಳಿಂದ ಸಂಯೋಜಿಸಿದನು ಮತ್ತು ಆ ಅಶ್ವಗಳನ್ನೂ ಕೊಟ್ಟನು.

05117019a ಅಥಾಷ್ಟಕಃ ಪುರಂ ಪ್ರಾಯಾತ್ತದಾ ಸೋಮಪುರಪ್ರಭಂ|

05117019c ನಿರ್ಯಾತ್ಯ ಕನ್ಯಾಂ ಶಿಷ್ಯಾಯ ಕೌಶಿಕೋಽಪಿ ವನಂ ಯಯೌ||

ಅನಂತರ ಅಷ್ಟಕನು ಸೋಮಪುರಪ್ರಭೆಯುಳ್ಳ ಪುರವನ್ನು ಪಡೆದನು. ಕೌಶಿಕನಾದರೋ ಕನ್ಯೆಯನ್ನು ಶಿಷ್ಯನಿಗೆ ಹಿಂದಿರುಗಿಸಿ, ವನಕ್ಕೆ ತೆರಳಿದನು.

05117020a ಗಾಲವೋಽಪಿ ಸುಪರ್ಣೇನ ಸಹ ನಿರ್ಯಾತ್ಯ ದಕ್ಷಿಣಾಂ|

05117020c ಮನಸಾಭಿಪ್ರತೀತೇನ ಕನ್ಯಾಮಿದಮುವಾಚ ಹ||

ಗಾಲವನೂ ಕೂಡ ಸುಪರ್ಣನ ಜೊತೆಗೆ ಗುರು ದಕ್ಷಿಣೆಗಳನ್ನು ಪೂರೈಸಿ ಮನಸ್ಸಿನಲ್ಲಿ ತುಂಬಾ ಸಂತೋಷಗೊಂಡು ಕನ್ಯೆಗೆ ಹೀಗೆ ಹೇಳಿದನು:

05117021a ಜಾತೋ ದಾನಪತಿಃ ಪುತ್ರಸ್ತ್ವಯಾ ಶೂರಸ್ತಥಾಪರಃ|

05117021c ಸತ್ಯಧರ್ಮರತಶ್ಚಾನ್ಯೋ ಯಜ್ವಾ ಚಾಪಿ ತಥಾಪರಃ||

“ನೀನು ದಾನಪತಿಯಾಗಿರುವ ಮಗನಿಗೆ ಜನ್ಮವಿತ್ತಿದ್ದೀಯೆ. ಇನ್ನೊಬ್ಬನು ಶೂರ. ಅನ್ಯನು ಸತ್ಯಧರ್ಮ ರತ. ಇನ್ನೊಬ್ಬನು ಯಜ್ಞಗಳಲ್ಲಿ ಶ್ರೇಷ್ಠನು.

05117022a ತದಾಗಚ್ಚ ವರಾರೋಹೇ ತಾರಿತಸ್ತೇ ಪಿತಾ ಸುತೈಃ|

05117022c ಚತ್ವಾರಶ್ಚೈವ ರಾಜಾನಸ್ತಥಾಹಂ ಚ ಸುಮಧ್ಯಮೇ||

ವರಾರೋಹೇ! ಈ ಮಕ್ಕಳ ಮೂಲಕ ನೀನು ನಿನ್ನ ತಂದೆಯಲ್ಲದೇ ಆ ನಾಲ್ವರು ರಾಜರನ್ನೂ, ಮತ್ತು ನನ್ನನ್ನೂ ಉದ್ಧರಿಸಿದ್ದೀಯೆ. ಸುಮಧ್ಯಮೇ! ಹೋಗು!”

05117023a ಗಾಲವಸ್ತ್ವಭ್ಯನುಜ್ಞಾಯ ಸುಪರ್ಣಂ ಪನ್ನಗಾಶನಂ|

05117023c ಪಿತುರ್ನಿರ್ಯಾತ್ಯ ತಾಂ ಕನ್ಯಾಂ ಪ್ರಯಯೌ ವನಮೇವ ಹ||

ಗಾಲವನು ಪನ್ನಗಾಶನ ಸುಪರ್ಣನಿಗೆ ಬೀಳ್ಕೊಟ್ಟು, ಆ ಕನ್ಯೆಯನ್ನು ತಾನೇ ಅವಳ ತಂದೆಗೆ ಹಿಂದಿರುಗಿಸಿ ವನಕ್ಕೆ ತೆರಳಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಸಪ್ತದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನೇಳನೆಯ ಅಧ್ಯಾಯವು.

Related image

Comments are closed.