Udyoga Parva: Chapter 111

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೧

ಋಷಭ ಪರ್ವತದಲ್ಲಿದ್ದ ಬ್ರಾಹ್ಮಿಣಿ ಶಾಂಡಿಲಿಯು ನೀಡಿದ ಆಹಾರವನ್ನು ಸೇವಿಸಿ ವಿಶ್ರಾಂತಿಪಡೆಯುತ್ತಿರಲು, ಅವಳನ್ನು ಎತ್ತಿಕೊಂಡು ಹೋಗಲು ಯೋಚಿಸಿದ ಗರುಡನು ಅವಳ ಶಾಪದಿಂದ ರೆಕ್ಕೆಗಳನ್ನು ಕಳೆದುಕೊಂಡಿದುದು (೧-೧೧). ಅವಳಿಂದ ಕ್ಷಮೆಯನ್ನು ಮತ್ತು ರೆಕ್ಕೆಗಳನ್ನು ಪಡೆದು ಹಿಂದಿರುಗುವಾಗ ವಿಶ್ವಾಮಿತ್ರನು ಗಾಲವನಿಗೆ ಗುರುದಕ್ಷಿಣೆಯ ಕುರಿತು ನೆನಪಿಸಿಕೊಡುವುದು (೧೨-೨೩).

05111001 ನಾರದ ಉವಾಚ|

05111001a ಋಷಭಸ್ಯ ತತಃ ಶೃಂಗೇ ನಿಪತ್ಯ ದ್ವಿಜಪಕ್ಷಿಣೌ|

05111001c ಶಾಂಡಿಲೀಂ ಬ್ರಾಹ್ಮಣೀಂ ತತ್ರ ದದೃಶಾತೇ ತಪೋನ್ವಿತಾಂ||

ನಾರದನು ಹೇಳಿದನು: “ದ್ವಿಜ-ಪಕ್ಷಿಗಳಿಬ್ಬರೂ ಋಷಭದ ಶಿಖರದ ಮೇಲೆ ಇಳಿದು ಅಲ್ಲಿ ತಪೋನ್ವಿತೆ ಬ್ರಾಹ್ಮಣೀ ಶಾಂಡಲಿಯನ್ನು ಕಂಡರು.

05111002a ಅಭಿವಾದ್ಯ ಸುಪರ್ಣಸ್ತು ಗಾಲವಶ್ಚಾಭಿಪೂಜ್ಯ ತಾಂ|

05111002c ತಯಾ ಚ ಸ್ವಾಗತೇನೋಕ್ತೌ ವಿಷ್ಟರೇ ಸಮ್ನಿಷೀದತುಃ||

ಸುಪರ್ಣನು ಅಭಿವಂದಿಸಿದನು. ಗಾಲವನೂ ಅವಳನ್ನು ಪೂಜಿಸಿದನು. ಅವಳೂ ಕೂಡ “ಸ್ವಾಗತ!” ಎನ್ನಲು ಹರಡಿದ್ದ ದರ್ಬೆಗಳ ಮೇಲೆ ಅವರು ಕುಳಿತುಕೊಂಡರು.

05111003a ಸಿದ್ಧಮನ್ನಂ ತಯಾ ಕ್ಷಿಪ್ರಂ ಬಲಿಮಂತ್ರೋಪಬೃಂಹಿತಂ|

05111003c ಭುಕ್ತ್ವಾ ತೃಪ್ತಾವುಭೌ ಭೂಮೌ ಸುಪ್ತೌ ತಾವನ್ನಮೋಹಿತೌ||

ಬೇಗನೇ ಬಲಿ-ಮಂತ್ರಗಳಿಂದ ಕೂಡಿಸಿ ಸಿದ್ಧಪಡಿಸಲ್ಪಟ್ಟ ಅನ್ನವನ್ನು ಊಟಮಾಡಿ ಅವರಿಬ್ಬರೂ ಊಟದಿಂದ ಮೋಹಿತರಾಗಿ ಭೂಮಿಯ ಮೇಲೆ ಮಲಗಿಕೊಂಡರು.

05111004a ಮುಹೂರ್ತಾತ್ಪ್ರತಿಬುದ್ಧಸ್ತು ಸುಪರ್ಣೋ ಗಮನೇಪ್ಸಯಾ|

05111004c ಅಥ ಭ್ರಷ್ಟತನೂಜಾಂಗಮಾತ್ಮಾನಂ ದದೃಶೇ ಖಗಃ||

ಸ್ವಲ್ಪವೇ ಸಮಯದಲ್ಲಿ ಎಚ್ಚರಗೊಂಡ ಸುಪರ್ಣನು ಹೊರಡಲು ಬಯಸಿದನು. ಆಗ ಆ ಪಕ್ಷಿಯು ತನ್ನ ರೆಕ್ಕೆಗಳು ದೇಹದಿಂದ ಕಳಚಿ ಬಿದ್ದಿರುವುದನ್ನು ನೋಡಿದನು.

05111005a ಮಾಂಸಪಿಂಡೋಪಮೋಽಭೂತ್ಸ ಮುಖಪಾದಾನ್ವಿತಃ ಖಗಃ|

05111005c ಗಾಲವಸ್ತಂ ತಥಾ ದೃಷ್ಟ್ವಾ ವಿಷಣ್ಣಃ ಪರ್ಯಪೃಚ್ಚತ||

ಆ ಖಗನು ತಲೆ ಕಾಲುಗಳನ್ನುಳ್ಳ ಕೇವಲ ಒಂದು ಮಾಂಸದ ಮುದ್ದೆಯಂತೆ ಕಂಡನು. ಅವನನ್ನು ನೋಡಿದ ಗಾಲವನು ವಿಷಣ್ಣನಾಗಿ ಕೇಳಿದನು:

05111006a ಕಿಮಿದಂ ಭವತಾ ಪ್ರಾಪ್ತಮಿಹಾಗಮನಜಂ ಫಲಂ|

05111006c ವಾಸೋಽಯಮಿಹ ಕಾಲಂ ತು ಕಿಯಂತಂ ನೌ ಭವಿಷ್ಯತಿ||

“ನಿನಗೇನಾಯಿತು? ಇಲ್ಲಿಗೆ ಬಂದಿದುದರ ಫಲವೇ ಇದು? ಇನ್ನು ಎಷ್ಟು ಕಾಲ ನಾವು ಇಲ್ಲಿ ಇರಬೇಕು?

05111007a ಕಿಂ ನು ತೇ ಮನಸಾ ಧ್ಯಾತಮಶುಭಂ ಧರ್ಮದೂಷಣಂ|

05111007c ನ ಹ್ಯಯಂ ಭವತಃ ಸ್ವಲ್ಪೋ ವ್ಯಭಿಚಾರೋ ಭವಿಷ್ಯತಿ||

ನೀನು ಏನಾದರೂ ಅಶುಭವೂ ಧರ್ಮದೂಷಣವೂ ಆಗಿರುವುದನ್ನು ಮನಸ್ಸಿನಲ್ಲಿ ಯೋಚಿಸಿದೆಯೇನು? ನಿನ್ನಿಂದ ಸ್ವಲ್ಪವೂ ವ್ಯಭಿಚಾರವಾಗಿರಲಿಕ್ಕಿಲ್ಲ ತಾನೇ?”

05111008a ಸುಪರ್ಣೋಽಥಾಬ್ರವೀದ್ವಿಪ್ರಂ ಪ್ರಧ್ಯಾತಂ ವೈ ಮಯಾ ದ್ವಿಜ|

05111008c ಇಮಾಂ ಸಿದ್ಧಾಮಿತೋ ನೇತುಂ ತತ್ರ ಯತ್ರ ಪ್ರಜಾಪತಿಃ||

05111009a ಯತ್ರ ದೇವೋ ಮಹಾದೇವೋ ಯತ್ರ ವಿಷ್ಣುಃ ಸನಾತನಃ|

05111009c ಯತ್ರ ಧರ್ಮಶ್ಚ ಯಜ್ಞಾಶ್ಚ ತತ್ರೇಯಂ ನಿವಸೇದಿತಿ||

ಆಗ ಸುಪರ್ಣನು ವಿಪ್ರನಿಗೆ ಹೇಳಿದನು: “ದ್ವಿಜ! ಈ ಸಿದ್ಧಳನ್ನು ಇಲ್ಲಿಂದ ಎಲ್ಲಿ ಪ್ರಜಾಪತಿಯಿರುವನೋ, ಎಲ್ಲಿ ಮಹಾದೇವನಿರುವನೋ, ಎಲ್ಲಿ ಸನಾತನ ವಿಷ್ಣುವಿರುವನೋ, ಎಲ್ಲಿ ಧರ್ಮ ಮತ್ತು ಯಜ್ಞಗಳು ಇವೆಯೋ ಅಲ್ಲಿಗೆ ಕೊಂಡೊಯ್ಯಬೇಕೆಂಬ ಯೋಚನೆಯೊಂದು ನನಗೆ ಬಂದಿತ್ತು.

05111010a ಸೋಽಹಂ ಭಗವತೀಂ ಯಾಚೇ ಪ್ರಣತಃ ಪ್ರಿಯಕಾಮ್ಯಯಾ|

05111010c ಮಯೈತನ್ನಾಮ ಪ್ರಧ್ಯಾತಂ ಮನಸಾ ಶೋಚತಾ ಕಿಲ||

05111011a ತದೇವಂ ಬಹುಮಾನಾತ್ತೇ ಮಯೇಹಾನೀಪ್ಸಿತಂ ಕೃತಂ|

05111011c ಸುಕೃತಂ ದುಷ್ಕೃತಂ ವಾ ತ್ವಂ ಮಾಹಾತ್ಮ್ಯಾತ್ಕ್ಷಂತುಮರ್ಹಸಿ||

ನಮಸ್ಕರಿಸಿ ಭಗವತಿಯಲ್ಲಿ ನಾನು ಬೇಡಿಕೊಳ್ಳುತ್ತೇನೆ. “ಪ್ರಿಯವಾದುದನ್ನು ಮಾಡಬೇಕೆಂದು ನಾನು ನಿನ್ನನ್ನು ಕೊಂಡೊಯ್ಯಲು ಮನಸ್ಸಿನಲ್ಲಿ ಯೋಚಿಸಿದೆನಲ್ಲ! ಅದು ನಿನಗೆ ಬಹುಮಾನವನ್ನು ಕೊಡಬೇಕೆಂಬ ನನ್ನ ಬಯಕೆಯು ನಡೆಸಿತು. ಅದು ಸುಕೃತವಾಗಿರಲಿ ದುಷ್ಕೃತವಾಗಿರಲಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕು.”

05111012a ಸಾ ತೌ ತದಾಬ್ರವೀತ್ತುಷ್ಟಾ ಪತಗೇಂದ್ರದ್ವಿಜರ್ಷಭೌ|

05111012c ನ ಭೇತವ್ಯಂ ಸುಪರ್ಣೋಽಸಿ ಸುಪರ್ಣ ತ್ಯಜ ಸಂಭ್ರಮಂ||

ಆಗ ಅವಳು ಆ ಪತಗೇಂದ್ರ ದ್ವಿಜರ್ಷಭರಿಬ್ಬರಿಗೂ ಹೇಳಿದಳು: “ಸುಪರ್ಣ! ಹೆದರಬೇಡ. ಸುಪರ್ಣನೆಂಬ ಸಂಭ್ರಮವನ್ನು ತೊರೆ.

05111013a ನಿಂದಿತಾಸ್ಮಿ ತ್ವಯಾ ವತ್ಸ ನ ಚ ನಿಂದಾಂ ಕ್ಷಮಾಮ್ಯಹಂ|

05111013c ಲೋಕೇಭ್ಯಃ ಸ ಪರಿಭ್ರಶ್ಯೇದ್ಯೋ ಮಾಂ ನಿಂದೇತ ಪಾಪಕೃತ್||

ವತ್ಸ! ನಾನು ನಿನ್ನಿಂದ ನಿಂದಿತಳಾಗಿದ್ದೇನೆ. ನಿಂದೆಯನ್ನು ನಾನು ಕ್ಷಮಿಸುವುದಿಲ್ಲ. ನನ್ನನ್ನು ನಿಂದಿಸುವ ಪಾಪವನ್ನು ಮಾಡಿದವನು ಲೋಕಗಳಿಂದ ಪ್ರರಿಭ್ರಷ್ಟನಾಗುತ್ತಾನೆ.

05111014a ಹೀನಯಾಲಕ್ಷಣೈಃ ಸರ್ವೈಸ್ತಥಾನಿಂದಿತಯಾ ಮಯಾ|

05111014c ಆಚಾರಂ ಪ್ರತಿಗೃಹ್ಣಂತ್ಯಾ ಸಿದ್ಧಿಃ ಪ್ರಾಪ್ತೇಯಮುತ್ತಮಾ||

ಎಲ್ಲ ಅಲಕ್ಷಣಗಳನ್ನು ಕಳೆದುಕೊಂಡು ಅನಿಂದಿತೆಯಾಗಿರುವ ನಾನು ಆಚಾರವನ್ನು ನನ್ನದಾಗಿಸಿಕೊಂಡು ಅಂತ್ಯದಲ್ಲಿ ಉತ್ತಮ ಸಿದ್ಧಿಯನ್ನು ಪಡೆದಿರುತ್ತೇನೆ.

05111015a ಆಚಾರಾಲ್ಲಭತೇ ಧರ್ಮಮಾಚಾರಾಲ್ಲಭತೇ ಧನಂ|

05111015c ಆಚಾರಾಚ್ಚ್ರಿಯಮಾಪ್ನೋತಿ ಆಚಾರೋ ಹಂತ್ಯಲಕ್ಷಣಂ||

ಆಚಾರದಿಂದ ಧರ್ಮವು ಲಭಿಸುತ್ತದೆ. ಧರ್ಮಾಚರಣೆಯಿಂದ ಧನವು ಲಭಿಸುತ್ತದೆ. ಆಚಾರದಿಂದ ಶ್ರೀಯು ದೊರೆಯುತ್ತದೆ. ಆಚಾರದಿಂದ ಅಲಕ್ಷಣವು ನಾಶವಾಗುತ್ತದೆ.

05111016a ತದಾಯುಷ್ಮನ್ಖಗಪತೇ ಯಥೇಷ್ಟಂ ಗಮ್ಯತಾಮಿತಃ|

05111016c ನ ಚ ತೇ ಗರ್ಹಣೀಯಾಪಿ ಗರ್ಹಿತವ್ಯಾಃ ಸ್ತ್ರಿಯಃ ಕ್ವ ಚಿತ್||

ಆಯುಷ್ಮನ್! ಖಗಪತೇ! ಇನ್ನು ನಿನಗಿಷ್ಟವಾದಲ್ಲಿಗೆ ಹೋಗಬಹುದು. ಕೀಳಾಗಿ ಕಾಣಲು ಅರ್ಹಳಾದರೂ ಇನ್ನುಮುಂದೆ ಯಾವ ಸ್ತ್ರೀಯನ್ನೂ ಕೀಳಾಗಿ ಕಾಣಬೇಡ!

05111017a ಭವಿತಾಸಿ ಯಥಾಪೂರ್ವಂ ಬಲವೀರ್ಯಸಮನ್ವಿತಃ|

05111017c ಬಭೂವತುಸ್ತತಸ್ತಸ್ಯ ಪಕ್ಷೌ ದ್ರವಿಣವತ್ತರೌ||

ಮೊದಲಿನಂತೆಯೇ ನೀನು ಬಲವೀರ್ಯಸಮನ್ವಿತನಾಗುತ್ತೀಯೆ.” ಆಗ ಅವನ ರೆಕ್ಕೆಗಳೆರಡೂ ಮೊದಲಿಗಿಂತಲೂ ದೊಡ್ಡದಾಗಿ ಬೆಳೆದವು.

05111018a ಅನುಜ್ಞಾತಶ್ಚ ಶಾಂಡಿಲ್ಯಾ ಯಥಾಗತಮುಪಾಗಮತ್|

05111018c ನೈವ ಚಾಸಾದಯಾಮಾಸ ತಥಾರೂಪಾಂಸ್ತುರಂಗಮಾನ್||

ಶಾಂಡಿಲ್ಯಳ ಅನುಮತಿಯನ್ನು ಪಡೆದು ಅವನು ಬಂದದಾರಿಯುಲ್ಲಿ ಹಿಂದಿರುಗಿದನು.

05111019a ವಿಶ್ವಾಮಿತ್ರೋಽಥ ತಂ ದೃಷ್ಟ್ವಾ ಗಾಲವಂ ಚಾಧ್ವನಿ ಸ್ಥಿತಂ|

05111019c ಉವಾಚ ವದತಾಂ ಶ್ರೇಷ್ಠೋ ವೈನತೇಯಸ್ಯ ಸನ್ನಿಧೌ||

ದಾರಿಯಲ್ಲಿ ವಿಶ್ವಾಮಿತ್ರನು ಗಾಲವನನ್ನು ಕಂಡು ನಿಲ್ಲಿಸಿದನು. ಆ ಮಾತನಾಡುವವರಲ್ಲಿ ಶ್ರೇಷ್ಠನು ವೈನತೇಯನ ಸನ್ನಿಧಿಯಲ್ಲಿ ಹೇಳಿದನು:

05111020a ಯಸ್ತ್ವಯಾ ಸ್ವಯಮೇವಾರ್ಥಃ ಪ್ರತಿಜ್ಞಾತೋ ಮಮ ದ್ವಿಜ|

05111020c ತಸ್ಯ ಕಾಲೋಽಪವರ್ಗಸ್ಯ ಯಥಾ ವಾ ಮನ್ಯತೇ ಭವಾನ್||

“ದ್ವಿಜ! ನನಗಾಗಿ ನೀನೇ ತೆಗೆದುಕೊಂಡಿರುವ ಪ್ರತಿಜ್ಞೆಯನ್ನು ಹಿಂದೆ ತೆಗೆದುಕೊಳ್ಳುವ ಕಾಲವು ಬಂದಂತಿದೆ. ಅಥವಾ ನಿನಗೇನಾದರೂ ಬೇರೆ ಯೋಚನೆಯಿದೆಯೇ?

05111021a ಪ್ರತೀಕ್ಷಿಷ್ಯಾಮ್ಯಹಂ ಕಾಲಮೇತಾವಂತಂ ತಥಾ ಪರಂ|

05111021c ಯಥಾ ಸಂಸಿಧ್ಯತೇ ವಿಪ್ರ ಸ ಮಾರ್ಗಸ್ತು ನಿಶಮ್ಯತಾಂ||

ಅದನ್ನು ಪೂರೈಸಲು ಎಷ್ಟು ಸಮಯ ಬೇಕೋ ಅಷ್ಟು ಕಾಲ ನಾನು ಕಾಯುತ್ತೇನೆ. ವಿಪ್ರ! ಅದನ್ನು ಪೂರೈಸುವ ಮಾರ್ಗವನ್ನು ಸಿದ್ಧಪಡಿಸು!”

05111022a ಸುಪರ್ಣೋಽಥಾಬ್ರವೀದ್ದೀನಂ ಗಾಲವಂ ಭೃಶದುಃಖಿತಂ|

05111022c ಪ್ರತ್ಯಕ್ಷಂ ಖಲ್ವಿದಾನೀಂ ಮೇ ವಿಶ್ವಾಮಿತ್ರೋ ಯದುಕ್ತವಾನ್||

ತುಂಬಾ ದುಃಖಿತನಾಗಿ ದೀನನಾಗಿರುವ ಗಾಲವನಿಗೆ ಸುಪರ್ಣನು ಹೇಳಿದನು: “ವಿಶ್ವಾಮಿತ್ರನು ಏನು ಹೇಳಿದನೆನ್ನುವುದನ್ನು ನಾನು ಪ್ರತ್ಯಕ್ಷವಾಗಿ ಕೇಳಿದೆ.

05111023a ತದಾಗಚ್ಚ ದ್ವಿಜಶ್ರೇಷ್ಠ ಮಂತ್ರಯಿಷ್ಯಾವ ಗಾಲವ|

05111023c ನಾದತ್ತ್ವಾ ಗುರವೇ ಶಕ್ಯಂ ಕೃತ್ಸ್ನಮರ್ಥಂ ತ್ವಯಾಸಿತುಂ||

ದ್ವಿಜಶ್ರೇಷ್ಠ! ಗಾಲವ! ಹೋಗಿ ಒಟ್ಟಿಗೇ ಯೋಚಿಸೋಣ. ನಿನ್ನ ಗುರುವಿಗೆ ಕೊಡಬೇಕಾದ್ದುದನ್ನು ಸಂಪೂರ್ಣವಾಗಿ ಕೊಡದೇ ನೀನು ಕುಳಿತುಕೊಳ್ಳಲಿಕ್ಕಾಗುವುದಿಲ್ಲ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಏಕದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹನ್ನೊಂದನೆಯ ಅಧ್ಯಾಯವು.

Related image

Comments are closed.