Udyoga Parva: Chapter 114

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೪

ಮಾಧವಿಯನ್ನು ಬಯಸಿ ಶುಲ್ಕವೇನೆಂದು ತಿಳಿದ ಹರ್ಯಶ್ವನು ತನ್ನಲ್ಲಿ ಗಾಲವನಿಗೆ ಬೇಕಾದಂತಹ ಕೇವಲ ೨೦೦ ಕುದುರೆಗಳಿವೆಯೆಂದೂ, ಮಾಧವಿಯಲ್ಲಿ ಒಂದೇ ಮಗನನ್ನು ಪಡೆದು ಅವಳನ್ನು ಹಿಂದಿರುಗಿಸುತ್ತೇನೆಂದೂ ಸೂಚಿಸಿದುದು (೧-೯). ಆಗ ಮಾಧವಿಯು ಹೆರಿಗೆಯಾದ ನಂತರವೂ ಪುನಃ ಕನ್ಯೆಯಾಗುವಂತೆ ತನಗಿರುವ ವರವನ್ನು ತಿಳಿಸಿ, ಅವಳು ನಾಲ್ಕು ರಾಜರಿಗೆ ಮಕ್ಕಳನ್ನಿತ್ತು ೨೦೦-೨೦೦ ರಂತೆ ೮೦೦ ಕುದುರೆಗಳನ್ನು ಸಂಪಾದಿಸಬಲ್ಲೆವೆಂದು ಗಾಲವನಿಗೆ ಹೇಳಿದುದು (೧೦-೧೩). ಹರ್ಯಶ್ವನು ಮಾಧವಿಯಲ್ಲಿ ವಸುಮನನೆಂಬ ಮಗನನ್ನು ಪಡೆಯಲು ಗಾಲವನು ಕುದುರೆಗಳನ್ನೂ ಮಾಧವಿಯನ್ನೂ ಸ್ವೀಕರಿಸಿ, ಅವಳೊಂದಿಗೆ ಕಾಶಿರಾಜ ದಿವೋದಾಸನಲ್ಲಿಗೆ ಹೋದುದು (೧೪-೨೨).

05114001 ನಾರದ ಉವಾಚ|

05114001a ಹರ್ಯಶ್ವಸ್ತ್ವಬ್ರವೀದ್ರಾಜಾ ವಿಚಿಂತ್ಯ ಬಹುಧಾ ತತಃ|

05114001c ದೀರ್ಘಮುಷ್ಣಂ ಚ ನಿಃಶ್ವ್ವಸ್ಯ ಪ್ರಜಾಹೇತೋರ್ನೃಪೋತ್ತಮಃ||

ನಾರದನು ಹೇಳಿದನು: “ಬಹಳಷ್ಟು ಚಿಂತೆಮಾಡಿ, ದೀರ್ಘ, ಬಿಸಿಯಾದ, ನಿಟ್ಟುಸಿರನ್ನು ಬಿಡುತ್ತಾ, ಮಕ್ಕಳನ್ನು ಪಡೆಯಲೋಸುಗ, ಆ ನೃಪೋತ್ತಮ ರಾಜಾ ಹರ್ಯಶ್ವನು ಹೇಳಿದನು:

05114002a ಉನ್ನತೇಷೂನ್ನತಾ ಷಟ್ಸು ಸೂಕ್ಷ್ಮಾ ಸೂಕ್ಷ್ಮೇಷು ಸಪ್ತಸು|

05114002c ಗಂಭೀರಾ ತ್ರಿಷು ಗಂಭೀರೇಷ್ವಿಯಂ ರಕ್ತಾ ಚ ಪಂಚಸು||

“ಉನ್ನತವಾಗಿರಬೇಕಾದ ಆ ಆರೂ ಇವಳಲ್ಲಿ ಉನ್ನತವಾಗಿವೆ. ಸೂಕ್ಷ್ಮವಾಗಿರಬೇಕಾದ ಏಳೂ ಸೂಕ್ಷ್ಮವಾಗಿವೆ. ಗಂಭೀರವಾಗಿರಬೇಕಾದ ಮೂರೂ ಗಂಭೀರವಾಗಿವೆ ಮತ್ತು ಐದು ಕೆಂಪಾಗಿವೆ.

05114003a ಬಹುದೇವಾಸುರಾಲೋಕಾ ಬಹುಗಂಧರ್ವದರ್ಶನಾ|

05114003c ಬಹುಲಕ್ಷಣಸಂಪನ್ನಾ ಬಹುಪ್ರಸವಧಾರಿಣೀ||

ಇವಳು ದೇವಾಸುರಲೋಕದವರಿಗೂ ಗಂಧರ್ವರಿಗೂ ಸುಂದರಿಯಾಗಿ ಕಾಣುತ್ತಾಳೆ. ಬಹುಲಕ್ಷಣ ಸಂಪನ್ನೆಯಾಗಿದ್ದಾಳೆ. ಬಹಳ ಮಕ್ಕಳನ್ನೂ ಹಡೆಯುವಂತಿದ್ದಾಳೆ.

05114004a ಸಮರ್ಥೇಯಂ ಜನಯಿತುಂ ಚಕ್ರವರ್ತಿನಮಾತ್ಮಜಂ|

05114004c ಬ್ರೂಹಿ ಶುಲ್ಕಂ ದ್ವಿಜಶ್ರೇಷ್ಠ ಸಮೀಕ್ಷ್ಯ ವಿಭವಂ ಮಮ||

ಇವಳು ನನ್ನಿಂದ ಹುಟ್ಟುವ ಚಕ್ರವರ್ತಿಗೆ ಜನ್ಮನೀಡಲು ಸಮರ್ಥಳಾಗಿದ್ದಾಳೆ. ದ್ವಿಜಶ್ರೇಷ್ಠ! ನನ್ನ ಸಂಪತ್ತನ್ನು ನೋಡಿಕೊಂಡು ಶುಲ್ಕವೇನೆಂದು ಹೇಳು.”

05114005 ಗಾಲವ ಉವಾಚ|

05114005a ಏಕತಃಶ್ಯಾಮಕರ್ಣಾನಾಂ ಶತಾನ್ಯಷ್ಟೌ ದದಸ್ವ ಮೇ|

05114005c ಹಯಾನಾಂ ಚಂದ್ರಶುಭ್ರಾಣಾಂ ದೇಶಜಾನಾಂ ವಪುಷ್ಮತಾಂ||

ಗಾಲವನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ, ಚಂದ್ರನಂತೆ ಬಿಳಿಯಾಗಿರುವ, ಉತ್ತಮ ಪ್ರದೇಶದಲ್ಲಿ ಹುಟ್ಟಿದ ಸುಂದರ ಎಂಟುನೂರು ಕುದುರೆಗಳನ್ನು ನನಗೆ ಕೊಡು.

05114006a ತತಸ್ತವ ಭವಿತ್ರೀಯಂ ಪುತ್ರಾಣಾಂ ಜನನೀ ಶುಭಾ|

05114006c ಅರಣೀವ ಹುತಾಶಾನಾಂ ಯೋನಿರಾಯತಲೋಚನಾ||

ಆಗ ಹುತಾಶನನ ಯೋನಿ ಅರಣಿಯಂತಿರುವ ಈ ಆಯತಲೋಚನೆ ಶುಭೆಯು ನಿನ್ನ ಪುತ್ರರ ಜನನಿಯಾಗುತ್ತಾಳೆ.””

05114007 ನಾರದ ಉವಾಚ|

05114007a ಏತಚ್ಚ್ರುತ್ವಾ ವಚೋ ರಾಜಾ ಹರ್ಯಶ್ವಃ ಕಾಮಮೋಹಿತಃ|

05114007c ಉವಾಚ ಗಾಲವಂ ದೀನೋ ರಾಜರ್ಷಿರ್ಋಷಿಸತ್ತಮಂ||

ನಾರದನು ಹೇಳಿದನು: “ಈ ಮಾತುಗಳನ್ನು ಕೇಳಿದ ಕಾಮಮೋಹಿತ ರಾಜರ್ಷಿ ರಾಜಾ ಹರ್ಯಶ್ವನು ದೀನನಾಗಿ ಗಾಲವನಿಗೆ ಹೇಳಿದನು:

05114008a ದ್ವೇ ಮೇ ಶತೇ ಸಂನ್ನಿಹಿತೇ ಹಯಾನಾಂ ಯದ್ವಿಧಾಸ್ತವ|

05114008c ಏಷ್ಟವ್ಯಾಃ ಶತಶಸ್ತ್ವನ್ಯೇ ಚರಂತಿ ಮಮ ವಾಜಿನಃ||

“ನೀನು ಬಯಸುವಂತಹ ಎರಡೇ ನೂರು ಕುದುರೆಗಳು ನನ್ನ ಹತ್ತಿರ ಇವೆ. ಇಷ್ಟಿಗಳಲ್ಲಿ ಬಳಸಬಹುದಾದ ಇತರ ಇನ್ನೂ ನೂರಾರು ಕುದುರೆಗಳು ನನ್ನ ಬಳಿ ಓಡಾಡುತ್ತಿವೆ.

05114009a ಸೋಽಹಮೇಕಮಪತ್ಯಂ ವೈ ಜನಯಿಷ್ಯಾಮಿ ಗಾಲವ|

05114009c ಅಸ್ಯಾಮೇತಂ ಭವಾನ್ಕಾಮಂ ಸಂಪಾದಯತು ಮೇ ವರಂ||

ಗಾಲವ! ನಾನು ಇವಳಲ್ಲಿ ಒಬ್ಬನೇ ಮಗನನ್ನು ಹುಟ್ಟಿಸುತ್ತೇನೆ. ನನಗೆ ಈ ವರವನ್ನು ನೀಡಲು ನೀನು ಮನಸ್ಸುಮಾಡಬೇಕು.”

05114010a ಏತಚ್ಚ್ರುತ್ವಾ ತು ಸಾ ಕನ್ಯಾ ಗಾಲವಂ ವಾಕ್ಯಮಬ್ರವೀತ್|

05114010c ಮಮ ದತ್ತೋ ವರಃ ಕಶ್ಚಿತ್ಕೇನ ಚಿದ್ಬ್ರಹ್ಮವಾದಿನಾ||

ಇದನ್ನು ಕೇಳಿದ ಆ ಕನ್ಯೆಯು ಗಾಲವನಿಗೆ ಹೇಳಿದಳು: “ಒಮ್ಮೆ ನನಗೆ ಯಾರೋ ಒಬ್ಬ ಬ್ರಹ್ಮವಾದಿಯು ವರವನ್ನು ನೀಡಿದ್ದನು.

05114011a ಪ್ರಸೂತ್ಯಂತೇ ಪ್ರಸೂತ್ಯಂತೇ ಕನ್ಯೈವ ತ್ವಂ ಭವಿಷ್ಯಸಿ|

05114011c ಸ ತ್ವಂ ದದಸ್ವ ಮಾಂ ರಾಜ್ಞೇ ಪ್ರತಿಗೃಹ್ಯ ಹಯೋತ್ತಮಾನ್||

“ಪ್ರತಿ ಹೆರಿಗೆಯ ನಂತರ ನೀನು ಕನ್ಯೆಯಾಗಿಯೇ ಉಳಿಯುತ್ತೀಯೆ!” ಎಂದು. ಆದುದರಿಂದ ನನ್ನನ್ನು ಈ ರಾಜನಿಗೆ ಕೊಟ್ಟು ನೀನು ಆ ಉತ್ತಮ ಕುದುರೆಗಳನ್ನು ಪಡೆ.

05114012a ನೃಪೇಭ್ಯೋ ಹಿ ಚತುರ್ಭ್ಯಸ್ತೇ ಪೂರ್ಣಾನ್ಯಷ್ಟೌ ಶತಾನಿ ವೈ|

05114012c ಭವಿಷ್ಯಂತಿ ತಥಾ ಪುತ್ರಾ ಮಮ ಚತ್ವಾರ ಏವ ಚ||

ಹೀಗೆ ನಾಲ್ವರು ನೃಪರಿಂದ ಸಂಪೂರ್ಣವಾಗಿ ಎಂಟುನೂರು ಕುದುರೆಗಳನ್ನು ಪಡೆಯಬಹುದು. ನನಗೂ ಕೂಡ ನಾಲ್ವರು ಮಕ್ಕಳಾದಂತೆ ಆಗುತ್ತದೆ.

05114013a ಕ್ರಿಯತಾಂ ಮಮ ಸಂಹಾರೋ ಗುರ್ವರ್ಥಂ ದ್ವಿಜಸತ್ತಮ|

05114013c ಏಷಾ ತಾವನ್ಮಮ ಪ್ರಜ್ಞಾ ಯಥಾ ವಾ ಮನ್ಯಸೇ ದ್ವಿಜ||

ದ್ವಿಜಸತ್ತಮ! ಹೀಗೆ ನನ್ನನ್ನು ಬಳಸಿ ನಿನ್ನ ಗುರುವಿಗೆ ಬೇಕಾದುದನ್ನು ಸಂಗ್ರಹಿಸಿದಂತಾಗುತ್ತದೆ. ಹೀಗೆ ಮಾಡಬಹುದೆಂದು ನನಗನ್ನಿಸುತ್ತದೆ. ಆದರೆ ದ್ವಿಜ! ನಿನಗೆ ಅನ್ನಿಸಿದ ಹಾಗೆ ಮಾಡು.”

05114014a ಏವಮುಕ್ತಸ್ತು ಸ ಮುನಿಃ ಕನ್ಯಯಾ ಗಾಲವಸ್ತದಾ|

05114014c ಹರ್ಯಶ್ವಂ ಪೃಥಿವೀಪಾಲಮಿದಂ ವಚನಮಬ್ರವೀತ್||

ಕನ್ಯೆಯು ಈ ರೀತಿ ಹೇಳಲು ಮುನಿ ಗಾಲವನು ಪೃಥಿವೀಪಾಲ ಹರ್ಯಶ್ವನಿಗೆ ಈ ಮಾತನ್ನಾಡಿದನು:

05114015a ಇಯಂ ಕನ್ಯಾ ನರಶ್ರೇಷ್ಠ ಹರ್ಯಶ್ವ ಪ್ರತಿಗೃಹ್ಯತಾಂ|

05114015c ಚತುರ್ಭಾಗೇನ ಶುಲ್ಕಸ್ಯ ಜನಯಸ್ವೈಕಮಾತ್ಮಜಂ||

“ನರಶ್ರೇಷ್ಠ! ಹರ್ಯಶ್ವ! ಶುಲ್ಕದ ನಾಲ್ಕನೆಯ ಒಂದು ಭಾಗವನ್ನು ಕೊಟ್ಟು ಇವಳನ್ನು ಸ್ವೀಕರಿಸು. ಇವಳಿಂದ ಒಬ್ಬನೇ ಮಗನನ್ನು ಹುಟ್ಟಿಸು.”

05114016a ಪ್ರತಿಗೃಹ್ಯ ಸ ತಾಂ ಕನ್ಯಾಂ ಗಾಲವಂ ಪ್ರತಿನಂದ್ಯ ಚ|

05114016c ಸಮಯೇ ದೇಶಕಾಲೇ ಚ ಲಬ್ಧವಾನ್ಸುತಮೀಪ್ಸಿತಂ||

ಗಾಲವನನ್ನು ಪೂಜಿಸಿ, ಆ ಕನ್ಯೆಯನ್ನು ಸ್ವೀಕರಿಸಿ, ಅವನು ದೇಶಕಾಲದಲ್ಲಿ ಒಪ್ಪಂದದಂತೆ ತನಗಿಷ್ಟನಾದ ಮಗನನ್ನು ಪಡೆದನು.

05114017a ತತೋ ವಸುಮನಾ ನಾಮ ವಸುಭ್ಯೋ ವಸುಮತ್ತರಃ|

05114017c ವಸುಪ್ರಖ್ಯೋ ನರಪತಿಃ ಸ ಬಭೂವ ವಸುಪ್ರದಃ||

ಸಂಪತ್ತಿರುವವರಲ್ಲೆಲ್ಲ ಅಧಿಕ ಸಂಪತ್ತುಳ್ಳವನಾಗಿ, ವಸುವಿನಂತೆ ತೋರುವ ಅವನು ವಸುಮನಾ ಎಂಬ ಹೆಸರಿನ, ಸಂಪತ್ತನ್ನು ನೀಡುವ, ನರಪತಿಯಾದನು.

05114018a ಅಥ ಕಾಲೇ ಪುನರ್ಧೀಮಾನ್ಗಾಲವಃ ಪ್ರತ್ಯುಪಸ್ಥಿತಃ|

05114018c ಉಪಸಂಗಮ್ಯ ಚೋವಾಚ ಹರ್ಯಶ್ವಂ ಪ್ರೀತಿಮಾನಸಂ||

ಅನಂತರ ಕಾಲಾಂತರದಲ್ಲಿ ಧೀಮಾನ್ ಗಾಲವನು ಮರಳಿ ಬಂದನು. ಸಂತೋಷದಿಂದಿದ್ದ ಹರ್ಯಶ್ವನನ್ನು ಭೇಟಿಮಾಡಿ ಹೇಳಿದನು:

05114019a ಜಾತೋ ನೃಪ ಸುತಸ್ತೇಽಯಂ ಬಾಲಭಾಸ್ಕರಸಮ್ನಿಭಃ|

05114019c ಕಾಲೋ ಗಂತುಂ ನರಶ್ರೇಷ್ಠ ಭಿಕ್ಷಾರ್ಥಮಪರಂ ನೃಪಂ||

“ನೃಪ! ನಿನಗೆ ಈ ಭಾಸ್ಕರ ಸನ್ನಿಭ ಮಗನು ಜನಿಸಿದ್ದಾನೆ. ನರಶ್ರೇಷ್ಠ! ಬೇರೆ ನೃಪರಲ್ಲಿಗೆ ಭಿಕ್ಷೆಗೆ ಹೋಗುವ ಸಮಯವು ಬಂದಿದೆ.”

05114020a ಹರ್ಯಶ್ವಃ ಸತ್ಯವಚನೇ ಸ್ಥಿತಃ ಸ್ಥಿತ್ವಾ ಚ ಪೌರುಷೇ|

05114020c ದುರ್ಲಭತ್ವಾದ್ಧಯಾನಾಂ ಚ ಪ್ರದದೌ ಮಾಧವೀಂ ಪುನಃ||

ಸತ್ಯವಚನದಲ್ಲಿ ಸ್ಥಿತನಾಗಿದ್ದ, ಪೌರುಷದಲ್ಲಿ ನಿಂತಿದ್ದ ಹರ್ಯಶ್ವನು ಸಂಪೂರ್ಣ ಶುಲ್ಕವು ತನ್ನಲ್ಲಿ ದುರ್ಲಭವೆಂದು ಮಾಧವಿಯನ್ನು ಮರಳಿ ಕೊಟ್ಟನು.

05114021a ಮಾಧವೀ ಚ ಪುನರ್ದೀಪ್ತಾಂ ಪರಿತ್ಯಜ್ಯ ನೃಪಶ್ರಿಯಂ|

05114021c ಕುಮಾರೀ ಕಾಮತೋ ಭೂತ್ವಾ ಗಾಲವಂ ಪೃಷ್ಠತೋಽನ್ವಗಾತ್||

ಮಾಧವಿಯಾದರೋ ಆ ನೃಪನ ಬೆಳಗುತ್ತಿದ್ದ ಶ್ರೀಯನ್ನು ಪರಿತ್ಯಜಿಸಿ ಪುನಃ ಕಾಮಿಸುವ ಕುಮಾರಿಯಾಗಿ ಗಾಲವನನ್ನು ಹಿಂಬಾಲಿಸಿದಳು.

05114022a ತ್ವಯ್ಯೇವ ತಾವತ್ತಿಷ್ಠಂತು ಹಯಾ ಇತ್ಯುಕ್ತವಾನ್ದ್ವಿಜಃ|

05114022c ಪ್ರಯಯೌ ಕನ್ಯಯಾ ಸಾರ್ಧಂ ದಿವೋದಾಸಂ ಪ್ರಜೇಶ್ವರಂ||

“ಈ ಕುದುರೆಗಳು ನಿನ್ನಲ್ಲಿಯೇ ಇರಲಿ!” ಎಂದು ಹೇಳಿ ದ್ವಿಜನು ಕನ್ಯೆಯೊಡನೆ ಪ್ರಜೇಶ್ವರ ದಿವೋದಾಸನಲ್ಲಿಗೆ ಪ್ರಯಾಣಿಸಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಚತುರ್ದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನಾಲ್ಕನೆಯ ಅಧ್ಯಾಯವು.

Related image

Comments are closed.