Udyoga Parva: Chapter 116

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೬

ಗಾಲವನು ಮಾಧವಿಯೊಂದಿಗೆ ಭೋಜನಗರದ ರಾಜ ಉಶೀನರನಲ್ಲಿ ಹೋಗಿ ಅವನಿಗೆ ಮಾಧವಿಯಲ್ಲಿ ಎರಡು ಮಕ್ಕಳನ್ನು ಪಡೆದು ಒಂದೇ ಕಿವಿಯು ಕಪ್ಪಾಗಿರುವ ೪೦೦ ಬಿಳೀ ಕುದುರೆಗಳನ್ನು ಕೊಡಬೇಕೆಂದು ಕೇಳುವುದು (೧-೧೫). ತನ್ನಲ್ಲಿ ಅಂತಹ ಇನ್ನೂರು ಕುದುರೆಗಳು ಮಾತ್ರ ಇರುವುದರಿಂದ ಮಾಧವಿಯಲ್ಲಿ ಒಬ್ಬನೇ ಪುತ್ರನನ್ನು ಪಡೆಯುತ್ತೇನೆಂದು ಹೇಳಿ ಉಶೀನರನು ಶಿಬಿಯೆಂಬ ಮಗನನ್ನು ಪಡೆದುದು (೧೬-೨೧).

05116001 ನಾರದ ಉವಾಚ|

05116001a ತಥೈವ ಸಾ ಶ್ರಿಯಂ ತ್ಯಕ್ತ್ವಾ ಕನ್ಯಾ ಭೂತ್ವಾ ಯಶಸ್ವಿನೀ|

05116001c ಮಾಧವೀ ಗಾಲವಂ ವಿಪ್ರಮನ್ವಯಾತ್ಸತ್ಯಸಂಗರಾ||

ನಾರದನು ಹೇಳಿದನು: “ಆ ಶ್ರೀಯನ್ನೂ ತೊರೆದು ಪುನಃ ಕನ್ಯೆಯಾಗಿ ಆ ಯಶಸ್ವಿನೀ ಸತ್ಯಸಂಗರೆ ಮಾಧವಿಯು ವಿಪ್ರ ಗಾಲವನನ್ನು ಅನುಸರಿಸಿದಳು.

05116002a ಗಾಲವೋ ವಿಮೃಶನ್ನೇವ ಸ್ವಕಾರ್ಯಗತಮಾನಸಃ|

05116002c ಜಗಾಮ ಭೋಜನಗರಂ ದ್ರಷ್ಟುಮೌಶೀನರಂ ನೃಪಂ||

ತನ್ನ ಕಾರ್ಯವಾಗಬೇಕೆಂದು ಬಯಸಿ ವಿಮರ್ಶೆಮಾಡಿ ಗಾಲವನು ನೃಪ ಔಶೀನರನನ್ನು ನೋಡಲು ಭೋಜನಗರಕ್ಕೆ ಹೋದನು.

05116003a ತಮುವಾಚಾಥ ಗತ್ವಾ ಸ ನೃಪತಿಂ ಸತ್ಯವಿಕ್ರಮಂ|

05116003c ಇಯಂ ಕನ್ಯಾ ಸುತೌ ದ್ವೌ ತೇ ಜನಯಿಷ್ಯತಿ ಪಾರ್ಥಿವೌ||

ಅಲ್ಲಿಗೆ ಹೋಗಿ ಅವನು ಸತ್ಯವಿಕ್ರಮಿ ನೃಪತಿಗೆ ಹೇಳಿದನು: “ಈ ಕನ್ಯೆಯು ನಿನಗೆ ಇಬ್ಬರು ಪಾರ್ಥಿವ ಸುತರನ್ನು ಜನಿಸುತ್ತಾಳೆ.

05116004a ಅಸ್ಯಾಂ ಭವಾನವಾಪ್ತಾರ್ಥೋ ಭವಿತಾ ಪ್ರೇತ್ಯ ಚೇಹ ಚ|

05116004c ಸೋಮಾರ್ಕಪ್ರತಿಸಂಕಾಶೌ ಜನಯಿತ್ವಾ ಸುತೌ ನೃಪ||

ನೃಪ! ಇವಳಲ್ಲಿ ಸೋಮಾರ್ಕಪ್ರತಿಸಂಕಾಶರಾದ ಇಬ್ಬರು ಮಕ್ಕಳನ್ನು ಪಡೆದು ನೀನು ಇಲ್ಲಿಯ ಮತ್ತು ನಂತರದ ಉದ್ದೇಶಗಳನ್ನು ಸಾಧಿಸಬಲ್ಲೆ.

05116005a ಶುಲ್ಕಂ ತು ಸರ್ವಧರ್ಮಜ್ಞಾ ಹಯಾನಾಂ ಚಂದ್ರವರ್ಚಸಾಂ|

05116005c ಏಕತಃಶ್ಯಾಮಕರ್ಣಾನಾಂ ದೇಯಂ ಮಹ್ಯಂ ಚತುಃಶತಂ||

ಸರ್ವಧರ್ಮಜ್ಞ! ಶುಲ್ಕವಾಗಿ ನೀನು ನನಗೆ ನಾಲ್ನೂರು ಚಂದ್ರವರ್ಚಸ, ಒಂದೇ ಕಿವಿಯು ಕಪ್ಪಾಗಿರುವ ಕುದುರೆಗಳನ್ನು ಕೊಡಬೇಕು.

05116006a ಗುರ್ವರ್ಥೋಽಯಂ ಸಮಾರಂಭೋ ನ ಹಯೈಃ ಕೃತ್ಯಮಸ್ತಿ ಮೇ|

05116006c ಯದಿ ಶಕ್ಯಂ ಮಹಾರಾಜ ಕ್ರಿಯತಾಂ ಮಾ ವಿಚಾರ್ಯತಾಂ||

ಗುರುವಿಗಾಗಿ ನಾನು ಈ ಕುದುರೆಗಳನ್ನು ಒಟ್ಟುಹಾಕುತ್ತಿದ್ದೇನೆ. ಮಹಾರಾಜ! ಶಕ್ಯವಾದರೆ ಮಾಡು. ವಿಚಾರಮಾಡಬೇಡ!

05116007a ಅನಪತ್ಯೋಽಸಿ ರಾಜರ್ಷೇ ಪುತ್ರೌ ಜನಯ ಪಾರ್ಥಿವ|

05116007c ಪಿತೄನ್ಪುತ್ರಪ್ಲವೇನ ತ್ವಮಾತ್ಮಾನಂ ಚೈವ ತಾರಯ||

ರಾಜರ್ಷೇ! ಮಕ್ಕಳಿಲ್ಲದವನಾಗಿದ್ದೀಯೆ. ಇಬ್ಬರು ಪುತ್ರರನ್ನು ಹುಟ್ಟಿಸು ಪಾರ್ಥಿವ! ಪುತ್ರನೆನ್ನುವ ದೋಣಿಯಿಂದ ನಿನ್ನನ್ನೂ ನಿನ್ನ ಪಿತೃಗಳನ್ನೂ ಉದ್ಧರಿಸು.

05116008a ನ ಪುತ್ರಫಲಭೋಕ್ತಾ ಹಿ ರಾಜರ್ಷೇ ಪಾತ್ಯತೇ ದಿವಃ|

05116008c ನ ಯಾತಿ ನರಕಂ ಘೋರಂ ಯತ್ರ ಗಚ್ಚಂತ್ಯನಾತ್ಮಜಾಃ||

ಏಕೆಂದರೆ ರಾಜರ್ಷೇ! ಪುತ್ರಫಲವನ್ನು ಪಡೆದವನು ದಿವದಿಂದ ಬೀಳುವುದಿಲ್ಲ ಮತ್ತು ಅನಾತ್ಮಜರು ಹೋಗುವ ಘೋರ ನರಕಕ್ಕೆ ಹೋಗುವುದಿಲ್ಲ.”

05116009a ಏತಚ್ಚಾನ್ಯಚ್ಚ ವಿವಿಧಂ ಶ್ರುತ್ವಾ ಗಾಲವಭಾಷಿತಂ|

05116009c ಉಶೀನರಃ ಪ್ರತಿವಚೋ ದದೌ ತಸ್ಯ ನರಾಧಿಪಃ||

ಈ ರೀತಿ ಮತ್ತು ಇನ್ನೂ ಇತರ ವಿಧಗಳಲ್ಲಿ ಹೇಳಿದ ಗಾಲವನ ಮಾತನ್ನು ಕೇಳಿ ನರಾಧಿಪ ಉಶೀನರನು ಅವನಿಗೆ ಪ್ರತ್ಯುತ್ತರವನ್ನಿತ್ತನು:

05116010a ಶ್ರುತವಾನಸ್ಮಿ ತೇ ವಾಕ್ಯಂ ಯಥಾ ವದಸಿ ಗಾಲವ|

05116010c ವಿಧಿಸ್ತು ಬಲವಾನ್ಬ್ರಹ್ಮನ್ಪ್ರವಣಂ ಹಿ ಮನೋ ಮಮ||

“ಗಾಲವ! ನೀನು ಮಾತನಾಡಿದ್ದುದನ್ನು ನಾನು ಕೇಳಿದ್ದೇನೆ. ಏಕೆಂದರೆ ಬ್ರಹ್ಮನ್! ಯಾವುದರಲ್ಲಿ ನನ್ನ ಮನಸ್ಸು ಬಯಸುತ್ತಿದೆಯೋ ಅಲ್ಲಿ ವಿಧಿಯು ಬಲವಾದುದು.

05116011a ಶತೇ ದ್ವೇ ತು ಮಮಾಶ್ವಾನಾಮೀದೃಶಾನಾಂ ದ್ವಿಜೋತ್ತಮ|

05116011c ಇತರೇಷಾಂ ಸಹಸ್ರಾಣಿ ಸುಬಹೂನಿ ಚರಂತಿ ಮೇ||

ದ್ವಿಜೋತ್ತಮ! ನನ್ನಲ್ಲಿ ಅಂಥಹ ಇನ್ನೂರು ಕುದುರೆಗಳು ಮಾತ್ರ ಇವೆ. ಇತರ ಬಹಳಷ್ಟು ಸಹಸ್ರ ಸಂಖ್ಯೆಯಲ್ಲಿ ನನ್ನಲ್ಲಿ ನಡೆದಾಡುತ್ತಿವೆ.

05116012a ಅಹಮಪ್ಯೇಕಮೇವಾಸ್ಯಾಂ ಜನಯಿಷ್ಯಾಮಿ ಗಾಲವ|

05116012c ಪುತ್ರಂ ದ್ವಿಜ ಗತಂ ಮಾರ್ಗಂ ಗಮಿಷ್ಯಾಮಿ ಪರೈರಹಂ||

ಗಾಲವ! ದ್ವಿಜ! ನಾನೂ ಕೂಡ ಇವಳಲ್ಲಿ ಓರ್ವನೇ ಮಗನನ್ನು ಪಡೆದು ಇತರರು ಹೋದ ದಾರಿಯಲ್ಲಿಯೇ ಹೋಗುತ್ತೇನೆ.

05116013a ಮೂಲ್ಯೇನಾಪಿ ಸಮಂ ಕುರ್ಯಾಂ ತವಾಹಂ ದ್ವಿಜಸತ್ತಮ|

05116013c ಪೌರಜಾನಪದಾರ್ಥಂ ತು ಮಮಾರ್ಥೋ ನಾತ್ಮಭೋಗತಃ||

ದ್ವಿಜಸತ್ತಮ! ನಾನು ನಿನಗೆ ಅವರಿಗೆ ಸಮನಾದ ಮೂಲ್ಯವನ್ನೂ ಕೊಡುತ್ತೇನೆ. ನನ್ನ ಸಂಪತ್ತು ಪೌರಜನರಿಗಾಗಿ ಇದೆಯೇ ಹೊರತು ನನಗೆ ಭೋಗಿಸಲಿಕ್ಕಲ್ಲ.

05116014a ಕಾಮತೋ ಹಿ ಧನಂ ರಾಜಾ ಪಾರಕ್ಯಂ ಯಃ ಪ್ರಯಚ್ಚತಿ|

05116014c ನ ಸ ಧರ್ಮೇಣ ಧರ್ಮಾತ್ಮನ್ಯುಜ್ಯತೇ ಯಶಸಾ ನ ಚ||

ಧರ್ಮಾತ್ಮ! ಪರರ ಧನವನ್ನು ತನ್ನ ಕಾಮಕ್ಕಾಗಿ ಕಳೆಯುವ ರಾಜನು ಧರ್ಮವನ್ನೂ ಯಶಸ್ಸನ್ನೂ ಸಾಧಿಸುವುದಿಲ್ಲ.

05116015a ಸೋಽಹಂ ಪ್ರತಿಗ್ರಹೀಷ್ಯಾಮಿ ದದಾತ್ವೇತಾಂ ಭವಾನ್ಮಮ|

05116015c ಕುಮಾರೀಂ ದೇವಗರ್ಭಾಭಾಮೇಕಪುತ್ರಭವಾಯ ಮೇ||

ಆದುದರಿಂದ ಅವಳನ್ನು ನೀನು ನನಗೆ ಕೊಡು. ಸ್ವೀಕರಿಸುತ್ತೇನೆ. ಈ ಕುಮಾರಿಯಲ್ಲಿ ನನಗೆ ದೇವಗರ್ಭಾಭನಾದ ಓರ್ವ ಪುತ್ರನು ಆಗಲಿ.

05116016a ತಥಾ ತು ಬಹುಕಲ್ಯಾಣಮುಕ್ತವಂತಂ ನರಾಧಿಪಂ|

05116016c ಉಶೀನರಂ ದ್ವಿಜಶ್ರೇಷ್ಠೋ ಗಾಲವಃ ಪ್ರತ್ಯಪೂಜಯತ್||

ಆಗ ಬಹಳ ಕಲ್ಯಾಣಕರವಾದುದನ್ನು ಹೇಳಿದ ಆ ನರಾಧಿಪ ಉಶೀನರನನ್ನು ದ್ವಿಜಶ್ರೇಷ್ಠ ಗಾಲವನು ಗೌರವಿಸಿದನು.

05116017a ಉಶೀನರಂ ಪ್ರತಿಗ್ರಾಹ್ಯ ಗಾಲವಃ ಪ್ರಯಯೌ ವನಂ|

05116017c ರೇಮೇ ಸ ತಾಂ ಸಮಾಸಾದ್ಯ ಕೃತಪುಣ್ಯ ಇವ ಶ್ರಿಯಂ||

05116018a ಕಂದರೇಷು ಚ ಶೈಲಾನಾಂ ನದೀನಾಂ ನಿರ್ಝರೇಷು ಚ|

05116018c ಉದ್ಯಾನೇಷು ವಿಚಿತ್ರೇಷು ವನೇಷೂಪವನೇಷು ಚ||

05116019a ಹರ್ಮ್ಯೇಷು ರಮಣೀಯೇಷು ಪ್ರಾಸಾದಶಿಖರೇಷು ಚ|

05116019c ವಾತಾಯನವಿಮಾನೇಷು ತಥಾ ಗರ್ಭಗೃಹೇಷು ಚ||

ಅವಳನ್ನು ಉಶೀನರನಿಗೆ ಕೊಟ್ಟು ಗಾಲವನು ವನಕ್ಕೆ ನಡೆದನು. ಅವನು ಅವಳನ್ನು ಶ್ರೀಯನ್ನು ಕೃತಪುಣ್ಯನು ಭೋಗಿಸುವಂತೆ ಕಂದರಗಳಲ್ಲಿ, ಶೈಲಗಳಲ್ಲಿ, ನದಿಗಳಲ್ಲಿ, ನಿರ್ಝರಿಗಳಲ್ಲಿ, ಉದ್ಯಾನಗಳಲ್ಲಿ, ವಿಚಿತ್ರ ವನ-ಉಪವನಗಳಲ್ಲಿ, ಹರ್ಮಿಗಳಲ್ಲಿ, ರಮಣೀಯ ಪ್ರಾಸಾದಶಿಖರಗಳಲ್ಲಿ, ವಾತಾಯನ ವಿಮಾನಗಳಲ್ಲಿ, ಗರ್ಭಗೃಹಗಳಲ್ಲಿ ರಮಿಸಿದನು.

05116020a ತತೋಽಸ್ಯ ಸಮಯೇ ಜಜ್ಞೇ ಪುತ್ರೋ ಬಾಲರವಿಪ್ರಭಃ|

05116020c ಶಿಬಿರ್ನಾಮ್ನಾಭಿವಿಖ್ಯಾತೋ ಯಃ ಸ ಪಾರ್ಥಿವಸತ್ತಮಃ||

ಆಗ ಕಾಲದಲ್ಲಿ ಅವನಿಗೆ ಬಾಲರವಿಯ ಪ್ರಭೆಯುಳ್ಳ ಪುತ್ರನು ಜನಿಸಿದನು. ಅವನೇ ಪಾರ್ಥಿವ ಸತ್ತಮ ಶಿಬಿಯೆಂಬ ಹೆಸರಿನಿಂದ ವಿಖ್ಯಾತನಾದನು.

05116021a ಉಪಸ್ಥಾಯ ಸ ತಂ ವಿಪ್ರೋ ಗಾಲವಃ ಪ್ರತಿಗೃಹ್ಯ ಚ|

05116021c ಕನ್ಯಾಂ ಪ್ರಯಾತಸ್ತಾಂ ರಾಜನ್ದೃಷ್ಟವಾನ್ವಿನತಾತ್ಮಜಂ||

ರಾಜನ್! ಅನಂತರ ವಿಪ್ರ ಗಾಲವನು ಅವನಿಂದ ಕನ್ಯೆಯನ್ನು ಹಿಂದೆ ಪಡೆದು ವಿನತಾತ್ಮಜನನ್ನು ನೋಡಲು ಹೋದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಷಡ್‌ದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನಾರನೆಯ ಅಧ್ಯಾಯವು.

Related image

Comments are closed.