Udyoga Parva: Chapter 11

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೧

ನಹುಷನನ್ನು ದೇವರಾಜನನ್ನಾಗಿ ಅಭಿಷೇಕಿಸಿದುದು ಮತ್ತು “ನಿನ್ನ ಕಣ್ಣಮುಂದೆ ಯಾರೇ ಬರಲಿ ದೇವ, ದಾನವ, ಯಕ್ಷ, ಋಷಿ, ರಾಕ್ಷಸ, ಪಿತೃ, ಗಂಧರ್ವರು - ಅವರನ್ನು ನೋಡಿಯೇ ಅವರ ತೇಜಸ್ಸನ್ನು ಎಳೆದುಕೊಂಡು ಬಲಶಾಲಿಯಾಗುತ್ತೀಯೆ” ಎಂದು ನಹುಷನಿಗೆ ವರವನ್ನಿತ್ತುದು (೧-೭). ವರದಿಂದ ಮತ್ತನಾದ ನಹುಷನು ಇಂದ್ರಾಣಿ ಶಚಿಯನ್ನು ಬಯಸಿದುದು (೮-೧೫). ಶರಣು ಬಂದ ಶಚಿಗೆ ಅಭಯವನ್ನು ನೀಡಿ ಬೃಹಸ್ಪತಿಯು ನಹುಷನನ್ನು ಇನ್ನೂ ಕೆರಳಿಸಿದುದು (೧೬-೨೨).

05011001 ಶಲ್ಯ ಉವಾಚ|

05011001a ಋಷಯೋಽಥಾಬ್ರುವನ್ಸರ್ವೇ ದೇವಾಶ್ಚ ತ್ರಿದಶೇಶ್ವರಾಃ|

05011001c ಅಯಂ ವೈ ನಹುಷಃ ಶ್ರೀಮಾನ್ದೇವರಾಜ್ಯೇಽಭಿಷಿಚ್ಯತಾಂ|

05011001e ತೇ ಗತ್ವಾಥಾಬ್ರುವನ್ಸರ್ವೇ ರಾಜಾ ನೋ ಭವ ಪಾರ್ಥಿವ||

ಶಲ್ಯನು ಹೇಳಿದನು: “ಆಗ ಎಲ್ಲ ಋಷಿಗಳೂ ತ್ರಿದಶೇಶ್ವರರೂ ದೇವತೆಗಳೂ “ಶ್ರೀಮಾನ್ ನಹುಷನು ದೇವರಾಜನಾಗಿ ಅಭಿಷಿಕ್ತನಾಗಲಿ!” ಎಂದು ಹೇಳಿದರು. ಅವರೆಲ್ಲರೂ ಅವನಲ್ಲಿಗೆ ಹೋಗಿ ಹೇಳಿದರು: “ಪಾರ್ಥಿವ! ನಮ್ಮ ರಾಜನಾಗು!”

05011002a ಸ ತಾನುವಾಚ ನಹುಷೋ ದೇವಾನೃಷಿಗಣಾಂಸ್ತಥಾ|

05011002c ಪಿತೃಭಿಃ ಸಹಿತಾನ್ರಾಜನ್ಪರೀಪ್ಸನ್ ಹಿತಮಾತ್ಮನಃ||

ರಾಜನ್! ತನ್ನ ಹಿತವನ್ನು ಬಯಸಿ ಆ ನಹುಷನು ಪಿತೃಗಳ ಸಹಿತರಿಂದ ದೇವ ಋಷಿಗಣಗಳಿಗೆ ಹೇಳಿದನು:

05011003a ದುರ್ಬಲೋಽಹಂ ನ ಮೇ ಶಕ್ತಿರ್ಭವತಾಂ ಪರಿಪಾಲನೇ|

05011003c ಬಲವಾಂ ಜಾಯತೇ ರಾಜಾ ಬಲಂ ಶಕ್ರೇ ಹಿ ನಿತ್ಯದಾ||

“ನಾನು ದುರ್ಬಲನಾಗಿದ್ದೇನೆ. ನಿಮ್ಮನ್ನು ಪರಿಪಾಲಿಸಲು ನನ್ನಲ್ಲಿ ಶಕ್ತಿಯಿಲ್ಲ. ಬಲಶಾಲಿಯು ರಾಜನಾಗುತ್ತಾನೆ. ಶಕ್ರನು ಯಾವಾಗಲೂ ಬಲಶಾಲಿಯಾಗಿದ್ದನು.”

05011004a ತಮಬ್ರುವನ್ಪುನಃ ಸರ್ವೇ ದೇವಾಃ ಸರ್ಷಿಪುರೋಗಮಾಃ|

05011004c ಅಸ್ಮಾಕಂ ತಪಸಾ ಯುಕ್ತಃ ಪಾಹಿ ರಾಜ್ಯಂ ತ್ರಿವಿಷ್ಟಪೇ||

ಋಷಿಗಳನ್ನು ಮುಂದಿಟ್ಟುಕೊಂಡ ಎಲ್ಲ ದೇವತೆಗಳೂ ಅವನಿಗೆ ಪುನಃ ಹೇಳಿದರು: “ನಮ್ಮ ತಪಸ್ಸುಗಳಿಂದ ಯುಕ್ತನಾಗಿ ತ್ರಿವಿಷ್ಟಪದಲ್ಲಿ ರಾಜ್ಯವನ್ನು ಆಳು!

05011005a ಪರಸ್ಪರಭಯಂ ಘೋರಮಸ್ಮಾಕಂ ಹಿ ನ ಸಂಶಯಃ|

05011005c ಅಭಿಷಿಚ್ಯಸ್ವ ರಾಜೇಂದ್ರ ಭವ ರಾಜಾ ತ್ರಿವಿಷ್ಟಪೇ||

ನಮ್ಮ ಪರಸ್ಪರರಲ್ಲಿ ಭಯವಿದೆ ಎನ್ನುವುದು ನಿಃಸಂಶಯ. ರಾಜೇಂದ್ರ! ಅಭಿಷೇಕಿಸಿಕೊಂಡು ತ್ರಿವಿಷ್ಟಪದಲ್ಲಿ ರಾಜನಾಗು.

05011006a ದೇವದಾನವಯಕ್ಷಾಣಾಮೃಷೀಣಾಂ ರಕ್ಷಸಾಂ ತಥಾ|

05011006c ಪಿತೃಗಂಧರ್ವಭೂತಾನಾಂ ಚಕ್ಷುರ್ವಿಷಯವರ್ತಿನಾಂ|

05011006e ತೇಜ ಆದಾಸ್ಯಸೇ ಪಶ್ಯನ್ಬಲವಾಂಶ್ಚ ಭವಿಷ್ಯಸಿ||

ನಿನ್ನ ಕಣ್ಣಮುಂದೆ ಯಾರೇ ಬರಲಿ ದೇವ, ದಾನವ, ಯಕ್ಷ, ಋಷಿ, ರಾಕ್ಷಸ, ಪಿತೃ, ಗಂಧರ್ವರು - ಅವರನ್ನು ನೋಡಿಯೇ ಅವರ ತೇಜಸ್ಸನ್ನು ಎಳೆದುಕೊಂಡು ಬಲಶಾಲಿಯಾಗುತ್ತೀಯೆ.

05011007a ಧರ್ಮಂ ಪುರಸ್ಕೃತ್ಯ ಸದಾ ಸರ್ವಲೋಕಾಧಿಪೋ ಭವ|

05011007c ಬ್ರಹ್ಮರ್ಷೀಂಶ್ಚಾಪಿ ದೇವಾಂಶ್ಚ ಗೋಪಾಯಸ್ವ ತ್ರಿವಿಷ್ಟಪೇ||

ಸದಾ ಧರ್ಮವನ್ನೇ ಮೊದಲಾಗಿರಿಸಿಕೊಂಡು ಸರ್ವ ಲೋಕಗಳ ಅಧಿಪತಿಯಾಗು. ತ್ರಿವಿಷ್ಟಪದಲ್ಲಿ ಬ್ರಹ್ಮರ್ಷಿಗಳನ್ನು ಮತ್ತು ದೇವತೆಗಳನ್ನು ರಕ್ಷಿಸು.”

05011008a ಸುದುರ್ಲಭಂ ವರಂ ಲಬ್ಧ್ವಾ ಪ್ರಾಪ್ಯ ರಾಜ್ಯಂ ತ್ರಿವಿಷ್ಟಪೇ|

05011008c ಧರ್ಮಾತ್ಮಾ ಸತತಂ ಭೂತ್ವಾ ಕಾಮಾತ್ಮಾ ಸಮಪದ್ಯತ||

ಸತತ ಧರ್ಮಾತ್ಮನಾಗಿದ್ದರೂ, ತ್ರಿವಿಷ್ಟಪದಲ್ಲಿ ರಾಜ್ಯವನ್ನು ಪಡೆದು, ಸುದುರ್ಲಭ ವರವನ್ನು ಪಡೆದು ಅವನು ಕಾಮಾತ್ಮನಾಗತೊಡಗಿದನು.

05011009a ದೇವೋದ್ಯಾನೇಷು ಸರ್ವೇಷು ನಂದನೋಪವನೇಷು ಚ|

05011009c ಕೈಲಾಸೇ ಹಿಮವತ್ಪೃಷ್ಠೇ ಮಂದರೇ ಶ್ವೇತಪರ್ವತೇ|

05011009e ಸಹ್ಯೇ ಮಹೇಂದ್ರೇ ಮಲಯೇ ಸಮುದ್ರೇಷು ಸರಿತ್ಸು ಚ||

05011010a ಅಪ್ಸರೋಭಿಃ ಪರಿವೃತೋ ದೇವಕನ್ಯಾಸಮಾವೃತಃ|

05011010c ನಹುಷೋ ದೇವರಾಜಃ ಸನ್ಕ್ರೀಡನ್ಬಹುವಿಧಂ ತದಾ||

ಆಗ ದೇವರಾಜ ನಹುಷನು ಎಲ್ಲ ದೇವೋದ್ಯಾನಗಳಲ್ಲಿ, ನಂದನ ಉಪವನದಲ್ಲಿ, ಕೈಲಾಸ ಹಿಮಾಲಯದ ತಪ್ಪಲಿನಲ್ಲಿ, ಮಂದರ ಶ್ವೇತ ಪರ್ವತಗಳಲ್ಲಿ, ಸಹ್ಯಾದ್ರಿ-ಮಹೇಂದ್ರ ಮಲಯಗಳಲ್ಲಿ, ಸಮುದ್ರ ಸರೋವರಗಳಲ್ಲಿ, ಅಪ್ಸರೆಯರು ಮತ್ತು ದೇವ ಕನ್ಯೆಯರಿಂದ ಸಮಾವೃತನಾಗಿ ಬಹುವಿಧದ ಕ್ರೀಡೆಗಳಲ್ಲಿ ತೊಡಗಿದನು.

05011011a ಶೃಣ್ವನ್ದಿವ್ಯಾ ಬಹುವಿಧಾಃ ಕಥಾಃ ಶ್ರುತಿಮನೋಹರಾಃ|

05011011c ವಾದಿತ್ರಾಣಿ ಚ ಸರ್ವಾಣಿ ಗೀತಂ ಚ ಮಧುರಸ್ವರಂ||

ಬಹುವಿಧದ ದಿವ್ಯ ಕಥೆಗಳನ್ನೂ, ಶ್ರುತಿಮನೋಹರ ವಾದ್ಯಗಳೆಲ್ಲವನ್ನೂ, ಮಧುರಸ್ವರ ಗೀತೆಗಳನ್ನೂ ಕೇಳಿದನು.

05011012a ವಿಶ್ವಾವಸುರ್ನಾರದಶ್ಚ ಗಂಧರ್ವಾಪ್ಸರಸಾಂ ಗಣಾಃ|

05011012c ಋತವಃ ಷಟ್ಚ ದೇವೇಂದ್ರಂ ಮೂರ್ತಿಮಂತ ಉಪಸ್ಥಿತಾಃ|

05011012e ಮಾರುತಃ ಸುರಭಿರ್ವಾತಿ ಮನೋಜ್ಞಾಃ ಸುಖಶೀತಲಃ||

ವಿಶ್ವಾವಸು, ನಾರದ, ಗಂಧರ್ವ ಅಪ್ಸರ ಗಣಗಳು, ಮತ್ತು ಆರು ಋತುಗಳು ಮೂರ್ತಿಮಂತರಾಗಿ ದೇವೇಂದ್ರನ ಉಪಸ್ಥಿತಿಯಲ್ಲಿದ್ದರು. ಸುಗಂಧಗಳನ್ನು ಹೊತ್ತು ಮಾರುತನು ಮನೋಜ್ಞ ಸುಖಶೀತಲವಾಗಿ ಬೀಸಿದನು.

05011013a ಏವಂ ಹಿ ಕ್ರೀಡತಸ್ತಸ್ಯ ನಹುಷಸ್ಯ ಮಹಾತ್ಮನಃ|

05011013c ಸಂಪ್ರಾಪ್ತಾ ದರ್ಶನಂ ದೇವೀ ಶಕ್ರಸ್ಯ ಮಹಿಷೀ ಪ್ರಿಯಾ||

ಹೀಗೆ ಮಹಾತ್ಮ ನಹುಷನು ಕ್ರೀಡಿಸುತ್ತಿರಲು, ಅವನಿಗೆ ಶಕ್ರನ ಪ್ರಿಯ ಮಹಿಷಿ ದೇವಿಯ ದರ್ಶನವು ದೊರಕಿತು.

05011014a ಸ ತಾಂ ಸಂದೃಶ್ಯ ದುಷ್ಟಾತ್ಮಾ ಪ್ರಾಹ ಸರ್ವಾನ್ಸಭಾಸದಃ|

05011014c ಇಂದ್ರಸ್ಯ ಮಹಿಷೀ ದೇವೀ ಕಸ್ಮಾನ್ಮಾಂ ನೋಪತಿಷ್ಠತಿ||

ಅವಳನ್ನು ನೋಡಿದ ಆ ದುಷ್ಟಾತ್ಮನು ಸಭಾಸದರೆಲ್ಲರಲ್ಲಿ ಕೇಳಿದನು: “ಇಂದ್ರನ ಮಹಿಷಿ ದೇವಿಯು ಏಕೆ ನನ್ನೊಂದಿಗೆ ಕುಳಿತುಕೊಳ್ಳುವುದಿಲ್ಲ?

05011015a ಅಹಮಿಂದ್ರೋಽಸ್ಮಿ ದೇವಾನಾಂ ಲೋಕಾನಾಂ ಚ ತಥೇಶ್ವರಃ|

05011015c ಆಗಚ್ಚತು ಶಚೀ ಮಹ್ಯಂ ಕ್ಷಿಪ್ರಮದ್ಯ ನಿವೇಶನಂ||

ನಾನು ದೇವತೆಗಳ ಇಂದ್ರ ಮತ್ತು ಹಾಗೆಯೇ ಲೋಕಗಳ ಈಶ್ವರ. ಬೇಗನೆ ಶಚಿಯು ಇಂದು ನನ್ನ ನಿವೇಶನಕ್ಕೆ ಬರಲಿ!”

05011016a ತಚ್ಚ್ರುತ್ವಾ ದುರ್ಮನಾ ದೇವೀ ಬೃಹಸ್ಪತಿಮುವಾಚ ಹ|

05011016c ರಕ್ಷ ಮಾಂ ನಹುಷಾದ್ಬ್ರಹ್ಮಂಸ್ತವಾಸ್ಮಿ ಶರಣಂ ಗತಾ||

ಅದನ್ನು ಕೇಳಿ ದುಃಖಿತಳಾದ ದೇವಿಯು ಬೃಹಸ್ಪತಿಗೆ ಹೇಳಿದಳು: “ಬ್ರಹ್ಮನ್! ನನ್ನನ್ನು ನಹುಷನಿಂದ ರಕ್ಷಿಸು! ನಿನ್ನ ಶರಣು ಬಂದಿದ್ದೇನೆ!

05011017a ಸರ್ವಲಕ್ಷಣಸಂಪನ್ನಾಂ ಬ್ರಹ್ಮಸ್ತ್ವಂ ಮಾಂ ಪ್ರಭಾಷಸೇ|

05011017c ದೇವರಾಜಸ್ಯ ದಯಿತಾಮತ್ಯಂತಸುಖಭಾಗಿನೀಂ||

05011018a ಅವೈಧವ್ಯೇನ ಸಂಯುಕ್ತಾಮೇಕಪತ್ನೀಂ ಪತಿವ್ರತಾಂ|

05011018c ಉಕ್ತವಾನಸಿ ಮಾಂ ಪೂರ್ವಮೃತಾಂ ತಾಂ ಕುರು ವೈ ಗಿರಂ||

ಬ್ರಹ್ಮನ್! ನಾನು ಸರ್ವಲಕ್ಷಣಸಂಪನ್ನಳು. ದೇವರಾಜನ ಪ್ರಿಯಳು. ಅತ್ಯಂತ ಸುಖಭಾಗಿನಿ. ಅವೈಧವ್ಯದಿಂದ ಸಂಯುಕ್ತಳಾಗಿದ್ದೇನೆ. ಏಕಪತ್ನಿಯಾಗಿ ಪತಿವ್ರತೆಯಾಗಿದ್ದೇನೆ ಎಂದು ನನಗೆ ನೀನು ಯಾವಾಗಲೂ ಹೇಳುತ್ತೀಯೆ ಮತ್ತು ಹಿಂದೆ ಹೇಳಿದ್ದೀಯೆ. ನಿನ್ನ ಮಾತು ಸುಳ್ಳಾಗದಂತೆ ಮಾಡು!

05011019a ನೋಕ್ತಪೂರ್ವಂ ಚ ಭಗವನ್ಮೃಷಾ ತೇ ಕಿಂ ಚಿದೀಶ್ವರ|

05011019c ತಸ್ಮಾದೇತದ್ಭವೇತ್ಸತ್ಯಂ ತ್ವಯೋಕ್ತಂ ದ್ವಿಜಸತ್ತಮ||

ಭಗವನ್! ಈಶ್ವರ! ಹಿಂದೆ ನೀನು ಸುಳ್ಳನ್ನು ಎಂದೂ ಹೇಳಿದ್ದಿಲ್ಲ. ದ್ವಿಜಸತ್ತಮ! ಆದುದರಿಂದ ನೀನು ಹೇಳಿದ ಇದನ್ನೂ ಸತ್ಯವನ್ನಾಗಿಸಬೇಕು.”

05011020a ಬೃಹಸ್ಪತಿರಥೋವಾಚ ಇಂದ್ರಾಣೀಂ ಭಯಮೋಹಿತಾಂ|

05011020c ಯದುಕ್ತಾಸಿ ಮಯಾ ದೇವಿ ಸತ್ಯಂ ತದ್ಭವಿತಾ ಧ್ರುವಂ||

ಆಗ ಭಯಮೋಹಿತ ಇಂದ್ರಾಣಿಗೆ ಬೃಹಸ್ಪತಿಯು ಹೇಳಿದನು: “ದೇವಿ! ನಾನು ಏನನ್ನು ಹೇಳುತ್ತೇನೋ ಅದು ಸತ್ಯವಾಗುವುದು ಖಂಡಿತ.

05011021a ದ್ರಕ್ಷ್ಯಸೇ ದೇವರಾಜಾನಮಿಂದ್ರಂ ಶೀಘ್ರಮಿಹಾಗತಂ|

05011021c ನ ಭೇತವ್ಯಂ ಚ ನಹುಷಾತ್ಸತ್ಯಮೇತದ್ಬ್ರವೀಮಿ ತೇ|

05011021e ಸಮಾನಯಿಷ್ಯೇ ಶಕ್ರೇಣ ನಚಿರಾದ್ಭವತೀಮಹಂ||

ದೇವರಾಜ ಇಂದ್ರನು ಶೀಘ್ರದಲ್ಲಿಯೇ ಇಲ್ಲಿಗೆ ಬರುವುದನ್ನು ನೋಡುತ್ತೀಯೆ. ನಹುಷನಿಂದ ನಿನಗೆ ಯಾವುದೂ ಭಯವಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಸ್ವಲ್ಪವೇ ಸಮಯದಲ್ಲಿ ನಾನು ನಿನ್ನನ್ನು ಶಕ್ರನೊಂದಿಗೆ ಕೂಡಿಸುತ್ತೇನೆ.”

05011022a ಅಥ ಶುಶ್ರಾವ ನಹುಷ ಇಂದ್ರಾಣೀಂ ಶರಣಂ ಗತಾಂ|

05011022c ಬೃಹಸ್ಪತೇರಂಗಿರಸಶ್ಚುಕ್ರೋಧ ಸ ನೃಪಸ್ತದಾ||

ಇಂದ್ರಾಣಿಯು ಆಂಗಿರಸ ಬೃಹಸ್ಪತಿಯ ಶರಣು ಹೋಗಿದ್ದಾಳೆ ಎಂದು ಕೇಳಿದ ನೃಪ ನಹುಷನು ಕ್ರೋಧಿತನಾದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರಾಣೀಭಯೇ ಏಕಾದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರಾಣೀಭಯದಲ್ಲಿ ಹನ್ನೊಂದನೆಯ ಅಧ್ಯಾಯವು|

Related image

Comments are closed.